ಈ ಬಾರಿ ಸರ್ಕಾರಿ ದಸರಾದ ಉದ್ಘಾಟನಾ ಗೌರವಕ್ಕೆ ಬೂಕರ್ ಪ್ರಶಸ್ತಿ ವಿಜೇತೆ ಹಾಗೂ ಬಂಡಾಯ ಹಿನ್ನೆಲೆಯ ಸಾಹಿತಿ ಬಾನು ಮುಶ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಬಿಜೆಪಿ ಮತ್ತದರ ಪಟಾಲಂ ನಿರೀಕ್ಷಿತವಾಗಿಯೇ ವಿರೋಧಿಸುತ್ತಿದೆ. ಎಂದಿನಂತೆ ಸಾಮಾನ್ಯ ಜನರ ಧಾರ್ಮಿಕ ನಂಬಿಕೆಗಳನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರದ ನೇತೃತ್ವದಲ್ಲಿ ನಡೆಯುವ ನಾಡಹಬ್ಬವೂ ಕೂಡ ಸಾರದಲ್ಲಿ ಹಿಂದೂಗಳಿಂದ ಹಿಂದೂಗಳಿಗಾಗಿ ಮಾಡುವ ದಸರಾ ಅಗಿರಬೇಕು ಎಂಬಂತ ಕುತರ್ಕಗಳನ್ನು ಮುಂದಿಡುತ್ತಿದ್ದಾರೆ. ಇದು ಅವರ ಹಿಂದೂ ರಾಷ್ಟ್ರವಾದಿ ಅಜೆಂಡಾದ ಮುಂದುವರಿಕೆಯೇ ಆಗಿದ್ದು ಅತ್ಯಂತ ಅಪಾಯಕಾರಿಯೂ ಆಗಿದೆ. ಬಿಜೆಪಿಯ ವಿರೋಧದಲ್ಲಿ ಯಾವುದೇ ತರ್ಕವಿಲ್ಲದಿದ್ದರೂ ದಸರಾ ಹಬ್ಬಕ್ಕಿರುವ ಹಿಂದೂ ಪೌರಾಣಿಕ ಬೇರುಗಳು, ಮೈಸೂರು ರಾಜಸತ್ತೆಯ ಭಾಗವಾಗಿ ಆಚರಣೆಯಾಗುತ್ತಿದ್ದ ದಸರಾದ ಇತಿಹಾಸ, ಹಾಗೂ ಸಮಾಜದಲ್ಲಿ ಇನ್ನೂ ಆಳವಾಗಿ ಬೇರುಬಿಡದ ಸೆಕ್ಯುಲಾರ್-ಪ್ರಜಾತಾಂತ್ರಿಕ ಮೌಲ್ಯಗಳಿಂದಾಗಿ ಬಿಜೆಪಿಗಳ ಪ್ರಚಾರಕ್ಕೆ ಒಂದಷ್ಟ್ಯು ಜನರು ಕಿವಿಗೊಡುವಂತೆ ಮಾಡುತ್ತಿದೆ. ಆದರೆ ಅದಕ್ಕೆ ಕಾಂಗ್ರೆಸ್ ಸರ್ಕಾರದ ಪ್ರತಿಕ್ರಿಯೆ ಎಂದಿನಂತೆ ಓಟು ರಾಜಕಾರಣದ ಚೌಕಟ್ಟಿನ್ನು ಬಿಟ್ಟು ಹೊರಬರುತ್ತಿಲ್ಲ.
ಆದರೆ ನಾಡನ್ನು ಸೆಕ್ಯುಲಾರ್ ಆಗಿ ಮತ್ತು ಪ್ರಗತಿಪರವಾಗಿ ಪುನರ್ ರೂಪಿಸಬೇಕಿದ್ದ, ಬಾನು ಮುಶ್ತಾಕ್ ಅವರು ಭಾಗವಾಗಿದ್ದ ಬಂಡಾಯದಂತ ಪ್ರತಿರೋಧಗಳೂ ಸಹ ಬಾನು ಅವರ ಭಾಗೀದಾರಿಕೆಯನ್ನು ಸಮರ್ಥಿಸಿಕೊಳ್ಳುವುದಕ್ಕೆ ಸೀಮಿತವಾಗಿಬಿಟ್ಟಿದೆ. ಇದು ಸಹಜವಾಗಿಯೇ ಬಿಜೆಪಿಯ ಹಿಂದೂತ್ವಕ್ಕೆ ಒಡ್ಡಬೇಕಿದ್ದ ಜನಪರ ಸಿದ್ಧಾಂತಿಕ ಪ್ರತಿರೋಧದ ಮೊನಚು ಮತ್ತು ಹರಹನ್ನು ಕಡಿಮೆ ಮಾಡಿಬಿಟ್ಟಿದೆ. ಈ ಮಧ್ಯೆ ಬಾನು ಮುಶ್ತಾಕ್ ಅವರೂ ಸಹ “ಚಾಮುಂಡೇಶ್ವರಿಯೇ ನನ್ನನ್ನು ಕರೆಸಿಕೊಳ್ಳುತ್ತಿದ್ದಾಳೆ” ಎಂಬ ಹೇಳಿಕೆಯನ್ನು ಕೊಟ್ಟು, ಕುಂಕುಮ ಧರಿಸಿ ಬಾಗಿನ ಸ್ವೀಕರಿಸಿ ನಾಡಹಬ್ಬದ ಹಿಂದುವೀಕರಣವನ್ನು ಪರೋಕ್ಷವಾಗಿ ಒಪ್ಪಿಕೊಂಡುಬಿಟ್ಟಿದ್ದಾರೆ. ಹೀಗಾಗಿ ಈ ಬಾರಿಯ ಸರ್ಕಾರಿ ದಸರಾವನ್ನು ಬಂಡಾಯ ಸಾಹಿತಿ ಬಾನು ಮುಷ್ತಾಕ್ ಉದ್ಘಾಟಿಸುತ್ತಿರುವ ವಿದ್ಯಮಾನ ಅದನ್ನು ವಿರೋಧಿಸುತ್ತಿರುವರ ಬ್ರಾಹ್ಮಣೀಯ ಹಿಂದೂತ್ವವಾದವನ್ನು ಮತ್ತು ಬಂಡಾಯದ ದ್ವಂದ್ವವನ್ನು ಏಕಕಾಲಕ್ಕೆ ಮುಂದಿಟ್ಟಿದೆ.
