ಇತ್ತೀಚೆಗೆ ಸಂಚಲನ ಮೂಡಿಸಿದ ಬೆಳವಣಿಗೆಗಳು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಸಮಸ್ಯೆಯನ್ನು ಮತ್ತೊಮ್ಮೆ ನಾಟಕೀಯವಾಗಿ ದೇಶದ ಮುಂದೆ ತಂದಿವು. ಹದಿನೈದು ವರ್ಷ ವಯಸ್ಸಿನ ಬಾಲಕಿ ಸ್ಥಳೀಯ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ನಿಂದ ಅತ್ಯಾಚಾರಗೊಳಗಾದ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಅಸಾಧಾರಣ ಕಥೆಯು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ. 2017 ರ ಅತ್ಯಾಚಾರ ಪ್ರಕರಣದಲ್ಲಿ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಹಿಂಪಡೆದು, ಅವರನ್ನು ಬಿಡುಗಡೆ ಮಾಡಬೇಕೆಂದು ದೆಹಲಿ ಹೈಕೋರ್ಟ್ ಆದೇಶಿಸಿದೆ ಎಂಬುದು ನಂಬಲಾಸಧ್ಯವಾದ ವಿಷಯ. ಸ್ವಾಭಾವಿಕವಾಗಿಯೇ, ಈ ವಿಷಯದ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಒದಗಿಸುವ ಕುರಿತು ಚರ್ಚೆ ಮತ್ತೊಮ್ಮೆ ಆರಂಭವಾಗಿದೆ.
ಈ ಪ್ರಕರಣದಲ್ಲಿ ಹೋರಾಡಿದ ಅಂಬೇಡ್ಕರ್ ಅವರ ಅನುಯಾಯಿ ವಕೀಲ ಮೆಹಮೂದ್ ಪ್ರಾಚಾ ಅವರು ಈ ತೀರ್ಪಿನ ಭೀಕರ ಪರಿಣಾಮಗಳನ್ನು ವಿವರಿಸುತ್ತಾ, “ನ್ಯಾಯವೇ ಬಲಿಪಶುವಾಗಿದೆ” ಎಂದು ಬಹಳ ಆಳವಾದ ಅರ್ಥವನ್ನ ವ್ಯಾಖ್ಯಾನ ಮಾಡಿದರು. “ಆಸಿಫಾ ಪ್ರಕರಣ, ಹತ್ರಾಸ್ ಪ್ರಕರಣ ಮತ್ತು ಈಗ ಉನ್ನಾವ್ ಪ್ರಕರಣ ಇಡೀ ಸಮಾಜವನ್ನು ಬೆಚ್ಚಿಬೀಳಿಸಿವೆ. ಆದರೆ ಇಂದು ಭಾರತದಲ್ಲಿ ನ್ಯಾಯಾಂಗದ ಬಗ್ಗೆ ಇರುವ ನಿರ್ಲಕ್ಷ್ಯ ಎಷ್ಟು ಸಾಮಾನ್ಯವಾಗಿಬಿಟ್ಟಿದೆ ಎಂದರೆ ನ್ಯಾಯವೇ ಬಲಿಪಶುವಾಗುತ್ತಿದೆ” ಎಂದು ಅವರು ಹೇಳಿದರು.
ಬಿಲ್ಕಿಸ್ ಬನೋ ಚಾರಿತ್ರಿಕ ಸಮರ..
