ಕ್ರಾಂತಿಯಿಲ್ಲದೆ ಜಾತಿ ನಿರ್ಮೂಲನೆ ಅಸಾಧ್ಯ ಮತ್ತು ಜಾತಿ ನಿರ್ಮೂಲನೆಯಾಗದೆ ಕ್ರಾಂತಿಯೂ ಅಸಾಧ್ಯ ಎಂದು ಬಹಳ ದಿನಗಳ ಹಿಂದೆ ನಡೆದ ಸಭೆಯೊಂದರಲ್ಲಿ ಜಾತಿ ನಿರ್ಮೂಲನೆ ಕುರಿತು ಮಾತನಾಡುತ್ತಾ ನಾನು ಹೇಳಿದ್ದೆ. ನನ್ನ ಈ ಅಭಿಪ್ರಾಯವು ಪ್ರಬುದ್ಧವಾದುದು ಅಥವಾ ಒಳನೋಟವುಳ್ಳದ್ದು ಎಂದು ಅನಿಸಬಹುದು. ಶತ ಶತಮಾನಗಳಿಂದಲೂ ಭಾರತೀಯ ಸಮಾಜವನ್ನು ಕಾಡುತ್ತಿರುವ ಕಠೋರ ವಾಸ್ತವವನ್ನು ಈ ವ್ಯಾಖ್ಯಾನ ಸಂಕ್ಷಿಪ್ತವಾಗಿ ಹಾಗೂ ಸ್ಪಷ್ಟವಾಗಿ ಹಿಡಿದಿಡುತ್ತದೆ. ಜಾತಿ ವ್ಯವಸ್ಥೆಯೆಂಬ ಬಲೆಯಲ್ಲಿ ಸಿಲುಕಿಕೊಂಡಿರುವ ಭಾರತದ ಚಿತ್ರಣವನ್ನು ಇದು ಜೀವಂತವಾಗಿ ತೋರಿಸುತ್ತದೆ. ನಮ್ಮ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಪ್ರತಿಯೊಂದು ಚಳವಳಿಯೂ ಏಕೆ ಅರ್ಧದಲ್ಲೇ ಸ್ಥಗಿತಗೊಂಡಿತು, ಆಳುವ ವರ್ಗಗಳ ವಶವಾಯಿತು ಅಥವಾ ಅಂತಿಮವಾಗಿ ದಮನಿಸಲ್ಪಟ್ಟಿತು ಎಂಬುದನ್ನು ಇದು ವಿವರಿಸುತ್ತದೆ. ಇದೇ ಆಧಾರದ ಮೇಲೆ, ನಾನು ಈಗ ನಿಮ್ಮ ಮುಂದೆ ಎರಡು ಅಂಶಗಳನ್ನು ಮಂಡಿಸುತ್ತೇನೆ: ಮೊದಲನೆಯದು ಜಾತಿಯನ್ನು ಏಕೆ ನಿರ್ಮೂಲನೆ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದೆ, ಮತ್ತು ಎರಡನೆಯದು ಜಾತಿಯ ನಿರ್ಮೂಲನೆ ಹೇಗೆ ಸಾಧ್ಯ ಎಂಬುದನ್ನು ಕುರಿತದ್ದಾಗಿದೆ.
ಜಾತಿ ನಿರ್ಮೂಲನೆಯ ಬಗ್ಗೆ ಚರ್ಚಿಸುವ ಮುನ್ನ, ಜಾತಿ ಎಂದರೇನು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಜಾತಿ ಪದ್ಧತಿಯನ್ನು ವಿರೋಧಿಸುವವರಲ್ಲಿಯೂ ಅನೇಕರಿಗೆ ಅದರ ನೈಜ ಸ್ವರೂಪದ ಬಗ್ಗೆ ಪೂರ್ಣ ಅರಿವಿರುವುದಿಲ್ಲ. ನಾನು ಕಳೆದ ಐದು ದಶಕಗಳಿಂದಲೂ ಈ ವಿಷಯಗಳ ಕುರಿತು ಬರೆಯುತ್ತಿದ್ದೇನೆ. ಜಾತಿ ಎಂದರೇನು ಎಂಬುದನ್ನು ವಿವರಿಸಲು, ಇತ್ತೀಚೆಗಷ್ಟೇ ನಾನು *The Caste ConCensus* ಎಂಬ ಪುಸ್ತಕವನ್ನೂ ಬರೆದಿದ್ದೇನೆ. ಜಾತಿ ಪದ್ಧತಿಯನ್ನು ಸಾಮಾನ್ಯವಾಗಿ ಸಾಮಾಜಿಕ ವಿಭಜಿತ ವ್ಯವಸ್ಥೆ (social stratification) ಎಂದು ಬಣ್ಣಿಸುತ್ತಾರೆ. ಅಲ್ಲಿ ಬ್ರಾಹ್ಮಣರು ಮೇಲಿನ ಹಂತದಲ್ಲೂ, ದಲಿತರು ಕೆಳಗಿನ ಹಂತದಲ್ಲೂ ಮತ್ತು ಇತರೆ ಜಾತಿಗಳು ನಡುವಿನ ಹಂತಗಳಲ್ಲೂ ಇರುವುದಾಗಿ ಮೆಟ್ಟಿಲುಗಳಿಲ್ಲದ ಬಹುಮಹಡಿ ಕಟ್ಟಡಕ್ಕೆ ಹೋಲಿಸುತ್ತಾರೆ. ಇದರರ್ಥವೇನೆಂದರೆ, ಕಟ್ಟಡದಲ್ಲಿ ಪ್ರತ್ಯೇಕ ಮಹಡಿಗಳಿದ್ದರೂ, ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಹೋಗಲು ಯಾವುದೇ ಮಾರ್ಗವಿರುವುದಿಲ್ಲ. ಈ ಹೋಲಿಕೆಯು ತಪ್ಪಲ್ಲವಾದರೂ, ಕೇವಲ ಇದಷ್ಟೇ ಪೂರ್ಣ ವಿವರಣೆಯಾಗಲಾರದು. ಏಕೆಂದರೆ, ಇಂತಹ ಹೋಲಿಕೆಯು ಜಾತಿಯನ್ನು ಕೇವಲ ಒಂದು ಸ್ಥಿರವಾದ ಕಲ್ಲು