ನೇಪಾಳದಲ್ಲಿ ನಡೆಯುತ್ತಿರುವ Gen-Z ನೇತೃತ್ವದ ಬಂಡಾಯ ಜಗತ್ತಿನ ಹಾಗೂ ಭಾರತದ ಎಲ್ಲಾ ಬಣ್ಣಗಳ ಪಕ್ಷಗಳಿಗೂ ಒಂದು ದೊಡ್ಡ ಪಾಠ. ಸ್ವಾರ್ಥ, ಕಾರ್ಪೊರೇಟ್ ಪರ, ನಿರಂಕುಶ ಪ್ರಭುತ್ವಗಳ ವಿರುದ್ಧ 2022 ರಲ್ಲಿ ಶ್ರೀಲಂಕಾದ ಜನತೆ ಪ್ರಾರಂಭಿಸಿದ ಸಂಗ್ರಾಮ, 2024 ರಲ್ಲಿ ಬಾಂಗ್ಲಾದೇಶದಲ್ಲಿ ಮತ್ತು ಇದೀಗ ನೇಪಾಳದಲ್ಲಿ ಪ್ರತಿಧ್ವನಿಸುತ್ತಿದೆ. ತತ್ ಕ್ಷಣದ ಕಾರಣಗಳೇನೇ ಇದ್ದರೂ ಆಳದಲ್ಲಿ ಈ ಜನ ಬಂಡಾಯಗಳು ಪ್ರಜಾತಂತ್ರದ ಮುಸುಕಿನಲ್ಲಿ ಜನರನ್ನು ಸುಲಿಯುತ್ತಿರುವ ನಿರಂಕುಶ ಹಾಗೂ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧದ ಬಂಡಾಯವೇ ಆಗಿದೆ. ಒಂದು ದಶಕದ ಹಿಂದೆ ಇದೆ ಬಗೆಯ ಜನಬಂಡಾಯಗಳು ಅರಬ್ ದೇಶಗಳನ್ನು ಆವರಿಸಿತ್ತು. 2011ರಲ್ಲಿ ಟುನಿಸಿಯಾದಿಂದ ಪ್ರಾರಂಭಗೊಂಡು, ಈಜಿಪ್ಟ್ ಅನ್ನು ತಲ್ಲಣಗೊಳಿಸಿ ಲಿಬಿಯಾವನ್ನು ಬುಡಮೇಲು ಮಾಡಿತ್ತು. ಅಲ್ಲೂ ಸಹ ತತ್ ಕ್ಷಣದ ಕಾರಣಗಳೇನೇ ಇದ್ದರೂ ಆ ಜನಬಂಡಾಯದಲ್ಲಿ ಕಾರ್ಮಿಕರು, ರೈತಾಪಿಗಳು, ಯುವಜನರು, ಕಾರ್ಮಿಕರು ಭಾಗವಹಿಸಿದ್ದರು. ಮತ್ತು ಇಸ್ಲಾಮಿನ ಹೆಸರಲ್ಲಿ ಅಮೇರಿಕನ್ ಸಾಮ್ರಾಜ್ಯಶಾಹಿ ಪರ ಬಂಡವಾಳಶಾಹಿ ಆಡಳಿತ ವ್ಯವಸ್ಥೆ ನಡೆಸುತ್ತಿದ್ದ ಅಪರಿಮಿತ ಶೋಷಣೆಯ ವಿರುದ್ಧ ಬಂಡೆದ್ದಿದ್ದರು.
