ಮಹಿಳೆಯರನ್ನು ಗುಲಾಮರನ್ನಾಗಿ ಮಾಡಿ, ಅವರನ್ನು ಪಾತಿವ್ರತೆಯ ಸ್ಥಿತಿಗೆ ಇಳಿಸಿ, ಅಡುಗೆ ಮನೆಯ ಮೊಲಗಳನ್ನಾಗಿ ಮಾಡಿದ್ದು ಧಾರ್ಮಿಕ ಪರಿಕಲ್ಪನೆಗಳೇ. ಮಹಿಳೆಯರನ್ನು ಬುರ್ಖಾ ಧರಿಸುವಂತೆ ಒತ್ತಾಯಿಸಿದ ಧರ್ಮಗಳು ಅವರನ್ನು ಎಂದಿಗೂ ಮನುಷ್ಯರಂತೆ ನೋಡಿಲ್ಲ. ನಾವು ಪ್ರಗತಿಯನ್ನು ಅನುಭವಿಸುತ್ತಿರುವ ಈ 21 ನೇ ಶತಮಾನವನ್ನು ತಲುಪಿದ ನಂತರವೂ ಮಹಿಳೆಯರ ಸ್ಥಿತಿ ಸುಧಾರಿಸಿಲ್ಲ. ಒಂದು ಕಾಲದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಹ ಇರಲಿಲ್ಲ. ಅವರು ಉದ್ಯೋಗ ಮಾಡುವಾಗಲೂ ಪುರುಷರಿಗೆ ಸಮಾನವಾದ ವೇತನ ಸಿಗಲಿಲ್ಲ. ಕೂಲಿ ಕೆಲಸದಲ್ಲಿಯೂ ಸಹ ಸಮಾನ ಕೆಲಸಕ್ಕೆ ಸಮಾನವಾದ ವೇತನ ಸಿಗಲಿಲ್ಲ. ಇಂತಹ ಅನೇಕ ಸಾಮಾಜಿಕ ಅನ್ಯಾಯಗಳಿಗೆ ಮೂಲ ಕಾರಣ ಧಾರ್ಮಿಕ ಭಾವನೆಗಳು ಮತ್ತು ತಿಳುವಳಿಕೆಯ ಕೊರತೆಯಾಗಿದೆ. ಮಹಿಳಾ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಸುತ್ತಿಬರಬಹುದು, ಆದರೆ ಅವರು ದೇವಾಲಯಗಳನ್ನು ಪ್ರವೇಶಿಸಲು ಸಾಧ್ಯವಿಲ್ಲ. ನಮ್ಮ ಭಾರತೀಯ ಮಹಿಳಾ ವಿಜ್ಞಾನಿಯನ್ನು ರಾಯಲ್ ಸೊಸೈಟಿ ಗುರುತಿಸಿದೆ, ಆದರೆ ಕೆಲವು ಪ್ರದೇಶಗಳಲ್ಲಿ ಇನ್ನೂ ಹುಲ್ಲಿನ ಗುಡಿಸಲುಗಳೇ ಇವೆ.