ಬಂಡೆಯಂತೆ, ಜೀವಂತಿಕೆ ಇಲ್ಲದ ವ್ಯವಸ್ಥೆಯಂತೆ ಚಿತ್ರಿಸುತ್ತದೆ. ಅನೇಕ ಜಾತಿ ವಿರೋಧಿ ಚಳುವಳಿಗಳು ಇಂದಿಗೂ ಇದೇ ತಿಳುವಳಿಕೆಯೊಂದಿಗೆ ಕಾರ್ಯನಿರ್ವಹಿಸುತ್ತಿವೆ; ಅವು ಬ್ರಾಹ್ಮಣರನ್ನು ದೂಷಿಸುವುದಕ್ಕೆ ಮತ್ತು ಅಂಬೇಡ್ಕರ್ ಅವರ ಮಾತುಗಳನ್ನು ಆಯ್ದು ಉಲ್ಲೇಖಿಸುವುದಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡಿವೆ. ಆದರೆ, ಜಾತಿಗಳು ಬದಲಾಗಿವೆ—ಮತ್ತು ಬದಲಾಗುತ್ತಲೇ ಇವೆ. ಬುದ್ಧನ ಕಾಲದಲ್ಲಿದ್ದ ಜಾತಿ ರಚನೆಗಳು ಇಂದಿನ ಜಾತಿ ರಚನೆಗಳಂತೆಯೇ ಇಲ್ಲ. ಇವು ಮೌರ್ಯರ ಕಾಲ, ಗುಪ್ತರ ಕಾಲ, ಮಧ್ಯಯುಗ ಅಥವಾ ವಸಾಹತುಶಾಹಿ ಯುಗದ ಜಾತಿ ಸ್ವರೂಪಗಳಲ್ಲ. ಹಾಗೆಯೇ, ಅಂಬೇಡ್ಕರ್ ಅವರು ತಮ್ಮ ಕಾಲದಲ್ಲಿ ಚರ್ಚಿಸಿದ ಮತ್ತು ಯಾರ ವಿರುದ್ಧ ಹೋರಾಡಿದರೋ, ಅಂತಹ ಜಾತಿ ರಚನೆಗಳೂ ಇವುಗಳಲ್ಲ. ಇಂದು ನಾವು ಎದುರಿಸುತ್ತಿರುವ ಜಾತಿ ವ್ಯವಸ್ಥೆಯು ಬದಲಾಗಿದೆ; ಸ್ವಾತಂತ್ರ್ಯೋತ್ತರ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಗಳು ಮತ್ತು ಭಾರತೀಯ ಸಂವಿಧಾನದ ಪ್ರಭಾವದಿಂದಾಗಿ ಅದು ಹೊಸ ಸ್ವರೂಪವನ್ನು ಪಡೆದುಕೊಂಡಿದೆ. ಆದ್ದರಿಂದಲೇ ನಾನು ಅವುಗಳನ್ನು ‘ಸಾಂವಿಧಾನಿಕ ಜಾತಿಗಳು’ ಎಂದು ಕರೆಯುತ್ತೇನೆ. ನನ್ನ *ರಿಪಬ್ಲಿಕ್ ಆಫ್ ಕ್ಯಾಸ್ಟ್* (Republic of Caste) ಎಂಬ ಪುಸ್ತಕದಲ್ಲಿ ನಾನು ಈ ವಿಷಯವನ್ನು ವಿವರಿಸಿದ್ದೇನೆ. ನಾವು ಈಗ ಎದುರಿಸುತ್ತಿರುವುದು ನಿಖರವಾಗಿ ಇದೇ ರೀತಿಯ, ಸಂವಿಧಾನಬದ್ಧವಾಗಿ ವ್ಯಾಖ್ಯಾನಿಸಲ್ಪಟ್ಟ ಸಮಕಾಲೀನ ಜಾತಿ ಸಮಸ್ಯೆಯನ್ನು.
ಜಾತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು, ಅದನ್ನು ಭಾರತೀಯ ಸಮಾಜದೊಂದಿಗೆ ಸಮಾನಾಂತರ ರಚನೆ ವ್ಯವಸ್ಥೆಯಾಗಿ (homomorphous structure) ನೋಡಬೇಕು; ಹೊಮೊಮಾರ್ಫಸ್ ಅಂದರೆ, ನಮ್ಮ ದೇಶದಲ್ಲಿ ರುವ ಜಾತಿ ವ್ಯವಸ್ಥೆ,, ಭಾರತೀಯ ಸಮಾಜ ಒಂದೇ ರೀತಿಯ ಆಕಾರ, ರಚನೆ ಮತ್ತು ಅಸ್ಥಿಪಂಜರದಂತಹ ಚೌಕಟ್ಟನ್ನು ಹಂಚಿಕೊಂಡಂತಿವೆ ಎಂದರ್ಥ. ಅಂದರೆ ಭಾರತೀಯ ಸಮಾಜದಿಂದ ಜಾತಿಯನ್ನು ತೆಗೆದುಹಾಕಿದರೆ, ಆಗ ಉಳಿಯುವುದು ‘ಜಾತಿರಹಿತ ಭಾರತೀಯ ಸಮಾಜ’ವಲ್ಲ. ಅದರ ಸ್ಥಾನದಲ್ಲಿ, ಸಂಪೂರ್ಣವಾಗಿ ಭಿನ್ನವಾದ ಮತ್ತು ರಚನಾತ್ಮಕವಾದ ಹೊಸ ಸಮಾಜವೊಂದು ಉದಯಿಸುತ್ತದೆ. ಇದು ಹಿಂದೆಂದೂ ಅಸ್ತಿತ್ವದಲ್ಲಿರದಂತಹ ಸಮಾಜವಾಗಿರುತ್ತದೆ. ಜಾತಿಯು ಭಾರತೀಯ ಸಮಾಜದ ಕೇವಲ ಒಂದು ಲಕ್ಷಣವಲ್ಲ; ಅದು ಆ ಸಮಾಜದ ಮೂಲಭೂತ ರಚನಾತ್ಮಕ ಚೌಕಟ್ಟೇ ಆಗಿದೆ. ಭಾರತೀಯ ಸಮಾಜದೊಳಗೆ ಜಾತಿ ಅಸ್ತಿತ್ವದಲ್ಲಿದೆ ಎಂದಲ್ಲ; ಬದಲಿಗೆ, ಭಾರತೀಯ ಸಮಾಜವೇ ಜಾತಿ ವ್ಯವಸ್ಥೆಯೊಳಗೆ ಜೀವಿಸುತ್ತಿದೆ.
