ಕರ್ನಾಟಕದ ವಂಚಿತ ದಲಿತ ಸಮುದಾಯಗಳು ಕಳೆದ 35 ವರ್ಷಗಳಿಂದ ಒಳಮೀಸಲಾತಿಗಾಗಿ ನಡೆಸುತಾ ಬಂದಿರುವ ಹೋರಾಟ ಇದೀಗ ಸಫಲ ತಾರ್ಕಿಕ ಅಂತ್ಯ ಕಾಣುವ ಹೊಸ್ತಿಲಲ್ಲಿದೆ. 2024ರ ಆಗಸ್ಟ್ 1 ರಂದು ಸುಪ್ರೀಂ ಕೋರ್ಟಿನ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠ 6:1 ಬಹುಮತದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ಒಳವರ್ಗೀಕರಣ ಮಾಡುವುದು ಸಂವಿಧಾನ ಬದ್ಧವೆಂದು ತೀರ್ಪು ನೀಡಿತ್ತು. ಆ ಮೂಲಕ ಒಳಮೀಸಲಾತಿಯನ್ನು ಜಾರಿ ಮಾಡದಿರಲು ಯಾವ ನೆಪಗಳೂ ಸರ್ಕಾರದ ಮುಂದಿಲ್ಲವಾಗಿತ್ತು. ಆದರೂ ಕರ್ನಾಟಕದ ಸಿದ್ದು ಸರ್ಕಾರ ಅನಗತ್ಯ ವಿಳಂಬವನ್ನು ಮಾಡಿತು. ಅದೇನೇ ಇರಲಿ. ಕರ್ನಾಟಕ ಸರ್ಕಾರ ಒಳಮೀಸಲಾತಿಯನ್ನು ಜಾರಿಗೊಳಿಸಲು ಕರ್ನಾಟಕಕ್ಕೆ ನಿರ್ದಿಷ್ಟವಾದ ಸೂತ್ರವನ್ನು ರೂಪಿಸಿಕೊಡಲು ನ್ಯಾ,ನಾಗಮೋಹನ್ ದಾಸ್ ಅಯೋಗವನ್ನು ನೇಮಿಸಿತು. ಸರ್ಕಾರದೊಳಗಿನ ಹಲವಾರು ಪಟ್ಟಭದ್ರರ ಅಸಹಕಾರದ ನಡುವೆಯೂ ನ್ಯಾ. ದಾಸ್ ಅಯೋಗ ತನ್ನ ಸಮಗ್ರ ವರದಿ ಮತ್ತು ಶಿಫ಼ಾರಸ್ಸುಗಳನ್ನು ಕಳೆದ ಆಗಸ್ತ್ 4 ರಂದು ಸರ್ಕಾರಕ್ಕೆ ಸಲ್ಲಿಸಿದೆ. ಇದರ ಬಗ್ಗೆ ಚರ್ಚಿಸಲೆಂದೇ ಮುಖ್ಯಮಂತ್ರಿಗಳು ಆಗಸ್ತ್ 16 ರಂದು ಸಚಿವ ಸಂಪುಟದ ವಿಶೇಶ ಸಭೆಯನ್ನು ಕರೆದಿದ್ದಾರೆ.
ಆಗಸ್ತ್ 4 ರಂದು ಸಂಪುಟದಲ್ಲಿ ವರದಿಯ ಮಂಡನೆಯಾದ ನಂತರ ದಾಸ್ ವರದಿಯ ಪ್ರತಿಗಳು ಎಲ್ಲೆಡೆ ಅನಧಿಕೃತವಾಗಿ ಲಭ್ಯವಾಗುತ್ತಿವೆ. ಪ್ರಜಾವಾಣಿಯಂತ ಪ್ರತಿಷ್ಟಿತ ಪತ್ರಿಕೆಗಳಂತೂ ಸೋರಿಕೆಯಾದ ವರದಿಯನ್ನು ಆಧರಿಸಿ ಸರಣಿ ಲೇಖನಗಳನ್ನು ಪ್ರಕಟಿಸಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲೂ ವರದಿಯ ಪಠ್ಯ ವಿಸ್ತೃತವಾಗಿ ಹಂಚಿಕೆಯಾಗುತ್ತಿವೆ. ಸರ್ಕಾರ ಈವರೆಗೆ ಪತ್ರಿಕಾ ವರದಿಗಳನ್ನಾಗಲೀ, ಜಾಲತಾಣದ ವಿಶ್ಲೇಷಣೆಗಳನ್ನಾಗಲೀ ತಪ್ಪೆಂದು ನಿರಾಕರಿಸಿಲ್ಲ. ಹೀಗಾಗಿ ಲಭ್ಯವಿರುವುದು ಅನಧಿಕೃತವಾಗಿ ಹಂಚಿಕೆಯಾಗಿರುವ ಅಧಿಕೃತ ವರದಿಯೇ ಎಂಬುದರಲ್ಲಿ ಸಂಶಯವಿಲ್ಲ.
ದಾಸ್ ಅವರ ಅಯೋಗವು ಪರಿಶಿಷ್ಟ ಜಾತಿ ವರ್ಗದಡಿ ಇರುವ 101 ಜಾತಿಗಳನ್ನು 5 ಪ್ರವರ್ಗಗಳಲ್ಲಿ ವಿಂಗಡಿಸಿದೆ. ಈ 101 ಜಾತಿಗಳಲ್ಲಿAk, AD, AA ನಾಮಾಂಕಿತಗಳು ನಿರ್ಧಿಷ್ಟ ಜಾತಿ ಸೂಚಕವಲ್ಲದೇ ಜಾತಿ ಗುಂಪು ಸೂಚಕವಾಗಿದೆ. ಹೀಗಾಗಿ ಆ ಗುಂಪಿನಲ್ಲಿ ನೊಂದಾಯಿಸಿಕೊಂಡಿರುವ ಸದಸ್ಯರ ಮೂಲಜಾತಿಯನ್ನು ಪಟ್ಟಿ ಮಾಡಲು ಮತ್ತು ಒಟ್ಟಾರೆ ಇಂದಿನ ಮಟ್ಟಿಗೆ ಪರಿಶಿಷ್ಟ ಜಾತಿಗಳ ಉಪಜಾತಿವಾರು ಜನಸಂಖ್ಯೆಯನ್ನು ನಿಖರವಾಗಿ ಪಡೆದುಕೊಳ್ಳಲು ದಾಸ್ ಅಯೋಗ ಒಂದು ಪ್ರತ್ಯೇಕ ಹಾಗೂ ಸಾಧ್ಯವಿರುವಷ್ಟು ನಿಖರವಾದ ಸಮೀಕ್ಷೆಯನ್ನೂ ಕೂಡ ನಡೆಸಿತು. ಆದರೂ ಸುಮಾರು 4.74 ಲಕ್ಷ ಜನರು AK, AD, AA ನಾಮಾಂಕಿತಗಳಲ್ಲೇ ಗುರುತಿಸಿಕೊಂಡಿರುವುದರಿಂದ ಆ ಮೂರು ಜಾತಿಗುಂಪು ಸೂಚಕಗಳನ್ನು ಉಳಿಸಿಕೊಂಡು ಅದರಡಿ ನೊಂದಾಯಿತರಾದವರ ಶೈಕ್ಷಣಿಕ , ಆರ್ಥಿಕ, ರಾಜಕೀಯ ಸ್ಥಾನಮಾನಗಳ ಸಮೀಕ್ಷೆಯನ್ನು ಪ್ರತ್ಯೇಕವಾಗಿ ಮಾಡಿ ಪ್ರತ್ಯೇಕವಾದ ಉಪಮೀಸಲಾತಿಯನ್ನು ನೀಡಿದೆ.
*ಒಳಮೀಸಲಾತಿಗೆ ನ್ಯಾ. ದಾಸ್ ಸೂತ್ರಗಳು ಸರಿಯೇ?*
ದಾಸ್ ಅಯೋಗವು 101 ಪರಿಶಿಷ್ಟ ಜಾತಿಗಳಿರುವ ಅಂದಾಜು 1.05 ಕೋಟಿ ಜನಸಂಖ್ಯೆಯ (1.77 ಲಕ್ಷಾ ಬುಡ್ಗ ಜಂಗಮ ಎಂದು ತಪ್ಪಾಗಿ ನಿಂದಾಯಿಸಿಕೊಂಡಿರುವರ ಮತ್ತು 14 ಸಾವಿರ ಅಂತರ್ಜಾತಿ ವಿವಾಹಿತರನ್ನು ತೆಗೆದ ನಂತರ ಅಂತಿಮ ಸಂಖ್ಯೆ) ಪರಿಶಿಷ್ಟರನ್ನು :
- ಅತ್ಯಂತ ಹಿಂದುಳಿದ 5.22 ಲಕ್ಷ ಜನರಿರುವ 59 ಉಪ ಜಾತಿಗಳನ್ನು ಪ್ರವರ್ಗ ‘A’ ಎಂದು ಪರಿಗಣಿಸಿ ಶೇ.1 ರಷ್ಟು ಒಳಮೀಸಲಾತಿಯನ್ನು ಶಿಫ಼ಾರಸ್ಸು ಮಾಡಿದೆ.
- ಹೆಚ್ಚು ಹಿಂದುಳಿದಿರುವ ಆದರೆ ಪ್ರವರ್ಗ ’A’ ಗಿಂತ ಸಾಪೇಕ್ಷವಾಗಿ ಮುಂದುವರೆದಿರುವ 36.69 ಲಕ್ಷ ಜನರುಳ್ಳ ಮಾದಿಗ ಮತ್ತು ಮಾದಿಗ ಸಂಬಂಧಿತ 18 ಉಪಜಾತಿಗಳನ್ನು ಪ್ರವರ್ಗ’ B’ ಎಂದು ವರ್ಗೀಕರಿಸಿ ಶೇ. 6 ರಷ್ಟು ಒಳಮೀಸಲಾತಿಯನ್ನು ಶಿಫ಼ಾರಸ್ಸು ಮಾಡಿದೆ.
