ಭಾಗ -2
ಇದು ಸ್ವಾತಂತ್ರ್ಯದ ನಂತರ ರಚನೆಯಾದ ರಾಜ್ಯ, ಪ್ರಜಾಪ್ರಭುತ್ವ, ಚುನಾವಣಾ ವ್ಯವಸ್ಥೆ ಮತ್ತು ಜಾತಿ ವ್ಯವಸ್ಥೆಗಳ ನಡುವಿನ ಪರಸ್ಪರ ಸಂಬಂಧಗಳ ಕುರಿತು ಆಳವಾದ ವಿಮರ್ಶಾತ್ಮಕ ವಿಶ್ಲೇಷಣೆಯನ್ನು ಒದಗಿಸುತ್ತದೆ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತ ರಾಜಕೀಯ ಸ್ವಾತಂತ್ರ್ಯವನ್ನು ಪಡೆದಿದ್ದರೂ, ಸ್ವತಂತ್ರ ಭಾರತದ ಆಳುವವರ ವರ್ಗಗಳು ವಸಾಹತುಶಾಹಿ ಸರ್ಕಾರ ಜನರನ್ನು ದಮನಿಸಲು ರೂಪಿಸಿದ್ದ ಸರ್ಕಾರಿ ಯಂತ್ರಾಂಗವನ್ನೇ ಯಾವುದೇ ಬದಲಾವಣೆಗಳಿಲ್ಲದೆ ಅಳವಡಿಸಿಕೊಂಡವು. ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು, ನ್ಯಾಯಾಲಯದಲ್ಲಿ ಜಾರಿಗೊಳಿಸಬಹುದಾದ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನೀತಿ ನಿರ್ದೇಶಕ ತತ್ವಗಳಂತಹ ಪ್ರಜಾಸತ್ತಾತ್ಮಕ ಲಕ್ಷಣಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದ್ದರೂ, ಒಟ್ಟಾರೆ ಆಡಳಿತಾತ್ಮಕ ರಚನೆಯಲ್ಲಿ ಹಾಸುಹೊಕ್ಕಾಗಿದ್ದ ವಸಾಹತುಶಾಹಿ ಮನಸ್ಥಿತಿಯನ್ನು ಬದಲಾಯಿಸುವಲ್ಲಿ ಅವು ವಿಫಲವಾದವು. ಭಾರತೀಯ ಸಂವಿಧಾನವು ಬಹುತೇಕವಾಗಿ 1935ರ ‘ಭಾರತ ಸರ್ಕಾರದ ಕಾಯ್ದೆ’ಯ ಮಾದರಿಯಲ್ಲೇ ರೂಪುಗೊಂಡಿತ್ತು. ಆ ಮೂಲಕ ಅದು ವಸಾಹತುಶಾಹಿ ಆಡಳಿತದ ರಚನೆಗೆ ಕಾನೂನು ಬದ್ಧತೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ, ಸ್ವತಂತ್ರ ಭಾರತ ದೇಶ ಎಂಬುದು ‘ಬ್ರಾಹ್ಮಣೀಯ ವಸಾಹತುಶಾಹಿ’ ಸ್ವರೂಪದ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿದೆ. ಇದು