- ಉದ್ದೇಶಪೂರ್ವಕವಾಗಿಯೇ ಇಸ್ರೇಲ್ ಕ್ರೌರ್ಯ ಮೆರೆದಿದೆ : ಅಮ್ನೆಸ್ಟಿ
ಗಾಜಾ : ಇಸ್ರೇಲ್ ದಾಳಿಯಿಂದ ಸಾವಿರಾರು ಜನರು ಸಾಯುತ್ತಿದ್ದಾರೆ. ನೂರಾರು ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಗಾಜಾದಲ್ಲಿ ಕಳೆದ 24 ಗಂಟೆಗಳಲ್ಲಿ ಐದು ಜನರು ತೀವ್ರ ಹಸಿವಿನಿಂದ ಸಾವನ್ನಪ್ಪಿದ್ದಾರೆ. ಹಸಿವಿನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 263 ಕ್ಕೆ ತಲುಪಿದೆ ಎಂದು ಪ್ಯಾಲೆಸ್ಟೈನ್ ಆರೋಗ್ಯ ಸಚಿವಾಲಯ ಹೇಳಿದೆ. ಇವರಲ್ಲಿ 113 ಜನ ಮಕ್ಕಳೇ ಇದ್ದಾರೆ.
ಆಹಾರ, ಕುಡಿಯುವ ನೀರು ಮತ್ತು ಇತರೆ ಮಾನವೀಯ ನೆರವು ಗಾಜಾಗೆ ತಲುಪದಂತೆ ತಡೆಯೊಡ್ಡಿ ಮೇ ತಿಂಗಳಿನಿಂದಲೇ ಇಸ್ರೇಲ್ ನಿರ್ಬಂಧಗಳನ್ನು ವಿಧಿಸಿದೆ. ಪರಿಣಾಮವಾಗಿ, ಗಾಜಾದ ಜನರು ಕುಡಿಯುವ ನೀರಿನ ಕೊರತೆಯಿಂದ ಹಸಿವು ಮತ್ತು ನಿರ್ಜಲೀಕರಣ (ಡಿ ಹೈಡ್ರೆಷನ್) ದಿಂದ ಬಳಲುತ್ತಿದ್ದಾರೆ. ಈ ಪರಿಸ್ಥಿತಿಯಿಂದಾಗಿ ಮಕ್ಕಳು ಚರ್ಮಗಳನ್ನು ಹೊದಿಸಿರುವ ಮೂಳೆಗಳ ಗೂಡುಗಳಂತೆ, ಅಸ್ಥಿಪಂಜರಗಳಂತೆ ಇರುತ್ತಿದ್ದಾರೆ. ಆದ್ದರಿಂದ ಮಕ್ಕಳು ಪಾರಿವಾಳಗಳಂತೆ ಉದುರಿ ಬೀಳುತ್ತಿದ್ದಾರೆ. ಮತ್ತೊಂದೆಡೆ, ಕಳೆದ 24 ಗಂಟೆಗಳಲ್ಲಿ ಇಸ್ರೇಲಿ ದಾಳಿಯಲ್ಲಿ 60 ಜನರು ಸಾವನ್ನಪ್ಪಿದ್ದಾರೆ. 344 ಜನರು ಗಾಯಗೊಂಡಿದ್ದಾರೆ.
ದಾಳಿಯಲ್ಲಿ ಬಲಿಯಾದವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಅವಶೇಷಗಳ ಅಡಿಯಲ್ಲಿ ಮತ್ತು ರಸ್ತೆಗಳಲ್ಲಿ ಬಿದ್ದಿದ್ದಾರೆ. ಮತ್ತು ಆಂಬ್ಯುಲೆನ್ಸ್ಗಳು ಮತ್ತು ನಾಗರಿಕ ರಕ್ಷಣಾ ಪಡೆಗಳು ಸಹ ಅವರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾದಲ್ಲಿ ಸಾವಿನ ಸಂಖ್ಯೆ ಈಗ 62,000ವನ್ನು ಮೀರಿದೆ. ಗಾಯಗೊಂಡವರ ಸಂಖ್ಯೆ 1,56,230 ದಾಟಿದೆ. ಭಾನುವಾರ ಆಹಾರ ಕೇಂದ್ರಗಳಲ್ಲಿ ಊಟಕ್ಕಾಗಿ ಬಂದವರ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 27 ಕ್ಕೆ ತಲುಪಿದೆ ಎಂದು ಆಸ್ಪತ್ರೆ ದಾಖಲೆಗಳು ತಿಳಿಸಿವೆ.
ಇಸ್ರೇಲ್ನ ಕ್ರಮಗಳು ದುರುದ್ದೇಶಪೂರ್ವಕವಾಗಿದೆ: ಅಮ್ನೆಸ್ಟಿ
ಇಸ್ರೇಲ್ ದುರುದ್ದೇಶಪೂರ್ವಕವಾಗಿ ಗಾಜಾದ ಜನರನ್ನು ಹಸಿವಿನ ಸಾವಿಗೆ ಗುರಿಯಾಗುವಂತೆ ಮಾಡಿದೆ ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ಆರೋಪಿಸಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಗಾಜಾದಲ್ಲಿ ಬರಗಾಲದ ಪರಿಸ್ಥಿತಿ ತೀವ್ರಗೊಳ್ಳುತ್ತದೆ ಎಂದು ಅಮ್ನೆಸ್ಟಿ ಎಚ್ಚರಿಸಿದೆ. ಪ್ಯಾಲೆಸ್ಟೈನ್ ಜನರ ಆರೋಗ್ಯ, ಯೋಗಕ್ಷೇಮ ಮತ್ತು ಸಾಮಾಜಿಕ ಬುನಾದಿಯನ್ನು ಇಸ್ರೇಲ್ ವ್ಯವಸ್ಥಿತವಾಗಿ ನಾಶಪಡಿಸುತ್ತಿದೆ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಟೀಕಿಸಿದೆ. ಈ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಲಾಗಿದೆ.
ಸುದೀರ್ಘಕಾಲದಿಂದ ನಡೆಯುತ್ತಿರುವ ಯುದ್ಧ ಮತ್ತು ದಾಳಿಯ ಭಯದಿಂದ ಬೇಸತ್ತಿದ್ದೇವೆ, ಎಲ್ಲಿಗೂ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಗಾಜಾ ನಿವಾಸಿಗಳು ಹೇಳುತ್ತಾರೆ. ಈ ಸಮಯದಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಗಾಜಾ ನಿವಾಸಿ ಮೊಹಮ್ಮದ್ ಅಬು ಅಲ್ಟಾ ಮತ್ತು ಇತರರು ವಿಶ್ವಸಂಸ್ಥೆಯನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.


Leave a reply