ನ್ಯೂಡೆಲ್ಲಿ : ಉದ್ಯೋಗಿಗಳು ಮತ್ತು ಕಾರ್ಮಿಕರು ಕಠಿಣ ಹಾಗೂ ವೇತನರಹಿತ ಕೆಲಸಕ್ಕೆ ಒಳಪಡುವ ದೇಶಗಳ ಪೈಕಿ ಭಾರತವು ಪ್ರಥಮ ಸ್ಥಾನದಲ್ಲಿದೆ. ಎಡಿಪಿ (ADP) ಬಿಡುಗಡೆ ಮಾಡಿರುವ “ಪೀಪಲ್ ಅಟ್ ವರ್ಕ್ 2026” (People at Work 2026) ಎಂಬ ವರದಿಯು, ವಾರಕ್ಕೆ 16 ಗಂಟೆಗಳಿಗೂ ಹೆಚ್ಚು ಕಾಲದ ಅತಿ ಹೆಚ್ಚಿನ ವೇತನರಹಿತ ಕೆಲಸದ ಅವಧಿಯ ವಿಷಯದಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ ಎಂದು ಬಹಿರಂಗಪಡಿಸಿದೆ.
ದೇಶದ ಶೇಕಡಾ 24 ರಷ್ಟು ಕಾರ್ಮಿಕರು ವಾರಕ್ಕೆ 16 ಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಯಾವುದೇ ವೇತನವಿಲ್ಲದೆ ಬಿಟ್ಟಿಚಾಕರಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಇನ್ನೂ ಶೇಕಡಾ 40 ರಷ್ಟು ಮಂದಿ ವಾರಕ್ಕೆ 6 ರಿಂದ 15 ಗಂಟೆಗಳ ಕಾಲ ವೇತನರಹಿತ ಕೆಲಸ ಮಾಡುವ ಮೂಲಕ ಕಾರ್ಮಿಕರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ವರದಿಯು ಬಹಿರಂಗಪಡಿಸಿದೆ.
ಇದರರ್ಥ, ಭಾರತದ ಕಾರ್ಮಿಕ ವರ್ಗದ ಒಂದು ಗಮನಾರ್ಹ ಭಾಗವು ತಮ್ಮ ಕೆಲಸದ ಅವಧಿಯನ್ನು ವೇತನ ಸಹಿತ ಕೆಲಸವೆಂದು ಪರಿಗಣಿಸದೆಯೇ ಮಾಲೀಕರಿಗಾಗಿ ಶ್ರಮಿಸುತ್ತಿದೆ. ಆದರೆ, ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ಅಷ್ಟೊಂದು ತೀವ್ರವಾಗಿಲ್ಲ. ಇಲ್ಲಿ ಶೇಕಡಾ 62% ರಷ್ಟು ಕಾರ್ಮಿಕರು ವಾರಕ್ಕೆ ಐದು ಗಂಟೆಗಳ ಕಾಲ ವೇತನರಹಿತ ಕೆಲಸ ಮಾಡುತ್ತಾರೆ, ಶೇಕಡಾ 26% ರಷ್ಟು ಮಂದಿ 6 ರಿಂದ 15 ಗಂಟೆಗಳವರೆಗೆ ಮತ್ತು ಶೇಕಡಾ 12 ರಷ್ಟು ಮಂದಿ 16 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಕೆಲಸ ಮಾಡುತ್ತಾರೆ.
ಕೇವಲ ಕೆಲಸದ ಅವಧಿಯನ್ನು ಹೆಚ್ಚಿಸುವುದರಿಂದ ಉತ್ಪಾದನೆಯ ಪ್ರಮಾಣ ಹೆಚ್ಚಾಗುತ್ತದೆ ಎಂದು ಭಾವಿಸುವುದು ಸರಿಯಲ್ಲ ಎಂದು ವರದಿಯು ತಿಳಿಸಿದೆ. ಅತಿಯಾದ ಹಾಗೂ ಸಂಭಾವನೆ ಇಲ್ಲದ ಕೆಲಸದ ಹೊರೆಯಿಂದ ಬಳಲುವ ಕಾರ್ಮಿಕರು ತಮ್ಮ ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮಾಲಿಕರು ಹೇಳುವ ಸಾಧ್ಯತೆಯಿದೆ. ಜೊತೆಗೆ, ಕಾರ್ಮಿಕರು ಕೆಲಸಕ್ಕೆ ಸಂಬಂಧಿಸಿದ ತೀವ್ರ ಒತ್ತಡವನ್ನು ಎದುರಿಸುತ್ತಾರೆ. ಮತ್ತು ಕೆಲಸವನ್ನು ತೊರೆಯುವ ಬಗ್ಗೆಯೂ ಯೋಚಿಸಲು ಮುಂದಾಗಬಹುದು ಎಂದು ಸಮೀಕ್ಷೆಯು ಸೂಚಿಸಿದೆ.


Add comment