ಒಬ್ಬ ತಾಯಿ ತನ್ನ ಮಗುವಿನ ಹಸಿವನ್ನು ತೀರಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ತೀವ್ರ ಮಾನಸಿಕ ಒತ್ತಡದಿಂದ ತಾನು ಹೆತ್ತ ಮಗುವನ್ನೇ ಕೊಲ್ಲುವ ಹೃದಯವಿದ್ರಾವಕ ಸ್ಥಿತಿ ಎದುರಾದರೆ ಅದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಅಂಶ. ಒಬ್ಬ ತಾಯಿ ತನ್ನ ಮಗುವಿನ ಹಸಿವು ತೀರಿಸಲಾಗದೆ ಆ ಮಗುವನ್ನು ಕೊಳ್ಳುತ್ತಾಳೆ ಎಂದರೆ ಆ ತಾಯಿ ಅದೆಷ್ಟು ಮಾನಸಿಕ ಒತ್ತಡವನ್ನು ಅನುಭವಿಸಿರಬೇಕು. ಆ ತಾಯಿಯ ಮಾನಸಿಕ ಘರ್ಷಣೆಯನ್ನು ಆಕೆಯ ವ್ಯಕ್ತಿಗತ ವೈಫಲ್ಯ ಎನ್ನಬಹುದೇ? “ಬಡತನ ಮನುಷ್ಯನನ್ನು ಅಪರಾಧದೆಡೆ ದೂಡುತ್ತದೆ. ಆದರೆ ಆ ಅಪರಾಧಕ್ಕೆ ಹೊಣೆ ಈ ಸಮಾಜವೇ” ಎನ್ನುತ್ತಾರೆ ಖ್ಯಾತ ಲೇಖಕ ಮುನ್ಶಿ ಪ್ರೇಮಚಂದ್. ಖಂಡಿತವಾಗಿಯೂ ಆ ತಾಯಿಯನ್ನು ಈ ಸ್ಥಿತಿಗೆ ದೂಡಿದ ಸಾಮಾಜಿಕ ಆರ್ಥಿಕ ರಾಜಕೀಯ ವ್ಯವಸ್ಥೆಗಳ ವೈಫಲ್ಯವಿದು. ಹಸಿವಿಗೆ ಪಶುಗಳಾಗಲಿ ಮನುಷ್ಯರಾಗಲಿ ಒಂದೇ. ತಾಯಿಯಾದರೂ ಮಗುವಾದರೂ ಒಂದೇ. ಹಸಿವನ್ನ ತೀರಿಸಿಕೊಳ್ಳಲಾರದೆ ಅಪರಾಧ ಮಾಡುವ ದುರದೃಷ್ಟ ಜೀವಿಗಳಲ್ಲಿ ಆ ತಾಯಿಯು ಒಬ್ಬಳು.
ಗುಜರಾತಿನಲ್ಲಿ ಕಡುಬಡತನದಿಂದಾಗಿ ತನ್ನ ಎರಡು ವರ್ಷದ ಮುದ್ದು ಕಂದಮ್ಮಳಿಗೆ ಅನ್ನ ನೀಡಲಾಗದ ಅಸಹಾಯಕ ಪರಿಸ್ಥಿತಿಯಿಂದಾಗಿ ಆ ತಾಯಿ ಮಗುವನ್ನು ಹೊಡೆದು ಕೊಂದಿದ್ದಾಳೆ. ಆ ತಾಯಿಯನ್ನ ಇದೇ ವರ್ಷದ ಮಾರ್ಚ್ ನಲ್ಲಿ ಸೂರತ್ ಪೋಲೀಸರು ಅರೆಸ್ಟ್ ಮಾಡಿದ್ದರು. ಇತ್ತೀಚೆಗೆ ಆಕೆಗೆ ಬೆಯಿಲ್ ಮಂಜೂರು ಮಾಡುತ್ತಾ ಅಹಮದಾಬಾದ್ ಹೈಕೋರ್ಟ್ ನ್ಯಾಯಾಧೀಶರು ಮಾಡಿದ ವ್ಯಾಖ್ಯಾನಗಳು ಈ ವ್ಯವಸ್ಥೆಯ ವೈಫಲ್ಯಗಳನ್ನು, ಸಾಮಾಜಿಕ, ನೈತಿಕ ಪತನವನ್ನು ನಗ್ನವಾಗಿ ಎತ್ತಿ ತೋರಿಸಿತು. ಹಸಿವು ಎಂಬುದು ಆರ್ಥಿಕ ಸಮಸ್ಯೆ ಮಾತ್ರವೇ ಅಲ್ಲ, ಅದು ಮನುಷ್ಯರ ಗೌರವ, ನ್ಯಾಯ, ಮಾನಸಿಕ ಸ್ಥಿತಿಯೊಂದಿಗೆ ಹೆಣೆದುಕೊಂಡಿದೆ. ತೀವ್ರವಾದ ಮಾನಸಿಕ ಒತ್ತಡದಿಂದ ಹೆತ್ತ ಮಗುವನ್ನೇ ತಾನು ಎತ್ತಿ ಮುದ್ದಾಡಿದ ಕೈಗಳಿಂದ ಕೊಂದುಹಾಕುವ ವೈಪರಿತ್ಯಕ್ಕೆ ದೂಡಲ್ಪಡುತ್ತಾಳೆ ಎಂದರೆ.. ಈ ವೈಪಲ್ಯ ಆಕೆ ಒಬ್ಬಳದ್ದೇ ಅಲ್ಲ. ಇಡೀ ಸಮಾಜದ್ದು. ಈ ವಿಷಾದದ ಘಟನೆಯನ್ನು ಯಾರೇಯಾಗಲಿ ತಾಯಿ ಮಗು ಹಸಿವಿನಿಂದ ಸಾಯುವ ದುಸ್ಥಿತಿಗೆ ತಲುಪಬಾರದೆಂಬ ಉದ್ದೇಶದ ಸಂದೇಶ ಎಂದು ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ಸಂರಕ್ಷಣಾ ಯೋಜನೆಗೆ ಇದು ಕನ್ನಡಿ ಹಿಡಿದಂತಿದೆ ಎಂದು ಜಸ್ಟೀಸ್ ಹಸ್ಮುಖ್ ಡಿ. ಸುತಾರ ಅವರು ಅಭಿಪ್ರಾಯ ಪಟ್ಟರು. ನರೇಂದ್ರ ಮೋದಿಯವರು 12 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಗುಜರಾತ್ ಅನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದರೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಆ ರಾಜ್ಯದಲ್ಲಿ ಇಂತಹ ದುರ್ಘಟನೆ ನಡೆದಿರುವುದು ಅತ್ಯಂತ ಶೋಚನೀಯ ದುರಂತದ ಸಂಗತಿ. ಭಾರತದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಗೌರವದಿಂದ ಬದುಕುವ ಹಕ್ಕನ್ನು ಕಲ್ಪಿಸಿಕೊಟ್ಟಿದೆ. ಆದರೆ ಕೋಟ್ಯಾಂತರ ಜನರು ತಲೆಯ ಮೇಲೊಂದು ಸೂರು, ಊಟ, ಬಟ್ಟೆ, ಶಿಕ್ಷಣ, ಆರೋಗ್ಯ ಸೇವೆಗಳಿಗಾಗಿ, ಮೂಲ ಸೌಲತ್ತುಗಳಿಗಾಗಿ ಇಂದಿಗೂ ಹೋರಾಡುತ್ತಲೇ ಇದ್ದಾರೆ. ಒಂದೆಡೆ ಪ್ರಪಂಚದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರು ಇದ್ದಾರೆ. ಮತ್ತೊಂದೆಡೆ ಹಸಿವಿನಿಂದ ಮಕ್ಕಳು ಸಾವನ್ನಪ್ಪುತ್ತಿರುವುದು ಈ ಸಮಾಜದ ನಾಚಿಕೆಗೇಡಿನ ಸಂಗತಿ.
