ಭಾರತ ದೇಶವನ್ನಾಳಿದ ಮೊಘಲ್ ಚಕ್ರವರ್ತಿ ಔರಂಗಜೇಬನು ತನ್ನ ಗುರುಗಳಿಗೆ ಬರೆದ ಪತ್ರದ ಸಾರಾಂಶ ಹೀಗಿದೆ: “ಅದು ನನಗೆ ತುಂಬಾ ಅತ್ಯಗತ್ಯ ಎಂದು ಭಾವಿಸಿ, ನೀವು ನನಗೆ ಅರೇಬಿಕ್ ಭಾಷೆಯನ್ನು ಕಲಿಸಿದ್ದೀರಿ. ಅದರಿಂದ, ನನಗೂ, ನಿಮಗೂ ಹಲವು ವರ್ಷಗಳೇ ವ್ಯರ್ಥವಾದವು. ಬೆಳೆಯುತ್ತಿರುವ ಎಳೆ ವಯಸ್ಸಿನಲ್ಲಿ, ಒಬ್ಬ ವಿದ್ಯಾರ್ಥಿಯ ಬುದ್ಧಿಶಕ್ತಿಯನ್ನು ಚುರುಕುಗೊಳಿಸಬೇಕಿತ್ತು, ಆದರೆ.. ನೀವು ನನ್ನ ಬುದ್ಧಿಶಕ್ತಿಯನ್ನು ಮಂದಗೊಳಿಸಿದ್ದೀರಿ.”ಜೀವನದಲ್ಲಿ ಎಲ್ಲಿಯೂ, ಯಾವುದಕ್ಕೂ ಉಪಯೋಗವಾಗದ ಭಾಷೆಯನ್ನು ಕಲಿಸಲು ನೀವು ನನ್ನ ಜೀವನದ ಅತ್ಯಮೂಲ್ಯವಾದ ಹತ್ತು ಹನ್ನೆರಡು ವರ್ಷಗಳನ್ನು ವ್ಯರ್ಥ ಮಾಡಿದಿರಿ. ಆ ಒಂದು ಭಾಷೆ ಅದರಲ್ಲಿರುವ ಸಾಂಪ್ರದಾಯಿಕ ಸಾಹಿತ್ಯ, ಅಲ್ಲಾಹುನ ಸ್ಮರಣೆ ಮಾತ್ರವೇ ನನ್ನನ್ನು ಲೋಕಜ್ಞಾನಿ ಮತ್ತು ಮೇಧಾವಿಯನ್ನಾಗಿಸುತ್ತದೆ ಎಂದು ನೀವು ಹೇಗೆ ಭಾವಿಸಿದಿರಿ? ಉಪಯೋಗವಾಗುವ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕು. ಅವರ ಅಭಿರುಚಿಗೆ ತಕ್ಕಂತೆ ಜ್ಞಾನವನ್ನು ನೀಡಬೇಕು. ಹೀಗೆ ಮಾಡದೆ, ನೀವು ನನ್ನ ಬಾಲ್ಯವನ್ನು ಸಂಪೂರ್ಣವಾಗಿ ಹಾಳುಮಾಡಿದ್ದೀರಿ, ಅಲ್ಲವೇ?
ನನಗೆ ಭೂಗೋಳ ಶಾಸ್ತ್ರ ಗೊತ್ತಿಲ್ಲ, ಗಣಿತ ಗೊತ್ತಿಲ್ಲ. ಚರಿತ್ರೆ ಗೊತ್ತಿಲ್ಲ. ಇಂಗ್ಲೆಂಡ್, ಹಾಲೆಂಡ್, ಪೋಲೆಂಡ್ ಮತ್ತು ಪೋರ್ಚುಗಲ್ನಂತಹ ದೇಶಗಳು ಅಸ್ತಿತ್ವದಲ್ಲಿವೆ ಎಂದು ನೀವು ಎಂದಿಗೂ ನನಗೆ ಹೇಳಿಲ್ಲ. ದೇಶ ಎಂದರೇನು, ದ್ವೀಪ ಎಂದರೇನು ಅಥವಾ ಪರ್ಯಾಯ ದ್ವೀಪ ಎಂದರೇನು ಎಂದು ನೀವು ಎಂದೂ ನನಗೆ ವಿವರಿಸಿಲ್ಲ. ಸಮುದ್ರ ಮಟ್ಟ ಎಂದರೇನು? ಸಮುದ್ರ ಮಟ್ಟಕ್ಕಿಂತ ಯಾವ ದೇಶ ಎಷ್ಟು ಎತ್ತರದಲ್ಲಿದೆ ಎಂದು ತಿಳಿದಿಲ್ಲ. ಈ ಹಿಂದೂಸ್ತಾನ್ ಬಾದುಷಾ ಹೆಸರು ಕೇಳಿದರೆ ಜಗತ್ತಿನ ಎಲ್ಲಾ ದೇಶಗಳ ರಾಜರು ಗಢಗಢನೆ ನಡುಗುತ್ತಾರೆಂದು ನೀವು ಸುಳ್ಳು ಹೇಳಿದಿರಿ ಅಲ್ಲವೇ? ಸುಳ್ಳುಗಳಿಂದ ಯಾರಾದರೂ ಜ್ಞಾನವನ್ನು ಪಡೆಯಲು ಸಾಧ್ಯವೇ? ಪ್ರಪಂಚದ ವಿವಿಧ ರಾಜ್ಯಗಳು ಯಾವುವು? ಅವುಗಳ ಆಡಳಿತಗಾರರು ಯಾರು? ಅವುಗಳ ಆಚಾರ, ವ್ಯವಹಾರ ಮತ್ತು ಆಹಾರ ಪದ್ಧತಿಗಳು ಯಾವುವು? ಶ್ರೀಮಂತ ದೇಶಗಳಾವವು? ಈ ವಿಪತ್ತುಗಳನ್ನು ಎದುರಿಸುತ್ತಿರುವ ದೇಶಗಳಾವುದು ಎಂದು – ಉದಾಹರಣೆಗೂ ಹೇಳಲಿಲ್ಲ. ಇನ್ನೂ , ಈ ವಿಷಯಗಳ ಬಗ್ಗೆ ನಮಗೆ ಹೇಗೆ ತಿಳಿಯುತ್ತೆ? ಜಗತ್ತಿನಲ್ಲಿ ನಮ್ಮ ದೇಶ ಎಲ್ಲಿದೆ- ಅದರ ಸಾಮರ್ಥ್ಯ ಮತ್ತು ದೌರ್ಬಲ್ಯಗಳೇನು? ಅದು ಯಾವ ಸಂಪನ್ಮೂಲಗಳನ್ನು ಹೊಂದಿದೆ? ಮತ್ತು ಅದರ ಶಕ್ತಿ, ಸಾಮರ್ಥ್ಯಗಳೇನು? ಎಂಬಂತಹ ವಿಷಯಗಳನ್ನು ನಿರ್ಣಯಿಸಲು, ಸುತ್ತಮುತ್ತಲಿನ ದೇಶಗಳ ಪರಿಸ್ಥಿತಿಯನ್ನು ನಾವು ಖಂಡಿತವಾಗಿಯೂ ಅರ್ಥಮಾಡಿಕೊಳ್ಳಬೇಕು, ಅಲ್ಲವೇ? ಚಕ್ರವರ್ತಿಯ ಪುತ್ರರಾದ ನಮಗೆ ವಿಷಯಗಳು ತಿಳಿಯಬೇಕಾದ ವಯಸ್ಸಿನಲ್ಲಿ ತಿಳಿಯದಿದ್ದರೆ ಹೇಗೆ? ದೇಶವನ್ನು ಪರಿಣಾಮಕಾರಿಯಾಗಿ ಹೇಗೆ ಆಳಲು ಸಾಧ್ಯ? ಎಂದು ಔರಂಗಜೇಬ್ ವಿಷಾದಿಸಿದನು.
ಈ ಪತ್ರದಲ್ಲಿ ಬಹಳಷ್ಟು ವಾಸ್ತವಂಶವಿದೆ. ಒಂದು ಭಾಷೆಯನ್ನು ಬೋಧಿಸುವುದು. ನಂತರ ಧಾರ್ಮಿಕ ಬೋಧನೆಯನ್ನು ನೀಡುವುದನ್ನು ಹೊರತುಪಡಿಸಿ, ಲೌಕಿಕ ಜ್ಞಾನಕ್ಕೆ ಯಾವುದೇ ಆದ್ಯತೆಯನ್ನು ನೀಡಲಾಗಿಲ್ಲ. ಅವನು ಮೊಘಲ್ ಚಕ್ರವರ್ತಿಯ ಪುತ್ರನಾಗಿದ್ದರಿಂದ ಅರೇಬಿಕ್ ಭಾಷೆಯನ್ನು ಕಲಿಸಿದರು. ಆ ನಂತರ ಅಲ್ಲಾಹುನ ಪರಿಚಯಿಸಿದರು. ಆ ಮೂಲಕ ಧಾರ್ಮಿಕ ನಂಬಿಕೆಗೆ ಅಡಿಪಾಯವನ್ನು ಹಾಕಿದರು. ಆ ಸಮಯದಲ್ಲಿ, ಹಿಂದೂ ಕುಟುಂಬಗಳಲ್ಲಿಯೂ ಸಹ ಅದೇ ಪದ್ಧತಿ ಚಾಲ್ತಿಯಲ್ಲಿತ್ತು. ಹಿಂದೂ ಕುಟುಂಬಗಳಲ್ಲಿ ಸಂಸ್ಕೃತವನ್ನು ಕಲಿಸುತಿದ್ದರು. ವಿದ್ಯಾರ್ಥಿಗಳು ವೇದಗಳು ಮತ್ತು ಪುರಾಣಗಳನ್ನು ಕಲಿತು ಆ ಮೂಲಕ ಅವರನ್ನು ಧರ್ಮದಲ್ಲಿ ಹಾದಿ ತೋರುತ್ತಿದ್ದರು. ಇತರೆ ಧರ್ಮಗಳಲ್ಲಿಯೂ ಇದೇ ನಡೆಯುತ್ತಿತ್ತು. ಇದನ್ನೇ ಅವರು ಪಾಂಡಿತ್ಯ ಎಂದು ಕರೆದುಕೊಳ್ಳುತ್ತಿದ್ದರು.