ಇದನ್ನು ಅರ್ಥಮಾಡಿಕೊಳ್ಳಲು, ದೇಶದ ಆರ್ಥಿಕತೆಯನ್ನು ಗಮನಿಸೋಣ. ಭಾರತದ ಆರ್ಥಿಕ ರಚನೆಯಲ್ಲಿ ಜಾತಿ ಆಧಾರಿತ ಶ್ರಮ ವಿಭಜನೆಯು ಆಕಸ್ಮಿಕವಾಗಿ ಉಂಟಾದದ್ದಲ್ಲ. ನಿರ್ದಿಷ್ಟ ಸಮುದಾಯಗಳನ್ನು ಕಸ ಗುಡಿಸುವುದು, ಚರ್ಮದ ಕೆಲಸ, ಕೈಯಿಂದ ಮಲವನ್ನು ಸ್ವಚ್ಛಗೊಳಿಸುವುದು, ಮಲ ಹೊರಿಸುವುದು, ಬಟ್ಟೆ ಒಗೆಯುವುದು, ಮೀನುಗಾರಿಕೆ ಮತ್ತು ಕೃಷಿ ಕೂಲಿಯಂತಹ ಕೆಲಸಗಳಿಗೆ ಸೀಮಿತಗೊಳಿಸುವ ವೃತ್ತಿಗಳ ಈ ವಂಶಪಾರಂಪರ್ಯ ಹಂಚಿಕೆಯು ಮಾರುಕಟ್ಟೆಯ ಶಕ್ತಿಗಳಿಂದ ಉಂಟಾದದ್ದಲ್ಲ. ಇವು ಸ್ವಯಂಪ್ರೇರಿತವಾಗಿ ರೂಪುಗೊಂಡ ವೃತ್ತಿಪರ ವಿಭಾಗಗಳಲ್ಲ; ಬದಲಾಗಿ, ಇವು ಬಲವಂತವಾಗಿ ರಚಿಸಲಾದ ಆರ್ಥಿಕ ವ್ಯವಸ್ಥೆಯ ಭಾಗಗಳಾಗಿವೆ. ಈ ವ್ಯವಸ್ಥೆಯಲ್ಲಿ, ಮನುಷ್ಯರ ಹುಟ್ಟು ಅವರ ವೃತ್ತಿಯನ್ನು ನಿರ್ಧರಿಸುತ್ತದೆ. ಆ ವೃತ್ತಿಯು ಅವರ ಆದಾಯವನ್ನು ನಿರ್ಧರಿಸುತ್ತದೆ ಮತ್ತು ಆ ಆದಾಯವು ಅವರ ಜೀವನದ ಅವಕಾಶಗಳನ್ನು ನಿರ್ಧರಿಸುತ್ತದೆ. ಈ ಅವಕಾಶಗಳನ್ನು ಉದ್ದೇಶಪೂರ್ವಕವಾಗಿಯೇ ತಲೆಮಾರುಗಳವರೆಗೆ ಮುಂದುವರಿಯುವಂತೆ ರೂಪಿಸಲಾಗಿದೆ. ದೇಶದಲ್ಲಿರುವ ಭೂಮಿಯ ವಿಷಯವನ್ನು ಪರಿಗಣಿಸೋಣ. ಭಾರತದಲ್ಲಿ ಭೂ ಒಡೆತನದ ಹಕ್ಕುಗಳು ಚಾರಿತ್ರಿಕವಾಗಿ ಜಾತಿಯ ಆಧಾರದ ಮೇಲೆ ರೂಪುಗೊಂಡಿವೆ. ಕೃಷಿ ವಲಯವನ್ನು ಪರಿಶೀಲಿಸಿದಾಗ ನಿರ್ದಿಷ್ಟವಾಗಿ ಭೂಮಿಯ ಒಡೆತನ ಯಾರ ಕೈಲ್ಲಿದೆ, ಯಾರು ಭೂಮಿಯನ್ನು ಸಾಗುವಳಿ ಮಾಡುತ್ತಾರೆ ಮತ್ತು ಯಾರು ಭೂಹೀನರಾಗಿದ್ದಾರೆ ಎಂಬ ವಿಷಯಗಳನ್ನು ಗಮನಿಸಿದಾಗ — ಈ ವ್ಯವಸ್ಥೆಯು ಇಂದಿಗೂ ಜಾತಿಯ ಗೆರೆಗಳನ್ನೇ ಅನುಸರಿಸುತ್ತಿವೆ ಎಂಬುದು ಸಾಬೀತಾಗುತ್ತದೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ತಮಿಳುನಾಡಿನಾದ್ಯಂತ ಇರುವ ಹಳ್ಳಿಗಳಲ್ಲಿ ದಲಿತರಿಗೆ ಭೂ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಇದು ಜಾತಿ ವ್ಯವಸ್ಥೆಯ ಆರ್ಥಿಕ ಸ್ವರೂಪವಾಗಿದೆ. ಇದರೊಳಗೆ ಜಾತಿ ವ್ಯವಸ್ಥೆಯು ತನ್ನನ್ನು ತಾನೇ ಮುಂದುವರಿಸಿಕೊಂಡು ಹೋಗುವುದನ್ನು ಕಾಣಬಹುದು. ಇನ್ನು ವಿವಾಹ ಪದ್ಧತಿಯನ್ನು ಗಮನಿಸೋಣ. ಒಂದೇ ಜಾತಿಯೊಳಗಿನ ವಿವಾಹವು ಜಾತಿ ವ್ಯವಸ್ಥೆಯು ತಲೆಮಾರುಗಳ ಕಾಲ ಉಳಿದುಕೊಂಡು ಬರುವಂತೆ ಮಾಡಿರುವ ಪ್ರಮುಖ ಕಾರ್ಯವಿಧಾನವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಇದನ್ನು ಜಾತಿ ವ್ಯವಸ್ಥೆಯ ಮೂಲ ಬೇರು ಎಂದೇ ಗುರುತಿಸಿದ್ದರು; ಜಾತಿ ವ್ಯವಸ್ಥೆ ಅಂತರ್-ಜಾತಿ ವಿವಾಹಗಳನ್ನು ವಿರೋಧಿಸುತ್ತದೆ. ಅಂತರ-ಜಾತಿ ವಿವಾಹಗಳನ್ನು ವಿರೋಧಿಸುವುದು ಏಕೆಂದರೆ ಜನರು ತಮ್ಮದೇ ಜಾತಿಯೊಳಗೆ ವಿವಾಹವಾಗುವವರೆಗೆ ಜಾತಿ ವ್ಯವಸ್ಥೆಯು ತನ್ನ ಅಸ್ತಿತ್ವವನ್ನು ಮುಂದುವರಿಸುತ್ತದೆ; ಮತ್ತು ಜಾತಿ ವ್ಯವಸ್ಥೆಯು ಇರುವವರೆಗೂ, ಅದರಲ್ಲಿ ಅಂತರ್ಗತವಾಗಿರುವ ಆರ್ಥಿಕ ಅಸಮಾನತೆಗಳು ಹಾಗೂ ಸಾಮಾಜಿಕ ವಿಭಜನೆಗಳೂ ಮುಂದುವರಿಯುತ್ತವೆ.