- ಹಿಂದುಳಿದಿರುವ ಆದರೆ ಪ್ರವರ್ಗ B ಗಿಂತ ಸಾಪೇಕ್ಷವಾಗಿ ಮುಂದುವರೆದಿರುವ 30.08 ಲಕ್ಷ ಜನರಿರುವ ಹೊಲೆಯ ಮತ್ತು ಹೊಲೆಯ ಸಂಬಂಧಿತ 17 ಜಾತಿಗಳನ್ನು ಪ್ರವರ್ಗ ’C’ ಎಂದು ಪರಿಗಣಿಸಿ ಶೇ. 5 ರಷ್ಟು ಒಳಮೀಸಲಾತಿಯನ್ನು ಶಿಫ಼ಾರಸ್ಸು ಮಾಡಿದೆ.
- ಉಳಿದ ಪರಿಶಿಷ್ಟ ಜಾತಿಗಳಿಂದ ಕಡಿಮೆ ಹಿಂದುಳಿದಿರುವ ಲಂಬಾಣಿ, ಭೋವಿ, ಕೊರಮ ಮತ್ತು ಕೊರಚ ಸಂಬಂಧಿತ ಜಾತಿಗಳಿರುವ 28.34 ಲಕ್ಷ ಜನರನ್ನು ಪ್ರವರ್ಗ ’D’ ಎಂದು ಪರಿಗಣಿಸಿ ಶೇ. 4 ರಷ್ಟು ಒಳಮೀಸಲಾತಿಯನ್ನು ಶಿಫ಼ಾರಸ್ಸು ಮಾಡಿದೆ.
- ಮೂಲ ಜಾತಿಯನ್ನು ಹೇಳದೆ AK, AD, AA ಜಾತಿ ಗುಂಪುಗಳಲ್ಲೇ ಗುರುತಿಸಿಕೊಂಡಿರುವ 4.74 ಜನರನ್ನು ಪ್ರವರ್ಗ ’E’ ಎಂದು ಪರಿಗಣಿಸಿ ಶೇ. 1 ರಷ್ಟು ಒಳಮೀಸಲಾತಿಯನ್ನು ಶಿಫ಼ಾರಸ್ಸು ಮಾಡಿದೆ.
ಈ ಶಿಫ಼ಾರಸ್ಸುಗಳು ಹೊರಬಿದ್ದಮೇಲೆ ಒಳಮೀಸಲಾತಿಯ ಬಗ್ಗೆ ಈ ಹಿಂದೆ ಯಾರ್ಯಾರಿಗೆ ಯಾವ್ಯಾವ ನಿಲುವುಗಳಿದ್ದವೋ ಅದೇ ಬಗೆಯ ನಿಲುವುಗಳು ನ್ಯಾ. ದಾಸ್ ವರದಿಯ ಬಗ್ಗೆಯೂ ವ್ಯಕ್ತವಾಗುತ್ತಿವೆ. ಕಳೆದ 35 ವರ್ಷಗಳಿಂದ ಒಳಮೀಸಲಾತಿಗೆ ಹೋರಾಡುತ್ತಾ ಬಂದಿರುವ ವಂಚಿತ ಪರಿಶಿಷ್ಟರಲ್ಲೇ ಸಾಪೇಕ್ಷವಾಗಿ ಇನ್ನೂ ಹೆಚ್ಚು ವಂಚಿತರಾಗಿರುವ ಮಾದಿಗ ಸಮುದಾಯಗಳು ಆಗಸ್ತ್ 16 ರ ಸಂಪುಟ ಸಭೆಯಲ್ಲೇ ವರದಿಯ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ಕೂಡಲೇ ದಾಸ್ ವರದಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದೆ. ಈ ಹಿಂದೆ ಒಳಮೀಸಲಾತಿಗೆ ಮೌನ ಸಮ್ಮತಿಯನ್ನು ವ್ಯಕ್ತ ಪಡಿಸುತ್ತಿದ್ದ ಹೊಲೆಯ ಸಮುದಾಯದ ಕೆಲವು ಮುಖಂಡರು ನ್ಯಾ. ದಾಸ್ ವರದಿಯನ್ನು ಸುಟ್ಟು ತೀವ್ರ ತಿರಸ್ಕಾರ ತೋರಿದ್ದಾರೆ. ನ್ಯಾ. ದಾಸ್ ವರದಿಯನ್ನು ವಿರೋಧಿಸುತ್ತಿರುವರ ಕೆಲವು ಹೊಲೆಯ ಸಂಬಂಧಿತ ಜಾತಿ ಮುಖಂಡರ ಪ್ರಧಾನ ಆರೋಪ ಮಾದಿಗ ಸಂಬಂಧಿ ಜಾತಿಗಳಷ್ಜೆ ಜನಸಂಖ್ಯೆ ತಮ್ಮದೂ ಇರುವುದರಿಂದ ತಮ್ಮ ವೃಂದಕ್ಕೆ ಮಾದಿಗರಷ್ಜ್ಟೇ ಮೀಸಲಾತಿಯನ್ನು ಕೊಡಬೇಕೆಂಬುದಾಗಿದೆ . ಹಾಗೊ ಈ ಹಿಂದೆ ಹೊಲೆಯ ಸಂಬಂಧಿತ ಜಾತಿಗಳಲ್ಲಿ ಸೇರಿಸಲ್ಪಟ್ಟಿದ್ದ ಜಾತಿಗಳನ್ನು ಮಾದಿಗ ವೃಂದಕ್ಕೆ ಸೇರಿಸಿರುವುದು ಅನ್ಯಾಯವೆನ್ನುವುದು ಅವರ ಆಕ್ಷೇಪ.
ಲಂಬಾಣಿ ಹಾಗೂ ಆ ಪ್ರವರ್ಗದ ಮುಖಂಡರು ವರದಿಯ ಅಧ್ಯಯನಕ್ಕೆ ಉಪಸಮಿತಿ ಮಾಡಿ ಯಾರಿಗೂ ಅನ್ಯಾಯವಾಗದಂತೆ ಜಾರಿ ಮಾಡಬೇಕೆಂಬ ಮುಸುಕಿನಲ್ಲಿ ಅನುಷ್ಠಾನವನ್ನು ಮುಂದಕ್ಕೆ ದೂಡುವ ಪ್ರಯತ್ನ ನಡೆಸಿದ್ದಾರೆ. ಲಂಬಾಣಿ ಸಂಬಂಧಿ ಜಾತಿಗಳು ಅತ್ಯಂತ ಹಿಂದುಳಿದ ಜಾತಿಗಳೆಂಬುದು ಅವರು ಮಾಡುತ್ತಿರುವ ಪ್ರತಿವಾದ. ಇವೆಲ್ಲದರ ಜೊತೆಗೆ AK, AD, AA ಜಾತಿ ಗುಂಪುಗಳನ್ನು ಪ್ರತ್ಯೇಕವಾಗಿ ಗುರುತಿಸುವ ಅಗತ್ಯವೇ ಇಲ್ಲ. ಅದನ್ನು ರದ್ದು ಮಾಡಿ ಆ ಪ್ರಮಾಣವನ್ನು ಉಳಿದವರಿಗೆ ಹಂಚಬೇಕೆಂಬುದು ಮತ್ತೊಂದು ವಾದ.
ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಮೂರು ದಶಕಗಳಿಂದ ನೆನೆಗುದಿದೆ ಬಿದ್ದಿದ ಅನ್ಯಾಯವನ್ನು ಸರಿಪಡಿಸಬೇಕಿದ್ದ ಸಾಮಾಜಿಕ ನ್ಯಾಯದ ಉಪಕ್ರಮವೊಂದು ಇನ್ನಷ್ಟು ಅನೈಕ್ಯತೆ, ವೈಷಮ್ಯಗಳಿಗೆ ಹಾಗೂ ಆ ಮೂಲಕ ಒಟ್ಟಾರೆ ಪರಿಶಿಷ್ಟ ಸಮುದಾಯದ ಶೋಷಣೆಯ ಮುಂದುವರಿಕೆಗೆ ಕಾರಣವಾಗಬಹುದೆಂಬ ಆತಂಕವೂ ಹೆಚ್ಚಾಗುತ್ತಿದೆ.
