ಈ ವರ್ಷ-2025ಕ್ಕೆ ಬಂಗಾಳದ ಹಿಂದೂ ರಾಷ್ಟ್ರವಾದಿ ಕವಿ-ಸಾಹಿತಿ ಬಂಕಿಮ ಚಂದ್ರ ಚಟರ್ಜಿ ವಿರಚಿತ ವಂದೇಮಾತರಂ ಅನ್ನು ಬರೆದು 150 ವರ್ಷಗಳಾಗುತ್ತವೆ. ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂ ಎಂಬುದು ದೇಶಭಕ್ತರ ಘೋಷಣೆಯೇ ಆಗಿದ್ದರೂ ಬಂಕಿಮಚಂದ್ರರ ವಂದೇ ಮಾತರಂ ಹಾಡಿನ ಪೂರ್ಣ ಪಠ್ಯ ಮತ್ತು ಆ ಹಾಡು ಇರುವ ಆನಂದ ಮಠ ಕಾದಂಬರಿ ಮುಸ್ಲಿಂ ದ್ವೇಷಿ ಮತ್ತು ಬ್ರಿಟಿಷ್ ಪರ ಕಥನದ ಪಠ್ಯ. ಹೀಗಾಗಿ 1937 ರಲ್ಲಿ ಆ ಹಾಡಿನ ಮೊದಲೆರಡು ಚರಣಗಳನ್ನು ಮಾತ್ರ ಹಾಡಬೇಕೆಂದು ನೆಹರೂ-ಪಟೇಲ್ ಮತ್ತು ಸುಭಾಷ ಹಾಗೂ ಇನ್ನಿತರ ಕಾಂಗ್ರೆಸ್ ನಾಯಕತ್ವ ಸಮಿತಿ ಸರ್ವ ಸಮ್ಮತಿಯಿಂದ ತೀರ್ಮಾನಿಸಿತ್ತು. ಅದನ್ನೇ 1950 ರ ನವಂಬರ್ 24 ರಂದು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದ ಬಾಬು ರಾಜೇಂದ್ರ ಪ್ರಸಾದರು ಅಧ್ಯಕ್ಶೀಯ ಹೇಳಿಕೆಯಾಗಿ ಘೋಷಿಸಿದರು. ಹಾಗೂ ಸಂವಿಧಾನ ಸಭೆ ಒಕ್ಕೊರಲಿನಿಂದ ಮಾನವತವಾದಿ -ರಾಷ್ಟ್ರವಾದಿ ಗುರುದೇವ ರವೀಂದ್ರನಾಥ್ ಠಾಗೂರ ವಿರಚಿತ ಜನಗಣಮನವನ್ನು ರಾಷ್ಟ್ರಗೀತೆಯಾಗಿ ಘೋಷಿಸಿತು. ಹೀಗಾಗಿ ಒಂದು ಅರ್ಥದಲ್ಲಿ ಜನಗಣಮನವೋ ಅಥವಾ ವಂದೇ ಮಾತರಮ್ಮೋ? ಎಂಬ ಆಯ್ಕೆ ಭಾರತವು ಮುಸ್ಲಿಂ ದ್ವೇಷಿ ಹಿಂದೂ ರಾಷ್ಟ್ರವಾಗಬೇಕೋ ಅಥವಾ ಸರ್ವಜನಾಂಗದ ಶಾಂತಿಯ ತೋಟವಾಗಬೇಕೋ ಎಂಬ ರಾಜಕೀಯ ಆಯ್ಕೆಯ ಪ್ರಶ್ನೆಯೂ ಆಗಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಭಾರತವನ್ನು ಬ್ರಾಹ್ಮಣೀಯ ಹಿಂದೂ ರಾಷ್ಟ್ರ ಮಾಡುವ ಬೃಹತ್ ಹುನ್ನಾರದ ಭಾಗವಾಗಿ ವಂದೇ ಮಾತರಂ ನ 150 ನೇ ವರ್ಷವನ್ನು ದುರುದ್ದೇಶದಿಂದ ಸಂಭ್ರಮಿಸುತ್ತಿದೆ. ಮತ್ತು ಇಡಿ ವರ್ಷ ದೇಶಾದ್ಯಂತ ಸಂಭ್ರಮಾಚರಣೆಯನ್ನು ನಡೆಸಲು ಮೋದಿ ಸರ್ಕಾರ ಮತ್ತು ಬಿಜೆಪಿ ಸಜ್ಜಾಗಿವೆ.
ಅದೇ ಸಮಯದಲ್ಲಿ ಉತ್ತರ ಕನ್ನಡದ ಲೋಕಸಭಾ ಸದಸ್ಯ ವಿಶ್ವೇಶರ ಹೆಗಡೆ ಕಾಗೇರಿಯವರು ಭಾರತದ ರಾಷ್ಟ್ರಗೀತೆಯಾಗಿರುವ ರಬೀಂದ್ರನಾಥ್ ಠಾಗೂರ ವಿರಚಿತ ಜನಗಣಮನವು ಬ್ರಿಟಿಷ್ ದೊರೆ ಜಾರ್ಜ್-5 ರ ಸ್ವಾಗತಕ್ಕೆ ಬರೆದ ಗೀತೆಯೆಂದು ಹೀಯಾಳಿಸುತ್ತಾ, ಅಸಲಿ ರಾಷ್ಟ್ರಗೀತೆ ವಂದೇ ಮಾತರಂ ಆಗಬೇಕಿತ್ತೆಂದು ಹೇಳಿಕೆ ನೀಡಿ ಬಿಜೆಪಿಯ ಅಸಲಿ ಉದ್ದೇಶವನ್ನು ಬಯಲುಗೊಳಿಸಿದ್ದಾರೆ. ಅದರ ವಿರುದ್ಧ ತೀವ್ರವಾದ ಟೀಕೆ ವ್ಯಕ್ತವಾಗುತ್ತಿದ್ದಂತೆ ಆ ಹೇಳಿಕೆಗೆ ಅವರು ತೋರಿಕೆಯ ವಿಶಾದ ವ್ಯಕ್ತಪಡಿಸಿದ್ದರೂ ಬಿಜೆಪಿ ಮತ್ತು ಸಂಘಿಗಳು ಈ ಅಪಪ್ರಚಾರವನ್ನೇನೂ ನಿಲ್ಲಿಸಿಲ್ಲ. ಮುಂದಿನ ವರ್ಷ ಪ. ಬಂಗಾಳದಲ್ಲಿ ಚುನಾವಣೆಯು ನಡೆಯಲಿದ್ದು ಟಾಗೂರರು ಬಂಗಾಳಿಗಳ ಅಸ್ಮಿತೆಯ ಪ್ರತೀಕವೂ ಆಗಿರುವುದರಿಂದ ಕಾಗೇರಿಯವರ ತರ ನೇರ ದಾಳಿ ಮಾಡದೆ ಪರೋಕ್ಷವಾಗಿ ಟಾಗೂರರ ಜನಗಣಮನ ಮತ್ತು ಅದರ ಹಿಂದಿನ ಎಲ್ಲರನ್ನೂ ಒಳಗೊಳ್ಳುವ ಭಾರತ ರಾಷ್ಟ್ರೀಯತೆಯ ವಿರುದ್ಧ ಸಂಘಿಗಳು ಯುದ್ಧ ಸಾರಿದ್ದಾರೆ. ಮತ್ತೊಂದು ಕಡೆ ಪ್ರಧಾನಿ ನರೇಂದ್ರಮೋದಿಯವರು ವಂದೇಮಾತರಂ-150 ಆಚರಣೆಯನ್ನು ಉದ್ಘಾಟಿಸುತ್ತಾ : “1937 ರಲ್ಲಿ ವಂದೇಮಾತರಂ ಗೀತೆಯ ಕೆಲವು ಪ್ರಮುಖ ಸಾಲುಗಳನ್ನು ಕೈಬಿಟ್ಟಿದ್ದು ದೇಶವಿಭಜನೆಯ ಬೀಜ ಬಿತ್ತಲು ಕಾರಣವಾಯಿತು. ಅಂತ ವಿಭಜಕ ಮನಸ್ಥಿತಿ ದೇಶಕ್ಕೆ ಇನ್ನೂ ಸವಾಲಾಗಿ ಉಳಿದಿದೆ. 1937 ರಲ್ಲಿ ವಂದೇ ಮಾತರಂ ನ ಆತ್ಮದ ಒಂದು ಭಾಗವನ್ನು ಬೇರ್ಪಡಿಸಲಾಯಿತು. ರಾಷ್ಟ್ರ ನಿರ್ಮಾಣದ ಮಹಾಮಂತ್ರ ಎನಿಸಿರುವ ಗೀತೆಗೆ ಈ ಅನ್ಯಾಯ ಏಕೆ ಮಾಡಲಾಯಿತು ಎಂಬುದನ್ನು ಈ ಪೀಳಿಗೆ ಅರ್ಥಮಾಡಿಕೊಳ್ಳಬೇಕಿದೆ” ಎಂದು ಬಿಜೆಪಿಯ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಅದರ ಮುಂದುವರೆಕೆಯಾಗಿ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಬಿಜೆಪಿ ಸರ್ಕಾರಗಳು ತಮ್ಮತಮ್ಮ ರಾಜ್ಯಗಳ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸುವುದಾಗಿ ಘೋಷಿಸಿವೆ. ಹೀಗಾಗಿ ಇಂದು ಜನಗಣಮನದ ಬಗ್ಗೆ ಕಾಗೇರಿಯಂತವರ ಆಕ್ಷೇಪದ ಸತ್ಯಾಸತ್ಯತೆಯನ್ನು ಮತ್ತು ಬಂಕಿಮ ಚಂದ್ರರ ವಂದೇ ಮಾತರಂ ಗೀತೆ ಮತ್ತು ಅದನ್ನು ಒಳಗೊಂಡಿರುವ ಆನಂದಮಠ ಕಾದಂಬರಿ ಮತ್ತದರ ಸಂದರ್ಭದ ಬಗ್ಗೆ ಕೂಲಂಕಷವಾಗಿ ಅರ್ಥಮಾದಿಕೊಳ್ಳುವ ಅಗತ್ಯವಿದೆ.
ಈ ವಿವಾದ ಹೊಸದೇಲ್ಲ. ಈ ಹಿಂದೆಯೂ ಇಂತ ವಿವಾದವನ್ನು ಹುಟ್ಟಿ ಹಾಕಿದಾಗ ಅದರ ಸತ್ಯಾಸತ್ಯೆಯ ಬಗ್ಗೆ ಹಲವಾರು ವಿದ್ವತ್ಪೂರ್ಣ ಅಧ್ಯಯನಗಳು ನಡೆದಿವೆ. ಅವು ಸಾರ್ವಜನಿಕವಾಗಿ ಲಭ್ಯವೂ ಇವೆ. ಉದಾಹರಣೆಗೆ ಆಸಕ್ತರು:- ಬಂಗಾಳದ ವಿಶ್ವಭಾರತಿ-ಶಾಂತಿನಿಕೇತನದ ಮಾಜಿ ಉಪಕುಲಪತಿ ಹಾಗೂ ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ “ಟಾಗೂರ್ ಫ಼ೆಲೋ” ಕೂಡ ಆಗಿದ್ದ ಸಬ್ಯಸಾಚಿ ಭಟ್ಟಾಚಾರ್ಯ ಅವರ : Vande Mataram- The Biography of a song” ಎಂಬ ಪೆಂಗ್ವಿನ್ ಪ್ರಕಾಶನ 2003 ರಲ್ಲಿ ಪ್ರಕಟಿಸಿದ ಕೃತಿ ಎಲ್ಲಾ ಮೂಲ ಆಕರಗಳನ್ನು ಆಧರಿಸಿದ ವಿದ್ವತ್ಪೂರ್ಣ ಕೃತಿಯಾಗಿದೆ. ಹಾಗೆಯೇ 2006 ರಲ್ಲಿ Economic And Political Weekly-EPW ಎಂಬ ವಿದ್ವತ್ಪೂರ್ಣ ಅಕಡೆಮಿಕ್ ಸಾಪ್ತಾಹಿಕಕ್ಕೆ ಇತಿಹಾಸ ತಜ್ನೆ ಪ್ರೊ. ತನಿಕಾ ಸರ್ಕಾರ್ ಅವರು ಬರೆದಿರುವ Birth of a Goddess, “Vande Mataram”, Ananadmath and Hindu Nationhood ಎಂಬ ಸುದೀರ್ಘ ಲೇಖನವನ್ನೂ ಗಮನಿಸಬಹುದು. ಈ ಎರಡೂ ಲೇಖನಗಳಲ್ಲಿ ಜನಮನಗಣದ ಹಾಗೂ ವಂದೇ ಮಾತರಂ ಎರಡೂ ಗೀತೆಗಳ ಇತಿಹಾಸದ ದಾಖಲೆಗಳಿವೆ. ಹಾಗೆಯೇ ಆಸಕ್ತರು 1960 ರಲ್ಲೇ ವೆಂಕಟಾಚಾರ್ಯ ಅವರು ಮಾಡಿರುವ ಆನಂದಮಠ ಕಾದಂಬರಿಯ ಕನ್ನಡ ಅನುವಾದವನ್ನು ಕಣಜ ಅಂತರ್ಜಾಲದಲ್ಲಿ ಓದಬಹುದು. ಆ ನಂತರದಲ್ಲೂ ಅದರ ಮೂರು ಅನುವಾದಗಳು ಕನ್ನಡದಲ್ಲಿ ಬಂದಿವೆ. ವಂದೇ ಮಾತರಂ ಮತ್ತು ಆನಂದಮಠದ ವಸ್ತು, ಕೋಮು ಕಥನ ಮತ್ತು ಸಂದರ್ಭದ ಬಗ್ಗೆ ಚರ್ಚಿಸುವ ಮುನ್ನ ಜನಗಣಮನದ ಬಗ್ಗೆ ಸಂಘಿಗಳು ನಡೆಸುತ್ತಿರುವ ಪ್ರಚಾರದ ಸತ್ಯಾಸತ್ಯಗೆಗಳನ್ನು ಗಮನಿಸೋಣ.
ಜನಗಣಮನ-ಬ್ರಿಟಿಶ್ ಸಾಮ್ರಾಟರ ಸ್ತುತಿಗೀತೆಯೇ?