ಐನ್ಸ್ಟೈನ್ ಹೀಗೆ ಹೇಳಿದ್ದರು..
ಈ ವಿಷಯವನ್ನು ಬದಿಗಿಟ್ಟು, ಆಲ್ಬರ್ಟ್ ಐನ್ಸ್ಟೈನ್ರ ಬಾಲ್ಯದ ಅನುಭವಗಳನ್ನು ಗಮನಿಸೋಣ. ಜರ್ಮನಿಯ ಮ್ಯೂನಿಚ್ ನಗರದಲ್ಲಿರುವ ಕ್ಯಾಥೋಲಿಕ್ ಶಾಲೆಯಲ್ಲಿ ಶಿಕ್ಷಣ ಪಡೆದ ಐನ್ಸ್ಟೈನ್ ಅಲ್ಲಿನ ಧರ್ಮ ಪ್ರಚಾರಕರು ಮತ್ತು ಅವರ ಪದ್ಧತಿಗಳಿಂದ ಬೇಸತ್ತು ಆನಂತರದ ಕಾಲದಲ್ಲಿ ಈ ಕೆಳಗಿನವುಗಳನ್ನು ಬರೆದರು…”ನಾನು ಹನ್ನೆರಡು ವರ್ಷದವನಿದ್ದಾಗ ಪಾಠಶಾಲೆಗಳ ಮೇಲೆ ಶಿಕ್ಷಕರ ಮೇಲೆ ಅಪನಂಬಿಕೆ ಪ್ರಾರಂಭವಾಯಿತು. ಶಾಲೆ ನನ್ನನ್ನು ವಿಫಲಗೊಳಿಸಿತು. ನಾನು ಕೂಡ ಶಾಲೆಯಲ್ಲಿ ವಿಫಲನಾದೆ. ಶಿಕ್ಷಕರು ಯಾವಾಗಲೂ ಮಿಲಿಟರಿ ಸಾರ್ಜೆಂಟ್ಗಳಂತೆ ವರ್ತಿಸುತ್ತಿದ್ದರು. ನಾನು ನಿಜವಾಗಿಯೂ ಕಲಿಯ ಬಯಸಿದ್ದನ್ನು ಕಲಿಯಲು ಅವರು ಎಂದಿಗೂ ಅವಕಾಶ ನೀಡಲಿಲ್ಲ. ಶಿಕ್ಷಕರು ನನ್ನ ಜ್ಞಾನದ ದಾಹವನ್ನು ತಿರುಚಿ ಹತ್ತಿಕ್ಕುತ್ತಿದ್ದರು.” “ಭಗವಂತನಿಗೆ ಮಾಡುವ ಈ ಪ್ರಾರ್ಥನೆಗೆ ಎಷ್ಟು ಸಮಯ ನೀಡಬೇಕೆಂದು?” ಗೊಣಗುತ್ತಿದ್ದರು. ಇಂಗ್ಲಿಷ್ ಕವಿ ಡಬ್ಲ್ಯೂ.ಬಿ. ಈಟ್ಸ್ ಹೀಗೆನ್ನುತ್ತಾರೆ… “ಶಿಕ್ಷಣ ಎಂದರೆ ಬಕೆಟ್ ತುಂಬುವುದಲ್ಲ, ಬದಲಾಗಿ ಅಗ್ನಿಯ ಜ್ವಾಲೆ ಹರಡುವುದು!” ಎಂದು. ಈ ಗುರುಗಳು ಶಿಕ್ಷಣದ ಸೋಗಿನಲ್ಲಿ ಆಧ್ಯಾತ್ಮಿಕತೆ ಮತ್ತು ಧರ್ಮ ಪ್ರಚಾರಕ್ಕೆ ಪ್ರಾಧನ್ಯತೆ ನೀಡಿದರೆ ವಿನಃ, ಜ್ಞಾನ ಬೋಧನೆ ಮಾಡುವುದು ಎಲ್ಲಿತ್ತು? ಅವರು ಕೇವಲ ಬಕೆಟ್ಗಳನ್ನು ತುಂಬಿಸಿದರು – ಆದರೆ ಜ್ವಾಲೆಯ ಹರಡುವಿಕೆ ಎಲ್ಲಿತ್ತು? ಸಮಾಜದಲ್ಲಿ ಪ್ರಗತಿಪರ ಚಿಂತನೆಗಳು ಬೇರೂರುತ್ತಿದ್ದ ಸಂಧರ್ಭದಲ್ಲಿ ಶಿಕ್ಷಕರ ವ್ಯಾಖ್ಯಾನವು ಬದಲಾಯಿತು. ಶಿಕ್ಷಕರೆಂದರೆ ಸ್ನೇಹಿತರು, ಮಾರ್ಗದರ್ಶಕರು, ಯೋಜನೆ ರೂಪಿಸುವವರು, ಶಿಸ್ತುಪಾಲಕರು, ಪ್ರೇರಣೆ ನೀಡುವವರು, ತರಗತಿ ವ್ಯವಸ್ಥಾಪಕರು, ಅಭಿವ್ಯಕ್ತಿಶೀಲ ಪ್ರತಿಭೆಯನ್ನು ಹೊಂದಿರುವ ವ್ಯಕ್ತಿ, ಆ ಪ್ರತಿಭೆಯನ್ನು ಕಲಿಸುವ ವ್ಯಕ್ತಿ, ಸಲಹೆಗಾರು, ಪರೀಕ್ಷಾ ನಿರ್ವಾಹಕರು, ಸೃಜನಶೀಲವುಳ್ಳ ವ್ಯಕ್ತಿ, ತತ್ವಜ್ಞಾನಿ, ತಂದೆಯಂತವರು, ವಸತಿ ಕಲ್ಪಿಸಿಕೊಡುವವರು, ಬೋಧಕರು ಇತ್ಯಾದಿ. ಈ ಹಿಂದೆ, ಕಲಿಸುವವರನ್ನು ‘ಗುರುಗಳು’ ಎಂದು ಕರೆಯಲಾಗುತ್ತಿತ್ತು. ಗುರು ಎಂದರೆ ಧಾರ್ಮಿಕ ಬೋಧನೆಗಳನ್ನು ನೀಡುವ ಮತ್ತು ಮೋಕ್ಷದ ಮಾರ್ಗವನ್ನು ತೋರಿಸುವವನು. ಆದರೆ, ಕಾಲಾನಂತರದಲ್ಲಿ, ಗುರುಗಳ ಅಗತ್ಯ ಕಡಿಮೆಯಾಯಿತು. ಪ್ರಪಂಚ ಜ್ಞಾನ ಮತ್ತು ಬ್ರಹ್ಮಾಂಡದ ರಹಸ್ಯಗಳನ್ನು ಬಿಚ್ಚಿಡುವ ಶಿಕ್ಷಕರ ಅವಶ್ಯಕತೆ ಗಮನಾರ್ಹವಾಗಿ ಹೆಚ್ಚಾಯಿತು. ಅದ್ದರಿಂದಲೇ “ಒಬ್ಬ ಜವಾಬ್ದಾರಿಯುತ ಶಿಕ್ಷಕ ಸಾವಿರ ಪುರೋಹಿತರಿಗಿಂತ ಶ್ರೇಷ್ಠ !” ಎಂದು ಹೇಳಲಾಗುತ್ತದೆ.
