SIR : ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ, ಸಂವಿಧಾನವು ನಾಗರಿಕರಿಗೆ ನೀಡಿರುವ ಮತದಾನದ ಹಕ್ಕು ಅಪಾಯದಲ್ಲಿದೆ. ಮತದಾನದ ಅರ್ಹತೆಯನ್ನು ಸಾಬೀತುಪಡಿಸಲು ನಿರ್ದಿಷ್ಟ ದಾಖಲೆಗಳನ್ನು ಒದಗಿಸಬೇಕಾದ ಅನಿವಾರ್ಯತೆಯನ್ನು ದೇಶದ ನೂರು ಕೋಟಿಗೂ ಹೆಚ್ಚು ನಾಗರಿಕರು ಈಗ ಎದುರಿಸುತ್ತಿದ್ದಾರೆ.
ನ್ಯೂಡೆಲ್ಲಿ : ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ, ನಾಗರಿಕರಿಗೆ ಸಂವಿಧಾನವು ಖಾತ್ರಿಪಡಿಸಿರುವ ಮತದಾನದ ಹಕ್ಕು ಈಗ ಅಪಾಯದಲ್ಲಿದೆ. ಮತದಾನದ ಅರ್ಹತೆಯನ್ನು ಸಾಬೀತುಪಡಿಸಲು ನಿರ್ದಿಷ್ಟ ದಾಖಲೆಗಳನ್ನು ಒದಗಿಸಬೇಕಾದ ಅನಿವಾರ್ಯತೆಯನ್ನು ದೇಶಾದ್ಯಂತದ ನಾಗರಿಕರು ಎದುರಿಸುತ್ತಿದ್ದಾರೆ. ನಕಲಿ ಹೆಸರುಗಳು, ಮೃತ ವ್ಯಕ್ತಿಗಳ ಮತಗಳು ಮತ್ತು ವಿದೇಶಿ ಪ್ರಜೆಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಕೈಗೊಂಡ ಈ ‘ಪಟ್ಟಿ ಶುದ್ಧೀಕರಣ’ ಅಭಿಯಾನವು, ಅಂತಿಮವಾಗಿ ನಾಗರಿಕರ ಮತದಾನದ ಹಕ್ಕನ್ನೇ ಅಪಾಯಕ್ಕೆ ಸಿಲುಕಿಸಿದೆ.
‘ದಿ ನ್ಯೂಯಾರ್ಕ್ ಟೈಮ್ಸ್‘ ಪ್ರಕಟಿಸಿದ ವರದಿಯ ಪ್ರಕಾರ, ಇಲ್ಲಿಯವರೆಗೆ 13 ಕೋಟಿಗೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅಥವಾ, ‘ಸಂಪೂರ್ಣವಾಗಿ ಕಿತ್ತೊಗೆಯಲಾಗಿದೆ’ ಎಂದು ವರದಿ ಮಾಡಿದೆ. ಭಾರತದ ಏಳು ದಶಕಗಳಷ್ಟು (70 ವರ್ಷ) ಹಳೆಯದಾದ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಿದೆ’. ಹಿಂದೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುವಾಗ ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಲಾಗುತ್ತಿತ್ತು, ಆದರೆ ಈಗಿನ ವ್ಯವಸ್ಥೆಯು ಮತಗಳನ್ನು ಸಾಬೀತುಪಡಿಸುವ ಸಂಪೂರ್ಣ ಹೊಣೆಯನ್ನು ನಾಗರಿಕರ ಮೇಲೆಯೇ ಹೊರಿಸಿದೆ.
ನಿಮ್ಮ ಅರ್ಹತಾ ದಾಖಲೆಗಳನ್ನು ಸಮರ್ಪಕವಾಗಿ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ನಿಮ್ಮ ಮತವನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ ಎಂದು ಹೇಳಲಾಗುತ್ತಿದೆ. ಪರಿಣಾಮವಾಗಿ, ಒಬ್ಬ ನಾಗರಿಕನ ಮತದಾನದ ಹಕ್ಕು ಅಲ್ಗಾರಿದಮ್ಗಳ (ಗಣಕೀಯ ಕ್ರಮವಿಧಿಗಳ) ವಿವೇಚನೆಯ ಮೇಲೆ ಅವಲಂಬಿತವಾಗಿರುತ್ತದೆ. ಅಷ್ಟೇ ಅಲ್ಲದೆ, ಹಳೆಯ ದಾಖಲೆಗಳಲ್ಲಿ ಏನಾದರೂ ಲಿಪಿಕ ದೋಷಗಳು (ಕ್ಲರಿಕಲ್ ಎರರ್ಸ್) ಅಥವಾ ಹಳೆಯ ದಾಖಲೆಗಳಲ್ಲಿ ತಪ್ಪುಗಳಿದ್ದರೆ ಬಲಿಯಾಗುವುದು ಮತದಾರರೇ. ಅಂತಿಮವಾಗಿ ಅದರ ಪರಿಣಾಮಗಳನ್ನು ಮತದಾರರೇ ಎದುರಿಸಬೇಕಾಗುತ್ತದೆ.
ಪ್ರಸ್ತುತ ಪ್ರಕ್ರಿಯೆಯ ಮುಖ್ಯ ಉದ್ದೇಶ ಮತ್ತು ಪ್ರಯತ್ನವು ಅತ್ಯಲ್ಪ ಕಾರಣವನ್ನಾದರೂ ಮುಂದಿಟ್ಟುಕೊಂಡು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದೇ ಆಗಿರುವಂತೆ ತೋರುತ್ತದೆ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಅವರು ಅಭಿಪ್ರಾಯ ಪಟ್ಟರು. ಮೋದಿಯವರ ಹಿಂದೂ ರಾಷ್ಟ್ರೀಯತಾವಾದಿ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಶಂಕಿಸಲಾದ ವ್ಯಕ್ತಿಗಳ ಮತದಾನದ ಹಕ್ಕನ್ನು ಈ ಪ್ರಕ್ರಿಯೆಯು ನಿರ್ದಯವಾಗಿ ಕಸಿದುಕೊಳ್ಳುತ್ತಿದೆ ಎಂಬ ಆರೋಪಗಳು ಹೆಚ್ಚುತ್ತಿವೆ.


Add comment