ಕೊಪ್ಪ : ಪೂರ್ಣಚಂದ್ರ ತೇಜಸ್ವಿಯವರು ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಿದ್ದ ಸಮಯದಲ್ಲಿ ಬಾಲ್ಯಾವಸ್ಥೆಯಲ್ಲಿದ್ದವರು. ನಂತರ ಇಲ್ಲಿನವರ ಆಡಳಿತದ ಕಾಲದಲ್ಲಿ ಬೆಳೆದು ಪ್ರಭುದ್ದರಾದವರು. ಆ ಕಾಲಘಟ್ಟದ ಆರ್ಥಿಕ, ಸಾಮಾಜಿಕ, ರಾಜಕೀಯ ಆಗುಹೋಗುಗಳು ಹಾಗೂ ತಲ್ಲಣಗಳನ್ನು ಕಂಡುಕೊಂಡು ಬಂದವರು. ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಲೋಹಿಯಾ ಅವರ ಸಮಾಜವಾದದ ಪ್ರಭಾವಕ್ಕೆ ಒಳಗಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಶಿವರಾಮಕಾರಂತರು ಹಾಗೂ ಕುವೆಂಪು ಈ ಮೂರು ವ್ಯಕ್ತಿಗಳು ತೇಜಸ್ವಿಯವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದವರಾಗಿದ್ದರು ಎಂದು ನಂದಕುಮಾರ್ ಕುಂಬ್ರಿಉಬ್ಬು ಅವರು ಹೇಳಿದರು.

ಮೈಸೂರಿನಲ್ಲಿ ಎಂ ಡಿ ನಂಜುಂಡಸ್ವಾಮಿ, ಎನ್ ಡಿ ಸುಂದರೇಶ, ಎ ರಾಮದಾಸ್, ಕಡಿದಾಳ್ ಶಾಮಣ್ಣ ಮೊದಲಾದವರಾಗಿದ್ದರು. ಇವರೆಲ್ಲರೂ ಲೋಹಿಯಾ ಸಮಾಜವಾದಿಗಳಾಗಿದ್ದರು ಆರಂಭದಲ್ಲಿ ಹಲವು ಸಾಮಾಜಿಕ ಚಳವಳಿಯ ಭಾಗವಾಗಿ ತೊಡಗಿಸಿಕೊಂಡಿದ್ದ ಪೂರ್ಣ ಚಂದ್ರ ತೇಜಸ್ವಿ ನಂತರ ಮೈಸೂರಿನಿಂದ ಮಲೆನಾಡಿನ ಮೂಡಿಗೆರೆಗೆ ಬಂದು ಕೃಷಿಕರಾಗಿ ತೊಡಗಿಸಿಕೊಂಡು ಸಾಹಿತ್ಯ, ಸಂಗೀತ, ಬರೆಹಗಾರಿಕೆ, ಛಾಯಾಗ್ರಹಣ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಅವರು ಸೃಜನಶೀಲ ಸಾಹಿತ್ಯವನ್ನು ರಚಿಸುತ್ತಿದ್ದಗಲೂ ನಾಡಿನ ಸಮಕಾಲೀನ ರಾಜಕೀಯ, ಸಾಮಾಜಿಕ ಆಗುಹೋಗುಗಳಿಗೆ ಸ್ಪಂದಿಸುತ್ತಾ ಬರೆಹಗಳನ್ನು ಬರೆಯುತ್ತಾ ಬಂದರು ಎಂದರು. ಆರಂಭದಲ್ಲಿ ನವ್ಯ ಸಾಹಿತ್ಯದ ಪ್ರಭಾವ ಅವರ ಬರೆಹಗಳಲ್ಲಿ ಒಂದಷ್ಟು ಕಂಡು ಬಂದರೂ ನಂತರ ಅವರು ತಮ್ಮ ಸಾಹಿತ್ಯ ಹಾಗೂ ಬರೆಹಗಳಲ್ಲಿ ಅವರದೇ ಆದ ಪ್ರತ್ಯೇಕ ದಾರಿ ಕಂಡುಕೊಂಡರು. ವೈಚಾರಿಕ ಪ್ರಬುದ್ಧತೆಯನ್ನು ಬೆಳೆಸಿಕೊಂಡವರು ಎಂದರು.

ಸೋವಿಯತ್ ರಷ್ಯ ಹೊಡೆದು ಹೋದುದಕ್ಕೆ ರಷ್ಯಾದೊಳಗಿನ ಬಿಕ್ಕಟ್ಟು ಹಾಗೂ ಅಂತರಾಷ್ಟ್ರೀಯ ಕಾರಣವೂ ಇರಬಹುದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಾಜವಾದಿ ಬಣ, ಬಂಡವಾಳಶಾಹಿ ಬಣ ಎರಡೂ ಶೀತಲ ಸಮರದಲ್ಲಿ ತೊಡಗಿದ್ದಾಗ ಸಮಾಜವಾದಿ ಬಣವನ್ನು ನಾಶ ಮಾಡಲು ಬಂಡವಾಳಶಾಹಿ ಬಣ ಪ್ರಯತ್ನಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ರಷ್ಯಾದೊಳಗೆ ಸಮಾಜವಾದಿ ವ್ಯವಸ್ಥೆಯನ್ನು ಕಟ್ಟದೇ ಹೋಗಿದ್ದರಿಂದಾಗಿ ಅದರೊಳಗೆ ಬಂಡವಾಳವಾದ ಬೆಳೆದು ರಷ್ಯಾ ಸೋವಿಯತ್ ಯೂನಿಯನ್ ಹೊಡೆದು ಅದು ಪತನವಾಯಿತು. ಈ ವಿಷಯದ ಬಗ್ಗೆ ಅವರಿಗೆ ಸ್ಪಷ್ಟತೆ ಇರಲಿಲ್ಲ ಎಂದರು.

ಜಾಗತೀಕರಣವನ್ನು ಒಂದೆಡೆ ಬೆಂಬಲಿಸಿದ್ದರೂ ನಂತರ ಅದರಿಂದಾಗುತ್ತಿರುವ ಜನರ ಮೇಲಿನ ಕೆಟ್ಟ ಪರಿಣಾಮಗಳ ಬಗ್ಗೆಯೂ ಸ್ಪಷ್ಟವಾಗಿಯೇ ಬರೆದರು. “ನಾನು ಜಾಗತೀಕರಣವನ್ನು ಬೆಂಬಲಿಸಲೂ ಇಲ್ಲ ವಿರೋಧಿಸಲೂ ಇಲ್ಲ ಎಂದು ತೇಜಸ್ವಿ ಒಂದೆಡೆ ಹೇಳುತ್ತಾರೆ. ಆದರೆ ಜಾಗತೀಕರಣಕ್ಕೆ ದೇಶ ತೆರೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ತೇಜಸ್ವಿ ಪ್ರತಿಪಾದಿಸಿದ್ದರು. ಜಾಗತೀಕರಣದ ಭಾಗವಾದ ಖಾಸಗೀಕರಣವನ್ನು ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದ ಅವರು ಖಾಸಗೀಕರಣವು ಏಕಸ್ವಾಮ್ಯ ಬಂಡವಾಳ ಬೆಳೆಯದಂತೆ ಸರಕಾರ ಅವಕಾಶ ಕೊಡದೇ ನಿಯಂತ್ರಿಸಬೇಕೆಂದು ಪ್ರತಿಪಾದಿಸಿದರು. ಆದರೆ ಇದು ಚೀನದಂತಹ ದೇಶಗಳಲ್ಲಿ ಸಾದ್ಯವಾಗಿದ್ದರೂ ನಮ್ಮಂತಹ ದೇಶಗಳಲ್ಲಿ ಇದು ಸಾಧ್ಯವಾಗುವ ವಿಚಾರವಲ್ಲ ಎಂಬುದನ್ನು ತೇಜಸ್ವಿ ಯೋಚಿಸದೇ ಹೋದರು