ಅದೇನೇ ಇದ್ದರೂ ದಸರಾ ವಿದ್ಯಮಾನದಲ್ಲಿ ಬ್ರಾಹ್ಮಣೀಯ ಹಿಂದೂತ್ವವಾದಿ ಬಿಜೆಪಿಗಳು ಮುಂದಿಡುತ್ತಿರುವ ಹಿಂದೂತ್ವವಾದಿ ತರ್ಕಗಳ ಹಿಂದಿರುವುದು ಮುಸ್ಲಿಮರನ್ನು ಅನ್ಯಗೊಳಿಸುವ ಹುನ್ನಾರ ಮಾತ್ರವಲ್ಲ. ಇದರ ಹಿಂದೆ ಅಬ್ರಾಹ್ಮಣ ಶೂದ್ರ ಮತ್ತು ದಲಿತ ಪ್ರಜ್ನೆಯನ್ನು ಮತ್ತೊಮ್ಮೆ ಬ್ರಾಹ್ಮಣ್ಯಕ್ಕೆ ಅಧೀನಗೊಳಿಸುವ ಆಳವಾದ ಸಾಂಸ್ಕೃತಿಕ ಕುತಂತ್ರಗಳೂ ಇವೆ. ಅದರ ಜೊತೆಗೆ ಮುಸ್ಲಿಂ-ಅಬ್ರಾಹ್ಮಣ ಮೈತ್ರಿಯನ್ನು ಒಡೆದುಹಾಕುವ ಚಾರಿತ್ರಿಕ ಸಂಚುಗಳ ಮುಂದುವರೆಕೆಯೂ ಇದೆ. ಏಕೆಂದರೆ ಈ ಸಂಚುಗಳು ಮುಸ್ಲಿಂ-ಅಬ್ರಾಹ್ಮಣ ಐಕ್ಯ ಅಹವಾಲಿನಿಂದಾಗಿ ನಾಲ್ಮಡಿ ಮಹಾರಾಜರು 1920 ರಲ್ಲಿ ಮೀಸಲಾತಿ ಜಾರಿ ಮಾಡಿ ಬ್ರಾಹ್ಮಣ ಅಧಿಪತ್ಯವನ್ನು ಕಡಿಮೆ ಮಾಡಿದ ಕಾಲದಿಂದಲೂ ನಡೆಯುತ್ತಾ ಬಂದಿವೆ. ಬಾನು ಮುಶ್ತಾಕ್ ವಿರೋಧ ಅದರ ಮುಂದುವರೆಕೆಯಷ್ಟೆ. ಹೀಗಾಗಿ ಸಂಘಿಗಳ ಬಾನು ಮುಶ್ತಾಕ್ ವಿರೋಧಿ ವಾದಗಳ ಹಿಂದಿನ ಹಿಂದುತ್ವವಾದಿ ಬ್ರಾಹ್ಮಣ್ಯದ ರಾಜಕೀಯವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ.
ನಾಡಹಬ್ಬವೋ? ಬ್ರಾಹ್ಮಣೀಯ ಸಂಸ್ಕೃತಿಯ ಯಾಜಮಾನ್ಯವೋ?
ಬಾನು ಮುಶ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದಾದರೆ ಚಾಮುಂಡಿಗೆ ನಮಿಸಿ, ಸೀರೆ ಮತ್ತು ಕುಂಕುಮ ಉಟ್ಟು ಹಿಂದೂಗಳಂತೆ ಬರಲಿ ಎಂಬುದು ಸಂಘಿ ಬಿಜೆಪಿಗಳು ಶುರು ಮಾಡಿರುವ ಹೊಸ ವರಸೆ. ಒಂದು ಪ್ರಜಾತಂತ್ರದಲ್ಲೂ ಹಿಂದೂ ಬ್ರಾಹ್ಮಣೀಯ ಪುರಾಣದ ಬೇರುಗಳು ಮತ್ತು ಸಂಕೇತಗಳು ಇರುವ ಆಚರಣೆಯನ್ನು ಸೆಕ್ಯುಲಾರ್ ನಾಡಹಬ್ಬವೆಂದು ಘೋಷಿಸಿ ಆ ಸಂಕೇತಗಳನ್ನು ಹಾಗೇಯೇ ಉಳಿಸಿಕೊಳ್ಳುವ ರಾಜಿ ಸಂಧಾನಗಳು ಮುಂದುವರೆದಾಗ ಈ ಪ್ರಶ್ನೆಗಳು ಸಹಜವಾಗಿಯೇ ಹುಟ್ಟುತ್ತವೆ. ಹಾಗೇ ನೋಡಿದರೆ ದಸರಾ ಎಂಬ ಪುರಾಣವೇ ಮೈಸೂರಿನ ಮೂಲನಿವಾಸಿಗಳ ಶೂದ್ರ-ದಲಿತ ಸಾಂಸ್ಕೃತಿಕ ಗುರುತನ್ನು ನಿರಾಕರಿಸಿ ಬ್ರಾಹ್ಮಣ್ಯವನ್ನು ಹೇರುವ ಆಚರಣೆ ಎಂಬ ಪ್ರತಿರೋಧ ಮೈಸೂರಿನಲ್ಲಿ ಕಳೆದ ಹಲವಾರು ವರ್ಷಾಗಳಿಂದ ದಾಖಲಾಗುತ್ತದೆ. ಬ್ರಾಹ್ಮಣ್ಯದ ದಸರಾವನ್ನು ವಿರೋಧಿಸಿ ಮೂಲನಿವಾಸಿಗಳ “ಮಹಿಷ ದಸರಾ” ಆಚರಿಸಲಾಗುತ್ತಿದೆ. ಬಿಜೆಪಿ ಮತ್ತು ಸಂಘಿಗಳು ಈ ಮಹಿಶ ದಸರಾವನ್ನು ಸೈದ್ಧಂತಿಕವಾಗಿ ವಿರೋಧಿಸುತ್ತಾ ಬಂದಿದ್ದರೆ ಕಾಂಗ್ರೆಸ್ ಸರ್ಕಾರವೂ ಸಹ ಮಹಿಶಾ ದಸರಾಗೆ ಅಧಿಕೃತ ತಡೆಯನ್ನೊಡ್ಡುತ್ತಲೇ ಬಂದಿದೆ.
ಬಾನು ಮುಶ್ತಾಕ್-ಸರ್ಕಾರದ ಅತಿಥಿಯೇ ಹೊರತು ಪೂಜಾರಿಯಲ್ಲ!
