ಭಾರತ ದೇಶ ಮಾತ್ರವಲ್ಲ, ಸುತ್ತಮುತ್ತಲಿನ ದೇಶಗಳೆಲ್ಲವೂ ಬೌದ್ಧದೇಶಗಳಾಗಿ ಪರಿವರ್ತನೆಯಾಗುತ್ತಿದ್ದ ಕಾಲದಲ್ಲಿ ಎಲ್ಲಾ ವಿಷಯಗಳನ್ನು ನಕಲಿಸಿ ವೈದಿಕ ಧರ್ಮಗಳು ತಮ್ಮ ದೇವೀದೇವತೆಗಳನ್ನು ಸೃಷ್ಟಿಸಿದರು. ಪುರಾಣಗಳನ್ನು ಕರೆದುಕೊಂಡರು. ಇದಲ್ಲದೆ, ಅವರು ಬುದ್ಧನನ್ನು ತಮ್ಮ ಅವತಾರಗಳಲ್ಲಿ ಒಬ್ಬನೆಂದು ಕೂಡ ಘೋಷಿಸಿದರು. ಆದರೆ ಆ ಪುರಾಣಗಳಲ್ಲಿ ಏನಿದೆ? ಲಕ್ಷಾಂತರ ವರ್ಷಗಳ ಹಿಂದೆಯೇ ಪೌರಾಣಿಕ ಪಾತ್ರಗಳು ಬಾಣಗಳು, ತ್ರಿಶೂಲಗಳು, ಈಟಿಗಳು, ಚಕ್ರಗಳು ಮತ್ತು ಕೊಡಲಿಗಳನ್ನು ಬಳಸುತ್ತಿದ್ದರು ಎಂದು ಅವರು ಯಾವುದೇ ಹಿಂಜರಿಕೆಯಿಲ್ಲದೆ ಸುಳ್ಳಗಳನ್ನು ಬರೆದರು. ಅವರ ಕಾಲ್ಪನಿಕ ದೇವರು ಮತ್ತು ದೇವತೆಗಳು ಚಿನ್ನದ ಆಭರಣಗಳನ್ನು ಹೊಂದಿದ್ದಾರೆಂದು ಅವರು ಕನಸು ಕಂಡರು. ಆ ಕಾಲದ ಬರಹಗಾರರು ಮತ್ತು ಕವಿಗಳು ಲೋಹಗಳು ಯಾವಾಗ ಬಳಕೆಗೆ ಬಂದವು ಎಂಬುದನ್ನು ತಿಳಿಯದೆಯೇ ಅವುಗಳ ಬಗ್ಗೆ ಬರೆದುಕೊಂಡಿದ್ದಾರೆ ಎನ್ನಬಹುದು! ಅವರು ತಮ್ಮೆಲ್ಲಾ ಸೃಜನಶೀಲತೆಯನ್ನು ಸೇರಿಸಿಕೊಂಡರು!! ಆ ದೇವರುಗಳು ಮತ್ತು ಆ ಪುರಾಣಗಳು ನಿಜವೆಂದು ನಂಬಿದವರು ಅವುಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಿದರು. ಜನರು ಸಹ ಅವುಗಳಿಗೆ ಒಗ್ಗಿಕೊಂಡರು. ಯಾರಾದರೂ ಸತ್ಯವನ್ನು ಹೇಳಿದರೂ, ‘ಅದೆಲ್ಲಾ ಸುಳ್ಳು’ ಎಂದು ತಮ್ಮ ನಂಬಿಕೆಗಳಲ್ಲಿ ಜೀವಿಸುತ್ತಿದ್ದಾರೆ.
ಈ ಜಗತ್ತಿನಲ್ಲಿ ಲೋಹಗಳು ಯಾವಾಗ ಮತ್ತು ಹೇಗೆ ಕಂಡುಹಿಡಿಯಲಾಯಿತು ಎಂಬುದನ್ನು ನೋಡೋಣ – ಲೋಹದ ಯುಗವು ಕ್ರಿ.ಪೂ 4500 ರಲ್ಲಿ ಪ್ರಾರಂಭವಾಯಿತು. ತಾಮ್ರ, ಕಂಚು ಮತ್ತು ಕಬ್ಬಿಣದಂತಹ ಲೋಹಗಳು ಬಳಕೆಗೆ ಬಂದವು. ಇದು ವಿವಿಧ ಪ್ರದೇಶಗಳಲ್ಲಿ ಮತ್ತು ವಿಭಿನ್ನ ಸಮಯಗಳಲ್ಲಿ ಬಳಕೆಗೆ ಬಂದಿತು. ಲೋಹಯುಗವನ್ನು ಮತ್ತೆ ಮೂರು ಭಾಗಗಳಾಗಿ ವಿಂಗಡಿಸಬಹುದು-
1. ತಾಮ್ರ ಯುಗ 2. ಕಂಚಿನ ಯುಗ 3. ಕಬ್ಬಿಣದ ಯುಗ. ತಾಮ್ರ ಯುಗವು ಕ್ರಿ.ಪೂ 4500-3500 ರ ನಡುವೆ ಪ್ರಾರಂಭವಾಯಿತು. ತಾಮ್ರದ ವಸ್ತುಗಳು ಮಧ್ಯಪ್ರಾಚ್ಯ, ಭಾರತೀಯ ಉಪಖಂಡ ಮತ್ತು ಯುರೋಪ್ನಲ್ಲಿ ಬಳಕೆಗೆ ಬಂದವು. ಕಂಚಿನ ಯುಗವು ಕ್ರಿ.ಪೂ 3300 ಮತ್ತು 1200 ರ ನಡುವೆ ಪ್ರಾರಂಭವಾಯಿತು. ಕಂಚಿನ ಬಳಕೆ ಮೆಸೊಪಟ್ಯಾಮಿಯಾ, ಈಜಿಪ್ಟ್, ಭಾರತ ಮತ್ತು ಚೀನಾದಲ್ಲಿ ಪ್ರಾರಂಭವಾಯಿತು. ಭಾರತದಲ್ಲಿನ ಹರಪ್ಪಾ ನಾಗರಿಕತೆ ಇದನ್ನು ದೃಢಪಡಿಸಿದೆ. ಅದೇ ಸಮಯದಲ್ಲಿ, ಚೀನಾದಲ್ಲಿ ತಾಮ್ರ ಮತ್ತು ತವರದ ಮಿಶ್ರಲೋಹವನ್ನು ಬಳಸಲಾಗುತ್ತಿತ್ತು. ಕಬ್ಬಿಣದ ಯುಗವು ಮಧ್ಯಪ್ರಾಚ್ಯದಲ್ಲಿ ಸುಮಾರು ಕ್ರಿ.ಪೂ. 1200 ರಲ್ಲಿ ಪ್ರಾರಂಭವಾಯಿತು, ಆಗ ಕಬ್ಬಿಣದ ಸಾಮಾನುಗಳು, ಇತರ ಉಪಕರಣಗಳು ಮತ್ತು ಆಯುಧಗಳನ್ನು ತಯಾರಿಸಲಾಯಿತು. ಅಲ್ಲಿಂದ ಕಬ್ಬಿಣದ ಬಳಕೆ ಕ್ರಮೇಣ ಇತರೆ ಪ್ರದೇಶಗಳಿಗೆ ಹರಡಿತು.
ಭಾರತಕ್ಕೆ ಬಂದರೆ, ಇಲ್ಲಿ ತಾಮ್ರದ ಬಳಕೆಯು ಕ್ರಿ.ಪೂ 4000 ದಷ್ಟು ಹಿಂದಿನದು – ನಂತರ ಕಂಚಿನ ಬಳಕೆಯು ಕ್ರಿ.ಪೂ 2600 ರ ಸುಮಾರಿಗೆ, ಅಂದರೆ ಹರಪ್ಪಾ ನಾಗರಿಕತೆಯೊಂದಿಗೆ ಪ್ರಾರಂಭವಾಯಿತು. ಅಲ್ಲದೆ, ಕಬ್ಬಿಣದ ಬಳಕೆಯು ಕ್ರಿ.ಪೂ 1000 ದಷ್ಟು ಹಿಂದೆಯೇ ಪ್ರಾರಂಭವಾಯಿತು ಎಂಬುದಕ್ಕೆ ಪುರಾವೆಗಳು ಕಂಡುಬಂದಿವೆ. ಪ್ರತಿಯೊಂದು ಅಧ್ಯಯನವು ಕೆಲವು ವರ್ಷಗಳ ಅಂತರದಲ್ಲಿ ವಿವರಗಳನ್ನು ನೀಡಬಹುದಾಗಿದೆ – ಆದರೆ ವಿಜ್ಞಾನವು ಪೂರ್ಣವಾಗಿ ಹೇಳುವುದು ಇದನ್ನೇ. ಜೈವಿಕ ವಿಕಾಸದ ಹಂತಗಳಲ್ಲಿ ಮಾನವರು ಲಕ್ಷಾಂತರ ವರ್ಷಗಳನ್ನು ಬದುಕಿ ಕಳೆದಿದ್ದರೂ, ಅವನ ಜೀವನವು ಲೋಹಗಳ ಬಳಕೆಯಿಲ್ಲದೆಯೇ ಕಳೆದಿದೆ. ಅವನು ಲೋಹಗಳ ಬಳಕೆಯಲ್ಲಿ ಕ್ರಮೇಣ ಪ್ರಗತಿ ಸಾಧಿಸಿ ಉಪಕರಣಗಳು, ಸಾಧನಗಳು ಮತ್ತು ವಸ್ತುಗಳನ್ನು ತಯಾರಿಸುತ್ತಿದ್ದಾನೆ. ಒಂದು ರೀತಿಯಲ್ಲಿ, ಈ ಲೋಹಗಳ ಕುರಿತಾದ ಮಾಹಿತಿಯು – ದೇವರು ಯಾವಾಗ ಸೃಷ್ಟಿಯಾದನು? ಕಾಣದ ಆ ದೇವರ ತಲೆಗಳನ್ನು ಬಣ್ಣಿಸುತ್ತಾ ಭಕ್ತ ಕವಿಗಳು ಪುರಾಣಗಳನ್ನು ಯಾವಾಗ ಬರೆದರು? ಎಂಬ ವಿಷಯ ವಿಷಾದನೀಯ ಅಲ್ಲವೇ?
ಲೋಹಗಳು ಬಳಕೆಗೆ ಬರುವ ಮುನ್ನ ವೈದಿಕ ದೇವಿದೇವರುಗಳು ದೊಡ್ಡ ದೊಡ್ಡ ಚಿನ್ನದ ಕಿರೀಟಗಳು, ಚಿನ್ನದ ಹಾರಗಳು ಮತ್ತು ಇತರ ಆಭರಣಗಳನ್ನು ಹೇಗೆ ಧರಿಸಿದ್ದರು? ಅವೆಲ್ಲವೂ ಕಾಲ್ಪನಿಕವಲ್ಲವೇ? ವೈಜ್ಞಾನಿಕ ದೃಷ್ಟಿಕೋನದಿಂದ ಯೋಚಿಸಿದರೆ – ವೈದಿಕ ಬರಹಗಾರರ ಬರಹಗಳೆಲ್ಲವೂ ಕೇವಲ ಅವರ ಸ್ವಂತ ಭ್ರಮೆಗಳು ಎಂಬುದು ಸ್ಪಷ್ಟವಾಗುತ್ತದೆ! ಅವುಗಳಿಗೆ ಯಾವುದೇ ರೀತಿಯ ನಿಜವಾದ ನಿರೂಪಣೆಗಳು ಅಥವಾ ಪುರಾವೆಗಳಿಲ್ಲ ಎಂಬುದನ್ನು ಗ್ರಹಿಸಬೇಕು. ವೈದಿಕ ಗ್ರಂಥಗಳಲ್ಲಿ ಮಾತ್ರವಲ್ಲ, ಇನ್ನೂ ಯಾವುದೇ ಇತರೆ ಧಾರ್ಮಿಕ ಗ್ರಂಥಗಳಲ್ಲಿಯೂ ಅದು ಸುಳ್ಳೇ ಆಗಿದೆ. ಆದ್ದರಿಂದ – ಕಾಲ್ಪನಿಕ ಕಥೆಗಳು ಮತ್ತು ದಂತಕಥೆಗಳನ್ನು ಕಾಲ್ಪನಿಕವಾಗಿಯೇ ನೋಡಬೇಕು! ಪುರಾಣಗಳು ಎಂದಿಗೂ ಚಾರಿತ್ರಿಕ ಗ್ರಂಥಗಳಾಗುವುದಿಲ್ಲ. ಪುರಾಣದ ಪುರುಷರು ಎಂದಿಗೂ ಚಾರಿತ್ರಿಕ ಪುರುಷರಾಗಲು ಸಾಧ್ಯವಿಲ್ಲ. ಆ ವ್ಯತ್ಯಾಸವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು! ಚರಿತ್ರೆ ಎಂದರೇನು? ಎಂದೇ ತಿಳಿಯದ ಕಾಲದಲ್ಲಿ ಆ ‘ಪವಿತ್ರ’ ಪುರಾಣಗಳನ್ನು ಬರೆಯಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹಾಲಿನ ಸಮುದ್ರದಲ್ಲಿ ಡನ್ಲಪ್ ಹಾಸಿಗೆಯಂತೆ ತೇಲುವ ಒಂದು ದೈತ್ಯ ನಾಗರಹಾವು – ಆದಿಶೇಷ – ಅದರ ಮೇಲೆ ದೇವತೆ ವಿಷ್ಣು ಮಲಗಿರುವುದು. ಅವನ ಪತ್ನಿ ಲಕ್ಷ್ಮಿ ದೇವಿ ಅವನ ಪಾದಗಳನ್ನು ಒತ್ತುವುದು – ಇದೆಲ್ಲವೂ ಒಂದು ಊಹೆ, ಕಲ್ಪನೆಯಲ್ಲದೇ ವಾಸ್ತವವಾಗಲು ಅವಕಾಶವಿದೆಯೇ? ಇಲ್ಲ ಅಲ್ಲವೇ? ನಿಜಕ್ಕೂ ಈ ಜಗತ್ತಿನಲ್ಲಿ ಹಾಲಿನ ಸಾಗರ ಎಲ್ಲಿದೆ? ಅದರಲ್ಲಿ ಅಷ್ಟು ದೊಡ್ಡ ಹಾವು ಹೇಗೆ ತೇಲುತ್ತದೆ? ಅದು ಇಬ್ಬರನ್ನು ಹೊತ್ತು ಹೆಡೆಬಿಚ್ಚಿ ನಿಲ್ಲುವುದೇ? ಇದೆಲ್ಲವೂ ಕಾಲ್ಪನಿಕ ಎಂದು ಒಪ್ಪಿಕೊಂಡರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಇದೆಲ್ಲವೂ ನಿಜ ಎಂದು ಒತ್ತಾಯಿಸುವವರು ಕೆಲವರು ಇರುತ್ತಾರೆ ಅಲ್ಲವೇ? “ನಿಮ್ಮ ತಿಳುವಳಿಕೆ ಎಂತದ್ದು?” – ಎಂದು ಪ್ರಶ್ನಿಸಿದವರನ್ನು ಪಾಪ – ಪುಣ್ಯ – ಪಾವಿತ್ರತೆ ಮುಂತಾದ ಪದಗಳಿಂದ ಹೆದರಿಸುತ್ತಾರೆ? ಒಳ್ಳೆಯ ಕಾರ್ಯಗಳು ಮತ್ತು ಕೆಟ್ಟ ಕಾರ್ಯಗಳು ಇವೆ. ಶುದ್ಧ ಮತ್ತು ಅಶುದ್ಧ ಇವೆ, ಅಷ್ಟೆ ವಿನಃ! ಪುಣ್ಯ – ಪವಿತ್ರತೆ ಎಂಬ ಪದಗಳಿಗೆ ಯಾವುದೇ ಅರ್ಥವಿಲ್ಲ. ಜನರನ್ನು ಹೆದರಿಸಲು ಮನುವಾದಿಗಳು ಸೃಷ್ಟಿಸಿದ ಈ ಮಾತುಗಳಿವು. ಇವು ಆತ್ಮ ಮತ್ತು ಪರಮಾತ್ಮನ ಕುರಿತು ಮಾತನಾಡಿ ಮೂಢಭಕ್ತರನ್ನು ತಯಾರಿಸುವ ಕಚ್ಚಾ ಸಾಮಗ್ರಿಯಲ್ಲದೇ ಬೇರೇನೂ ಅಲ್ಲ.