ಈ ವಿಷಯದ ಬಗ್ಗೆ ಕಾಗೇರಿಯವರ ಮೋದಿ ವಾಟ್ಸಾಪ್ ವಿಶ್ವವಿದ್ಯಾಲಯ ಪ್ರಯೋಜಿತ ಹೇಳಿಕೆ ಪ್ರಕಟಾವಾದ ನಂತರ ಆಂತರ್ಜಾಲದಲ್ಲಿ ಮತ್ತು ಇತರೆಡಗಳಲ್ಲಿ ಅದರ ಸುಳ್ಳನ್ನು ಬಯಲು ಪಡಿಸುವ ಹಲವಾರು ಮಾಹಿಪೂರ್ಣ ಲೇಖನಗಳು ಪ್ರಕಟವಾಗಿವೆ. ಈ ಎಲ್ಲಾ ಪ್ರತಿದಾಳಿಗಳನ್ನು ಎದುರಿಸಲಾಗದೆ ಕಾಗೇರಿಯವರು ತಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಆದರೂ ಟಾಗೂರರ ಜೀವಿತಾವಧಿಯಿಂದ ಹಿಡಿದು ಈವರೆಗೆ ಸಂಘಿಗಳು ಮತ್ತು ಅದರ ಆಸುಪಾಸಿನವರು ಮತ್ತು ಅದರ ಪ್ರಭಾವಕ್ಕೆ ಒಳಗಾಗುವ ಮಾಹಿತಿ ಇರದ ಪ್ರಗತಿಪರರು ಪದೇ ಪದೇ ಎತ್ತುವ ಈ ಅಸಂಗತದ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳುವ ಅಗತ್ಯವಿದೆ.
- ಜನಮನಗಣವನ್ನು ಬರೆದ ರವೀಂದ್ರನಾತ್ ಟಾಗೂರರು ಈ ದೇಶ ಕಂಡ ಅತ್ಯಪರೂಪದ ವಿಶ್ವ ಮಾನವತವಾದಿ ಹಾಗೂ ಅಂತಃಕರಣದ ರಾಷ್ಟ್ರವಾದಿ. ಹಾಗೆ ನೋಡಿದರೆ ವಂದೇ ಮಾತರಂ ನ ಮೊದಲೆರಡು ಚರಣಗಳಿಗೆ ಸಂಗೀತ ಸಂಯೋಜಿಸಿ 1986 ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದವರೂ ಕೂಡ ಟಾಗೂರರೇ.
- 1911 ರಲ್ಲಿ ಕಿಂಗ್ ಜಾರ್ಜ್-5 ಭಾರತಕ್ಕೆ ಬರುವರಿದ್ದರು. ಆಗ ಅವರ ಆಸ್ಥಾನದಲ್ಲಿದ್ದ ಸ್ನೇಹಿತರೊಬ್ಬರು ಟಾಗೂರರಿಗೆ ಒಂದು ಸ್ವಾಗತ ಗೀತೆಯನ್ನು ಬರೆಯಲು ಸಾಧ್ಯವೇ ಎಂದು ಕೇಳುವುದು ನಿಜ. ಆದರೆ ಟಾಗೂರರು ಸ್ವಾಗತ ಗೀತೆಯನ್ನು ಬರೆಯುವುದಿಲ್ಲ.
- ಬ್ರಿಟಿಶ್ ದೊರೆಯ ಸ್ವಾಗತ ಗೀತೆಯನ್ನು ಬರೆಯುವುದು ರಾಂಭುಜ್ ಚೌಧರಿ ಎಂಬ ಮತ್ತೊಬ್ಬ ಕವಿ-ಉಪಾಧ್ಯಾಯ. ಅದು : ಬಾದ್ಶಾ ಹಮಾರ, ಜಹಪನಾ ಹಮಾರ, ಸರ್ಕಾರ್ ಜಾರ್ಜ್ ಪಂಚಮ್, ಶಹೆನ್ ಶಾ ಹಮಾರ ಎಂದು ಬ್ರಿಟಿಶ್ ವಸಾಹತು ಶಾಹಿಯ ಸ್ಥುತಿ ಮಾಡುತ್ತದೆ. ಅದನ್ನೂ ಕೂಡ 1911 ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗುತ್ತದೆ.
- ಆದರೆ ಅದೇ ಸಮಯದಲ್ಲಿ ಬಾದ್ ಶಾ ಗೀತೆಯ ಆಶಯಕ್ಕೆ ತದ್ವಿರುದ್ಧವಾದ ಜನಗಣಮನ ಎಂಬ ಗೀತೆಯನ್ನು ಟಾಗೂರರು ಬರೆಯುತ್ತಾರೆ. ಅದು 5 ಚರಣಗಳನ್ನು ಹೊಂದಿದ್ದು ರಾಷ್ಟ್ರಗೀತೆಯಾಗಿ ನಾವು ಹಾಡುತ್ತಿರುವುದು ಮೊದಲ ಚರಣವನ್ನು ಮಾತ್ರ.
- ಜನಗಣಮನ ಗೀತೆಯಲ್ಲಿ ಅಖಂಡ ಭಾರತದ ಸಮತೋಲಿತ ಚಿತ್ರಣವನ್ನು ನೀಡುತ್ತಾ ಎಲ್ಲರನ್ನೂ ಒಳಗೊಂಡಿರುವ ಭಾರತವನ್ನು ಕಲ್ಪಿಸಿಕೊಳ್ಳಲಾಗಿದೆ. ಮತ್ತು ಭಾರತದ ಸಾವಿರಾರು ವರ್ಷಗಳ ಇತಿಹಾಸದುದ್ದಕ್ಕೂ (ಬ್ರಿಟಿಷ್ ಕಾಲದಲ್ಲಿ ಮಾತ್ರವಲ್ಲ )ಭಾರತೀಯರನ್ನು ಮತ್ತು ಭಾರತದ ರಥವನ್ನು ಏರಿಳಿವುಗಳ ಹಾದಿಯಲ್ಲಿ ಪಥ ತಪ್ಪದಂತೆ ನಡೆಸಿಕೊಂಡು ಬಂದಿರುವ ಅಮೂರ್ತ ಶಕ್ತಿಯನ್ನು ಭಾರತ ಭಾಗ್ಯ ವಿಧಾತ ಎಂದು ಕರೆದು ಜಯಕಾರ ಹಾಡಲಾಗಿದೆ. ಹೀಗಾಗಿ ಅದು ಬ್ರಿಟಿಶ್ ರಾಜನನ್ನು ಹೊಗಳಲು ಬರೆದ ಗೀತೆ ಎಂದು ಭಾವಿಸುವುದು ದುರುದ್ದೇಶದ ಪ್ರಚಾರದ ಭಾಗವಾಗಿದೆ. ಆದರೆ ಈ ಹಾಡನ್ನೂ ಕೂಡ 1911 ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.
- ಆದರೆ “ಜನಗಣಮನದಲ್ಲಿ ಬರುವ ಬರುವ ಭಾಗ್ಯ ವಿಧಾತ ಬ್ರಿಟಿಶ್ ರಾಜನೇ , ಏಕೆಂದರೆ ಭಾರತವನ್ನು ಭಾರತ ಮಾತೆಯೆಂದು ಭಾವಿಸಿಕೊಳ್ಳಲಾಗುತ್ತದೆ, ಭಾಗ್ಯ ವಿಧಾತನೆಂದಲ್ಲ” ಎಂಬ ಪ್ರಶ್ನೆ ಮತ್ತು ವಿವಾದ ಟಾಗೂರರ ಜೀವಿತಾವಧಿಯಲ್ಲೇ ಉಂಟಾಗಿತ್ತು.
ಅದರ ಬಗ್ಗೆ ಟಾಗೂರರೇ 1912 ರಲ್ಲೂ ಮತ್ತು ಆ ನಂತರ 1939 ರಲ್ಲೂ ತುಂಬಾ ಸ್ಪಷ್ಟವಾಗಿ ವಿವರಣೆ ನೀಡಿದ್ದರು. ಜನಗಣಮನದ ನಾಲ್ಕನೇ ಚರಣದಲ್ಲಿ ಭಾರತವನ್ನು ಮಾತೆಯೆಂದೂ ಬಣ್ಣಿಸಲಾಗಿದೆ. ಮತ್ತು ಟಾಗೂರರ ಭಾಗ್ಯ ವಿಧಾತ ಭಾರತವನ್ನು ಕೈಹಿಡಿದು ನಡೆಸುತ್ತಿರುವುದು ಸಾವಿರಾರು ವರ್ಷಾಗಳಿಂದ. ಅಂದರೆ ಬ್ರಿಟಿಶ್ ರಾಜನಿರಲಿ, ಬ್ರಿಟನ್ ಎಂಬುದು ಒಂದು ದೇಶವಾಗಿ ಹುಟ್ಟುವ ಮುಂಚಿನಿಂದಲೂ ಭಾಗ್ಯ ವಿಧಾತನಿದ್ದಾನೆ. ಹೀಗಾಗಿ ಜನಗಣಮನ ಬ್ರಿಟಿಶ್ ದೊರೆಯ ಸ್ವಾಗತಕ್ಕಾಗಿ ಬರೆದದ್ದೇ ಎಂಬ ಪ್ರಶ್ನೆಗೆ ಉತ್ತರಿಸುವುದೇ ಅಪಮಾನಕಾರಿ ಎಂದು ಟಾಗೂರ್ 1939 ರಲ್ಲಿ ಪುಲಿನ್ ಬಿಹಾರಿ ಸೇನ್ ಎಂಬುವರಿಗೆ ಬರೆದ ಪತ್ರದಲ್ಲಿ ಸ್ಪಷ್ಟ ಪಡಿಸುತ್ತಾರೆ. ಹೆಚ್ಚಿನ ವಿವರಗಳಿಗೆ ಆಸಕ್ತರು The Hindu ಪತ್ರಿಕೆಯಲ್ಲಿ ಅನಿರ್ಬನ್ ಭಟ್ಟಾಅಚಾರ್ಯ ಅವರು ಬರೆದಿರುವ Tagore And That Song ಲೇಖನವನ್ನು ಈ ವಿಳಾಸದಲ್ಲಿ ಓದಬಹುದು:
(https://www.thehindu.com/opinion/open-page/tagore-and-that-song/article10886480.ece)
- ಜನಗಣಮನದಲ್ಲಿ ಕೆಲವು ಭೌಗೋಳಿಕ ಹೆಸರುಗಳ ತಿದ್ದುಪಡಿ ಮಾಡಬೇಕೆಂಬ ಬಗ್ಗೆ ದಾಖಾಲಾದ ಅಹವಾಲಿನ ಬಗ್ಗೆ 2005 ರಲ್ಲಿ ಭಾರತದ ಸುಪ್ರೀಂ ಕೋರ್ಟು ಕೂಡ ತನ್ನ ತೀರ್ಪಿನಲ್ಲಿ ಟಾಗೂರರೇ ಸ್ಪಷ್ಟಪಡಿಸಿರುವಂತೆ ಐದು ಚರಣಗಳಲ್ಲಿ ಬರೆದಿರುವ ಈ ಹಾಡು ಭಾರತದ ದೈವವನ್ನು ಉದ್ದೇಶಿಸಿ ಬರೆಯಲಾಗಿದೆ. ಈ ಗೀತೆಯು ಹೇಗೆ ಭಾರತವು ವಿವಿಧ ಧರ್ಮ, ಭಾಷೆ, ಪ್ರದೇಶ ಮತ್ತು ಸಮುದಾಯಗಳ ಸಂಗಮವಾಗಿದೆ ಎಂಬುದನ್ನು ಹೇಳುತ್ತದೆ. ಈ ಗೀತೆಯು ವಿವಿಧತೆಗಳಲ್ಲಿ ಏಕತೆಯ ಸಂದೇಶವಾಗಿದೆ ಎಂದು ತೀರ್ಪಿತ್ತಿದೆ. (https://api.sci.gov.in/jonew/judis/27027.pdf)
- ರಬೀಂದ್ರನಾಥ ಟಾಗೂರರು ಮಾನವತಾವಾದಿ ರಾಷ್ಟ್ರೀಯವಾದಿಗಳಾಗಿದ್ದರು. ಕಾಂಗ್ರೆಸ್ಸಿನಲ್ಲಿರದ್ದರೂ ಅದರ ಹೋರಾಟದ ದಿಕ್ಕಿನ ಬಗ್ಗೆ ಸದಾ ಎಚ್ಚರಿಕೆಯ ವಿಮರ್ಶೆಗಳನ್ನು ಮಾಡುತ್ತಿದ್ದರು. ಅವರ ಸ್ವತಂತ್ರ ಭಾರತದ ಕಲ್ಪನೆ ಇನ್ನೂ ಸ್ಪಷ್ಟವಾಗಿ 1901 ರಲ್ಲಿ ಅವರು ಬರೆದ: Where the mind is without fear And the head is held high Where knowledge is free… ಎಂಬ “…ಎಲ್ಲಿ ಮನಕೆ ಅಳುಕಿರದೋ…..ಎಲ್ಲಿ ಮನಕೆ ಯಾವುದೇ ಅಡತಡೆಗಳಿರದೋ, ಎಲ್ಲಿ ಮತಧರ್ಮ, ಸಂಪ್ರದಾಯ ಹಾಗೂ ಸಂಕುಚಿತ ರಾಷ್ಟ್ಯ್ರೀಯತೆಗಳು ಮನುಷ್ಯರ ಸಾಮೂಹಿಕ ಒಳಿತು ಮತ್ತು ವಿಕಾಸಕ್ಕೆ ಅಡ್ಡಿಯಾಗದೋ , ಅಂತ ಸ್ವಾತಂತ್ರ್ಯಕ್ಕೆ ಈ ದೇಶ ತೆರೆದುಕೊಳ್ಳಲಿ… ಎಂಬ ವಿಶ್ವ ಮಾನವ ಆಶಯದಲ್ಲಿ ಸ್ಪಶ್ಟಗೊಳ್ಳುತ್ತದೆ. ವಾಸ್ತವದಲ್ಲಿ ಭಾರತದ ನಿಜವಾದ ರಾಷ್ಟ್ರಗೀತೆ ಈ ಕವನವಾಗಬೇಕಿತ್ತು. ಈಗಂತೂ ಈ ಕವನಗಳ ಆಶಯಗಳ ಮಾರ್ಗದರ್ಶನ ಹಿಂದೆಂದಿಗಿಂತಲೂ ಅಗತ್ಯವಿದೆ.