ಆದರೆ Arab Spring ನಿರೀಕ್ಷಿತ ವಸಂತ ಋತುವನ್ನು ತರಲಿಲ್ಲ. ಆ ಬಂಡಾಯಗಳ ಹುಟ್ಟು ಬಂಡವಾಳಶಾಹಿ ಮತ್ತು ಅರೆ ಉಳಿಗಮಾನ್ಯಶಾಹಿ ವ್ಯವಸ್ಥೆಯ ಶೋಷಣೆಯ ವಿರುದ್ಧವೇ ಆಗಿದ್ದರು , ಆ ಬಂಡಾಯಗಳು ಅವುಗಳನ್ನು ನಾಶ ಮಾಡಿ ಜನಮುಖಿ ಮತ್ತು ಸಮಬಾಳು ಸಮಾಪಾಲಿನ ವ್ಯವಸ್ಥೆಯನ್ನು ಹುಟ್ಟುಹಾಕುವ ಕ್ರಾಂತಿಗಳಾಗಿ ಪರಿಣಮಿಸಲಿಲ್ಲ. ಹೀಗಾಗಿ ಮತ್ತೆ ಅಮೇರಿಕ ಬೆಂಬಲಿತ ಸ್ಥಳೀಯ ಹೊಸ ದಲ್ಲಾಳಿಗಳ ಆಡಳಿತವೇ ಅಧಿಕಾರ ವಶಪಡಿಸಿಕೊಂಡು ಹಳೆಯ ಧಾರ್ಮಿಕ ಸರ್ವಾಧಿಕಾರಿ ಬಂಡವಾಳಶಾಹಿ ವ್ಯವಸ್ಥೆಯನ್ನೇ ಮುಂದುವರೆಸಿವೆ. ಅದೇ ಬಗೆಯ ಸೂಚನೆಗಳು ಕಳೆದ ಮೂರು ವರ್ಷಗಳಿಂದ ದಕ್ಷಿಣ ಏಷಿಯಾದಲ್ಲಿ ನಡೆಯುತ್ತಿರುವ ಬಂಡಾಯಗಳ ನಂತರದ ಆಡಳಿತದಲ್ಲೂ ಕಾಣುತ್ತಿವೆ.
ದಕ್ಷಿಣ ಏಷಿಯಾದಲ್ಲೂ ವಸಂತ ಪಲ್ಲವಿಸಿಲಿಲ್ಲವೇಕೆ?
2022ರ ಜನಬಂಡಾಯದ ನಂತರ ಶ್ರೀಲಂಕಾದಲ್ಲಿ ಸಮಾಜವಾದಿ ಆಶಯದ ಪಕ್ಷವೇ ಅಧಿಕಾರಕ್ಕೆ ಬಂದರೂ ಅಂತರರಾಷ್ಟ್ರೀಯ ಬಂಡವಾಳಶಾಹಿಗಳ ಜೊತೆ ಮತ್ತು ಸ್ಥಳೀಯ ಹಳೆಯ ಆಳುವ ವರ್ಗಗಳ ಜೊತೆ ಸರ್ಕಾರದ ಸಂಬಂಧ ಗಳಲ್ಲಿ ಯಾವುದೇ ಗುಣಾತ್ಮಕ ಬದಲಾವಣೆಯಾಗಿಲ್ಲ. ಆದ್ದರಿಂದಲೇ ಶ್ರೀಲಂಕಾ ಜನರ ಬದುಕಿನ ಬಿಕ್ಕಟ್ಟಗಳಲ್ಲೂ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. 2024ರ ಆಗಸ್ಟ್ ಕ್ರಾಂತಿಯ ಮೂಲಕ ಬಾಂಗ್ಲಾ ದೇಶದ ಜನತೆ ಸರ್ವಾಧಿಕಾರಿ ಶೇಕ್ ಹಸೀನಾ ರನ್ನು ದೇಶಭ್ರಷ್ಟಗೊಳಿಸಿ ಎರಡನೇ ಸ್ವಾತಂತ್ರ್ಯವನ್ನು ಪಡೆದುಕೊಂಡೆವೆಂದು ಬೀಗಿದ್ದು ನಿಜ. ಆದರೆ ಬಂಡಾಯದ ನಂತರ ಆಡಳಿತದ ಚುಕ್ಕಾಣಿ ಹಿಡಿದವರು ಹಳೆಯ ಆಡಳಿತದ ಚುಕ್ಕಾಣಿ ಹಿಡಿದವರ ಮೇಲೆ ಸೇಡು ತೀರಿಸಿಕೊಳ್ಳುವುದನ್ನೇ ಕ್ರಾಂತಿ ಎಂದು ಜನರನ್ನು ಬಿಂಬಿಸುವಲ್ಲಿ ತಲ್ಲೀನರಾಗಿದ್ದಾರೆ. ಮತ್ತೊಂದು ಕಡೆ ಜನರ ಬಂಡಾಯಕ್ಕೆ ಕಾರಣವಾಗಿದ್ದ ನಿರುದ್ಯೋಗ , ಬಡತನ ಮತ್ತು ಅದಕ್ಕೆ ಕಾರಣವಾಗಿದ್ದ ಕ್ರೋನಿ ಬಂಡವಾಳಶಾಹಿ ವ್ಯವಸ್ಥೆಯ ಜೊತೆ ಮತ್ತು ಅವರ ಅಂತರರಾಷ್ಟ್ರೀಯ ದೊರೆಗಳ ರಾಜಿ ಮಾಡಿಕೊಂಡಿದ್ದಾರೆ. .
