ಎಮರ್ಜೆನ್ಸಿಯ ಸರ್ವಾಧಿಕಾರದ ೪೯ ನೇ ವರ್ಷವನ್ನು ತಾವು ಬಹುದೊಡ್ಡ ಪ್ರಜಾತಂತ್ರವಾದಿಗಳೆಂದು ಬಣ್ಣಿಸಿಕೊಳ್ಳಲು ಬಳಸಿಕೊಂಡ ಮೋದಿ ಸರ್ಕಾರ ಇದೇ ಜುಲೈ ೧ ನೇ ತಾರೀಕಿನಿಂದ ಹೊಸ ಕ್ರಿಮಿನಲ್ ಕಾಯಿದೆಗಳನ್ನು ಜಾರಿ ಮಾಡುವ ಮೂಲಕ ದೇಶದ ಮೇಲೆ ಶಾಶ್ವತ ಎಮರ್ಜೆನ್ಸಿಯನ್ನು ಮತ್ತು ಪೊಲೀಸ್ ರಾಜ್ ಅನ್ನು ಹೇರಿದೆ. ಬ್ರಿಟಿಷರು ಜಾರಿಗೆ ತಂದಿದ್ದ ಈ ಕಾನೂನುಗಳನ್ನು ಭಾರತೀಕರಿಸುವ ಸಲುವಾಗಿ ಹೊಸ ಕ್ರಿಮಿನಲ್ ಕಾಯಿದೆಗಳನ್ನು ಜಾರಿಗೆ ತರಲಾಗಿದೆ ಎಂದು ಕೊಚ್ಚಿಕೊಳ್ಳುವ ಮೋದಿ ಸರ್ಕಾರ ಬದಲು ಮಾಡಿರುವುದು ಕೇವಲ ಅದರ ಹೆಸರುಗಳನ್ನು ಮಾತ್ರ. ಇಂಡಿಯನ್ ಪೀನಲ್ ಕೋಡ್ ಅನ್ನು ಭಾರತೀಯ ನ್ಯಾಯ ಸಂಹಿತೆ ಎಂದೂ, ಕ್ರಿಮಿನಲ್ ಪ್ರೊಸಿಜರ್ ಕೋಡ್ ಅನ್ನು ಸಿಅರ್.ಪಿ.ಸಿ ಯನ್ನು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಎಂದೂ, ಇಂಡಿಯನ್ ಎವಿಡೆನ್ಸ್ ಆಕ್ಟ್ ಅನ್ನು ಭಾರತೀಯ ಸಾಕ್ಷ್ಯ ಅಧಿನಿಯಮ ಎಂದೂ ಬದಲಿಸಲಾಗಿದೆ. ಹೀಗೆ ಭಾಷೆಯನ್ನು ಸಂಸ್ಕ್ರುತೀಕರಣ ಮಾಡಿರುವುದು ಬಿಟ್ಟರೆ ಶೇ. ೯೦ಕ್ಕೂ ಹೆಚ್ಚಿನ ಅಂಶಗಳು ಹಳೆಯ ಕೋಡಿನಲ್ಲಿ ಇದ್ದವೇ ಆಗಿವೆ.
*ಗೇಣುದ್ದ ಮಾರ್ಪಾಡು- ಅಳುದ್ದ ಪ್ರಚಾರ*
ಉದಾಹರಣೆಗೆ ಹಾಲಿ ಹಳೆಯ ಸಿಆರ್ಪಿಸಿಯಲ್ಲಿ ೫೬ ಸ್ವರೂಪದ ೪೮೪ ಸೆಕ್ಷನ್ಗಳಿವೆ. ಈಗ ಸಿಆರ್ಪಿಸಿಯಲ್ಲಿದ್ದ ೯ ಸೆಕ್ಷನ್ ಗಳನ್ನು ಸಂಪೂರ್ಣವಾಗಿ ತೆಗೆದು , ೯ ಸೆಕ್ಷನ್ ಗಳನ್ನು ಹೊಸದಾಗಿ ಸೇರಿಸಿದ್ದಾರೆ. ಉಳಿದಂತೆ ಸುಮಾರು ೧೬೦ ಸೆಕ್ಷನ್ ಗಳಿಗೆ ಸಣ್ಣ ಪುಟ್ಟ ತಿದ್ದುಪಡಿಗಳನ್ನು ಮಾಡಿದ್ದಾರೆ. ಅದೇ ರೀತಿ ಹಳೆಯ ಐಪಿಸಿಯಲ್ಲಿ ೫೧೧ ಸೆಕ್ಷನ್ಗಳಿದ್ದವು. ಭಾರತೀಯ ನ್ಯಾಯ ಸಂಹಿತೆಯಲ್ಲಿ ೩೫೬ ಸೆಕ್ಷನಗಳು ಮಾತ್ರ ಇವೆ. ಪ್ರತ್ಯೇಕವಾಗಿ ಸೂಚಿಸಲಾಗಿದ್ದ ಹಲವರು ಅಪರಾಧಗಳನ್ನು ಒಂದೇ ಬಗೆಯ ಅಪರಾಧಗಳಡಿ ತಂದಿರುವುದು ಈ ಇಳಿಕೆಗೆ ಪ್ರಧಾನ ಕಾರಣ. ಅದನ್ನು ಬಿಟ್ಟಂತೆ ಐಪಿಸಿ ಯಿಂದ ಸಂಪೊರ್ಣವಾಗಿ ತೆಗೆದುಹಾಕಿರುವುದು ಕೇವಲ ೨೮ ಸೆಕ್ಷನ್ ಗಳನ್ನು ಮತ್ತು ಹೊಸದಾಗಿ ಸೇರಿಸಿರುವುದು ಕೇವಲ ೮ ಸೆಕ್ಷನ್ ಗಳನ್ನು. ಹಾಗೆಯೇ ಹಳೆಯ ಇಂಡಿಯನ್ ಎವಿಡೆನ್ಸ್ ಆಕ್ಟ್ ನಲ್ಲಿ ೧೬೬ ಸೆಕ್ಷನಗಳಿದ್ದವು. ಈಗ ಅದರ ಬದಲಿಗೆ ತಂದಿರುವ ಭಾರತೀಯ ಸಾಕ್ಷ್ಯ ಬಿಲ್ ನಲ್ಲಿ ೧೭೦ ಸೆಕ್ಷನ್ ಗಳಿವೆ. ಸರ್ಕಾರವೇ ಹೇಳಿರುವ ಪ್ರಕಾರ ಹಳೆಯ ಕಾಯಿದೆಯಿಂದ ಸಂಪೂರ್ಣವಾಗಿ ತೆಗೆದಿರುವುದು ಕೇವಲ ಐದು ಸೆಕ್ಷನ್ ಗಳನ್ನು ಮಾತ್ರ. ಒಂದನ್ನು ಹೊಸದಾಗಿ ಸೆರಿಸಲಾಗಿದೆ. ಹಾಗೂ ೨೩ ಸೆಕ್ಷನ್ಗಳಿಗೆ ಸಣ್ಣ ಪುಟ್ಟ ತಿದ್ದುಪಡಿಗಳನ್ನು ಮಾಡಲಾಗಿದೆ.
ಆದರೆ ಬದಲು ಮಾಡಿರುವ ಶೇ.೧೦ ಮಾರ್ಪಾಡುಗಳಲ್ಲಿ ಮೋದಿ ಸರ್ಕಾರ ದೇಶವನ್ನು ಮತ್ತು ದೇಶದ ಜನರನ್ನು ಮತ್ತು ತಮ್ಮ ಸ್ವಾತಂತ್ರ್ಯಕ್ಕಾಗಿ ಅವರು ಮಾಡುವ ಹೋರಾಟಗಳನ್ನು ಅಪರಾಧವೆಂದು ಘೋಷಿಸುವ ಬದಲಾವಣೆಗಳನ್ನು ಮಾಡಿದ್ದಾರೆ. ಗೃಹಮಂತ್ರಿ ಅಮಿತ್ ಶಾ ಈ ಪೋಲಿಸ್ ರಾಜ್ ಸ್ವರೂಪದ ಮಾರ್ಪಾಡುಗಳನ್ನು ಮುಚ್ಚಿಟ್ಟು ತ್ವರಿತ ನ್ಯಾಯ ವಿಲೇವಾರಿಯೇ ಹೊಸ ಕಾಯಿದೆಗಳ ಉದ್ದೇಶವೆಂದು ಪ್ರಚಾರ ಮಾಡುತ್ತಿರುವುದು ಜನದ್ರೋಹಿ ಕುತಂತ್ರವಾಗಿದೆ. ಮಾಧ್ಯಮಗಳು ಕೂಡ ಈ ಹೊಸ ಕಾಯಿದೆಗಳಲ್ಲಿ ಇರುವ ಅಲ್ಪಸ್ವಲ್ಪ ಸುಧಾರಣೆಗಳ ಪ್ರಸ್ತಾಪಕ್ಕೆ ಒತ್ತು ಕೊಟ್ಟು ಅದರ ಮೂಲ ಉದ್ದೇಶ ಹಾಗೂ ಆಘಾತಕಾರಿ ಪರಿಣಾಮಗಳ ವಿಷಯವನ್ನು ಬಿಚ್ಚಿಡುತ್ತಿಲ್ಲ.
ಉದಾಹರಣೆಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೇರಿಸಲಾಗಿರುವ ಪರಾಧಗಳು, ಭಾರತೀಯ ನ್ಯಾಯ ಸುರಕ್ಷಾ ಸಂಹಿತೆಯಲ್ಲಿ ನಾಗರಿಕರ ಮೇಲೆ ಪೊಲಿಸರು ಬೇಕಾಬಿಟ್ಟಿ ಅಧಿಕಾರ ಚಲಾಯಿಸಲು ಅವಕಾಶವಿಲ್ಲದಂತೆ ಈ ಹಿಂದೆ ಇದ್ದ ಪ್ರಕ್ರಿಯಾತ್ಮಕ ರಕ್ಷಣೆಗಳನ್ನು ತೆಗೆದು ಹಾಕಿ ಪೊಲಿಸ್ ಸರ್ವಾಧಿಕಾರಕ್ಕೆ ಕೊಟ್ಟಿರುವ ಅವಕಾಶಗಳು ಮೋದಿ ಸರ್ಕಾರದ ಅಸಲೀ ಉದ್ದೆಶಗಳನ್ನು ಬಯಲು ಮಾಡುತ್ತವೆ. ಕೆಲವು ಉದಾಹರಣೆಗಳನ್ನು ನೋಡೊಣ
*ರಾಜದ್ರೋಹವನ್ನು ದೇಶದ್ರೋಹಗೊಳಿಸಿದ ಮೋದಿ ಸಂಹಿತೆ*
ಹೊಸ ಭಾರತೀಯ ಶಿಕ್ಷಾ ಸಂಹಿತೆಯಲ್ಲಿ ರಾಜದ್ರೋಹ -ಸೆಡಿಷನ್ ಪದವಿಲ್ಲ. ಆದರೆ ಸೆಡಿಶನ್ ರೀತಿಯ ಅಪರಾಧವನ್ನು ಹೊಸ ವ್ಯಕ್ಯಾನದಡಿಯಲ್ಲಿ ಸೆಕ್ಷನ್ ೧೫೦ರಲ್ಲಿ ಸೇರಿಸಲಾಗಿದೆ. ಅದರ ಪ್ರಕಾರ: “Whoever, purposely or knowingly, by words, either spoken or written, or by signs, or by visible representation, or by electronic communication or by use of financial mean, or otherwise, excites or attempts to excite, secession or armed rebellion or subversive activities, or encourages feelings of separatist activities or endangers sovereignty or unity and integrity of India; or indulges in or commits any such act shall be punished with imprisonment for life or with imprisonment which may extend to seven years and shall also be liable to fine”
ಅಂದರೆ “ಯಾವುದೇ ವ್ಯಕ್ತಿ ಉದ್ದೇಶಪೂರ್ವಕವಾಗಿ ಅಥವಾ ಪ್ರಜ್ನಾ ಪೂರ್ವಕವಾಗಿ ಬರಹ ಅಥವಾ ಮಾತುಗಳಮೂಲಕ, ಸಂಜ್ನೆಗಳ ಮೂಲಕ, ದೃಶ್ಯ ಸಂಕೇತಗಳ ಮೂಲಕ, ಅಥವಾ ವಿದ್ಯುನ್ಮಾನ ಸಂವಹನದ ಮೂಲಕ ಅಥವಾ ಹಣಕಾಸು ಸಾಧನಗಳ ಮೂಲಕ ಅಥವಾ ಇನ್ನು ಯಾವುದೇ ಬಗೆಯಲ್ಲಿ ಭಾರತದ ಸಾರ್ವಭೌಮತೆ ಹಾಗೂ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರತ್ಯೇಕತಾ ಮನೋಭವವನ್ನು ಉತ್ತೇಜಿಸುವ, ಬುಡಮೇಲು ಕೃತ್ಯಗಳಿಗೆ ಅಥವಾ ದೆಶ ವಿಭಜನಾ ಅಥವಾ ಸಶಸ್ತ್ರ ಬಂಡಾಯಕ್ಕೆ ಪ್ರಚೋದಿಸುವ ಕ್ರಿಯೆಗಳನ್ನು ಮಾಡಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷ ಶಿಕ್ಷೆ ಮತ್ತು ದಂಡವನ್ನು ಕೂಡ ವಿಧಿಸುವ ಶಿಕ್ಷೆಗೆ ಗುರಿಯಗುವರು”
ಆದರೆ ಸೆಕ್ಷನ್ ೧೫೦ರ ಪ್ರಕಾರ ಪ್ರತ್ಯೇಕತ ಮನೋಭಾವದ ಉತ್ತೇಜನ ಮತ್ತು ಬುಡಮೇಲು ಕೃತ್ಯಗಳು ಯಾವುವು ಎಂಬುದು ನಿರ್ವಚನ ಮಾಡಿಲ್ಲ. ಸರ್ಕಾರದ ವಿರುದ್ಧ ಅವಿಶ್ವಾಸ ಮೂಡಿಸುವ ಪ್ರಕ್ರಿಯೆಯು ದೇಶದ ವಿರುದ್ಧ ಪ್ರತ್ಯೇಕತ ಭಾವನೇ ಮೂಡಿಸುವ ಅಪರಾಧದ ಭಾಗವೇ ಎಂದು ಬಿಜೆಪಿ ಸರ್ಕಾರಗಳು ಉದ್ದಕ್ಕೊ ವಾದಿಸುತ್ತಾ ಬಂದಿವೆ. ಅದಕ್ಕೆ ಹೊಸ ಮಸೂದೆಯ ಈ ಸೆಕ್ಷನ್ ೧೫೦ ಇನ್ನಷ್ಟು ಕಸುವನ್ನೇ ತುಂಬುತ್ತದೆ. ಇದಕ್ಕೆ ಏಳು ವರ್ಷಗಳಿಂದ- ಜೀವಾವಧಿ ಶಿಕ್ಷೆ ಇರುವುದರಿಂದ ಅಮಾಯಕರಿಗೆ ತೆಳಹಂತದ ಕೋರ್ಟೂಗಳಲ್ಲಿ ಜಾಮೀನು ಸಿಗುವುದಿಲ್ಲ. ಮೇಲಿನ ಹಂತದಲ್ಲೂ ಕಷ್ಟ.