- ಟಾಗೂರರು1905 ರಲ್ಲಿ ಬ್ರಿಟಿಶರು ಮಾಡಿದ ಬಂಗಾಳ ವಿಭಜನೆಯ ವಿರುದ್ಧ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಆ ಹೋರಾಟದಲ್ಲಿ ಬಂಕಿಮರ ವಂದೇ ಮಾತರಂ ನ ಮೊದಲೆರಡು ಚರಣಗಳನ್ನು ಹಾಡುತ್ತಿದ್ದರು. 1919 ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವಿರುದ್ಧ ಬ್ರಿಟಿಷ್ ಸರ್ಕಾರ ತಮಗೆ ಕೊಟ್ಟಿದ್ದ ನೈಟ್ ಹುಡ್ ಪ್ರಶಸ್ತಿಯನ್ನು ವಪಸ್ ಮಾಡಿದ್ದರು. ಮೋದಿಯ ಪಿತಾಮಹರಾದ ಆರೆಸ್ಸೆಸ್ ಮತ್ತು ಸಾವರ್ಕರ್ ಅವರುಗಳು ಬ್ರಿಟಿಶರ ಗುಲಾಮಿತನ ಮಾಡುತ್ತಾ ಸಮಾಜದಲ್ಲಿ ಕೋಮು ದ್ವೇಷ ಬಿತ್ತುತ್ತಿದ್ದಾಗ, ಸಮಗ್ರ ಸ್ವಾತಂತ್ರ್ಯ ಆಶಯಗಳೊಂದಿಗೆ ಸ್ವಾತಂತ್ರ್ಯ ಹೋರಾಟದ ಜೊತೆಗಿದ್ದರು ಮತ್ತು ಸಮಾಜದಲ್ಲಿ ಸಾಮಾಜಿಕ ನ್ಯಾಯ ಮತ್ತು ಬಾವೈಕ್ಯತೆಗಾಗಿ ಶ್ರಮಿಸಿದ್ದರು.
- ಟಾಗೂರರಿಗೆ ರಾಷ್ಟ್ರವೆಂದರೆ ಅಲ್ಲಿನ ಜನ ಮತ್ತು ಸ್ವಾತಂತ್ರ್ಯವೆಂದರೆ ಜನದ ಬವಣೆಗಳ ವಿಮೋಚನೆಯೇ ಆಗಿತ್ತು. ಹೀಗಾಗಿ ವಂದೇ ಮಾತರಂ ರೀತಿ ದೇಶವನ್ನು ಒಂದು ಧರ್ಮಕ್ಕೆ ಸೀಮಿತವಾಗಿ ಅಮೂರ್ತವಾಗಿ ಮಾತೆಯಾಗಿ ಭಾವನಾತ್ಮಕವಾಗಿ ಕಲ್ಪಿಸಿಕೊಂಡು, ಮೂರ್ತ ಜನರನ್ನು ಅವರ ಬವಣೆಗಳನ್ನು ಹಿಂದಕ್ಕೆ ಸರಿಸುವ ಬಗ್ಗೆ ತೀವ್ರವಾದ ವಿಮರ್ಶೆಯಿತ್ತು. ಇದು ಟಾಗೂರರು 1905 ರಲ್ಲಿ ಬರೆದ “..ಘರೇ ಭೈರೇ” ಕಾದಂಬರಿಯಲ್ಲಿ ತುಂಬಾ ಸ್ಪಷ್ಟವಾಗಿ ಘೋಶಿತವಾಗುತ್ತದೆ.
ಹೀಗಾಗಿ ಜನಗಣಮನ ಮತ್ತು ವಂದೇ ಮಾತರಂ ಗಳು ಎರಡು ವಿಭಿನ್ನ ಭಾರತದ ಕನಸಿನ ಆದರ್ಶಗಳೂ ಆಗಿವೆ. ಜನಗಣಮನ ಎಲ್ಲರನ್ನೂ ಒಳಗೊಳ್ಳುವ, ಸಾಮಾಜಿಕ ನ್ಯಾಯವುಳ್ಳ ಜನತಂತ್ರದ ಆಶಯ ಗೀತೆಯಾಗಿದ್ದರೆ, ವಂದೇ ಮಾತರಂ ಸಂಘಪರಿವಾರ ಮತ್ತು ಮೋದಿ ಸರ್ಕಾರ ಬಯಸುವ ದ್ವೇಷ ಆಧಾರದ ಬ್ರಾಹ್ಮಣೀಯ ಹಿಂದೂ ಬಂಡವಾಳಶಾಹಿ-ಪಾಳೇಗಾರಿ ಭಾರತವಾಗಿದೆ. ಇಂದು ಬಿಜೆಪಿ ಮತ್ತು ಸಂಘಪರಿವಾರ ವಂದೇ ಮಾತರಂ ಮೂಲಕ ಜನಗಣಮನದ ಮೇಲೆ ಮಾಡುತ್ತಿರುವ ದಾಳಿಯ ಹಿಂದಿರುವ ರಾಜಕಾರಣವೂ ಅದೇ ಆಗಿದೆ. ಆದ್ದರಿಂದಲೇ ಮೋದಿ ಸರ್ಕಾರ ವಂದೇ ಮಾತರಂ ಗೆ 150 ವರ್ಷ ತುಂಬುತ್ತಿರುವ ನೆಪದಲ್ಲಿ ಸಂಘಿಗಳು ಈ ಸಂದರ್ಭವನ್ನು ಬಳಸಿಕೊಂಡು ಇನ್ನೊಮ್ಮೆ ಈ ದೇಶದ ಸೌಹಾರ್ದ ಹಂದರದ ಮೇಲೆ ಸಾಂಸ್ಕೃತಿಕ ದಾಳಿ ಮಾಡಲು ಸಜ್ಜಾಗಿವೆ. ಹೀಗಾಗಿ ಸಂಘಿಗಳ ಬ್ರಾಹ್ಮಣೀಯ ಹಿಂದೂತ್ವ ರಾಜಕಾರಣಕ್ಕೆ ಹೂರಣ ತುಂಬುವ ವಂದೇ ಮಾತರಂ ಗೀತೆ, ಆನಂದ ಮಠ ಕಾದಂಬರಿ ಮತ್ತು ಅದನ್ನು ಬರೆದ ಸಂದರ್ಭ ಕೂಲಂಕಶವಾಗಿ ಪರಿಶೀಲಿಸುವ ಅಗತ್ಯವಿದೆ.
ವಂದೇ ಮಾತರಂ- ಗೀತೆಯ ಇತಿಹಾಸ
ವಂದೇ ಮಾತರಂ ಗೀತೆಯನ್ನು ಬರೆದದ್ದು ಬಂಗಾಳದ ಖ್ಯಾತ ಸಾಹಿತಿ ಮತ್ತು ಕವಿ ಬಂಕಿಮ ಚಂದ್ರ ಚಟರ್ಜಿಯವರು (1838-1894). 18 ನೇ ಶತಮಾನದಲ್ಲಿ ಕೊನೆಯ ಭಾಗದಲ್ಲಿ ಅವರು ಬ್ರಿಟಿಶ್ ಆಡಳಿತದಲ್ಲಿ ಅಧಿಕಾರಿಯೂ ಆಗಿದ್ದರು. ಇವರ ಕಾಲಘಟ್ಟದಲ್ಲೇ ಬ್ರಿಟಿಶರು ಭಾರತದ ಮೊಟ್ಟ ಮೊದಲ ಜನಗಣತಿಯನ್ನು 1871 ರಲ್ಲಿ ಮಾಡಿದರು. ಆ ಜನಗಣತಿಯಂತೆ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಅವಿಭಜಿತ ಬಂಗಾಳ, ಬಿಹಾರ, ಜಾರ್ಖಂಡ್ ಇತ್ಯಾದಿಗಳಿದ್ದ ಬಂಗಾಳ ಪ್ರೆಸಿಡೆನ್ಸಿಯ ಜನಸಂಖ್ಯೆ ಏಳು ಕೋಟಿ. ವಂದೇ ಮಾತರಂ ಹಾಡಿನ ಮೂರನೇ ಚರಣದಲ್ಲಿ ಬರುವ “ಏಳು ಕೋಟಿ ಕಂಠಗಳು ನಿನ್ನ ಸ್ತುತಿಯನ್ನು ಮಾಡುತ್ತವೆ” ಎಂಬ ವಾಕ್ಯದಿಂದಾಗಿ ಈ ಹಾಡನ್ನು 18972 ರ ಸೆನ್ಸಸ್ ಅಂಕಿಅಂಶಗಳು ಬಂದ ನಂತರದಲ್ಲಿ ಬರೆದದ್ದು ಎಂದು ಇತಿಹಾಸಕಾರರು ಊಹಿಸುತ್ತಾರೆ. ಅರಬಿಂದೋ ಘೋಶ್ ಅವರು ಈ ಗೀತೆಯನ್ನು 1875 ರಲ್ಲಿ ಬರೆದದ್ದು ಎಂದು ಬರೆದಿದ್ದಾರೆ. ಅದನ್ನು ಆಧರಿಸಿಯೇ 2025 ರಲ್ಲಿ ಅದರ 150 ನೇ ವರ್ಷವನ್ನು ಮೋದಿ ಸರ್ಕಾರ ಆಚರಿಸುತ್ತಿದೆ. ಬಂಕಿಮ ಚಂದ್ರರ ಹತ್ತಿರದ ಸಂಬಂಧಿಗಳು ಮತ್ತು ಇತಿಹಾಸಕಾರರು ಬರೆದಿರುವ ಚರಿತ್ರೆಗಳ ಪ್ರಕಾರ ಈಗ ಹಾಲಿ ಇರುವ 27 ಸಾಲುಗಳ ವಂದೇ ಮಾತರಂ ಗೀತೆಯ ಮೊದಲ 12 ಸಾಲುಗಳನ್ನು ಬರೆದದ್ದು 1875 ರಲ್ಲಿ ಎಂದು ಊಹಿಸಲಾಗಿದೆ. ಈ 12 ಸಾಲುಗಳು:
ವಂದೇ ಮಾತರಂ ಸುಜಲಾಂ ಸುಫ಼ಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಶುಭ್ರ ಜ್ಯೋತ್ಸ್ನಾಂ ಪುಲಕಿತ ಯಾಮಿನೀಂ
ಫ಼ುಲ್ಲ ಕುಸುಮಿತ ಧ್ರುಮದಳ ಶೋಭಿನೀಂ..
ಎಂದು ಶುದ್ಧ ಸಂಸ್ಕೃತದಲ್ಲಿ ಭಾರತದ ಪ್ರಕೃತಿಯನ್ನು ಕಾವ್ಯಾತ್ಮಕವಾಗಿ ಮತ್ತು ಲಯಬದ್ಧವಾಗಿ ವರ್ಣಿಸುತ್ತವೆ. ಇದರಲ್ಲಿ ಯಾವುದೇ ಧಾರ್ಮಿಕ ಪೂರ್ವಗ್ರಹಗಳು ಕಾಣುವುದಿಲ್ಲ. ಆ ನಂತರದಲ್ಲಿ ಬಂಕಿಮರು 1882 ರಲ್ಲಿ ಆನಂದ ಮಠ ಎಂಬ ಕಾದಂಬರಿಯನ್ನು ಬರೆಯುತ್ತಾರೆ. ಆ ಕಾದಂಬರಿಯ ಘಟನಾವಳಿ ಮತ್ತು ಪಾತ್ರ ಪೋಷಣೆಯ ಭಾಗವಾಗಿ ಮೇಲಿನ 12 ಸಾಲುಗಳ ಜೊತೆಗೆ ಹೊಸದಾಗಿ ಇನ್ನು 15 ಸಾಲುಗಳನ್ನು ಬರೆದು ಅದರಲ್ಲಿ ಸೇರಿಸುತ್ತಾರೆ.
ಜಗದ್ಧಾತ್ರಿಯಾದ ಮಾತೆ ದುರ್ಗೆಯಾಗುವ ರಾಜಕಾರಣ
ಮೊದಲ12 ಸಾಲುಗಳಲ್ಲಿ ಭಾರತವು ಹಸನ್ಮುಖಿ ಕರುಣಾಮಯಿ ಧರ್ಮಾತೀತ ಜಗದ್ಧಾತ್ರಿಯಾಗಿ ಚಿತ್ರಿತವಾದರೆ ನಂತರ 15 ಸಾಲುಗಳಲ್ಲಿ ಆ ಮಾತೆಯು ಶತ್ರುವನ್ನು ಚೆಂಡಾಡಲು ಸಮರೋತ್ಸಾಹಿಯಾಗಿ ಕಾದಿರುವ ಕಾಳಿಯಾಗಿ ಮತ್ತು ದುರ್ಗೆಯಾಗಿ ಬದಲಾಗುತ್ತಾಳೆ. ಮೊದಲ 12 ಸಾಲುಗಳಲ್ಲಿ ಸಂಸ್ಕೃತ ಭಾಷೆಯನ್ನು ಬಿಟ್ತರೆ ಬೇರೆ ಯಾವುದೇ ಧಾರ್ಮಿಕ ಚಿಹ್ನೆಗಳಿರುವುದಿಲ್ಲ. ಆದರೆ ನಂತರದ 15 ಸಾಲುಗಳಲ್ಲಿ ದುರ್ಗೆ, ಕಾಳಿ ಇನ್ನಿತ್ಯಾದಿ ಬ್ರಾಹ್ಮಣೀಯ ಹಿಂದೂ ದೇವತೆಗಳು ಅವತರಿಸುತ್ತಾರೆ. ಮೂರು ಮತ್ತು ನಾಲ್ಕನೆ ಚರಣದಲ್ಲಂತೂ ಧಾರ್ಮಿಕ ಸಂಕೇತಗಳು ಇನ್ನು ಸ್ಪಷ್ತವಾಗಿ ಬಂದು:
ತುಮ್ ಹಿ ವಿದ್ಯಾ,
ತುಮ್ ಹಿ ಧರ್ಮಾ,
ತುಮ್ ಹಿ ಹೃದಿ,
ತುಮೀ ಮರ್ಮ
ಎಂದು ಸ್ಪಷ್ಟವಾಗಿ ಮಾತೆ ಸಕಲರ ಮಾತೆಯಲ್ಲದೆ ಉಗ್ರ ಬ್ರಾಹ್ಮಣೀಯ ಹಿಂದೂ ಮಾತೆಯಾಗುತ್ತಾಳೆ. ನಾಲ್ಕನೆ ಚರಣದಲ್ಲಂತೂ “…ನಿನ್ನಿಂದಲೇ ನಮ್ಮ ಶಕ್ತಿ ಮತ್ತು ಪ್ರತಿ ಮಂದಿರದಲ್ಲೂ ನಿನ್ನನ್ನೇ ನಾವು ನೋಡುತ್ತೇವೆ” ಎಂದು ಸ್ತುತಿಸಲಾಗುತ್ತದೆ. ಧರ್ಮಾತೀತವಾದ ಮಾತೆ ಈ ರೀತಿ ನಿರ್ದಿಷ್ಟ ಧರ್ಮದ ಹಾಗೂ ದೇವಸ್ಥಾನಗಳ ಬಂಧಿಯಾಗುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಮಾತೆ ಈಗ ಕರುಣಾಮಯಿಯಾಗಿ ಮಾತ್ರ ಉಳಿಯುವುದಿಲ್ಲ. ಈಗ ಮಾತೆ : ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣಿ ಯಾಗುತ್ತಾಳೆ. ಅಂದರೆ ಹತ್ತು ಯುದ್ಧಾಸ್ತ್ರಗಳನ್ನು ಹೊಂದಿರುವ ರಣಕಾಳಿಯಾಗುತ್ತಾಳೆ. ಶತ್ರು ಸಂಹಾರಕ್ಕೆ ಕಾತುರಳಾದ ಮಾತೆಯಾಗುತ್ತಾಳೆ. ಹೀಗ ಹೊಸದಾಗಿ ಸೇರ್ಪಡೆಯಾದ 15 ಸಾಲುಗಳು ಧರ್ಮ ಸೂಚಕ ಮಾತ್ರವಲ್ಲ, ಕದನ ಸೂಚಕವೂ ಆಗಿ ಮಾರ್ಪಾಡಾಗುತ್ತದೆ. ಆದರೆ ಜಗದ್ಧಾತ್ರಿ ಮಾತೆ ಶತ್ರು ಸಂಹಾರಕ ದುರ್ಗಾ ದಶಪ್ರಹರಣ ಧಾರಿಣಿಯಾಗಿ ಮಾರ್ಪಾಡಾಗಿದ್ದು ಏಕೆ? ಈ ದುರ್ಗೆ ಸಂಹರಿಸಬೇಕೆಂದಿರುವ ಶತ್ರುಗಳು ಯಾರು? ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆನಂದ ಮಠ ಕಾದಂಬರಿಯನ್ನು ಮತ್ತು ಕಾದಂಬರಿಯ ಕಾಲದ ಸಂದರ್ಭವನ್ನು ಮತ್ತು ಕಾದಂಬರಿಕಾರರ ಸಂದರ್ಭವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.