ನಿಜಕ್ಕೂ ‘ಸನಾತನ’ ಎಂಬ ಪದವೇ – ಕದ್ದ ಪದ? ‘ಏ ಸ ಧಮ್ಮೋ ಸನಾತನ’ – ಎಂಬುದು ಬೌದ್ಧ ಕಾವ್ಯದ ಕೊನೆಯ ಚರಣ. ಹಿಂಸೆಯನ್ನು ಅಹಿಂಸೆಯೊಂದಿಗೆ ಎದುರಿಸಬೇಕು ಮತ್ತು ಕೆಟ್ಟದ್ದನ್ನು ಒಳ್ಳೆಯ ಮಾರ್ಗದಿಂದ ಎದುರಿಸಬೇಕು – ಅದುವೇ ಸನಾತನ ಧರ್ಮ ಎಂದು ಬೌದ್ಧಧಮ್ಮ ಹೇಳುತ್ತದೆ. ಆದರೆ ಅದರ ಅರ್ಥವನ್ನು ಬದಲಾಯಿಸಿ ಪ್ರಚಾರ ಮಾಡಲಾಗುತ್ತಿದೆ. ನಮ್ಮದು ಪ್ರಾಚೀನ ಧರ್ಮ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ. ಅದೇ ರೀತಿ, ಅವರು ಬೌದ್ಧಧಮ್ಮದಿಂದ ‘ಓಂ’ ಪದವನ್ನು ಕದ್ದಿದ್ದಾರೆ! ವೈದಿಕ ಧರ್ಮಕ್ಕೂ ಮುಂಚೆಯೇ ಸಾರ್ವತ್ರಿಕವಾಗಿದ್ದ ಬೌದ್ಧಧಮ್ಮದ ಅಂಶಗಳನ್ನು ಅವರು ನಕಲು ಮಾಡುತ್ತಿದ್ದಾರೆ ಮತ್ತು ಅವೆಲ್ಲವನ್ನೂ ತಮ್ಮದೇ ಎಂದು ಹೇಳಿಕೊಳ್ಳುತ್ತಿದ್ದಾರೆ. “ನಮ್ಮದು ಸನತ್, ನಮ್ಮದು ಸನಾತನಂ” ಎಂದು ಪ್ರತಿಯೊಬ್ಬ ನಿಷ್ಪ್ರಯೋಜಕ ವ್ಯಕ್ತಿಯು ಆವೇಶಗೊಳ್ಳುತ್ತಾ ಎದೆ ತಟ್ಟಿಕೊಳ್ಳುವುದೇಕೆ? ಸ್ವಲ್ಪಮಟ್ಟಿಗಾದರೂ ಮೂಲವನ್ನು ತಿಳಿದುಕೊಳ್ಳಿ – ಅವರು ಬೆಳೆಯುವುದಿಲ್ಲ “ಈ ದೇಶವನ್ನು ಬೆಳೆಯಲು ಬಿಡುವುದಿಲ್ಲ” ಎಂಬಂತಿದೆ ಅವರು ಹೇಳುವ ವಿಧಾನ ಅಲ್ಲವೇ? ಸಾಮಾನ್ಯ ಜನರು ಈ ವಿಷಯಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು, ಅರ್ಥಮಾಡಿಕೊಳ್ಳಬೇಕು ಮತ್ತು ಜಾಗರೂಕರಾಗಿರಬೇಕು!
ಚಿನ್ನ, ಬೆಳ್ಳಿ, ಕಬ್ಬಿಣ, ರತ್ನಗಳು ಮತ್ತು ವಜ್ರಗಳು ಅಸ್ತಿತ್ವದಲ್ಲಿವೆ ಎಂದು ತಿಳಿದ ನಂತರವೇ ಮನುಷ್ಯನು ತಾನೇ ಸೃಷ್ಟಿಸಿದ ದೇವಿ ದೇವತೆಗಳನ್ನು ಕಲ್ಪಿಸಿಕೊಂಡನು. ಅವುಗಳಿಗಾಗಿ ರತ್ನಗಳಿಂದ ಅಲಂಕರಿಸಲ್ಪಟ್ಟ ಸಿಂಹಾಸನಗಳನ್ನು ಸಹ ಕಲ್ಪಿಸಿಕೊಂಡನು. ಅಂದರೆ, ನಾವು ನೋಡುವ ದೇವಿ ದೇವತೆಗಳ ವೈಶಿಷ್ಟ್ಯಗಳು – ಆಭರಣಗಳು, ಆಯುಧಗಳು ಮತ್ತು ರೇಷ್ಮೆ ಬಟ್ಟೆಗಳು – ಒಬ್ಬ ವ್ಯಕ್ತಿಯು ತನ್ನ ನಿಜ ಜೀವನದಲ್ಲಿ ಅವುಗಳನ್ನು ಸಾಧಿಸಿದ ನಂತರವೇ ಅವನ ದೇವಿದೇವತೆಗಳಿಗೆ ತೊಡಿಸಿದ್ದಾನೆಂಬುದು