*ಜನಹೋರಾಟಗಳನ್ನು ಟೆರರಿಸ್ಟ್ ಎನ್ನುವ ಬಿಎನ್ಎಸ್ ಕಾಯಿದೆ*
ಮೋದಿ ಸರ್ಕಾರದ ಭಾರತೀಯ ನ್ಯಾಯ ಸಂಹಿತೆ- ಬಿಎನ್ಎಸ್- ಎಂಬ ಈ ಹೊಸ ಶಿಕ್ಷ ಸ್ಮೃತಿಯಲ್ಲಿ UAPA ನಂತಹ ವಿಶೇಷ ಕಾಯಿದೆಗಳಡಿಯಿದ್ದ ಭಯೋತ್ಪಾದನಾ ಅಪರಾಧಗಳನ್ನು ಸಾಮಾನ್ಯ ಶಿಕ್ಷಾ ಸ್ಮೃತಿಯಡಿ ತಂದಿದೆ. ಇದರಲ್ಲಿ ಪ್ರಧಾನವಾಗಿ ಟೆರರಿಸಂ ಎಂದರೆ ಬಾಂಬು ಬಂದೂಕ ಬಳಸಿ ದೇಶದಲ್ಲಿ ಅಶಾಂತಿ, ಪ್ರತ್ಯೇಕತೆ, ವಿಭಜ್ನೆ ಮತ್ತು ಭಯೋತ್ಪಾದನೆ ಉಂಟು ಮಡುವುದು ಎಂದು ನಿರ್ವಚಿಸಲಾಗಿದೆ. ಅಷ್ಟೆ ಆಗಿದ್ದರೆ ಪರವಾಗಿಲ್ಲ.
ಈ ಹೊಸ ಕಾಯಿದೆಯ ಸೆಕ್ಷನ್
111. (iv) ನಲ್ಲಿ:
an act of detaining any person and threatening to kill or injure such person in order to compel the Government to do or abstain from doing any act..”
ಎಂಬ ವಾಕ್ಯಗಳನ್ನು ಭಯೋತ್ಪಾದನಾ ಅಪರಾಧಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂದರೆ “ಸರ್ಕಾರವು ಯಾವುದಾದರೂ ಒಂದು ಕೆಲಸವನ್ನು ಮಾಡಲು ಅಥವಾ ಮಾಡದಿರಲು ಯಾವುದಾದರೂ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳುವುದು ಮತ್ತು ಅವರನ್ನು ಕೊಲ್ಲುವ ಅಥವಾ ಗಾಯಗೊಳಿಸುವ ಬೆದರಿಕೆ ಒಡ್ಡುವುದೂ” ಸಹ ಈ ಹೊಸ ಕಾಯ್ದೆಯ ಪ್ರಕಾರ ಭಯೋತ್ಪಾದನೆಯಾಗುತ್ತದೆ. ಅಂದರೆ ರೈತರು ಮತ್ತು ಆದಿವಾಸಿಗಳು ತಮ್ಮನ್ನು ಎತ್ತಂಗಡಿ ಮಾಡಲು ಬರುವ ಅಧಿಕಾರಿಗಳಿಗೆ ಘೇರಾವ್ ಹಾಕುವುದನ್ನೂ ಸಹ ಹೊಸ ಕಾಯಿದೆಯಡಿಯಲ್ಲಿ “ಭಯೋತ್ಪಾದನೆ” ಎಂದು ಬಣ್ಣಿಸಬಹುದು.
ಅಷ್ಟು ಮಾತ್ರವಲ್ಲ. ಅದೇ ಸೆಕ್ಷನ್ನಿನ:
111 6) a) “ (ii) commits, or attempts, or conspires to commit terrorist acts by any means, directly or indirectly;” ಎಂದು ಹೇಳುತ್ತದೆ. ಅಂದರೆ: “ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ, ಇನ್ನು ಯಾವುದಾದರೂ ಬಗೆಯಿಂದ ಭಯೋತ್ಪಾದನಾ ಕೃತ್ಯವನ್ನು ಮಾಡಿದರೆ ಅಥವಾ ಮಾಡಲು ಪ್ರಯತ್ನಿಸಿದರೆ ಅಥವಾ ಸಂಚು ಮಾಡಿದರೆ”.. ಅದನ್ನು ಭಯೋತ್ಪಾದನಾ ಕೃತ್ಯವೆಂದು ಪರಿಗಣಿಸಲಾಗುತ್ತದೆ.