ಆದ್ದರಿಂದ ನ್ಯಾ. ದಾಸ್ ವರದಿಯ ವಿಧಾನ, ವಿಶ್ಲೇಷಣೆ ಮತ್ತು ಶಿಫ಼ಾರಸ್ಸುಗ ಬಗ್ಗೆ ಸುಪ್ರೀಂ ತೀರ್ಪು ಹಾಗೂ ಸಾಮಾಜಿಕ ನ್ಯಾಯದ ಮಾನದಂಡಗಳ ಹಿನ್ನೆಯಲ್ಲಿ ಚರ್ಚಿಸಿ ಒಂದು ನ್ಯಾಯಸಮ್ಮತ ಅಭಿಪ್ರಾಯ ರೂಪಿಸಿಕೊಳ್ಳಬೇಕಿದೆ. ಹಾಗೂ ಹಾಲಿ ಬ್ರಾಹ್ಮಣೀಯ ಹಿಂದೂತ್ವ ಹಾಗೂ ಕಾರ್ಪೊರೇಟ್ ಕ್ಯಾಪಿಟಲಿಸಂಗಳ ಜಂಟಿ ದಾಳಿಗಳ ಹಿನ್ನೆಲೆಯಲ್ಲಿ ದಮನಿತ ಪರಿಶಿಷ್ಟ ಜಾತಿಗಳ ಘನತೆಯ ಬದುಕಿನ ಅವಕಾಶಗಳ ರಕ್ಷಣೆಯ ಬಗ್ಗೆ ದೂರಗಾಮಿ ಕ್ರಮಗಳ ಬಗ್ಗೆಯೂ ಮುನ್ನೋಟವನ್ನು ಹೊಂದುವ ಅಗತ್ಯವಿದೆ. ಇಲ್ಲದಿದ್ದರೆ ಈ ಕೆಲವು ಸಹಜ ಹಾಗೂ ಕೆಲವು ಅನಗತ್ಯ ಗೊಂದಲಗಳು ಕೈಗೆ ಬಂದ ತುತ್ತನ್ನೂ ಕೂಡ ಬಾಯಿಗೆ ಇಲ್ಲದಂತೆ ಮಾಡುವ ಅಪಾಯವಿದೆ. ನ್ಯಾ. ನಾಗಮೋಹನ್ ದಾಸ್ ಅಯೋಗದ ವರದಿ ಸಮರ್ಪಕವಾಗಿದೆಯೋ ಇಲ್ಲವೋ ಎಂಬ ತೀರ್ಮಾನವನ್ನು ತಮ್ಮ ತಮ್ಮ ಗುಂಪು ಅಥವ ಜಾತಿಗಳ ಸೀಮಿತ ಹಿತಾಸಕ್ತಿಯಿಂದ ವಿಶ್ಲೇಷಿಸಿ ತೀರ್ಮಾನಕ್ಕೆ ಬರಲು ಸಾಧ್ಯವಾಗುವುದಿಲ್ಲ.
*ದಾಸ್ ಅವರ ವರದಿಯನ್ನು ಒಪ್ಪಲು ಅಥವಾ ತಿರಸ್ಕರಿಸಲು ಇರುವುದು ಒಂದೇ ಮಾನದಂಡ*:
ವರದಿಯು ಒಳಮೀಸಲಾತಿಯ ಸಂವಿಧಾನಿಕ ಮಾನ್ಯತೆ ಮತ್ತು ಅದನ್ನು ಒದಗಿಸುವಾಗ ಸರ್ಕಾರಗಳು ಪೂರೈಸಬೇಕಿರುವ ಶರತ್ತುಗಳ ಬಗ್ಗೆ ಸುಪ್ರೀಂ ಕೋರ್ಟು ವಿವರಿಸಿರುವ ತಾತ್ವಿಕತೆ ಮತ್ತು ವಿಧಿಸಿರುವ ಶರತ್ತುಗಳನ್ನು ಪಾಲಿಸಿದೆಯೇ ಇಲ್ಲವೇ ಮತ್ತು ಅದರಿಂದ ಒಳಮೀಸಲಾತಿಯ ಸಾಮಾಜಿಕ ನ್ಯಾಯದ ತತ್ವ ಪಾಲಿಸುತ್ತಿದೆಯೇ ಇಲ್ಲವೇ ಎಂಬುದು ಮಾತ್ರ.
*ಒಳಮೀಸಲಾತಿ – ಸುಪ್ರೀಂ ಮಾನದಂಡಗಳು*
ಒಳಮೀಸಲಾತಿಯು ಸಂವಿಧಾನ ಮಾನ್ಯವೇ ಎಂಬ ಪ್ರಶ್ನೆಯ ಬಗ್ಗೆ ಭಾರತದ ಸುಪ್ರೀಂ ಕೋರ್ಟಿನ ಸಂವಿಧಾನಿಕ ಪೀಠ ಈ ಕೆಲವು ಸಾಂವಿಧಾನಿಕ ಸ್ಪಷ್ಟೀಕರಣಗಳನ್ನು ಕೊಟ್ಟಿದೆ:
- ಪರಿಶಿಷ್ಟ ಜಾತಿಗಳಲ್ಲಿ ವರ್ಗೀಕರಣಗೊಳ್ಳುವ ಜಾತಿಗಳು ಸಮಾಜದ ಇತರ ಜಾತಿ ಸಮುದಾಯಗಳಿಗೆ ಹೋಲಿಸಿದಲ್ಲಿ ಏಕರೂಪವಾಗಿದ್ದರೂ, ತಮ್ಮ ನಡುವೆ ಏಕರೂಪತೆಯನ್ನು ಹೊಂದಿರಲೇ ಬೇಕೆಂದಿಲ್ಲ.
- ಅಸ್ಪೃಷ್ಯತೆಯಲ್ಲೂ ಮತ್ತು ಅಸ್ಪೃಷ್ಯರ ನಡುವೆಯ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯಲ್ಲೂ ಸಾಪೇಕ್ಷವಾದ ಏರುಪೇರುಗಳೂ ಅಸಮಾನತೆಗಳೂ ಇರಲು ಸಾಧ್ಯ.
- ಆಗ ಅಸಮಾನರನ್ನೂ ಸಮಾನವಾಗಿ ಪರಿಭಾವಿಸಿ ಮೀಸಲಾತಿಯನ್ನು ನೀಡುವುದು ಪ್ರಮಾದವಾಗುತ್ತದೆ. ಮೀಸಲಾತಿ ತತ್ವಕ್ಕೆ ವಿರುದ್ಧವಾಗುತ್ತದೆ.
- ಹಾಗಿದ್ದಾಗ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲೂ ಒಳಮೀಸಲಾತಿಯನ್ನು ಒದಗಿಸುವುದು ಸರ್ಕಾರದ (ಆಯಾ ರಾಜ್ಯ ಸರ್ಕಾರಗಳ)ಕರ್ತವ್ಯವಾಗುತ್ತದೆ.
- ಆದರೆ ಹಾಗೆ ಪರಿಶಿಷ್ಟರೊಳಗಿನ ಒಂದು ಗುಂಪನ್ನು ಇತರ ಗುಂಪುಗಳಿಗಿಂತ ವಿಶೇಶವಾಗಿ ಪರಿಗಣಿಸುವಾಗ ಆ ಗುಂಪು ಮತ್ತೊಂದು ಗುಂಪಿಗಿಂತ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಎಷ್ಟು ಹಿಂದುಳಿದಿದೆ ಮತ್ತು ಸರ್ಕಾರದ ಉದ್ಯೋಗಗಳ ಪ್ರಾತಿನಿಧ್ಯಗಳಲ್ಲಿ ಉಳಿದವರಿಗಿಂತ ಎಷ್ಟು ಹಿಂದುಳಿದಿದೆ ಎಂದು ತಳಮಟ್ಟದ ಅಧ್ಯಯನದ ಮೂಲಕ ಪ್ರಮಾಣಾತ್ಮಕವಾಗಿ ರುಜುವಾತು ಮಾಡಬೇಕು.
- ಮತ್ತು ಆ ವಿಶ್ಲೇಷಣೆಗೆ ಅನುಗುಣವಾಗಿ ನೀಡುವ ಒಳಮೀಸಲಾತಿ ಈ ಅಂತರವನ್ನು ಕಡಿಮೆ ಮಾಡಲಿದೆ ಎಂಬುದನ್ನು ಖಚಿತಪಡಿಸಬೇಕು
- ಹಾಗೂ ಈವರೆಗೆ ಪರಿಶಿಷ್ಟ ಮೀಸಲಾತಿಯನ್ನು ಪಡೆಯುತ್ತಿದ್ದ ಯಾವ ಜಾತಿಗಳಿಗೂ ಪರಿಶಿಷ್ಟ ಮೀಸಲಾತಿಯನ್ನೇ ನಿರಾಕರಿಸಬಾರದು.
ಇದು ಒಳಮೀಸಲಾತಿಯನ್ನು ಜಾರಿ ಮಾಡುವಾಗ ಸರ್ಕಾರಗಳು ಅಳವಡಿಸಿಕೊಳ್ಳಬೇಕಾದ ವಿಧಾನ. ಹೀಗೆ ಮಾಡಿಲ್ಲದಿದ್ದರೆ ಅದು ಅಸಿಂಧು. ಹೀಗಾಗಿ ಒಳಮೀಸಲಾತಿಯ ಸಲುವಾಗಿ ಒಳಗುಂಪುಗಳನ್ನು ರಚಿಸುವಾಗ ಅನುಸರಿಸಬೇಕಾದ ಮಾನದಂಡಗಳು ಪ್ರಧಾನವಾಗಿ ಆ ಗುಂಪುಗಳ ಹಿಂದುಳಿದಿರುವಿಕೆ ಮತ್ತು ಪ್ರಾತಿನಿಧ್ಯದ ಕೊರತೆಗಳೇ ಆಗಿರಬೇಕೆ ವಿನಾ ಕೇವಲ ಜನಸಂಖ್ಯೆಯಲ್ಲ. ಹೀಗಾಗಿ ನ್ಯಾ. ದಾಸ್ ಅಯೋಗ ಈ ಮಾನದಂಡಗಳನ್ನು ಅನುಸರಿಸಿದೆಯೇ ಇಲ್ಲವೇ? ತಳಮಟ್ಟದ ಪ್ರಮಾಣಾನುಸಾರ ಮಾಹಿತಿ ಸಂಗ್ರಹ ಮಾಡಿದೆಯೇ ಇಲ್ಲವೇ? ಸರ್ಕಾರಿ ಪ್ರಾತಿನಿಧ್ಯದ ನಿಖರ ಪ್ರಮಾಣ ಅನುಸಸಿದೆಯೇ ಇಲ್ಲವೇ? ಒಳಮೀಸಲಾತಿಗಾಗಿ ಗುಂಪುಗಳನ್ನು ರಚಿಸುವಾಗ ಸಾಪೇಕ್ಷ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಮಾನದಂಡವಾಗಿ ಪರಿಗಣಿಸಿದೆಯೇ ಇಲ್ಲವೇ ಎಂಬುದರ ಆಧಾರದಲ್ಲಿ ಮಾತ್ರ ನ್ಯಾ. ದಾಸ್ ವರದಿಯ ಬಗ್ಗೆ ಸರಿಯಾದ ನಿಲುವಿಗೆ ಬರಲು ಸಾಧ್ಯ.
*ನ್ಯಾ. ದಾಸ್ ಅಯೋಗ ಮತ್ತು ಒಳಮೀಸಲಾತಿಯ ಪ್ರಮಾಣಗಳು*
ಮೊದಲನೆಯದಾಗಿ, ಕರ್ನಾಟಕದ ಪರಿಶಿಷ್ಟ ಜಾತಿಗಳೊಳಗೆ ವರ್ಗೀಕರಿಸಲ್ಪಟ್ಟ ಜಾತಿಗಳು ಸಮಾಜದ ಇತರ ಜಾತಿಗಳಿಗೆ ಹೋಲಿಸಿದಲ್ಲಿ ಏಕರೂಪತೆಯನ್ನು ಹೊಂದಿದ್ದರೂ ತಮ್ಮಗಳ ನಡುವೆ ಗಮನಾರ್ಹ ಅಸಮಾನತೆಯನ್ನು, ಅಸಮಾನ ಹಿಂದುಳಿದಿರುವಿಕೆಯನ್ನು ಹೊಂದಿದೆಯೋ ಇಲ್ಲವೋ ಎಂಬುದು ಮುಖ್ಯ ಪ್ರಶ್ನೆ.
ದಾಸ್ ಅಯೋಗವು ಸಾಮಾಜಿಕ ಹಿಂದುಳಿದಿರುವಿಕೆಯನ್ನು ತೀರ್ಮಾನಿಸಲು ಶೈಕ್ಷಣಿಕ , ಆರ್ಥಿಕ, ರಾಜಕೀಯ ಮಾನದಂಡಗಳನ್ನು ಅನುಸರಿಸಿದೆ. ಮತ್ತು ಸರ್ಕಾರಿ ಪ್ರಾತಿನಿಧ್ಯದ ಜಾತಿ ವಾರು ಪ್ರಮಾಣವನ್ನು ಅಭ್ಯಯಸಿಸಿದೆ. ಅದಕ್ಕೆ ಬೇಕಾದ ಎಲ್ಲಾ ಅಂಕಿಅಂಶಗಳು ದಕ್ಕಿಲ್ಲವಾದರೂ ಬಹುಪಾಲು ದಕ್ಕಿರುವ ವರ್ತಮಾನದ ಅಧಿಕೃತ ಅಂಕಿಅಂಶಗಳನ್ನು ಆಧರಿಸಿದೆ.
*ಪರಿಶಿಷ್ಟ ಉಪಜಾತಿಗಳಲ್ಲಿ ಶೈಕ್ಷಣಿಕ ಅಸಮಾನತೆ*
ಉಳಿದ ಮುಂದುವರೆದೆ ಸಮಾಜಕ್ಕೆ ಹೋಲಿಸಿದರೆ ಇಡೀ ಪರಿಶಿಷ್ಟ ಜಾತಿಗಳು ಶೈಕ್ಷಣಿಕವಾಗಿ ಹೆಚ್ಚು ಅಸಮಾನರು. ಆದರೆ ಪರಿಶಿಷ್ಟರೊಳಗಿನ ಜಾತಿಗಳ ನಡುವೆ ಶೈಕ್ಷಣಿಕ ಅಸಮಾನತೆ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ದಾಸ್ ಅಯೋಗವು ಪರಿಶಿಷ್ಟ ಜತಿಗಳೊಳಗೆ ಸಾಕ್ಷರತೆ, ಪಿ.ಯು.ಸಿ ಮತ್ತು ಪದವಿ ಪಾಸಾದವರ ಪ್ರಮಾಣ ಹಾಗೂ ಉನ್ನತ ತಾಂತ್ರಿಕ ಪದವಿ ಪಡೆದವರ ಪ್ರಮಾಣವನ್ನು ಅಭ್ಯಾಸ ಮಾಡಿದೆ. ಅದಕ್ಕೆ ಸರ್ಕಾರದ ಅಂ,ಕಿಅಂಶ ಹಾಗೊ ಅದರ ಇತರ ವರದಿಗಳನ್ನು ಆಧರಿಸಿದೆ. ಇವೆಲ್ಲದರ ಪ್ರಕಾರ ಪರಿಶಿಷ್ಟರೊಳಗೆ ಅತಿ ಹೆಚ್ಚು ಸಾಕ್ಷರತೆ ಪಡೆದಿರುವ 26 ಜಾತಿಗಳು (ಶೇ. 80 ಕ್ಕಿಂತ ಹೆಚ್ಚು), ಮಧ್ಯಮ ಪ್ರಮಾಣದ 67 ಜಾತಿಗಳು (ಶೇ. 60 ಕ್ಕಿಂತ ಹೆಚ್ಚು ಸಾಕ್ಷರತೆ), ೧೭ ಜಾತಿಗಳು ಕಡಿಮೆ ಸಾಕ್ಷರತೆ ಹಾಗೂ 3 ಜಾತಿಗಳು ಅತ್ಯಂತ ಕಡಿಮೆ ಸಾಕ್ಷರತೆಯನ್ನು ಹೊಂದಿವೆ..
ಹಾಗೂ ಪಿಯುಸಿ ಪಾಸಾಗಿರುವ ಶೇ. 72 ರಷ್ಟು ಪರಿಶಿಷ್ಟ ಮಕ್ಕಳು ಕೇವಲ ನಾಲ್ಕು ಜಾತಿಗಳಿಗೆ ಸೇರಿವೆ. ಅರ್ಥಾತ್ ಉಳಿದ 97 ಜಾತಿಗಳಲ್ಲಿ ಶೇ. 28 ಮಕ್ಕಳು ಮಾತ್ರ ಪಿಯುಸಿ ಮುಟ್ಟಿವೆ. ಹಾಗ್ಯೇ ಪದವಿ ಮುಟ್ಟಿದ ಶೇ. 71 ಮಕ್ಕಳು ಕೂಡ ಕೇವಲ ನಾಲ್ಕು ಪರಿಶಿಷ್ಟ ಉಪಜಾತಿಗಳಿಗೆ ಸೇರಿವೆ. ಅದೇ ರೀತಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿರುವ ಒಟ್ಟು 11, 365 ಪರಿಶಿಷ್ಟ ವಿದ್ಯಾರ್ಥಿಗಳಲ್ಲಿ ಶೇ. 70 ರಷ್ಟು ವಿದ್ಯಾರ್ಥಿಗಳು ಬಂಜಾರ, ಭೋವಿ, ಹೊಲೆಯ ಮತ್ತು ಮಾದಿಗ ಉಪಜಾತಿಗಳಿಗೆ ಸೇರಿದವರು. ಇಂಜಿನಿಯರಿಂಗ್ ಓದುತ್ತಿರುವ 45 216 ಪರಿಶಿಷ್ಟ ವಿದ್ಯಾರ್ಥಿಗಳಲ್ಲೂ ಶೇ. 71 ರಷ್ಟು ವಿದ್ಯಾರ್ಥಿಗಳು ಈ ನಾಲ್ಕು ಜಾತಿಗಳಿಗೆ ಸೇರಿದವರು. ಸಮಾಜದ ಬಲಿಷ್ಟ ಜಾತಿಗಳಾದ ಬ್ರಾಹ್ಮಣಾ, ಲಿಂಗಾಯತ, ಒಕ್ಕಲಿಗ ರಿಗೆ ಹೋಲಿಸಿದಲ್ಲಿ ಈ ಸಂಖ್ಯೆಗಳು ತೀರಾ ಕಡಿಮೆಯಿದ್ದರೂ ಪರಿಶಿಷ್ಟರೊಳಗಿನ ಉಪಜಾತಿಗಳಿಗೆ ಹೋಲ್ಸಿಸಿದರೆ ಪರಿಶಿಷ್ಟ ಮೀಸಲಾತಿಯ ಬಹುಪಾಲು ಈ ನಾಲ್ಕು ಜಾತಿಗಳಿಗೆ ಮಾತ್ರ ಲಭ್ಯವಾಗಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಇದಕ್ಕೆ ತದ್ವಿರುದ್ಧವಾಗಿ ಪರಿಶಿಷ್ತರೊಳಗಿನ ಉಳಿದ 97 ಜಾತಿಗಳಲ್ಲಿ 25 ಜಾತಿಗಳಲ್ಲಿ ಒಬ್ಬರೂ ತಾಂತ್ರಿಕ ಪದವಿಯನ್ನು ಪಡೆದಿಲ್ಲ. 14 ಜಾತಿಗಳಲ್ಲಿ ಒಬ್ಬರೂ ಸ್ನಾತಕೋತ್ತರ ಪದವಿ ಪಡೆದಿಲ್ಲ. 14 ಜಾತಿಗಳಲ್ಲಿ ಒಬ್ಬರೂ ಎಂಬಿಬಿಎಸ್ ಇಲ್ಲ. 54 ಜಾತಿಗಳಲ್ಲಿ ಒಬ್ಬರೂ ಪಿಎಚ್.ಡಿ ಇಲ್ಲ.
ಹೀಗಾಗಿ ಪರಿಶಿಷ್ತರೆಂದು ವರ್ಗೀಕರಿಸಲ್ಪಟ್ಟ 101 ಜಾತಿಗಳಲ್ಲಿ ಅಪಾರವಾದ ಶೈಕ್ಷಣಿಕ ಅಸಮಾನತೆ ಇರುವುದು ಸುಸ್ಪಷ್ಟ. ಹೀಗಾಗಿಯೇ ಅತ್ಯಂತ ಹಿಂದುಳಿದವರನ್ನು ಮುಂದುವರೆದವರಿಂದ ಪ್ರತ್ಯೇಕಿಸಿ ಮತ್ತೊಂದು ಗುಂಪು ಮಾಡುವ ಅಗತ್ಯವಿದೆ.