ಬಹುಶಃ ಈ ಹೊಸ ಭಯಾನಕ ಬೆಳವಣಿಗೆಗಳ ಪರಂಪರೆ ಗುಜರಾತ್ ಕೋಮು ಗಲಭೆ, ಮಾರಣಹೋಮದೊಂದಿಗೆ ಪ್ರಾರಂಭವಾಗಿರಬೇಕು. ಸಂಚಲನವನ್ನು ಉಂಟುಮಾಡಿದ ಬಿಲ್ಕಿಸ್ ಬಾನೋ ಪ್ರಕರಣವು ಈ ಆಘಾತಕಾರಿ ಸುಳ್ಳು ಪ್ರಕ್ರಿಯೆಗಳನ್ನು ಮುನ್ನೆಲೆಗೆ ತಂದಿತು. ಅಂದರೆ ಅದಕ್ಕೂ ಹಿಂದೆ ಮಹಿಳೆಯರು ಲೈಂಗಿಕ ದಾಳಿಗೆ ಒಳಗಾಗಿಲ್ಲ ಎಂದಲ್ಲ. ಆದರೆ ಹೊಸ ವಿಕೃತ ರೂಪವೆಂದರೆ ಅಂತಹ ಅಪರಾಧಗಳನ್ನು ಅಸ್ತ್ರಗಳಾಗಿ ಬಳಸುವುದು. ಮತ್ತು ಅದಕ್ಕೆ ಸಂಪೂರ್ಣ ಸಾಮಾಜಿಕ-ರಾಜಕೀಯ ಮತ್ತು ಸೈದ್ಧಾಂತಿಕ ಬೆಂಬಲವನ್ನು ನೀಡುವುದು. ಈ ರೀತಿಯಾಗಿ, ಮಹಿಳೆಯರ ಸಮಸ್ಯೆಗಳನ್ನು ಧಾರ್ಮಿಕವಾಗಿ ದಲಿತ ಹಿಂಸಾಚಾರದೊಂದಿಗೆ ಜೋಡಿಸುವುದು ಪ್ರಸ್ತುತ ಇನ್ನಷ್ಟು ಆತಂಕಕಾರಿ ವಿಷಯವಾಗಿ ಮಾರ್ಪಟ್ಟಿದೆ.
ನ್ಯಾಯಕ್ಕಾಗಿ ಮಾಡಿದ ಹೋರಾಟದಲ್ಲಿ ಬಿಲ್ಕಿಸ್ ಬಾನೋ ಗಮನಾರ್ಹ ಧೃಡ ವ್ಯಕ್ತಿತ್ವವನ್ನು ಪ್ರದರ್ಶಿಸಿದರು. ವ್ಯಾಪಕ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ನಾಗರಿಕ ಸಮಾಜ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಬಹಿರಂಗ ಪಡಿಸಿದ ವರದಿಗಳಿಂದ ಪುರಾವೆಗಳು ಲಭಿಸಿತು. ಆದರೆ, ಲೈಂಗಿಕ ದೌರ್ಜನ್ಯದ ಕೆಲವೇ ಪ್ರಕರಣಗಳು ಮಾತ್ರವೇ ದಾಖಲಾಗಿವೆ, ಮತ್ತು ಪೊಲೀಸರು ಸಂಗ್ರಹಿಸಿರುವ ಹಲವು ಪ್ರಕರಣಗಳಲ್ಲಿಯೂ ಸಹ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರು, ತಾವು ಎದುರಿಸಿದ ನರಕದ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದಾರೆಂದು ಆರ್ಟಿಐ ಪ್ರಶ್ನೆಗಳ ಮೂಲಕ ಸಂಗ್ರಹಿಸಿದ ಮಾಹಿತಿಯು ಬಹಿರಂಗ ಪಡಿಸಿದವು. ಸಮಾಜದಿಂದ ಅಪಹಾಸ್ಯಕ್ಕೊಳಗಾಗುವ ಭಯದಿಂದ ಅವರು ಮಾತನಾಡಲು ಹಿಂಜರಿಯುತ್ತಿದ್ದರು. 2022ರ ಗುಜರಾತ್ ನರಮೇಧವನ್ನು ನಡೆಸಿದವರ ಅಮಾನುಷ್ಯ ವರ್ತನೆಯಿಂದ ಭಯಭೀತರಾದ ಬಲಿಪಶುಗಳು ಪೊಲೀಸರಿಗೆ ದೂರು ನೀಡಲು ಸಹ ಹೆದರುತ್ತಿದ್ದರು. ವಿಶೇಷವಾಗಿ ಮುಸ್ಲಿಂ ಮಹಿಳೆಯರು ಪೊಲೀಸರ ಮೇಲಿನ ಎಲ್ಲಾ ನಂಬಿಕೆಯನ್ನು ಕಳೆದುಕೊಂಡಿದ್ದರು.