ಅದೇನೇ ಇರಲಿ. ದಸರಾ ಹಬ್ಬವನ್ನು ನಾಡಿನ ಎಲ್ಲಾ ಜನರಿಂದ ಆಯ್ಕೆಯಾದ ಸರ್ಕಾರ ನಾಡಹಬ್ಬ ಎಂದು ಘೋಷಿಸಿದೆ. ಮತ್ತು ಅದಕ್ಕೆ ಬಾನು ಮುಶ್ತಾಕ್ ಅವರನ್ನು ಸರ್ಕಾರವು “ಸ್ಟೇಟ್ ಗೆಸ್ಟ್” – ಸರ್ಕಾರದ ಅತಿಥಿ ಯಾಗಿ ಕರೆದಿದೆ. ಪೂಜಾರಿಯಾಗಿ ಅಲ್ಲ. ಹೀಗಾಗಿ ಬಾನು ಮುಶ್ತಾಕ್ ಅವರು ಸೀರೆ ಕುಂಕಮ ಉಟ್ಟು ಚಾಮುಂಡಿಗೆ ನಮಿಸಿದರೆ ಮಾತ್ರ ಬರಲಿ ಎಂಬ ವಾದದ ಹಿಂದೆ ಈ ನಾಡು ಪ್ರಧಾನವಾಗಿ ಹಿಂದೂಗಳಿಗೆ ಸೇರಿದ್ದು ಎಂಬ ಹಿಂದೂತ್ವದ ಠೇಂಕಾರ ಎದ್ದು ಕಾಣುತ್ತದೆ. ನಾಡಹಬ್ಬವು ಹಿಂದೂಗಳಿಂದ ಹಿಂದೊಗಳಿಗಾಗಿ ನಡೆಸಬೇಕು ಎನ್ನುವ ಕೋಮುವಾದಿ ಆಗ್ರಹವಿದೆ. ದಸರಾವನ್ನು ಸರ್ಕಾರ ನಾಡಹಬ್ಬ ಎಂದು ಘೋಷಿಸಿದ್ದರೂ ಅದನ್ನು ಮುಸ್ಲಿಮರ ರಂಜಾನ್ ಇತರ ಮುಸ್ಲಿಮ್ ಹಬ್ಬಗಳಿಗೆ ಹೋಲಿಸುವುದರ ಹಿಂದೆ, ಮತ್ತು ಆ ಹಬ್ಬಗಳಿಗೆ ಹಿಂದೂಗಳು ಹೋದರೆ ಟೋಪಿ ಹಾಕಿಸಿ ಮಂಡಿಯೂರಿಸುವುದಿಲ್ಲವೇ ಹಾಗೆಯೇ ಬಾನು ಅವರು ಸೀರೆ -ಕುಂಕುಮ ಚಾಮುಂಡಿ ನಮನ ಮಾಡಾಬೇಕೆಂಬ ಬಿಜೆಪಿಗಳ ವಾದದ ಹಿಂದೆ ದಸರಾ, ನಾಡು ಮತ್ತು ಸರ್ಕಾರ ಹಿಂದೂಗಳದ್ದು ಮಾತ್ರ ಎಂಬ ಹಿಂದೂ ರಾಷ್ಟ್ರ ರಾಜಕೀಯ ಸ್ಪಷ್ಟವಾಗಿದೆ. ಹೀಗಾಗಿ ಬಾನು ಅವರು ಸೀರೆ ಉಟ್ಟು, ಕುಂಕುಮ ಧರಿಸಿ ಚಾಮುಂಡಿಗೆ ನಮಿಸಿಯೇ ಸರ್ಕಾರದ ಗೌರವವನ್ನು ಸ್ವೀಕರಿಸಬೇಕೆಂಬ ಸಂಘಿ ಬಿಜೆಪಿಗಳ ವಾದ ಸಾರದಲ್ಲಿ ಬಾನು ಮುಶ್ತಾಕ್ ಅವರನ್ನು ಹಾಗೂ ಮುಸ್ಲಿಂ ಅನನ್ಯತೆಯನ್ನು “ಡಿ-ಇಸ್ಲಾಮೈಸ್” ಮಾಡುವ ಮತ್ತು ದಸರಾವನ್ನು “ಮರುಬ್ರಾಹ್ಮಣೀಕರಿಸುವ” ಸಾಂಸ್ಕೃತಿಕ ಫ಼್ಯಾಶಿಸ್ಟ್ ರಾಜಕಾರಣವಿದೆ.
ಕನ್ನಡ ಭುವನೇಶ್ವರಿಯೋ? ಬ್ರಾಹ್ಮಣ ಭುವನೇಶ್ವರಿಯೋ?
ಕೆಲವು ವರ್ಷಗಳ ಕೆಳಗೆ ನಡೆದ ಜನಸಾಹಿತ್ಯ ಸಮಾವೇಶದಲ್ಲಿ ಬಂಡಾಯ ಸಾಹಿತಿ ಬಾನು ಮುಶ್ತಾಕ್ ಅವರು ಕನ್ನಡ-ಕರ್ನಾಟಕಗಳ ರಾಷ್ಟ್ರೀಯ ಸಂಕೇತಗಳು ಕನ್ನಡ-ಕರ್ನಾಟಕದೊಳಗಿರುವ ಎಲ್ಲರನ್ನೂ ಪ್ರತಿನಿಧಿಸದೇ ಇರುವುದು ಅಥವಾ ಎಲ್ಲರೂ ಆ ಸಂಕೇತಗಳ ಜೊತೆ ಸಂಬಂಧ ವನ್ನು ಕಟ್ಟಿಕೊಳ್ಳಲಾಗದಿರುವಂತೆ ಇರುವುದನ್ನು ಪ್ರಶ್ನಿಸಿದ್ದರು. ಅಂತಾ ಸಂಕೇತಗಳು ಉಳಿದವರನ್ನು ಸಹಜ ನಾಡಿಗ ತನದಿಂದ ಹೊರಗಿಟ್ಟಂತಾಗುವುದಿಲ್ಲವೇ ಎಂಬ ಬಹಳ ಮುಖ್ಯವಾದ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಇದೇ ಪ್ರಶ್ನೆಯನ್ನು ಮತ್ತೊಂದು ರೀತಿಯಲ್ಲಿ ದೇಶದ ಸ್ವಾತಂತ್ರ್ಯ ಚವಳಿಯಲ್ಲೂ ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಅವರು ಎತ್ತಿದ್ದರು. ಕನ್ನಡ ರಾಷ್ಟ್ರೀಯತೆಯ ನಿರ್ಮಾಣದಲ್ಲಿ, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಈ ನಾಡಿನ ದಲಿತರು, ರೈತಾಪಿಗಳು, ಶೂದ್ರರು, ಅಬ್ರಾಹ್ಮಣರು, ಮುಸ್ಲಿಮರು ಮತ್ತು ಕ್ರಿಸ್ಚಿಯನ್ನರು ಹಿಂದೂ ಬ್ರಾಹ್ಮಣರಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿ ಭಾಗವಹಿಸಿದ್ದಾರೆ. ಆದರೂ ಕರ್ನಾಟಕದ ಸಂಕೇತವಾಗಿ ಕನ್ನಡಾಂಬೆಯನ್ನು ಪರಿಭಾವಿಸಿಕೊಳ್ಳುವಾಗ…
… ಆ ಕನ್ನಡಾಂಬೆಯು ಹಿಂದೂ ಬ್ರಾಹ್ಮಣ ಮಡಿ ಮುತ್ತೈದೆಯನ್ನು ಹೋಲುವಂತೇ ರೇಷ್ಮೆ ಸೀರೆ ಉಟ್ಟು, ಹಣೆಗೆ ಕಾಸಗಲ ಕುಂಕುಮ ಧರಿಸಿರುವ ಭುವನೇಶ್ವರಿ ಆದದ್ದು ಹೇಗೆ? ದೇಶವನ್ನು ಮತ್ತು ನಾಡನ್ನು ತಾಯಿಯ ಜೊತೆಗೆ ಹೋಲಿಸುವುದೇಕೆ? ತಾಯಿಯೇ ಆಗಿದ್ದಲ್ಲಿ ಏಕೆ ಹೊಲದಲ್ಲಿ ಕೆಲಸ ಮಾಡುವ ರೈತಾಪಿ ಹೆಣ್ಣುಮಗಳಾಗಲಿಲ್ಲ? ಪೌರ ಕಾರ್ಮಿಕಳಾಗಲಿಲ್ಲ? ಮಾರಮ್ಮ-ಬೋರಮ್ಮ ಆಗಲಿಲ್ಲ? ಅಥವಾ ಮೇರಿಯಮ್ಮ , ಬೂಬಮ್ಮ ಆಗಲಿಲ್ಲ? ಅಥವಾ ಇತರ ರಾಷ್ಟ್ರೀಯತೆಗಳ ಲಾಂಚನಗಳಿರುವಂತೆ ಇವೆಲ್ಲವನ್ನೂ ಒಳಗೊಳ್ಳುವ ಮತ್ತೊಂದು ಸಂಕೇತ ರೂಪುಗೊಳ್ಳಲಿಲ್ಲ? ಕನ್ನಡವನ್ನು ಬ್ರಾಹ್ಮಣೀಯ ಭುವನೇಶ್ವಾರಿಯಾಗಿ ಪರಿಭಾವಿಸಿದವರು ಯಾರು? ಅದೇ ಆಧಿಕೃತವಾದದ್ದು ಹೇಗೆ?