*ಪರಿಶಿಷ್ಟ ಉಪಜಾತಿಗಳಲ್ಲಿ ಪ್ರಾತಿನಿಧ್ಯ ಅಸಮಾನತೆ*
ಪರಿಶಿಷ್ಟರೊಳಗಿನ ಅಸಮಾನತೆಯನ್ನು ರುಜುವಾತುಪಡಿಸುವ ಮತ್ತೊಂದು ಪ್ರಮುಖ ಅಂಶ ಸರ್ಕಾರಿ ಹುದ್ದೆಗಳಲ್ಲಿ ಪ್ರಾತಿನಿಧ್ಯದ ಪ್ರಮಾಣ. ದಾಸ್ ಅಯೋಗವು ಈ ವಿಷಯದ ಅಧ್ಯಯನ ಮಾಡಲು ಐತಿಹಾಸಿಕವಾಗಿ 2018 ರವರೆಗಿನ ಅಂಕಿಅಂಶಗನ್ನು ಹೊಂದಿರುವ ರತ್ನಪ್ರಭಾ ಅವರ ವರದಿಯನ್ನು ಮತ್ತು ತಾವೇ ಖುದ್ದಾಗಿ ಹಾಲಿ ಪರಿಸ್ಥಿತಿಯನ್ನು ಪರಿಶೀಲಿಸಲು ಹಾಲಿ 45 ಇಲಾಖೆಗಳ ಜಾತಿವಾರು ಸರ್ಕಾರಿ ಅಧಿಕಾರಿಗಳ ಮತ್ತು ನೌಕರರ ಯಾದಿಯನ್ನು ತರಿಸಿಕೊಂದು ವಿಶ್ಲೇಷಿಸಿದೆ. ಅದರ ಪ್ರಕಾರ ಒಟ್ಟಾರೆ ಪರಿಶಿಷ್ಟ ಜಾತಿಗಳ ಜನಸಂಖ್ಯಾ ಪ್ರಮಾಣಕ್ಕೆ ಹೋಲಿಸಿದರೆ ಶೇ. 1.4 ರಷ್ಟು ಪರಿಶಿಷ್ಟ ಜಾತಿಗಳಿಗೆ ಸೇರಿದ ವ್ಯಕ್ತಿಗಳು ಸರ್ಕಾರಿ ಹುದ್ದೆಗಳಲ್ಲಿದ್ದಾರೆ. ಆದರೆ ಇದರಲ್ಲಿ ಅತ್ಯಂತ ಹಿಂದುಳಿದ ದಲಿತ ಅಲೆಮಾರಿ ಇನ್ನಿತರ (ಪ್ರವರ್ಗ ಎ ದಲ್ಲಿರುವ) ಜಾತಿಗಳಲ್ಲಿ ಶೇ.0.86 ರಷ್ಟು ಮಾತ್ರ ಸರ್ಕಾರಿ ನೌಕರಿಯಲ್ಲಿದ್ದಾರೆ. ಮಾದಿಗ ಸಂಬಂಧಿತ ಜಾತಿಗಳು ಶೇ. 0.96 , ಹೊಲೆಯ ಸಂಬಂಧಿತ ಜಾತಿಗಳು 1.46 ಮತ್ತು ಸ್ಪೃಶ್ಯ ಜಾತಿಗಳು ಶೇ. 1.29 ರಷ್ಟು ಪ್ರಾತಿನಿಧ್ಯವನ್ನು ಪಡೆದಿವೆ. ಮತ್ತು ಗ್ರೂಪ್ E ಪ್ರಮಾಣ ಶೇ. 5.35. ಇದರಲ್ಲಿ ಸೃಶ್ಯ ಜಾತಿಗಳಲ್ಲಿ ಲಂಬಾಣಿ ಸಂಬಂಧಿತ ಜಾತಿಗಳ ಪಾಲು ಉಳಿದ ಸ್ಪೃಷ್ಯ ಜಾತಿಗಳಿಗಿಂತ ಹೆಚ್ಚು.
ಇದಲ್ಲದೆ ಹಾಲಿ ಸಾಲಿನಲ್ಲಿ ಕರ್ನಾಟಕ ಸರ್ಕಾರದಲ್ಲಿ ಮಂಜೂರಾಗಿರುವ ಸರ್ಕಾರಿ ನೌಕರಿಗಳು 11, 73, 297. ಆದರೆ ನೇಮಕಾತಿಯಾಗಿರುವುದು ಕೇವಲ 7.31, 214. ಇದರಲ್ಲಿ ಶೇ. 17 ರಷ್ಟು ಪರಿಶಿಷ್ಟ ಜಾತಿಗಳ ಮೀಸಲಾತಿ ಎಂದುಕೊಂಡರೆ (ಕೋರ್ಟುಗಳು ಇನ್ನು ಶೇ. 17 ರ ಮೀಸಲಾತಿಯನ್ನು ಒಪ್ಪಿಲ್ಲ. ಮೋದಿ ಸರ್ಕಾರ ಕರ್ನಾಟಕ ಸರ್ಕಾರದ ಶೇ. 17 ಮೀಸಲಾತಿಯನ್ನು ಒಂಭತ್ತನೇ ಶೇಡ್ಯೋಲಿಗೆ ಸೇರಿಸಿಲ್ಲ. ಹೀಗ್ಗಿ ಅದು ಶೇ. 15 ಕ್ಕೆ ಇಳಿದರೂ ಇಳಿಯಬಹುದು)ಪರಿಶಿಷ್ಟರ ನೌಕರದಾರರ ಸಂಖ್ಯೆ 1,99, 460 ಆಗಬೇಕು. ಆದರೆ ಹಾಲಿ ಭರ್ತಿಯಾಗಿರುವುದು ಕೇವಲ 1, 47, 671. ಅಂದರೆ 51, 785 ಹುದ್ದೆಗಳು ಬ್ಯಾಕ್ ಲಾಗ್ ಆಗಿವೆ, ಈ 1, 47, 671 ಪರಿಶಿಷ್ಟ ಹುದ್ದೆಗಳಲ್ಲಿ 10 ಪರಿಶಿಷ್ಟ ಜಾತಿಗಳು ಅತಿ ಹೆಚ್ಚು ಪ್ರಾತಿನಿಧ್ಯ ಪಡೆದುಕೊಂಡಿವೆ.51 ಜಾತಿಗಳು ಅತಿ ಕಡಿಮೆ ಪಡೆದುಕೊಂಡಿವೆ. ಚಾಂಡಾಲ, ಗರೋಡಿ, ಸಿಂಧೋಳು-ಚಿಂಧೋಳ್ಳು ಎಂಬ 12 ಉಪಜಾತಿಗಳಲ್ಲಿ ಈವರೆಗೆ ಒಬ್ಬರಿಗೂ ಸರ್ಕಾರಿ ಉದ್ಯೋಗ ಸಿಕ್ಕಿಲ್ಲ. ಅಂದರೆ ಸರ್ಕಾರಿ ನೌಕರಿಗಳಲ್ಲಿ ಒಟ್ಟಾರೆ ಪರಿಶಿಷ್ಟ ಜಾತಿಗಳ ಸರಾಸರಿ ಪ್ರಾತಿನಿಧ್ಯಕ್ಕಿಂತ ಬಹುಪಾಲು ಜಾತಿಗಳ ಪ್ರಾತಿನಿಧ್ಯ ಅತ್ಯಂತ ಕಡಿಮೆ ಇದ್ದರೆ ಕೆಲವು ಜಾತಿಗಳ ಪ್ರಾತಿನಿಧ್ಯ ಸರಾಸರಿಗಿಂತ ಅತಿ ಹೆಚ್ಚಿದೆ.. ಇದೂ ಕೂಡ ಪರಿಶಿಷ್ಟ ಜಾತಿಗಳ ಮರುವರ್ಗೀಕರಣದ ಅಗತ್ಯವನ್ನು ರುಜುವಾತು ಪಡಿಸುತ್ತದೆ.
*ಪರಿಶಿಷ್ಟ ಮಹಿಳೆಯರ ಅಸಮಾನ ಪ್ರಾತಿನಿಧ್ಯ*
ಈ ಅಂಕಿಸಂಕಿಗಳ ಸಂತೆಗಳಲ್ಲಿ ಚರ್ಚೆಗೆ ಬರದ ಮತ್ತೊಂದು ಸಂಗತಿಯೆಂದರೆ ಸರ್ಕಾರಿ ನೌಕರಿಯಲ್ಲಿ ಎಲ್ಲಾ ಉಪಜಾತಿಗಳ ಮಹಿಳೆಯರ ಪ್ರಾತಿನಿಧ್ಯ ಅತ್ಯಂತ ಕಡಿಮೆ ಇರುವುದು. ವಾಸ್ತವದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಗಂಡು ಮತ್ತು ಹೆಣ್ಣಿನ ಪ್ರಮಾಣ ಸರಿಸಮವಾಗಿದೆ. ಆದರೆ ಸರ್ಕಾರಿ ಹುದ್ದೆಗಳಲ್ಲಿ? ಉದಾಹರಣೆಗೆ ಈಗ ಸರ್ಕಾರಿ ಹುದ್ದೆಗಳಲ್ಲಿರುವ 1, 47, 671 ಪರಿಶಿಷ್ಟ ಜಾತಿಗಳ ನೌಕರರಲ್ಲಿ1.05, 142 ಪುರುಷರು. 40,044 ಮಾತ್ರ ಮಹಿಳೆಯರು. ಅಂದರೆ ಜನಸಂಖ್ಯೆಯಲ್ಲಿ ಮಹಿಳೆಯರು ಪುರುಷರಷ್ಟೆ ಇದ್ದರೂ ಮಹಿಳೆಯರು ಪುರುಷರಿಗಿಂತ ಅರ್ಧಕ್ಕರ್ಧ ಕಡಿಮೆ. ಹೊಲೆಯ ಸಂಬಂಧಿತ ಜಾತಿಗಳಲ್ಲಿ ಮಹಿಳೆರಿಗಿಂತ 2.4 ಪಟ್ಟು ಹೆಚ್ಚು ಪುರುಷರು ಸರ್ಕಾರಿ ಕೆಲಸದಲ್ಲಿದ್ದರೆ, ಮಾದಿಗ ಸಂಬಂಧಿತ ಜಾತಿಗಳಲ್ಲಿ ಮಹಿಳೆಯರಿಗಿಂತ 2.67 ಪಟ್ಟು ಮಾದಿಗ ಪುರುಷರು ಸರ್ಕಾರಿ ನೌಕರಿಯಲ್ಲಿದ್ದಾರೆ. ಲಂಬಾಣಿಗಳಲ್ಲಿ ಈ ಲಿಂಗ ತಾರತಮ್ಯ ಇನ್ನೊ ಹೆಚ್ಚು. ಲಂಬಾಣಿ ಮಹಿಳೆಯರಿಗಿಂತ 4.5 ಪಟ್ಟು ಹೆಚ್ಚು ಲಂಬಾಣಿ ಪುರುಷರು ಸರ್ಕಾರಿ ನೌಕರಿಯಲ್ಲಿದ್ದಾರೆ.