ಸುಲಭವಾಗಿ ತಿಳಿಯುತ್ತದೆ ಅಲ್ಲವೇ? ಅಷ್ಟೇ ಅಲ್ಲದೇ ಆ ದೇವದೇವರುಗಳನ್ನು ಬಣ್ಣಿಸುತ್ತಾ, ಅವರ ಮಹಿಮೆಯನ್ನು ಸ್ತುತಿಸುತ್ತಾ ಬರೆದ ಪುರಾಣಗಳೆಲ್ಲವೂ ಆ ನಂತರ ಬಂದವು ಎಂಬುದು ಸ್ಪಷ್ಟವಾಗುತ್ತದೆ ಅಲ್ಲವೇ? ಉದಾಹರಣೆಗೆ, ಸೂಕ್ಷ್ಮದರ್ಶಕದಲ್ಲಿ (ಮೈಕ್ರೋಸ್ಕೋಪ್) ಗೋಚರಿಸುವ ಜೀವಕೋಶಗಳ ರಚನೆಯ ಬಗ್ಗೆಯಾಗಲಿ, ಅಥವಾ ಬಾಹ್ಯಾಕಾಶ ಪ್ರಯೋಗಾಲಯದ ಬಗ್ಗೆಯಾಗಲಿ ಪವಿತ್ರ ಗ್ರಂಥಗಳಲ್ಲಿ ಏಕೆ ಉಲ್ಲೇಖವಿಲ್ಲ? ಅಂದರೆ, ಅವುಗಳನ್ನು ಬರೆಯುವ ಕಾಲದಲ್ಲಿ ಈ ತಂತ್ರಜ್ಞಾನ ಲಭ್ಯವಿರಲಿಲ್ಲ. ಈಗ ಯಾರಾದರೂ ಬರೆದರೆ, ಅವರು ಅದರಲ್ಲಿ ಆ ಎಲ್ಲಾ ವಿಷಯಗಳನ್ನು ಸೇರಿಸಬಹುದು-
ಮನುಷ್ಯ ಹೆಚ್ಚು ಸುಸಂಸ್ಕೃತನಾದಂತೆ, ಹೆಚ್ಚೆಚ್ಚು ಕಲಿತಂತೆ, ಅವನು ಇವುಗಳನ್ನು ತನ್ನ ಬರಹಗಳು, ಶಿಲ್ಪಗಳು, ವರ್ಣಚಿತ್ರಗಳು, ಸ್ತೋತ್ರಗಳು ಮತ್ತು ಭಜನೆಗಳಲ್ಲಿ ಜಪಿಸುತ್ತಾ ಬಂದನು. ಇದೆಲ್ಲವೂ ಕಾಲಕ್ರಮೇಣ ಸಂಭವಿಸಿತು ಎಂದು ಒಪ್ಪಿಕೊಳ್ಳುವುದು ಬುದ್ಧಿವಂತರ ಲಕ್ಷಣ. ಇದಲ್ಲದೆ, ಸೃಷ್ಟಿಯ ಆರಂಭದಲ್ಲಿ ನಮ್ಮ ದೇವರು ನಮಗೆ ಪವಿತ್ರ ಗ್ರಂಥಗಳನ್ನು ಕೊಟ್ಟನೆಂದು ಹೇಳಿಕೊಳ್ಳುವುದು ಮೂರ್ಖತನವಾಗುತ್ತದೆ. ಏಕೆಂದರೆ, ಮನುಷ್ಯ ಮೊದಲು ತನ್ನನ್ನು ತಾನು ಸನ್ನೆಗಳ ಮೂಲಕ ಅಭಿವ್ಯಕ್ತಪಡಿಸಿದನು. ಅವನು ಸಣ್ಣ ಸಣ್ಣ ಕಿರುಚಾಟ ಮತ್ತು ಕೂಗುಗಳೊಂದಿಗೆ ಸ್ವಲ್ಪ ಸಮಯ ಕಳೆದನು. ನಂತರ, ಕ್ರಮೇಣ, ಅವನು ಭಾಷೆಯನ್ನು ಬೆಳೆಸಿಕೊಂಡನು. ಭಾಷೆ ರೂಪುಗೊಂಡ ನಂತರವೇ ತಾನೆ ಯಾವುದೇ ಬರವಣಿಗೆ ಬೆಳಕು ಕಾಣುವುದು. ಮನುಷ್ಯ ಅನಾಗರಿಕ ಸ್ಥಿತಿಯಲ್ಲಿ ಯಾವುದೇ ಭಾಷೆಯಿಲ್ಲದೆ ದಿನಗಳನ್ನು ಕಳೆಯುತ್ತಿರುವಾಗ, ಯಾವುದೋ ದೇವರು ಬಂದು ಅವನಿಗೆ ಪವಿತ್ರ ಗ್ರಂಥಗಳನ್ನು ನೀಡಿ ಹೋಗುತ್ತಾನೆಯೇ? ಕೊಟ್ಟರೂ ಆ ಪುಸ್ತಕಗಳು ಯಾವ ಭಾಷೆಯಲ್ಲಿವೆ? ಅವನು ಅದನ್ನು ಹೇಗೆ ಓದಲು ಸಾಧ್ಯ? ವಿಷಯವೇನೆಂದರೆ, ಸುಳ್ಳುಗಳ ಮೇಲೆ ಸುಳ್ಳುಗಳನ್ನು ಜೋಡಿಸಿ ಹೇಳಿದಂತೆ ಇಲ್ಲವೇ?