ಇದು ಕರ್ನಾಟಕ, ಭಾರತ ಮಾತ್ರವಲ್ಲದೆ ಜಗತ್ತಿನ ಎಲ್ಲಾ ರಾಷ್ಟ್ರೀಯತಾ ಹೋರಾಟಗಳಲ್ಲೂ ಬಂದಿರುವ ಪ್ರಶ್ನೆಯೇ. ಈ ರಾಷ್ರೀಯ ವಿಮೋಚನಾ ಹೋರಾಟಗಳಲ್ಲಿ ನಾಡಿನ ಎಲ್ಲಾ ಜನರು-ಧರ್ಮ, ಲಿಂಗ ಜಾತಿ ಬೇಧವಿಲ್ಲದೆ ಭಾಗವಹಿಸಿದ್ದರೂ, ಆದರ ಬೌದ್ಧಿಕ ಮತ್ತು ರಾಜಕೀಯ ನಾಯಕತ್ವ ವಹಿಸುವ ವರ್ಗ, ಜಾತಿಗಳ ಸಂಸ್ಕೃತಿಗಳೆ ನಾಡ ಸಂಸ್ಕೃತಿ ಅಥಾವಾ ರಾಷ್ಟ್ರ ಸಂಸ್ಕೃತಿಯಾಗಿ ಹೇರಲ್ಪಡುತ್ತದೆ. ಅಧಿಕೃತಗೊಳಿಸಲ್ಪಡುತ್ತದೆ. ಅಥವಾ ದಮನಿತರ ಪ್ರಜ್ನೆ ಇನ್ನೂ ಜಾಗ್ರುತಗೊಳ್ಳದ ಕಾಲದಲ್ಲಿ ಅದೇ ಸಹಜ ವೆಂದೂ ಪರಿಭಾವಿಸಲ್ಪಡುತ್ತದೆ. ಅದೂ ಕೇವಲ ಸೀರೆ-ಕುಂಕುಮಗಳಿಗೂ ಸೀಮಿತಾವಾಗಿರುವುದಿಲ್ಲ. ಅದು ಹಿಂದೂ ಬ್ರಾಹ್ಮಣ ಆಹಾರ ಪದ್ಧತಿ, ಸಾಮಾಜಿಕ ಸಂಪ್ರದಾಯ ಇತ್ಯಾದಿಗಳನ್ನು ಶ್ರೇಷ್ತ ಮತ್ತು ಅಧಿಕೃತ ಎಂದು ಹೇರುತ್ತಾ ದಮನಿತರ ಸಾಂಸ್ಕೃತಿಕಾ, ಸಾಮಾಜಿಕ, ರಾಜಕೀಯ ದಾಸ್ಯವನ್ನು ,ಮುಂದವರೆಸುತ್ತದೆ.
ತಿಲಕ್ ವಾದಿ ಕನ್ನಡತ್ವ ಮತ್ತು ಪ್ರಜಾತಂತ್ರಿಕ ಕನ್ನಡತ್ವ
ಕರ್ನಾಟಕ ಏಕೀಕರಣದ ಪ್ರಾರಂಭದ ಅಧ್ವರ್ಯುಗಳೆಲ್ಲರೂ ಹಿಂದೂ ಬ್ರಾಹ್ಮಣ ಅಥವಾ ಇತರ ಬಲಿಷ್ಟ ಜಾತಿಗಳಿಗೆ ಸೇರಿದವರಾಗಿದ್ದರು. ಅದರ ಮುಂಚೂಣಿಯಲ್ಲಿದ್ದ ಉತ್ತರದ ಗಳಗನಾಥರಿಂದ ಹಿಡಿದು ದಕ್ಷಿಣದ ವೀರಕೇಸರಿ ಶ್ರೀನಿವಾಸ ಶಾಸ್ತ್ರಿಗಳವರೆಗೆ ಎಲ್ಲರೂ ತಿಲಕ್ ಮಾದರಿ ರಾಷ್ಟ್ರೀಯತೆಯ ರಾಜಕೀಯದ ಆಳವಾದ ಪ್ರಭಾವಕ್ಕೆ ಒಳಗಾಗಿದ್ದವರು. ಬಾಲಗಂಗಾಧರ ತಿಲಕರ ಭಾರತ ರಾಷ್ಟ್ರೀಯತೆಯು, ಫ಼ುಲೆ-ಅಂಬೇಡ್ಕರರ ರಾಷ್ಟ್ರೀಯತೆಗೆ, ಗಾಂಧಿ-ನೆಹರೂ ರಾಷ್ಟ್ರೀಯತೆಗೆ ತದ್ವಿರುದ್ಧವಾಗಿತ್ತು. ಅದು ಸ್ವರಾಜ್ ಅನ್ನು ಘೊಷಿಸಿದರೂ ಅದು ಬ್ರಾಹ್ಮಣೀಯ ಸ್ವರಾಜ್ ಆಗಿತ್ತು. ಅದು ಭಾರತದ ಸ್ವಾತಂತ್ರ್ಯಾವನ್ನು ಮತ್ತು ಆಧುನಿಕ ರಾಷ್ಟ್ರ ನಿರ್ಮಾಣವನ್ನು ಸೆಕ್ಯುಲಾರ್ ಸಮಾಜವಾದಿಯಾಗಿ ರೂಪಿಸುವುದನ್ನು ಖಡಾಖಂಡಿತವಾಗಿ ನಿರಾಕರಿಸಿತ್ತು. ಬದಲಿಗೆ ಸ್ವಾತಂತ್ರ್ಯವನ್ನು ಮತ್ತು ರಾಷ್ಟ್ರವನ್ನು ಮುಸ್ಲಿಂ ವಿರೋಧಿ ಹಿಂದೂ ಬ್ರಾಹ್ಮಣ ರಾಷ್ಟ್ರದ ಪುನರುತ್ಥಾನವನ್ನಾಗಿ ಕಲ್ಪಿಸಿಕೊಂಡಿತು. ಗಳಗನಾಥರ ಕನ್ನಡಿಗರ ಕರ್ಮಕಥೆ ಇದಕ್ಕೊಂದು ಉದಾಹರಣೆ. ಈ ಪರಿಕಲ್ಪನೆಗೆ ತಕ್ಕಂತೆ ಭಾರತಾಂಬೆ ಮತ್ತು ಭುವನೇಶ್ವರಿಯೂ ಸಹ ಹಿಂದೂ ಬ್ರಾಹ್ಮಣ ಪಡಿಯಚ್ಚಿಲ್ಲಿ ರೂಪುಗೊಂಡಿತು.