ಇಲ್ಲಿ ಯಾವುದಾದರೂ ಬಗೆಯೆಂದರೇನು? ಪರೋಕ್ಷ ರೀತಿ ಎಂದರೇನು ? ಎಂಬುದನ್ನು ಮಸೂದೆಯು ಅಮೂರ್ತವಾಗಿರಿಸಿದೆ. ಇಂಥಾ ಅವಕಾಶಗಳನ್ನು ಬಳಸಿಕೊಂಡೇ ಸರ್ಕಾರವು ಅಮಾಯಕ ರೈತರನ್ನು, ಆದಿವಾಸಿಗಳನ್ನು , ಅಲ್ಪಸಂಖ್ಯಾತರನ್ನು ವರ್ಷಗಟ್ಟಲೇ ಜೈಲುಗಳಲ್ಲಿ ಕೊಳೆಹಾಕಿದೆ. ಹತ್ತಾರು ವಸ್ರ್ಹಗಳ ನಂತರ ಅವರುಗಳು ಅಮಾಯಕರೆಂದು ಸಾಬೀತಾಗಿ ಜೈಲಿನಿಂದ ಬಿಡುಗಡೆಯಾಗಿ ಬರುತ್ತಿದ್ದಾರೆ. ಕಾರ್ಪೊರೇಟ್ ಉದ್ದಿಮೆಗಳಿಗಾಗಿ ರೈತರ-ಆದಿವಾಸಿಗಳ ಜಮೀನನ್ನು ಕಿತ್ತುಕೊಳ್ಳುವ, ಕಾರ್ಮಿಕರ ಮೇಲೆ ಇನ್ನಷ್ಟು ಶೋಷಕ ಕಾನೂನುಗಳನ್ನು ಜಾರಿ ಮಾಡಲು ಸಿದ್ಧವಾಗುತ್ತಿರುವ ಮೋದಿ ಸರ್ಕಾರ ಅದಕ್ಕೆ ಪೂರ್ವಭಾವಿಯಾಗಿ ಅಂಥ ಹೋರಾಟಗಳ ವಿರುದ್ಧ ಪುಟಿದೇಳಬಹುದಾದ ಜನಹೋರಾಟಗಳನ್ನು ಕ್ರೂರವಾಗಿ ಹತ್ತಿಕ್ಕುವ ಸಲುವಾಗಿಯೇ ಈ ಹೊಸ ಕಾಯಿದೆಗಳನ್ನು ತಂದಿದೆ.
*ಪೊಲೀಸ್ ಭಯೋತ್ಪಾದನೆಯನ್ನು ಕಾನೂನುಬದ್ಧಗೊಳಿಸಿದ ಬಿಎನ್ಎಸ್ಎಸ್*
ಈ ಹಿಂದೆ ಇದ್ದ ಸಿ.ಆರ್ಪಿಸಿಯ ಬದಲಿಗೆ ಮೋದಿ ಸರ್ಕಾರ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- ಬಿಎನ್ಎಸ್ಎಸ್- ಜಾರಿಗೆ ತಂದಿದೆ. ಮೊದಲಿನ ಸಿಆರ್ಪಿಸಿ ಪ್ರಕಾರ ವ್ಯಕ್ತಿಯ ಬಂಧನ, ಕಸ್ಟದಿ, ವಿಚಾರಣೆ, ಸಾಕ್ಷ್ಯ ಸಂಗ್ರಹ, ಇತ್ಯಾದಿ ಎಲ್ಲಾ ಪ್ರಕ್ರಿಯೆಗಳಲ್ಲೂ ಅಮಾಯಕರ ಮೇಲೆ ಪೊಲೀಸರು ದೌರ್ಜನ್ಯ ಮಾಡದಂತೆ ತಡೆಯಲು ಪೊಲೀಸರು ಅನುಸರಿಸಲೇಬೇಕಿದ್ದ ಹಲವಾರು ಪ್ರಕ್ರಿಯೆಗಳು ಕಡ್ಡಾಯವಾಗಿತ್ತು. ಡಿಕೆ ಬಸು, ಲಲಿತ್ ಕುಮಾರಿ ಇನ್ನಿತರ ಪ್ರಕರಣಗಳಲ್ಲಿ ಸುಪ್ರೀಂಕೋರ್ಟು ಪೊಲೀಸರ ಅಧಿಕಾರ ದುರ್ಬಳಕೆಯನ್ನು ಕಡಿತಗೊಳಿಸುವ ಹಲವಾರು ನಿರ್ದೇಶನಗಳನ್ನು ನೀಡಿತ್ತು.