ಅದಕ್ಕೆ ನಾವು ಸುಳ್ಳಿನ ರಾಶಿಯನ್ನು ಕೆಡವಿ ಸತ್ಯವನ್ನು ಮಾತ್ರ ಎತ್ತಿ ಹಿಡಿಯಬೇಕು! ಇಲ್ಲಿ ನಾವು ಇನ್ನೊಂದು ವಿಷಯವನ್ನು ಸಹ ಉಲ್ಲೇಖಿಸಬೇಕು. ಶಿಲ್ಪಕಲೆಯನ್ನು ಮೊದಲು ಅಭಿವೃದ್ಧಿಪಡಿಸಿದವರು ಬೌದ್ಧರು. ಕೆಲವು ವೈಜ್ಞಾನಿಕ ವಿಷಯಗಳನ್ನು ಹೇಳಿದವರು ಅವರೇ. ಆದರೆ, ಅವರು ಎಷ್ಟೇ ಒಳ್ಳೆಯ ಮಾತುಗಳನ್ನು ಹೇಳಿದರೂ, ತಮ್ಮದೇ ಆದ ಸಂಸ್ಕೃತಿಯನ್ನು ಬೆಳೆಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ವಾಸ್ತವವಾಗಿ, ವೈದಿಕ ಧರ್ಮದಲ್ಲಿ ಯಾವುದೇ ಧರ್ಮವಿಲ್ಲ. ವಿರೂಪಗೊಂಡ, ಅಭಿವೃದ್ಧಿ ಹೊಂದಿದ ಮತ್ತು ಪ್ರಚಾರ ಮಾಡಲಾದ ಸಂಸ್ಕೃತಿ ಮಾತ್ರ ಇದೆ. ಆದ್ದರಿಂದ ಅವರು ಜೀವನದ ಎಲ್ಲಾ ನಂಬಿಕೆಗಳು ಮತ್ತು ಪದ್ಧತಿಗಳಲ್ಲಿ ತಮ್ಮ ಸಿದ್ಧಾಂತವನ್ನು ತುಂಬಿದರು. ಅವರು ಕಲೆಗಳನ್ನು ಸಹ ತಮ್ಮದಾಗಿಸಿಕೊಂಡರು. ಅವರು ಕವಿಗಳು, ಗಾಯಕರು ಮತ್ತು ನರ್ತಕರನ್ನು ಪ್ರಭಾವಿಸಿದರು. ಯಶಸ್ಸು ಮತ್ತು ಹಣ ಕೈಗೆಟುಕುತ್ತಿದ್ದರಿಂದ ಅವರೆಲ್ಲರೂ ಮನುವಾದಕ್ಕೆ ಗುಲಾಮರಾದರು.
ಕವಿಗಳು ಮತ್ತು ಕಲಾವಿದರ ಪ್ರತಿಭೆಯ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಅವರೆಲ್ಲರೂ ಮನುವಾದದ ಗೊಚ್ಚೆಯಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ನನಗೆ ಬೇಸರವಾಗುತ್ತಿದೆ. ಅವರಲ್ಲಿ ಯಾರೂ ಸಹ ಮಾನವೀಯತೆಯನ್ನು ಕೇಂದ್ರವಾಗಿಟ್ಟುಕೊಂಡು ತಮ್ಮ ಕಲಾ ಪ್ರಕಾರಗಳನ್ನು ರಚಿಸಿಲ್ಲ. ಅವರು ಅಸ್ತಿತ್ವದಲ್ಲಿಲ್ಲದ ದೇವರಿಗೆ ಸ್ತುತಿಗೀತೆಗಳನ್ನು ಹಾಡುವ ಮೂಲಕ, ಕೃತ್ಯಗಳನ್ನು ಪ್ರದರ್ಶಿಸುವ ಮೂಲಕ, ನಾಟಕಗಳನ್ನು ಪ್ರದರ್ಶಿಸುವ ಮೂಲಕ ಮತ್ತು ಚಲನಚಿತ್ರಗಳನ್ನು ನಿರ್ಮಿಸುವ ಮೂಲಕ ವೈದಿಕರು ಪ್ರಚಾರ ಮಾಡಿದ ದೇವರು ಮತ್ತು ದೇವತೆಗಳನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ. ಆ ಕೆಲಸ ಇಂದಿಗೂ ಮುಂದುವರೆದಿದೆ. ಅವರು ಆ ರೀತಿ ಹಾಡಿದರೆ ಅಂತಹ ಪ್ರದರ್ಶನ ನೀಡಿದರೆ ಅತ್ಯುತ್ತಮ ಅಭಿರುಚಿ ಇರುವಂತಹ ಕಲ್ಪನೆ ಸಮಾಜದಲ್ಲಿ ನೆಲೆಗೊಂಡಿದೆ. ಇನ್ನೂ, ಯಾರಿಗೂ ಬೇರೆ ರೀತಿಯಲ್ಲಿ ಯೋಚಿಸಲು ಅವಕಾಶವಿಲ್ಲ!
