ಕೊಪ್ಪ : ಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಪ್ಪ ತಾಲ್ಲೂಕು ಸಿರಿಗನ್ನಡ ವೇದಿಕೆ ವತಿಯಿಂದ ಬುಧವಾರದಂದು ಕನ್ನಡ ರಾಜೋತ್ಸವವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಚಿಂತಕ ನೆಂಪೆ ದೇವರಾಜ್ ಅವರು ಮಾತನಾಡಿ, ‘ಭಾಷೆ ಎನ್ನುವುದು ಒಂದು ಅಸ್ಮಿತೆ, ಒಂದು ಸಂಸ್ಕೃತಿ. ಅದು ಮನುಷ್ಯನಿಗೆ ಆಹಾರ, ನೀರು, ಗಾಳಿಯಷ್ಟೇ ಮುಖ್ಯವಾದುದು. ಭಾಷೆಯ ಆಧಾರದ ಮೇಲೆ ರಾಜ್ಯಗಳ ಪುನರ್ವಿಂಗಡಣೆಯಾಗಬೇಕೆಂಬ ಕೂಗು ಮೊದಲು ತೆಲುಗು ಭಾಷೆಯ ಆಂಧ್ರದಿಂದ ಶುರುವಾಗಿ ಕರ್ನಾಟಕದಲ್ಲೂ ವ್ಯಾಪಕವಾಗಿ ಚಳುವಳಿಗಳು ನಡೆದು 1956ರ ನವೆಂಬರ್ 1ರಂದು ಮೈಸೂರು ರಾಜ್ಯದ ಉದಯವಾಯಿತು. ಆಗ ಕನ್ನಡ ನಾಡಿನ ಏಕೀಕರಣದ ಪರವಾಗಿ ಬಲವಾಗಿ ನಿಂತವರಲ್ಲಿ ನಿಜಲಿಂಗಪ್ಪ, ಶಾಂತವೇರಿ ಗೋಪಾಲಗೌಡರು, ಕುವೆಂಪು ಮುಂತಾದವರು ಮುಖ್ಯರು’ ಎಂದು ಅಭಿಪ್ರಾಯಪಟ್ಟರು. ಗೋಕಾಕ್ ವರದಿ ಜಾರಿಯಾದ ನಂತರ ಕನ್ನಡ ಪ್ರಥಮ ಭಾಷೆಯಾಗಿ, ಆಡಳಿತ ಭಾಷೆಯಾಗಿದ್ದರೂ ಸಹ ಕನ್ನಡಿಗರ ಪರಿಸ್ಥಿತಿ ಸುಧಾರಣೆಯಾಗಿದೆಯೇ ಎಂಬ ಪ್ರಶ್ನೆ ಯಾವಾಗಲೂ ಕಾಡುತ್ತದೆ ಎಂದರು. ಇಂದು ಸಹಸ್ರಾರು ಸಂಖ್ಯೆಯಲ್ಲಿ ಯುವಜನರು ಐಟಿಬಿಟಿಯಲ್ಲಿ ಕೆಲಸ ಮಾಡುತ್ತಾರೆ. ಅಷ್ಟೇ ಸಹಸ್ರಾರು ಎಕರೆ ಭೂಮಿ ಯಾರದ್ದೋ ಪಾಲಾಗಿದೆ. ಯಾರು ಭೂಮಿಯನ್ನು ಕೊಟ್ಟರೋ, ಯಾರು ಟೆಕ್ ಪಾರ್ಕ್ ಗಳನ್ನು ನಿರ್ಮಾಣ ಮಾಡಿದ್ರೋ ಅವರ ಗೇಟು ಕಾಯುವಂತಹ ಪರಿಸ್ಥಿತಿ ಕನ್ನಡಿಗರಿಗೆ ಎದುರಾಗಿದೆ ಎಂದರು. ಗಾರೆಗೆಲಸದಿಂದ ಹಿಡಿದು ಐಟಿಬಿಟಿಯವರೆಗೆ ಕನ್ನಡ ಭಾಷೆಯ ಮೇಲೆ ದಾಳಿ ನಡೆಯುತ್ತಿದೆ ಎಂದರು. ಜಾಗತೀಕರಣ, ಖಾಸಗೀಕರಣ, ಉದಾರೀಕರಣದ ನಂತರ ಕನ್ನಡ ಭಾಷೆಯ ಮೇಲೆ ಇಂಗ್ಲಿಷ್, ಹಿಂದಿ ಏರಿಕೆಯ ಪ್ರಾಬಲ್ಯ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅವರು ಕೊಪ್ಪ ತಾಲ್ಲೂಕು ಸಿರಿಗನ್ನಡ ವೇದಿಕೆ ಹಾಗೂ ಕೊಪ್ಪ ಸರ್ಕಾರೀ ಪ್ರಥಮ ದರ್ಜೆ ಕಾಲೇಜಿನ ಮಹಾಕವಿ ಕುವೆಂಪು ವೇದಿಕೆ ಸಂಯುಕ್ತ ಆಶ್ರಯದಲ್ಲಿ ಕೊಪ್ಪ ಸರ್ಕಾರೀ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸಿರಿಗನ್ನಡ ವೇದಿಕೆ ಅಧ್ಯಕ್ಷ ಚಾವಲ್ಮನೆ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ಭಾಷಾ ಚಳುವಳಿ ನಾವು ಕಲಿಯಬೇಕಾದ ಪಾಠಗಳು’ಎಂಬ ವಿಷಯವಾಗಿ ಉಪನ್ಯಾಸ ನೀಡುತ್ತಾ ಮಾತನಾಡಿದರು.

