ನ್ಯೂಡೆಲ್ಲಿ : ದೇಶದ ರಕ್ಷಣಾ ವಲಯದ ಪ್ರಮುಖ ಅಂಗವಾದ ಕ್ಷಿಪಣಿಗಳ ಉತ್ಪಾದನೆಗೆ ಖಾಸಗಿ ವಲಯಕ್ಕೆ ಅವಕಾಶ ಕಲ್ಪಿಸಲು ಮೋದಿ ಸರ್ಕಾರ ನಿರ್ಧರಿಸಿದೆ. ಇದುವರೆಗೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದ ಸಾಂಪ್ರದಾಯಿಕ ಕ್ಷಿಪಣಿಗಳ ಉತ್ಪಾದನೆಯಲ್ಲಿ ಸಾರ್ವಜನಿಕ ವಲಯದ ರಕ್ಷಣಾ ಉದ್ಯಮಗಳು (DPSUs) — ವಿಶೇಷವಾಗಿ ‘ಭಾರತ್ ಡೈನಾಮಿಕ್ಸ್ ಲಿಮಿಟೆಡ್’ (BDL) ನಂತಹ ಸಂಸ್ಥೆಗಳು — ಪ್ರಮುಖ ಪಾತ್ರ ವಹಿಸಿವೆ. ಮುಂದಿನ ದಿನಗಳಲ್ಲಿ, ಅರ್ಹತೆಗಳು, ಪ್ರಮಾಣೀಕರಣಗಳು ಮತ್ತು ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟು, ಈ ಉತ್ಪಾದನಾ ಗುತ್ತಿಗೆಗಳಿಗಾಗಿ ಸ್ಪರ್ಧಿಸಲು ಖಾಸಗಿ ಕಂಪನಿಗಳಿಗೂ ಅವಕಾಶ ನೀಡಲಾಗಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅನುಮೋದನೆಯೊಂದಿಗೆ, ಡಿಆರ್ಡಿಒ (DRDO) ಅಭಿವೃದ್ಧಿಪಡಿಸಿದ ಎಲ್ಲಾ ಸಾಂಪ್ರದಾಯಿಕ ಕ್ಷಿಪಣಿ ವ್ಯವಸ್ಥೆಗಳಿಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಭಾರತೀಯ ರಕ್ಷಣಾ ಕಂಪನಿಗಳಿಗೆ ವರ್ಗಾಯಿಸಲು ದಾರಿ ಸುಗಮವಾಗಿದೆ. ಈ ಕ್ರಮವು ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಆಮದುಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ. ದೇಶೀಯವಾಗಿ ಮೌಲ್ಯವರ್ಧನೆ ಹೆಚ್ಚಾಗಲಿದ್ದು, ಎಂಎಸ್ಎಂಇಗಳು (MSMEs) ಹಾಗೂ ಇತರ ತಂತ್ರಜ್ಞಾನ ಪಾಲುದಾರರಿಗೆ ರಕ್ಷಣಾ ಉತ್ಪನ್ನಗಳನ್ನು ಪೂರೈಸುವ ಅವಕಾಶಗಳು ದೊರೆಯಲಿವೆ ಎಂದು ರಕ್ಷಣಾ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಈ ನಿರ್ಧಾರದ ಹಿಂದೆ ಮತ್ತೊಂದು ಪ್ರಮುಖ ಅಂಶವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕ್ಷಿಪಣಿ ಉತ್ಪಾದನೆಗೆ ಸಂಬಂಧಿಸಿದಂತೆ ಸಾವಿರಾರು ಕೋಟಿ ರೂಪಾಯಿಗಳ ಮಾರುಕಟ್ಟೆಯು, ಇದುವರೆಗೆ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ (ಸರ್ಕಾರಿ ಒಡೆತನ) ಮಾತ್ರ ಸೀಮಿತವಾಗಿತ್ತು, ಆದರೆ. ಶೀಘ್ರದಲ್ಲೇ ಅದು ಖಾಸಗಿ ಕಂಪನಿಗಳಿಗೂ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಇಲ್ಲಿಯವರೆಗೆ, ಡಿಆರ್ಡಿಒ (DRDO) ಅಭಿವೃದ್ಧಿಪಡಿಸಿದ ಕ್ಷಿಪಣಿಗಳ ಸರಣಿ ಉತ್ಪಾದನೆಯಲ್ಲಿ ಬಿಡಿಎಲ್ (BDL) ನಂತಹ ಸಾರ್ವಜನಿಕ ವಲಯದ ಉದ್ಯಮಗಳು ಪ್ರಮುಖ ಪಾತ್ರ ವಹಿಸಿವೆ. ಆದರೆ, ಹೊಸ ನೀತಿಯ ಅಡಿಯಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಸಾಂಪ್ರದಾಯಿಕ ಕ್ಷಿಪಣಿಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಖಾಸಗಿ ಕಂಪನಿಗಳನ್ನು ಪಾಲುದಾರರನ್ನಾಗಿ ಸೇರಿಸಿಕೊಳ್ಳುವ ಮೂಲಕ, ಕೇವಲ ತಂತ್ರಜ್ಞಾನ ವರ್ಗಾವಣೆಯಾಚೆಗೂ ಹೆಜ್ಜೆ ಹಾಕಲು ಡಿಆರ್ಡಿಒ (DRDO) ಯೋಜಿಸುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಈ ಉಪಕ್ರಮದ ಆರಂಭಿಕ ಹಂತದಲ್ಲಿ ಖಾಸಗಿ ವಲಯದ ಗಮನಾರ್ಹ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿರುವ ವ್ಯವಸ್ಥೆಗಳಲ್ಲಿ ‘ಅಸ್ತ್ರ’ ಮತ್ತು ‘ಪ್ರಳಯ’ ಕ್ಷಿಪಣಿಗಳೂ ಸೇರಿವೆ. ‘ಅಸ್ತ್ರ’ವು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ‘ಬಿಯಾಂಡ್-ವಿಷುವಲ್-ರೇಂಜ್’ (BVR) ಅಂದರೆ ದೃಷ್ಟಿ ವ್ಯಾಪ್ತಿಯಾಚೆಗಿನ ಗುರಿಯನ್ನು ತಲುಪಬಲ್ಲ ವಾಯು-ವಾಯು ಕ್ಷಿಪಣಿಯಾಗಿದ್ದರೆ, ‘ಪ್ರಳಯ’ವು ನಿಖರವಾದ ದಾಳಿಗಳನ್ನು ನಡೆಸಲು ಅಭಿವೃದ್ಧಿಪಡಿಸಲಾಗುತ್ತಿರುವ ಕ್ಷಿಪಣಿ ವ್ಯವಸ್ಥೆಯಾಗಿದೆ. ಸಶಸ್ತ್ರ ಪಡೆಗಳಲ್ಲಿ ಈ ವ್ಯವಸ್ಥೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಇವುಗಳ ಉತ್ಪಾದನೆಯನ್ನು ತ್ವರಿತಗೊಳಿಸುವುದು ಪ್ರಮುಖ ಉದ್ದೇಶವೆಂದು ಸರ್ಕಾರ ತಿಳಿಸಿದೆ.
ಖಾಸಗಿ ಸಂಸ್ಥೆಗಳು ಈಗಾಗಲೇ ಬ್ರಹ್ಮೋಸ್ ಕ್ಷಿಪಣಿಯ ಕೆಲವು ಬಿಡಿಭಾಗಗಳು ಮತ್ತು ಲಾಂಚರ್ ಭಾಗಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಗಮನಾರ್ಹವೆಂದರೆ, ಪ್ರಸ್ತುತ ಆರ್ಡರ್ ಮಾಡಲಾದ ಕ್ಷಿಪಣಿಗಳ ಉತ್ಪಾದನೆಯನ್ನು ವೇಗಗೊಳಿಸುವ ಅಗತ್ಯ ಕಂಡುಬಂದರೆ, ಈ ಕಾರ್ಯಕ್ರಮಕ್ಕೆ ಹೆಚ್ಚುವರಿ ಖಾಸಗಿ ಕಂಪನಿಗಳನ್ನೂ ಸೇರಿಸಿಕೊಳ್ಳಬಹುದು ಎಂದು ಆ ಮೂಲಗಳು ಸೂಚಿಸಿವೆ.