ಈ ಸಂಕೇತವು ಹಿಂದೂ ಅಬ್ರಾಹ್ಮಣರನ್ನು ಸಾಂಸ್ಕೃತಿಕವಾಗಿ ಅಧೀನಗೊಳಿಸಿದರೆ, ಹಿಂದೂಗಳಲ್ಲದವರನ್ನು ರಾಜಕೀಯವಾಗಿ ಅನ್ಯಗೊಳಿಸಿತು. ಈ ಅಬ್ರಾಹ್ಮಣರ ಅಧೀನೀಕರಣ, ಹಾಗೂ ಮುಸ್ಲಿಂ-ಕ್ರಿಶ್ಚಿಯನ್ನರ ಅನ್ಯೀಕರಣ ಸ್ವಾತಂತ್ರ್ಯಾನಂತರವೂ ಮುಂದುವರೆಯಿತು. ಆದರೆ ಎಚ್ಚೆತ್ತ ಶೂದ್ರ-ದಲಿತ-ದಮನಿತ ಪ್ರಜ್ನೆ ಪ್ರಶಿಸಲು ಶುರುಮಾಡಿದಾಗ ಅವರನ್ನು ದೇಶದ್ರೋಹಿ, ನಾಡದ್ರೋಹಿ ಎಂದು ಹಿಂದೂ ಬ್ರಾಹ್ಮಣೀಯ ರಾಜಕೀಯ ದಮನಿಸಲು ಪ್ರಯತ್ನಿಸುತ್ತದೆ. ಆದರೆ ಹಿಂದೆ ಕರ್ನಾಟಕದ ದಮನಿತರ ಪ್ರಜ್ನೆ ಜಾಗ್ರುತಗೊಳ್ಳದ ಹೊತ್ತಿನಲ್ಲಿ ಬ್ರಾಹ್ಮಣ ಭುವನೇಶ್ವಾರಿ ಕರ್ನಾಟಕದ ಸಂಕೇತವಾಗಿದ್ದರೂ, ಸಮಬಾಳು-ಸಮಪಾಲಿನ ಪ್ರಜಾತಂತ್ರದಲ್ಲಿ ಅದನ್ನು ಮುಂದುವರೆಸುತ್ತಿರುವ ರಾಜಕಾರಣವನ್ನು ಪ್ರಶ್ನಿಸಬೇಕಾದದ್ದು ಅತ್ಯಂತ ಪ್ರಜಾತಾಂತ್ರಿಕ ಕ್ರಿಯೆ. ಈ ಹಿಂದೆ ಬಾನು ಮತ್ತು ಈ ನಾಡಿನ ಬಂಡಾಯ ಪ್ರಜ್ನೆ ಅದನ್ನು ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರ ದಸರಗೆ ಆಹ್ವಾನಿಸಿದ ತಕ್ಪಣ ಗೌರವವನ್ನು ಒಪ್ಪಿಕೊಂಡು ಈ ಪ್ರಶ್ನೆಗಳನ್ನು ಕೇಳದೆ ಮೌನವಹಿಸುವುದು ಎಷ್ಟು ಸರಿ?
ಅಬ್ರಾಹ್ಮಣ-ಮುಸ್ಲಿಂ ಐಕ್ಯತೆಯ ವಿರುದ್ಧ ಹಿಂದೂ ಬ್ರಾಹ್ಮಣ್ಯದ ಹುನ್ನಾರ
ಬಾನು ಮುಶ್ತಾಕ್ ಅವರನ್ನು ವಿರೋಧಿಸುತ್ತಾ ಅದಕ್ಕೆ ಹಿಂದೂ ಅಸ್ಮಿತೆಯ ಮೇಲೆ ಕಾಂಗ್ರೆಸ್ ದಾಳಿ ಎಂಬ ನೆರೆಟೀವ್ ಕಟ್ಟಿಕೊಡುವುದರ ಹಿಂದೆ ಸಂಘಿಗಳು ಎದುರಿಸುತ್ತಿರುವ ಅತಿ ದೊಡ್ಡ ಆತಂಕಾವೊಂದಿದೆ. ಅದು ಮುಸ್ಲಿಂ-ಅಬ್ರಾಹ್ಮಣರ ಐಕ್ಯತೆಯ ಸವಾಲು. ಅದು ರಾಜಕೀಯವಾಗಿ ಸಾಧ್ಯವಾದರೆ ಹಿಂದೂ ಬ್ರಾಹ್ಮಣ್ಯದ ರಾಜಕಾರಣವೇ ಸೋಲುತ್ತದೆ. ಅದಾಗದಂತೆ ತಡೆಯುವುದೇ ಸಂಘಿ ಸಾವರ್ಕರ್ ರಾಜಕಾರಣದ ಹೂರಣ. ಬಿಜೆಪಿಯ ರಾಜಕೀಯ ಗೆಲುವಿನ ಸಾರವೂ ಇದೆ. ಮೈಸೂರು ಇತಿಹಾಸದಲ್ಲಿ ಟಿಪ್ಪು-ಹೈದರ್ ಅವರ ಹೆಮ್ಮೆಯ ಅಧ್ಯಾಯಗಳನ್ನು ಅಳಿಸಿಹಾಕುವುದು, ಇಲ್ಲದ ಉರಿಗೌಡ ನಂಜೇಗೌಡರ ಮೂಲಕ ಟಿಪ್ಪುವನ್ನು ಕೊಲ್ಲಿಸುವುದು, ದಸರೆಯಲ್ಲಿ ಮುಸ್ಲಿಮರ ಸರಿಸಮ ಪಾಲುದಾರಿಕೆಯನ್ನು ನಿರಾಕರಿಸುವುದು ಮತ್ತು ಅದನ್ನು ಹಿಂದೂ ಬ್ರಾಹ್ಮಣ್ಯದ ಹೆಮ್ಮೆಯನ್ನಾಗಿ ಉಳಿಸಿಕೊಳ್ಳುವುದು ಅವರ ಹಾಲಿ ಕಾರ್ಯಕ್ರಮವಾಗಿದ್ದರೂ ಅದಕ್ಕೆ ಒಂದು ದೊಡ್ಡ ಇತಿಹಾಸವಿದೆ. ಇದಕ್ಕೆ 1920 ರಲ್ಲಿ ನಾಲ್ಮಡಿ ಮಹಾರಾಜರು ಮೀಸಲಾತಿ ನೀಡಿದ ನಂತರ ಮೈಸೂರಿನ ಬ್ರಾಹ್ಮಣಶಾಹಿ ಶಕ್ತಿಗಳು ಅನುಸರಿಸಿದ ಕೋಮುವಾದಿ ರಾಜಕಾರಣ ಒಂದು ದೊಡ್ಡ ಉದಾಹರಣೆ.