ಈಗ ಧರ್ಮಕ್ಕೆ ಸಂಬಂಧಿಸಿದ ಅಂಶವನ್ನು ಪರಿಶೀಲಿಸೋಣ. ಭಾರತದ ಇತಿಹಾಸದಲ್ಲಿ, ಹಿಂದೂ ಧಾರ್ಮಿಕ ಆಚರಣೆಗಳ ವ್ಯವಸ್ಥೆಯು ಕೇವಲ ಸೈದ್ಧಾಂತಿಕ ಬೋಧನೆಯಲ್ಲಿ ಹೇಳಿದ್ದಲ್ಲ; ಅದು ವಾಸ್ತವಿಕ ಜೀವನದಲ್ಲಿ ಆಚರಣೆಗೆ ತರಲ್ಪಡುತ್ತಿದ್ದ ವಿಷಯವಾಗಿದೆ. ಇದು ಸಂಪೂರ್ಣವಾಗಿ ಜಾತಿ ವ್ಯವಸ್ಥೆಯ ಮೇಲೆ ರೂಪುಗೊಂಡಿದೆ. ಯಾರು ದೇವಾಲಯ ಪ್ರವೇಶಿಸಬೇಕು, ಧಾರ್ಮಿಕ ವಿಧಿವಿಧಾನಗಳ ನಿರ್ವಹಣೆ ಯಾರು ಮಾಡಬೇಕು, ಧರ್ಮಗ್ರಂಥಗಳ ಪಠಣ ಯಾರು ಮಾಡಬೇಕು ಮತ್ತು ಯಾರು ‘ಧರ್ಮ’ದ ವ್ಯಾಖ್ಯಾನ ಮಾಡಬೇಕು ಎಂಬಂತಹ ವಿಷಯಗಳನ್ನು ಪರಿಶೀಲಿಸಿದಾಗ, ಹಿಂದೂ ಆಚರಣಾ ವ್ಯವಸ್ಥೆಯು ಶತ ಶತಮಾನಗಳ ಕಾಲ ಜಾತಿ-ಆಧಾರಿತ ಅಧಿಕಾರದ ರಚನೆಯಾಗಿಯೇ ಮುಂದುವರಿದಿದೆ ಎಂಬುದು ಸ್ಪಷ್ಟವಾಗುತ್ತದೆ. ರಾಜಕೀಯ ರಂಗವನ್ನು ಗಮನಿಸಿದಾಗ, ಜಾತಿಯು ಒಂದು ‘ವೋಟ್ ಬ್ಯಾಂಕ್’ (ಮತಗಳ ಭಂಡಾರ) ಆಗಿ ಕಾರ್ಯನಿರ್ವಹಿಸುತ್ತದೆ; ಭಾರತೀಯ ಚುನಾವಣಾ ರಾಜಕೀಯದಲ್ಲಿ ಇದು ಅತ್ಯಂತ ಪ್ರಭಾವಶಾಲಿ ಅಂಶವಾಗಿದೆ. ರಾಜಕೀಯ ಪಕ್ಷಗಳೇ ಪರಿಣಾಮಕಾರಿಯಾಗಿ ಜಾತಿ-ಆಧಾರಿತ ಸಂಘ-ಸಂಸ್ಥೆಗಳಾಗಿ ಮಾರ್ಪಟ್ಟಿವೆ. ಜಾತಿ ಪದ್ಧತಿಯನ್ನು ವಿರೋಧಿಸುವ ಪಕ್ಷಗಳು ಕೂಡ ಅಧಿಕಾರವನ್ನು ಪಡೆಯಲು ಜಾತಿ ಸಮೀಕರಣಗಳನ್ನೇ ಅವಲಂಬಿಸುತ್ತವೆ. ಅಂತಿಮವಾಗಿ, ಭಾರತೀಯ ಚುನಾವಣಾ ರಾಜಕೀಯದಲ್ಲಿ ಜಾತಿ ಲೆಕ್ಕಾಚಾರಗಳನ್ನು ಕಡೆಗಣಿಸಲು ಸಾಧ್ಯವಿಲ್ಲ—ಬಹುಜನ ಸಮಾಜ ಪಕ್ಷದ ಏಳುಬೀಳುಗಳು ಈ ಸತ್ಯವನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತವೆ. ಕುಟುಂಬ ಮತ್ತು ಅಡುಗೆಮನೆಯಲ್ಲಿ ಜಾತಿಯು ಎದ್ದು ಕಾಣುತ್ತದೆ. ಯಾರು ಎಲ್ಲಿ ಕುಳಿತುಕೊಳ್ಳಬೇಕು? ಯಾರು ಯಾರನ್ನು ಮುಟ್ಟಬಹುದು? ಯಾರು ಯಾವ ಬಾವಿಯಿಂದ ನೀರು ಸೇದಬೇಕು? ಯಾರು ಯಾವ ರೀತಿಯ ಉಡುಪನ್ನು ಧರಿಸಬೇಕು? ಮದುವೆಗಳಲ್ಲಿ ಯಾರು ಕುದುರೆ ಏರಬೇಕು? ಇವೆಲ್ಲವೂ ಮತ್ತು ಇತರ ಅನೇಕ ವಿಷಯಗಳು ಜಾತಿಯಿಂದಲೇ ನಿರ್ಧಾರವಾಗುತ್ತವೆ. ಆರ್ಥಿಕ ವ್ಯವಸ್ಥೆ, ರಾಜಕೀಯ ವ್ಯವಸ್ಥೆ ಮತ್ತು ಧರ್ಮ ಹೀಗೆ ಎಲ್ಲೆಡೆ ಜಾತಿಯ ಅಸ್ತಿತ್ವವಿದೆ. ಇದು ವಿವಾಹ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿದೆ. ಇದು ಕುಟುಂಬದಲ್ಲಿದೆ. ಇದು ಅಡುಗೆಮನೆಯಲ್ಲಿದೆ. ಇದು ಭಾಷೆಯಲ್ಲೂ ಇದೆ. ಜಾತಿಯು ಕೇವಲ ಸಮಾಜದೊಳಗೆ ಕಾರ್ಯನಿರ್ವಹಿಸುವ ಒಂದು ವ್ಯವಸ್ಥೆಯಲ್ಲ; ಬದಲಾಗಿ, ಅದು ಸ್ವತಃ ಸಮಾಜವನ್ನೇ ಮುನ್ನಡೆಸುವ ‘ಆಪರೇಟಿಂಗ್ ಸಿಸ್ಟಮ್’ (ಕಾರ್ಯನಿರ್ವಹಣಾ ವ್ಯವಸ್ಥೆ) ಆಗಿದೆ. ಆದ್ದರಿಂದ ಅದನ್ನು ನಿರ್ಮೂಲನೆ ಮಾಡುವುದು ಅಷ್ಟು ಸುಲಭವಲ್ಲ.