ಎಂದರು. ಆಗಾಗಿನ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಅವರು ಯೋಚನೆ ಮಾಡಿದರು. ಅವರ ಬರೆಹ ಹಾಗೂ ಚಿಂತನೆಗಳಲ್ಲಿ ಅಸ್ತಿತ್ವವಾದದ ಪ್ರಭಾವ ಕಾಣುತ್ತದೆ. ರೈತಸಂಘ, ರೈತ ಹೋರಾಟಗಳ ಬಗ್ಗೆ ಆಸಕ್ತಿ ಇರಿಸಿಕೊಂಡಿದ್ದರು”, ನಾವು ತೇಜಸ್ವಿಯವರ ಬರೆಹಗಳು ಬಗ್ಗೆ ಸಾಹಿತ್ಯದ ಬಗ್ಗೆ ಇನ್ನು ಹಲವು ಕಾಲದವರೆಗೆ ಚಿಂತನೆ ಮಂಥನ ನಡೆಸುತ್ತಿರಬೇಕಾಗುತ್ತದೆ. ತೇಜಸ್ವಿಯವರನ್ನು ಯುವ ಬರೆಹಗಾರರು ಸಾಹಿತಿಗಳು ಸಾಹಿತ್ಯ, ರಾಜಕೀಯ, ಸಾಮಾಜಿಕ ಚಿಂತನೆಗಳಿಗಾಗಿ ಹಾಗೂ ಸಮಕಾಲೀನ ಆಗುಹೋಗುಗಳ ಸ್ಪಂದನೆಗಳ ರೀತಿಗಳಿಗಾಗಿ ಆದ್ಯಯನ ಮಾಡಬೇಕಾದ ಅಗತ್ಯ ಇರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ, ಬರೆಹಗಾರ ಹಾಗೂ ಚಿಂತಕ ನಂದಕುಮಾರ್ ಕುಂಬ್ರಿಉಬ್ಬು ಹೇಳಿದರು.

“ಸರ್ಕಾರೀ ವ್ಯವಸ್ಥೆ ಹೇಗೆ ಜನರನ್ನು ಸಿಕ್ಕುಗಳಿಗೆ ಸಿಕ್ಕುಹಾಕುತ್ತದೆ ತುಂಬಾ ಚೆನ್ನಾಗಿ ತೇಜಸ್ವಿಯವರು ತಮ್ಮ ಕೆಲವು ಕೃತಿಗಳಲ್ಲಿ ಅನಾವರಣಗೊಳಿಸಿದ್ದಾರೆ. ಅವರು ಜನಸಾಮಾನ್ಯರ ದೈನಂದಿನ ಬದುಕಿನ ಸಮಸ್ಯೆಗಳ ಬಗ್ಗೆ ಸರಳವಾಗಿ ಬರೆಯುತ್ತಾ ಕನ್ನಡದಲ್ಲಿ ತಮ್ಮದೇ ಆದ ಸಾಹಿತ್ಯಧಾರೆಯನ್ನು ಹರಿಸಿದರು.
ಅವರು ತಮ್ಮ ಸಾಹಿತ್ಯದಲ್ಲಿ ಪರಿಸರ ಮತ್ತು ಮನುಷ್ಯರ ನಡುವಿನ ಸಂಬಂಧದ ಬಗ್ಗೆ ಹೇಳುತ್ತಾ, ಪರಿಸರ ಬರಿಯ ಮರ, ಗಿಡ, ಬಳ್ಳಿಗಳಿಗೆ ಮಾತ್ರ ಸೀಮಿತವಾಗದೇ ಅದು ಮನುಷ್ಯರೂ ಕೂಡ ಅದರ ಅವಿಭಾಜ್ಯ ಅಂಗ ಎಂಬುದನ್ನು ತೇಜಸ್ವಿ ಅವರು ಪ್ರತಿಪಾದಿಸುತ್ತಾರೆ. ಮೌಡ್ಯಗಳ ಬಗ್ಗೆಯೂ ಕೂಡ ಅವರು ತಮ್ಮ ಸಾಹಿತ್ಯದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.

