GST ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರ ಸುಧಾರಣೆಯನ್ನು ತಂದು ದೇಶದ ಜನರಿಗೆ ಮೋದಿ ಸರ್ಕಾರ ದೀಪಾವಳಿ ಬೋನಸ್ ಕೊಟ್ಟಿದೆ ಎಂಬ ಕಿವಿಗಡಚಕ್ಕುವ ಪ್ರಚಾರವನ್ನು ಕೇಂದ್ರ ಸರ್ಕಾರ ಮತ್ತು ಅದರ ತುತ್ತೂರಿ ಮಾಧ್ಯಮಗಳು ಕಳೆದ ಒಂದು ವಾರದಿಂದ ಮಾಡುತ್ತಿವೆ. ಅದರಲ್ಲಿ ಮುಖ್ಯವಾಗಿ ಜಿಎಸ್ಟಿ ಜಾರಿಯಾದ ಮೇಲೆ ಇದ್ದ 0.%., 1-3%, 5%, 12%, 18%. ಮತ್ತು 28% ಎಂಬ ಹಲವು ಹಂತದ ತೆರಿಗೆ ದರಗಳನ್ನು ಶೇ. 5 ಮತ್ತು ಶೇ. 18 ಎಂಬ ಎರಡೆ ತೆರಿಗೆ ವ್ಯವಸ್ಥೆಗಳಾಗಿ ಮಾಡಲಾಗಿದೆಯೆಂದು ಘೋಷಿಸಲಾಗಿದೆ. ಶೇ. 12 ತೆರಿಗೆ ಭರಿಸಬೇಕಿದ್ದ ಬಹುಪಾಲು ತೆರಿಗೆಗಳನ್ನು ಶೇ.5ರ ಗುಂಪಿಗೂ, ಶೇ. 28 ರಷ್ಟು ತೆರಿಗೆ ಭರಿಸುತ್ತಿದ್ದ ಬಹುಪಾಲು ತೆರಿಗೆಗಳನ್ನು ಶೇ. 18 ರ ಗುಂಪಿಗೂ ಸೇರಿಸಿ ಜನಸಾಮಾನ್ಯರಿಗೆ ಬೃಹತ್ ತೆರಿಗೆ ಕಡಿತದ ಮತ್ತು ಆ ಮೂಲಕ ಬೆಲೆ ಇಳಿಕೆಯ ಲಾಭವನ್ನು ಕೊಡುಗೆಯಾಗಿ ನೀಡಲಾಗಿದೆಯೆಂದು ಪ್ರಚಾರ ಮಾಡಲಾಗುತ್ತಿದೆ. ಈ ಎರಡು ಸ್ಲಾಬ್ ಗಳಲ್ಲದೆ ಐಶಾರಾಮಿ ಮತ್ತು ದುಶ್ಚಟಗಳನ್ನು ಉತ್ತೇಜಿಸುವ ಸರಕುಗಳನ್ನು “Sin-ಪಾಪಿ ಸರಕುಗಳ” ಪಟ್ಟಿಗೆ ಸೇರಿಸಿ ಶೇ. 40 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ಈ ಎಲ್ಲಾ ಕಾರಣಗಳಿಂದ ಇನ್ನುಮುಂದೆ ಸರಕುಗಳ ದರ ದಿಢೀರ್ ಕುಸಿದು ಜನರು ಹುಚ್ಚಾಪಟ್ಟೆ ಖರೀದಿ ಮಾಡಿ ಕುಸಿಯುತ್ತಿರುವ ಆರ್ಥಿಕತೆಯು ಪುನಶ್ಚೇತನಗೊಳ್ಳುತ್ತದೆ ಎಂದೆಲ್ಲ ಸರ್ಕಾರ ಹೇಳುತ್ತಿದೆ. ಮೇಲ್ನೋಟಕ್ಕೆ ಪ್ರಾರಂಭದ ವರ್ಷ ಈ ತೆರಿಗೆ ಕಡಿತದಿಂದ 48,000 ಕೋಟಿ ರೂ.ಗಳಷ್ಟು ತೆರಿಗೆ ಸಂಗ್ರಹ ಕಡಿಮೆಯಾಗಬಹುದಾದರೂ, ಜನರು ಬೆಲೆ ಇಳಿಕೆಯಿಂದಾಗಿ ಹೆಚ್ಚೆಚ್ಚು ಖರೀದಿ ಮಾಡುವುದರಿಂದ ವ್ಯವಹಾರವು ಹೆಚ್ಚು ನಡೆದು ತೆರಿಗೆ ಸಂಗ್ರಹ ಕಡಿಮೆಯಾಗುವುದರ ಬದಲು ಹೆಚ್ಚಾಗುತ್ತದೆ ಎಂದು ಇಡೇ ದೇಶದ ಜನರ ಕಿವಿಗಳ ಮೇಲೆ ಹೂವಿಡುವ ಪ್ರಚಾರವನ್ನು ಮೋದಿ ಸರ್ಕಾರ ಮಾಡುತ್ತಿದೆ. ಆದರೆ ಇವೆಲ್ಲ ನಿಜವೇ? ಇದರಲ್ಲಿ ಸುಳ್ಳೆಷ್ಟು? ನಿಜವೆಷ್ಟು? ಉತ್ಪ್ರೇಕ್ಷೆಯೆಷ್ಟು? ಮತ್ತು ೨೦೧೭ರಲ್ಲಿ ಜಿಎಸ್ಟಿ ಜಾರಿಯಾದ ನಂತರದಲ್ಲಿ ದೇಶದ ಜನರು ಅನುಭವ ಹೇಳುವುದೇನು? ಅವನ್ನು ಒಂದೊಂದಾಗಿ ಗಮನಿಸೋಣ :
GST ಸುಧಾರಣೆಯಲ್ಲ- ಮಾಡಿದ ತಪ್ಪುಗಳ ತಿದ್ದುಪಡಿ