ಭೂಮಿ ಹಂಚಿಕೆ, ಆರ್ಥಿಕ ಪುನರ್ರಚನೆ ಮತ್ತು ಸಂಪನ್ಮೂಲಗಳ ಮರುಹಂಚಿಕೆಯಂತಹ ಕ್ರಮಗಳ ಮೂಲಕ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವುದು ಸೈದ್ಧಾಂತಿಕವಾಗಿ ಸಾಧ್ಯವಿದ್ದರೂ, ಅದು ಒಂದು ಕಠಿಣ ಕಾರ್ಯವಾಗಿದೆ. ಪ್ರಪಂಚದ ಚರಿತ್ರೆಯೊಳಗಿನಇತರ ವ್ಯವಸ್ಥೆಗಳಿಗಿಂತ ಜಾತಿ ವ್ಯವಸ್ಥೆಯು ಹೇಗೆ ಭಿನ್ನವಾಗಿದೆ ಎಂಬುದು ಇಲ್ಲಿನ ಪ್ರಮುಖ ಪ್ರಶ್ನೆಯಾಗಿದೆ. ಎಲ್ಲಾ ಪ್ರಾಚೀನ ಸಮಾಜಗಳಲ್ಲಿಯೂ ವರ್ಗ ವಿಭಜನೆಗಳು ಅಸ್ತಿತ್ವದಲ್ಲಿದ್ದವು, ಆದರೆ ಕಾಲಕ್ರಮೇಣ ಅವು ಮಾಯವಾದವು.ಆದಾಗ್ಯೂ, ಜಾತಿ ಪದ್ಧತಿಯು ಮುಂದುವರಿದೇ ಬಂದಿದೆ. ಇದು ಕೇವಲ ಸಾಮಾಜಿಕ ರಚನೆಯಲ್ಲಿ ಮಾತ್ರವಲ್ಲದೆ, ಸಾಮಾಜಿಕ ಮನಸ್ಥಿತಿಯಲ್ಲೂ ಬೇರೂರಿದೆ. ಇದು ದೇಹ ಮತ್ತು ಮನಸ್ಸುಗಳೆರಡರಲ್ಲೂ ಹಾಸುಹೊಕ್ಕಾಗಿದ್ದು, ನಡವಳಿಕೆಯ ಜೊತೆಗೆ ನಂಬಿಕೆಗಳನ್ನೂ ನಿಯಂತ್ರಿಸುತ್ತಾ, ಆಚರಣೆಗಳು ಹಾಗೂ ವ್ಯಕ್ತಿತ್ವವನ್ನು ರೂಪಿಸುತ್ತಿದೆ. ಇಲ್ಲಿಯೇ ಬ್ರಾಹ್ಮಣ್ಯದ ಪಾತ್ರವು ಮುನ್ನೆಲೆಗೆ ಬರುತ್ತದೆ—ಇದು ಇಂದು ಹಿಂದುತ್ವದ ರೂಪದಲ್ಲಿ ವ್ಯಕ್ತವಾಗುತ್ತಿದೆ.ಜಾತಿ ವ್ಯವಸ್ಥೆಯ ‘ಬುದ್ಧಿವಂತಿಕೆ’ಯು (ಇಲ್ಲಿ ‘ಬುದ್ಧಿವಂತಿಕೆ’ ಎಂಬ ಪದವನ್ನು ಸಂಪೂರ್ಣ ವ್ಯಂಗ್ಯವಾಗಿ ಬಳಸಲಾಗಿದೆ) ಅದರ ಸಂತ್ರಸ್ತರನ್ನೇ ಆ ವ್ಯವಸ್ಥೆಯ ಸಿಂಧುತ್ವವನ್ನು ಎತ್ತಿಹಿಡಿಯುವಂತೆ ಮನವೊಲಿಸಿರುವುದರಲ್ಲೇ ಅಡಗಿದೆ. ಅಂಬೇಡ್ಕರ್ ಇದನ್ನು ‘ಶ್ರೇಣೀಕೃತ ಅಸಮಾನತೆ’ ಎಂದು ಕರೆದರು; ಅಂದರೆ, ಪ್ರತಿಯೊಂದು ಜಾತಿಯೂ ತನ್ನ ಕೆಳಗಿನ ಶ್ರೇಣಿಯಲ್ಲಿರುವ ಜಾತಿಯ ಮೇಲೆ ಶ್ರೇಷ್ಠತೆಯ ಭಾವನೆಯನ್ನು ಹೊಂದುವ ರೀತಿಯಲ್ಲಿ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದೇ ಪ್ರಕ್ರಿಯೆಯ ಮೂಲಕವೇ ಶೂದ್ರನು ಅತಿ-ಶೂದ್ರನನ್ನು ಕೀಳಾಗಿ ಕಾಣಲು ಸಾಧ್ಯವಾಯಿತು.ಸಾಮಾಜಿಕ ಶ್ರೇಣಿಯಲ್ಲಿ ಕೆಳಹಂತದಲ್ಲಿದ್ದರೂ, ಒಬ್ಬ ಹಿಂದುಳಿದ ವರ್ಗದ (OBC) ವ್ಯಕ್ತಿಯು ದಲಿತರನ್ನು ಕೀಳಾಗಿ ಕಾಣುವ ಸಾಧ್ಯತೆಯಿರುತ್ತದೆ. ಇದಕ್ಕೆ ಪ್ರತಿಯಾಗಿ, ದಲಿತರು ತಮ್ಮದೇ ಸಮುದಾಯಕ್ಕಿಂತಲೂ ಹೆಚ್ಚು ಶೋಷಣೆಗೆ ಒಳಗಾದ ಇನ್ನೊಂದು ವರ್ಗವನ್ನು ಗುರುತಿಸಿಕೊಳ್ಳುವ ಮೂಲಕ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಈ ಸಾಮಾಜಿಕ ರಚನೆಯನ್ನು ಬದಲಾಯಿಸಿದರೆ ಅಥವಾ ಕೆಡವಿದರೆ ಎಲ್ಲರೂ ಏನನ್ನಾದರೂ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯವಿತ್ತು. ತಮ್ಮ ಸುತ್ತಮುತ್ತಲಿನ ಇತರ ಜಾತಿಗಳ ಮೇಲೆ ಪ್ರಾಬಲ್ಯ ಸಾಧಿಸಲು ಪೈಪೋಟಿ ನಡೆಸುತ್ತಿದ್ದ ಜಾತಿಗಳ ನಡುವೆ ನಿರಂತರ ಆಂತರಿಕ ಸಂಘರ್ಷಗಳು ನಡೆಯುತ್ತಿದ್ದವು.ಆದರೆ, ಅವರು ಜಾತಿ ವ್ಯವಸ್ಥೆಯನ್ನು ಸಮಗ್ರವಾಗಿ ಎಂದಿಗೂ ಪ್ರಶ್ನಿಸಲಿಲ್ಲ. ಜಾತಿ ವ್ಯವಸ್ಥೆಯು ಇಷ್ಟು ದೀರ್ಘಕಾಲದವರೆಗೆ ಮುಂದುವರಿದಿರುವುದಕ್ಕೆ ಇದೇ ಪ್ರಮುಖ ಕಾರಣವಾಗಿದೆ.