ಮಹಿಳೆಯರನ್ನು ರಾತ್ರಿ ವೇಳೆಯಲ್ಲಿ ಕಸ್ಟದಿಗೆ ತೆಗೆದುಕೊಳ್ಳದ, ಕಡ್ಡಾಯವಾಗಿ ಎಫ಼್ಐಆರ್ ದಾಖಲಿಸಿಕೊಳ್ಳಬೇಕೆಂಬ, ಅತಿ ಹೆಚ್ಚೆಂದರೆ ೧೪ ದಿನಗಳಿಗಿಂತ ಹೆಚ್ಚು ಪೊಲೀಸ್ ಕಸ್ಟಡಿಯನ್ನು ನಿರಾಕರಿಸುವ, ಭಯೋತ್ಪಾದಕ ಸ್ವರೂಪದ ಕಲಮುಗಳನ್ನು ಅನ್ವಯ ಮಾಡುವ ಮುನ್ನ ಪೊಲಿಸ್ ಉನ್ನತಾಧಿಕಾರಿಯ ಲಿಖಿತ ಅನುಮತಿ ಕಡ್ಡಾಯ ಮಾಡುವಂಥ ಪ್ರಕ್ರಿಯಾತ್ಮಕ ಕಾನೂನುಗಳು ಪೊಲೀಸ್ ದೌರ್ಜನ್ಯವನ್ನು ಮತ್ತು ಪೊಲಿಸ್ ಭಯೋತ್ಪಾದನೆಯನ್ನು ಕಡಿಮೆಗೊಳಿಸುವ ಆಶಯವನ್ನಾದರೂ ಹೊಂದಿದ್ದವು. ಆದರೆ ಮೋದಿ ಸರ್ಕಾರದ ಈ ಹೊಸ ಬಿಎನ್ಎಸ್ಎಸ್ ಕಾನೂನು ಅಮಾಯಕರಿಗಿದ್ದ ರಕ್ಷಣೆಯನ್ನು ತೆಗೆದು ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ಕೊಡುತ್ತದೆ ಉದಾಹರಣೆಗೆ:
- ಸಂತ್ರಸ್ತರು ಠಾಣೆಗೆ ದೂರನ್ನು ಸಲಿಸಿದರೆ ಎಫ಼್ಐ ಅರ್ ದಾಖಲು ಮಾಡದೆ ಠಾಣೆಯಲ್ಲೇ ಬಲಿಷ್ಟರ ಪರವಾಗಿ ನ್ಯಾಯ ಪಂಚಾಯ್ತಿ ಮಾಡುವ ಭ್ರಷ್ತಾಚಾರವನ್ನು ತಡೆಯಲೆಂದೇ ೨೦೧೪ರಲ್ಲಿ ಸುಪ್ರೀಂ ಕೋರ್ಟು ಕಡ್ಡಾಯವಾಗಿ ಎಲ್ಲಾ ದೂರುಗಳನ್ನು ಎಫ಼್ ಐ ಆರ್ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಆದರೆ ಮೋದಿಯ ಹೊಸ ಕಾನೂನು ೩-೭ ವರ್ಷಗಳ ಅವಧಿಯವರೆಗಿನ ಶಿಕ್ಷೆಯನ್ನು ವಿಧಿಸಬಹುದಾದ ಅಪರಾಧಗಳಿಗೆ ಅಂದರೆ ಕೊಲೆ ಪ್ರಯತ್ನ, ಆಕ್ರಮಣ, ದರೋಡೆ, ಆಸಿಡ್ ದಾಳಿಯಂಥ ೮೮ ಅಪರಾಧಗಳಿಗೆ ಸಂಬಂಧಪಟ್ಟಂತೆ ಬರುವ ದೂರುಗಳು ಎಫ಼್ಐ ಆರ್ ಮಾಡಲು ಯೋಗ್ಯವೋ ಅಲ್ಲವೋ ಎಂದು ತೀರ್ಮಾನಿಸುವ ಅಧಿಕಾರವನ್ನು ಮತ್ತೆ ಠಾಣೆಯ ಪೊಲಿಸ್ ಅಧಿಕಾರಿಗೆ ಮರಳಿಸಿದೆ.
- ಈ ಹಿಂದೆ ಭಯೋತ್ಪಾದನೆ ಸಂಬಂಧಿ ಅಪರಾಧಗಳ ಕಾನೂನನ್ನು ಅನ್ವಯಿಸುವ ಮುನ್ನ ಠಾಣಾಧಿಕಾರಿ ಎಸ್ಪಿ ಮಟ್ಟದ ಅಧಿಕಾರಿಯ ಗಮನಕ್ಕೆ ತಂದು ಲಿಖಿತ ಅನುಮತಿ- ಸ್ಯಾಕ್ಷನ್- ಪಡೆಯಬೇಕಿತ್ತು. ಈಗ ಅದರ ಅಗತ್ಯವಿಲ್ಲ.