ಮೊದಲನೆಯದಾಗಿ ಮೋದಿ ಸರ್ಕಾರ ಮಾಡುತ್ತಿರುವುದು GST ವ್ಯವಸ್ಥೆಯ ಸುಧಾರಣೆಯಲ್ಲ. ಹಾಗೆ ನೋಡಿದರೆ ಅತ್ಯಗತ್ಯವಾಗಿ ಈ ವ್ಯವಸ್ಥೆಯಲ್ಲಿ ಮಾಡಬೇಕಾದ ಯಾವ ಸುಧಾರಣೆಯನ್ನು ಮೋದಿ ಸರ್ಕಾರ ಮಾಡಿಲ್ಲ. ಬದಲಿಗೆ ಅದು ಮಾಡಿರುವುದು ತೆರಿಗೆ ದರಗಳ ಮಾರ್ಪಾಡು. ಮತ್ತು ತೆರಿಗೆ ಹಂತಗಳಲ್ಲಿ ಕಡಿತ. ಹಾಗೆ ನೋಡಿದರೆ GST ಅಥವಾ VAT (ಮೌಲ್ಯ ವರ್ಧಿತ ತೆರಿಗೆ) ಎಂಬ ಏಕೀಕೃತ ತೆರಿಗೆ ವ್ಯವಸ್ಥೆಯಿರುವ ಯಾವ ದೇಶಗಳಲ್ಲೂ ತೆರಿಗೆ ಹಂತ ಒಂದಕ್ಕಿಂತ ಹೆಚ್ಚಿರುವುದಿಲ್ಲ. ಹೆಚ್ಚೂ ಕಡಿಮೆ ಶೇ.12 ಅಥವಾ ಶೇ.10 ಎಂಬ ಏಕೈಕ ತೆರಿಗೆ ವ್ಯವಸ್ಥೆ ಇರುತ್ತದೆ. ಆದರೆ ನಮ್ಮ ದೇಶದಲ್ಲಿ ಒಂದು ದೇಶ ಒಂದೇ ತೆರಿಗೆ ಎಂಬ ಹೆಸರಿನಲ್ಲಿ ಜಿಎಸ್ಟಿ ಜಾರಿಯಾದರೂ0-1-3-5-12-18-28 ಮತ್ತು ಸೆಸ್ ಗಳೆಂಬ ಏಳಕ್ಕೂ ಹೆಚ್ಚು ತೆರಿಗೆ ಹಂತಗಳು ಉಳಿದುಕೊಂಡವು. ಅದರಲ್ಲೂ ಒಂದೇ ಬಗೆಯ ಸರಕಿನ ಕೆಲವು ಮಾರ್ಪಾಡುಗಳಿಗೆ ಬೇರೆಬೇರೆ ಬಗೆಯ ತೆರಿಗೆಯನ್ನು ನಿಗದಿ ಮಾಡಿ ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರನ್ನು ಈ ವ್ಯವಸ್ಥೆ ಸುಲಿಯತೊಡಗಿತು. ಉದಾಹರಣೆಗೆ ಇತ್ತೀಚೆಗೆ ಹಣಕಾಸು ಮಂತ್ರಿ ನಿರ್ಮಾಲ ಸೀತಾರಾಮನ್ ಅವರೇ ಹೇಳಿದಂತೆ ಬರಿ ಪಾಪ್ ಕಾರ್ನ್ ಗೆ ತೆರಿಗೆಯಿಲ್ಲ. ಉಪ್ಪು ಮಿಶ್ರಿತ ಪಾಪ್ ಕಾರ್ನ್ ಗೆ ಶೇ. 5 ಮತ್ತು ಸಕ್ಕರೆ ಮಿಶ್ರಿತ ಕಾರ್ಮಲಾನ್ ಪಾಪ್ ಕಾರ್ನ್ ಗೆ ಶೇ. 18 ತೆರಿಗೆ.
ಹಾಗೆಯೇ ಈಗಾಗಲೇ ವೈರಲ್ ಆಗಿರುವ ಒಂದು ವಿಡಿಯೋ ದಲ್ಲಿ ತಮಿಳುನಾಡಿನ ಒಬ್ಬ ಬೇಕರಿ ಮಾಲೀಕ ವಿವರಿಸುವಂತೆ ಬನ್ ಖರೀದಿಸಿದರೆ ಶೇ.0 ತೆರಿಗೆ, ಬಟರ್ ಖರೀದಿಸಿದರೆ ಶೇ. 5 ತೆರಿಗೆ ಆದರೆ ಬಟರ್ ಹಚ್ಚಿದ ಬನ್ ಖರೀದಿಸಿದರೆ ಶೇ.18 ತೆರಿಗೆ. ಇಂಥಾ ತುಘಲಕ್ ತೆರಿಗೆ ದರ್ಬಾರ್ ನಲ್ಲಿ ಶ್ರೀಸಾಮಾನ್ಯರ ಮೇಲೆ ತೆರಿಗೆ ಹೆಚ್ಚಾದರೆ ವ್ಯಾಪಾರಿಗಳು ತೆರಿಗೆ ವ್ಯವಸ್ಥೆಗೆ ಸರಿಯಾಗಿ ಹೊಂದಿಕೊಳ್ಳಲಾಗದೆ ದಂಡವನ್ನು ಕಟ್ಟಬೇಕಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಜಿಎಸ್ಟಿ ವ್ಯವಸ್ಥೆಯನ್ನು ಸರಳೀಕರಿಸಬೇಕೆಂದು, ತಿದ್ದುಪಡಿ ಮಾಡಬೇಕೆಂದು ವ್ಯಾಪಾರಿಗಳು, ಉದ್ಯಮಿಗಳು, ಜನಸಾಮಾನ್ಯರು ಮತ್ತು ವಿರೋಧ ಪಕ್ಷಗಳು 2017 ರಿಂದಲೂ ಮೋದಿ ಸರ್ಕಾರವನ್ನು ಆಗ್ರಹಿಸುತ್ತಾ ಬಂದಿದ್ದರು. ಆದರೆ ತನ್ನ ದುರಹಂಕಾರದಿಂದ ಯಾರ ಮಾತನ್ನು ಕೇಳಿಸಿಕೊಳ್ಳದೆ “ಸಬ್ ಚಂಗಾಸಿ” ಎಂದು ಮೋದಿ ಸರ್ಕಾರ ಹೇಳಿಕೊಳ್ಳುತ್ತಾ ಬಂದಿತ್ತು.