ಆದ್ದರಿಂದಲೇ ಜಾತಿ ಪದ್ಧತಿಯು ಜಗತ್ತಿನಲ್ಲೇ ಅತ್ಯಂತ ದೀರ್ಘಕಾಲದವರೆಗೆ ಉಳಿದುಕೊಂಡು ಬಂದಿರುವ ಮಾನವ-ನಿರ್ಮಿತ ವ್ಯವಸ್ಥೆಯಾಗಿದೆ; ಇದು ಒಂದು ಮನಸ್ಥಿತಿಯಾಗಿ ಮಾರ್ಪಟ್ಟು ಸಾಮಾಜಿಕ ನಿಯಂತ್ರಣದ ಸಾಧನವಾಗಿ ವಿಕಸನಗೊಂಡಿದೆ. ಈ ವಿದ್ಯಮಾನವು ಎಷ್ಟು ಆಳವಾಗಿ ಬೇರೂರಿದೆಯೆಂದರೆ, ಶೋಷಿತರೇ ತಮ್ಮ ಕೆಳಗಿನವರ ಪಾಲಿಗೆ ಶೋಷಕರಾಗಿ ಬದಲಾಗಿದ್ದಾರೆ. ಈ ವ್ಯವಸ್ಥೆಯು ಸಂತ್ರಸ್ತರನ್ನಾಗಲಿ ಅಥವಾ ಶೋಷಕರನ್ನಾಗಲಿ ಯಾರನ್ನೂ ಬಿಡುವುದಿಲ್ಲ. ಜಾತಿಯನ್ನು ಆಂತರಿಕಗೊಳಿಸುವ ಮತ್ತು ಈ ವಿಭಜನೆಯು ಸ್ವಾಭಾವಿಕವೆಂದು ನಂಬುವ ಮೇಲ್ಜಾತಿಯ ವ್ಯಕ್ತಿಯೊಬ್ಬರು ಪ್ರಜ್ಞಾಪೂರ್ವಕವಾಗಿ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಜಾತಿ ವ್ಯವಸ್ಥೆಯು ಬಲಿಪಶುಗಳ ಮಾನವೀಯತೆಯನ್ನು ನಿರಾಕರಿಸುವಂತೆಯೇ, ಅದು ಬಲಿಷ್ಠ ವರ್ಗಗಳ ಮಾನವೀಯತೆಯನ್ನು ಸಹ ವಿಕೃತ ಗೊಳಿಸುತ್ತದೆ. ಆ ವಿಕೃತಿಕರಣದ ರೂಪವು ವಿಭಿನ್ನವಾಗಿರಬಹುದು, ಆದರೆ ಅದು ವಿಕೃತೀಕರಣವೇ ಆಗಿದೆ. ಸಮಸ್ಯೆಯ ಆಳವನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ, ಪ್ರಸ್ತಾಪಿಸಲಾಗುತ್ತಿರುವ ಪರಿಹಾರಗಳು ವ್ಯರ್ಥವಾಗುತ್ತದೆ . ತೀವ್ರ ಬಿಕ್ಕಟ್ಟಿನ ಸಂದರ್ಭದಲ್ಲಿ, ಯಾವುದೇ ಪರಿಹಾರವಿಲ್ಲದಿರುವುದಕ್ಕಿಂತ ವ್ಯರ್ಥ ಪರಿಹಾರಗಳೇ ಹೆಚ್ಚು ಅಪಾಯಕಾರಿ; ಏಕೆಂದರೆ, ಅವು ಬದಲಾವಣೆ ನಡೆಯುತ್ತಿದೆ ಎಂಬ ಭ್ರಮೆಯನ್ನು ಸೃಷ್ಟಿಸುತ್ತವೆ. ಆದರೆ, ವಾಸ್ತವದಲ್ಲಿ ಮೂಲಭೂತ ಸಮಸ್ಯೆಗಳು ಮಾತ್ರ ಹಾಗೆಯೇ ಮುಂದುವರಿಯುತ್ತದೆ. ಇಲ್ಲಿ, ಕೆಲವರಿಗೆ ಕಮ್ಯುನಿಸ್ಟ್ ಚಳುವಳಿಯ ಮೂಲಭೂತ ದೋಷವೇನೆಂಬುದು ಅರ್ಥವಾಗಬಹುದು. ಕಮ್ಯುನಿಸ್ಟ್ ಪಕ್ಷಗಳು ರಚನಾತ್ಮಕ ಕ್ರಾಂತಿಗೆ (structurl revolution) ಆದ್ಯತೆ ನೀಡಿದ್ದವು. ಆದರೆ, ಬ್ರಾಹ್ಮಣ್ಯವು ರೂಪಿಸಿದ ಸಾಮಾಜಿಕ ಮನಸ್ಥಿತಿಯನ್ನು ಎದುರಿಸುವಲ್ಲಿ ಅವು ವಿಫಲವಾಯಿತು. ಅದೇ ರೀತಿ, ದಲಿತ ಚಳುವಳಿಯು ಈ ಸಾಮಾಜಿಕ ಮನಸ್ಥಿತಿಯನ್ನು ಪ್ರಶ್ನಿಸಿತಾದರೂ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಸವಾಲು ಮಾಡಲು ಅದಕ್ಕೆ ಸಾಧ್ಯವಾಗಲಿಲ್ಲ. ಇವೆರಡನ್ನೂ ಒಟ್ಟಿಗೇ ಎದುರಿಸಬೇಕಿದೆ; ಆದ್ದರಿಂದ ಜಾತಿ ನಿರ್ಮೂಲನೆಯನ್ನು ಕ್ರಾಂತಿಗೆ ಸಮಾನವಾದುದೆಂದು ಪರಿಗಣಿಸಬೇಕು. ಇಲ್ಲಿ ‘ಕ್ರಾಂತಿ’ ಎಂಬುದು ಕಾರ್ಲ್ ಮಾರ್ಕ್ಸ್ ಅಭಿಪ್ರಾಯ ಪಟ್ಟಂತೆ, ವರ್ಗ ಸಂಘರ್ಷವು ತನ್ನ ಅಂತಿಮ ಘಟ್ಟವನ್ನು ತಲುಪಿದಾಗ ಉಂಟಾಗುವ ಮೂಲಭೂತ ಸಾಮಾಜಿಕ ಬದಲಾವಣೆಯನ್ನು ಸೂಚಿಸುತ್ತದೆ.
ಸಾಂವಿಧಾನಿಕ ಸುಧಾರಣೆಗಳು, ಅಸ್ಪೃಶ್ಯತೆ ನಿವಾರಣೆ, ಸಮಾನತೆಯ ಹಕ್ಕು ಹಾಗೂ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ (OBC) ಮೀಸಲಾತಿಯಂತಹ ಕ್ರಮಗಳು, ಇವು ಕ್ರಾಂತಿಕಾರಿ ಕ್ರಮಗಳೆಂಬ ಭಾವನೆಯನ್ನು ಜನರ ಮನಸ್ಸಿನಲ್ಲಿ ಮೂಡಿಸಿದವು. ಚಾರಿತ್ರಿಕ ಪ್ರಕ್ರಿಯೆಯಲ್ಲಿ ಇವು ಮಹತ್ವದ್ದಾಗಿದ್ದರೂ, ಅದು ಮಾತ್ರವೇ ಕಟ್ಟುನಿಟ್ಟಿನ ಕ್ರಾಂತಿಕಾರಿ ಕ್ರಮಗಳಾಗುವುದಿಲ್ಲ. ನಾನು ಸಂವಿಧಾನವನ್ನು ಸಂಪೂರ್ಣವಾಗಿ ಬೂಷ್ವಾ ವರ್ಗಗಳ ಕೈಯಲ್ಲಿರುವ ಸಾಧನವೆಂದು ತಳ್ಳಿಹಾಕುವುದಿಲ್ಲ. ಅಂದು ಅದಕ್ಕಿಂತ ಹೆಚ್ಚಿನದನ್ನು ಮಾಡುವುದು ಬಹುಶಃ ಸಾಧ್ಯವಿರಲಿಲ್ಲವೇನೋ. ಆದರೆ, ಬೂರ್ಜ್ವಾ ವ್ಯವಸ್ಥೆಯ ಮಿತಿಗಳ ನಡುವೆಯೂ, ಸಂವಿಧಾನದಲ್ಲಿ ಜಾತಿ ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಅಸಮಾನತೆಗಳನ್ನು ಕಡಿಮೆ ಮಾಡಿ ಹಾಗೂ ಜನರ ಸಾಮರ್ಥ್ಯಗಳನ್ನು ಹೆಚ್ಚಿಸಬಲ್ಲ ದೇಶವನ್ನು ಸುಧಾರಣೆಯ ಹಾದಿಯಲ್ಲಿ ಮುನ್ನಡೆಸಲು ಸಂವಿಧಾನವು ಅವಕಾಶವನ್ನು ಕಲ್ಪಿಸಿದೆ. ಅನೇಕ ದೇಶಗಳು ಅಂತಹ ಹಾದಿಯನ್ನೇ ಅನುಸರಿಸಿದೆ. ಆದರೆ, ಭಾರತೀಯ ಸಂವಿಧಾನದ ವಿಷಯದಲ್ಲಿ ಇದಕ್ಕೆ ತದ್ವಿರುದ್ಧವಾದದ್ದು ಸಂಭವಿಸಿತು. ಇದು ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು, ಅಸಮಾನತೆಗಳನ್ನು ಮತ್ತಷ್ಟು ಉಲ್ಬಣಗೊಳಿಸಿತು ಮತ್ತು ಜನರ ಸಾಮರ್ಥ್ಯಗಳನ್ನು ಕುಂಠಿತಗೊಳಿಸಿತು. ವಿವರವಾದ ವಿವರಣೆಯನ್ನು ಬಯಸುವವರು ನನ್ನ ಪುಸ್ತಕಗಳಾದ *Dalits and the Indian Constitution* ಮತ್ತು *We the Non-People of India* ಗಳನ್ನು ನೋಡಬಹುದು.
ಇಂದು ಸಂವಿಧಾನ ರಚನೆಯಲ್ಲಿ ಅತ್ಯಂತ ಕ್ರಾಂತಿಕಾರಿ ಕ್ರಮ ಎಂದು ಹೇಳಲ್ಪಡುವ ಅಸ್ಪೃಶ್ಯತೆ ನಿರ್ಮೂಲನೆಯನ್ನು ಪರಿಶೀಲಿಸೋಣ. ಪಶ್ಚಿಮಾತ್ಯ ನಾಗರಿಕತೆಗಳ ಪ್ರಭಾವದಿಂದ ಸಂಘ ಸುಧಾರಕರು ಅನೇಕ ಮಂದಿ ಅಷ್ಪೃಶ್ಯತೆ ಅಮಾನುಷವೆಂದು ಅದನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದರು. ಆದರೆ, ಅವರು ಎಂದಿಗೂ ಜಾತಿ ವ್ಯವಸ್ಥೆಯ ವಿರುದ್ಧ ಮಾತನಾಡಲಾರರು. ಮಹಾತ್ಮ ಗಾಂಧಿ ಅವರು ಈ ಧೋರಣೆಗೆ ಒಬ್ಬ ಪ್ರತಿನಿಧಿಯಾಗಿದ್ದರು. ಆದ್ದರಿಂದ ಸಂವಿಧಾನ ರಚನೆಯ ಸಂದರ್ಭದಲ್ಲಿ ಅವಕಾಶ ಬಂದಾಗ ಸರ್ವಾನುಮತದಿಂದ ಅಸ್ಪೃಶ್ಯತೆಯನ್ನು ರದ್ದುಗೊಳಿಸಿದರು. ಆದರೆ ಜಾತಿ ಪದ್ಧತಿಯನ್ನಲ್ಲ. ಅಸ್ಪೃಶ್ಯತೆಯ ಆಚರಣೆ ಅತ್ಯಂತ ಕಡಿಮೆ ಇದ್ದ ಪ್ರದೇಶವಾದ ಬಂಗಾಳದ ಮೂವರು ಸದಸ್ಯರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಅವರಲ್ಲಿ ಮೊದಲಿಗರು ಹರಿಚಂದ್ ಠಾಕೂರ್ ಅವರ ಮೊಮ್ಮಗ ಹಾಗೂ ದಲಿತ ಸಮುದಾಯದ ಮೊದಲ ಬ್ಯಾರಿಸ್ಟರ್ ಆಗಿದ್ದ ಪ್ರಮಥ ರಂಜನ್ ಠಾಕೂರ್. ದೇಶದಲ್ಲಿ ಜಾತಿ ಪದ್ಧತಿಯು ಮುಂದುವರಿಯಲು ಅವಕಾಶವಿದ್ದಾಗ ಅಸ್ಪೃಶ್ಯತೆಯನ್ನು ಹೇಗೆ ರದ್ದುಗೊಳಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು. ಬಂಗಾಳದ ಇಬ್ಬರು ವ್ಯಕ್ತಿಗಳು ಇದನ್ನು ಬೆಂಬಲಿಸಿದರು. ಅವರನ್ನು ಹೊರತುಪಡಿಸಿ, ಬೇರೆ ಯಾರೂ ಈ ವಿಷಯದ ಬಗ್ಗೆ ಮಾತನಾಡಲಿಲ್ಲ.