ಜಗತ್ತಿನಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ವ್ಯವಸ್ಥೆಗಳಲ್ಲಿ ಭಾರತವು ಒಂದು ಎಂದು ಆಳುವ ವರ್ಗಗಳು ಹೇಳಿಕೊಳ್ಳುತ್ತಿವೆ. ಜಿಡಿಪಿ ಹೆಚ್ಚುತ್ತಿದೆ. ಆದರೆ ಅದೇ ಸಮಯದಲ್ಲಿ ಅಸಮಾನತೆಗಳು ಕೂಡ ಭಯಾನಕವಾಗಿ ಹೆಚ್ಚಾಗುತ್ತಿದೆ. ಕೇವಲ ಶೇಕಡಾ 1% ಜನರ ಕೈಯಲ್ಲಿ ಅಪಾರ ಸಂಪತ್ತು ಕ್ರೋಢಿಕರಣಗೊಂಡಿದೆ. ಲಕ್ಷಾಂತರ ಕುಟುಂಬಗಳು ಒಂದು ಹೊತ್ತು ಊಟಕ್ಕಾಗಿ ಹೋರಾಡುತ್ತಿವೆ. ಈ ಭೂಮಿಯ ಮೇಲೆ ಹುಟ್ಟಿದ ಯಾವುದೇ ಮಗು ಹಸಿವಿನಿಂದ ಸಾಯಬಾರದು. ಯಾವ ತಾಯಿಯೂ ಸಹ ಮಗುವಿಗೆ ಅನ್ನ ನೀಡಲು ಆಗದೆ ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳುವ ದುಸ್ಥಿತಿಗೆ ದೂಡಲ್ಪಡಬಾರದು. ಅಭಿವೃದ್ಧಿಗೆ ಮಾದರಿ ಎಂದು ಹೇಳಲ್ಪಡುವ ಗುಜರಾತಿನಲ್ಲಿ ನಡೆದ ದುರಂತ ಕಾರ್ಪೊರೇಟ್ ಶಕ್ತಿಗಳಿಗೆ ಬಕ್ಕೆಟ್ ಹಿಡಿಯುವವರ ಕಣ್ಣು ತೆರೆಸಲಿ. ಈ ಅಪರಾಧ ತಾಯಿಯದ್ದಲ್ಲ. ಹಸಿವನ್ನು ತೀರಿಸಲಾಗದ ಬಡತನವನ್ನು ನಾಶ ಮಾಡಲಾಗದ ಸಮಾಜದ್ದು. ಹಸಿವು ಒಬ್ಬ ತಾಯಿಯನ್ನು ಅಪರಾಧಿಯನ್ನಾಗಿ ಮಾರ್ಪಡಿಸಿದಾಗ, ಕಟಕಟೆಯಲ್ಲಿ ನಿಲ್ಲಬೇಕಾದದು ಒಬ್ಬ ತಾಯಿ ಅಲ್ಲ. ಆರ್ಥಿಕ, ಸಂರಕ್ಷಣಾ ಯೋಜನೆಗಳನ್ನು ಈ ದೇಶದ ಕೊಟ್ಟ ಕೊನೆಯ ಮನುಷ್ಯ ರವರೆಗೂ ತಲುಪಿಸಲಾಗದ, ಬಡತನವನ್ನು ನಿರ್ಮೂಲನೆ ಮಾಡಲಾಗದ ಆಳುವವರು! ಒಬ್ಬ ಕಂದಮ್ಮಳ ಕಣ್ಣೀರು ಚರಿತ್ರೆಯನ್ನು ಸೇರಬಹುದು. ಆದರೆ ಆ ಕಣ್ಣೀರಿನ ಹಿಂದೆ. ಅಡಗಿರುವ ಹಸಿವು ಈ ದೇಶದ ಆತ್ಮಸಾಕ್ಷಿಯನ್ನು ಎಂದೆಂದಿಗೂ ಹಿಂಬಾಲಿಸುತ್ತಿರುತ್ತದೆ. ಈ ಅಪರಾಧ ತಾಯಿಯದ್ಧಲ್ಲ. ಹಸಿವನ್ನು ಸೃಷ್ಟಿಸಿ, ಸಹಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಿರುವ ವ್ಯವಸ್ಥೆಯದ್ದು!


Leave a reply