ಆದರೆ ತುಘಲಕ್ ಅನ್ನು ಮೀರಿಸುವ ಮೋದಿ ಜಿಎಸ್ಟಿ ವ್ಯವಸ್ಥೆ ಯಿಂದ ಆರ್ಥಿಕತೆಯ ಗೊಂದಲಮಯವಾಗಿರುವುದು ಮತ್ತು ಇತ್ತೀಚೆಗೆ ಟ್ರಂಪ್ ಸರ್ಕಾರ ಭಾರತದ ರಫ಼್ಟಿನ ಮೇಲೆ ಶೇ. 50 ರಷ್ಟು ಆಮದು ಸುಂಕ ವಿಧಿಸಿದ್ದರಿಂದ ಭಾರತದದ ಆರ್ಥಿಕತೆ ಇನ್ನಷ್ಟು ಸಂಕಷ್ಟವನ್ನು ಎದುರಿಸಬೇಕಾಗಿ ಬಂದಿರುವುದರಿಂದ ದೇಶೀಯ ಆರ್ಥಿಕತೆಯಲ್ಲಿ ವಹಿವಾಟು ಹೆಚ್ಚಿಸಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ. ಇದಲ್ಲದೆ ಮೋದಿ ಮಾಧ್ಯಮಗಳು ಈಗ ಆರೋಗ್ಯ ವಿಮೆ, ಪೆನ್ಸಿಲ್, ರಬ್ಬರ್ , ಪುಸ್ತಕ . ಜೀವನಾವಶ್ಯಕ ಔಶಧಿಗಳು ಇಂಥಾ ಸೇವೆ ಮತ್ತು ಸರಕುಗಳ ದರಗಳನ್ನು ಮೊದಲಿದ್ದ ಶೇ. 12-18 ರಿಂದ ಶೂನ್ಯಕ್ಕೆ ಇಳಿಸಿ ಮೋದಿ ಸರ್ಕಾರ ಜನಪರ ಎಂದು ಸಾಬೀತು ಮಾಡಿದೆ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಇಂಥಾ ಅತ್ಯಗತ್ಯ ವಸ್ತುಗಳ ಸರಕುಗಳಿಗೆ ಕಳೆದ ಎಂಟು ವರ್ಷಗಳಿಂದ ಮೋದಿ ಸರ್ಕಾರ ಶೇ.12-18 ರ ತೆರಿಗೆ ವಿಧಿಸಿ ತುಟ್ಟಿ ಮಾಡಿದ್ದೇಕೆ ಎಂಬ ಪ್ರಶ್ನೆಯನ್ನು ಮೊದಲು ಕೇಳಬೇಕಲ್ಲವೇ? ಹೀಗಾಗಿ ಅನಿವಾರ್ಯವಾಗಿ ಮೋದಿ ಸರ್ಕಾರ ಜಿಎಸ್ಟಿ ವ್ಯವಸ್ಥೆ ಯ ದರಗಳನ್ನು ಸರಳೀಕರಿಸುತ್ತಿದೆ. ಅಂದರೆ ಮೋದಿ ಸರ್ಕಾರ ತನ್ನ ದುರಹಂಕಾರದಿಂದ ಮಾಡಿದ್ದ ಕೆಲವು ಅತಿರೇಕದ ತಪ್ಪುಗಳನ್ನು ತಿದ್ದುಕೊಳ್ಳುತ್ತಿದೆಯೇ ವಿನಾ ಯಾವುದೇ ಮೂಲಭೂತ ಮತ್ತು ಅತ್ಯಗತ್ಯ ಸುಧಾರಣೆಗಳನ್ನು ತರುತ್ತಿಲ್ಲ.
ತೆರಿಗೆ ದರಗಳು ಇಳಿದ ಮಾತ್ರಕ್ಕೆ ಬೆಲೆಗಳು ಇಳಿಯುವುದೇ?
2017 ರಲ್ಲಿ ಜಿಎಸ್ಟಿ ಜಾರಿ ಮಾಡುವಾಗಲೂ ಮೋದಿ ಪಟಾಲಂ ಮತ್ತವರ ತುತ್ತೂರಿ ಮಾಧ್ಯಮಗಳು ಜಿಎಸ್ಟಿ ವ್ಯವಸ್ಥೆಯಿಂದ ಎಲ್ಲಾ ಸರಕು ಮತ್ತು ಸೇವೆಗಳ ಬೆಲೆಗಳು ದೊಡ್ಡ ಮಟ್ಟದಲ್ಲಿ ಇಳಿಯುತ್ತವೆ ಎಂದೇ ಪ್ರಚಾರ ಮಾಡಿದ್ದವು. ಆದರೆ ಭಾರತೀಯರೆಲ್ಲರೂ ತಮ್ಮ ತಮ್ಮ ಅನುಭವದಲ್ಲೇ ಕಂಡುಕೊಂಡಿರುವಂತೆ ಯಾವ ಸರಕುಗಳ ಬೆಲೆಯೂ ಇಳಿಯಲಿಲ್ಲ. ಬದಲಿಗೆ ಕಳೆದ ಎಂಟು ವರ್ಷಗಳಲ್ಲಿ ಈ ಹಿಂದೆ ಹೇಗೆ ಹೆಚ್ಚಾಗುತ್ತಾ ಹೋದವೋ ಅದೇ ರೀತಿ ಹೆಚ್ಚಾಗುತ್ತಲೇ ಇವೆ. ಏಕೆ? ಜಿಎಸ್ಟಿ ವ್ಯವಸ್ಥೆಯ ಬಗ್ಗೆ ಸರ್ಕಾರಗಳು ಕೊಚ್ಚಿಕೊಂಡ ಹೆಗ್ಗಳಿಕೆ ಏನೆಂದರೆ ಈ ಹಿಂದಿನ ತೆರಿಗೆ ವ್ಯವಸ್ಥೆಯಲಿ ಸರಕುಗಳ ಉತ್ಪಾದನೆಯಲ್ಲಿ ಕಚ್ಚಾವಸ್ತುಗಳನ್ನು ಕೊಳ್ಳುವುದರಿಂದ ಹಿಡಿದು, ಅದನ್ನು ಬೇರೆ ಬೇರೆ ಹಂತದಲ್ಲಿ ಸಿದ್ಧ ಸರಕುಗಳನ್ನು ಮಾಡುವ ಹಂತದಲ್ಲಿ ಬೇರೆ ಬೇರೆ ತೆರಿಗೆಗಳು ವಿಧಿಸಲ್ಪಡುತ್ತಿತ್ತು. ಅಂದರೆ ಒಂದು ಹಂತದಿಂದ ಮತೊಂದು ಹಂತದಲ್ಲಿರುವ ಸರಕುಗಳನ್ನು ಖರೀದಿ ಮಾಡಿದಾಗ ಹಿಂದಿನ ಹಂತದ ಉತ್ಪಾದಕ ಈಗಾಗಲೇ ನೀಡಿರುವ ತೆರಿಗೆಯೂ ವಸ್ತುವಿನ ಬೆಲೆಯಲ್ಲಿ ಲೆಕ್ಕ ಆಗುವುದರಿಂದ ಮುಂದಿನ ಹಂತದ ಉತ್ಪಾದಕ ಅದನ್ನು ಸಿದ್ಧ ಸರಕು ಮಾಡಿ ಮಾರುವ ಹೊತ್ತಿಗೆ ಹಿಂದಿನ ಹಂತಗಳಲ್ಲಿ ಪಾವತಿಯಾದ ತೆರಿಗೆಗಳ ಮೇಲೂ ತೆರಿಗೆ- Tax On Tax- ಕಟ್ಟಿರುತ್ತಿದ್ದರು. ಈ ಡಬಲ್ ಟ್ಯಾಕ್ಸೇಶನ್ ಇಂದ ಸರಕುಗಳ ಮೇಲೆ ತೆರಿಗೆ ಹೊರೆ ಹೆಚ್ಚಾಗಿ ಅಂತಿಮವಾಗಿ ಸರಕುಗಳ ಬೆಲೆಯೂ ಹೆಚ್ಚಾಗುತ್ತಿತ್ತು.
ಜಿಎಸ್ಟಿ ವ್ಯವಸ್ಥೆಯಲ್ಲಿ ಈ ತೆರಿಗೆಗಳ ಮೇಲೂ ತೆರಿಗೆ- Tax On Tax – ವ್ಯವಸ್ಥೆ ನಿಲ್ಲುತ್ತದೆ. ಗ್ರಾಹಕರು ಒಂದು ಹಂತದ ತೆರಿಗೆ ಕಟ್ಟಿದರೆ ಸಾಕು. ಏಕೆಂದರೆ ಉತ್ಪಾದಕರು ಹಿಂದಿನ ಹಂತದ ಈಗಾಗಲೇ ಪಾವತಿಸಲಾಗಿರುವ ತೆರಿಗೆ ಮೇಲೆ ತೆರಿಗೆ ಪಾವತಿಸಿ ಕಚ್ಚಾ ವಸ್ತು ಖರೀದಿ ಮಾಡಿದ್ದರೂ ಅವರು ಅದನ್ನು ತಮ್ಮ ಅರ್ಜಿ ಭರ್ತಿಯಲ್ಲಿ ನಮೂದಿಸಿದರೆ ಅವರಿಗೆ Input Tax Credit- ಪಾವತಿಸುವ ಮೂಲಕ ಉತ್ಪಾದಕರು ಪಾವತಿಸಿದ ಹೆಚ್ಚುವರಿ ತೆರಿಗೆಯನ್ನು ಮರಳಿಸಲಾಗುವುದು. ಆಗ ಉತ್ಪಾದಕರು ಅದನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಸರಕಿನ ಬೆಲೆ ಕುಸಿಯುವುದು ಎಂಬ ತರ್ಕವನ್ನು ಮುಂದಿಡಲಾಗಿತ್ತು. ಆದರೆ ಕಳೆದ ಎಂಟು ವರ್ಷಗಳ ಅನುಭವ ಹೇಳುವಂತೆ ಯಾವ ಕಂಪನಿಗಳು ತಮ್ಮ ಸರಕಿನ ಬೆಲೆಯನ್ನು ಕಡಿಮೆ ಮಾಡಲಿಲ್ಲ. ಬದಲಿಗೆ ತೆರಿಗೆ ದರ ಕಡಿಮೆ ತೋರಿಸಿದರೂ ಕಚ್ಚವಸ್ತು, ತಂತ್ರಜ್ನಾನ ಇತ್ಯಾದಿ ಉತ್ಪಾದಕ ವೆಚ್ಚಗಳನ್ನು ಹೆಚ್ಚು ತೋರಿಸಿದರು. ಹೀಗಾಗಿ ಜಿಎಸ್ಟಿ ವ್ಯವಸ್ಥೆ ಕೊಡಮಾಡಿದ Input Tax Credit ಅನ್ನು ಕಂಪನಿಗಳು ತಮ್ಮ ಲಾಭವನ್ನು ಹೆಚ್ಚು ಮಾಡಿಕೊಳ್ಳಲು ಬಳಸಿದರೆ ವಿನ್ನ ಬೆಲೆ ಕಡಿಮೆ ಮಾಡಿ ಗ್ರಾಹಕರಿಗೆ ವರ್ಗಾಯಿಸಲಿಲ್ಲ.
ಇದಲ್ಲದೆ ಶೇ 0-5 ರ ಗುಂಪಿನಲ್ಲಿರುವ ಸರಕುಗಳ ಉತ್ಪಾದಕರಿಗೆ Input Tax Credit ಪಡೆದುಕೊಳ್ಳುವುದು ಕಷ್ಟ ಅಥವಾ ಸಾಧ್ಯವಿಲ್ಲ. ಹೀಗಾಗಿ ಶೇ. 12 ತೆರಿಗೆ ಗುಂಪಿನಿಂದ ಯಾವ್ಯಾವ ಸೇವೆ ಮತ್ತು ಸರಕುಗಳು ಶೇ.5 ರ ದರಕ್ಕೆ ವರ್ಗಾಯಿಸಲ್ಪಟ್ಟಿವೆಯೋ ಅವು ಅಷ್ಟು ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾರವು. ಇದಲ್ಲದೆ ಈಗಾಗಲೇ ಯಾವ್ಯಾವ ಕ್ಶೇತ್ರದಲ್ಲಿ ಸರಕುಗಳು ಮಾರಾಟವಾಗದೆ ಸಂಗ್ರಹವಾಗಲ್ಪಟ್ಟಿವೆಯೋ, ನಷ್ಟ ಅನುಭವಿಸುತ್ತಿವೆಯೋ ಅಂತಾ ಕ್ಷೇತ್ರಗಳಲ್ಲಿ ಮಾತ್ರ ತಮ್ಮ್ ತೀರುವಳಿ ಮಾರಾಟದ ಭಾಗವಾಗಿ ತೆರಿಗೆ ಕಡಿತದ ಲಾಭದ ಅರ್ಧಾಂಶ ಗ್ರಾಹಕರಿಗೆ ವರ್ಗಾವಣೆ ಆಗಬಹುದು. ಮುಖ್ಯವಾಗಿ ಮೋಟಾರು ವಾಹನ, ಫ಼್ರಿಡ್ಜ್ ಇತ್ಯಾದಿಗಳು. ಇನ್ನುಳಿದಂತೆ ನಿತ್ಯಬಳಕೆಯ ಪೇಸ್ತು, ಬ್ರಶು , ಸೋಪುಗಳ ಬೆಲೆ ಇಳಿಕೆಯಾದ ಮಾತ್ರಕ್ಕೆ ಯಾರೂ ಅಗತ್ಯಕ್ಕಿಂತ ಜಾಸ್ತಿ ಖರೀದಿ ಮಾಡುವುದಿಲ್ಲ.