ಅಂತಹ ವಾತಾವರಣದಲ್ಲಿಯೂ ಸಹ, ಧೈರ್ಯದಿಂದ ಮುಂದೆ ಬಂದ ಕೆಲವೇ ಕೆಲವು ಬಲಿಪಶು ಮಹಿಳೆಯರಲ್ಲಿ ಬಿಲ್ಕಿಸ್ ಬಾನೋ ಒಬ್ಬರು. ಅವರ ಚಾರಿತ್ರಿಕ ಮಹತ್ವದ ಹೋರಾಟದ ಕಾರಣದಿಂದಾಗಿ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಧಾರ್ಮಿಕ ಹಿಂಸಾಚಾರದ ಸಂದರ್ಭದಲ್ಲಿ ಸಂಭವಿಸಿದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಯಿತು. ಧಾರ್ಮಿಕ ಹಿಂಸಾಚಾರದ ಸಂದರ್ಭದಲ್ಲಿ ಒಂದು ಕೋಮು ಮತ್ತೊಂದು ಕೋಮುವಿನ ಸಮುದಾಯವನ್ನು ಅವಮಾನಿಸಲು ಮತ್ತು ನೈತಿಕವಾಗಿ ಕುಗ್ಗಿಸಲು ಕ್ರೂರ ಲೈಂಗಿಕ ಹಿಂಸೆಯನ್ನು ಒಂದು ಸಾಧನವಾಗಿ ಬಳಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಬಿಲ್ಕಿಸ್ ಅವರ ಹೋರಾಟದಿಂದ ಅಪರಾಧಿಗಳು ಶಿಕ್ಷೆಗೊಳಗಾಗಿದ್ದರೂ, ಸರ್ಕಾರ ಆ ರೇಪಿಸ್ಟ್ ದಾಳಿಕೋರರನ್ನು ಕ್ಷಮಿಸಿ ಬಿಟ್ಟುಬಿಟ್ಟಿತು. ಆದರೂ, ಕೆಲವು ಗೌರವಾನ್ವಿತ ಸರ್ಕಾರೇತರ ಸಂಸ್ಥೆಗಳು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಯತ್ನಗಳಿಂದ, ಸುಪ್ರೀಂ ಕೋರ್ಟ್ ಪ್ರಕರಣದ ತನಿಖೆಯನ್ನು ಗುಜರಾತ್ನಿಂದ ವರ್ಗಾಯಿಸಿ ಪೊಲೀಸರು ಸಲ್ಲಿಸಿದ ಎಫ್ಐಆರ್ ಅನ್ನು ತಿರಸ್ಕರಿಸಿತು.
ಅಮಾನುಷ್ಯ ಹತ್ಯಾಕಾಂಡ..
2002 ರ ಗುಜರಾತ್ ಹತ್ಯಾಕಾಂಡದಲ್ಲಿ ಬಿಲ್ಕಿನ್ ಬಾನೋ ಮತ್ತು ಇತರ ಹಲವು ಪ್ರಕರಣಗಳಲ್ಲಿ ನಡೆದುದಕ್ಕಿಂತಲೂ ಮತ್ತಷ್ಟು ಭಯಾನಕವಾಗಿ ಗುರ್ತು ಮಾಡಿತ್ತು ಉನ್ನಾವ್ ಪ್ರಕರಣ. ವಾಸ್ತವವಾಗಿ, ಉನ್ನಾವ್ ಪ್ರಕರಣ ಮನಸೋಇಚ್ಛೆ ತೆರೆದು ಮುಚ್ಚಬಹುದಾದ ಪ್ರಕರಣಕ್ಕೆ ಒಂದು ಉದಾಹರಣೆಯಾಗಿದೆ. ಆದರೆ ಸೆಂಗಾರ್ ಅವರ ಪ್ರಬಲವಾದ ಸಂಪರ್ಕಗಳಿಂದಾಗಿ, ಪೊಲೀಸರು ಮತ್ತು ರಾಜ್ಯ ಸರ್ಕಾರವು ನಿರ್ಲಕ್ಷ್ಯ ತೋರಿಸಿತು. ವಿಚಾರಣೆಯ ಸಂದರ್ಭದಲ್ಲಿಯೇ ಸಂತ್ರಸ್ತೆಯ ಹತ್ತಿರದ ಸಂಬಂಧಿಗಳನ್ನು ಕೊಲ್ಲುವ ಮೂಲಕ ಸಾಕ್ಷ್ಯಗಳನ್ನು ನಾಶಮಾಡುವ ಪ್ರಯತ್ನ ನಡೆಯಿತು. ಸಿಬಿಐ ಈ ಪ್ರಕರಣದಲ್ಲಿನ ನಿರ್ಲಕ್ಷ್ಯತೆಯ ವಿರುದ್ಧ ಅರ್ಜಿಯನ್ನು ಸಹ ಸಲ್ಲಿಸಲಿಲ್ಲ. ಆತನಿಗೆ ವಿನಾಯಿತಿ ನೀಡಿ ಈ ಅಮಾನವೀಯ ಆದೇಶವನ್ನು ನೀಡಿದ ದೆಹಲಿ ಹೈಕೋರ್ಟ್ ಕೂಡ ಹಾಗೆಯೇ ಹೇಳಿದೆ. ಆದರೆ ಈ ಆದೇಶದ ನಂತರ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ಭುಗಿಲೆದ್ದ ಕಾರಣ, ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ ಕೋರಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾಯಿತು. ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದಲೂ ಕೂಡ ದೆಹಲಿ ಹೈಕೋರ್ಟ್ ಆದೇಶವು ದೋಷಪೂರಿತವಾಗಿದೆ ಎಂದು ಹೇಳುವುದು, ವಿನಾಯಿತಿಯನ್ನು ರದ್ದುಗೊಳಿಸಲು ಸಾಮಾನ್ಯ ನಿಯಮಗಳನ್ನು ಮೀರಿ ಹೋಗುವುದು ಬೇರೆ ವಿಷಯ. ಈ ಅಮಾನವೀಯ ಬೆಳವಣಿಗೆಗಳ ಬಗ್ಗೆ ಪ್ರಮುಖ ಸಾಮಾಜಿಕ ಕಾರ್ಯಕರ್ತರು, ಮಹಿಳಾ ಚಳವಳಿಯ ಮುಖಂಡರು ಮತ್ತು ನಾಗರಿಕ ಸಮಾಜದ ಮುಖಂಡರು ರಾಜಕೀಯವಾಗಿ, ಪ್ರಬುದ್ದತೆಯಿಂದ ಎಷ್ಟೋ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಅವರು ಪಡೆದ ಅನುಭವಗಳನ್ನು ನಿರ್ಲಕ್ಷಿಸುವುದೆಂರೆ ಅಪಾಯವನ್ನು ತಂದುಕೊಂಡಂತೆ. ಹಿಂದುತ್ವ ಶಕ್ತಿಗಳ ಬೆಳವಣಿಗೆ, ಆರ್ಎಸ್ಎಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬರುವುದು ಮಹಿಳೆಯರ ಮೇಲಿನ ಅಪರಾಧಗಳ ಹೆಚ್ಚಳಕ್ಕೆ ನಿಕಟ ಸಂಬಂಧ ಹೊಂದಿದೆ ಎಂದು ಈ ನಾಯಕರು, ಕಾರ್ಯಕರ್ತರು, ವಕೀಲರು ಮತ್ತು ಸ್ತ್ರೀವಾದಿಗಳು ಮಾಡಿದ ಅಧ್ಯಯನಗಳು, ಪ್ರಕಟಣೆಗಳು ಇದನ್ನು ನಿಸ್ಸಂದಿಗ್ಧವಾಗಿ ಸಾಬೀತುಪಡಿಸುತ್ತಿವೆ.
ನೂರು ವರ್ಷಗಳ ಆರ್ ಎಸ್ ಎಸ್ ಸಿದ್ಧಾಂತ..
ಆದ್ದರಿಂದ, ಇಲ್ಲಿ ಅಪರಾಧವಷ್ಟೇ ಅಲ್ಲ, ಆ ಅಪರಾಧಗಳನ್ನು ವಿಜಯೋತ್ಸವಗಳಾಗಿ ಆಚರಿಸುವ ಕ್ರಿಮಿನಲ್ ಸಮರ್ಥನೆಯೂ ದೇಶದ ಅಡಿಪಾಯವನ್ನೇ ನಾಶಪಡಿಸುತ್ತಿದೆ. ಈ ಅಪಾಯಕಾರಿ ಪ್ರವೃತ್ತಿಯ ಸೈದ್ಧಾಂತಿಕ ಬೇರುಗಳನ್ನು ಪರಿಶೀಲಿಸುವುದು ಉಪಯುಕ್ತವಾಗಿರುತ್ತದೆ. ಆರ್ಎಸ್ಎಸ್ನ ಶತಮಾನೋತ್ಸವದ ಸಂದರ್ಭದಲ್ಲಿ, ಅದರ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಸಂಘಟನೆಯ ಉನ್ನತ ನಾಯಕತ್ವವು ಅದರ ಪುರುಷ ಪ್ರಾಬಲ್ಯದ ಪ್ರವೃತ್ತಿಗಳು ಮತ್ತು ಪಿತೃಪ್ರಧಾನ ಗುಣಲಕ್ಷಣಗಳು ಅವಿಭಾಜ್ಯವೆಂದು ಬಹಿರಂಗಪಡಿಸಿಕೊಂಡರು. ಸನಾತನ ಧರ್ಮ ಸೇರಿದಂತೆ ಹಿಂದುತ್ವದ ಉಪದೇಶವು ಅದರ ಸಾರವನ್ನು ಬಹಿರಂಗಪಡಿಸಿದೆ. ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ಇವು ನಮ್ಮ ಮೆದುಳಿನ ಪದರಗಳಲ್ಲಿ ಹುದುಗಿವೆ. ತನ್ನ ಪತಿವ್ರತೆಯನ್ನು ಸಾಬೀತುಪಡಿಸಲು ಸೀತೆ ಮಾತ್ರವೇ ಅಗ್ನಿಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಅಧಿಪತ್ಯಕ್ಕಾಗಿ ನಡೆಯುವ ಹೋರಾಟದಲ್ಲಿ ಅವಮಾನಕ್ಕೆ ಒಳಗಾಗುವುದು ದ್ರೌಪದಿಯ ದೇಹ ಮಾತ್ರವೇ ಆಗಿದೆ.