ಆನಂದ ಮಠ- ಮುಸ್ಲಿಂ ದ್ವೇಷದ ಬ್ರಿಟಿಶ್ ಪರ ಕಾದಂಬರಿ
ಆನಂದಮಠ ಕಾದಂಬರಿಯನ್ನು ಬಂಕಿಮರು ಬರೆದದ್ದು 1882 ರಲ್ಲಿ ಯಾದರೂ ಅದರ ವಸ್ತು ಮತ್ತು ಕಾಲಘಟ್ಟ 1770-75 ರದ್ದು. ಆಗತಾನೇ ಬಂಗಾಳದ ಸ್ವತಂತ್ರ ನವಾಬ ಸಿರಾಜುದ್ಧೌಲರನ್ನು ಬ್ರಿಟಿಶರ ಈಸ್ಟ್ ಇಂಡಿಯಾ ಕಂಪನಿ ಸೋಲಿಸಿ ಇಡೀ ಬಂಗಾಳ ಪ್ರಾಂತ್ಯದಲ್ಲಿ ತನ್ನ ಗುಲಾಮಿ ನವಾಬರ ಮೂಲಕ ರೈತಾಪಿಯ ರಕ್ತ ಹೀರಲು ಪ್ರಾರಂಭಿಸಿರುತ್ತದೆ. ಇದರ ವಿರುದ್ಧ ಬಂಗಾಳ ಪ್ರಾಂತ್ಯದಲ್ಲಿ ಹಿಂದೂ ಸನ್ಯಾಸಿಗಳು ಮತ್ತು ಮುಸ್ಲಿಂ ಫ಼ಕೀರರು ಒಟ್ಟಾಗಿ ನವಬ ಮತ್ತು ಬ್ರಿಟಿಷರ ವಿರುದ್ಧ ಸಶಸ್ತ್ರ ದಂಗೆಯನ್ನು ಮಾಡಿದ್ದು ಇತಿಹಾಸ. ಆದರೆ ಈಸ್ಟ್ ಇಂಡಿಯಾ ಕಂಪನಿ ನವಾಬನ ಸಹಾಯದೊಂದಿಗೆ ಸನ್ಯಾಸಿ ಮತ್ತು ಫ಼ಕೀರರು ಇಬ್ಬರನ್ನು ಕೊಂದು ಹಾಕುತ್ತದೆ. ಮತ್ತು ದಂಗೆಯನ್ನು ಹತ್ತಿಕ್ಕುತ್ತದೆ. ಬಂಕಿಮರ ಕಾದಂಬರಿಯ ವಸ್ತು ಇದೇ ಆಗಿದ್ದರೂ ಕಾದಂಬರಿಯಲ್ಲಿ ಇದು ಸನ್ಯಾಸಿ ಮತ್ತು ಫ಼ಕೀರರ ಜಂಟಿ ಬಂಡಾಯವಾಗದೆ ಕೇವಲ ಹಿಂದೂ ಸನ್ಯಾಸಿಗಳ- ಸಂತಾನರ ಬಂಡಾಯ ಮಾತ್ರವಾಗುತ್ತದೆ. ಹಾಗೂ ಶತ್ರು ನವಾಬ ಮತ್ತು ಬ್ರಿಟಿಶರಿಬ್ಬರೂ ಆಗದೆ ಕೇವಲ ನವಾಬ ಮಾತ್ರ ಆಗುತ್ತಾನೆ. ನವಾಬ ಮಾತ್ರವಲ್ಲ ಹಳ್ಳಿಗಳ ಸಾಮಾನ್ಯ ಮುಸ್ಲಿಮರೂ ಶತ್ರುಗಳಾಗುತ್ತಾರೆ. ಹೀಗೆ ಕಾದಂಬರಿ ಚರಿತ್ರೆಯನ್ನು ವಿಕೃತಗೊಳಿಸಿ ಬ್ರಿಟಿಶ್ ಪರವಾಗಿರುವ ಮುಸ್ಲಿಂ ವಿರೋಧಿ ಕೋಮು ಕಥನವಾಗಿ ಬಿಡುತ್ತದೆ.
ಬರಗಾಲದಿಂದ ತನ್ನ ಹಿಂದಿ ಎಲ್ಲಾ ವೈಭವವನ್ನು ಕಳೆದುಕೊಂಡು ಹೆಂಡತಿ ಮತ್ತು ಮಗಳೊಂದಿಗೆ ಬದುಕನ್ನು ಅರಸುತ್ತಾ ಗುಳೆ ಹೊರಡುವ ಬ್ರಾಹ್ಮಣ ಭೂಮಾಲಿಕ ಮಹೇಂದ್ರ ಇದರ ಕಥಾನಾಯಕ. ಆದರೆ ಮಹೇಂದ್ರ ಇಲ್ಲಿ ಕಳೆದು ಹೋದ ಹಿಂದೂ ಬ್ರಾಹ್ಮಣ ವೈಭವಕ್ಕೆ ಪ್ರತಿನಿಧಿಯಷ್ಟೆ. ಹೀಗಾಗಿ ಮತ್ತೆ ಆ ವೈಭವನ್ನು ಗಳಿಸಿಕೊಳ್ಳುವುದು ಹೇಗೆ ಎಂಬುದೇ ಆನಂದ ಮಠದ ನಿಜವಾದ ಕಥೆ. ಆದರೆ ಇಲ್ಲಿ ವೈಭವ ಕಿತ್ತುಕೊಂಡುವರು ಮುಸ್ಲಿಮ್ ದೊರೆಗಳು. ಹೀಗಾಗಿ ಈ ದೇಶದ ಪ್ರಧಾನ ಶತೃಗಳು ಮುಸ್ಲಿಮರೆಂಬುದೇ ಕಾದಂಬರಿಯ ಸಂದೇಶ. ಆದ್ದರಿಂದಲೇ ಕಾದಂಬರಿಯು ಬರಗಾಲದ ಬವಣೆ, ರೈತಾಪಿಗಳು ಇರುವೆಗಳಂತೆ ಸಾಯುತ್ತಿರುವ ದೃಷ್ಯಗಳಿಂದ ಪ್ರಾರಂಭವಾದರೂ ಅವೆಲ್ಲವೂ ನಂತರ ಸಂಪೂರ್ಣ ಮರೆಯಾಗಿ ಬಿಡುತ್ತದೆ. ಅದೇ ರೀತಿ ಈ ಬರಗಾಲಕ್ಕೆ ಕಾರಣವಾದ ಬ್ರಿಟಿಷ್ ಆಡಳಿದ ಪ್ರಸ್ತಾಪವೂ ಕಾದಂಬರಿಯಲ್ಲಿ ಬರುವುದಿಲ್ಲ. ಮುಸ್ಲಿಂ ದರೋಡೆಕೋರರು ಮತ್ತು ಮುಸ್ಲಿಂ ನವಾಬರ ದಾಳಿ ಇವೆರಡರ ವಿರುದ್ಧ ಸಮರ ಸಾರಲು ಹಿಂದೂಗಳು ಸಂಸಾರವನ್ನು ತೊರೆದು ಸನ್ಯಾಸಿಗಳಾಗಿ ಸಶಸ್ತ್ರ ಬಂಡಾಯ ಹೂಡಿರುತ್ತಾರೆ. ಮಹೇಂದ್ರನನ್ನು ಈ ಬಂಡಾಯದಲ್ಲಿ ಸೇರುವಂತೆ ಮಾಡಲು ಆತನನ್ನು ಗುಪ್ತ ಗುಹೆಯಲ್ಲಿ ಕರೆದುಕೊಂಡು ದೇವಿ-ಭಾರತ ಮಾತೆ-ಯ ದರ್ಶನ ಮಾಡಿಸಲಾಗುತ್ತದೆ. ಆ ದೇವಿಯ ಮುಂದೆ ಮುಸ್ಲಿಮರನ್ನು ಕೊಂದುಹಾಕಿ ಈ ದೇಶವನ್ನು ವೀಮೋಚನೆಮಾಡುವ ವೀರ ಪ್ರತಿಜ್ನೆಯ ಭಾಗವಾಗಿಯೇ ವಂದೇ ಮಾತರಂ ಹಾಡನ್ನು ಹಾಡಲಾಗುತ್ತದೆ. ವಂದೇ ಮಾತರಂ ಹಾಡುತ್ತಲೇ ಮಹೇಂದ್ರನಂತವರು ಮುಸ್ಲಿಮರ ಮಾರಣ ಹೋಮಕ್ಕೆ ಸಜ್ಜಾಗುತ್ತಾರೆ. ಬರಗಾಲದ ಬವಣೆಯಿಂದ ಹಿಂದೂಗಳಷ್ಟೆ ಮುಸ್ಲಿಮ್ ರೈತರು ಸಹ ತುತ್ತಾಗಿ ಇರುವೆಗಳಂತೆ ಸಾಯುತ್ತಿದ್ದರೂ ಇಡೀ ಮುಸ್ಲಿಂ ಸಮುದಾಯವನ್ನೇ ಹಿಂದೂಗಳ ಬವಣೆಗೆ ಕಾರಣಂಬಂತೆ ಚಿತ್ರಿಸಲಾಗಿದೆ. ಹೀಗೆ ಕಾದಂಬರಿ ಮೊದಲಿನಿಂದಲೂ ಇಡೀ ಮುಸ್ಲೀಮ್ ಸಮುದಾಯವನ್ನೇ ದೇಶದಿಂದ ಬಿಟ್ಟೋಡಿಸುವಂತೆ ಮಾಡುವುದನ್ನು ತನ್ನ ಗುರಿಯನ್ನಾಗಿರಿಗಿಸಿಕೊಳ್ಳುತ್ತದೆ.
ಕಾದಂಬರಿಯ ನಾಯಕನಾದ ಸತ್ಯಾನಂದ ಘೋಷಿಸುವಂತೆ ನಮಗೆ ಅಧಿಕಾರ ಬೇಕಿಲ್ಲ. ನಮ್ಮ ಉದ್ದೇಶ ಎಲ್ಲಾ ಮುಸ್ಲಿಮರನ್ನು ಕೊಂದುಹಾಕುವುದು. ಏಕೆಂದರೆ ಅವರು ನಮ್ಮ ದೇವರ ಶತ್ರೂಗಳು!. ಇದೇ ಆ ಕಾದಂಬರಿಯ ಪ್ರಧಾನ ಧಾತು. ಸನಾತನ ಧರ್ಮದ ಪುನರುತ್ಥಾನವೇ ನಮ್ಮ ಗುರಿಯೆಂದು ಘೋಷಿಸುವ ಆನಂದಮಠದ ಬಂಡಾಯಗಾರರು ತಮ್ಮನ್ನು ತಾವು ಸನಾತನಿಗಳೆಂದೇ ಗುರುತಿಸಿಕೊಳ್ಳುತ್ತಾರೆ. ಆನಂದ ಮಠ ಕಾದಂಬರಿಯು ಎಷ್ಟೇ ದೇಶಪ್ರೇಮಿ ಎಂಬ ಪ್ರಚಾರ ಪಡೆದುಕೊಂಡಿದ್ದರೂ ಕಾದಂಬರಿಯಲ್ಲಿ ಮಾತ್ರ ಅದರ ಬ್ರಿಟಿಶ್ ವಸಾಹತುಶಾಹಿ ಪಕ್ಷಪಾತ ಮತ್ತು ಮುಸ್ಲಿಂ ದ್ವೇಷವನ್ನು ಕಿಂಚಿತ್ತೂ ಮುಚ್ಚುಮರೆ ಮಾಡಿಲ್ಲ. ಅದರ ಕೆಲವು ಆಯ್ದ ಭಾಗಗಳನ್ನು ಓದಿದರೂ ಅದು ಸ್ಪಷ್ಟವಾಗುತ್ತದೆ. ಬಂಕಿಮಚಂದ್ರರ ಆನಂದ ಮಠ ಕಾದಂಬರಿಯನ್ನು ವೆಂಕಟಾಚಾರ್ಯ ಅವರು 1960 ರ ಮೊದಲ ಭಾಗದಲ್ಲೇ ಕನ್ನಡಕ್ಕೆ ಅನುವಾದಿಸಿದ್ದರು. ಅದಲ್ಲದೆ ಈ ಕಾದಂಬರಿಯ ಇನ್ನೂ ಮೂರು ಕನ್ನಡ ಅನುವಾದಗಳಾಗಿವೆ. ಇದನ್ನು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ 2007 ರಲ್ಲಿ ಮರುಮುದ್ರಣ ಮಾಡಿ ಪ್ರಕಟಿಸಿತ್ತು. ಅದರ ಕೆಲವು ಆಯ್ದ ಭಾಗಗಳು ಕೆಳಗಿವೆ:
ಆನಂದ ಮಠ ಕಾದಂಬರಿಯ ಕೆಲವು ಆಯ್ದ ಭಾಗಗಳು
ಸತ್ಯಾನಂದ -ನಮಗೆ ನಮ್ಮ ಹದಿನಾಲ್ಕು ತಲೆಯಾಂತರದಿಂದ ಬಂದ ಮಾತು, ಅಂಥಾದ್ದನ್ನು ನಿನಗೆ ಹೇಳುತ್ತೇನೆ. ಈಶ್ವರನು ತ್ರಿಗುಣಾತ್ಮಕನು. ಅದನ್ನು ಬಲ್ಲೆಯಷ್ಟೆ ?