‘ಕರ್ನಾಟಕ ಏಕೀಕರಣವಾಗಿ 70ವರ್ಷಗಳು ಕಳೆದರೂ ನಮ್ಮ ಭಾಷಾ ಸವಾಲುಗಳು ಹಾಗೇ ಇವೆ. ನಂತರ ನಡೆದ ಚಳುವಳಿಗಾರರಲ್ಲಿ ಮ.ರಾಮಮೂರ್ತಿ, ವಾಟಾಳ್ ನಾಗರಾಜ್ ಮುಂತಾದವರು ಮುಖ್ಯರು. ನಂತರ ನಡೆದ ಗೋಕಾಕ್ ಚಳುವಳಿಯ ತೀರ್ವತೆ ಒಂದು ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನೇ ಕಿತ್ತು ಕಾಂಗ್ರೆಸ್ಸೇತರ ಸರ್ಕಾರವನ್ನು ತರುವಷ್ಟು ಪ್ರಬಲವಾಗಿತ್ತು. ಗೋಕಾಕ್ ಚಳುವಳಿಯಲ್ಲಿ ಡಾ.ರಾಜ್ ಕುಮಾರ್ ಅವರ ಪಾಲ್ಗೊಳ್ಳುವಿಕೆಯಿಂದ ಅಪಾರ ಜನಬೆಂಬಲದಿಂದ ತತ್ತರಿಸಿದ ಸರ್ಕಾರ ಗೋಕಾಕ್ ವರದಿಯಲ್ಲಿನ ಅಂಶಗಳನ್ನು ಜಾರಿಗೆ ತರುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆದರೆ ಇಂದು ಬೆಂಗಳೂರಿನಂಥ ನಗರಗಳಲ್ಲಿ ಕನ್ನಡಿಗರು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಪ್ರಾಬಲ್ಯ ಜಾಸ್ತಿಯಾಗಿದೆ. ಚಳುವಳಿ, ಹೋರಾಟಗಳು ಇಂದು ಸತ್ತು ಹೋಗಿವೆ ಎಂದು ಕಿಡಿ ಕಾರಿದರು. ಡಿಜಿಟಲೈಜೇಷನ್ ಬಂದ ಮೇಲೆ ಕನ್ನಡ ಮೂಲೆಗುಂಪಾಗುತ್ತಿದೆ. ಕನ್ನಡ ನಾಡು ನಮ್ಮ ಹಿರಿಯರ ಚಳುವಳಿ, ಹೋರಾಟಗಳಿಂದ ರೂಪುಗೊಂಡಿದೆ ಎಂಬುದನ್ನು ಇಂದು ರಾಜ್ಯೋತ್ಸವ ಆಚರಿಸುತ್ತಿರುವ ನಾವು ಮರೆಯಬಾರದು ‘ಎಂದು ಅವರು ನುಡಿದರು.

ಕಾಲೇಜು ಪ್ರಾಂಶುಪಾಲ ಡಾ.ಅನಂತ ಎಸ್.ಅವರು ಉದ್ಘಾಟಿಸಿ ಮಾತನಾಡಿದರು. ಕೊಪ್ಪ ಸಹ್ಯಾದ್ರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರಭಾ ಪ್ರಕಾಶ್, ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ನಿರಂಜನ ಎ.ಆರ್., ಕನ್ನಡ ವಿಭಾಗದ ಮುಖ್ಯಸ್ಥ ಡಾ.ಧನಂಜಯಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ಈ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಂದ್ರ ಅವರನ್ನು ಸನ್ಮಾನಿಸಲಾಯಿತು. ಸುನೀತಾ ನೆಲೆಗದ್ದೆ ಹಾಗೂ ಶ್ಯಾಮಲಾ ನಾರ್ವೆ ಅವರಿಂದ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಿತು. ‘ಕನ್ನಡ ನಾಡು, ನುಡಿ, ಜನ’ ಈ ವಿಷಯವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಸಂಜನ, ಕೀರ್ತನ, ಸಿಂಚನ ಇವರುಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದರು. ಈ ಸಭೆಯಲ್ಲಿ ನಂದಕುಮಾರ್, ಜಿನೇಶ್ ಇರ್ವತ್ತೂರು, ಶಾಂತಾ ಗೋಪಾಲಗೌಡ, ಚನ್ನಪ್ಪ, ನಿಲುಗುಳಿ ಪದ್ಮನಾಭ್, ರೇಣುಕಾ, ಅಣ್ಣಯ್ಯ, ರೂಪ ಬಿ.ಟಿ., ಫಾತಿಮಾ, ಹರೀಶ್, ಕಾವೇರಪ್ಪ, ಫ್ರಾನ್ಸಿಸ್ ಡಿಸೋಜ ಮುಂತಾದವರಿದ್ದರು.




Leave a reply