ನೇಪಾಳದ ಭ್ರಮ ನಿರಸನ ಮತ್ತು ಜನ ಬಂಡಾಯ
ಇದೀಗ ಮೊನ್ನೆಯಿಂದ ನೇಪಾಳದಲ್ಲಿ ಅಧಿಕಾರದಲ್ಲಿದ್ದ ಎಲ್ಲಾ ಪಕ್ಷಗಳ ವಿರುದ್ಧವೂ ಜನರ ಆಕ್ರೋಶ ಸಿಡಿದೆದ್ದಿದೆ. ಅಲ್ಲಿನ ವಿವಿಧ ಬಗೆಯ ಕಮ್ಯುನಿಸ್ಟ್ ಪಕ್ಷಗಳು ಮತ್ತು ನೇಪಾಳಿ ಕಾಂಗ್ರೆಸ್ ಪಕ್ಷಗಳು ಒಬ್ಬರ ನಂತರ ಒಬ್ಬರು ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರದಲ್ಲಿ ಮಾತ್ರ ಒಬ್ಬರನ್ನೊಬ್ಬರು ಮೀರಿಸುತ್ತಿದ್ದರು. ಅದರಲ್ಲೂ 1990ರಿಂದ ನೇಪಾಳ ದ ಗ್ರಾಮೀಣ ಹಾಗೂ ನಗರದ ಪ್ರದೇಶಗಳ ಶ್ರಮಜೀವಿಗಳನ್ನು ಸಾಯುಧವಾಗಿ ಸಂಘಟಿಸಿ ನೇಪಾಳದ ಅರಸೊತ್ತಿಗೆ , ಊಳಿಗಮಾನ್ಯ ಭೂಮಾಲೀಕರು ಮತ್ತು ಬಂಡವಾಳಶಾಹಿಗಳ ವಿರುದ್ಧ ನೇಪಾಳದ ಮಾವೋವಾದಿ ಪಕ್ಷ ಯಶಸ್ವಿ ಸಾಯುಧ ಜನಸಂಗ್ರಾಮ ನಡೆಸಿ ಅರಸೊತ್ತಿಗೆಯನ್ನು ಅಧಿಕಾರದಿಂದ ಕಿತ್ತೊಗೆದಿತ್ತು. ಮಾವೋವಾದಿ ಜನಸಂಗ್ರಾಮದ ಕಾರಣದಿಂದಾಗಿಯೇ ಊಳಿಗಮಾನ್ಯ ಅರಸೊತ್ತಿಗೆಯ ನೇಪಾಳ 2008 ರಲ್ಲಿ ಒಂದು ಪ್ರಜಾತಾಂತ್ರಿಕ ಗಣರಾಜ್ಯವಾಯಿತು. ಮತ್ತು ಮಾವೋವಾದಿಗಳು ಸಹ ಶಸ್ತ್ರಾಸ್ತ್ರಗಳನ್ನು ಗಣರಾಜ್ಯಕ್ಕೆ ಒಪ್ಪಿಸಿ ಚುನಾವಣಾ ಪ್ರಜಾತಂತ್ರದಲ್ಲಿ ಭಾಗವಹಿಸಿದರು.