ಮಹಾಕಾವ್ಯಗಳು ಮಾತ್ರವಲ್ಲ, ವೇದಗಳು ಮತ್ತು ಪುರಾಣಗಳು ಸಹ ಮಹಿಳೆಯರನ್ನು ಕೀಳಾಗಿ ನೋಡುವುದು ಮತ್ತು ಶಿಲುಬೆಗೇರಿಸುವುದು ನಿರ್ವಿವಾದದ ಸಂಗತಿಗಳಾಗಿವೆ. ಋಗ್ವೇದ ಮತ್ತು ಅಥರ್ವ ವೇದಗಳಲ್ಲಿ, ಮಹಿಳೆಯರನ್ನು ಮನೆಕೆಲಸ ಮತ್ತು ಮಕ್ಕಳನ್ನು ಹೆರುವುದಕ್ಕೆ ಮಾತ್ರವೇ ನಿಯೋಜಿಸಲಾಗಿದೆ. ಮಹಿಳೆ ತನ್ನನ್ನು ಪತಿಗೆ ಅರ್ಪಿಸಿಕೊಳ್ಳಬೇಕೆಂಬ ಪತಿವ್ರತೆ ಶರಣಾಗತಿಗೆ ಪರ್ಯಾಯವಾಗಿದೆ. ಭಗವದ್ಗೀತೆ, ಅರ್ಥಶಾಸ್ತ್ರ ಎಲ್ಲಕ್ಕಿಂತ ಹೆಚ್ಚಾಗಿ, ಮನುಧರ್ಮ “ಸ್ತ್ರೀಯರು ಸುಳ್ಳು, ಕಾಮ, ಕ್ರೋಧ, ವಂಚನೆ, ಬೂಟಾಟಿಕೆ ಮತ್ತು ತಪ್ಪು ನಡವಳಿಕೆಯಂತಹ ದುರ್ಗುಣಗಳನ್ನು ಹೊಂದಿರುತ್ತಾರೆ. ಅವರು ಹೃದಯಹೀನರು, ವಿಶ್ವಾಸಹೀನರು, ಮತ್ತು ಅವರನ್ನು ಕಾವಲಿನಲ್ಲಿ ಇಡಬೇಕು, ಮಹಿಳೆಯರು ಸ್ವಾತಂತ್ರ್ಯಕ್ಕೆ ಅನರ್ಹರು, ಅವರು ಸಾಮಾಜಿಕ ರಚನೆಯನ್ನು ವಿಛಿದ್ರಗೊಳಿಸುತ್ತಾರೆ. ಅಲ್ಲದೇ ಸ್ವಭಾವತಃ ಚಂಚಲರು” ಎಂದು ಹೇಳುತ್ತವೆ. ಗಂಡನು ತನ್ನ ಹೆಂಡತಿಯನ್ನು ವಿಚ್ಛೇದನ ಮಾಡಬಹುದು, ಒತ್ತೆ ಇಡಬಹುದು ಅಥವಾ ಮಾರಾಟ ಮಾಡಬಹುದು (ದ್ರೌಪದಿಯ ಪ್ರಕರಣದಂತೆ) ಎಂದು ಮನುಸ್ಮೃತಿ ಹೇಳುತ್ತದೆ. ಶಿವಪುರಾಣ, ದೇವಿ ಭಾಗವತ ಪುರಾಣ, ಬ್ರಹ್ಮ ವೈವರ್ತ ಪುರಾಣ, ಭಾಗವತ ಪುರಾಣ, ನಾರದ ಪುರಾಣ, ಗರುಡ ಪುರಾಣ, ಅಗ್ನಿ ಪುರಾಣ, ಮತ್ಸ್ಯ ಪುರಾಣ, ಬ್ರಾಹ್ಮಣ ಪುರಾಣಗಳಲ್ಲಿ ಇಂತಹ ಜ್ಞಾನ ರತ್ನಗಳಿವೆ. ಮಹಿಳೆಯರು ಮನೆಗೆ ಸೀಮಿತರಾಗಿ ತಮ್ಮ ಗಂಡಂದಿರು ಮತ್ತು ಕುಟುಂಬದ ಇತರ ಪುರುಷರ ಸೇವೆಯಲ್ಲಿ ಮುಳುಗಿರುವುದರಿಂದ ಮಹಿಳೆಯರು ತಮ್ಮ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ.
ಎರಡು ಸವಾಲುಗಳ ವಿರುದ್ಧ ಸಮರ..
ಈ ಎಲ್ಲಾ ಹಳೆಯ ತಪ್ಪು ಪರಿಕಲ್ಪನೆಗಳು ಇಪ್ಪತ್ತನೇ ಶತಮಾನದಲ್ಲಿ ಯಾವುದೇ ರೀತಿಯಲ್ಲಿ ಮಾನ್ಯವಾಗುವುದಿಲ್ಲ ಎಂಬುದು ಸಂಪೂರ್ಣವಾಗಿ ನಿಜ. ಚುನಾಯಿತ ನಾಯಕರು ತಾವು ವಿಶ್ವಗುರು ಮತ್ತು ಸಮಕಾಲೀನ ಜಗತ್ತಿನಲ್ಲಿ ಅಪಾರ ಪ್ರಭಾವಶಾಲಿ ನಾಯಕರು ಎಂದು ಭಾವಿಸುವುದಾದರೆ, ಅವರು ಅಂತಹ ಪ್ರತಿಗಾಮಿ ಚಿಂತನೆಗಳಿಂದ ದೂರ ಸರಿದು ಅವುಗಳಿಗೆ ವಿರೋಧವನ್ನು ಘೋಷಿಸಬೇಕಿದೆ. ಆದರೆ, ಆರ್ಎಸ್ಎಸ್ ಹಿಂದುತ್ವದೊಂದಿಗೆ ಬಿಜೆಪಿಯ ನಿಕಟ ಸಂಬಂಧದಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಪ್ರಾಚೀನ ಕಾಲದಿಂದಲೂ, ಭಾರತದಲ್ಲಿ ಮಹಿಳಾ ಸಬಲೀಕರಣದಿಂದ ಶಿಕ್ಷಣ, ಆರೋಗ್ಯ, ಆದಾಯದಂತಹ ಅಂಶಗಳಲ್ಲಿನ ಅಸಮಾನತೆಗಳಿಗೆ ಬೆಂಬಲವಾಗಿ, ಪ್ರಸ್ತುತ ಸಂದರ್ಭಗಳಲ್ಲಿ ಮೂಢನಂಬಿಕೆ, ಪುರುಷಪ್ರಧಾನ ಪ್ರವೃತ್ತಿಗಳಿಂದ ತುಂಬಿರುವ ಅಮಾನವೀಯ ಜಗತ್ತು ಎಂಬ ಮತ್ತೊಂದು ಬಹುದೊಡ್ಡ ಸವಾಲನ್ನು ಎದುರಿಸಬೇಕಾಗಿದೆ: .ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಶಕ್ತಿಗಳ ಸಾಮೂಹಿಕ ಬಲದಿಂದ ಮಾತ್ರವೇ ಆ ಸವಾಲನ್ನು ಎದುರಿಸಲು ಸಾಧ್ಯ. ಪುರುಷರು ಮತ್ತು ಮಹಿಳೆಯರು ಕೈಜೋಡಿಸಿ ಹೋರಾಡಬೇಕಾಗುತ್ತದೆ. ಅಂತಹ ಗುರಿಯನ್ನು ಸಾಧಿಸಲು ಪ್ರಜಾಸತ್ತಾತ್ಮಕ ಮಹಿಳಾ ಚಳುವಳಿ ಈಗಾಗಲೇ ಮಹತ್ವದ ಕೊಡುಗೆಗಳನ್ನು ನೀಡಿದೆ.
(ಡಿಸೆಂಬರ್ 31ರ ಪೀಪಲ್ಸ್ ಡೆಮಾಕ್ರಸಿ ಸಂಪಾದಕೀಯ)
ಅನುವಾದ : ರೇಣುಕಾ ಭಾರತಿ


Leave a reply