ಮಹೇಂದ್ರ -ಹೌದು, ಸತ್ಯ ರಜಃ ತಮಃ ಈ ಮೂರು ಗುಣಗಳು. ಗೊತ್ತಾಯಿತು. ಸಂತಾನರು ಹಾಗಾದರೆ ಉಪಾಸಕ ಸಂಪ್ರದಾಯದವರಾಗಿ ಮಾತ್ರ ಇದ್ದಾರೆ ?
ಸತ್ಯಾನಂದ -ಹೌದು. ನಮಗೆ ರಾಜ್ಯ ಬೇಡ -ಮುಸಲ್ಮಾನರು ಭಗವಂತನ ವಿದ್ವೇಷಿಗಳಾಗಿರುವ ಕಾರಣ ಅವರನ್ನು ಸವಂಶವಾಗಿ ನಿಪಾತಮಾಡುವ ಇಷ್ಟ ಒಂದೇ.
(ಪು.73 )
ಈ ಸಮಯದಲ್ಲಿ ಆ ಪ್ರದೇಶಕ್ಕೆ ನಾಲ್ಕೈದು ಪಟಾಲಂಗಳ ಸಹಿತವಾಗಿ ಕೇಪ್ಟನ್ ಥಾಮಸ್ ಸಾಹೇಬರ ಸವಾರಿಯು ಚಿತ್ತೈಸಿತ್ತು. ಆ ಸಮಯದಲ್ಲಿ ಕೆಲ ಹೊಲೆಯರು ಮುಂತಾದ ಕೀಳು ಜಾತಿಯರಾದ ಹೊಸದಾಗಿ ಆದ ಸಂತಾನರು ಆ ಕಾಲದ ಉತ್ಸಾಹವನ್ನು ನೋಡಿ ಪರದ್ರವ್ಯಾಪಹರಣದಲ್ಲಿ ಉತ್ಸಾಹಿಗಳಾಗಿದ್ದರು. ಕೇಪ್ಟನ್ ಥಾಮಸ್ ಸಾಹೇಬರು ಸೈನ್ಯದ ಸರಬರಾಯಿಗೋಸ್ಕರ ಉತ್ತಮವಾದ ಅಕ್ಕಿ ತುಪ್ಪ ಗೋಧಿ ಮುಂತಾದ್ದನ್ನು ಭಂಢಿ ಭಂಡಿಗಳ ಮೇಲೆ ತರಿಸುತಲಿದ್ದರು. ಅದನ್ನು ನೋಡಿ ಬಾಯಿ ನೀರು ಕರಗಿ ಆ ನೂತನವಾಗಿ ಸಂತಾನರಾದ ಹೊಲೆಯರ ಗುಂಪಿಗೆ ಸೆರಿದವರು ಭಂಡಿಗಳ ಮೇಲೆ ಬಿದ್ದರು. ಆದರೆ ಥಾಮಸಿನ ಶಿಪಾಯಿಗಳ ಕೈಲಿದ್ದ ಬಂದೂಕುಗಳಿಂದ ಪೆಟ್ಟು ತಿಂದು ಹಿಂದಿರುಗಿ ಓಡಿಹೋಗಿಬಿಟ್ಟರು. (ಪು.94 )
ಥಾಮಸನು ನೋಡುತ್ತಿದ್ದ ಹಾಗೆ ಒಂದಪೂರ್ವವಾದ ಸುಂದರ ಸ್ತ್ರೀಮೂರ್ತಿಯು ನಿಂತಿತು. ಸುಂದರಿಯು ನಗುನಗುತ, ಸಾಹೇಬ ! ನಾನು ಹೆಂಗಸು ; ಯಾರನ್ನೂ ಆಘಾತಮಾಡುವುದಿಲ್ಲ ; ಹಿಂದುಗಳಿಗೂ ಮುಸಲ್ಮಾನರಿಗೂ ಕನರ್ವ ಕದನವಾಗುತ್ತದೆ ; ಮಧ್ಯೆ ನೀವೇತಕ್ಕೆ ಬರಬೇಕು ? ನೀವು ಮನೆಗೆ ಹಿಂದಿರುಗಬೇಕು ಎಂದಳು. (ಪು.96)
ಆಗ ಆ ಸ್ವಲ್ಪ ಜನ ಸಂತಾನರು “ಜಯಜಗದೀಶಹರೆ” ಹೇಳುತ್ತ ಹುಲಿಗಳ ಹಾಗೆ ಕೇಪ್ಟನ್ ಥಾಮಸನ ಮೇಲೆ ಬಿದ್ದರು. ಆ ಬಿದ್ದ ಜೋರನ್ನು ಆ ಅಲ್ಪ ಸಂಖ್ಯಾಕರಾದ ಸಿಪಾಯಿಗಳು ತೆಲಂಗೀ ದಳದವರು ಸಹಿಸಲಾರದೆ ಎಲ್ಲರೂ ನಷ್ಟರಾಗಿಹೋದರು. ಆಗ ಭವಾನಂದನು ತಾನೇ ಹೋಗಿ ಕೇಪ್ಟನ್ ಥಾಮಸನ ತಲೆಯ ಕೂದಲನ್ನು ಹಿಡಿದುಕೊಂಡನು. ಕೇಪ್ಟನ್ ಥಾಮಸನು ಕಡೆಯವರೆಗೆ ಯುದ್ಧಮಾಡಿದನು. ಭವಾನಂದನು, ಕೇಪ್ಟನ್ ಸಾಹೇಬ! ನಿನ್ನನ್ನು ಹೊಡದುಹಾಕುವುದಿಲ್ಲ, ಇಂಗ್ಲೀಷರು ನಮಗೆ ಶತ್ರುಗಳಲ್ಲ. ನೀವು ಮುಸಲ್ಮಾನರ ಸಹಾಯಕ್ಕೆ ಏತಕ್ಕೆ ಬಂದಿರಿ ? ಬಾ -ನಿನಗೆ ಪ್ರಾಣದಾನ ಮಾಡಿದ್ದೇನೆ. ನೀನೇನೋ ಈಗ ಬಂದಿಯಾಗಿದ್ದೀ. ಇಂಗ್ಲೀಷರಿಗೆ ಜಯವಾಗಲಿ, ನಾವು ನಿಮ್ಮ ಹಿತಚಿಂತಕರು ಎಂದು ಹೇಳಿದನು. ಆಗ ಥಾಮಸನು ಭವಾನಂದನನ್ನು ವಧೆ ಮಾಡುವುದಕ್ಕೆ ಸನೀನ ಸಹಿತವಾದ ಬಂದೂಕನ್ನು ಎತ್ತುವುದಕ್ಕೆ ಪ್ರಯತ್ನಪಟ್ಟನು. ಆದರೆ ಭವಾನಂದನು ಅವನನ್ನು ಹುಲಿಯ ಹಾಗೆ ಹಿಡಿದಿದ್ದನಾದ್ದರಿಂದ ಥಾಮಸನು ಅಲ್ಲಾಡುವುದಕ್ಕಾಗದೆ ಹೋಯಿತು. ಭವಾನಂದನು ಇವನನ್ನು ಕಟ್ಟಿಹಾಕಿರೆಂದು ಅನುಚರರಿಗೆ ಹೇಳಿದನು. ಎರಡು ಮೂರು ಜನ ಸಂತಾನರು ಬಂದು ಥಾಮಸನನ್ನು ಕಟ್ಟಿದರು. ಭವಾನಂದನ ಅಪ್ಪಣೆಯ ಪ್ರಕಾರ ಕಟ್ಟಿದವನನ್ನು ಕುದುರೆಯ ಮೇಲೆ ಕಟ್ಟಿಹಾಕಿ ‘ವಂದೇ ಮಾತರಂ’ ಹಾಡುತ್ತಾ ವಾಟ್ಸನ್ ಇದ್ದ ಕಡೆಗೆ ಹೊರಟರು.
(ಪು.123)
ಚಿಕಿತ್ಸಕ -ಸತ್ಯಾನಂದ ಕಾತರನಾಗಬೇಡ. ಆಗುವುದೆಲ್ಲ ಒಳ್ಳೆಯದಾಗುತ್ತೆ. ಇಂಗ್ಲೀಷರು ರಾಜರಾಗದೆ ಹೋದರೆ ಆರ್ಯಧರ್ಮವು ಪುನರುದ್ಧಾರವಾಗುವ ಸಂಭವವಿವಲ್ಲ. ಮಹಾತ್ಮರು ಹೇಳಿರುವ ಮಾತನ್ನೇ ನಾನು ಹೇಳುತ್ತೇನೆ. ಮನವಿಟ್ಟು ಕೇಳು. ಮುವ್ವತ್ತುಮೂರು ಕೋಟಿ ದೇವತೆಗಳನ್ನು ಪೂಜೆಮಾಡುವುದು ಆರ್ಯರ ಧರ್ಮವಲ್ಲ -ಅದೊಂದು ಲೌಕಿಕವಾದ ಅಪಕೃಷ್ಟವಾದ ಧರ್ಮ : ಅದರ ಪ್ರಭಾವವೇ ಈಗಿನ ಆರ್ಯಧರ್ಮವಾಗಿದೆ. ಮ್ಲೇಂಛರು ಯಾವುದನ್ನು ಹಿಂದೂ ಧರ್ಮವೆನ್ನುತ್ತಾರೋ ಅದು ಲೋಪವಾಗಿಹೋಗಿದೆ. ಶುದ್ಧವಾದ ಹಿಂದೂ ಧರ್ಮವು ಜ್ಞಾನಾತ್ಮಕವಾದುದು. ಕೇವಲ ಕರ್ಮಾತ್ಮಕವಾದುದಲ್ಲ ; ಆ eನವು ಎರಡು ಪ್ರಕಾರ, ಬಹಿರ್ವಿಷಯಕವಾದುದೊಂದು, ಅಂತರ್ವಿಷಯಕವಾದುದೊಂದು. ಅಂತರ್ವಿಷಯಕವಾದ ಜ್ಞಾನವೇ ಆರ್ಯಧರ್ಮದ ಪ್ರಮುಖ ಭಾಗ. ಆದರೆ ಬಹಿರ್ವಿಷಯಕವಾದ ಜ್ಞಾನವು ಮೊದಲು ಹುಟ್ಟದಿದ್ದರೆ ಅಂತರ್ವಿಷಯಕವಾದ ಜ್ಞಾನ ಹುಟ್ಟುವುದರ ಸಂಭವವು ಕಡಿಮೆ. ಸ್ಥೂಲವಾದುದನ್ನು ತಿಳಿಯದಿದ್ದರೆ ಸೂಕ್ಷ್ಮವಾದುದವನ್ನು ತಿಳಿಯುವುದು ಕಷ್ಟ. ಈಗ ಈ ದೇಶದಲ್ಲಿ ಬಹಳ ಕಾಲದಿಂದ ಬಹಿರ್ವಿಷಯಕ eನವು ವಿಲುಪ್ತವಾಗಿ ಹೋಗಿದೆ. ಅದರೊಂದಿಗೆ ಸ್ವಭಾವಸಿದ್ಧವಾದ ಆರ್ಯಧರ್ಮವೂ ಲೋಪವಾಗಿದೆ. ಆರ್ಯಧರ್ಮವನ್ನು ಪುನರುದ್ಧಾರಮಾಡಬೇಕಾದರೆ ಮೊದಲು ಬಹಿರ್ವಿಷಯಕವಾದ ನವನ್ನು ಪ್ರಚಾರಮಾಡಬೇಕು.
ಈಗ ಈ ದೇಶದಲ್ಲಿ ಬಹಿರ್ವಿಷಯಕವಾದ ಜ್ಞಾನವೇ ಇಲ್ಲ. ತಿಳಿಸಿ ಹೇಳಿಕೊಡುವ ಜನರಿಲ್ಲ ; ನಾವು ಜನಗಳಿಗೆ ಶಿಕ್ಷಿಸುವುದರಲ್ಲಿ ಅಷ್ಟು ಸಮರ್ಥರಾಗಿಲ್ಲ; ಅದುಕಾರಣ ಬೇರೆ ದೇಶದಿಂದ ಬಹಿರ್ವಿಷಯಕವಾದ eನವು ಬರಬೇಕು. ಇಂಗ್ಲೀಷರು ಬಹಿರ್ವಿಷಯಕವಾದ eನದಲ್ಲಿ ಪಂಡಿತರು, ಜನಗಳಿಗೆ ತಿಳಿಸುವುದರಲ್ಲಿ ಪಟುಗಳಾಗಿದ್ದಾರೆ. ಆದುದರಿಂದ ಇಂಗ್ಲೀಷರು ರಾಜರಾಗಬೇಕು. ಇಂಗ್ಲೀಷು ಕಲಿತರೆ ಬಹಿರ್ವಿಷಯಕವಾದ ಜ್ಞಾನದಲ್ಲಿ ಸುಶಿಕ್ಷತರಾಗಿ ಜನರು ಅಂತಸ್ತತ್ವವನ್ನು ತಿಳಿಯಲು ಸಮರ್ಥರಾಗುವರು. ಆಗ ಆರ್ಯಧರ್ಮದ ಪ್ರಚಾರಕ್ಕೆ ವಿಘ್ನವುಂಟಾಗುವುದಿಲ್ಲ. ಆಗ ನಿಜವಾದ ಧರ್ಮವು ತನಗೆ ತಾನಾಗಿಯೇ ಪುನರುದ್ದೀಪ್ತವಾಗುವುದು. ಎಷ್ಟುದಿನ ಹಾಗಾಗುವುದಿಲ್ಲವೋ ಎಷ್ಟು ದಿನ ಹಿಂದುಗಳು ಜ್ಞಾನಿಗಳಾಗುವುದಿಲ್ಲವೋ, ಗುಣಾಢ್ಯರಾಗುವುದಿಲ್ಲವೋ, ಬಲಿಷ್ಠರಾಗುವುದಿಲ್ಲವೋ ಅಷ್ಟುದಿನ ಇಂಗ್ಲೀಷರ ರಾಜ್ಯವು ಅಕ್ಷಯವಾಗಿರುವುದು. ಇಂಗ್ಲೀಷರ ರಾಜ್ಯದಲ್ಲಿ ಪ್ರಜೆಗಳು ಸುಖಿಗಳಾಗುವರು. ನಿಷ್ಕಂಟಕವಾಗಿ ಧರ್ಮಾಚರಣೆಯನ್ನು ಮಾಡಬಲ್ಲರು. ಆದುದರಿಂದ ಎಲೈ ಬುದ್ಧಿವಂತನೆ ! ಇಂಗ್ಲೀಷರ ಸಂಗಡ ಯುದ್ಧಮಾಡದೆ ನನ್ನನ್ನು ಅನುಸರಿಸಿ ಬಂದುಬಿಡು (ಪು. 159 )
ಸತ್ಯಾನಂದನ ಕಣ್ಣುಗಳಿಂದ ಕಿಡಿಕೆಂಡಗಳು ಸುರಿದವು. ಅವನು ಶತ್ರುಗಳ ರಕ್ತದಿಂದ ಸಿಂಚನೆಮಾಡಿ ಮಾತೆಯನ್ನು ಸಸ್ಯಶಾಲಿನಿಯಾಗಿ ಮಾಡುವೆನೆಂದನು.
ಮಹಾಪುರುಷ -ಶತ್ರು ಯಾರು ? ಶತ್ರುಗಳು ಇನ್ನು ಇಲ್ಲ. ಇಂಗ್ಲೀಷರು ಮಿತ್ರರಾಜರು. ಇಂಗ್ಲೀಷರ ಸಂಗಡ ಯುದ್ಧವಾಡಿ ಜಯಿಸುವುದಕ್ಕೆ ಯಾರಿಗೂ ಶಕ್ತಿ ಇಲ್ಲ.
ಸತ್ಯಾನಂದ -ಶಕ್ತಿ ಇಲ್ಲದಿದ್ದರೆ ಇಲ್ಲಿಯೇ ಈ ಮಾತೆಯ ಪ್ರತಿಮೆಯ ಎದುರಿಗೆ ದೇಹತ್ಯಾಗವನ್ನು ಮಾಡಿಬಿಡುವೆನು.
ಮಹಾಪುರುಷ -ಅಜ್ಞಾನದಿಂದಲೆ ? ನಡೆ. ಜ್ಞಾನ ಲಾಭವನ್ನು ಮಾಡು, ಹಿಮಾಲಯಶಿಖರದಲ್ಲಿ ಮಾತೃಮಂದಿರವಿರುವುದು. ಅಲ್ಲಿಯೇ ಮಾತೆಯ ಮೂರ್ತಿಯನ್ನು ತೋರಿಸುವೆನು. ಮುಕ್ತಾಯ- (ಪು.160)
ಈ ಮೊದಲೇ ಹೇಳಿದಂತೆ ಬಂಗಾಳದ ಕಂಡುಕೇಳರಿಯದ ಬರಗಾಲಕ್ಕೆ ಬ್ರಿಟಿಷರು ಜಾರಿಗೆ ತಂದ ಕೃಷಿ ಮತ್ತು ಆಡಳಿತ ನೀತಿಗಳೇ ಕಾರಣ. ಅದನ್ನು ಜಾರಿಗೆ ತಂದವರು ಮುಸ್ಲಿಮ್ ನವಾಬರು. ಆದರೆ ಕಾದಂಬರಿಯಲ್ಲಿ ಬ್ರಿಟಿಷರೂ ವಿರುದ್ಧ ಸೊಲ್ಲೇ ಕೇಳಿ ಬರುವುದಿಲ್ಲ. ಉದಾಹರಣೆಗೆ ಮುಸ್ಲಿಂ ನವಾಬನ ಜೊತೆ ಬ್ರಿಟಿಷ್ ಸೈನ್ಯ ಸೇರಿಕೊಂಡಾಗ ಕಾದಂಬರಿಯ ನಾಯಕನಿಗೆ ಬಂಡಾಯಗಾರರು ನಮಗೆ ಬ್ರಿಟಿಷರು ಶತ್ರೂಗಳಲ್ಲ. ಅವರು ಗೆಲ್ಲಲಿ. ಎಂದು ಆದೇಶಿಸುತ್ತಾರೆ. ಮೇಲೆ ನೋಡಿದಂತೆ ಕಾದಂಬರಿಯ ಅಂತ್ಯದಲ್ಲಿ ಒಂದು ಅಶರೀರ ವಾಣಿಯು ಮುಸ್ಲಿಮರನ್ನು ಕಿತ್ತೊಗೆದದ್ದರಿಂದ ಅವನ ಗುರಿ ಈಡೇರಿದೆಯೆಂದು ಘೊಷಿಸುತ್ತದೆ. ಇನ್ನೂ ಬಂಗಾಳದ ಆಡಳಿತವನ್ನು ದೈವಕೃಪೆಯಿಂದ ಬ್ರಿಟಿಷರೇ ವಹಿಸಿಕೊಳ್ಳುವುದರಿಂದ ಹಿಂದೂಗಳಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂದೂ, ಈ ಬಂಡಾಯದ ಉದ್ದೇಶವಿದ್ದದ್ದೇ ಬ್ರಿಟಿಷರು ನೇರವಾಗಿ ಆಡಳಿತ ವಹಿಸುವಂತೆ ಮಾಡುವುದಾಗಿತ್ತೆಂದು ಆ ದೈವವಾಣಿ ತಿಳಿಹೇಳುತ್ತದೆ. ಆದರೆ ಇದರಿಂದ ಸಮಾಧಾನವಾಗದ ಕಥಾನಾಯಕ ಮುಸ್ಲಿಂ ಆಡಳಿತ ಕಿತ್ತೊಗೆದರೂ ಹಿಂದೂಗಳ ಆಡಳಿತವನ್ನು ಸ್ಥಾಪಿಸಲಾಗದೇ ಇರುವುದರಿಂದ ನಮ್ಮ ಗುರಿ ಇನ್ನೂ ಮುಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾನೆ. ಆದರೆ ಆ ದೈವವಾಣಿಯು ಅದರ ಬಗ್ಗೆ ಯೋಚಿಸುವ ಅಗತ್ಯವಿಲ್ಲವೆಂದೂ ಬ್ರಿಟಿಷರು ಸನಾತನ ಧರ್ಮವನ್ನು ಗೌರವಿಸುತ್ತಾರೆಂದೂ, ಅವರ ಆಡಳಿತದಿಂದ ಹಿಂದೂಗಳಿಗೆ ಭೌತಿಕ ಲಾಭವಿದೆಯೆಂದೂ ಸಮಾಧಾನಪಡಿಸುತ್ತದೆ. ಹೀಗೆ ಯಾವುದನ್ನು ದೇಶಭಕ್ತಿಯ ಪ್ರತೀಕ ಎಂದು ಪ್ರಚಾರ ಮಾಡಲಾಗುತ್ತಿದೆಯೋ ಆ ಗೀತೆ ಮತ್ತು ಕಾದಂಬರಿಯ ಉದ್ದೇಶವೇ ನೇರ ಬ್ರಿಟಿಷ್ ವಸಾಹತು ಆಡಳಿತವನ್ನು ಜಾರಿಗೆ ತರುವುದಾಗಿತ್ತು!
ನೀಲ ದರ್ಪಣ್ ಮೇಲೆ ದಮನ- ಆನಂದ ಮಠಕ್ಕೆ ಮೆಚ್ಚುಗೆ
ಕಾದಂಬರಿಯ ಈ ನಿಜವಾದ ಸಂದೇಶವನ್ನು ಅರ್ಥಮಾಡಿಕೊಂಡೇ ಬ್ರಿಟಿಷ್ ಸರ್ಕಾರವು 1881 ರಲ್ಲಿ ಹಣಕಾಸು ಇಲಾಖೆಯಲ್ಲಿ ಹುಟ್ಟುಹಾಕಿದ ಹೊಸ ಅಸಿಸ್ಟೆಂಟ್ ಸೆಕ್ರೆಟರಿ ಹುದ್ದೆಗೆ ಬಂಕಿಮಚಂದ್ರರನ್ನು ಆಯ್ಕೆ ಮಾಡಿ ಪುರಸ್ಕರಿಸಿತು. ಆಮೇಲೆ ಕೆಲವರ ವಿರೋಧದಿಂದಾಗಿ ಅವರನ್ನು ಅಧೀನ ಕಾರ್ಯದರ್ಶಿ ಹುದ್ದೆಗೆ ಇಳಿಸಲಾಯಿತಾದರೂ ಕೆಲಸದಿಂದೇನೂ ತೆಗೆಯಲಿಲ್ಲ. ವಾಸ್ತವವಾಗಿ ಆ ಸಂದರ್ಭದಲ್ಲಿ ಬ್ರಿಟಿಷ್ ಆಡಳಿತ ತನ್ನ ವಿರುದ್ಧ ವ್ಯಕ್ತವಾಗುತ್ತಿದ್ದ ಎಲ್ಲಾ ಬಗೆಯ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನೂ ಹತ್ತಿಕ್ಕುತ್ತಿದ್ದ ಕಾಲ. ಉದಾಹರಣೆಗೆ ದೀನಬಂಧು ಮಿತ್ರರವರ ನೀಲ್ ದರ್ಪಣ್ ಎಂಬ ಕೃತಿ 1861 ರಲ್ಲಿ ಪ್ರಕಟವಾಯಿತು. ಅದು ಪ್ಲಾಂಟೇಷನ್ಗಳಲ್ಲಿ ಬ್ರಿಟಿಷರು ಹೇಗೆ ಸ್ವದೇಶೀಯರನ್ನು ಶೋಷಿಸುತ್ತಿದ್ದಾರೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿತ್ತು. ಅದರ ಇಂಗ್ಲೀಷ್ ಅನುವಾದ ಆಳರಸರ ಕೆಂಗಣ್ಣಿಗೆ ಗುರಿಯಾಗಿದ್ದು ಮಾತ್ರವಲ್ಲದೇ ಅದರ ಅನುವಾದಕ ರೆವೆರೆಂಡ್ ಜೇಮ್ಸ್ ಲಾಂಗ್ನನ್ನು ಸೆರೆಮನೆಗೂ ದೂಡಲಾಯಿತು. ಅದೇ ರೀತಿ ಬ್ರಿಟಿಷರನ್ನು ವಿಮರ್ಶಿಸಿ ಬರೆದ ಕೃತಿಗಳಾದ ಉಪೇಂದ್ರನಾಥ ದಾಸರ ಶರ್ ಸರೋಜಿನಿ ನಾಟಕ ಮತ್ತು ಸುರೇಂದ್ರ ಬಿನೋದಿನಿ ನಾಟಕ ಗಳನ್ನು ಬ್ರಿಟಿಷ್ ಸರ್ಕಾರ ಬಹಿಷ್ಕರಿಸಿ ಲೇಖಕರನ್ನು ಬಂಧಿಸಿತು. 1876 ರಲ್ಲಿ ಪ್ರಕಟವಾದ ದಕ್ಷಿಣರಂಜನ್ ಚಟ್ಟೋಪಾಧ್ಯಾಯರವರ ಚಾ ಕಾರ್ ದರ್ಪಣ್ ಕೃತಿಯಂತೂ ಬ್ರಿಟಿಷ್ ಸರ್ಕಾರವು ಇಂಥಾ ಕೃತಿಗಳನ್ನು ಬಹಿಷ್ಕರಿಸಲು ಡ್ರಾಮಾಟಿಕ್ ಪರ್ಫಾಮೆನ್ಸ್ ಆಕ್ಟ್ ಅನ್ನು ಜಾರಿಗೆ ತರಲು ಕಾರಣವಾಯಿತು. ಇದು ನಿಜಕ್ಕೂ ಬ್ರಿಟಿಷ್ ವಿರೋಧೀ ದೇಶಭಕ್ಟಿ ಸಂಪನ್ನ ಕೃತಿಗಳ ಬಗ್ಗೆ ಬ್ರಿಟಿಷ್ ಸರ್ಕಾರ ನಡೆದುಕೊಳ್ಳುತ್ತಿದ ರೀತಿ. ಆದರೆ ದೇಶಭಕ್ತ ಕೃತಿಯೆಂದು ಪರಿಗಣಿಸಲ್ಪಡುತ್ತಿರುವ ಆನಂದಮಠವನ್ನು ಬ್ರಿಟಿಷ್ ಸರ್ಕಾರ ಹೇಗೆ ಭಾವಿಸಿತು?. ಆನಂದಮಠದ ಮೊದಲ ಆವೃತ್ತಿಗೆಬರೆದ ಮುನ್ನುಡಿಯಲ್ಲೇ ಬಂಕಿಮಚಂದ್ರರು ತನ್ನ ಕಾದಂಬರಿಯ ಬಂಡಾಯ ಸಾಮಾಜಿಕ ಬಂಡಾಯವೇ ಹೊರತು ರಾಜಕೀಯ ಬಂಡಾಯವಲ್ಲವೆಂದು-ಅರ್ಥಾತ್ ಬ್ರಿಟಿಷ್ ವಿರೋಧಿ ಕೃತಿಯಲ್ಲವೆಂದು- ಸ್ಪಷ್ಟಬಿಡಿಸಿಬಿಟ್ಟಿದ್ದರು.