ಬೆಲೆ ಇಳಿಕೆಯ ಕಾನೂನನ್ನು ಸಡಿಲಗೊಳಿಸಿದ ಮೋದಿ ಸರ್ಕಾರ
ಎಲ್ಲಕ್ಕಿಂತ ಹೆಚ್ಚಾಗಿ ತೆರಿಗೆ ಇಳಿಕೆಯ ಲಾಭವನ್ನು ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಲೇ ಬೇಕೆಂಬ ಮತ್ತು ವರ್ಗಾಯಿಸದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವ ಕಠಿಣ ವ್ಯವಸ್ಥೆ ನಮ್ಮಲ್ಲಿಲ್ಲ. ಜಿಎಸ್ಟಿ ವ್ಯವಸ್ಥೆ ಜಾರಿಯಾಗಬೇಕಾದರೆ ಅದರ ಭಾಗವಾಗಿ National Anti-Profiteering Authority (NAA)ಎಂಬ ಹಲ್ಲಿಲ್ಲದ ಸಂಸ್ಥೆಯನ್ನು ಕೂಡ ರಚಿಸಲಾಗಿತ್ತು. ಆದರೆ ಅದರ ಮುಂದೆ ಯಾವುದೇ ದಾವೆಯನ್ನು ಹೂಡಲು ಹತ್ತು ಹದಿನೆಂಟು ಶರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಮೋದಿ ಸರ್ಕಾರ ಅದನ್ನು 2022 ರಲ್ಲಿ ಸಂಪೂರ್ಣವಾಗಿ ವಿಸರ್ಜಿಸಿತು.
ಅದರಲ್ಲಿನ ಕೆಲವು ಜವಾಬ್ದಾರಿಗಳನ್ನು 2022 ರಲ್ಲಿ Competition Commission Of India (CCI) ಗೆ ವರ್ಗಾಯಿಸಿತು. ಆದರೆ ಸಿಸಿಐ ವ್ಯಾಪ್ತಿ ಮತ್ತು ಸ್ವರೂಪದಲ್ಲಿ ಜಿಎಸ್ಟಿ ಮೂಲದ ಲಾಭಕೋರತನವನ್ನು ತಡೆಯುವ ಅವಕಾಶವೇ ಇರಲಿಲ್ಲ. ಹೀಗಾಗಿ 2024 ರಲ್ಲಿ ಸಿಸಿಐ ತಾನೂ ಜಿಎಸ್ಟಿ ವ್ಯಾಪ್ತಿಯ ಲಾಭಕೋರತನ ನಿಗ್ರಹ ಜವಾಬ್ದಾರಿಗಳನ್ನು ನಿರ್ವಹಿಸಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಿತು. ನಂತರ ಆ ಜವಾಬ್ದಾರಿಗಳನ್ನು ಈಗ ಜಿಎಸ್ಟಿ ಯ ಮೇಲ್ಮನವಿ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಅಂದರೆ ಸಾರದಲ್ಲಿ ಸರ್ಕಾರವು ಮಾಡುವ ತೆರಿಗೆ ಇಳಿಕೆಯ ಲಾಭವನ್ನು ಬೆಲೆ ಇಳಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುವ ಕಾನೂನು ಮತ್ತು ಪ್ರಾಧಿಕಾರವನ್ನೇ ಮೊದಿ ಸರ್ಕಾರ ಹಂತತಹಂತವಾಗಿ ನಾಶಮಾಡಿ ಕಂಪನಿಗಳ ಸುಲಿಗೆಗೆ ಸಹಾಯ ಮಾಡಿದೆ.
ಕಾಣುವ ಇಳಿಕೆಗಳು ಮತ್ತು ಕಾಣದ ಏರಿಕೆಗಳು
ಮೋದಿ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಮತ್ತು ಇತರ ಮಾಧ್ಯಮಗಳು ಅನುದ್ದಿಷ್ಯಪೂರ್ವಕವಾಗಿ ತೆರಿಗೆ ಇಳಿತದಿಂದ ಯಾವ್ಯಾವ ಬೆಲೆ ಇಳಿಯಲಿದೆಯೆಂಬ ಪಟ್ಟಿಯನ್ನು ಮಾತ್ರ ತೋರಿಸುತ್ತಿವೆ. ಅವು ಸುಳ್ಳಲ್ಲ . ಅರ್ಧ ಸತ್ಯ. ಮೋದಿ ಸರ್ಕಾರ ಕಣ್ಣಿಗೆ ಕಾಣುವ ಸರಕುಗಳ ತೆರಿಗೆ ದರವನ್ನು ಇಳಿಸಿದೆ. ಆದರೆ ಆ ಸರಕುಗಳ ಉತ್ಪಾದನೆಗೆ ಅರ್ಥಾತ್ ಉತ್ಪಾದಕ ವೆಚ್ಚಕ್ಕೆ ಬೇಕಾಗುವ ಕಚ್ಚಾವಸ್ತುಗಳ ತೆರಿಗೆ ದರವನ್ನು ಅಗಾಧವಾಗಿ ಹೆಚ್ಚಿಸಿರುವುದನ್ನು ಮರೆಮಾಚಿಸಿದೆ. ಉದಾಹರಣೆಗೆ ಎಲ್ಲಾ ಸರಕುಗಳ ಮತ್ತು ಸೇವೆಗೆ ಅತ್ಯಗತ್ಯವಾಗಿ ಬೇಕಿರುವುದು ಶಕ್ತಿ ಇಂಧನಗಳು. ವಿದ್ಯುತ್ ಉತ್ಪಾದನೆಗೆ ಬೇಕಿರುವ ಕಲ್ಲಿದ್ದಲು ಮತ್ತು ಸರಕು ಸಾಗಾಟಕ್ಕೆ ಬೇಕಿರುವ ಪೆಟ್ರೋಲಿಯಂ ವಸ್ತುಗಳು. ಇವುಗಳ ಮೇಲಿನ ತೆರಿಗೆ ಜಾಸ್ತಿಯಾದರೆ ಸಹಜವಾಗಿ ಉತ್ಪಾದಕ ವೆಚ್ಚವೇ ಹೆಚ್ಚಾಗುತ್ತದೆ. ಉತ್ಪಾದಕೆ ವೆಚ್ಚವೇ ಹೆಚ್ಚಾದಾಗ ಅಂತಿಮ ಸರಕಿನ ಮೇಲಿನ ತೆರಿಗೆ ಇಳಿಕೆಯಾಗಿದ್ದರೂ ಒಟ್ಟಾರೆ ಸರಕಿನ ಬೆಲೆ ಇಳಿಯುವುದರ ಬದಲಿಗೆ ಹೆಚ್ಚಾಗುತ್ತದೆ.