ಮೈಸೂರಿನ ಇತಿಹಾಸದ ಈ ಅಧ್ಯಾಯವನ್ನು ಇತಿಹಾಸಕಾರ ಎಸ್. ಚಂದ್ರ ಶೇಖರ್ ಅವರು 1985 ರಲ್ಲಿ ಪ್ರಕಟವಾದ ತಮ್ಮ “Dimensions of socio political change in mysore-1918-1940” ಎಂಬ ಕೃತಿಯಲ್ಲೂ ವಿವರವಾಗಿ ದಾಖಲಿಸಿದ್ದಾರೆ. ಹಾಗೆಯೇ ಮತ್ತೊಬ್ಬ ಇತಿಹಾಸಕಾರ ಮನು ಭಗವಾನ್ ಅವರು “Sovereign Spheres-Princes, Education and Empire in Colonial India” ಎಂಬ ಕೃತಿಯಲ್ಲೂ ಈ ವಿವರಗಳ ದಾಖಲೆ ಇದೆ. ಹಾಗೆಯೇ ಮತ್ತೊಬ್ಬ ಇತಿಹಾಸಕಾರ್ತಿ ಜಾನಕಿ ನಾಯರ್ ಅವರು ಆ ಕಾಲಘಟ್ಟದಲ್ಲಿ ಮಾಹಾರಾಜ ನಾಲ್ಮಡಿ ಮತ್ತು ಮೈಸೂರು ಸಂಸ್ಥಾನದ ಪ್ರಥಮ ಮುಸ್ಲಿಂ ದಿವಾನರಾದ ಮಿರ್ಜಾ ಇಸ್ಮಾಯಲ್ ನೇತೃತ್ವದಲ್ಲಿ ಬದಲಾಗುತ್ತಿದ್ದ ಆರ್ಥಿಕತೆಯ ಬಗ್ಗೆ ತಮ್ಮ“Monarchical Modern-The Making Of Mysore City-1880-1940” ಎಂಬ ಕೃತಿಯಲ್ಲೂ ದಾಖಲಿಸಿದ್ದಾರೆ. ಈ ಐತಿಹಾಸಿಕ ಸಂಶೋಧನಾತ್ಮಕ ಕೃತಿಗಳು ಇಂದಿನ ದಸರೆಯ ನೆಪದಲ್ಲಿ ಹಿಂದೂ ಬ್ರಾಹ್ಮಣ್ಯ ನಡೆಸುವ ಕೋಮುವಾದಿ ರಾಜಕಾರಣದ ಇತಿಹಾಸವನ್ನು ಕಟ್ಟಿಕೊಡುತ್ತವೆ. ಇದು ಆರೆಸ್ಸೆಸ್ ಮತ್ತು ಸಾವರ್ಕರ್ ಗೂ ಪೂರ್ವಭಾವಿಯಾಗಿ ಮತ್ತು ಅದಕ್ಕೆ ಮುನ್ನುಡಿಯಾಗಿ ನಡೆದ ಬೆಳವಣಿಗೆಗಳು.
1928 ರ ಬೆಂಗಳೂರು ಕೋಮುಗಲಭೆ ಮತ್ತು ಬ್ರಾಹ್ಮಣ್ಯದ ಕುತಂತ್ರಗಳು
1920 ರಲ್ಲಿ ಮೈಸೂರಿನ ಮಹರಾಜ ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರು ಅಬ್ರಾಹ್ಮಣರಿಗೆ ಮತ್ತು ಮುಸ್ಲಿಮರಿಗೆ ಮೀಸಲಾತಿಯನ್ನು ಕೊಟ್ಟು ಮೈಸೂರು ಆಡಳಿತಾದಲ್ಲಿ ಬ್ರಾಹ್ಮಣರ ಅಧಿಪತ್ಯವನ್ನು ಕಡಿಮೆ ಮಾಡಿದರು. ಅಲ್ಲದೆ 1926 ರಲ್ಲಿ ತಮ್ಮ ಹಳೆಯ ಮಿತ್ರ ಮಿರ್ಜಾ ಇಸ್ಮಾಯಲರನ್ನು ಮೈಸೂರು ಸಂಸ್ಥಾನದ ಪ್ರಪ್ರಥಮ ದಿವಾನರನ್ನಾಗಿ ಮಾಡಿದರು. ಮಿರ್ಜಾ ಇಸ್ಮಾಯಲರು ಮತ್ತು ನಾಲ್ಮಡಿ ಒಡೆಯರ್ ಅವರೂ ಕೂಡಿಕೊಂಡು ಮೈಸೂರು ಸಂಸ್ಥಾನದಲ್ಲಿ ಸರ್ಕಾರಿ ಪೋಷಿತ ಅರೆ-ಬಂಡವಾಳಶಾಹಿ ಮಾದರಿಯನ್ನು ಹುಟ್ಟುಹಾಕಿದರು. ಜಾನಕಿ ನಾಯರ್ ಅವರು ದಾಖಲಿಸಿರುವಂತೆ ಮಿರ್ಜಾ ಇಸ್ಮಾಯಲರು ಸ್ವದೇಶಿಯಲ್ಲಿ ಮೈಸುರು ಸ್ವದೇಶಿ ಬ್ರಾಂಡ್ ಹುಟ್ಟುಹಾಕಿದರು. 1908 ರಿಂದ ಪ್ರಾರಂಭವಾಗಿದ್ದ ದಸರ ವಸ್ತು ಪ್ರದರ್ಶನವನ್ನು ಮೈಸೂರು ಕೈಗಾರಿಕೆಗಳ ಪ್ರಚಾರ ಸಾಧನವನ್ನಾಗಿ ಬೆಳೆಸಿದರು. ಮತ್ತೊಂದು ಕಡೆ ಒಡೆಯರರ ಸಾಮಾಜಿಕ ನ್ಯಾಯ ನೀತಿಗಳು ಆಡಳಿತದಲ್ಲೂ ಬ್ರಾಹ್ಮಣರ ಅಧಿಪತ್ಯ ಕಡಿಮೆ ಮಾಡಿ ಅಬ್ರಾಹ್ಮಣರ ಹಾಗೊ ಮುಸ್ಲಿಮರ ಪ್ರಾತಿನಿಧ್ಯವನ್ನು ಹೆಚ್ಚು ಮಾಡಿತು.