ಒಂದು ರೀತಿಯಲ್ಲಿ, ಸಂಪ್ರದಾಯದ ಹೆಸರಿನಲ್ಲಿ ಎಲ್ಲಾ ಕಲೆಗಳು ಶತಮಾನಗಳಿಂದ ಭ್ರಷ್ಟಗೊಂಡಿವೆ. ಈ ವಿದ್ಯಮಾನವು ನಮ್ಮ ಭಾರತೀಯ ಭಾಷೆಗಳಲ್ಲಿ ಪ್ರಚಲಿತವಾಗಿದೆ. ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಈ ರೀತಿ ಇಲ್ಲ. ಅಲ್ಲಿನ ಕವಿಗಳು ಜೀವನದ ಕುರಿತು ಪ್ರೇಮ, ವಿರಹ ಮತ್ತು ಸಾವು ನೋವಿನ ಬಗ್ಗೆ ಕವಿತೆಗಳನ್ನು ಬರೆದಿದ್ದಾರೆ. ಅಲ್ಲಾಹನ ಬಗ್ಗೆಯೋ ಅಥವಾ ದೇವರ ಬಗ್ಗೆಯೋ? ಇಲ್ಲವೇ ಅಂದರೆ – ಇದು ಧಾರ್ಮಿಕ ಗ್ರಂಥಗಳು ಮತ್ತು ಅವುಗಳ ಪೂಜಾ ಸ್ಥಳಗಳಿಗೆ ಮಾತ್ರ ಸೀಮಿತವಾಗಿದೆ. ಹೊರಗಿನ ಸಾಮಾಜಿಕ ಜೀವನದಲ್ಲಿ ಇದು ಹೆಚ್ಚಾಗಿ ಕಂಡುಬರುವುದಿಲ್ಲ. ಆದರೆ ನಮಗೆ? ಅದು ಇಲ್ಲಿ ಅಥವಾ ಅಲ್ಲಿ ಅಲ್ಲ – ಪ್ರತಿಯೊಂದು ಕಡೆ ಯಾವುದೋ ರೂಪದಲ್ಲಿ ಎಲ್ಲೆಡೆ ದೇವರು ಇದ್ದಾನೆ. ಆ ವ್ಯತ್ಯಾಸವನ್ನು ಗಮನಿಸಿದರೆ ಮಾತ್ರ ವಿಷಯ ಸ್ಪಷ್ಟವಾಗುತ್ತದೆ! ಒಂದು ಪ್ರಕರಣದಲ್ಲಿ, “ಮಧ್ಯಸ್ಥಿಕೆಗೆ ಶ್ರೀಕೃಷ್ಣನನ್ನು ಉದಾಹರಣೆಯಾಗಿ ತೆಗೆದುಕೊಳ್ಳಬೇಕು” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಬಾಗ್ನಿ ಹೇಳಿದರು. “ಪ್ರವಾಹದಲ್ಲಿ ಕೊಚ್ಚಿಹೋದವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ” ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ಹೇಳಿದರು. ಮನುವಾದ ಹೇಗೆ ಸಾಂಪ್ರದಾಯಿಕ ಧರ್ಮವಾಗಿ ಜೀರ್ಣಿಸಿಕೊಳ್ಳಲಾಗಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ, ಅಲ್ಲವೇ? ಇನ್ನು ಅದರಿಂದ ಹೊರಬರಬೇಕಿದೆ.
- ಖ್ಯಾತ ಸಾಹಿತಿ ಹಾಗೂ ನಿವೃತ್ತ ಜೀವಶಾಸ್ತ್ರ ಪ್ರಾಧ್ಯಾಪಕರು ಡಾ.ದೇವರಾಜು ಮಹಾರಾಜು
ಅನುವಾದ : ರೇಣುಕಾ ಭಾರತಿ


Leave a reply