ವಾಸ್ತವದಲ್ಲಿ ಆವರೆಗೆ ಒಂದಲ್ಲ ಒಂದು ಬಗೆಯ ಅಧಿಕಾರದಲ್ಲಿದ್ದ ನೇಪಾಳಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಬಗ್ಗೆ ಭ್ರಮ ನಿರಾಸನಗೊಂಡಿದ್ದ ನೇಪಾಳಿ ಜನತೆ ಬದಲಾವಣೆಯನ್ನು ನಿರೀಕ್ಷಿಸಿ ಮಾವೋವಾದಿ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಿದರು. ಆದರೆ ಈ ಮಾಜಿ ಮಾವೋವಾದಿ ಕ್ರಾಂತಿಕಾರಿಗಳು ಸಹ ಚುನಾವಣ ರಾಜಕಾರಣದ ಭ್ರಷ್ಟಾಚಾರ ಮತ್ತು ಅವಕಾಶವಾದಿ ಕೆಸರನ್ನು ಮೈತುಂಬಾ ಅಂಟಿಸಿಕೊಂಡು ಇತರ ಪಕ್ಷಗಳಂತೆ ನೇಪಾಳಿ ಜನರಿಗೆ ಭ್ರಮ ನಿರಸನ ಉಂಟು ಮಾಡಿದರು. 2008ರಿಂದ ಇಂದಿನವರೆಗೆ ಮಾವೋವಾದಿಗಳು, ನೇಪಾಳಿ ಕಾಂಗ್ರೆಸ್ ಮತ್ತು ನೇಪಾಳಿ ಕಮ್ಯುನಿಸ್ಟ್ ಪಕ್ಷಗಳು ತಮ್ಮ ತಮ್ಮ ನಡುವೆ ಅವಕಾಶವಾದಿ ಹೊಂದಾಣಿಕೆ ಮಾಡಿಕೊಂಡು ಅಧಿಕಾರದಲ್ಲಿರಲು ಎಲ್ಲಾ ತಂತ್ರ ಕುತಂತ್ರಗಳನ್ನು ನಡೆಸುತ್ತಾ ಹೋದರೆ ವಿನಾ ನೇಪಾಳಿ ವ್ಯವಸ್ಥೆಯನ್ನು ಜನಸ್ನೇಹಿ ಮತ್ತು ಸಮದರ್ಶಿ ಮಾಡುವ ಪ್ರಯತ್ನಗಳನ್ನೇ ಮಾಡಲಿಲ್ಲ. ಹೀಗಾಗಿಯೇ ಬೇಸತ್ತಿದ್ದ ನೇಪಾಳಿ ಜನರು 2022 ರ ಚುನಾವಣೆಗಳಲ್ಲಿ ಹಿಂದಿನ ಅರಸೊತ್ತಿಗೆಯನ್ನೇ ವಾಪಸ್ ತರಬೇಕೆಂದು ಆಗ್ರಹಿಸುತ್ತಿದ್ದ ರಾಷ್ಟ್ರೀಯ ಸ್ವತಂತ್ರ ಪಕ್ಷಕ್ಕೂ ಶೇ. 10 ರಷ್ಟು ಮತಗಳನ್ನು ನೀಡಿದ್ದರು. ಅದರ ನಾಯಕ ರಬಿ ಲಮಿಕ್ಶಣೆ ಯೇ ಈಗ ನೇಪಾಳದ ಭಾವೀ ಪ್ರಧಾನಿಯಾಗಬಹುದೆಂಬ ನಿರೀಕ್ಷೆಯಿದೆ. ಹಾಗೆಯೇ ಈಗ ಕಟ್ಮಂಡುವಿನ ಮೇಯರ್ ಆಗಿರುವ ಬಲೆಂದ್ರ ಶಾ ಹೆಸರೂ ಕೂಡ ಕೇಳಿ ಬರುತ್ತಿದೆ. ಇಬ್ಬರೂ ಕೂಡ ಭಾರತದ ಮೋದಿ ಸರ್ಕಾರಕ್ಕೆ ಪ್ರಿಯರು. ಹಾಗೂ ಆ ಮೂಲಕ ಅಮೆರಿಕಕ್ಕೂ!