ಮಕ್ಕಳಿಗೆ ಇಂಗ್ಲಿಷ್, ಜರ್ಮನ್ ಮತ್ತು ಫ್ರೆಂಚ್ನಂತಹ ಭಾಷೆಗಳನ್ನು ಕಲಿಸುವ ದೇಶಗಳಲ್ಲಿ, ಆಯಾ ಭಾಷೆಗಳ ಮೂಲಕವೇ ಧಾರ್ಮಿಕ ಬೋಧನೆಯನ್ನು ನೀಡಲಾಗುತ್ತಿತ್ತು. ಈ ಪ್ರವೃತ್ತಿ ಶತಮಾನಗಳವರೆಗೆ ಮುಂದುವರೆಯಿತು. ಹಾಗೂ ಅದೇ ಜೀವನದ ಅಂತಿಮ ಉದ್ದೇಶವೆಂದು ನಂಬಿದ್ದರು. ಆದರೆ, ನಂತರದ ಕಾಲದಲ್ಲಿ ಮಕ್ಕಳಿಗೆ ಗಣಿತ, ಇತಿಹಾಸ ಮತ್ತು ಭೌಗೋಳಿಕತೆಯಂತಹ ವಿಷಯಗಳನ್ನು ಕಲಿಸುವುದು ಕಡ್ಡಾಯವಾದ ಪರಿಸ್ಥಿತಿ ಎದುರಾಯಿತು. ಸಮಾಜ ಆಧುನಿಕ ಯುಗದೊಳಗೆ ಪ್ರವೇಶಿಸುತ್ತಿದ್ದಂತೆ ಸೈನ್ಸ್ ನ ಅಗತ್ಯ ಹೆಚ್ಚಾಯಿತು. ಹಿಂದಿನದನ್ನು ಗಮನದಲ್ಲಿಟ್ಟುಕೊಂಡು ಈ ಆಧುನಿಕ ಯುಗದೊಳಗೆ ಪ್ರವೇಶಿಸಿ ಚಿಂತಿಸೋಣ! ಈಗಲೂ ಸಹ, ನಾವು ಕೇವಲ ಒಂದು ಭಾಷೆಯನ್ನು ಕಲಿತು, ಆ ಮೂಲಕ ಧಾರ್ಮಿಕ ಬೋಧನೆಗಳನ್ನು ಮೈಗೂಡಿಸಿಕೊಂಡು ಮೂರ್ಖರಾಗೋಣವೇ! ಅಥವಾ ಸಮಕಾಲೀನ ಜೀವನದಲ್ಲಿ ಯಾವುದೇ ಉಪಯೋಗವಿಲ್ಲದ ಧಾರ್ಮಿಕ ಸಿದ್ಧಾಂತಗಳನ್ನು ಬದಿಗಿಟ್ಟು ಆಧುನಿಕ ವಿಜ್ಞಾನವನ್ನು ಆಹ್ವಾನಿಸೋಣವೇ? ಆ ಕಾಲದ, ಚಕ್ರವರ್ತಿ ಔರಂಗಜೇಬನು ತನಗೆ ಸರಿಯಾದ ಶಿಕ್ಷಣವನ್ನು ನೀಡಲ್ಲವೆಂದು ತನ್ನ ಗುರುವನ್ನು ಅಪರಾಧಿಯಂತೆ ನಿಲ್ಲಿಸಿದರಲ್ಲವೇ? ಮತ್ತೆ ಈಗ? ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ಅಸಂಖ್ಯಾತ ಇತರ ಮಾಧ್ಯಮಗಳ ಮೂಲಕವೂ ಜ್ಞಾನವನ್ನು ಪಡೆಯುವ ಅವಕಾಶ ಇದೆ. ನಾವು ನಮ್ಮ ಹಳ್ಳಿಗಳಿಗೆ ಸೀಮಿತವಾಗಿದ್ದ ಪರಿಸ್ಥಿತಿಯಿಂದ ಇಡೀ ವಿಶ್ವವೇ ನಮ್ಮ ಗ್ರಾಮ ಎಂದು ಭಾವಿಸುವ ಮಟ್ಟಕ್ಕೆ ಬೆಳೆದಿದ್ದೇವೆ. ಜಾತಿ-ಧರ್ಮವನ್ನು ಬಿಟ್ಟು, ಜಾತ್ಯತೀತ ವ್ಯಕ್ತಿಗಳಾಗಿ ಬದುಕುವ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ. ದೇವರು ಶಿಕ್ಷೆ ವಿಧಿಸುತ್ತಾನೆ ಎಂಬ ಭಯದಿಂದಲ್ಲ, ಸ್ವಚ್ಚಂದವಾಗಿ ಮಾನವ ಮೌಲ್ಯಗಳನ್ನು ಎತ್ತಿಹಿಡಿಯುವಷ್ಟು ಪ್ರಬುದ್ಧರಾಗಿದ್ದೇವೆ. ಈಗ, ನಾವು ನಮ್ಮನ್ನು ಪ್ರಶ್ನಿಸಿಕೊಳ್ಳಬೇಕು. ಮೂಢನಂಬಿಕೆಯೇ ಅಥವಾ ಬುದ್ಧಿವಂತಿಕೆಯೇ? ಗುಲಾಮ ಮನಸ್ಥಿತಿಯೇ ಅಥವಾ ಸ್ವತಂತ್ರ ಚಿಂತನೆಯೇ? ಪೌರಾಣಿಕ ಪಾಂಡಿತ್ಯವೇ ಅಥವಾ ವೈಜ್ಞಾನಿಕ ತಿಳುವಳಿಕೆಯೇ? ಯಾವುದು? ನಾವು ನಿಜವಾಗಿಯೂ ಯಾವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು?