*ಪರಿಶಿಷ್ಟರೊಳಗಿನ ಅಸಮಾನ ರಾಜಕೀಯ ಪ್ರಾತಿನಿಧ್ಯ*
ಶಾಸಕರು ಮತ್ತು ಸಂಸದರಾಗಿರುವ ಪರಿಶಿಷ್ಟ ಉಪಜಾತಿಗಳ ವಿವರಗಳಿಗಿಂತ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಉಪಜಾತಿಗಳ ವಿವರವನ್ನು ವರದಿ ನೀಡುತ್ತದೆ. ಅದರ ಪ್ರಕಾರ 27,917 ಪರಿಶಿಷ್ಟ ಗ್ರಾಮಪಂಚಾಯತಿ ಸದಸ್ಯರಲ್ಲಿ ಪರಿಶಿಷ್ಟರ 101 ಜಾತಿಗಳಲಿ 41 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಮಹಾನಗರ ಪಾಲಿಕೆಯಲ್ಲಿ 52 ಸದಸ್ಯತ್ವದಲ್ಲಿ ಈವರೆಗೆ 89 ಜಾತಿಗಳಿಗೆ ಒಮ್ಮೆಯೂ ಪ್ರಾತಿನಿಧ್ಯ ಸಿಕ್ಕಿಲ್ಲ. ನಗರಪಾಲಿಕೆಯ 308 ಪರಿಶಿಷ್ಟ ಸ್ಥಾನಗಳಲ್ಲಿ 82 ಉಪಜಾತಿಗಳಿಗೆ ಈವರೆಗೆ ಅವಕಾಶವಿಲ್ಲ. ಪುರಸಭೆಗಳ 516 ಸ್ಥಾನಗಳಲ್ಲಿ 79 ಉಪಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹಾಗೂ ಪಟ್ಟಣ ಪಂಚಾಯತಿಯ 252 ಸ್ಥಾನಗಳಲ್ಲಿ 78 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಪ್ರಾತಿನಿಧ್ಯ ಪಡೆದವರಲ್ಲಿ ಭೋವಿ. ಲಂಬಾಣಿ, ಹೊಲೆಯ , ಮಾದಿಗ, ಎಕೆ, ಎಡಿ ಜಾತಿಗಳ ಪಾಲು ಹೆಚ್ಚು. ಇದಲ್ಲದೆ ಭೂ ಹಿಡುವಳಿ ಮತ್ತು ಸರ್ಕಾರದ ಆರ್ಥಿಕ ಅನ್ಯುದಾನಗಳ ಪ್ರಶ್ನೆಯಲ್ಲೂ ಇದೇ ಬಗೆಯ ಫಲಾನುಭವದ ಪದ್ಧತಿ ಕಾಣುತ್ತದೆ. ಈ ಯಾವುದೇ ಅಂಕಿಅಂಶಗಳು ಸಮಾಜದ ಪರಿಶಿಶ್ತೇತರ ಸಮುದಾಯಗಳ ಪರಿಸ್ಥಿತಿಗಳಿಗೆ ಹೋಲಿಸಿದಲ್ಲಿ ಪರಿಶಿಷ್ಟರಲ್ಲಿ ಮುಂದುವರೆದವರ ಪರಿಸ್ಥಿತಿಯೂ ವಾಸ್ತವದಲ್ಲಿ ಹಿಂದೇ ಉಳಿದಿದೆ. ಎಂದೇ ತಿಳಿಸುತ್ತದೆ. ಆದರೆ ಈ ಅಧ್ಯಯನವು ಪರಿಶಿಷ್ಟರೊಳಗಿರುವ ಸಾಮಾಜಿಕ ಅಸಮಾನತೆ ಮತ್ತು ಅದನ್ನು ಸರಿದೂಗಿಸಲು ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತಾಗಿದೆ.
ಇದಲ್ಲದೆ ಕರ್ನಾಟಕದಲ್ಲಿ ಇತರ ರಾಜ್ಯಗಳಿಗಿಂತ ಭಿನ್ನವಾಗಿ ಸ್ಪೃಶ್ಯ ಜಾತಿಗಳಾದ ಲಂಬಾಣಿ, ಭೋವಿ, ಕೊರಮ ಮತ್ತು ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಗಳೆಂದು ಪರಿಗಣಿಸಲಾಗಿದೆ. ಹಾಗೆ ನೋಡಿದರೆ ಅಸ್ಪೃಷ್ಯತೆಯೆಂಬ ಭೀಕರ ಸಾಮಾಜಿಕ ಅಸಮಾನತೆಯನ್ನು ಈ ಜಾತಿಗಳು ಸಾಮಾನ್ಯವಾಗಿ ಎದುರಿಸುವುದಿಲ್ಲ. ಆದರೆ ಸುಪ್ರೀಂ ತೀರ್ಪಿನ ಪ್ರಕಾರ ಒಳವರ್ಗೀಕರಣ ಮಾಡುವಾಗ ಈವರೆಗೆ ಮೀಸಲಾತಿ ಪಡೆಯುತ್ತಿದ್ದ ಯಾವ ಜಾತಿಗಳನ್ನು ಮೀಸಲಾತಿ ಪರಿಧಿಯಿಂದಲೇ ಹೊರಗಿಡುವಂತಿಲ್ಲ. ಎರಡನೆಯದಾಗಿ ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡಗಳಲ್ಲಿ ನೋಡಿದರೆ ಸ್ಪೃಶ್ಯ ಜಾತಿಗಳಲ್ಲಿನ ಕೆಲವು ಜಾತಿಗಳ ಹಿಂದುಳಿದಿರುವಿಕೆ ಅಸ್ಪೃಶ್ಯ ಜಾತಿಗಳ ಹಿಂದುಳಿದಿರುವಿಕೆಗೆ ಸಮಾನವೆಂಬಂತಿದೆ.
ಇದರ ಜೊತೆಗೆ ಕರ್ನಾಟಕದ ಎಕೆ, ಎಡಿ, ಎಎ ವರ್ಗೀಕರಣದ ಸಮಸ್ಯೆ. ಸದಶಿವ ಅಯೋಗದ ಸಂದರ್ಭಕ್ಕೆ ಹೋಲಿಸಿದಲ್ಲಿ ಅದರ ಪ್ರಮಾಣ 44ಲಕ್ಷದಿಂದ 4.74 ಲಕ್ಷಕ್ಕಿಳಿದಿದೆ. ಆದರೆ ಆ 4.74 ಲಕ್ಷ ಜನರು ತಮ್ಮನ್ನು ಎಕೆ, ಎಡಿ ಎಂದೇ ಗುರಿತಿಸಬೇಕೆಂದು ಪ್ರತಿಪಾದಿಸಿದಾಗ ಅದನ್ನು ನಿರಾಕರಿಸುವ ಹಕ್ಕು ಯಾರಿಗೂ ಇಲ್ಲ. ಹಾಗೆಯೇ ಅವರನ್ಮ್ನು ಮೀಸಲಾತಿ ಪರಿಧಿಯಿಂದ ಹೊರ ಹಾಕುವ ಅಧಿಕಾರವೂ ಇಲ್ಲ. ಅದು ಸುಪ್ರೀಂ ನಿರ್ದೇಶನದ ಉಲ್ಲಂಘನೆಯಾಗುತ್ತದೆ. ಆದರೆ ಮೂಲ ಜಾತಿ ತಿಳಿಯದೆ ಅವರನ್ನು ಮಾಧು ಸ್ವಾಮಿ ವರದಿ ಮಾಡಿದಂತೆ ಇತರ ಜಾತಿಗಳಲ್ಲಿ ಸೇರಿಸಲು ಬರುವುದಿಲ್ಲ. ಹೀಗಾಗಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸಿ ಮೀಸಲಾತಿ ನೀಡಿರುವುದೂ ಕೂಡಾ ತರ್ಕ ಬದ್ಧವಾಗಿದೆ.