- ಈವರೆಗೆ ಯಾವುದಾದರೂ ಆರೋಪಿಯನ್ನು ಪೋಲೀಸರು ಹೆಚ್ಚೆಂದರೆ ೧೪ ದಿನಗಳ ಕಾಲ ಮಾತ್ರ ತಮ್ಮ ಕಸ್ಟಡಿಗೆ ಕೇಳಬಹುದಿತ್ತು. ಆದರೆ ಮೋದಿ ಸರ್ಕಾರ ಈ ಅವಧಿಯನ್ನು ೬೦-೯೦ ದಿನಗಳವರೆಗೆ ವಿಸ್ತರಿಸುತ್ತದೆ.
- ಪೊಲಿಸರು ಈವರೆಗೆ ೯೦ ದಿನಗಳಲ್ಲಿ ಚಾರ್ಜ್ ಶೀಟನ್ನು ದಾಖಲಿಸಬೇಕಿತ್ತು. ೯೦ ದಿನಗಳೊಳಗೆ ದಾಖಲಿಸದಿದ್ದಲ್ಲಿ ಆರೋಪಿಗೆ ದಿಫ಼ಾಲ್ಟ್ ಜಾಮೀನು ಸಿಗುತ್ತಿತ್ತು. ಕೇವಲ ಭಯೋತ್ಪಾದನಾ ಪ್ರಕರಣಗಳಲ್ಲಿ ಮಾತ್ರ ಈ ಅವಧಿಯನ್ನು ೧೮೦ ದಿನಗಳಗೆ ವಿಸ್ತರಿಸಲಾಗುತ್ತಿತ್ತು. ಈಗ ಆ ಸೌಲಭ್ಯವನ್ನು ಈ ಹೊಸ ಕಾನೂನು ಸಾಮಾನ್ಯ ಪ್ರಕರಣಗಳಲ್ಲೂ ಪೊಲಿಸರಿಗೆ ಒದಗಿಸಿ ಅಮಾಯಕರನು ಇನ್ನಷ್ಟು ಜೈಲಲ್ಲಿ ಕೊಳೆಯುವುದನ್ನು ಕಾನೂನುಬದ್ಧಗೊಳಿಸಿದೆ.
- ಮೊದಲು ಬೇಕಾಬಿಟ್ಟಿ ಕೈಕೋಳ ಹಾಕುತ್ತಿದ್ದ ಪೋಲಿಸರ ಕ್ರಮವನ್ನು ಸುಪ್ರೀಂ ಕೋರ್ಟು ಆಕ್ಶೇಪಿಸಿತ್ತು. ಈಗ ಬ್ರಿಟಿಷರ ಕಾಲದಂತೆ ಭಾರತೀಯ ನಾಗರಿಕರಿಗೆ ಕೇವಲ ಆರೋಪಿಗಳಾಗಿದ್ದರೂ ಕೈಕೋಳ ಹಾಕಿ ಅವಮಾನಿಸುವ ಅಧಿಕಾರವನ್ನು ಮೋದಿ ಸರ್ಕಾರ ಕೆಲವು ಶರತ್ತುಗಳನ್ನು ವಿಧಿಸಿ ಪೊಲೀಸರಿಗೆ ಕೊಟ್ಟಿದೆ.
- ಮಹಿಳೆಯರನ್ನು ಈವರೆಗೆ ರಾತ್ರಿ ವೇಳೆಯಲ್ಲಿ ಬಂಧಿಸುವಂತಿರಲಿಲ್ಲ. ಈಗ ಅದಕ್ಕೆ ಕೆಲವು ಶರತ್ತಿನೊಂದಿಗೆ ಅವಕಾಶ ಮಾಡಿಕೊಡಲಾಗಿದೆ.
