ಭೋಪಾಲ್ ದುರಂತಕ್ಕೆ 41 ವರ್ಷಗಳಾಯಿತು. ಭಾರತದ ಕೈಗಾರಿಕಾ ಚರಿತ್ರೆಯಲ್ಲೇ ಮರೆಯಲಾಗದ ಅತ್ಯಂತ ಭೀಕರ ದುರ್ಘಟನೆಯದು. ಯೂನಿಯನ್ ಕಾರ್ಬೈಡ್ ಕಾರ್ಖಾನೆ ಹೊರಸೂಸಿದ ವಿಷ ಅನಿಲದಿಂದಾಗಿ ಭೋಪಾಲ್ ಮೃತ್ಯುವಿನ ನಗರವಾಗಿ, ಶವಗಳ ರಾಶಿಯಾಗಿ ಮಾರ್ಪಟ್ಟಿತು. ಅದು ಡಿಸೆಂಬರ್ 2, 3, 1984ರ ರಾತ್ರಿ ಈ ದುರ್ಘಟನೆ ಸಂಭವಿಸಿತು. ಅಂದು ಇನ್ನೂ ಬೆಳಗಾಗಿರಲಿಲ್ಲ. ಮಧ್ಯಪ್ರದೇಶ ರಾಜ್ಯದ ರಾಜಧಾನಿ ಭೋಪಾಲ್ ನಗರ ಅಮೆರಿಕದ ಅತಿದೊಡ್ಡ ಬಹುರಾಷ್ಟ್ರೀಯ ಕಂಪನಿಯಾದ ಯೂನಿಯನ್ ಕಾರ್ಬೈಡ್ ಕಂಪನಿ (UCC) ಯಿಂದ ಕೀಟನಾಶಕಗಳನ್ನು ತಯಾರಿಸಲು ಸಂಗ್ರಹಿಸಿದ್ದ ಅತ್ಯಂತ ವಿಷಕಾರಿ ಮೀಥೈಲ್ ಐಸೋಸೈನೇಟ್ (MIC) ಎಂಬ 41 ಟನ್ ಗಳಷ್ಟು ವಿಷಕಾರಿ ರಾಸಾಯನಿಕ ಅನಿಲ ಸಂಗ್ರಹಣಾ ತೊಟ್ಟಿಯಿಂದ ಸೋರಿಕೆಯಾಗಿ ಅಂದು ನಿದ್ರಿಸುತ್ತಿರುವ ನಗರದಾದ್ಯಂತ ಹರಡಿತ್ತು. ಕೂಡಲೇ 5479 ಜನರು ಸಾವನ್ನಪ್ಪಿದರು. ಸಾವಿನ ಸಂಖ್ಯೆ ಕ್ರಮೇಣ 22,000 ಕ್ಕೆ ಏರಿತು. ಸುಮಾರು ಐದು ಲಕ್ಷಕ್ಕೂ ಹೆಚ್ಚಿನ ಜನರು ಗಂಭೀರವಾಗಿ ಈ ದುಷ್ಪರಿಣಾಮಕ್ಕೆ ಒಳಗಾದರು. ಸಾವಿರಾರು ಜನರು ಶಾಶ್ವತವಾಗಿ ಅಂಗವಿಕಲರಾದರು. ಗರ್ಭಿಣಿಯರು ಸತ್ತ ಶಿಶುಗಳಿಗೆ ಜನ್ಮ ನೀಡಿದರು. 15,000 ದನಕರುಗಳು ಮತ್ತು ಸಾವಿರಾರು ಪಕ್ಷಿಗಳು ಸಹ ಸಾವನ್ನಪ್ಪಿದವು. ಈ ವಿಷಕಾರಿ ಅನಿಲದ ದೀರ್ಘಕಾಲೀನ ಪರಿಣಾಮಗಳಿಗೆ ಜನರು ಇನ್ನೂ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಈ ಭೀಕರ ದುರಂತಕ್ಕೆ ಯಾರು ಹೊಣೆ? ಸರ್ಕಾರ ಅಪರಾಧಿಗಳನ್ನು ಶಿಕ್ಷಿಸಲು ಕ್ರಮ ಕೈಗೊಂಡಿದೆಯೇ? ಹೊಣೆಗಾರರಿಗೆ ಶಿಕ್ಷೆಯಾಗಿದೆಯೇ? ಭೋಪಾಲ್ನ ಜನರಿಗೆ ಸಮರ್ಪಕವಾಗಿ ಪರಿಹಾರ ನೀಡಲಾಗಿದೆಯೇ? ಅವರ ವೈದ್ಯಕೀಯ ವೆಚ್ಚವನ್ನು ಪಾವತಿಸಲಾಗಿದೆಯೇ? ಭಾರತ ಸರ್ಕಾರವು ಇಂತಹ ಘಟನೆಗಳು ಸಂಭವಿಸದಂತೆ ತಡೆಯಲು ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಯಾವ ಕ್ರಮಗಳನ್ನು ಕೈಗೊಂಡಿದೆ? ಇದೆಲ್ಲದಕ್ಕೂ ಒಂದೇ ಉತ್ತರ ‘ಇಲ್ಲ’ ಎಂಬುದಾಗಿದೆ. ಪರಮಾಣು ಅಪಘಾತಗಳ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಪರಮಾಣು ಅಪಘಾತವೆಂದರೆ ಜಪಾನ್ನಲ್ಲಿ ನಡೆದ ಫುಕುಶಿಮಾ ಅಪಘಾತ. ನಮ್ಮನ್ನು ಆಳುವವರು ಕೂಡ ಇದರಿಂದ ಯಾವುದೇ ಗುಣ ಪಾಠ ಕಲಿತಿಲ್ಲ. ಇದಕ್ಕೆ ಮತ್ತೊಂದು ಪುರಾವೆಯೆಂದರೆ, ನಮ್ಮ ದೇಶದಲ್ಲಿ ಪರಮಾಣು ಅಪಘಾತಗಳು ಸಂಭವಿಸಿದಾಗ ಅಮೆರಿಕದ ಕಂಪನಿಗಳು ಸಂತ್ರಸ್ತರಿಗೆ ಪರಿಹಾರ ಪಾವತಿಸುವುದರಿಂದ ವಿನಾಯಿತಿ ನೀಡುತ್ತಿವೆ.
ಭೋಪಾಲ್ ಸ್ಥಾವರದಲ್ಲಿ ಸುರಕ್ಷತಾ ಕ್ರಮಗಳ ಕೊರತೆಯ ವಿಷಯವನ್ನು ಆ ಸ್ಥಾವರದ ಕಾರ್ಮಿಕ ಸಂಘಟನೆಗಳು ಪದೇ ಪದೇ ಎತ್ತಿವೆ. ಆಡಳಿತ ಮಂಡಳಿ ಮತ್ತು ಸರ್ಕಾರ ಅವರನ್ನು ನಿರ್ಲಕ್ಷಿಸಿತು. ಪರಿಣಾಮವಾಗಿ ತೊಂದರೆಗೀಡಾದವರು ಯಾರು? ಭೋಪಾಲ್ನ ಕಾರ್ಮಿಕರು ಮತ್ತು ಬಡವರು ಮಾತ್ರ. ಕಾರ್ಖಾನೆಯ ಸುತ್ತಮುತ್ತಲಿನ ಕಾರ್ಮಿಕ ಕಾಲೋನಿಗಳು, ಬಡವರ ಕೇರಿಗಳು ಮತ್ತು ಕೊಳಗೇರಿಗಳಲ್ಲಿ ವಾಸಿಸುವವರು ಹೆಚ್ಚು ತೊಂದರೆಗೀಡಾಗಿದ್ದರು. ಆದ್ದರಿಂದ, ನ್ಯಾಯಕ್ಕಾಗಿ ನಡೆದ ಹೋರಾಟಗಳೆಲ್ಲವೂ ಶೋಷಕರು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸರ್ಕಾರದಲ್ಲಿರುವ ಅವರ ಬೆಂಬಲಿಗರ ವಿರುದ್ಧ ಶೋಷಿತ ವರ್ಗದ ಜನರು ನಡೆಸಿದ ಹೋರಾಟವೇ ಆಗಿದೆ. ಈ ಇಡೀ ದುರಂತ ಕಥೆಯು ನಮಗೆ ಕೆಲವು ಕಟು ಸತ್ಯಗಳನ್ನು ಪ್ರಸ್ತುತಪಡಿಸಿದೆ. ಯುಪಿಎ ಮತ್ತು ಎನ್ಡಿಎ ಕೇಂದ್ರ ಸರ್ಕಾರಗಳು ಅಮೆರಿಕ ಮತ್ತು ಭಾರತೀಯ ಬಹುದೊಡ್ಡ ಹೂಡಿಕೆದಾರರು ಮತ್ತು ಕಾರ್ಪೊರೇಟ್ ಶಕ್ತಿಗಳ ಹಿತಾಸಕ್ತಿಗಳನ್ನು ರಕ್ಷಿಸುತ್ತಿವೆ. 1) ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಈ ವರ್ಗದ ಪಕ್ಷಪಾತದ ಧೋರಣೆ ಪ್ರತಿಫಲಿಸುತ್ತಿದೆ. 2) ಸತ್ಯವೆಂದರೆ ಸತ್ತ 22,000 ಜನರು ಮತ್ತು ಗಾಯಗೊಂಡ ಲಕ್ಷಾಂತರ ಜನರು ಬಡವರೇ ಆಗಿದ್ದಾರೆ.