ದಾಸ್ ಆಯೋಗವೂ ಅಂತಿಮವಾಗಿ ಹೇಳಿರುವಂತೆ ಇಲ್ಲಿರುವ ಅಂಕಿಸಂಖ್ಯೆಗಳು ನಿಂತ ನೀರೇನೋ ಇಲ್ಲ. ಹೊಸ ಹಾಗೂ ಇನ್ನಷ್ಟು ಆಳವಾದ ಸಾಮಾಜಿಕ ಪರಿಶೋಧನೆಯು ಮಾರ್ಪಾಡುಗಳನ್ನು ಆಗ್ರಹಿಸಿದರೆ ಮಾಡಲೇಬೇಕಾಗುತ್ತದೆ. ಆದರೆ ಅದಕ್ಕೆ ಇದಕ್ಕಿಂತ ವೈಜ್ಞಾನಿಕವಾದ ಮತ್ತು ಆಳವಾದ ಅಧ್ಯಯನ ಬೇಕು. ಸಾಮಾಜಿಕ ಹಿಂದುಳಿದಿರುವಿಕೆಯ ಮಾನದಂಡದಂತೆ ಕೆಲವು ಉಪಜಾತಿಗಳ ಮರುವರ್ಗೀಕರಣ ಸಮರ್ಪಕವಾಗಿಲ್ಲ ಎಂದು ರುಜುವಾತಾದರೆ ಅದನ್ನು ಸರಿಪಡಿಸಬಹುದಾದ ಸಾಧ್ಯತೆ ಇರಬೇಕು. ಆದರೆ ಅದಕ್ಲ್ಕ್ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮಾನದಂಡಕ್ಕಿಂತ ಹಿಂದುಳಿದಿರುವಿಕೆ ಮಾನದಂಡವಾಗಬೇಕು ಅಷ್ಟೇ. ಕೇವಲ ಭಾವನೆಗಳು ಮತ್ತು ಅಭಿಪ್ರಾಯಗಳು ಸತ್ಯಗಳ ಪುರಾವೆಯಾಗುವುದಿಲ್ಲ. ಅಲ್ಲಿಯವರೆಗೆ ದಾಸ್ ವರದಿಯೇ ವೈಜಾನಿಕ ವಾಗಿರುತ್ತದೆ ಅಷ್ಟೇ. ಈ ಎಲ್ಲಾ ಕಾರಣಗಳಿಂದ ಕರ್ನಾಟಕದ ಪರಿಶಿಷ್ಟರ 101 ಜಾತಿಗಳಲ್ಲಿ ಹಿಂದುಳಿದಿರುವಿಕೆಯಲ್ಲಿ ಅಸಮಾನತೆಯಿದ್ದು, ಈ ಅಧ್ಯಯನ ಅದನ್ನು ಸಾಬೀತು ಪಡಿಸಿದೆ. ಮತ್ತು ಅದನ್ನು ವೈಜ್ನಾನಿಕವಾಗಿ ಪ್ರಮಾಣೀಕರಿಸಿ ಎ, ಬಿ. ಸಿ, ಡಿ, ಈ ಎಂಬ ವರ್ಗೀಕರಣವನ್ನು ಮಾಡಿದೆ.
*ಅದ್ದರಿಂದ ನಾಗಮೋಹನ್ ದಾಸ್ ವರದಿ ಜಾರಿಯಾಗಬೇಕಿದೆ*
*ಆದರೆ ಅದರಲ್ಲಿ ಬರಲಿರುವ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳಾಗಬೇಕಿದೆ*.
ಏಕೆಂದರೆ ಈ ವರದಿಯು ಹಿಂದುಳಿದಿರುವಿಕೆಯ ಆಧಾರದಲ್ಲಿ ಗುಂಪುಗಳನ್ನು ಮಾಡಿದ್ದರೂ, ಅತ್ಯಂತ ವಂಚಿತ ಜಾತಿಗಳ ಹಿಂದುಳಿದ ಜಾತಿಗಳಿಗೆ ಕೊಟ್ಟಿರುವ ಶೇ. 1 ರಷ್ಟು ಮೀಸಲಾತಿಯಿಂದ ಅಲ್ಲಿರುವ 59 ಜಾತಿಗಳಿಗೆ ಏನು ಉಪಯೋಗ ಆಗಬಹುದು. ಅದನ್ನು ಹೆಚ್ಚಿಸಲು ಅವರ ಜನಸಂಖ್ಯೇ 6 ಲಕ್ಷಕ್ಕಿಂತಲೂ ಕಡಿಮೆ. ಹೀಗಿರುವಾಗ ಆ ಸೂಕ್ಷ್ಮ ಅತ್ಯಂತ ವಂಚಿತ ಜಾತಿಗಳ ವಿಮೋಚನೆ ಹೇಗೆ ಎಂಬ ಪ್ರಶ್ನೆ ಹಾಗೆ ಉಳಿದಿದೆ. ಜನಸಂಖ್ಯಾ ಪ್ರಮಾಣ ಮತ್ತು ಹಿಂದುಳಿದಿರುವಿಕೆಗಳ ನಡುವಿನ ಅನುಪಾತದ ನಿರ್ಧಾರಕ್ಕೆ ಇನ್ನೂ ಸುಧಾರಿತ ಮಾನದಂಡ ಬೇಕಾಗಬಹುದು .
*ಹಿಂದುಳಿದವರ ಬ್ರಾಹ್ಮಣ್ಯ ಮತ್ತು ಮುಂದುವರೆಯಬೇಕಾದ ವರ್ಗಸಮರ*
ಮೀಸಲಾತಿ ಮತ್ತು ಒಳಮೀಸಲಾತಿಗಳು ಪಾಲನ್ನು ಹಂಚಿಕೊಳ್ಳಲು ಅನುಸರಿಸಬೇಕಾದ ಸಾಮಾಜಿಕ ನ್ಯಾಯ. ಮೀಸಲಾತಿ ಎಂಬುದು ಭಾರತೀಯ ಶೋಷಕ ಪ್ರಜ್ನೆಯ ಸೋಗಲಾಡಿತನಗಳನ್ನು ಕಳೆದ ಒಂದು ಶತಮಾನದಿಂದಲೂ ಬಯಲಿಗೆಳೆಯುತ್ತ ಬಂದಿರುವ ಸಾಧನವಾಗಿದೆ. ಅದು ಶೋಷಕ ಭಾರತೀಯ ಪ್ರಜ್ನೆಯನ್ನು ಒಳಗಿಂzಲೇ ತಿವಿಯುತ್ತಾ ಬಂದಿರುವ ಕತ್ತಿಯೂ ಆಗಿದೆ. ಅದೇ ಸಮಯದಲ್ಲಿ ಶೋಷಿತ ಜಾತಿಗಳ ಒಂದು ವರ್ಗದ ಬದುಕನ್ನು ಮತ್ತು ಘನತೆಯನ್ನು ರಕ್ಷಿಸುವ ಗುರಾಣಿಯೂ ಆಗಿದೆ. ಆಳದಲ್ಲಿ ಮೀಸಲಾತಿ ಎಂಬುದು ತನ್ನದಲ್ಲದ, ಇತರರಿಂದ ಕಸಿದುಕೊಂಡ ಪಾಲನ್ನು ಮರಳಿಸಿ ಮತ್ತೆ ಮನುಷ್ಯರಾಗುವ ಅವಕಾವನ್ನು ಶೋಷಕರಿಗೆ ಕಲ್ಪಿಸಿಕೊಡುತ್ತದೆ. ಶೋಷಿತರಿಗೆ ದೈನ್ಯದಿಂದ ಹೊರಬಂದು ಘನತೆ ಮತ್ತು ಹಕ್ಕುಗಳನ್ನು ಪಡೆದ ಪೂರ್ಣ ನಾಗರಿಕರಾಗುವ ಅವಕಾವನ್ನು ಕಲ್ಪಿಸುತ್ತದೆ. ಆದರೆ ಕಸಿದು ತಿನ್ನುವುದೇ ಮೌಲ್ಯವೂ, ಧರ್ಮವೂ ಅಗಿರುವ ಸಮಾಜವೊಂದರಲ್ಲಿ ಸಾಮಾಜಿಕ ನ್ಯಾಯದ ಹಾದಿ ಸುಗಮವಲ್ಲವೇ ಅಲ್ಲ.
ಹೀಗಾಗಿ ಮೀಸಲಾತಿಯ ನೀತಿಗಳು ಹಂಚಿಕೊಳ್ಳುವುದನ್ನು ಕಡ್ಡಾಯ ಮಾಡಿದ ತಕ್ಷಣ ಸಾಮಾನ್ಯವಾಗಿ ಈವರೆಗೆ ಮೀಸಲಾತಿಯ ಸೌಲಭ್ಯವನ್ನು ಇತರರಿಗಿಂತ ಹೆಚ್ಚಿಗೆ ಉಂಡ ಶೋಷಿತ ಸಮುದಾಯಗಳೊಳಗಿನ ಬ್ರಾಹ್ಮಣೀಕರಣಗೊಂಡ ಕೆಲವು ವರ್ಗಗಗಳಲ್ಲೂ ಸಾಮಾಜಿಕ ನ್ಯಾಯವಿರೋಧಿ ಬ್ರಾಹ್ಮಣೀಯ ತರ್ಕಗಳಾದ ಪ್ರತಿಭೆ. ಅಭಿವೃದ್ಧಿ, ಅನ್ಯಾಯಗಳೆಂಬ ರಾಷ್ಟ್ರೀಯ ಪ್ರಶ್ನೆಗಳು ಹುಟ್ಟಿಕೊಂಡು ಬಿಡುತ್ತವೆ. ಅದು ಶೋಷಿತರೊಳಗಿನ ಸಹಜ ಮೈತ್ರಿಯನ್ನು ಸಾಗಬೇಕಾದ ಸುದೀರ್ಘ ದಾರಿಯನ್ನು ಮರೆಸುತ್ತದೆ. ಉದಾಹರಣೆಗೆ ಕರ್ನಾಟಕದ 1.05ಕೋಟಿ ಪರಿಶಿಷ್ಟ ಸಮುದಾಯದಲ್ಲಿ ಸರ್ಕಾರಿ ನೌಕರಿಯಲ್ಲಿರುವುದು ಕೇವಲ 1.45 ಲಕ್ಷ ಮಾತ್ರ. ಅಂದರೆ ಸಮುದಾಯದ ಶೇ. 1.5 ರಷ್ಟು ಮಾತ್ರ.