ನವ್ಯದ ನಂತರ ಬಂದ ಲೇಖಕರಲ್ಲಿ ಇಂತಹ ಚಿಂತನೆಯುಳ್ಳವರು ವಿರಳ. ಕಲಿಕೆಯ ಮಾಧ್ಯಮ ಮಾತೃ ಭಾಷೆಯಲ್ಲಿದ್ದಾಗ ಮಾತ್ರ ಸರಿಯಾಗಿ ಗ್ರಹಿಸಲು ಕಲಿಯಲು ಸಾಧ್ಯವಾಗುತ್ತದೆ. ಹಾಗಾಗಿ ಹೈಸ್ಕೂಲುವರೆಗಿನ ಶಿಕ್ಷಣ ಮತೃ ಭಾಷೆ ಇಲ್ಲವೇ ಪರಿಸರದ ಭಾಷೆಯಾಗಬೇಕೆಂದು ತೇಜಸ್ವಿ ಪ್ರತಿಪಾದಿಸುತ್ತಾ ಬಂದಿದ್ದರು. ಆಂಗ್ಲ ಮಾಧ್ಯಮವಾದಾಗ ಅದರಿಂದ ವಿಲಕ್ಷಣತೆ ಮಕ್ಕಳಲ್ಲಿ ಬೆಳೆಯತೊಡಗುತ್ತದೆ ಎಂದು ಅವರು ಉದಾಹರಣೆಗಳೊಂದಿಗೆ ಹೇಳಿದ್ದರು.
ಆದರೆ ಕನ್ನಡ ಅನ್ನದ ಭಾಷೆಯಲ್ಲ ಎಂಬ ವಾದವನ್ನು ಹಲವಾರು ಸಾಹಿತಿಗಳು ಹೇಳುತ್ತಲೇ ಬರುತ್ತಿದ್ದಾರೆ.
ಆದರೆ ಈ ನಾಡಿನ ರೈತರು, ಕಾರ್ಮಿಕರು, ಸಣ್ಣಪುಟ್ಟ ವ್ಯವಹಾರಸ್ಥರು ಸೇರಿದಂತೆ ಬಹುಸಂಖ್ಯಾತ ಜನರಿಗೆ ಕನ್ನಡವೇ ಅನ್ನದ ಭಾಷೆಯಾಗಿದೆ ಎಂಬ ಸತ್ಯವನ್ನು ಮರೆಮಾಚುತ್ತಾ ಬರಲಾಗುತ್ತಿದೆ. ಇದರಿಂದ ಕನ್ನಡಕ್ಕೆ ಬಹಳ ಹಾನಿಯಾಗುತ್ತಿದೆ. ಕನ್ನಡವನ್ನು ಉನ್ನತ ಶಿಕ್ಷಣವೂ ಸೇರಿದಂತೆ ಶಿಕ್ಷಣದ ಎಲ್ಲಾ ರಂಗಗಳಲ್ಲೂ ಅಳವಡಿಸುತ್ತಾ ಬೆಳೆಸಬೇಕಾದ ಕರ್ತವ್ಯವನ್ನು ಸರ್ಕಾರ ಸೇರಿದಂತೆ ಯಾರೂ ತೆಗೆದುಕೊಳ್ಳದೇ ಇರುವುದೇ ಕರ್ನಾಟಕದ ಹಾಗೂ ಕನ್ನಡದ ಒಂದು ಪ್ರಧಾನ ಸಮಸ್ಯೆಯಾಗಿದೆ ಎಂದು ನಂದಕುಮಾರ್ ಹೇಳಿದರು. ಲೇಖಕರಾಗಿ, ಕಾದಂಬರಿಕಾರರಾಗಿ, ಸೃಜನಶೀಲ ವ್ಯಕ್ತಿಯಾಗಿ, ಪರಿಸರ-ಪ್ರಾಣಿ-ಪಕ್ಷಿಗಳ ಬಗ್ಗೆ ತೀವ್ರ ಕುತೂಹಲಕಾರಿ ವ್ಯಕ್ತಿಯಾಗಿ ತೇಜಸ್ವಿಯವರನ್ನು ಗಂಭೀರವಾಗಿ ಅಧ್ಯಯನ ಮಾಡುವುದು ಇಂದಿನ ಯುವಜನಾಂಗದ ತುರ್ತು ಅಗತ್ಯಗಳಲ್ಲೊಂದು” ಎಂದು ನುಡಿದರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಚಿಕ್ಕಮಗಳೂರು ಜಿಲ್ಲೆ, ಸಿರಿಗನ್ನಡ ವೇದಿಕೆ ಕೊಪ್ಪ ತಾಲ್ಲೂಕು, ಸಹ್ಯಾದ್ರಿ ಲಯನ್ಸ್ ಕ್ಲಬ್ ಕೊಪ್ಪ ಇವರ ಸಹಯೋಗದಲ್ಲಿ ಕೊಪ್ಪದ ಲಕ್ಕವಳ್ಳಿ ಮಂಜಪ್ಪನಾಯಕ ಸಭಾಭವನದಲ್ಲಿ ಕೊಪ್ಪ ತಾಲ್ಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷ ಚಾವಲ್ಮನೆ ಸುರೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ‘ತೇಜಸ್ವಿ ಚಿಂತನೆ-ಸಮಕಾಲೀನ ತಲ್ಲಣಗಳಿಗೆ ಉತ್ತರ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ನಂದಕುಮಾರ್ ಅವರು ಮಾತನಾಡಿದರು.

ಈ ಸಭೆಯಲ್ಲಿ ಚಕೋರ ಜಿಲ್ಲಾ ಸಂಚಾಲಕ ಧನಂಜಯಮೂರ್ತಿ, ಚಾವಲ್ಮನೆ ಸುರೇಶ್ ನಾಯಕ್ ಮಾತನಾಡಿದರು. ಸಹ್ಯಾದ್ರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರಭಾ ಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ಲಯನ್ಸ್ ಕ್ಲಬ್ ನ ಮಹಿಳಾ ಸದಸ್ಯರಿಂದ ಕನ್ನಡ ಗೀತಗಾಯನ ನಡೆಯಿತು. ಸುಧೀರ ಕುಮಾರ್ ಮೂರೊಳ್ಳಿ, ದುರ್ಗಾಚರಣ್, ನವೀನ್ ಮಾವಿನಕಟ್ಟೆ, ಡಾ.ಅನಿತಾನಟರಾಜ್, ಶೈಲಾ ಶೇಷಪ್ಪ, ನಿಲುಗುಳಿ ಪದ್ಮನಾಭ್, ಜಿನೇಶ್ ಇರ್ವತ್ತೂರು, ನಾಗರಾಜ್ ಬಿ.ಡಿ., ರೇಣುಕಾಭಾರತಿ, ಜುಬೇರ್ ಅಹಮದ್, ಫ್ರಾನ್ಸಿಸ್ ಕಾರ್ಡೋಜ, ಜಗದೀಶ್, ಶುಕುರ್ ಅಹಮದ್, ಕಾವೇರಪ್ಪ, ಶಾಂತಾಗೋಪಾಲಗೌಡ, ಗೋಪಾಲಗೌಡ, ಜಯಮ್ಮ, ಸುಮಗೌರಿಗದ್ದೆ, ರೂಪಕಲಾ, ಸುನೀತಾ ನೆಲಗದ್ದೆ, ಸಿದ್ದಿಕ್, ರಾಜಾಶಂಕರ್ ಮುಂತಾದವರು ಉಪಸ್ಥಿತರಿದ್ದರು.





Leave a reply