ಇವೆಲ್ಲದರಿಂದ ಕಂಗೆಟ್ಟಿದ್ದ ಮೈಸೂರಿನ ಬ್ರಾಹ್ಮಣಶಾಹಿ ಶಕ್ತಿಗಳು ಹೇಗೆ ಹಿಂಸಾತ್ಮಕ ಕೋಮುವಾದಿ ಪ್ರತಿರೋಧಗಳಿಗೆ ಇಳಿದರು ಎಂಬುದನ್ನು ಇತಿಹಾಸಕಾರ ಎಸ್. ಚಂದ್ರಶೇಕರ್ ದಾಖಲಿಸುತ್ತಾರೆ. ಮೈಸೂರಿನ ಅಕ್ಕಪಕ್ಕದ ಸಂಸ್ಥಾನಗಳಲ್ಲಿ ಹಿಂದೂ-ಮುಸ್ಲಿಂ ಗಲಭೆಗಳು ಪ್ರಾರಂಭವಾಗಿದ್ದರೂ 1921 ರ ವರೆಗೆ ಮೈಸೂರ ಸಂಸ್ಥಾನದಲ್ಲಿ ಕೋಮುವಾದಿ ಗಲಭೆಗಳ ಇತಿಹಾಸವೇ ಇರಲಿಲ್ಲ. ಆದರೆ ಮೀಸಲಾತಿ ಜಾರಿಯಾದ ನಂತರ 1921 ರಲ್ಲಿ ಚಿಂತಾಮಣಿಯಾಲ್ಲಿ, 1928 ರಲ್ಲಿ ಬೆಂಗಳುರಿನಲ್ಲಿ, 1929 ರಲ್ಲಿ ಚನ್ನಪಟ್ಟಣದಲ್ಲಿ ಹಾಗೂ ಕೆಲವು ವರ್ಷಗಳ ನಂತರ ದಾವಣಗೆರೆಯಲ್ಲಿ ಕೋಮು ಸಂಘರ್ಷಾಗಳು ನಡೆದದ್ದನ್ನು ಹಾಗೂ ಅದರ ಹಿಂದೆ ಬ್ರಾಹ್ಮಣಶಾಹಿ ಶಕ್ತಿಗಳೆ ಇದ್ದದ್ದನ್ನು ಮೈಸೊರ್ರು ಸರ್ಕಾರ ತನಿಖೆಯ ಮೂಲಕ ಪತ್ತೆ ಮಾಡಿದ್ದನ್ನು ಎಸ್. ಚಂದ್ರಶೇಖರ್ ತಮ್ಮ “Dimensions of socio political change in mysore-1918-1940″ದಲ್ಲಿ ದಾಖಲಿಸಿದ್ದಾರೆ. ಅದರಲ್ಲೂ 1928 ರಲ್ಲಿ ಬೆಂಗಳೂರಿನಲ್ಲಿ ನಡೆದ ಯೋಜಿತ ಕೋಮು ಗಲಭೆಗಳಂತೂ ಇಂದಿನ ಕೋಮುವಾದಿಗಳ ಪಿತಾಮಹರಂತಿದ್ದ ಅಂದಿನ ಬ್ರಾಹ್ಮಣಶಾಹಿ ಶಕ್ತಿಗಳ ಕೋಮುವಾದಿ ಹುನ್ನಾರವನ್ನು ವಿವರವಾಗಿ ಬಯಲಿಗೆಳೆಯುತ್ತದೆ.
1926 ರಲ್ಲಿ ಮಿರ್ಜಾ ಇಸ್ಮಾಯಲರು ದಿವಾನರಾಗುತ್ತಾರೆ. 1920 ರ ಮೀಸಲಾತಿಯಿಂದ ಆ ವೇಳೆಗಾಗಲೇ ಕೃದ್ಧರಾಗಿದ್ದ ಮೈಸೂರು ಬ್ರಾಹ್ಮಣರು ಇದರಿಂದ ಇನ್ನಷ್ಟು ಕ್ರುದ್ಧರಾಗುತ್ತಾರೆ. ಏಕೆಂದರೆ ಆವರೆಗೆ ದಿವಾನಗಿರಿಯು ಬ್ರಾಹ್ಮಣರ ಜಹಗೀರು ಎಂಬಂತಿತ್ತು. ಇದಲ್ಲದೆ 1927 ರ ದಸರೆಯಲ್ಲಿ ನಾಲ್ಮಡಿ ಮಹಾರಾಜರು ದಿವಾನ್ ಮಿರ್ಜಾ ಅವರನ್ನು ತಮ್ಮೊಡನೆ ಕರೆದೊಯ್ಯುತ್ತಾರೆ. ಇದನ್ನು ವಿರೋಧಿಸಿ ಮೈಸೂರಿನ ಬ್ರಾಹ್ಮಣರು ಹಲವು ಬಗೆಯ ಹೀನಾಯ ಮತ್ತು ಹಿಂಸಾತ್ಮಕ ಪ್ರತಿರೋಧ ವ್ಯಕ್ತಾಪಡಿಸುತ್ತಾರೆ. ಬೂದಿಮುಚ್ಚಿದ ಕೆಂಡದಂತಿದ್ದ ಬ್ರಾಹ್ಮಣೀಯ ಅಸಹನೆ 1928 ರಲ್ಲಿ ಬೆಂಗಳೂರಿನಲ್ಲಿ ಸ್ಪೋಟಗೊಳ್ಳುತ್ತದೆ. ಆಗ ಬೆಂಗಳುರು ಮುನಿಸ್ಪಲ್ ಕೌನ್ಸಿಲ್ ನ ಅಧ್ಯಕ್ಷ ಅಬ್ಬಾಸ್ ಖಾನ್. ಅವರು ಆಗತಾನೇ ಬ್ರಾಹ್ಮಣ ಪ್ರತಿಸ್ಪರ್ಧಿಯನ್ನು ಸೋಲಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿರುತ್ತಾರೆ. ಅವರು ಅಬ್ರಾಹ್ಮಣರ ರಾಜಕೀಯ ವೇದಿಕೆಯಾದ “ಪ್ರಜಾ ಮಿತ್ರ ಮಂಡಳಿ” ಯ ಮುಕ್ಶಸ್ಥರೂ ಆಗಿದ್ದರು. ಕನ್ನಡದ ಖ್ಯಾತ ಸಾಹಿತಿ ಡಿವಿ ಗುಂಡಪ್ಪ ಅವರು ತಮ್ಮ “ಜ್ನಾಪಕ ಚಿತ್ರಶಾಲೆ” ಯಲ್ಲಿ ದಾಖಲಿಸಿರುವಂತೆ ಅಬ್ಬಾಸ್ ಖಾನರು ಮಿರ್ಜಾ ಇಸ್ಮಾಯಲರ ಸ್ನೇಹಿತರೂ ಆಗಿದ್ದರು ಮತ್ತು ಅಬ್ರಾಹ್ಮಣ ರಾಜಕೀಯದ ವಾಗ್ಮಿಗಳೂ ಆಗಿದ್ದರು.