- ಆರೋಪಿಯು ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದರೆ “ಎಲ್ಲಾ ಸಾಧನಗಳನ್ನು ಬಳಸಿ ಅದನ್ನು ತಡೆಯುವ ಅವಕಾಶ” ಅರ್ತಾತ್ ಗುಂಡು ಹಾರಿಸುವ ಅವಕಾಶ ಅರ್ಥಾತ್ ನಕಲಿ ಎನ್ ಕೌಟರ್ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಹೊಸ
*ಭಾರತೀಯ ಸಾಕ್ಷ್ಯ ಅಧಿನಿಯಮದ*
ಪ್ರಕಾರ ಸಾಕ್ಷ್ಯ ಸಂಗ್ರಹ, ವಿಚಾರಣೆಗಳನ್ನು ಕಡ್ಡಾಯ ವಿಡಿಯೋಗ್ರಫ಼ಿ ಮಾಡಬೇಕು. ಅಲ್ಲದೆ ಸಾಕ್ಷ್ಯ ಸಂಗ್ರಹ ಮಾಡುವಾಗ ಪೊಲಿಸರ ಜೊತೆ ಕಡ್ಡಾಯವಾಗಿ ಫ಼ೊರೆನ್ಸಿಕ್ ಪರಿಣಿತರು ಇರಬೇಕು ಮತ್ತು ಸರ್ಕಾರೇತರ ಫ಼ೊರೆನ್ಸಿಕ್ ಪರಿಣಿತರು ಫ಼ೊರೆನ್ಸಿಕ್ ವರದಿ ಕೊಡಬೇಕು. ಆದರೆ ಇಂದು ನಮ್ಮ ದೇಶದಲ್ಲಿ ಇವನ್ನು ಪೂರೈಸಲು ಬೇಕಾದ ಸೌಲಭ್ಯಗಳಾಗಲೀ, ಮಾನವ ಸಂಪನ್ಮೂಲಗಳಾಗಲಿ ಇಲ್ಲವೇ ಇಲ್ಲ.ಈ ಪ್ರಕ್ರಿಯೆಗಳನ್ನು ಪೂರೈಸದಿದ್ದರೆ ಅದೇ ಆರೋಪಿಯ ಬಿಡುಗಡೆಗೂ ದಾರಿಯಾಗುತ್ತದೆ.
ಮತ್ತೊಂದೆಡೆ ಅಮಿತ್ ಶಾ ಅವರು ಮೂರು ವರ್ಷಗಳಲ್ಲಿ ನ್ಯಾಯ ತೀರ್ಮಾನ ಕೊಡಲಾಗುವುದು ಎಂದು ಘೋಷಿಸಿದ್ದಾರೆ. ಆದರೆ ಫ಼ೊರೆನ್ಸಿಕ್ ವರದಿಗಳು ಬರುವುದೇ ಹಲವು ವರ್ಷಗಳ ನಂತರ! ಹೀಗಾಗಿ ಅಮಿತ್ ಶಾ ಅವರ ಘೋಷಣೆಯೂ ಸುಳ್ಳು. ಮತ್ತು ಈ ಹೊಸ ಫ಼ೊರೆನ್ಸಿಕ್ ಶರತ್ತುಗಳು ಪ್ರಭಾವಶಾಲಿ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳುವ ರಹದಾರಿಯೂ ಆಗಿದೆ.
*ಹೊಸ ಎಮರ್ಜೆನ್ಸಿಯನ್ನು ಸೋಲಿಸೋಣ*
ಒಟ್ಟಿನಲ್ಲಿ ಯಾವ ತಯಾರಿ, ಸಿಬ್ಬಂದಿ ಹಾಗೂ ಸಂಪನ್ಮೂಲಗಳ ಲಭ್ಯತೆಯ ಪರಿವೇ ಇಲ್ಲದೆ ಜಾರಿಗೆ ತಂದಿರುವ ಈ ಹೊಸ ಕಾನೂನುಗಳ ಉದ್ದೆಶವೇ ಜನರನ್ನು ಭಯೋತ್ಪಾದಕರೆಂದು ಪರಿಗಣಿಸುವ, ಸರ್ಕಾರದ ಕಾರ್ಪೊರೇಟ್ ಪರ ಹಾಗೂ ಜನಶೋಷಕನೀತಿಗಳ ವಿರುದ್ಧದ ಜನಹೋರಾಟಗಳನ್ನು ಟೆರರಸ್ಟ್ ಎಂದು ಘೋಷಿಸುವ ಬ್ರಿಟಿಷರಿಗಿಂತ ಕ್ರೂರವಾದ ವಸಾಹತು ಶಾಹಿ ಉದ್ದೆಶಗಳನ್ನೇ ಹೊಂದಿದೆ.
ದೇಶದ ಮೇಲೆ ಶಾಶ್ವತವಾದ ಎಮರ್ಜೆನ್ಸಿ ಯನ್ನು ಹೇರುವ ಹುನ್ನಾರವನ್ನು ಹೊಂದಿದೆ. ಹೀಗಾಗಿ ಈ ಹೊಸ ಬ್ರಿಟಿಶರ ಹೊಸ ಕ್ರಿಮಿನಲ್ ಕಾಯಿದೆಗಳ ವಿರುದ್ಧ ಜನತೆ ದೊಡ್ಡ ಹೋರಾಟವನ್ನೇ ಹೂಡಬೇಕಿದೆ. ಅದಕ್ಕೆ ಮೊದಲು ಜನಸಂಘಟನೆಗಳು ಈ ಹೊಸ ಕಾಯಿದೆಗಳ ಪರಿಣಾಮಗಳ ಬಗ್ಗೆ ತಮ್ಮ ಕಾರ್ಯಕರ್ತರಲ್ಲಿ ಮತ್ತು ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಅಲ್ಲವೇ?
- ಶಿವಸುಂದರ್
ಜನಪರ ಚಿಂತಕರು, ಲೇಖಕರು…
Leave a reply