ಇತಿಹಾಸಕಾರ್ತ್ರಿ ತನಿಕಾ ಸರ್ಕಾರ್ ಅವರ ಅಧ್ಯಯನ ಸ್ಪಷ್ಟ ಪಡಿಸುವಂತೆ 1882-85 ರ ನಡುವೆ ಆನಂದಮಠ ಕಾದಂಬರಿಯ ಐದು ಭಿನ್ನ ಆವೃತ್ತಿಗಳು ಪ್ರಕ್ಲಟವಾದವು. ಮೊದಲ ಆವೃತ್ತಿಗೂ ಹಾಗೂ ಕೊನೆಯ ಆವೃತ್ತಿಗೂ ಅಂದಾಅಜು 259 ವ್ಯತ್ಯಾಸಗಳಿದ್ದವು. ಆದರೂ ಐದೂ ಆವೃತ್ತಿಗಳು ಅತ್ಯಂತ ಸ್ಪಷ್ಟವಾಗಿ ಮುಸ್ಲಿಂ ದ್ವೇಷಿ ಮತ್ತು ಬ್ರಿಟಿಷ್ ಪರವಾಗಿಯೇ ಇದ್ದಿದ್ದರಲಿ ಯಾವುದೇ ಮಹತ್ತರ ಬದಲಾವಣೆಗಳಿರಲಿಲ್ಲ. 1883 ರ ಮಾರ್ಚ್ 31 ರಂದು ಬ್ರಿಟಿಷ್ ಆಡಳಿತದ ಅಧಿಕೃತ ಗೆಜೆಟ್ಟಿನಲ್ಲಿ ಈ ಕಾದಂಬರಿಯು ಧಾರ್ಮಿಕ ಭಾವನೆಗಳಿಂದ ಪ್ರೇರಿತಗೊಂಡ, ಮುಸ್ಲಿಮ್ ಆಳ್ವಿಕೆಯ ಕೊನೆಯನ್ನು ಬಯಸುವ ಮತ್ತು ಬ್ರಿಟಿಷರು ಭಾರತದ ಮೇಲೆ ಸಂಪೂರ್ಣ ಸ್ವಾಮ್ಯ ಪಡೆಯಬೇಕೆಂಬ ಆಶಯವುಳ್ಳ ಕಾದಂಬರಿಯೆಂದು ಹೊಗಳಲಾಗಿತ್ತು. 1937 ರಲ್ಲಿ ವೈಸ್ರಾಯ್ ಕೌನ್ಸಿಲ್ನ ಸದಸ್ಯನಾಗಿದ್ದ ಸರ್ ಹೆನ್ರಿ ಕ್ರೈಕ್ ಈ ಕಾದಂಬರಿಯು ಮುಸ್ಲಿಮರ ವಿರುದ್ಧ ಘೊಷಗೀತೆಯೆಂದೇ ಬಣ್ಣಿಸಿದ್ದನು. ಹೀಗಾಗಿಯೇ ಈ ಹಾಡನ್ನಾಗಲೀ, ಕಾದಂಬರಿಯನ್ನಾಗಲೀ ಬ್ರಿಟಿಷ್ ಆಡಳಿತ ಯಾವತ್ತೂ ನಿಷೇಧಿಸಲಿಲ್ಲ! ಇದು ವಂದೇ ಮಾತರಂ ಮತ್ತು ಆನಂದಮಠ ಗಳ ನಿಜಸ್ವರೂಪ. ಹೀಗಾಗಿಯೇ ಬಲಪಂಥೀಯರು ಆರಾಧಿಸುವ ಪ್ರಖ್ಯಾತ ಇತಿಹಾಸಕಾರ ಆರ್. ಸಿ . ಮಾಜುಂದಾರ್ ಸಹ ಆನಂದಮಠವನ್ನು ವಿಶ್ಲೇಷಿಸುತ್ತಾ “ಬಂಕಿಮಚಂದ್ರರು ದೇಶಭಕ್ತಿಯನ್ನು ಮತಧರ್ಮವಾಗಿಯೂ, ಮತಧರ್ಮವನ್ನು ದೇಶಭಕ್ತಿಯಾಗಿಯೂ ಮಾಡಿಬಿಟ್ಟರು ಮತ್ತು ರಾಷ್ಟ್ರವನ್ನು ಕಾಳಿ ಮಾತೆಯೆಂದೆ ಸಂಕೇತಿಸಲಾಗಿದೆ” ಎಂದು ಹೇಳುತ್ತಾರೆ.
ವಂದೇ ಮಾತರಂ ಘೋಷಣೆ ಮತ್ತು ಸ್ವಾತಂತ್ರ್ಯ ಹೋರಾಟ
ಬ್ರಿಟಿಶ್ ವಾಸಾಹತುಶಾಹಿ ವಿರುದ್ಧ ಭಾರತದಲ್ಲಿ ನಡೆದ ಎರಡು ಶತಮಾನಗಳ ಕಾಲ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿರ ಗುಲಾಮಿ ಮಾಡಿದ ಕೆಲವು ರಾಜರುಗಳು, ಬ್ರಿಟಿಶ್ ಕೃಪಾಪೋಷಿತ ಭೂ-ಮಲೀಕ, ವರ್ತಕ ಮತ್ತು ಬಂಡವಾಳಶಾಹಿ ವರ್ಗಗಳನ್ನು ಬಿಟ್ಟರೆ ಹಾಗೂ ಆರೆಸ್ಸೆಸ್, ಹಿಂದೂ ಮಹಾಸಭ, ಮುಸ್ಲಿಂ ಲೀಗ್ದಂತ ಕೋಮುವಾದಿ ಸಂಘಟನೆಗಳನ್ನು ಬಿಟ್ಟರೆ ಇಡೀ ಭಾರತ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಕ್ಷಿಕವಾಗಿ ಅಥವಾ ಪೂರ್ತಿಯಾಗಿ ತೊಡಗಿಕೊಂಡಿತ್ತು. 1930 ರ ನಂತರದಲ್ಲಿ ಕಾಂಗ್ರೆಸ್ ಕೂಡ ಸಂಪೂರ್ಣ ಸ್ವಾತಂತ್ರ್ಯದ ಆಗ್ರಹಗಳನ್ನು ಮುಂದಿಡತೊಡಗಿತ್ತು. ಇದರಲ್ಲಿ ಹಿಂದೂ ಮತ್ತು ಮುಸ್ಲಿಮರು ಧಾರ್ಮಿಕ ಬೇಧಗಳಿಲ್ಲದೆ ಒಟ್ಟಾಗಿ ಬೆರೆತು ಬೆಸೆದು ಹೋರಾಟ ಕಟ್ಟಿದರು. ಹೀಗಾಗಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂ – ಅಲ್ಲಾ ಹೋ ಅಕ್ಬರ್ ಘೋಷಣೆಗಳನ್ನು ಹಿಂದೂ ಮುಸ್ಲಿಮರಿಬ್ಬರೂ ಹಾಕುತ್ತಿದ್ದರು. ಒಂದು ಹಂತದ ತನಕ ಇದರಲ್ಲಿ ಸ್ವಾತ್ರ್ಯದ ಆಶಯಗಳಿತ್ತೇ ವಿನಾ ಮತಧರ್ಮಗಳ ರಾಜಕಾರಣ ಕಂಡು ಬರುತ್ತಿರಲಿಲ್ಲ. ಹಾಗೆಯೇ ಅಲ್ಲಮ ಇಕ್ಬಾಲರ ಸಾರೇ ಜಹಾಂಸೆ ಅಚ್ಚಾ ಹಿಂದೂಸಿತಾ ಹಮಾರ ಹಾಡು, ರಾಂಪ್ರಸಾದ್ ಬಿಸ್ಮಿಲ್ಲಾ ರ ಸರ್ಫ಼್ರೋಷಿ ಕಿ ತಮನ್ನಾ ಎಂಬ ಹಾಡು, ಭಗತ್ ಸಿಂಗರ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆಗಳೂ ಕೂಡ. ಆದರೆ ಭಾರತದ ರಾಜಕಾರಣದಲ್ಲಿ ಬ್ರಿಟಿಶರ ಒಡೆದಾಳುವ ರಾಜಕಾರಣದ ಪರಿಣಾಮವಾಗಿ ಭಾರತದ ರಾಷ್ಟ್ರೀಯ ಹೋರಾಟದಲ್ಲೂ ಹಿಂದೂ ಮತ್ತು ಮುಸ್ಲಿಂ ಕೋಮುವಾದಿ ರಾಜಕಾರಣವೂ 1909 ರ ನಂತರ ಹರಳುಗಟ್ತತೊಡಗಿತು.
ಅದರ ಭಾಗವಾಗಿಯೇ 1905-47 ರ ನಡುವೆ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾತಂತ್ರ್ಯದ ಆಶಯವಾಗಿ ವಂದೇ ಮಾತರಂ ಘೋಷಣೆಯನ್ನು ಮುಸ್ಲಿಮರು ಕೂಡ ಅಪ್ರಜ್ನಾಪೂರ್ವಕವಾಗಿಯೇ ಘೋಷಿಸುತ್ತಿದ್ದರೂ ಎಚ್ಚೆತ್ತ ಮುಸ್ಲಿಂ ಪ್ರಜ್ನೆ ವಂದೇ ಮಾತರಂ ಹಾಡಿನ ಪೂರ್ಣ ಪಠ್ಯ ಹಾಗೂ ಆನಂದ ಮಠದ ಕಾದಂಬರಿಯ ಆಶಯಗಳ ಹಿನ್ನೆಲೆಯಲ್ಲಿ ಅದರ ಪ್ರಸ್ತುತತೆಯನ್ನು ಸಣ್ಣ ಧ್ವನಿಯಲ್ಲಿ ಪ್ರಶ್ನಿಸಲಾರಂಭಿಸಿತು. ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಘೋಷಣೆ ಸ್ವಾತಂತ್ರ್ಯದ ಆಶಯದ ಸಂಕೇತವಾಗಿ ಹಾಕಲ್ಪಡುತ್ತಿದ್ದರೂ 1908-47 ರ ನಡುವೆ ನಡೆದ ಹಲವಾರು ಕೋಮು ಗಲಭೆಗಳಲ್ಲಿ ಅಲ್ಲಹೋ ಅಕ್ಬರ್ ಮುಸ್ಲಿಂ ಕೋಮುವಾದಿಗಳ ಘೋಷಣೆಯಾಗಿದ್ದರೆ , ವಂದೇ ಮಾತರಂ ಹಿಂದೂ ಕೊಮುವಾದಿಗಳ ಘೋಷಣೆಯಾಗತೊಡಗಿತು. ರಾಷ್ಟ್ರವನ್ನು ಮನುಷ್ಯರೂಪಿ ದೇವರಾಗಿ, ಸ್ವಾತಂತ್ರ್ಯ ವಿಗ್ರಹವಾಗಿ-ಪ್ರತಿಮೆಯಾಗಿ ಕಲ್ಪಿಸಿಕೊಳ್ಳುವುದು ಹಿಂದೂಗಳಲ್ಲಿ ಜಾಗೃತಿಗೆ ಪೂರಕವೇ ಆಗಿದ್ದರೂ, ರಾಷ್ಟ್ರವಾದಿ ಮುಸ್ಲಿಮರಿಗೆ ಅದು ಧಾರ್ಮಿಕ ಇಬ್ಬಂದಿಯನ್ನು ಹುಟ್ಟಿಸುವ ಸಂಗತಿಯೂ ಆಗಿತ್ತು. ಏಕೆಂದರೆ ಇಸ್ಲಾಮಿನಲ್ಲಿ ರಾಷ್ಟ್ರನಿಶ್ಟೆ ಎಷ್ಟೆ ಇದ್ದರೂ ದೇವರನ್ನು ಬಿಟ್ಟು ಬೇರೆ ಯಾರಿಗೂ ನಮಿಸುವುದಿಲ್ಲ. ಹಾಗೆಯೇ ವಿಗ್ರಹಾರಾಧನೆಯೂ ಇಲ್ಲ. ಇವೆರಡೂ ಕಾರಣಗಳಿಂದಲೂ ವಂದೇ ಮಾತರಂ ಒಪ್ಪಿಕೊಳ್ಳುವುದು ಮುಸ್ಲಿಂ ರಾಷ್ಟ್ರವಾದಿಗಳಿಗೆ ಇರುಸುಮುರುಸಾಗತೊಡಗಿತು. ಹಿಂದೂತ್ವ ಕೋಮುವಾದಿಗಳು ಇಂದಿನಂತೆ ಅಂದೂ ಕೂಡಾ, ವಂದೇ ಮಾತರಂ ಅನ್ನು ಹಾಡುವುದು ಧಾರ್ಮಿಕ ಕಾರಣಗಳಿಂದ ನಿರಾಕರಿಸುವುದನ್ನು ಭಾರತ ರಾಷ್ಟ್ರ ನಿರಾಕರಣೆಗೆ ಸಮೀಕರಿಸಿ ಮುಸ್ಲಿಮರನ್ನು ದೇಶದ್ರೋಹಿಗಳೆಂದು ಚಿತ್ರಿಸತೊಡಗಿದರು. 1937 ರಲ್ಲಿ ಹಿಂದೂ ಮಹಾ ಸಭಾದ ಸಾವರ್ಕರ್ ಅಕ್ಟೊಬರ್ ತಿಂಗಳಲ್ಲಿ ವಂದೇ ಮಾತರಂ ದಿನವನ್ನು ದೇಶಾದ್ಯಂತ ಎಲ್ಲಾ ನೈಜ ಭಾರತೀಯರು ಆಚರಿಸಬೇಕೆಂದು ಕರೆಕೊಟ್ಟಿದ್ದರು. ಈಗ ಮೋದಿ ಕರೆ ಕೊಟ್ಟಿರುವಂತೆ !
ವಂದೇ ಮಾತರಂ- ಕೋಮುವಾದದ ಸಾಧನ ಮಾಡಿಕೊಂಡ ಹಿಂದೂತ್ವವಾದಿಗಳು
ಇವೆಲ್ಲವೂ 1937 ರ ಚುನಾವಣೆಯಾದ ನಂತರ ಇನ್ನಷ್ಟು ಸ್ಪಷ್ಟವಾಗಿ ಹರಳುಗಟ್ಟತೊಡಗಿತು. 1935 ರ ಗವರ್ನಮೆಂಟ್ ಆಫ಼್ ಇಂಡಿಯಾ ಆಕ್ಟ್ ನ ಭಾಗವಾಗಿ 1937ರ ಚುನಾವಣೆ ನಡೆದು ಆರು ಬ್ರಿಟಿಶ್ ಆಡಳಿತ ಪ್ರಾಂತ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಅಸ್ತಿತ್ವಕ್ಕೆ ಬಂದವು. ಮುಸ್ಲಿಮರು ಸಹ ದೊಡ್ದ ಸಂಖ್ಯೆಯಲ್ಲಿ ಕಾಂಗ್ರೆಸ್ಸಿಗೇ ಓಟು ಹಾಕಿದ್ದು ಮುಸ್ಲಿಂ ಲೀಗಿಗೆ ಮತ್ತು ಅದರ ನಾಯಕ ಜಿನ್ನರಿಗೆ ರಾಜಕೀಯ ಅಭದ್ರತೆಯನ್ನೇ ಸೃಷ್ಟಿಸಿದ್ದವು. ಆ ಕಾಲಘಟ್ಟದಲ್ಲಿ ಖಟ್ಟರ್ ಹಿಂದೂತ್ವ ಕೋಮುವಾದಿಗಳಾದ ಹಿಂದೂ ಮಹಾಸಭಾದ ಹಲವಾರು ಪ್ರಮುಖ ನಾಯಕರೂ ಕೂಡ ಕಾಂಗ್ರೆಸ್ಸಿ ನಾಯಕರೂ ಆಗಿರುತ್ತಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ ಜಾಗದಲ್ಲಿ ಈ ಕೋಮುವಾದಿಗಳು ಶಾಲಾ-ಕಾಲೇಜಿನಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿದವು. ಇಂದು ಬಿಜೆಪಿ ಸರ್ಕಾರಗಳು ಮಾಡುತ್ತಿರುವಂತೆ! ಇವೆಲ್ಲ ಕಾರಣಗಳಿಂದ ಜಿನ್ನ ನೇತೃತ್ವದ ಮುಸ್ಲಿಂ ಲೀಗ ಕಾಂಗ್ರೆಸ್ ಸರ್ಕಾರಗಳ ಈ ಧೋರಣೆಯ ವಿರುದ್ಧ ಪ್ರತಿಭಟನೆ ದಾಖಲಿಸಿದವು. ಈ ಕಾರಣಗಳಿಂದ ಕಾಂಗ್ರೆಸ್ ಪಕ್ಷವು ಈ ಸಮಸ್ಯೆಯನ್ನು ನಿವಾರಿಸಲು ನೆಹರೂ, ಪಟೇಲ್, ಸುಭಾಶ್ ಆಜಾದ್, ನರೇಂದ್ರ ದೇವ ಇನ್ನಿತರರ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸುತ್ತಾರೆ. ಅದು ಟಾಗೂರರ ಅಭಿಪ್ರಾಯವನ್ನು ಕೇಳುತ್ತದೆ.
ಟಾಗೂರರು ಅತ್ಯಂತ ಸ್ಪಷ್ಟವಾಗಿ ವಂದೇ ಮಾತರಂನ ಮೊದಲೆರಡು ಚರಣಗಳನ್ನು ಬಿಟ್ಟರೆ ಉಳಿದವು ಅತ್ಯಂತ ಸಮಸ್ಯಾತ್ಮಕ ಹಾಗೂ ಮುಸ್ಲಿಮರ ಧಾರ್ಮಿಕ ಮನಸ್ಸಿಗೆ ಅಂಗೀಕಾರವಾಗದ್ದು ಎಂದು ಅಭಿಪ್ರಾಯ ಪಡುತ್ತಾರೆ. ಹೀಗಾಗಿ 1938 ರ ಕಾಂಗ್ರೆಸ್ ಅಧಿವೇಶನದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂ ಘೋಷಣೆ ಕೊಟ್ಟಿರುವ ಸ್ಪೂರ್ತಿಯನ್ನು ಗಮನಿಸುತ್ತಲೇ, ಅದರ ಉಳಿದ ಭಾಗಗಳಿಲ್ಲಿರುವ ಸ್ಪಷ್ಟ ಹಿಂದೂ ಧಾರ್ಮಿಕ ಸಂಕೇತಗಳು ಮತ್ತು ಪ್ರತಿಮೆಗಳು ಮುಸ್ಲಿಮರಿಗೆ ಕಸಿವಿಸಿಯುಂಟು ಮಾಡುತ್ತದೆ ಎಂಬುದನ್ನುಗ್ರಹಿಸುತ್ತದೆ. ಹೀಗಾಗಿ ಕಾಂಗ್ರೆಸ್ಸಿನ ಅಧಿವೇಶನಗಳಲ್ಲಿ ಮತ್ತು ಬಹಿರಂಗ ಸಭೆಗಳಲ್ಲಿ ವಂದೇ ಮಾತರಂ ನ ಮೊದಲೆರಡು ಚರಣಗಳನ್ನು ಮಾತ್ರ ಹಾಡತಕ್ಕದ್ದು. ಅಥವಾ ಅದರ ಜೊತೆಗೆ ಅಥವಾ ಅದರ ಬದಲಿಗೆ ಇನ್ಯಾವುದೇ ಧಾರ್ಮಿಕ ಧಕ್ಕೆ ತರದ ಗೀತೆಗಳನ್ನು ಹಾಡಬಹುದು ಎಂದು ತೀರ್ಮಾನಿಸುತ್ತದೆ.
ಹೀಗಾಗಿ ಇದು ಕೇವಲ ನೆಹರೂ ಚಿತಾವಣೆಯೋ ತೀರ್ಮಾನವೋ ಅಲ್ಲ. ಸಂಘಿಗಳು ಮೆಚ್ಚಿಕೊಳ್ಳುವ ಕಾಂಗ್ರೆಸ್ಸಿಗರಾದ ಸರ್ದಾರ್ ಪಟೇಲರು ಮತ್ತು ಸುಭಾಶರೂ ಕೂಡ ಒಪ್ಪಿ ಮಾಡಿದ ತೀರ್ಮಾನ. ಸುಭಾಶರಂತೂ ಸಿಂಗಪುರದಲ್ಲಿ ಆಜಾದ್ ಹಿಂದ್ ಫ಼ೌಜ್ ಮಾಡಿದಾಗಲೂ ವಂದೇ ಮಾತರಂ ಹಾಡನ್ನು ಸಿಪಾಯಿ ಗೀತೆ ಮಾಡಲು ನಿರಾಕರಿಸುತ್ತರೆ, ಜನಗಣಾಮನವನ್ನು ಒಪ್ಪಿಕೊಳ್ಳುತ್ತಾರೆ. ಐಎನ್ಎ ಯ ಕರ್ನಲ್ ಅಬಿದ್ ಹಸನ್ ಸಫ಼್ರಾನಿ ರಚಿಸಿದ ತಮ್ಮದೇ ಪ್ರತ್ಯೇಕ ಸೈನ್ಯ ಗೀತೆ:
ಶುಭ್ ಸುಖ್ ಚೈನ್ ಕಿ ಬರ್ಖಾ ಬರಸೆ
ಎಂಬ ಯಾವುದೇ ಧರ್ಮ ಸೂಚಕವಲ್ಲದ ಭವಿಷ್ಯಾದ ಸಮೃದ್ಧ ಸೌಹಾರ್ದ ಬದುಕನನ್ನು ಬಯಸುವ ಗೀತೆಯನ್ನು ಅಳವಡಿಸಿಕೊಳ್ಳುತ್ತಾರೆ. ಅದೇ ರೀತಿ ಸಂವಿಧಾನ ಸಭೆಯಲ್ಲಿ 1950 ರ ಜನವರಿ 24 ರಂದು ಕೂಡ ಜನಮನಗಣವನ್ನು ರಾಷ್ಟ್ರಗೀತೆಯನ್ನಾಗಿಯೂ, ವಂದೇ ಮಾತರಂ ನ ಮೊದಲೆರಡು ಚರಣಗಳನ್ನು ಮಾತ್ರ ರಾಷ್ಟ್ರಗಾನವನ್ನಾಗಿಯೂ ಅನುಮೋದಿಸ ಬೇಕೆಂಬ ಅದ್ಯಕ್ಶೀಯ ಸಲಹೆಯನ್ನು ಇಡಿ ಸಂವಿಧಾನ ಸಭೆ ಅಂಗೀಕರಿಸುತ್ತದೆ. ಅದರಲ್ಲಿ ಸಂಘಿಗಳ ಮೆಚ್ಚಿನ ಪಟೇಲ, ಪಂತ್ , ಶಾಂ ಪ್ರಸಾದ್ ಮುಖರ್ಜಿಗಳೂ ಕೂಡ ಮುಂಚೂಣಿಯಲ್ಲಿದ್ದರು ಎಂಬುದನ್ನು ಸಂಘಿಗಳು ಮರೆಸುತ್ತಿದ್ದಾರೆ.
1947ರ ನಂತರ- ಕೋಮುವಾದಿ ಸ್ವರವಾಗುತ್ತಲೇ ಹೋದ ವಂದೇ ಮಾತರಂ
ಸ್ವಾತಂತ್ರ್ಯಾ ನಂತರದಲ್ಲಿ ಸಂಘಿಗಳು ಮತ್ತು ಇತರ ಪಕ್ಷಗೊಳಗಿನ ಸಂಘಿಗಳು ವಂದೇ ಮಾತರಂ ಮತ್ತು ಆನಂದ ಮಠಗಳನ್ನು ಬಳಸಿಕೊಂಡು ಕೋಮು ರಾಜಕಾರಣ ಮಾಡಲು ಪ್ರಯತ್ನಿಸುತ್ತಲೇ ಬಂದಿವೆ. 1983ರಲ್ಲಿ ಪ. ಬಂಗಾಳದ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಆನಂದ ಮಠ ಕಾದಂಬರಿಯನ್ನು ಸರ್ಕಾರ ವಿಸ್ತೃತವಾಗಿ ಜನಪ್ರಿಯಗೊಳಿಸಬೇಕೆಂಬ ಮಸೂದೆಯನ್ನು ಮಂಡಿಸಿದ್ದರು. ಅಧಿಕಾರದಲ್ಲಿದ್ದ ಎಡ ಸರ್ಕಾರದ ಕೆಲವು ಎಡಪಕ್ಷಗಳು ಅದನ್ನು ವಿರೋಧಿಸಿದರೆ ಕೆಲವು ಎಡಪಕ್ಷಗಳು ಚರ್ಚೆಯಲ್ಲಿ ಗೈರು ಹಾಜರಾದವು. ಎಡಸರ್ಕಾರವು ಸಹ ಅದರಿಂದ ಕೋಮು ಸಮಸ್ಯೆ ಉಂಟಾಗಬಹು ಎಂಬ್ವ ರಕ್ಷಣಾತ್ಮಕ ನಿಲುವನ್ನು ತೆಗೆದುಕೊಂಡಿತೇ ವಿನಾ ಪ್ರಸ್ತಾಪದ ಹಿಂದಿನ ಕೋಮುವಾದವನ್ನಾಗಲೀ, ಆನಂದಮಠದ ಕೋಮುವಾದವನ್ನಾಅಗಲೀ ತಾತ್ವಿಕವಾಗಿ ನಿರಾಕರಿಸಲೇ ಇಲ್ಲ. 1998 ರಲ್ಲಿ ವಾಜಕೇಯಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದ್ದಾಗ ಉ,ಪ್ರದೇಶದಲ್ಲಿದ್ದ ಬಿಜೆಪಿ ಸರ್ಕಾರ ಶಾಲಾ ಕಾಲೆಜುಗಳಲ್ಲಿ ವಂದೇ ಮಾತರಂ ಮತ್ತು ಸರಸ್ವತಿ ವಂದನೆಯನ್ನು ಕ್ಯಾಬಿನೆಟ್ಟಿನ ಗಮನಕ್ಕೊ ತರದೆ ಜಾರಿ ಮಾಡಿತ್ತು. ವಾಜಪೇಯಿಯವರು ಉ.ಪ್ರದೇಶ ಪ್ರವಾಸಕ್ಕೆ ಹೋಗಿದ್ದಾಗ ಇದು ಬಹು ದೊಡ್ಡ ಹಗರಣವಾದಾಗ ಒಬ್ಬ ಜ್ಯುನಿಯರ್ ಮಂತ್ರಿ ಶುಕ್ಲಾನನ್ನು ಅಮಾನತ್ತು ಮಾಡಿ ಆ ಕಾರ್ಯಕ್ರಮವನ್ನು ನಿಲ್ಲಿಸಲಾಯಿತು.
ವಂದೇ ಮಾತರಂ-150- ಹಿಂದೂ ರಾಷ್ಟ್ರದ ಮತ್ತೊಂದು ಮೋದಿ ಹುನ್ನಾರ
ಈಗ ಮೋದಿ ಕಾಲಘಟ್ಟದಲ್ಲಿ ದೇಶವೂ ಮೊದಲಿಗಿಂತಲೂ ಹೆಚ್ಚು ಬ್ರಾಹ್ಮಣೀಯ ಹಿಂದೂತ್ವವಾದಿ ರಾಜಕಾರಣಕ್ಕೆ ಬಲಿಯಾಗಿದೆ. ಆದ್ದರಿಂದಲೇ ಮೋದಿ ಮತ್ತವರ ಪಟಾಲಂ ಬಹಿರಂಗವಾಗಿಯೇ ವಂದೇ ಮಾತರಂ ಇತಿಹಾಸದ ಬಗ್ಗೆ ಹಸಿಹಸಿ ಸುಳ್ಳುಗಳನ್ನು ಹೇಳುತ್ತಿದೆ. ಹಾಗೂ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದು ಧರ್ಮದ ಬೋಧನೆ ಮಾಡಬಾರದು ಎಂದು ಕಾಯಿದೆ ಇದ್ದರೂ ಸರ್ಕಾರಿ ಸಂಸ್ಥೆಗಳಲ್ಲಿ ವಂದೇ ಮಾತರಂ ಕಡ್ಡಾಯ ಮಾಡುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಂದೇ ಮಾತರಂ -150 ಆಚರಣೆಯ ಹೆಸರಿನಲ್ಲಿ ಜನಗಣಮನದ ಕೂಡು ಬಾಳ್ವೆ ಮತ್ತು ಧಾರ್ಮಿಕ ಸೌಹಾರ್ದದ ಆಶಯದ ಮೇಲೆ ದಾಳಿ ಮಾಡುತ್ತಿದೆ. ಭಾರತವೆಂದರೆ ವಂದೇ ಮಾತರಂ ಮತ್ತು ಆನಂದ ಮಠದ ಬ್ರಾಹ್ಮಣೀಯ ಹಿಂದೂ ರಾಷ್ಟ್ರವೆಂದು ಬಿಂಬಿಸಲು ಹೊರಟಿದೆ. ರಾಷ್ಟ್ರದ ಶತ್ರುಗಳೆಂದರೆ ಬಡತ, ನಿರುದ್ಯೋಗ ಅಥವಾ ಸಾಮ್ರಾಜ್ಯಶಾಹಿಗಳಲ್ಲ, ಬದಲಿಗೆ ಹಿಂದೂಗಳಷ್ಟೆ ಭಾರತೀಯರಾಗಿರುವ ಮುಸ್ಲಿಮರು ಎಂಬ ಫ಼್ಯಾಶಿಸ್ಟ್ ರಾಜಕಾರಣಕ್ಕೆ ವಂದೇ ಮಾತರಂ -150 ರ ಸಂದರ್ಭವನ್ನು ಬಳಸಿಕೊಳ್ಳುತ್ತದೆ. ನೈಜ ಇತಿಹಾಸವನ್ನು ಮತ್ತು ನೈಜ ಸಮಸ್ಯೆಯನ್ನು ಅರ್ಥಮಾಡಿಕೊಂಡು ಮೋದಿ ಹುನ್ನಾರಗಳನ್ನು ಸೋಲಿಸುವ ಜವಾಬ್ದಾರಿ ಎಲ್ಲಾ ನೈಜ ದೇಶಭಕ್ತ ರ ಮೇಲಿದೆ.
- ಶಿವಸುಂದರ್
ಜನಪರ ಚಿಂತಕರು, ಲೇಖಕರು


Leave a reply