ಜನರನ್ನು ದಮನಿಸಲು ಅತ್ಯಂತ ಪ್ರಬಲವಾದ ಸಾಧನವಾಯಿತು. ಇದಕ್ಕೆ ಚುನಾವಣಾ ವ್ಯವಸ್ಥೆಯೇ ಕಾರಣ. ಭಾರತದಲ್ಲಿನ ಪ್ರಸ್ತುತ ಚುನಾವಣಾ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲತತ್ವವನ್ನೇ ನಾಶ ಮಾಡುತ್ತಿದೆ. ಈ ವ್ಯವಸ್ಥೆಯಲ್ಲಿ, ಚಲಾವಣೆಯಾದ ಒಟ್ಟು ಮತಗಳಲ್ಲಿ ಸ್ಪಷ್ಟ ಬಹುಮತವನ್ನು ಪಡೆಯುವ ಅಗತ್ಯವಿಲ್ಲದಿದ್ದರೂ, ಅತಿ ಹೆಚ್ಚು ಮತಗಳನ್ನು ಗಳಿಸಿದ ಅಭ್ಯರ್ಥಿಯೇ ವಿಜಯಶಾಲಿಯಾಗುತ್ತಾರೆ. ಪರಿಣಾಮವಾಗಿ, ದೇಶವನ್ನು ಆಳಿದ ಯಾವುದೇ ಪಕ್ಷವೂ ಎಂದಿಗೂ ಜನಸಂಖ್ಯೆಯ ಶೇಕಡಾ 50 ರಷ್ಟು ಜನರ ಬೆಂಬಲವನ್ನು ಸಹ ಪಡೆಯುವುದಿಲ್ಲ, ಆದರೂ, ಅವರು ಅಧಿಕಾರವನ್ನು ವಹಿಸಿಕೊಂಡು ಜನರ ಜನಾದೇಶದ ಹೆಸರಿನಲ್ಲಿ ಆಡಳಿತ ನಡೆಸುತ್ತಾರೆ. ಇದರರ್ಥ, ಅಧಿಕಾರದಲ್ಲಿರುವವರಿಗೆ ದೇಶದ ಬಹುಸಂಖ್ಯಾತ ನಾಗರಿಕರ ಒಪ್ಪಿಗೆ ಇರುವುದಿಲ್ಲ. ಚುನಾವಣೆಗಳ ನಂತರ, ಆಡಳಿತ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ನೇರ ಭಾಗವಹಿಸುವಿಕೆ ಇರುವುದಿಲ್ಲ. ಪ್ರಜಾಪ್ರಭುತ್ವವು ಕೇವಲ ಮತದಾನದ ಪ್ರಕ್ರಿಯೆಗೆ ಮಾತ್ರ ಸೀಮಿತಗೊಂಡಿದೆ. ಜನರ ಆಕಾಂಕ್ಷೆಗಳಿಗಿಂತ ರಾಜಕೀಯ ಪಕ್ಷಗಳ ತಂತ್ರಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಪರ್ಯಾಯ ವ್ಯವಸ್ಥೆಯಾಗಿ ‘ಅನುಪಾತೀಯ ಪ್ರಾತಿನಿಧ್ಯ’ (Proportional Representation) ಚುನಾವಣಾ ವ್ಯವಸ್ಥೆಯ ಅಗತ್ಯವಿದೆ.