ಅವರು ಅರ್ಧನಾರೀಶ್ವರನನ್ನು ಸೃಷ್ಟಿಸಿಕೊಂಡು, ವ್ಯರ್ಥ ಪೂಜೆಗಳನ್ನು ಮಾಡುತ್ತಾರೆಯೇ ವಿನಃ, ಕುಟುಂಬ ವ್ಯವಸ್ಥೆಯನ್ನು ಬಲಿಷ್ಠವಾಗಿಡಲು ತಮ್ಮ ಪೂರ್ಣ ಸಮಯವನ್ನು ಮೀಸಲಿಡುವ ಮಹಿಳೆಯರನ್ನು ಮಾತ್ರ ಹಗುರವಾಗಿಯೇ ನೋಡುತ್ತಾರೆ. ದೇವರ ಪರಿಕಲ್ಪನೆಯಲ್ಲಿ ಮುಳುಗಿರುವ ಎಲ್ಲಾ ಧರ್ಮಗಳು ಒಟ್ಟಾಗಿ ಮಹಿಳೆಯರನ್ನು ವಿವಿಧ ರೀತಿಯ ದಬ್ಬಾಳಿಕೆಗೆ, ಶೋಷಣೆಗೆ ಒಳಪಡಿಸಿವೆ. ಪುರುಷ ಹೊರಗಡೆ ತನ್ನ ಜೀವನವನ್ನು ಆಳುವ ಮಾಲಿಕರಿಂದ ದಬ್ಬಾಳಿಕೆಗೆ ಒಳಗಾಗಿದ್ದರೆ, ಮಹಿಳೆ ಹೊರಗೆ ಆಳುವ ಮಾಲಿಕರಿಂದ ಮತ್ತು ಮನೆಯಲ್ಲಿ ಪುರುಷರಿಂದ ದಬ್ಬಾಳಿಕೆಗೆ ಗುರಿಯಾಗುತ್ತಾಳೆ. ಬಲಿಷ್ಠ ಶ್ರೀಮಂತ ವರ್ಗಗಳ ಮೇಲಿನ ಅಸಮಾಧಾನ ಮತ್ತು ಸಿಟ್ಟನ್ನು ಎಲ್ಲಿಯೂ ಹೊರಹಾಕಲು ಸಾಧ್ಯವಾಗದೇ, ಪುರುಷ ಅದನ್ನು ಮನೆಯಲ್ಲಿರುವ ಮಹಿಳೆಯ ಮೇಲೆ ತೀರಿಸಿಕೊಳ್ಳವುದು ನಡೆಯುತ್ತಿದೆ. ಮೇಲ್ಜಾತಿಯವರು ಮಹಿಳೆಯರಿಗಾಗಿ ರಚಿಸಿದ ಕಟ್ಟುಪಾಡುಗಳನ್ನು ಇತರೆ ಬಲಾಢ್ಯ ವರ್ಗದವರು, ತುಳಿತಕ್ಕೊಳಗಾದ ವರ್ಗದವರು ಸಹ ಅನುಸರಿಸುತ್ತಿದ್ದಾರೆ. ಮೇಲ್ಜಾತಿಯವರನ್ನು ಶ್ರೇಷ್ಠರೆಂದು ಪರಿಗಣಿಸಿ, ಅವರ ಮಾರ್ಗದಲ್ಲಿಯೇ ನಡೆಯಬೇಕೆಂದು ಉಳಿದವರೆಲ್ಲರೂ ಭಾವಿಸಿದರು. ಈ ಅನುಕರಣೆ ಹೀಗೆ ಮುಂದುವರೆಯಿತು. ಇದು ಪರಕೀಯತೆಯಾಯಿತು. ಶ್ರೇಷ್ಠರಂತೆ ತಾವೂ ಬದುಕುವ ಬಯಕೆಯೇ ಪರಕೀಯತೆ.