“ಸಂಕಷ್ಟದಲ್ಲಿರುವ ಮಗುವನ್ನು ರಕ್ಷಿಸುವವನು- ಮನುಷ್ಯ” ಮಗುವನ್ನು ರಕ್ಷಿಸಲು ಬೇರೆಯವರನ್ನು ಪ್ರಾರ್ಥಿಸುವವನು- ಭಕ್ತ. ತನಗೇನೂ ಸಂಬಂಧವಿಲ್ಲ ಎಂಬಂತೆ ಇರುವವನು- ದೇವರು.” ಧಾರ್ಮಿಕ ವಿಷಯಗಳನ್ನು ಬೋಧಿಸುವವರನ್ನು ಜ್ಞಾನಿಗಳನ್ನಾಗಿಸಲು ಕೆಲವು ಗುಂಪುಗಳು ಪ್ರಯತ್ನಿಸಿದವು. ಒಂದು ಮಟ್ಟಿಗೆ ಸಫಲವಾದವು ಕೂಡ. ಧರ್ಮ ಹೇಳಿದೆ, ದೇವರು ಹೇಳಿದ್ದಾರೆ ಎಂಬಂತ ಬೂಟಾಟಿಕೆಯ ಮಾತುಗಳಿಂದ ತಲೆಮಾರು ತಲೆಮಾರುಗಳಿಂದ, ಕೋಟ್ಯಾಂತರ ಜನರನ್ನು ಗುಲಾಮರನ್ನಾಗಿಸಿದ್ದಾರೆ. ಅವರನ್ನು ಕೀಳು ಜನರನ್ನಾಗಿ ಹೀನವಾಗಿ ನೋಡಲಾಗುತ್ತಿದೆ. ತಿರಸ್ಕಾರದಿಂದ ನಡೆಸಿಕೊಳ್ಳಲಾಗುತ್ತಿದೆ. ಪ್ರಪಂಚದಲ್ಲಿ ಬಹು ಸಂಖ್ಯಾತರಾದ ಕ್ರಿಶ್ಚಿಯನ್ನರು ಈ ಕೆಲಸವನ್ನು ಹೆಚ್ಚು ಹೆಚ್ಚಾಗಿ ಮಾಡಿದರು. ಆನಂತರದ ಸಾಲಿನಲ್ಲಿರುವ ಮುಸ್ಲಿಮರು, ಹಿಂದುಗಳು ಈ ಕೆಲಸವನ್ನು ಯಶಸ್ವಿಯಾಗಿ ಮುಂದುವರಿಸಿದರು. ಅದೇ ಇನ್ನು ಮುಂದುವರಿಯಬೇಕೆಂದು ಭಾವಿಸುತ್ತಾರೆ! ಜ್ಞಾನಿಯಾದವನಿಗೆ ಎಲ್ಲಾ ವಿಷಯಗಳ ಮೇಲೆ ತಿಳುವಳಿಕೆ ಇರುವುದಿಲ್ಲ. ಅಜ್ಞಾನಿಗೆ ಮಾತ್ರ ಇರುತ್ತದೆ. ಎಂತಹ ಜ್ಞಾನಿಗಳ ಆದರೂ ಕೆಲವು ವಿಷಯಗಳ ಮೇಲೆ ತಿಳಿದುಕೊಂಡಿರುತ್ತಾರೆ. ತಿಳಿಯದ ವಿಷಯಗಳನ್ನು ತಿಳಿಯದು ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಅಜ್ಞಾನಿಗಳು ತಿಳಿಯದ ವಿಷಯಗಳನ್ನು ತಿಳಿಯದು ಎಂದು ಒಪ್ಪಿಕೊಳ್ಳಲಾರರು. ತಾವು ಉದ್ದಾರವಾಗಲಾರರು. ತಮಗೆ ಒಳ್ಳೆಯದನ್ನು ಮಾಡುವ ಅವಕಾಶವನ್ನು ಬೇರೆಯವರಿಗೂ ನೀಡಲಾರರು. ಇದು ಧರ್ಮದ ಹುಚ್ಚಿನಲ್ಲಿ ಮುಳುಗಿರುವ ಅವಿವೇಕಿಗಳ ಲಕ್ಷಣ! “ಕಪಟ ಕಟ್ಟುಕಥೆಗಳನ್ನು ಸಂಪೂರ್ಣವಾಗಿ ಸತ್ಯ ಎಂದು ನಿಮಗೆ ಮನವರಿಕೆ ಮಾಡಿಕೊಡುವವರೇ, ನಿಮ್ಮಿಂದ ಅತ್ಯಂತ ಘೋರ ಕೃತ್ಯಗಳನ್ನು ಸಹ ಪವಿತ್ರ ಕಾರ್ಯವೆಂದು ಮಾಡಿಸಬಲ್ಲರು.” ಎನ್ನುತ್ತಾರೆ ಫ್ರೆಂಚ್ ಬರಹಗಾರ ವೋಲ್ಟೇರ್. “ಮನುಷ್ಯರು ಪರಸ್ಪರ ದ್ವೇಷಿಸಿಕೊಳ್ಳಲು ತಕ್ಕಮಟ್ಟಿಗೆ ಧರ್ಮ ಎಂಬುದು ಇದೆ. ಆದರೆ ಪರಸ್ಪರ ಪ್ರೀತಿಸಿಕೊಳ್ಳಲು ಸಾಕಾಗುವಷ್ಟು ಇಲ್ಲ ” ಎನ್ನುತ್ತಾರೆ ಆಂಗ್ಲೋ-ಐರಿಶ್ ಕವಿ ಮತ್ತು ಬರಹಗಾರ ಜೊನಾಥನ್ ಸ್ವಿಫ್ಟ್.
ಹಿಂದೂ ಕುಟುಂಬಗಳಲ್ಲಿ, ಸಂಸ್ಕೃತ, ಹಿಂದಿ, ತೆಲುಗು ಅಥವಾ ಇತರೆ ಪ್ರಾದೇಶಿಕ ಭಾಷೆಗಳಲ್ಲಿ ಮೂಲಭೂತ ಪರಿಚಯವನ್ನು ಪಡೆದು, ಆಧ್ಯಾತ್ಮಿಕತೆಯನ್ನು ಅಂಗೀಕರಿಸಿದರೆ ಸಾಕು; ಒಳ್ಳೆಯ, ಸಾಂಪ್ರದಾಯಿಕ ಕುಟುಂಬವೆಂದು ಮನ್ನಣೆ ಸಿಗುತ್ತದೆ. ಇನ್ನೂ ಸ್ವಲ್ಪ ಮುಂದೆ ಹೋಗಿ – ನಾಲ್ಕು ಶ್ಲೋಕಗಳನ್ನು ಹೆಚ್ಚಾಗಿ ಪಠಿಸಿ ದೇವರ ಆರಾಧನೆಯಲ್ಲಿ ತೊಡಗಿಸಿಕೊಂಡರೆ – ಸಮಾಜವು ಅವರನ್ನು ‘ಗುರು’ ಎಂದು ಗುರುತಿಸುತ್ತದೆ. ಮುಸ್ಲಿಮರಲ್ಲೂ ಪರಿಸ್ಥಿತಿ ಬಹುತೇಕ ಒಂದೇ ಆಗಿರುತ್ತದೆ. ಅವರು ಕ್ರಿ.ಶ. 570 ಮತ್ತು 632 ರ ನಡುವಿನ ಅವಧಿಯ ಕುರಾನ್ನಲ್ಲಿರುವ ಬೋಧನೆಗಳಿಗೆ ಬದ್ಧರಾಗಿರುತ್ತಾರೆ, ಅವುಗಳನ್ನು ಪ್ರವಾದಿ ಮುಹಮ್ಮದ್ ಹೇಳಿದ್ದು ಎನ್ನುತ್ತಾರೆ. ಅದೇ ರೀತಿ, ಕ್ರಿಶ್ಚಿಯನ್ ಧರ್ಮದಲ್ಲಿ, ಜನರು ಪಾಸ್ಟರ್ ರ ಮಾತುಗಳಿಗೆ ವಶವಾಗುತ್ತಾರೆ. ಕನ್ವರಿ ಎಣ್ಣೆಯಿಂದ ರೋಗಗಳು ಗುಣವಾಗುತ್ತದೆ ಎಂದು ನಂಬುತ್ತಾರೆ. ದೇವರೊಂದಿಗೆ ಒಂದು ರಾತ್ರಿ — ಕಾಮಕಲೆಗೆ ಸಂಬಂಧಿಸಿದ ದೇವಾಲಯಗಳು — ರೋಗ-ರುಜಿನಗಳಿಂದ ಗುಣಮುಖರಾಗಲು ಸಲ್ಲಿಸುವ ಪ್ರಾರ್ಥನೆಗಳೆಲ್ಲವೂ ನೆರವೇರುತ್ತವೆ ಎಂಬುದು ಜನರ ನಂಬಿಕೆ. ಸ್ತ್ರೀಯರಿಗೆ ತಮ್ಮನ್ನು ವಂಚಿಸಲಾಗುತ್ತಿದೆ ಎಂಬ ಅರಿವಿದ್ದರೂ ಸಹ ಎಚ್ಚೆತ್ತುಕೊಳ್ಳಲಾರರು ಈ ಧರ್ಮಗಳು ಇಷ್ಟೊಂದು ನಿಕಟ ಹೋಲಿಕೆಗಳನ್ನು ಹೊಂದಿರಲು ಕಾರಣವೆಂದರೆ, ಒಂದು ಕಾಲದಲ್ಲಿ ಎಲ್ಲರೂ ಒಂದೇ ಆಗಿದ್ದರು! ಭಾರತದಲ್ಲಿರುವ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಬಹುಪಾಲು ಒಂದು ಕಾಲದಲ್ಲಿ ಹಿಂದೂಗಳೇ ಆಗಿದ್ದರು. ಮುಖ್ಯವಾಗಿ ಮುಸ್ಲಿಂ ಚಕ್ರವರ್ತಿಗಳ ಆಳ್ವಿಕೆ, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಜನರು ಯಾವುದೋ ಲಾಭಗಳಿಗಾಗಿ ಅಥವಾ ರಿಯಾಯಿತಿಗಳ ಆಮಿಷಗಳಿಗೆ ಒಳಗಾಗಿ ಮತಾಂತರಗೊಂಡವರೆ ಹೆಚ್ಚು. ಬೌದ್ಧಧಮ್ಮದ ಪ್ರಭಾವದಿಂದ ಹೊರಬರಲು ಸಾಧ್ಯವಾಗದ ಹಿಂದೂಗಳು ಅಂತಿಮವಾಗಿ ಬುದ್ಧನನ್ನು ದಶಾವತಾರಗಳ ದೇವತಾಗಣದಲ್ಲಿ ಸೇರಿಸಿಕೊಂಡರು. ನಂತರದ ಬೆಳವಣಿಗೆಗಳಲ್ಲಿ, ಬೌದ್ಧ ವಿಹಾರಗಳನ್ನು ಹಿಂದೂ ದೇವಾಲಯಗಳಾಗಿ ಪರಿವರ್ತಿಸಿದರು. ನಿಮ್ನ (ಕೆಳ) ಜಾತಿಗಳ ಜೀವನ ಶೋಚನೀಯವಾಯಿತು. ಇದರ ಪರಿಣಾಮವಾಗಿ, ಅವರೆಲ್ಲರೂ ಇತರೆ ಧರ್ಮಗಳನ್ನು ಸ್ವೀಕರಿಸಿದರು. ನಂತರದ ಕಾಲದಲ್ಲಿ ಮುಸ್ಲಿಂ ರಾಜರು ಹಿಂದೂ ದೇವಾಲಯಗಳನ್ನು ಕೆಡವಿ ಮಸೀದಿಗಳಾಗಿ ಪರಿವರ್ತಿಸಿದರು. ಇತಿಹಾಸದ ಪುಟಗಳೆಲ್ಲವೂ ಧಾರ್ಮಿಕ ಸಂಘರ್ಷಗಳ ದಾಖಲೆಗಳಿಂದ ತುಂಬಿವೆ. ಅಜ್ಞಾನದ ಕಣ್ಣಿನಿಂದ ನೋಡಿದರೆ ವಿಷಯಗಳು ವಿರೂಪಗೊಂಡಂತೆ ಕಾಣುತ್ತದೆ. ಜ್ಞಾನದ ದೃಷ್ಟಿಯಿಂದ ಸತ್ಯವನ್ನು ನೋಡಿದರೆ ವಾಸ್ತವಗಳೆನೆಂಬುದು ಅರ್ಥವಾಗುತ್ತದೆ. ಆದರೆ, ಅಂತಹ ಎಲ್ಲಾ ಅಧ್ಯಯನಗಳ ಸಾರಾಂಶ ಒಂದೇ, “ಧರ್ಮವು ಮನುಷ್ಯನನ್ನು ಮನುಷ್ಯನಾಗಿ ಉಳಿಯಲು ಅನುಮತಿಸುವುದಿಲ್ಲ.”
- ಡಾ.ದೇವರಾಜು ಮಹಾರಾಜು ಖ್ಯಾತ ಸಾಹಿತಿ, ಜೀವಶಾಸ್ತ್ರಾಜ್ಞರು
ಅನುವಾದ : ರೇಣುಕಾ ಭಾರತಿ


Leave a reply