ಆಡಳಿತ ಬದಲಾಗಬಹುದು, ವ್ಯವಸ್ಥೆ?
ಆಳುವ ವರ್ಗಗಳ ವಿರುದ್ಧ ನೇಪಾಳಿ ಜನತೆಯ ಆಕ್ರೋಶ ಕಳೆದೆರೆಡು ದಿನಗಳಲ್ಲಿ ಸಾಕಷ್ಟು ಉಗ್ರವಾಗಿ ಮತ್ತು ವ್ಯಗ್ರವಾಗಿ ವ್ಯಕ್ತವಾಗಿದೆ. ಭೀಭತ್ಸ ಎನಿಸಿದರೂ , ಗುಂಪು ಹಿಂಸಾಚಾರ ಎನಿಸಿದರೂ ಮತ್ತವು ಅಪೇಕ್ಷಣೀಯವಲ್ಲವಾದರೂ , ಅವು ಏಕಕಾಲದಲ್ಲಿ ಆಳುವ ವರ್ಗ ಜನತೆಯ ಮೇಲೆ ಮಾಡಿರುವ ಶೋಷಣೆಯ ಕ್ರೂರತೆಯನ್ನು ಮತ್ತು ಅದರ ವಿರುದ್ಧ ಜನರಲ್ಲಿ ಮಡುಗಟ್ಟಿದ್ದ ಹತಾಶೆಯ ಮಾಪನಗಳೇ ಆಗಿವೆ. ಇದೀಗ ಸೇನೆಯು ಬೀದಿಗಿಳಿದಿದ್ದು ಹಿಂಸಾಚಾರ ಗಳು ನಿಧಾನಕ್ಕೆ ಕಡಿಮೆಯಾಗುತ್ತಾ ಹೊಗಬಹುದು. ನೇಪಾಳದ ಅಧ್ಯಕ್ಷರು ಸೇನೆಯ ಸಮಕ್ಷಮದಲ್ಲಿ ಬಂಡಾಯದ ನಾಯಕರ ಜೊತೆ ಮಾತುಕತೆಯಾಡಲು ಮುಂದಾಗಿದ್ದಾರೆ. ಹಳೆಯ ಯಾವ ಪಕ್ಷಗಳೂ ಈ ಮಾತುಕತೆಯಲ್ಲಿ ಸದ್ಯಕ್ಕೆ ಭಾಗಿಯಾಗಲಾರವು. ಹೀಗಾಗಿ ಹಳೆಯ ನಿರಂಕುಶ ಮತ್ತು ಸ್ವಾರ್ಥ ನಾಯಕತ್ವವನ್ನು ಹೊರಗಿಡುವಲ್ಲಿ ಈ ಬಂಡಾಯ ಯಶಸ್ವಿಯಾಗಬಹುದು. ಆದರೆ ಜನರ ಬದುಕಿನ ಹತಾಶೆಗಳಿಗೆ ಕಾರಣವಾದ ನೇಪಾಳದ ಅವಲಂಬಿತ ಬಂಡವಾಳಶಾಹಿ ಮತ್ತು ಇನ್ನೂ ಗಟ್ಟಿಯಗೇ ಇರುವ ಊಳಿಗಮಾನ್ಯ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆ ಬದಲಾಗದೆ ನೇಪಾಳ ನಿಜಕ್ಕೂ ಪ್ರಜಾತಂತ್ರೀಕರಣವಾಗಬಹುದೇ? ಈ ಬಂಡಾಯದ ಮೂಲಕ ಮುಂಚೂಣಿಗೆ ಬಂದಿರುವ ರಭಿಯವರ ರಾಷ್ಟ್ರೀಯ ಸ್ವತಂತ್ರ ಪಾರ್ಟಿ ನೇಪಾ್ಳವನ್ನು ಅರಸೊತ್ತಿಗೆಗೆ ಕೊಡೊಯ್ಯುವ ಊಳಿಗಮಾನ್ಯ ಶಕ್ತಿಗಳ ಪ್ರತಿನಿಧಿ.