ಈಗ ಜಾತಿ ವಿನಾಶ ಸಾಧ್ಯವೇ ಎಂಬ ಪ್ರಶ್ನೆಯತ್ತ ಗಮನಹರಿಸೋಣ. ಜಾತಿ ಪದ್ಧತಿಯನ್ನು ರದ್ದುಗೊಳಿಸುವುದರಿಂದ ಮೀಸಲಾತಿ ಸೌಲಭ್ಯ ಕಳೆದುಹೋಗಬಹುದು ಮತ್ತು ಇದರಿಂದಾಗಿ ಪರಿಶಿಷ್ಟ ಜಾತಿಯ ಸದಸ್ಯರು ಈ ವಿಷಯದಲ್ಲಿ ಮೌನ ವಹಿಸಬಹುದು ಎಂದು ಕೆಲವರು ವಾದಿಸಬಹುದು. ಆದರೆ, ಆ ವಾದದ ಸಿಂಧುತ್ವವು ಒಂದು ಪ್ರತ್ಯೇಕ ವಿಷಯವಾಗಿದೆ. ಮೀಸಲಾತಿಯನ್ನು government of india act 1935 ರ(‘ಭಾರತ ಸರ್ಕಾರದ ಕಾಯಿದೆ’) ಮೂಲಕ ಜಾರಿಗೆ ತರಲಾಯಿತು. ಇದು ಬ್ರಿಟಿಷ್ ಸರ್ಕಾರ ರೂಪಿಸಿದ್ದ “ಪರಿಶಿಷ್ಟ ಜಾತಿಗಳು” (ಷಡ್ಯೂಲ್ಡ್ ಕಾಸ್ಟ್) ಎಂಬ ಆಡಳಿತಾತ್ಮಕ ವರ್ಗೀಕರಣವನ್ನು ಆಧರಿಸಿತ್ತು.
ಇದು ಹಿಂದೂ ಧರ್ಮವನ್ನು ಆಧರಿಸಿದ್ದಲ್ಲ. ಅಗತ್ಯವೆನಿಸಿದರೆ, ಹಿಂದೂ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದ ನಂತರವೂ ಮೀಸಲಾತಿಯನ್ನು ಮುಂದುವರಿಸುವುದು ಸಂಪೂರ್ಣವಾಗಿ ಸಾಧ್ಯವಿತ್ತು. ಆದರೆ, ಆಳುವ ವರ್ಗಗಳಿಗೆ ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶವಿರಲಿಲ್ಲ. ಬ್ರಿಟಿಷರು ಅನುಸರಿಸಿದ್ದ ‘ಒಡೆದು ಆಳುವ’ ವ್ಯೂಹತಂತ್ರದಲ್ಲಿ ಜಾತಿ ಮತ್ತು ಧರ್ಮಗಳು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದವು ಎಂಬುದನ್ನು ಅವರು ಕಂಡಿದ್ದರು; ಸ್ವಾತಂತ್ರ್ಯದ ನಂತರ, ನಮ್ಮದೇ ದೇಶದ ಆಳುವ ವರ್ಗಗಳು ಕೂಡ ಅವುಗಳನ್ನು ಕೈಬಿಡಲು ಇಚ್ಛಿಸಲಿಲ್ಲ. ಆ ಪಿತೂರಿಯ ಮೂಲಕ ಜಾತಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲಾಯಿತು. ನಿಜವಾದ ಜಾತ್ಯತೀತತೆಯನ್ನು ಬದಿಗೊತ್ತುವ ಮೂಲಕ ಧರ್ಮವನ್ನು ಸಂರಕ್ಷಿಸಲಾಯಿತು. ಸಂವಿಧಾನವು ನಮಗೆ ಜಾತ್ಯತೀತತೆಯನ್ನು ನೀಡಿದೆ ಎಂಬ ಭಾವನೆ ಇದ್ದರೂ, ಸಂವಿಧಾನದ ಪೀಠಿಕೆಯನ್ನು ಹೊರತುಪಡಿಸಿ ಬೇರೆಲ್ಲೂ ‘ಜಾತ್ಯತೀತ’ (secular) ಎಂಬ ಪದ ಕಂಡುಬರುವುದಿಲ್ಲ; ಆ ಪೀಠಿಕೆಯಲ್ಲೂ ಕೂಡ, 1976ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಡೆದ 42ನೇ ಸಂವಿಧಾನ ತಿದ್ದುಪಡಿಯ ಮೂಲಕವೇ ಆ ಪದವನ್ನು ಸೇರಿಸಲಾಗಿತ್ತು. ಮೀಸಲಾತಿಯನ್ನು ಪ್ರಾಮಾಣಿಕವಾಗಿ ಜಾರಿಗೆ ತಂದಿದ್ದರೆ, ಅದು ಜಾತಿ ಪದ್ಧತಿಯ ನಿರ್ಮೂಲನೆಗೆ ಕೊಡುಗೆ ನೀಡುತ್ತಿತ್ತು. ಆದರೆ, ಸಮಾಜದಲ್ಲಿ ದಲಿತರು ಎದುರಿಸುವ ತಾರತಮ್ಯಕ್ಕೆ ಕೇವಲ ಒಂದು ಪ್ರತಿಕ್ರಿಯೆಯಾಗಿ ಮಾತ್ರ ಮೀಸಲಾತಿಯನ್ನು ನೋಡಲಾಗುತ್ತಿದೆ. ಪ್ರಸ್ತುತ ಇರುವ ವಿಧಾನವು ದಲಿತರನ್ನು ಸಹಜವಾಗಿಯೇ ದುರ್ಬಲರು ಮತ್ತು ಅಸಮರ್ಥರು ಎಂದು ಬಿಂಬಿಸುತ್ತದೆ. ಇದಕ್ಕೂ ಮಿಗಿಲಾಗಿ, ಆಳುವವರ್ಗ ಮೀಸಲಾತಿಯ ವ್ಯಾಪ್ತಿಯನ್ನು ವಿಸ್ತರಿಸಿ ಅದರಲ್ಲಿ ‘ಹಿಂದುಳಿದ ಜಾತಿಗಳನ್ನೂ’ ಸೇರಿಸಿದ್ದಾರೆ. ಆ ಉದ್ದೇಶಕ್ಕಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಮಾನದಂಡವನ್ನು ಬಳಸಲಾಯಿತು. ಪರಿಣಾಮವಾಗಿ, ಇಂದು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಮೀಸಲಾತಿಯನ್ನು ಕೋರದ ಸಮುದಾಯವೇ ಇಲ್ಲವೆನ್ನಬಹುದು.
ಮಿಕ್ಕಿದ್ದು 2ನೇ ಸಂಚಿಕೆಗೆ ಮುಂದುವರೆಯುತ್ತದೆ.
ಆಂಗ್ಲಮೂಲ : ಆನಂದ್ ತೆಲ್ತುಂಬ್ಡೆ
ತೆಲುಗು ಅನುವಾದ :ಡಾಕ್ಟರ್ ಸಿಎನ್ ಕ್ಷೇತ್ರ ಪಾಲ್ ರೆಡ್ಡಿ
ಕನ್ನಡ ಅನುವಾದ : ರೇಣುಕಾ ಭಾರತಿ
(ಕಮ್ಯೂನಿಸಂ ಆಗಸ್ಟ್ 2026ರ ಸಂಚಿಕೆಯಿಂದಾ)
ಸಾಹಿತ್ಯ ಪ್ರಿಯರು ಕೊಪ್ಪ ಬಸ್ ಸ್ಟಾಂಡ್ ನಲ್ಲಿರುವ ನುಡಿ ಕನ್ನಡ ಪುಸ್ತಕ ಮನೆಗೂ ಒಮ್ಮೆ ಭೇಟಿ ನೀಡಿ…



Add comment