ಭಾರತದಂತಹ ವೈವಿಧ್ಯಮಯ ಸಮಾಜಕ್ಕೆ ಈ ವ್ಯವಸ್ಥೆಯು ಅತ್ಯಂತ ಸೂಕ್ತವೆಂದು ಅನೇಕರು ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನ ರಚನೆಯ ಸಂದರ್ಭದಲ್ಲಿ ಅನೇಕ ಪ್ರಮುಖ ವ್ಯಕ್ತಿಗಳು ಈ ವ್ಯವಸ್ಥೆಯನ್ನು ಬೆಂಬಲಿಸಿದ್ದರು. ಖ್ಯಾತ ಅರ್ಥಶಾಸ್ತ್ರಜ್ಞ ಡಿ.ಆರ್. ಗಾಡ್ಗಿಲ್ ಅವರು ಇಂತಹ ಚುನಾವಣಾ ವ್ಯವಸ್ಥೆಯನ್ನು ಪ್ರತಿಪಾದಿಸಿದ್ದರು. ಆದರೆ, ಬಲವಾದ ಹಾಗೂ ಕೇಂದ್ರೀಕೃತ ಸರ್ಕಾರವನ್ನು ಬಯಸಿದ್ದ ಕಾಂಗ್ರೆಸ್ ನಾಯಕತ್ವವು ಅಸ್ತಿತ್ವದಲ್ಲಿದ್ದ ಚುನಾವಣಾ ವ್ಯವಸ್ಥೆಯನ್ನೇ ಮುಂದುವರಿಸಲು ನಿರ್ಧರಿಸಿತು. ಒಂದು ವೇಳೆ ನಮ್ಮ ದೇಶದಲ್ಲಿ ‘ಸಮಾನ ಪ್ರಾತಿನಿಧ್ಯ’ (proportional representation) ವ್ಯವಸ್ಥೆಯನ್ನು ಜಾರಿಗೆ ತಂದಿದ್ದಿದ್ದರೆ, ಜಾತಿ ಆಧಾರಿತ ರಾಜಕಾರಣವು ಗಣನೀಯವಾಗಿ ಕಡಿಮೆಯಾಗುತ್ತಿತ್ತು ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗಗಳು, ಸಮಾಜದ ಅಂಚಿನಲ್ಲಿರುವ ವರ್ಗಗಳು ಸೂಕ್ತ ಪ್ರಾತಿನಿಧ್ಯವನ್ನು ಪಡೆಯುತ್ತಿದ್ದವು.
ಇನ್ನು ಜಾತಿ ವ್ಯವಸ್ಥೆ ಮತ್ತು ಪ್ರಜಾಸತ್ತಾತ್ಮಕ ರಾಜಕಾರಣದ ನಡುವಿನ ಸಂಬಂಧವನ್ನು ವಿಶ್ಲೇಷಿಸೋಣ. ಸ್ವಾತಂತ್ರ್ಯೋತ್ತರ ಆರಂಭಿಕ ಚುನಾವಣೆಗಳಲ್ಲಿ, ಸ್ವಾತಂತ್ರ್ಯ ಹೋರಾಟದ ಪರಂಪರೆಯ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷವು ರಾಜಕೀಯ ಪ್ರಾಬಲ್ಯವನ್ನು ಹೊಂದಿತ್ತು. ಆದರೆ, ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳೊಂದಿಗೆ ರಾಜಕೀಯ ಪೈಪೋಟಿ ತೀವ್ರಗೊಂಡಿತು. ಮತ್ತು ಇದು ಜಾತಿ ಆಧಾರಿತ ಮತಬ್ಯಾಂಕ್ಗಳ ರಚನೆಗೆ ಕಾರಣವಾಯಿತು. ಪರಿಣಾಮವಾಗಿ, ಆಧುನಿಕ ರಾಜಕೀಯ ವ್ಯವಸ್ಥೆಯಲ್ಲಿ ಜಾತಿಯು ಇನ್ನಷ್ಟು ಆಳವಾಗಿ ಬೇರೂರಿತು. ರಾಜಕೀಯ ಅಧಿಕಾರವು ಜಾತಿಯ ಆಧಾರದ ಮೇಲೆ ಹಂಚಿಕೆಯಾದಾಗ್ಯೂ, ಜಾತಿ ವ್ಯವಸ್ಥೆಯ ಮೂಲ ರಚನೆಯು ಹಾಗೆಯೇ ಉಳಿದುಕೊಂಡಿತು. ಅಲ್ಲದೆ, ರಾಜಕೀಯ ಅಧಿಕಾರವನ್ನು ಪಡೆಯಲು ಜಾತಿ ಗುರುತು ಪ್ರಮುಖ ಸಾಧನವಾಗಿ ಪರಿಣಮಿಸಿದೆ. ಮತ್ತು ಜಾತಿ ವ್ಯವಸ್ಥೆಯು ಮತ್ತಷ್ಟು ಬಲಗೊಂಡಿದೆ. ಈ ಹಂತದಲ್ಲಿ, ಜಾತಿ ವ್ಯವಸ್ಥೆಯನ್ನು ನಿಜವಾಗಿಯೂ ಹೇಗೆ ನಿರ್ಮೂಲನೆ ಮಾಡುವುದು ಎಂಬ ಪ್ರಶ್ನೆಯತ್ತ ನಾವು ಗಮನಹರಿಸಬೇಕಿದೆ. ಜಾತಿ ವಿನಾಶದ ಮಾರ್ಗಗಳು ಮತ್ತು ಭಾರತದಲ್ಲಿ ಸಾಮಾಜಿಕ ಕ್ರಾಂತಿಯನ್ನು ಹೇಗೆ ಸಾಧಿಸಬಹುದು ಎಂಬುದರ ಕುರಿತು ನಾವು ಚರ್ಚಿಸಬೇಕಾಗಿದೆ. ಈ ವಿಷಯದ ಕುರಿತು ನಾನು ಯಾವುದೇ ಭವ್ಯವಾದ ಘೋಷಣೆಗಳನ್ನು ಮಾಡುತ್ತಿಲ್ಲ. ಬದಲಾಗಿ, ಕೆಲವು ಪ್ರಮುಖ ದೃಷ್ಟಿಕೋನಗಳು ಮತ್ತು ಚಿಂತನಾ ಕ್ರಮಗಳನ್ನು ಸೂಚಿಸಲು ಬಯಸುತ್ತೇನೆ. ಸಮಕಾಲೀನ ಸಮಾಜದಲ್ಲಿ ನೆಲೆಗೊಂಡಿರುವ ಗೊಂದಲ ಮತ್ತು ಸೈದ್ಧಾಂತಿಕ ಅಸ್ತವ್ಯಸ್ತತೆಯ ನಡುವೆಯೂ, ಈ ಒಳನೋಟಗಳು ಮೌಲ್ಯಯುತವಾಗಿವೆ. ತನ್ನ ದೃಷ್ಟಿಯಲ್ಲಿ, ಕ್ರಾಂತಿ ಎಂದರೆ ಕೇವಲ ರಾಜ್ಯದ ಅಧಿಕಾರವನ್ನು ವಶಪಡಿಸಿಕೊಳ್ಳುವುದು ಮಾತ್ರವಲ್ಲ. ಅದು ನಡೆಯುವ ಅವಕಾಶವಿದ್ದರೂ, ನಿಜವಾದ ಕ್ರಾಂತಿಯು ಸಾಮಾಜಿಕ ರಚನೆಗಳು, ಸಾಮಾಜಿಕ ಸಂಬಂಧಗಳು ಮತ್ತು ಮಾನವ ಪ್ರಜ್ಞೆ ಎಂಬ ಮೂರು ಆಯಾಮಗಳಲ್ಲಿ ಏಕಕಾಲಕ್ಕೆ ಸಂಭವಿಸುವ ಸಮಗ್ರ ಪರಿವರ್ತನೆಯನ್ನು ಸೂಚಿಸುತ್ತದೆ. ಇವು ಪರಸ್ಪರ ಪ್ರತ್ಯೇಕವಾದ ಅಂಶಗಳಲ್ಲ. ಬದಲಾಗಿ, ಇವು ವರ್ಗ ಸಂಘರ್ಷದ ಪ್ರಕ್ರಿಯೆಯ ಭಾಗವಾಗಿದೆ.