ಕಟ್ಮಂಡುವಿನ ಮೇಯರ್ ನವ ಉದಾರವಾದಿ-ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯ ಮೂಲಕ ನೇಪಾಳವನ್ನು ಅಧುನೀಕರಿಸಬೇಕೆಂಬ ಯೋಜನೆ ಇರುವ ಕಾರ್ಪೊರೇಟ್ ಕನಸಿಗ. ವಾಸ್ತವದಲ್ಲಿ ನೇಪಾಳದ ರಾಜಕೀಯ ವ್ಯವಸ್ಥೆಯ ಭ್ರಷ್ತಾಚಾರಕ್ಕೆ ಈ ಆರ್ಥಿಕ ನೀತಿಗಳೇ ಕಾರಣ. ಅದನ್ನು ಬದಲಿಸಬೇಕೆಂಬ ದರ್ದು ಹಿಂದಿನ ನಾಯಕತ್ವಕ್ಕೂ ಇರಲಿಲ್ಲ . ಹೊಸ ನಾಯಕತ್ವಕ್ಕೂ ಇಲ್ಲ. ಉಳಿದಂತೆ ಬೀದಿಯಲ್ಲಿ ಹೋರಾಟ ಮಾಡುತ್ತಿರುವ ನವ ಯುವ ಜನತೆಗೆ ಸದ್ಯಕ್ಕೆ ಈ ಆಳದ ವಿಷಯಗಳು ಅಪ್ರಸ್ತುತ. ಏಕೆಂದರೆ ಸಮಾಜವಾದಿ ಸಮಾಜಮುಖಿ ಬದಲಾವಣೆಯನ್ನು ಅಜೆಂಡಾ ಮಾಡುವ ಜನಸಂಘಟನೆ ಇಲ್ಲ. ಅಂತಾ ನುಡಿಗಟ್ಟುಗಳನ್ನು ಬಳಸುತ್ತಾ ಹಿಂದೊಮ್ಮೆ ಜನರನ್ನು ಸಂಘಟಿಸಿದ್ದ ಕಮ್ಯುನಿಸ್ತ್ ಮತ್ತು ಮಾವೋವಾದಿ ಪಕ್ಷಗಳು ಈಗ ಉಳಿದವರಷ್ಟೇ ಭ್ರಷ್ಟರೆಂದು ಸಾಬೀತು ಮಾಡಿಬಿಟ್ಟಿದ್ದಾರೆ. ಇದರ ಮಧ್ಯೆ ಚೀನಾ ಮತ್ತು ಭಾರತವೆಂಬ ಎರಡು ಬೃಹತ್ ರಾಷ್ಟ್ರಗಳ ಮಧ್ಯೆ ಅಕ್ಷರಶಃ ಸಿಲುಕಿಕೊಂಡಿರುವ ನೇಪಾಳದ ರಾಜಕೀಯ ಮತ್ತು ಭವಿಷ್ಯದ ಮೇಲೆ ಈ ಎರಡೂ ದೇಶಗಳ ಪ್ರಭಾವ ಮತ್ತು ಮಧ್ಯ ಪ್ರವೇಶ ಇದ್ದೇ ಇರುತ್ತದೆ.