ಉಳಿದ ಶೇ.98.5 ರಷ್ಟು ಜನರ ಸಾಮಾಜಿಕ ನ್ಯಾಯದ ಪ್ರಶ್ನೆಯೇನು? ಎಲ್ಲರಿಗೂ ಸರ್ಕಾರಿ ನೌಕರಿಯನ್ನ ಕೊಡಲಾಗುವುದಿಲ್ಲ. ಆದರೆ ಘನತೆಯಿಂದ ಬದುಕಲು ಬೇಕಾದ ಭೂಮಿ, ಇನ್ನಿತರ ಪಾಲಿನ ಆಸರೆಗಳು ಬೇಕಲ್ಲವೇ? ಸಾಮಾಜಿಕ ನ್ಯಾಯವನ್ನು ಮೀಸಲಾತಿಗೆ ಮಾತ್ರ ಸೀಮಿತಗೊಳಿಸಿದಾಗ ಅದು ಸಮುದಾಯದ ಶೇ. 1.5 ರಷ್ಟು ಜನರ ನ್ಯಾಯವೂ, ಉಳಿದವರಿಗೆ ಮಾಡುವ ಅನ್ಯಾಯದ ಪ್ರಶ್ನೆಯೂ ಆಗಿಬಿಡುವುದಿಲ್ಲವೇ? ಹಾಗೆ ನೋಡಿದರೆ ಈ 1.45 ಲಕ್ಷ ಉದ್ಯೋಗಸ್ಥ ಜನರೇ ಸಮುದಾಯದ ಪ್ರಜ್ನಾವಂತ , ಸುಶಿಕ್ಷಿತ ಮಧ್ಯಮವರ್ಗವೂ ಆಗಿದೆ. ಉಳಿದ ಶೇ.98.5 ರಷ್ಟು ಜನರ ಆಸಕ್ತಿಗಳನ್ನು ಈ ವರ್ಗ ತನ್ನ ಅಜೆಂಡಾ ಮಾಡಿಕೊಳ್ಳದೆ ಉಳಿದವರಿಗೆ ನ್ಯಾಯ ಸಿಗಬಲ್ಲದೇ?
ಅದರ ಬದಲಿಗೆ ತಮ್ಮಂತೇ ದಮನಿತರಾಗಿರುವ ಸಮುದಾಯಗಳಿಂದ ಹೆಚ್ಚಿನ ಪಾಲನ್ನು ಪಡೆಯುವತ್ತ ಹೆಚ್ಚಿನ ಸಮಯವನ್ನು ಕೇಂದ್ರೀಕರಿಸಿದರೆ ಬಲಿಷ್ಟ ಜಾತಿಗಳ ಮಧ್ಯಮವರ್ಗದಂತೆ ಸ್ವಾರ್ಥಿ ಹಾಗೂ ಅಪಾಯಕಾರಿ ವರ್ಗವಾಗಿಬಿಡುವುದಿಲ್ಲವೇ? ಬಲಿಷ್ಜ ಜಾತಿಗಳು ಕೇವಲ ತಮ್ಮ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸಿಕೊಳ್ಳಲು ತಮ್ಮ ಜನಸಂಖ್ಯೆ ಉಳಿದವರಿಗಿಂತ ಹೆಚ್ಚೆಂದು ಸಾಬೀತು ಮಾಡಲು ತಮ್ಮದೇ ಸಮುದಾಯಗಳ ಇತರ ಉಪಸಮುದಾಯಗಳಿಗೆ ನ್ಯಾಯ ಒದಗಿಸುವ ಸಾಧನವಾಗಬಹುದಿದ್ದ ಕಾಂತರಾಜ್ ಅಯೋಗವೇ ರದ್ದಾಗಲು ಕಾರಣರಾದರು. ಹಿಂದುಳಿದಿರುವಿಕೆಗಿಂತ ಜನ್ಸಂಖ್ಯಾ ಪ್ರಮಾಣದ ತರ್ಕಗಳು ಸಮುದಾಯದ ಬಲಿಷ್ಟರ ಸೇವೆಯನ್ನು ಮಾತ್ರ ಮಾಡುತ್ತವೆ. ಇದಲ್ಲದೆ ಇಂದಿನ ಖಾಸಗೀಕರಣ, ಜಾಗತೀಕರಣದ ಯುಗದಲ್ಲಿ ಈ 1.45 ಲಕ್ಷ ಉದ್ಯೋಗಗಳು ಉಳಿಯುವುದಿಲ್ಲ. ಈಗಾಗಲೇ1.9 ಲಕ್ಷ ಇರಬೇಕಾಅಗಿದ್ದ ಉದ್ಯೋಗ ಬ್ಯಾಕ್ ಲಾಗ್ ಕಾರಣಕ್ಕೆ 1.45 ಲಕ್ಷಕ್ಕೆ ಇಳಿದಿದೆ. ನವ ಉದಾರವಾದಿ ಆಡಳಿತ ಸುಧಾರಣೆಯ ಹೆಸರಲ್ಲಿ ಇದು ಇನ್ನೂ ಕಡಿಮೆಯಾಗುತ್ತಾ ಹೋಗುತ್ತದೆ. ಮತ್ತೊಂದು ಕಡೆ ಈ 1.45 ಲಕ್ಷ ಲೆಕ್ಕಾಚಾರ ನಿಂತಿರುವುದೂ ಕೂಡ ಮೀಸಲಾತಿಯ ಮೇಲೆ ಶೇ. 50 ರ ಮೇಲ್ಮಿತಿ ಗಮನಕ್ಕೆ ತೆಗೆದುಕೊಂಡಿಲ್ಲ. ಒಂದೊಮ್ಮೆ ಶೇ. 50 ಮೇಲ್ಮಿತಿ ಅನ್ವಯವಾದದರೆ 1.45 ಲಕ್ಷ 1.35 ಲಕ್ಷಕ್ಕೆ ಇಳಿಯುತ್ತದೆ. ಇದೇ ರೀತಿ ಖಾಸಗೀಕರಣ ಹೊರಗುತ್ತಿಗೆ ಮುಂದುವರೆದರೆ ಅದು ಕ್ರಮೇಣ 50 ಸಾವಿರಕ್ಕೂ ಇಳಿಯಬಹುದು. ಹೀಗಾಗಿ ಇರುವ1.45 ಲಕ್ಷ ಉದ್ಯೋಗ ಉಳಿಸಿಕೊಳ್ಳಬೇಕೆಂದರೂ ಶೇ. 50 ರ ಮೇಲ್ಮಿತಿ ರದ್ದಿಗೆ, ಖಾಸಗೀಕರಣ ರದ್ದಿಗೆ ಒಟ್ಟುಗೂಡಿ ಎಲ್ಲಾ ಪರಿಶಿಷ್ಟರು ಮಾತ್ರವಲ್ಲದೆ ಎಲ್ಲಾ ದುಡಿಯುವ ಜನತೆ ಹೋರಾಡುವ ಅಗತ್ಯವಿದೆ.
ಇನ್ನು ಸಮುದಾಯದ ಶೇ. 99 ಜನರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದರೆ ದೇಶದ ಸಂಪತ್ತಿನಲ್ಲಿ ಸಮಾನ ಪಾಲಿಗೆ ದುಡಿಯುವರ ರಾಜ್ಯಕ್ಕೆ ಎಲ್ಲಾ ದಮನಿತ ಜಾತಿ ವರ್ಗಗಳೂ ಒಗ್ಗೂಡಿ ಹೋರಾಡುವ ಅಗತ್ಯವಿದೆ. ಆದ್ದರಿಂದ ದಮನಿತ ಸಮುದಾಯ ಮತ್ತು ನಾಡಿನ ಪ್ರಜ್ನಾವಂತರು ನ್ಯಾ . ನಾಗಮೋಹನ್ ದಾಸ್ ಅಯೋಗದ ವರದಿಯ ಜಾರಿಗೆ ಹೋರಾಡುತ್ತಲೇ ಸಾಮಾಜಿಕ ನ್ಯಾಯದ ಮುಂದಿನ ಹೋರಾಟಗಳಿಗೆ ಅಣಿಯಾಗಬೇಕಿದೆ. ಅದಕ್ಕೆ ಮುನ್ನ ನಮ್ಮೊಳಗಿನ ಬ್ರಾಹ್ಮಣನನ್ನು , ಬಂಡವಾಳಶಾಹಿಯನ್ನು ಕೊಂದು ಬುದ್ಧನನ್ನು ಅಂಬೇದ್ಕರರನ್ನು ಅವಾಹಿಸಿಕೊಳ್ಳಬೇಕಿದೆ. ಹಾಗೆಂದರೆ ಅರ್ಥವಿಷ್ಟೇ :
ಒಳಮೀಸಲಾತಿ ಯಲ್ಲಿ ಒಳಬ್ರಾಹ್ಮಣ್ಯ ನುಸುಳದಿರಲಿ…
ತನಗಿಂತ ದುರ್ಬಲರಿಗೆ ಹೆಚ್ಚಿನ ಪಾಲು ಕೊಡುವುದು
ಬುದ್ಧವಾದ. ಅಂಬೇಡ್ಕರ್ ವಾದ.
ತನ್ನದಲ್ಲದ ಪಾಲನ್ನು ಕಸಿಯುವುದು
ಬ್ರಾಹ್ಮಣ್ಯ. ನವಬ್ರಾಹ್ಮಣ್ಯ.
ಬುದ್ಧ, ಅಂಬೇಡ್ಕರ್ ಗೆಲ್ಲಲಿ..
- ಶಿವಸುಂದರ್
ಜನಪರ ಚಿಂತಕರು, ಲೇಖಕರು..


Leave a reply