ಆದರೆ, ಒಂದು ಪ್ರಶ್ನೆ ಉದ್ಭವಿಸುತ್ತದೆ: “ವರ್ಗ ಸಂಘರ್ಷ” ಎಂದರೇನು? ಈ ಸಮಸ್ಯೆಯ ಪರಿಹಾರವು ಆ ಪ್ರಶ್ನೆಯಲ್ಲೇ ಅಡಗಿದೆ. ಸಾಮಾನ್ಯವಾಗಿ, “ವರ್ಗ”ದ ಪರಿಕಲ್ಪನೆಯನ್ನು ಕೇವಲ ಆರ್ಥಿಕ ವ್ಯವಸ್ಥೆಗೆ ಮಾತ್ರವೇ ಸೀಮಿತಗೊಳಿಸಿ ನೋಡಲಾಗುತ್ತಿದೆ ಕಮ್ಯೂನಿಸ್ಟ್ ಪಕ್ಷಗಳು ಈ ದೃಷ್ಟಿಕೋನವನ್ನು ಬಲಪಡಿಸಿವೆ. ಆದರೆ, ಸಮಾಜದಲ್ಲಿನ ವಾಸ್ತವಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿಯೇ ವರ್ಗಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ಅವರ *ಕಮ್ಯುನಿಸ್ಟ್ ಪ್ರಣಾಳಿಕೆ*ಯಲ್ಲಿನ ಪ್ರಸಿದ್ಧ ಹೇಳಿಕೆ ” ಇದುವರೆಗಿನ ಎಲ್ಲಾ ಸಮಾಜಗಳ ಇತಿಹಾಸಗಳೂ ವರ್ಗ ಸಂಘರ್ಷಗಳ ಚರಿತ್ರೆಯೇ ಆಗಿದೆ” ಎಂಬುದನ್ನು ಹೊಸ ದೃಷ್ಟಿಕೋನದಿಂದ ವ್ಯಾಖ್ಯಾನಿಸುವ ಅಗತ್ಯವಿದೆ. ತನ್ನ ದೃಷ್ಟಿಯಲ್ಲಿ, ‘ವರ್ಗ’ ಎಂಬ ಪರಿಕಲ್ಪನೆಯು ಜಾತಿ, ಲಿಂಗ ಮತ್ತು ಜನಾಂಗದಂತಹ ಎಲ್ಲಾ ವೈರುಧ್ಯಗಳನ್ನು ಒಳಗೊಂಡಿರಬೇಕು. ಈ ಪ್ರತಿಯೊಂದು ವೈರುಧ್ಯಕ್ಕೆ ಸಂಬಂಧಿಸಿದ ಶೋಷಣೆಯನ್ನು ಮಿಲಿಟೆಂಟ್ ಹೋರಾಟದ ಮೂಲಕ ಇತ್ಯರ್ಥ ಮಾಡಿಕೊಳ್ಳಬೇಕು. ಮತ್ತು ಅದನ್ನು ವರ್ಗ ಹೋರಾಟದ ಅವಿಭಾಜ್ಯ ಅಂಗವೆಂದು ಪರಿಗಣಿಸಬೇಕು. ಈ ಅಂಶವನ್ನು ಗ್ರಹಿಸಲು ವಿಫಲವಾದದ್ದೇ ಜಗತ್ತಿನಾದ್ಯಂತ ಕ್ರಾಂತಿಕಾರಿ ಚಳುವಳಿಗಳ ವೈಫಲ್ಯಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತದ ಜಾತಿ ವ್ಯವಸ್ಥೆಯತ್ತ ಗಮನಹರಿಸುವುದು ಅತ್ಯಗತ್ಯ. ಏಕೆಂದರೆ ಸಮಕಾಲೀನ ಭಾರತವು ಹಿಂದೆಂದಿಗಿಂತಲೂ ಹೆಚ್ಚು ಆಳವಾಗಿ ಜಾತಿ ವ್ಯವಸ್ಥೆಯಲ್ಲಿ ಬೇರೂರಿರುವ ಸಮಾಜವಾಗಿ ಮಾರ್ಪಟ್ಟಿದೆ. ಮೀಸಲಾತಿ ಮತ್ತು ಚುನಾವಣಾ ರಾಜಕೀಯವು ಈ ಪರಿಸ್ಥಿತಿಗೆ ಕಾರಣವಾಗಿವೆ. ಪ್ರತಿಯೊಂದು ಜಾತಿ ಮತ್ತು ಉಪಜಾತಿಯೂ ತನ್ನದೇ ಆದ ವಿಶಿಷ್ಟ ಅಸ್ತಿತ್ವದ ಬಗ್ಗೆ ಹೆಮ್ಮೆಪಡುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ, ಅತ್ಯಂತ ತಳಮಟ್ಟದ ಅಥವಾ ದಮನಿತ ಜಾತಿಗಳು ಕೂಡ ಈ ‘ಅಸ್ತಿತ್ವದ ರಾಜಕೀಯ’ದಲ್ಲಿ ಮುಂಚೂಣಿಯಲ್ಲಿವೆ. ಇಂತಹ ರಾಜಕೀಯವು ಜನರನ್ನು ಸಂಘಟಿಸುವ ಮತ್ತು ಸಾರ್ವಜನಿಕ ಜಾಗೃತಿಯನ್ನು ಮೂಡಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ನಾವು ಯಾವ ಜಾತಿ-ಬೇಲಿಗಳನ್ನು ಒಡೆದುಹಾಕಲು ಬಯಸುತ್ತೇವೆಯೋ, ಅವುಗಳೊಳಗೇ ನಮ್ಮನ್ನು ಬಂಧಿಸಿಡುವ ಅಪಾಯವೂ ಇದಕ್ಕಿದೆ. ಆದ್ದರಿಂದ, ನಾವು ಇಂತಹ ರಾಜಕೀಯವನ್ನು ವಿಮರ್ಶಾತ್ಮಕ ತಿಳುವಳಿಕೆ ಮತ್ತು ಜಾಗೃತಿಯಿಂದ ನೋಡಬೇಕಿದೆ. ನಮ್ಮ ಮುಂದಿರುವ ಕಾರ್ಯ ಎಷ್ಟೇ ಸಂಕೀರ್ಣವಾಗಿದ್ದರೂ ಅದನ್ನು ಕೈಗೊಳ್ಳಲೇಬೇಕು. ಇದು ನೈತಿಕ ರಾಜಕಾರಣದ ಕರೆ. ಆದ್ದರಿಂದ ನಾವು ನಮ್ಮ ಮುಂದಿರುವ ವಾಸ್ತವತೆಯನ್ನು ಧೈರ್ಯದಿಂದ ಎದುರಿಸಿ ಸಮಾಜವನ್ನು ಪರಿವರ್ತಿಸುತ್ತೇವೆಯೇ, ಅಥವಾ ಈ ಅನ್ಯಾಯದ ವ್ಯವಸ್ಥೆಯು ಮುಂದುವರಿಯಲು ಪರೋಕ್ಷವಾಗಿ ಸಹಕರಿಸುತ್ತೇವೆಯೇ? ಎಂಬ ಆಯ್ಕೆಯು ನಮ್ಮ ಕೈಯಲ್ಲಿದೆ.
ಆಂಗ್ಲಮೂಲ : ಆನಂದ್ ತೆಲ್ತುಂಬ್ಡೆ
ತೆಲುಗು ಅನುವಾದ :ಡಾಕ್ಟರ್ ಸಿಎನ್ ಕ್ಷೇತ್ರ ಪಾಲ್ ರೆಡ್ಡಿ
ಕನ್ನಡ ಅನುವಾದ : ರೇಣುಕಾ ಭಾರತಿ
(*ಗಮನಿಸಿ: 2026ರ ಏಪ್ರಿಲ್ 17ರಂದು ಜಾಧವ್ಪುರ ವಿಶ್ವವಿದ್ಯಾಲಯದಲ್ಲಿ ನಡೆದ ಬ್ರಾಹ್ಮಣ್ಯದ ಕುರಿತಾದ ಸಮ್ಮೇಳನದಲ್ಲಿ ನೀಡಲಾದ ಇಂಗ್ಲಿಷ್ ಭಾಷಣದ ಅನುವಾದವಿದು*)



Add comment