ದಮನಿತ ವರ್ಗಗಳು ಶಿಕ್ಷಣ ಮತ್ತು ಬುದ್ಧಿವಂತಿಕೆಯಿಂದ ವಂಚಿತರಾಗಿ ಮೇಲ್ಜಾತಿಯವರನ್ನು ಕುರುಡಾಗಿ ಅನುಸರಿಸಿದರು. ಅವರು ಪೂಜಿಸುವ ದೇವರುಗಳನ್ನು ತಮ್ಮದೇ ದೇವರುಗಳೆಂದು ಪರಿಗಣಿಸಿದರು. ಅವರ ಪದ್ಧತಿಗಳು ಮತ್ತು ಆಚರಣೆಗಳನ್ನು ಸಹ ತಮ್ಮವೇ ಎಂದು ಭಾವಿಸಿದರು. ಅವರು ಹಾಗೆ ಭಾವಿಸುವಂತೆ ಪ್ರಭಾವಿಸಲ್ಪಟ್ಟರು. ಮಹಿಳೆಯರ ಕುರಿತು ಅವರು ಹೇರಿದ ನಿಯಮಗಳು, ಕಟ್ಟುಪಾಡುಗಳನ್ನು ಸಹ ಇವರು ಇವರ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಸಮಕಾಲೀನದಲ್ಲಿಯೂ ನಾವು ಇದನ್ನು ನೋಡುತ್ತೇವೆ. ಮನು ಧರ್ಮಶಾಸ್ತ್ರದ ಪ್ರಕಾರ, ಬ್ರಾಹ್ಮಣರಿಗೆ ಇರುವ ಸ್ಥಾನಮಾನವು, ಕೆಳಜಾತಿಯವರಿಗೆ ಅಂದರೆ ಬ್ರಾಹ್ಮಣೇತರರ ಕೆಳಜಾತಿಗಳಿಗೆ ಇಲ್ಲ. ಮತ್ತೆ ಈ ಕೆಳಜಾತಿಯವರು ರೇಷ್ಮೆ ಬಟ್ಟೆಗಳನ್ನು ಉಟ್ಟು, ದೇವರುಗಳನ್ನು ಪೂಜಿಸಿ ಅರ್ಚನೆ ಮಾಡಿ, ಯಜ್ಞಗಳನ್ನು ಮಾಡಿ, ಮಠಾಧೀಶರ ಪಾದಗಳಿಗೆ ಅಡ್ಡಬಿದ್ದು ನಮಸ್ಕರಿಸುವಂತಹದು – ಈ ನಾನಾ ಯಾತನೆಗಳು ಏಕೆ? ಯಾಕೆಂದರೆ – ಕೇವಲ ಪರಕೀಯತೆ! ಅವರು ತಾವಲ್ಲದಿರುವುದೇನೋ ಆಗಿ ಬಿಡುವ ತಾಪತ್ರಯ. ಧಾರ್ಮಿಕ ನಾಯಕರೆದುರು ಒಳ್ಳೆಯವರಾಗಿ ಕಾಣಿಸಿಕೊಳ್ಳುವ ಬಯಕೆ. ತಮಗೆ ತಾವು ಆತ್ಮದ್ರೋಹ ಮಾಡಿಕೊಂಡು ಇದನ್ನೆಲ್ಲಾ ಮಾಡುವುದರಿಂದಾಗಿ, ಇವರೇನಾದರೂ ಉನ್ನತ ಸಾಮಾಜಿಕ ವರ್ಗವಾಗಿ ಪರಿವರ್ತನೆಗೊಳ್ಳುತ್ತಾರೆಯೇ? ಇಲ್ಲ, ಅಲ್ಲವೇ? ಇದು ಒಂದೆಡೆ ಇರಲಿ, ಮನು ಧರ್ಮ ಶಾಸ್ತ್ರ ಮತ್ತು ಇತರೆ ಪುರಾಣಗಳಲ್ಲಿ ಮಹಿಳೆಯರು ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಏನು ಹೇಳಲಾಗಿದೆ ಎಂದು ನೋಡೋಣ! ಇನ್ನು ಇವುಗಳನ್ನು ಮೇಲ್ಜಾತಿಗೆ ಸೇರದವರು ಮತ್ತು ಇತರೆ ಸಾಮಾಜಿಕ ವರ್ಗದ ಜನರು ಏಕೆ ಆಚರಿಸುತ್ತಾರೆ? ನಾವು ಅದರ ಬಗ್ಗೆ ಯೋಚಿಸಬೇಕು. ನಾವು ಅದನ್ನು ಬುದ್ಧಿವಂತಿಕೆಯಿಂದ ವಿಶ್ಲೇಷಿಸಬೇಕು.