ಉದಾಹರಣೆಗೆ ಮೋದಿ ಸರ್ಕಾರ ಇಂಥ ಶಕ್ತಿ ಇಂಧನವಾದ ಕಲ್ಲಿದಲಿನ ಮೇಲಿನ ತೆರಿಗೆಯನ್ನು ಶೇ. 5 ರಿಂದ ಶೇ. 18 ಕ್ಕೆ ಹೆಚ್ಚಿಸಿದೆ. ಹಾಗೆಯೇ ಪೈಪುಗಳ ಮೂಲಕ ಸಾಗಾಟವಾಗುವ ಪೆಟ್ರೊಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನೂ ಕೂಡ ಶೇ. 5 ರಿಂದ ಶೇ. 18 ಕ್ಕೆ ಏರಿಸಿದೆ. ಈ ಮೂಲವಸ್ತುಗಳ ಮೇಲೆ ಹೆಚ್ಚಳವಾಗಿರುವ ಶೇ. 13 ರಷ್ಟು ಹೆಚ್ಚುವರಿ ತೆರಿಗೆ ಅಂತಿಮ ಸರಕಿನೆ ಬೆಲೆಯ ಮೇಲೂ ನೇರ ಪರಿಣಾಮ ಬೀರುತ್ತದೆ. ಇದಲ್ಲದೆ ಆರೋಗ್ಯ ವಿಮೆಯ ಮೇಲಿನ ತೆರಿಗೆಯನ್ನು ಶೇ. 12-18 ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಆದರೆ ದೊಡ್ಡ ದೊಡ್ಡ ಖಾಸಗಿ ಆರೋಗ್ಯ ವಿಮೆ ಕಂಪನಿಗಳು ಶೇ. 5 ರ ಗುಂಪಿನಲ್ಲಿ Input Tax Credit ಸಿಗುವುದಿಲ್ಲವೆಂದು ಕನಿಷ್ಟ ಪ್ರೀಮಿಯಂ ಅನ್ನು ಶೇ. 6-15 ರಷ್ಟು ಹೆಚ್ಚಿಸುವುದಾಗಿ ಘೋಷಿಸಿವೆ. ಮೋದಿ ಸರ್ಕಾರ ಅವುಗಳ ಮೇಲೆ ಯಾವ ಕ್ರಮವನ್ನು ತೆಗೆದುಕೊಳ್ಳದೆ ತಮಾಶೆ ನೋಡುತ್ತಿದೆ. ಇದಲ್ಲದೆ ಮೋದಿ-ತುಘಲಕ್ ತೆರಿಗೆ ಗೊಂದಲ ಈಗಲೂ ಮುಂದುವರೆದಿದೆ. ಉದಾಹರಣೆಗೆ ಆಹಾರ ಸಾಮಗ್ರಿಗಳನ್ನು ನೇರವಾಗಿ ಹೋಟೆಲ್ ನವರೇ ಡಿಲಿವರಿ ಮಾಡಿದರೆ ಶೇ. 5 ತೆರಿಗೆ. ಆದರೆ ಅದನ್ನು ZOMATO ಅಥವಾ SWIGGY ಮೂಲಕ ಪಡೆದುಕೊಂಡರೆ 5+18=23% ತೆರಿಗೆ! ಹೀಗಾಗಿ ಮೋದಿಭಕ್ತರು ಕುರುಡಾಗಿ ಚಪ್ಪಳೆ ತಟ್ಟುವ ಮುನ್ನ ಹಿಂಬಾಗಿಲಿಂದ ಕಸಿಯುತ್ತಿರುವ ವಿವರಗಳನ್ನು ಅರ್ಥಮಾಡಿಕೊಂಡರೆ ನಿಜವಾದ ದೇಶಭಕ್ತರಾಗಬಹುದು.
GST ತಿದ್ದುಪಡಿಗಳಿಂದ ಆರ್ಥಿಕತೆ ಚೇತರಿಸಿಕೊಳ್ಳುವುದೇ?
ಒಂದು ವೇಳೆ ಅಲ್ಪಸ್ವಲ್ಪ ಬೆಲೆ ಇಳಿಕೆಯಾದ ಮಾತ್ರಕ್ಕೆ ಮೋದಿ ಸರ್ಕಾರ ಕೊಚ್ಚಿಕೊಳ್ಳುತ್ತಿರುವಂತೆ ಆರ್ಥಿಕತೆ ಚೇತರಿಸಿಕೊಳ್ಳುವುದೇ? ಬೆಲೆ ಕಡಿಮೆಯಾದರೂ ಗ್ರಾಹಕರಲ್ಲಿ ಖರೀದಿ ಮಾಡುವಷ್ಟು ಆದಾಯ ಅಥವಾ ಉಳಿತಾಯ ಇರಬೇಕು. ಆದರೆ ಮೋದಿ ಸರ್ಕಾರದ ಕಾರ್ಪೊರೇಟ್ ಪರ ಆರ್ಥಿಕ ನೀತಿಗಳು, ತುಘಲಕ್ ಮಾದರಿ ನೋಟು ನಿಶೇಧ, ಜಿಎಸ್ಟಿ , ಕೋವಿಡ್ ಕಾಲದ ಲಾಕ್ ಡೌನ್ ಇತ್ಯಾದಿಗಳಿಂದಾಗಿ ಈ ದೇಶದ ಶೇ. 80 ರಷ್ಟು ಜನರ ಕೊಳ್ಳುವ ಶಕ್ತಿ ಕುಸಿದಿದೆ. ಜೀವದೊರಸೆ ಉಳಿದುಕೊಳ್ಳಲು ಆದಾಯವನ್ನು ಮಾತ್ರ ಅವರು ಗಳಿಸುತ್ತಿದ್ದಾರೆ. ಆದರೂ ಜಿಎಸ್ಟಿ ಸಂಗ್ರಹದಲ್ಲಿ ತಳಹಂತದ ಶೇ. 50 ಜನರ ಪಾಲು ಶೇ. 80 ರಷ್ಟು. ಮೇಲಿನ ಶೇ. 10 ರಷ್ಟು ಜನರು ಕಟ್ಟುವುದು ಶೇ. 3 ರಷ್ಟು ಜಿಎಸ್ಟಿ ಮಾತ್ರ. ಅಂತ ಜನವಿರೋಧಿ ತೆರಿಗೆ ವ್ಯವಸ್ಥೆಯನ್ನು ಮೋದಿ ಸರ್ಕಾರ ಸರಿಯಾದ ಪೂರ್ವ ಸಿದ್ಧತೆಯಿಲ್ಲದೆ, ಒಂದು ಯೋಜನೆಯಿಲ್ಲದೆ ಅತ್ಯಂತ ಅವೈಜ್ನಾನಿಕವಾಗಿ ಜಾರಿಗೆ ತಂದಿತು. ಇದು ಆ ವೇಳೆಗಾಗಲೇ ನೋಟು ನಿಶೇಧದ ದಾಳಿಯಿಂದ ತತ್ತರಿಸಿದ್ದ ಸಾಮಾನ್ಯ ಜನರನ್ನು, ಸಣ್ಣ ಪುಟ್ಟ ವ್ಯಾಪಾರಿ ಮತ್ತು ಉದ್ಯಮಿಗಳ ಆರ್ಥಿಕತೆಯನ್ನು ಕಂಗೆಡಿಸಿತು.