ಮೋದಿ ಸರ್ಕಾರವು ಈ ನಿರ್ಧಾರವನ್ನು ‘ಆತ್ಮನಿರ್ಭರ ಭಾರತ’ದತ್ತ ಮತ್ತೊಂದು ಹೆಜ್ಜೆ ಎಂದು ಬಿಂಬಿಸುತ್ತಿದೆ. ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು, ದೇಶೀಯ ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಖಾಸಗಿ ವಲಯದ ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದು ಖಂಡಿತವಾಗಿಯೂ ಅಗತ್ಯವಾಗಿದೆ. ಆದರೆ, ಅತ್ಯಂತ ನಿರ್ಣಾಯಕವಾದ ಕ್ಷಿಪಣಿಗಳ ಉತ್ಪಾದನೆಯಂತಹ ವಲಯಗಳಲ್ಲಿ ಸರ್ಕಾರದ ಮೇಲ್ವಿಚಾರಣೆ, ಪಾರದರ್ಶಕತೆ, ರಾಷ್ಟ್ರೀಯ ಭದ್ರತಾ ಮಾನದಂಡಗಳು ಮತ್ತು ತಂತ್ರಜ್ಞಾನದ ರಕ್ಷಣೆಯಂತಹ ಅಂಶಗಳ ಕುರಿತು ಹೆಚ್ಚಿನ ಸ್ಪಷ್ಟತೆಯ ಅಗತ್ಯವಿದೆ.
ಸಾಮರ್ಥ್ಯವನ್ನು ಹೆಚ್ಚಿಸಲು ಖಾಸಗೀಕರಣವೇ ಪರಿಹಾರ ಎಂಬ ಒಂದು ವಾದದ ಮೂಲಕ ಈ ವಿಷಯವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ತಜ್ಞರು ಮತ್ತು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. “ಸಾರ್ವಜನಿಕ ವಲಯದ ರಕ್ಷಣಾ ಸಂಸ್ಥೆಗಳಿಗೆ ಲಭ್ಯವಿರುವ ಅವಕಾಶಗಳನ್ನು ಖಾಸಗಿ ಕಂಪನಿಗಳಿಗೂ ವಿಸ್ತರಿಸುವುದರಿಂದ ಸ್ಪರ್ಧೆ ಹೆಚ್ಚಬಹುದು ಮತ್ತು ಉತ್ಪಾದನೆಯು ವೇಗಗೊಳ್ಳಬಹುದು. ಆದರೆ, ಇದು ಸಾರ್ವಜನಿಕ ವಲಯದ ಉದ್ಯಮಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆಯೇ ಅಥವಾ ಅವುಗಳ ಪಾತ್ರವನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತದೆಯೇ? ಎಂಬ ಪ್ರಶ್ನೆಯನ್ನೂ ಹುಟ್ಟುಹಾಕುತ್ತದೆ,” ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಮೋದಿ ಸರ್ಕಾರದ ‘ಆತ್ಮನಿರ್ಭರ ಭಾರತ’ದ ಪರಿಕಲ್ಪನೆಯು ಸರ್ಕಾರಿ ಕ್ಷೇತ್ರದ ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸುವುದನ್ನು ಸೂಚಿಸುತ್ತದೆಯೇ, ಅಥವಾ ಸರ್ಕಾರಿ ಸಂಸ್ಥೆಗಳ ಜೊತೆಗೆ ಖಾಸಗಿ ಕಾರ್ಪೊರೇಟ್ ವಲಯಕ್ಕೂ ಕಾರ್ಯತಂತ್ರದ ರಕ್ಷಣಾ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸುವುದನ್ನು ಸೂಚಿಸುತ್ತದೆಯೇ ಎಂಬ ಬಗ್ಗೆ ಈಗ ಎಲ್ಲರಲ್ಲೂ ಅನುಮಾನಗಳು ಮೂಡುತ್ತಿವೆ. ಕ್ಷಿಪಣಿ ಉತ್ಪಾದನೆಯನ್ನು ವಿಸ್ತರಿಸುವುದು ಅಗತ್ಯವೆನಿಸಿದರೂ, ಅವುಗಳನ್ನು ಯಾರು ತಯಾರಿಸುತ್ತಿದ್ದಾರೆ? ಎಂಬುದರ ಮೇಲೆ ಗಮನಹರಿಸುವ ಬದಲು, ಸಾರ್ವಜನಿಕ ಬೊಕ್ಕಸದ ಮೇಲಿನ ವೆಚ್ಚ, ಗುತ್ತಿಗೆಗಳನ್ನು ಯಾರಿಗೆ ಹೇಗೆ ನೀಡಿತ್ತಾರೆ, ಬೆಲೆ ನಿರ್ಧಾರ ಯಾರು ಮಾಡುತ್ತಾರೆ, ಗುಣಮಟ್ಟದ ಹೊಣೆಗಾರಿಕೆ ಮತ್ತು ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕವಾದ ತಂತ್ರಜ್ಞಾನದ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಮೋದಿ ಸರ್ಕಾರವು ಪರಿಹರಿಸಬೇಕೆಂದು ವಿಶ್ಲೇಷಕರು ಪ್ರತಿಪಾದಿಸುತ್ತಾರೆ.
ಮೋದಿ ಸರ್ಕಾರವು ಈ ಕ್ರಮವನ್ನು ‘ಆತ್ಮನಿರ್ಭಾರ್ ರಕ್ಷಣಾ ವಲಯ’ದತ್ತ ಒಂದು ಹೆಜ್ಜೆ ಎಂದು ಬಿಂಬಿಸುತ್ತಿದೆ. ಆದರೆ, ಸಾರ್ವಜನಿಕ ವಲಯದ ಸಂಸ್ಥೆ (ಪ್ರಭುತ್ವ ರಂಗ) ಗಳಿಂದ ಖಾಸಗಿ ಕಂಪನಿಗಳೆಡೆಗೆ ವ್ಯೂಹಾತ್ಮಕ ಉತ್ಪಾದನಾ ಗುತ್ತಿಗೆಗಳನ್ನು ವಹಿಸುವ ಬಾಗಿಲು ತೆರೆಯುವುದರಿಂದ ಸಾರ್ವಜನಿಕರಿಗೆ ಆಗುವ ಪ್ರಯೋಜನಗಳನ್ನು ಸ್ಪಷ್ಟವಾಗಿ ವಿವರಿಸುವ ಜವಾಬ್ದಾರಿಯೂ ಕೇಂದ್ರ ಸರ್ಕಾರದ ಮೇಲಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ದೇಶದ ನಿರ್ಣಾಯಕ ಮತ್ತು ಸೂಕ್ಷ್ಮ ರಕ್ಷಣಾ ವಲಯದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಸಂಪೂರ್ಣವಾಗಿ ಸುರಕ್ಷಿತವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ. ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯವಾಗಿರುವ ಕ್ಷಿಪಣಿಗಳ ವಿಷಯದಲ್ಲಿ, ಲಾಭಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ಹಿತಾಸಕ್ತಿ, ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಆದ್ಯತೆ ನೀಡಬೇಕು ಎಂದು ತಜ್ಞರು ಸಲಹೆ ನೀಡುದ್ದಾರೆ.


Add comment