ಯಾರೋ ಬಲಾಢ್ಯ ಮೇಲ್ಜಾತಿಯವರು ಹೇಳಿದ್ದಾರೆಂದು ಬೀದಿ ಬಸವನ ಹಾಗೆ ತಲೆಯಾಡಿಸಿ ಅದನ್ನು ಕುರುಡಾಗಿ ಅನುಸರಿಸಿಬಿಡುವುದೇ? ದುಡಿಮೆಯೇ ತಿಳಿಯದ, ಶ್ರಮದ ಮೌಲ್ಯವನ್ನೇ ಅರಿಯದ ಮೂರ್ಖ ವಿದ್ವಾಂಸರ ಬೋಧನೆಗಳನ್ನು ಏಕೆ ನಿರ್ಲಕ್ಷಿಸಬಾರದು? ಮಹಿಳೆಯರ ಬಗ್ಗೆ ಯಾವ ಯಾವ ಶಾಸ್ತ್ರಗಳು ಏನು ಹೇಳುತ್ತವೆ ಎಂಬುದನ್ನು ನೋಡೋಣ. ಬಹುತೇಕ ಇದೇ ರೀತಿಯ ಭಾವನೆಗಳು ಇತರೆ ಧಾರ್ಮಿಕ ಗ್ರಂಥಗಳಲ್ಲಿಯೂ ಕಂಡುಬರುತ್ತವೆ. ಅವುಗಳನ್ನು ಹುಡುಕಿ ವಿಶ್ಲೇಷಿಸುವ ಅವಶ್ಯಕತೆಯಿದೆ. ಯಾಜ್ಞವಲ್ಕ್ಯ ಸ್ಮೃತಿ 1:87 ರಲ್ಲಿ ; ಈ ಕೆಳಗಿನಂತೆ ಹೇಳಲಾಗಿದೆ: ಮಹಿಳೆ ತನ್ನ ಗಂಡನ ಅನುಮತಿಯಿಲ್ಲದೆ ಹೊರಗೆ ಹೋಗಬಾರದು. ಅವಳು ಗದ್ದಲದ (ಶಬ್ದ ಆಗುವ) ರೀತಿಯಲ್ಲಿ ನಡೆಯಬಾರದು. ಅಪರಿಚಿತ ಪುರುಷರೊಂದಿಗೆ ಮಾತನಾಡಬಾರದು. ಸೀರೆಯನ್ನು ಕಣಕಾಲುಗಳವರೆಗೆ ಕಟ್ಟಬೇಕು. ಹೊಕ್ಕುಳು ಕಾಣಿಸಬಾರದು. ಎದೆ ಕಾಣುವಂತಿರಬಾರದು. ಬಾಯಿ ಮುಚ್ಚಿರಬೇಕೆ ವಿನಃ ಬಾಯಿ ತೆರೆದು ಜೋರಾಗಿ ನಗಬಾರದು. ಕೂರ್ಮ ಪುರಾಣದಲ್ಲಿ ಇನ್ನೊಂದು ಮೂರ್ಖ ಕಲ್ಪನೆಯನ್ನು ಬರೆಯಲಾಗಿದೆ. ಮಹಿಳೆಯರು ಮಾಡುವ ಮಾನಸಿಕ ವ್ಯಭಿಚಾರದ ಪರಿಣಾಮವಾಗಿಯೇ ಅವರು ಪ್ರತಿ ತಿಂಗಳು ಮುಟ್ಟಿನ ರೂಪದಲ್ಲಿ ಮೈಲಿಗೆಯಾಗುತ್ತಾರೆ. ಮನುಧರ್ಮ ಶಾಸ್ತ್ರದಲ್ಲಿ ಮಹಿಳೆಯರನ್ನು ಕೀಳಾಗಿ ಕಾಣುವ ಬಹಳಷ್ಟು ವಿಷಯಗಳಿವೆ. ಯಾವುದೇ ಬ್ರಾಹ್ಮಣ ಶೂದ್ರ ಮಹಿಳೆಯನ್ನು ಹೆಂಡತಿಯಾಗಿ ಪಡೆದರೆ ಅವನು ಅವನತಿ ಹೊಂದುತ್ತಾನೆ. ಅವನಿಗೆ ಅವಳಿಂದ ಮಕ್ಕಳಾದರೆ, ಅವನು ತನ್ನ ಬ್ರಾಹ್ಮಣತ್ವವನ್ನು ಕಳೆದುಕೊಳ್ಳುತ್ತಾನೆ (3-17). ಒಬ್ಬ ಕನ್ಯೆಗೆ ತಂದೆ ತಿಳಿದಿಲ್ಲದ ಮತ್ತು ಸಹೋದರಿಲ್ಲದ ಅಂತಹ ಕನ್ಯೆಯನ್ನು ಮದುವೆಯಾಗಬಾರದು. ಮಹಿಳೆಯರು ತಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಋಗ್ವೇದ (3:33:17) ಹೇಳಿದರೆ, ಮಹಿಳೆಯರ ದೋಷಗಳು ಮತ್ತು ದುರ್ಗುಣಗಳ ಬಗ್ಗೆ ಮಾತನಾಡಲು ನೂರು ನಾಲಿಗೆ ಮತ್ತು ನೂರು ವರ್ಷಗಳು ಸಾಕಾಗುವುದಿಲ್ಲ ಎಂದು ಮಹಾಭಾರತ ಹೇಳುತ್ತದೆ. (8:74:78)
ಹಿಂದೂಗಳ ಮಹಾನ್ ಗ್ರಂಥ ಎಂದು ಪ್ರಚಾರ ಮಾಡಲಾದ ಮನುಸ್ಮೃತಿಯಲ್ಲಿ ಮಹಿಳೆಯರ ಬಗ್ಗೆ ಇರುವ ಅಭಿಪ್ರಾಯಗಳನ್ನು ಈ ಕೆಳಗಿನಂತೆ ಸಂಕ್ಷೇಪ್ತಗೊಳಿಸಲಾಗಿದೆ. ಪುರುಷರನ್ನು ಮೋಹಿಸುವುದು ಮಹಿಳೆಯರ ಸ್ವಭಾವ. ಅವರು ಅಜ್ಞಾನಿಗಳನ್ನು ಮಾತ್ರವಲ್ಲದೆ ಬುದ್ಧಿವಂತರನ್ನೂ ಭ್ರಷ್ಟಗೊಳಿಸುತ್ತಾರೆ. ಅವರು ವಯಸ್ಸಾದವರೋ ಅಥವಾ ಸುಂದರರೋ ಎಂದು ಸಹ ಪರಿಗಣಿಸುವುದಿಲ್ಲ. ಅವನು ಪುರುಷನಾಗಿದ್ದರೆ ಸಾಕು! ಅವರಿಗೆ ಪುರುಷನನ್ನು ನೋಡಿದ ತಕ್ಷಣ ಹೊಂದಿಸಿಕೊಳ್ಳುತ್ತಾರೆ. ವ್ಯಭಿಚಾರ ಅವರ ಸಹಜ ಲಕ್ಷಣ ಎಂದು ವೇದಗಳು ಹೇಳುತ್ತವೆ. ವ್ಯಭಿಚಾರದ ಈ ಬಯಕೆಯಿಂದಾಗಿಯೇ ಮಹಿಳೆಗೆ ತನ್ನ ಗಂಡನ ಮೇಲೆ ಪ್ರೀತಿ ಇರುವುದಿಲ್ಲ. ಒಬ್ಬ ಪುರುಷನು ತನ್ನ ತಾಯಿ, ಸಹೋದರಿ ಅಥವಾ ಮಗಳ ಜೊತೆಯೂ ಸಹ ಒಂಟಿಯಾಗಿ ಕುಳಿತುಕೊಳ್ಳಬಾರದು. ವ್ಯಭಿಚಾರ ಮಾಡುವ ಮಹಿಳೆ ಮುಂದಿನ ಜನ್ಮದಲ್ಲಿ ನರಿಯಾಗಿ ಹುಟ್ಟುತ್ತಾಳೆ. ಅವಳ ಪತಿ ಸತ್ತರೆ, ಅವಳು ಮರುಮದುವೆಯಾಗಬಾರದು. ಆದರೆ ಹೆಂಡತಿ ಸತ್ತರೆ, ಪುರುಷನು ಅಂತ್ಯಕ್ರಿಯೆಯ ನಂತರ ಮರುಮದುವೆಯಾಗಬಹುದು. ಮಹಿಳೆಯರು ಚಂಚಲರು, ಆದ್ದರಿಂದ ಅವರು ಸಾಕ್ಷಿಗೆ ಸೂಕ್ತವಲ್ಲ. ಎಲ್ಲಾ ಧರ್ಮಗಳು ಹೆಚ್ಚು ಕಡಿಮೆ ಇದೇ ವಿಚಾರಗಳನ್ನು ಪ್ರಚಾರ ಮಾಡಿವೆ. ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವಿಲ್ಲದೆ ಮಹಿಳೆಯರನ್ನು ನಿರ್ಬಂಧಿಸಲಾಗಿದೆ. ಪುರುಷರಂತೆ ಮಹಿಳೆಯರು ಸಹ ಮನುಷ್ಯರು ಎಂಬುದನ್ನು ಗುರುತಿಸಿಲ್ಲ. .ಹಿಂದೂ ಧರ್ಮ, ಇಸ್ಲಾಂ ಧರ್ಮ, ಕ್ರಿಶ್ಚಿಯನ್ ಧರ್ಮ ಮತ್ತು ಇತರೆ ಹಲವು ಧರ್ಮಗಳು ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸುವಲ್ಲಿ ಇದೇ ರೀತಿ ವರ್ತಿಸಿವೆ. ಅಂದಿನ ಮಾತೃಪ್ರಧಾನ ವ್ಯವಸ್ಥೆಯನ್ನು ಪಿತೃಪ್ರಧಾನ ವ್ಯವಸ್ಥೆಯಾಗಿ ಪರಿವರ್ತನೆ ಮಾಡಿವೆ. ಮೂಲನಿವಾಸಿಗಳನ್ನು ದಬ್ಬಾಳಿಕೆ ಮಾಡಿ ಪರಕೀಯರು ಅಧಿಕಾರ ವಹಿಸಿಕೊಂಡಂತೆ ಪರಿಸ್ಥಿತಿ ಪ್ರಪಂಚದಾದ್ಯಂತ ಒಂದೇ ಆಗಿದೆ. ಎಲ್ಲಾ ಧರ್ಮಗಳು ಮಹಿಳೆಯರಿಗೆ ಕೀಳುಮಟ್ಟದ ಶೋಚನೀಯ ನಿಯಮಗಳು ಮತ್ತು ನಿಬಂಧನೆಗಳನ್ನು ಬರೆದಿವೆ. ಅರಬ್ ದೇಶಗಳ ವೃದ್ಧರು ತಮ್ಮ ಮೊಮ್ಮಕ್ಕಳ ವಯಸ್ಸಿನ ಬಾಲಕಿಯರನ್ನು ವಿವಾಹವಾಗಿ ಇಲ್ಲಿಂದ ಕರೆದುಕೊಂಡು ಹೋಗಿ ಗುಲಾಮರನ್ನಾಗಿ ಮಾಡಿಕೊಳ್ಳುತ್ತಿರುವುದನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ಧರ್ಮಗಳು ಶ್ರೇಷ್ಠವಾಗಿದ್ದರೆ, ಅವು ತಮ್ಮ ಶ್ರೇಷ್ಠತೆಯನ್ನು ಕಾಪಾಡಿಕೊಂಡಿರುವ ಯಾವುದೇ ದಾಖಲೆಗಳು ಇಲ್ಲ.
ಬೈಬಲ್ ಮಹಿಳೆಯರ ಬಗ್ಗೆ ಹೀಗೆ ಹೇಳುತ್ತದೆ..