GST ತೆರಿಗೆ ವ್ಯವಸ್ಥೆಯು ಆವರೆಗೆ ರಾಜ್ಯಗಳು ವಿಧಿಸುತ್ತಿದ್ದ ವಾಣಿಜ್ಯ ಮತ್ತು ಮಾರಾಟ ತೆರಿಗೆ, ಸ್ಥಳೀಯ ಸಂಸ್ಥೆಗಳು ವಿಧಿಸುತ್ತಿದ್ದ ಆಕ್ಟ್ರಾಯ್ ತೆರಿಗೆ ಮತ್ತು ಕೇಂದ್ರವು ವಿಧಿಸುತ್ತಿದ್ದ ಎಕ್ಸೈಸ್ ತೆರಿಗೆ ಮತ್ತು ಸೇವಾ ತೆರಿಗೆಗಳನ್ನು ಏಕೀಕರಿಸಿ ಸರಕು ಮತ್ತು ಸೇವಾ ತೆರಿಗೆ ಯೆಂಬ ವ್ಯವಸ್ಥೆಯನ್ನು ರೂಪಿಸಿತು. ಅಂದರೆ ರಾಜ್ಯಗಳು ತಮ್ಮ ಸಾರ್ವಭೌಮತೆಯನ್ನು ಉಪಯೋಗಿಸಿಕೊಂಡು ಹಾಕಬಹುದಾಗಿದ್ದ ತೆರಿಗೆಯನ್ನು ಕೂಡ ಇನ್ನು ಮುಂದೆ GST ವ್ಯವಸ್ಥೆಯೇ ರೂಪಿಸುವಂತಾಯಿತು. ಇದರಿಂದ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಲು ಲಭ್ಯವಿದ್ದ ತೆರಿಗೆ ಮೂಲಗಳು ಅತ್ಯಂತ ಸೀಮಿತವಾದವು. GST ನಂತರ ಸ್ಟ್ಯಾಂಪ್ಅಂ ಡ್ ಡ್ಯುಟಿಸ್, ಅಬ್ಕಾರಿ ತೆರಿಗೆ, ವಿದ್ಯುತ್ ಮತ್ತು ಪೆಟ್ರೊಲ್ ತೆರಿಗೆಗಳನ್ನು ಬಿಟ್ಟರೆ ರಾಜ್ಯಗಳ ಬಳಿ ಪ್ರತ್ಯೇಕ ತೆರಿಗೆ ಮೂಲಗಳು ಉಳಿದಿಲ್ಲ. ಜಿಎಸ್ಟಿಯಲ್ಲಿ ಅರ್ಧಪಾಲು ರಾಜ್ಯಗಳಿಗೆ ದಕ್ಕುತ್ತದೆ. ಆದರೆ ರಾಜ್ಯಗಳು ಸ್ವತಂತ್ರವಾಗಿ ತೆರಿಗೆ ವಿಧಿಸುತ್ತಿದ್ದಾಗ ವರ್ಷದಿಂದ ವರ್ಷಕ್ಕೆ ಶೇ.14 ರಷ್ಟು ತೆರಿಗೆ ಸಂಗ್ರಹ ಹೆಚ್ಚಾಗುತ್ತಿತ್ತು. GST ತೆರಿಗೆ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಇಷ್ಟು ತೆರಿಗೆ ಹೆಚ್ಚಳವನ್ನು ಖಾತರಿ ಪಡಿಸಬೇಕೆಂದೂ, ಕೊರತೆಯುಂಟಾದರೆ ಕೇಂದ್ರವು “GST ಪರಿಹಾರ ಶುಲ್ಕವನ್ನು” ವಸೂಲಿ ಮಾಡುವ ಮೂಲಕ ಕೇಂದ್ರವೇ ರಾಜ್ಯಗಳಿಗೆ ಕನಿಷ್ಟ ಐದು ವರ್ಷಗಳ ಕಾಲ ತುಂಬಿ ಕೊಂಡಬೇಕೆಂದು ಕಾನೂನಾಯಿತು.
ಆದರೆ 2017 ರಿಂದಲೂ ಮೋದಿ ಸರ್ಕಾರ ಇದರಲ್ಲಿ ಬಿಜೆಪಿಯೇತರ ಸರ್ಕಾರಗಳಿಗೆ ತಾರತಮ್ಯ ಮಾಡುತ್ತಲೇ ಬಂದಿದೆ. , ವ್ಯವಸ್ಥೆಯ ಮಾರ್ಪಾಡುಗಳನ್ನು ತೀರ್ಮಾನ ಮಾಡುವ ಜವಾಬ್ದಾರಿಯನ್ನು ನಿರ್ವಹಿಸಲು ಎಲ್ಲಾ ರಾಜ್ಯಗಳ ಪ್ರತಿನಿಧಿಗಳೂ ಇರುವ “GST ಕೌನ್ಸಿಲ್” ರಚಿಸಲಾಗಿದ್ದರೂ, ಅದರಲ್ಲಿ ಶೇ.1/3 ರಷ್ಟು ಮತಪ್ರಾತಿನಿಧ್ಯ ಕೇಂದ್ರದ್ದು. ಹಾಗೂ GST ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ಮಾರ್ಪಾಡು ಬರಬೇಕೆಂದರೂ GST ಕೌನ್ಸಿಲ್ ನ 3/4ರಷ್ಟು ಬಹುಮತ ಕಡ್ಡಾಯ. ಎಂದರೆ ಪರೋಕ್ಷವಾಗಿ ಕೇಂದ್ರಕ್ಕೆ ವೀಟೊ ಅಧಿಕಾರವನ್ನು ನೀಡಲಾಗಿದೆ. ಇದರಲ್ಲಿ ಬದಲಾವಣೆಯಾಗದೆ ಯಾವುದೇ ಸುಧಾರಣೆ ಸಾಧ್ಯವಿಲ್ಲ. ಒಂದು ಪ್ರಗತಿಪರ ದೇಶದಲ್ಲಿ ಆದಾಯ ಇರುವರ ಮೇಲೆ ಹೆಚ್ಚು ತೆರಿಗೆ ಹಾಕಿ ಆದಾಯ ಇಲ್ಲದವರನ್ನು ತೆರಿಗೆ ಮುಕ್ತ ಮಾಡಲಾಗುತ್ತದೆ. ಆದರೆ ಒಂದು ಪ್ರಗತಿವಿರೋಧಿ ಪರೋಕ್ಷಾ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸಿ, ಅಧಿಕಗೊಳಿಸಿ, ವ್ಯವಸ್ಥಿತಗೊಳಿಸುವ GST ತೆರಿಗೆ ವ್ಯವಸ್ಥೆ ಅದರ ಸ್ವರೂಪದಲ್ಲೇ ಜನವಿರೋಧಿಯಾದದ್ದು. ಅದೂ ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡುತ್ತಾ ಹಿಂಬಾಗಿಲಿಂದ ಜನಸಾಮನ್ಯರ ಮೇಲಿನೆ ತೆರಿಗೆ ಹೆಚ್ಚಿಸುವ ಈ ಜಿಎಸ್ಟಿ ವ್ಯವಸ್ಥೆ ಜಾರಿಗೆ ಬಂದದ್ದೇ ಕಾರ್ಪೊರೇಟ್ ಬಂಡವಾಳಶಾಹಿ ಪರ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಲು.
