ಕ್ಷಮಿಸಿ…
ನಿಮ್ಮ ಸಂಭ್ರಮದಲ್ಲಿ ನಾನಿಲ್ಲ
ಆದಿವಾಸಿಗಳ ಮೇಲೆ
ಆರ್ಯಭಾರತದ ಯುದ್ಧ ನಿಂತಿಲ್ಲ.
ಸೆರೆಯಲ್ಲಿರುವ ಉಮರನಿಗೆ
ಜಾಮೀನು ಸಿಕ್ಕಿಲ್ಲ..
ಸಮಾಧಿಯಾದ ಸೌಜನ್ಯಗಳಿಗೆ
ನ್ಯಾಯ ಸಿಗುವ ಭರವಸೆಯಿಲ್ಲ.
ಮೂಲವಾಸಿಗಳ ಪೌರತ್ವ
ವಲಸಿಗರ ಕಟ್ಟಳೆಯಲ್ಲಿ ಸಾಬೀತಾಗುತ್ತಿಲ್ಲ
ಚೌಕಿದಾರನ ಉಸ್ತುವಾರಿಯಲ್ಲಿ ಮತದಾರರ ಮಾಸ್ ಲಿಂಚಿಂಗ್
ನಿಲ್ಲುವ ಸೂಚನೆಯೂ ಇಲ್ಲಾ
ಕೊಲೆಗಡುಕರ ಮೆರವಣಿಗೆಯಂತೂ
ಅಂಗಳವನ್ನು ಬಿಟ್ಟಿಲ್ಲ..
ಕ್ಷಮಿಸಿ
ನಿಮ್ಮ ಸಂಭ್ರಮದಲ್ಲಿ
ನಾನಿಲ್ಲ…
ಚಿತೆಯೊಳಗಿನ ಬೂದಿ ಬೆದಕಿದರೂ
ಮನೆದಾಟದ ಮನೀಷಾಳ
ಮೂಳೆಗಳೂ ಸಿಗುತ್ತಿಲ್ಲ ..
ಮರುವಲಸೆಗೆ
ಮನೆತೊರೆದ ಮಕ್ಕಳು
ಜೀವಸಹಿತ ಮನೆಗೆ ಮರಳುತ್ತಿಲ್ಲ ..
ಕ್ಷಮಿಸಿ
ನಿಮ್ಮ ಸಂಭ್ರಮದಲ್ಲಿ
ನಾನಿಲ್ಲ..
ಬೆಡಗಿನಿಂದ
ಬೇಸ್ತು ಬೀಳಿಸಿದ
ಪ್ರಜಾತಂತ್ರದ ಮೋಹಿನಿ….
ಕೂಡಿಕಡೆದ ಅಮೃತವನ್ನು
ಕೇರಿಗಳಿಗೆ ಹಂಚಲೇ ಇಲ್ಲ..
ಮಸಣವಾದ ಮನಗಳ ಮೇಲೆ
ಹಾರುವುದು
ಬಾವುಟಗಳಲ್ಲ….
ಕ್ಷಮಿಸಿ
ಇದ್ದದ್ದನ್ನು ಕಸಿದು
ಇಲ್ಲದ್ದನ್ನು ಮೆರೆಸುವ
ಸಂಭ್ರಮದಲ್ಲಿ ನಾನಿಲ್ಲ
ಕನ್ನಡಿಯೊಳಗಿನ
ಗಡ್ಡದ ಭೂತ
ಕನಸುಗಳ ಮೇಲೂ ಕಣ್ಣಿಟ್ಟಿರುವಾಗ….
ಮೂಕ ಸಂಕಟಗಳು
ರಾಷ್ಟ್ರಗೀತೆ ಹಾಡುವುದಿಲ್ಲ..
ಕ್ಷಮಿಸಿ,
ನಿಮ್ಮ ಸಂಭ್ರಮದಲ್ಲಿ
ನಾನಿಲ್ಲ..
ವೇಮುಲರ ಕನಸುಗಳನ್ನು
ನೇಣಿಗೇರಿಸಿದವರ ಸ್ವಾತಂತ್ರ್ಯ ..
ನಡುಕವನ್ನಲ್ಲದೆ ಸಂಭ್ರಮವನ್ನು
ಹುಟ್ಟಿಸಬಹುದೇ?
ದೇಶದ ಉಮಂಗ್ ಗಳು
ಖೈದಿನಲ್ಲಿರುವಾಗ ..
ಪ್ರಜಾತಂತ್ರದ ಉಮರಿಗೆ
ಪರಾಕು ಪಲುಕಬಹುದೇ ?
ದೇಶದ ತುಂಬಾ ಮನೀಶಗಳ
ಚಿತೆ ಉರಿಯುತ್ತಿರುವಾಗ..
ಶೋಕಗೀತೆಯನಲ್ಲದೆ
ಭರತಮಾತೆಯ ಭವ್ಯ ಗಾಥೆಯನ್ನು
ಹಾಡಬಹುದೇ?
ಕ್ಷಮಿಸಿ
ನನ್ನೊಳಗೆ
ಸಂಭ್ರಮವಿಲ್ಲ….
ನಿಮ್ಮ ಸಂಭ್ರಮದಲ್ಲಿ
ನಾನಿಲ್ಲ…
ಟ್ರಾಕ್ಟರುಗಳಿಗೆ
ಕುರುಡಾಗದೆ
ಟ್ಯಾಂಕರುಗಳ ಪೆರೇಡು
ಕಾಣುವುದಿಲ್ಲ..
ಕಾಶ್ಮೀರಕ್ಕೆ
ಕಿವುಡಾಗದೇ
ಜನಗಣಮನ ಕೇಳುವುದಿಲ್ಲ…
‘ಆತ್ಮ’ ಹತ್ಯೆ ಮಾಡಿಕೊಳ್ಳದೆ..
ಹಂತಕನ ಭಾಷಣಗಳಿಗೆ
ಚಪ್ಪಾಳೆ ತಟ್ಟಲಾಗುವುದಿಲ್ಲ..
ಕ್ಷಮಿಸಿ…
ನಾನಿನ್ನೂ ಸತ್ತಿಲ್ಲ
ನಿಮ್ಮ ಸಂಭ್ರಮದಲ್ಲಿ ನಾನಿಲ್ಲ…
- ಶಿವಸುಂದರ್
ಜನಪರ ಚಿಂತಕರು, ಲೇಖಕರು…


Leave a reply