ವಾಸ್ತವದಲ್ಲಿ ರಾಜಸತ್ತೆಯನ್ನು ವಾಪಸ್ ತರಬೇಕೆಂದು ರಾಷ್ಟ್ರೀಯ ಸ್ವತಂತ್ರ ಪಾರ್ತಿ ನಡೆಸಿದ ಮೆರವಣಿಗೆಗಳಲ್ಲಿ ದಕ್ಷಿಣ ನೇಪಾಳಕ್ಕೆ ಅಂಟಿಕೊಂಡಿರುವ ಭಾರತದ ಉತ್ತರ ಪ್ರದೇಶದ ಉಗ್ರ ಹಿಂದೂತ್ವವಾದಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥನ ಫ಼ೋಟೊಗಳು ರಾರಾಜಿಸುತ್ತಿದ್ದವು. ಮತ್ತೊಂದು ಕಡೆ ಅರಸೊತ್ತಿಗೆಯನ್ನು ನಿರಾಕರಿಸುವ ಶಕ್ತಿಗಳಲ್ಲಿ ಭಾರತ ವಿರೋಧಿ ನಿಲುವು ಗಟ್ಟಿಯಾಗಿದೆ. ಇದಲ್ಲದೆ ಬೃಹತ್ ಶಕ್ತರಾಷ್ಟ್ರವಾದ ಚೀನಾ, ನೇಪಾಳದಲ್ಲಿ ಬೃಹತ್ ಹೂಡಿಕೆಯನ್ನು ಮಾಡಿದೆ . ನೇಪಾಳಿ ಸೇನೆಯ ಆಧುನೀಕರಣ ಮತ್ತು ರಕ್ಷಣಾ ವಿಷಯಗಳಲ್ಲೂ ಚೀನಾದ ಆಸಕ್ತಿ ಮತ್ತು ಹೂಡಿಕೆ ಇದೆ. ಹಾಗೆ ನೋಡಿದರೆ ಈ ದೊಡ್ಡ ಮಟ್ಟದ ಹೂಡಿಕೆಗಳಿಗೆ ಬೇಕಾದ ರಾಜಕೀಯ ಸಮ್ಮತಿಯನ್ನು ಕೊಡುವ ಪ್ರಕ್ರಿಯೆಯೇ ಕೋಟ್ಯಂತರ ಭ್ರಷ್ಟಾಚಾರದ ಗಂಗೋತ್ರಿ. ಹೀಗಾಗಿ ಬಂಡಾಯೋತ್ತರ ನೇಪಾಳದಲ್ಲಿ ಚೀನಾದ ಮಧ್ಯಪ್ರವೇಶವೂ ಇದ್ದೇ ಇರುತ್ತದೆ.
ನೇಪಾಳದ ಆಳುವ ಸರ್ಕಾರಗಳಿಂದ ಚೀನಾಗೆ ಸಿಗುವ ಮದ್ದತು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ನೇಪಾಳದಲ್ಲಿಅಮೆರಿಕಾದ ನೂರಾರು NGO ಗಳು ಕೆಲಸ ಮಾಡುತ್ತಿವೆ. ಅವರಲ್ಲಿ ಹಲವಾರು NGO ಗಳು ಈ ಬಂಡಾಯದಲ್ಲೂ ಸಕ್ರಿಯ ಪಾತ್ರ ವಹಿಸಿವೆ. ಹೀಗಾಗಿ ನೇಪಾಳದ ಬಂಡಾಯ ಸ್ಪೋಟಕ್ಕೆ ನೇಪಾಳದ ಆಳುವ ವರ್ಗಗಳ ವಿರುದ್ಧ ಅಲ್ಲಿನ ಜನರ ಹುಗಿದಿಟ್ಟ ಆಕ್ರೋಶವೇ ಮೊದಲ ಹಾಗೂ ಅಂತಿಮ ಕಾರಣವಾಗಿದ್ದರೂ, ನೇಪಾಳದ ಮುಂದಿನ ಭವಿಷ್ಯ ರೂಪುಗೊಳ್ಳುವಲ್ಲಿ ನೇಪಾಳಿ ಜನರು ಹಲವಾರು ಅಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಎದುರಿಸ ಬೇಕಿದೆ. ಆದರೆ ನೇಪಾಳದ ಜನರು 1950, 1980, 1990, 2006 ರಲ್ಲಿ ಜಗತ್ತೇ ನಿಬ್ಬೆರಗಾಗುವಂತೆ ಬೃಹತ್ ಕ್ರಾಂತಿಗಳನ್ನು ಮಾಡಿ ತೋರಿದ್ದಾರೆ. ಈಗ ಹೊಸ ನೇಪಾಳಕ್ಕೆ ಹೊಸ ಸಮಾಜವಾದಿ ನಾಯಕತ್ವದ ಅಗತ್ಯವಿದೆ. ಹಳೆಯ ಮಾವೋವಾದಿ ಮತ್ತು ಕಮ್ಯುನಿಸ್ಟ್ ನಾಯಕರುಗಳು ಈಗಲಾದರೂ ತಮ್ಮ ಈ ಅವನತಿಯ ವೈಯಕ್ತಿಕ, ರಾಜಕೀಯ ಬೇರುಗಳನ್ನು ಕಿತ್ತೊಗೆದು ಮುಂದೆ ಬಂದರೆ ಅವರ ಅನುಭವದ ಲಾಭ ಹೊಸ ನಾಯಕತ್ವಕ್ಕೆ ಸಿಗಬಹುದು. ಆದರೆ ಅಂತ ಆವಕಾಶ ಬಹಳ ಕಡಿಮೆ. ಅದೇನೇ ಇರಲಿ ಬಂಡಾಯೋತ್ತರ ನೇಪಾಳ , ಬಾಂಗ್ಲಾದಂತೆ, ಶ್ರೀಲಂಕಾದಂತೆ ಇನ್ನು ಹಲವಾರು ಭ್ರಮ ನಿರಸನ ಹಾಗೂ ಬಂಡಾಯಗಳ ದಾರಿಯನ್ನು ಹಾದು ಹೋಗಬೇಕಿದೆ. ಇದಲ್ಲೆದರ ನಡುವೆ ಭಾರತದ ಜನರು ಮೋದಿ ಸರ್ಕಾರವು ನೇಪಾಳದ ಅಂತರಿಕ ವಿಶಯಗಳಲ್ಲಿ ದೊಡ್ಡಣ್ಣನಂತೆ ಮೂಗು ತೂರಿಸಬಾರದೆಂದು ಆಗ್ರಹಿಸಬೇಕಿದೆ.
ಅದಕ್ಕಿಂತ ಮುಖ್ಯವಾಗಿ ನೇಪಾಳದ ಈ ಬಂಡಾಯದಿಂದ ಭಾರತ ಒಂದು ಅತಿಮುಖ್ಯ ಪಾಠ ಕಲಿಯಬೇಕಿದೆ: ಆಳುವವರ್ಗಗಳ ಭ್ರಷ್ಟಾಚಾರದ ವಿರುದ್ಧ ಬಂಡಾಯ ನಡೆವ ದೇಶಗಳಲ್ಲಿ.. ಪ್ರಜ್ಞಾವಂತ ಜನರು ಮತ್ತು ಪ್ರಜಾತಾಂತ್ರ ಉಸಿರಾಡುತ್ತಿವೆ ಎಂದರ್ಥ… ಕಡುಭ್ರಷ್ಟ -ದುಷ್ಟಕೂಟವನ್ನೇ
ಮತ್ತೆ ಮತ್ತೆ ಆಯ್ಕೆ ಮಾಡುವ ದೇಶದಲ್ಲಿ ಪ್ರಜ್ಞಾವಂತ ಜನರಿಗಿಂತ ಅಂಧಭಕ್ತರು ಹೆಚ್ಚಿರುತ್ತಾರೆ.. ಮತ್ತು ಆ ದೇಶದಲ್ಲಿ ಪ್ರಜಾತಂತ್ರದ ಬದಲು ಫ್ಯಾಶಿಸಮ್ ನೆಲೆಯೂರಿರುತ್ತದೆ… ಎಂದರ್ಥ… ಅಲ್ಲವೇ?
- ಶಿವಸುಂದರ್
ಜನಪರ ಚಿಂತಕರು, ಲೇಖಕರು


Leave a reply