ಅಕ್ಕ ತಂಗಿಯನ್ನು ನೋಡಿ – ‘ನಿನ್ನೆ ರಾತ್ರಿ ನಾನು ನನ್ನ ತಂದೆಯೊಂದಿಗೆ ಮಲಗಿದೆ. ಇಂದು ರಾತ್ರಿ ನೀನು ಅವನೊಂದಿಗೆ ಮಲಗು’ – ಹೀಗೆ ಇಬ್ಬರು ಹೆಣ್ಣುಮಕ್ಕಳು ತಮ್ಮ ತಂದೆಯಿಂದ ಗರ್ಭಿಣಿಯಾದರು. ಅವರು ಕ್ರಿಶ್ಚಿಯನ್ ಧರ್ಮದ ಸ್ಥಾಪಕರು. (ಬೈಬಲ್ ಆದಿಕಾಂಡ 19:31-38) ಒಬ್ಬ ಸತ್ತ ಅಣ್ಣನ ಮಕ್ಕಳಿಗಾಗಿ ತಮ್ಮ ಅತ್ತಿಗೆಯನ್ನು ಮದುವೆಯಾಗಬೇಕು. ಇಲ್ಲದಿದ್ದರೆ ಅವನನ್ನು ಹೊರಗೆ ಹಾಕಲಾಗುವುದು (ಧರ್ಮೋಪದೇಶ ಕಾಂಡ 25:12) ನೀನು ನೋಡುತ್ತಿರುವಾಗಲೇ, ನಾನು ನಿನ್ನ ಹೆಂಡತಿಯನ್ನು ನಿನ್ನ ಪಕ್ಕದ ಮನೆಯವನಿಗೆ ಕೊಡುತ್ತೇನೆ. ಅವಳು ಹಗಲು ಹೊತ್ತಿನಲ್ಲಿ ಅವನೊಂದಿಗೆ ಮಲಗುತ್ತಾಳೆ (2 ಸಮಾಯೇಲ 12:11). ಗಂಡನಿರುವ ಸ್ತ್ರೀಗಿಂತ ಒಂಟಿಯಾಗಿರುವ ಸ್ತ್ರೀ ಹೆಚ್ಚು ಮಕ್ಕಳನ್ನು ಹೆರುತ್ತಾಳೆ – ಯೆಹೋವನು ಹೇಳುತ್ತಾನೆ (ಯೆಶಾಯ 54:1). ಮಹಿಳೆಯರು ಬಲೆಗಳಂತೆ ಅಪಾಯಕಾರಿ. ಅವರ ಹೃದಯಗಳು ಬಲೆಯಂತೆ ಇರುತ್ತದೆ. ಅವರ ಕೈಗಳು ಸರಪಳಿಗಳಂತವು. ಅವರ ಕೈಗೆ ಸಿಕ್ಕಿದರೆ ಮರಣಕ್ಕಿಂತಲೂ ಹೀನ. ಸಾವಿರ ಮಹಿಳೆಯರಲ್ಲಿ ಒಬ್ಬಳೂ ಒಳ್ಳೆಯವಳಾಗಿರುವುದಿಲ್ಲ. (ಪ್ರಸಂಗಿ 7:26-29) ಬೆಳಿಗ್ಗೆ ಎದ್ದರೆ, ಪತ್ರಿಕೆಗಳು, ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಲ್ಪಡುವ ಸುದ್ದಿಗಳು.. ಲೈಂಗಿಕ ದೌರ್ಜನ್ಯಗಳು, ಕೊಲೆಗಳು, ಕೌಟುಂಬಿಕ ಹಿಂಸೆ, ಆತ್ಮಹತ್ಯೆಗಳು, ಇತ್ಯಾದಿ.. ಇವೆಲ್ಲವೂ ನಡೆಯುವುದು ಧರ್ಮಗಳು ಮಹಿಳೆಯರ ಬಗ್ಗೆ ಕಲಿಸುವ ದೃಷ್ಟಿಕೋನಗಳಿಂದಲೇ? ಅಲ್ಲವೇ? ಮನುಷ್ಯರ ನೈತಿಕ ಅವನತಿಗೆ ಇವು ಕಾರಣವಲ್ಲವೇ? ವಿಶ್ಲೇಷಿಸಬೇಕಾಗಿದೆ. ಧಾರ್ಮಿಕ ಪರಿಕಲ್ಪನೆಗಳನ್ನು ತೊಡೆದುಹಾಕಲು ಸಾಧ್ಯವಾಗದ ಜನರು, ಅವುಗಳನ್ನೇ ಪ್ರಾಮಾಣಿಕ ತೆಗೆದುಕೊಳ್ಳುತ್ತಿದ್ದಾರೆ ಅಲ್ಲವೇ?
ಭಾರತದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಒಮ್ಮೆ ಹೀಗೆ ಹೇಳಿದರು.”ನಮ್ಮ ಭಾರತದಲ್ಲಿ ನನ್ನಂತಹ ಪತಿಯನ್ನು ಕಳೆದುಕೊಂಡ ಮಹಿಳೆಯರು ಅನೇಕರಿದ್ದಾರೆ. ಅವರು ದೇವಾಲಯಗಳಿಗೆ ಪ್ರವೇಶಿಸಬಾರದು ಎಂಬ ದುಷ್ಟ ಸಂಪ್ರದಾಯವನ್ನು ನೀವು ಪರಿಚಯಿಸಿದ್ದೀರಿ. ಅನುಸರಿಸುತ್ತಿದ್ದಾರೆ. ಆದರೆ, ಸಂವಿಧಾನವು ನನ್ನಂತಹ ವಿಧವೆಯರಿಗೆ ದೇಶವನ್ನು ಆಳುವ ಹಕ್ಕು, ಸ್ವೇಚ್ಛೆ ಮತ್ತು ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ದೇವಾಲಯಗಳಿಗೆ ಪ್ರವೇಶಿಸದಂತೆ ನನಗೆ ನಿರ್ಬಂಧಗಳನ್ನು ವಿಧಿಸಿದವರನ್ನು ಸಹ ಪ್ರಧಾನಿಯಾಗಿ ಆಳುವ ಅಧಿಕಾರವನ್ನು ಸಂವಿಧಾನವು ನನಗೆ ನೀಡಿದೆ.” ರಾಮಾಯಣದಲ್ಲಿ, ರಾಮನು ಸೀತೆಯನ್ನು ಕಾಡಿಗೆ ಕರೆದೊಯ್ದನು. ಮತ್ತೊಮ್ಮೆ, ಆಕೆಯನ್ನು ಏಕಾಂಗಿಯಾಗಿ ಕಾಡಿಗೆ ದೂಡಿದನು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸಿದ್ದಾರೆ. ಅವರನ್ನು ವಿಧಾನಸಭೆ ಮತ್ತು ಸಂಸತ್ತಿಗೆ ಕಳುಹಿಸಿದ್ದಾರೆ. ಒಂದು ಕಾಲ್ಪನಿಕ ಪಾತ್ರಕ್ಕೆ ಭಜನೆ ಹಾಡುತ್ತಾ ಕುಳಿತುಕೊಳ್ಳುವುದೇ? ಅಥವಾ ಪುರುಷರ ಘನತೆಯನ್ನು ಹೆಚ್ಚಿಸಿದ ಸಂವಿಧಾನದ ಚೈತನ್ಯದೊಂದಿಗೆ ಮಾನವೀಯ ಮೌಲ್ಯಗಳನ್ನು ಸ್ಥಾಪಿಸುವುದೇ? ಎಲ್ಲರೂ ಯೋಚಿಸಬೇಕಾದ ಸಮಯ ಇದು! ಇದು ಮಹಿಳೆಯರು ವಿಶೇಷವಾಗಿ ಚಿಂತಿಸಬೇಕಾದ ವಿಷಯ!!
- ಡಾ.ದೇವರಾಜು ಮಹಾರಾಜು (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು)
ಅನುವಾದ : ರೇಣುಕಾ ಭಾರತಿ


Leave a reply