GST ಕಡಿಮೆ ಮಾಡಿ ಸೆಸ್ ಹೆಚ್ಚಿಸುವ ಹುನ್ನಾರವೇ?
ಅದರಲ್ಲೂ ಜನರ ಆರ್ಥಿಕೆ ವ್ಯವಸ್ಥೆಯೇ ಕುಸಿಯುತ್ತಿರುವಾಗ ಮೋದಿ ಸರ್ಕಾರದ ಈ ತಿದ್ದುಪಡಿಗಳು ಪರೋಕ್ಷವಾಗಿ ಜನರನ್ನು ಮತ್ತೆ ಸುಲಿಯುವ ಉದ್ದೇಶವನ್ನೇ ಹೊಂದಿರುವಂತಿದೆ. ಏಕೆಂದರೆ ಮೋದಿ ಸರ್ಕಾರ ಈ ತಿದ್ದುಪಡಿಗಳಿಂದ 48,000 ಕೋಟಿ ತೆರಿಗೆ ನಷ್ಟವಾಗಬಹುದು ಎಂದು ಹೇಳಿದೆ. ಆದರೆ ಬೆಲೆ ಇಳಿಕೆಯಿಂದ ವಹಿವಾಟು ಜಾಸ್ತಿಯಾಗುತ್ತಾದ್ದರಿಂದ ಈ ನಷ್ಟವು ಬಹಳ ಬೇಗ ಭರ್ತಿಯಾಗಿ ಹೆಚ್ಚು ತೆರಿಗೆ ಸ್ಂಗ್ರಹವಾಗಲಿದೆ ಎಂಬ ಬಣ್ಣದ ಬಲೂನು ಬಿಟ್ಟಿದೆ. ಆದರೆ ಈಗಾಗಲೇ ಚರ್ಚಿಸಿದಂತೆ ಶೇ. 90 ಜನರ ಬಳಿ ಆದಾಯ ಮತ್ತು ಅಥವಾ ಉಳಿತಾಯವೇ ಇಲ್ಲದಿರುವಾಗ ತೆರಿಗೆ ಇಳಿಕೆಯಾದರೂ, ಅದರಿಂದ ಅಕಸ್ಮಾತ್ ಬೆಲೆ ಇಳಿಕೆಯಾದರೂ ದೊಡ್ಡ ಮಟ್ಟದ ಆರ್ಥಿಕ ಚೇತರಿಕೆ ಸಾಧ್ಯವಿಲ್ಲ. ಹಾಗಿರುವಾಗ ತೆರಿಗೆ ಸಂಗ್ರಹ ನಷ್ಟವಾಗುವುದು 48,000 ಕೋಟಿಯಲ್ಲ.2ಲಕ್ಷ ಕೋಟಿಗೂ ಹೆಚ್ಚು. ಒಂದು ಕಡೆ ಕಾರೊಪ್ರೇಟ್ ತೆರಿಗೆಯನ್ನು ಕಡಿಮೆ ಮಾಡಿರುವ ಸರ್ಕಾರ ಈ ನಷ್ಟವನ್ನು ಹೇಗೆ ತುಂಬಿಕೊಳ್ಳುತ್ತದೆ?. ಒಂದೇ ಮಾರ್ಗ . ಜಿಎಸ್ಟಿ ದರವನ್ನು ಹೆಚ್ಚಿಸದೇ ಅದರ ಮೇಲಿನ ಸೆಸ್ ಗಳನ್ನು ಹೆಚ್ಚಿಸುವುದು. ಇದು ಸಾಮಾನ್ಯರ ಹೊರೆಯನ್ನು ಹೆಚ್ಚಿಸುತ್ತದೆ ಹಾಗೆಯೇ ರಾಜ್ಯಗಳ ಪಾಲನ್ನೂ ಕಡಿಮೆ ಮಾಡುತ್ತದೆ. ಆದ್ದರಿಂದ ಭಾರತದ ಜನತೆ ಕಣ್ಣಿಗೆ ಕಂಡದನ್ನು ಯಥಾವತ್ ನಂಬದೆ ಆಳಕ್ಕೆ ಹೋಗಿ ಮೋದಿ ಸರ್ಕಾರದ ಹುನಾರವನ್ನು ಅರ್ಥಮಾಡಿಕೊಳ್ಲಬೇಕಿದೆ. ಜಿಎಸ್ಟಿ ಯ ಮೂಲಕ ಕಾಣದ ಏರಿಕೆಗಳನ್ನು, ಜಿಎಸ್ಟಿ ವ್ಯವಸ್ಥೆಯನ್ನು ವಿರೋಧಿಸಬೇಕಿದೆ.
ಪರೋಕ್ಷ ತೆರಿಗೆಯನ್ನು ಕಡಿಮೆ ಮಾಡುತ್ತಾ ಈ ದೇಶದ ಶೇ. 90 ರಷ್ಟು ಸಂಪತ್ತನ್ನು ಹೊಂದಿರುವ ದೇಶದ ಶೇ. 10 ರಷ್ಟು ಕುಬೇರರ ಮೇಲೆ ಆಸ್ತಿ ತೆರಿಗೆ, ಸಂಪತ್ತು ತೆರಿಗೆ, ಅನುವಂಶಿಕ ತೆರಿಗೆ, ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸುತ್ತಾ, ಕಾರ್ಪೊರೇಟ್ ರಾಜ್ಯದ ಬದಲು ಕಲ್ಯಾಣ ರಾಜ್ಯವನ್ನು ಕಟ್ಟಬೇಕೆಂದು ಚಳವಳಿ ಕಟ್ಟಬೇಕಿದೆ.
- ಶಿವಸುಂದರ್
ಜನಪರ ಚಿಂತಕರು, ಲೇಖಕರು


Leave a reply