ಭೋಪಾಲ್ನಲ್ಲಿ ಜಗತ್ತಿನ ಬೇರೆಲ್ಲಿಯೂ ಅನುಮತಿಸದ ಅತ್ಯಂತ ಕಳಪೆ ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ಭೋಪಾಲ್ ಅನಿಲ ದುರಂತ ಸಂಭವಿಸುವವರೆಗೂ ತಿಳಿದಿರಲಿಲ್ಲ. ಇಂದಿಗೂ ಕೂಡ, ಭೋಪಾಲ್ ಯುಸಿಸಿ ಸ್ಥಾವರದಲ್ಲಿ ಸಾವಿರಾರು ಟನ್ ಗಳಷ್ಟು ವಿಷಕಾರಿ ತ್ಯಾಜ್ಯಗಳನ್ನು ಸಂಗ್ರಹಿಸಿಡಲಾಗಿದೆ. ಈ ವಿಷಕಾರಿ ತ್ಯಾಜ್ಯವು ಗಂಭೀರ ಪರಿಣಾಮಗಳೊಂದಿಗೆ ಅಂತರ್ಜಲವನ್ನು ಕಲುಷಿತಗೊಳಿಸುತ್ತಿದೆ. ಇವುಗಳನ್ನು ಸಮಗ್ರವಾಗಿ ವಿಲೇವಾರಿ ಮಾಡದಿರುವುದರಿಂದ ಅಪಾಯವು ಮುಂದುವರಿಯುತ್ತಿದೆ.
ಕಾರ್ಪೊರೇಟ್, ಬಹುರಾಷ್ಟ್ರೀಯ ಕಂಪನಿಗಳ ಇಂತಹ ಕಾರ್ಯಗಳು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವುದು ಅವರ ಏಕೈಕ ಕಾರ್ಯಸೂಚಿಯಾಗಿದೆ. ಆದ್ದರಿಂದ ನಮ್ಮ ದೇಶದಲ್ಲಿ ಪರಿಹಾರದ ಬಗ್ಗೆ ಕಠಿಣ ಕಾನೂನುಗಳನ್ನು ತರಬೇಕು. ಭೋಪಾಲ್ ದುರಂತವನ್ನು ಎಂದಿಗೂ ಮರೆಯಬಾರದು. ಇದಕ್ಕೆ ಕಾರಣರಾದವರನ್ನು ಜೈಲಿಗೆ ಹಾಕಬೇಕು. ಯುಸಿಸಿ ಅಥವಾ ಕೇಂದ್ರ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ಡೌ ಕೆಮಿಕಲ್, ಭೋಪಾಲ್ ಸ್ಥಾವರದಿಂದ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ನಷ್ಟ ಪರಿಹಾರವನ್ನು ಸಲ್ಲಿಸಬೇಕು. ಸಂತ್ರಸ್ತರಿಗೆ ಸರಿಯಾದ ವೈದ್ಯಕೀಯ ವ್ಯವಸ್ಥೆಯನ್ನು ಸ್ಥಾಪಿಸಬೇಕು ಮತ್ತು ಅವರಿಗೆ ಅಗತ್ಯವಾದ ಔಷಧಿಗಳು ಲಭ್ಯವಾಗುವಂತೆ ಮಾಡಬೇಕು. ಸ್ವತಂತ್ರ ಮತ್ತು ಸ್ವಾಯತ್ತ ಪರಮಾಣು ಸುರಕ್ಷತಾ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸಬೇಕು. ಭೋಪಾಲ್ ದುರಂತದಿಂದ ಪಾಠ ಕಲಿಯದಿದ್ದರೆ ಅದರ ಪರಿಣಾಮ ಇನ್ನಷ್ಟು ಗಂಭೀರವಾಗಿರುತ್ತದೆ. ಅಲ್ಲವೇ?


Leave a reply