ಬೆಂಗಳೂರಿನ ಸುಲ್ತಾನ್ ಪೇಟೆಯ ಅವರ ಮನೆಯ ಮುಂಭಾಗದಲ್ಲಿ ಮತ್ತು ಪಕ್ಕದ ಮಸೀದಿಯ ಬಳಿ ಇದ್ದ ಒಂದು ಶಾಲೆಯಲ್ಲಿ, ಶಿಕ್ಷಣ ಇಲಾಖೆಯ ಗಮನಕ್ಕೂ ಬರದಂತೆ 1928 ರಲ್ಲಿ ದಿಢೀರನೆ ಗಣೆಶನ ಪುಟ್ಟ ದೇವಾಸ್ಥಾನದ ನಿರ್ಮಾಣ ಪ್ರಾರಂಭವಾಗುತ್ತದೆ. ಶಾಲಾ ಆವರಣದಲ್ಲಿ, ಅದು ಪಕ್ಕದಲ್ಲಿ ಮಸೀದಿಯೂ ಇರುವಾಗ ಅನಗತ್ಯ ಸಮಸ್ಯೆಗಳು ಉಂಟಾಗುತ್ತವೆ ಮತ್ತು ಅದಕ್ಕೆ ಶಿಕ್ಷಣ ಇಲಾಖೆಯ ಅನುiತಿಯೂ ಇಲ್ಲದಿದ್ದರಿಂದ ಮೈಸೂರು ಸರ್ಕಾರ ಕಾಮಗಾರಿಯನ್ನು ನಿಲ್ಲಿಸುತ್ತದೆ. ಮೀಸಲಾತಿ ಜಾರಿ ಮತ್ತು ಮಿರ್ಜಾ ಇಸ್ಮಾಯಲರ ದಿವಾನಗಿರಿಯ ಪೆಟ್ಟುಗಳಿಂದ ತತ್ತರಿಸುತ್ತಿದ್ದ ಬ್ರಾಹ್ಮಣವಾದಿ ಶಕ್ತಿಗಳು ಈ ಸಂದರ್ಭವನ್ನು ಅಬ್ಬಾಸ್ ಖಾನ್. ದಿವಾನ್ ಇಸ್ಮಾಯಲ್ ಮತ್ತು ಮಹಾರಾಜರ ಅಬ್ರಾಹ್ಮಣ ಆಡಳಿತವನ್ನು ವಿರೋಧಿಸಲು ಒಂದು ಅವಕಾಶವನ್ನಾಗಿ ಬಳಸಿಕೊಳ್ಳುತ್ತಾರೆ.
ಅದರಲ್ಲಿ ಮುಖ್ಯರು ಕಾಂಗ್ರೆಸ್ಸಿನೊಳಗೇ ಇದ್ದ ಮಲ್ಲೇಶ್ವರಂ ಸುಬ್ರಹ್ಮಣ್ಯ ರಂತ ಹಿಂದೂ ಮಹಾಸಭಾವಾದಿ ನಾಯಕರು ಹಾಗೂ ತಿಲಕ್ ವಾದಿ ಹಿಂದೂ ರಾಷ್ಟ್ರೀಯವಾದಿ ಮನಸ್ಥಿತಿ ಹೊಂದಿದ್ದ “ವೀರಕೇಸರಿ ” ಪತ್ರಿಕೆಯ ಸಂಪಾದಕರೂ ಆಗಿದ್ದ ಶ್ರೀನಿವಾಸ ಶಾಸ್ತ್ರಿಯವರು . ಇದರ ಜೊತೆಗೆ ಆಗ ಪ್ರಕಟವಾಗುತ್ತಿದ್ದ ಬ್ರಾಹ್ಮಣರ ಒಡೆತನ ಮತ್ತು ಸಂಪಾದಕತ್ವದಲ್ಲಿದ್ದ “ವಿಶ್ವ ಕರ್ನಾಟಕ” ಮತ್ತು “ತಾಯಿನಾಡು” ಪತ್ರಿಕೆಗಳು ಸಕ್ರಿಯ ಪಾತ್ರವಹಿಸುತ್ತವೆ. ಈ ಕ್ಷುಲ್ಲಕ ಘಟನೆಯನ್ನು ಕಾಂಗ್ರೆಸ್ಸಿನೊಳಗಿನ ಹಿಂದೂತ್ವವಾದಿಗಳು ಮತ್ತು ಬ್ರಾಹ್ಮಣವಾದಿ ಪತ್ರಿಕೆಗಳು ಕೋಮುವಾದಿ ಉದ್ವಿಘ್ನತೆಯನ್ನು ಸೃಷ್ಟಿಸಲು ವ್ಯವಸ್ಥಿತವಾಗಿ ಬಳಸಿಕೊಂಡವು. 1928 ರ ಜೂನ್ ನಿಂದ ವ್ಯವಸ್ಥಿತವಾಗಿ ಈ ಶಕ್ತಿಗಳು ಕೋಮುವಾದಿ ಜನಾಭಿಪ್ರಾಯ ರೂಪಿಸಿ 1928 ರ ಜುಲೈ 24 ರಿಂದ 29 ರ ವರೆಗೆ ಶಾಲಾ ಮಕ್ಕಳನ್ನು ಬಳಸಿಕೊಂಡು ಕೋಮುವಾದಿ ಪ್ರತಿಭಟನೆಗಳನ್ನು ನಡೆಸುತ್ತಾರೆ. ಇದು ಜುಲೈ 29-30 ರಂದು ಅತ್ಯಂತ ಹಿಂಸಾತ್ಮಕ ರೂಪ ಪಡೆದುಕೊಳ್ಳುತ್ತದೆ. ಆದರೂ 1928 ರಲ್ಲೂ ಸಹ ನಾಲ್ಮಡಿ ಮಹಾರಾಜರು ದಸರಾದಲ್ಲಿ ದಿವಾನ್ ಮಿರ್ಜಾ ಇಸ್ಮಾಯಲರನ್ನು ಜೊತೆ ಮಾಡಿಕೊಂಡೇ ಜಂಬೂಸವಾರಿಯಲ್ಲಿ ಭಾಗವಹಿಸುತ್ತಾರೆ. ಈ ಎಲ್ಲಾ ವಿವರಗಳು ಗಲಭೆಯ ಅಧ್ಯಯನ ಮಾಡಲು ಮೈಸೂರು ಸರ್ಕಾರ ನಿವೃತ್ತ ದಿವಾನರಾಗಿದ್ದ ಸರ್. ಎಂ. ವಿಶ್ವೇಶರಾಯ ಅವರ ನೇತ್ರುತ್ವದಲ್ಲಿ ರಚಿಸಲಾಗಿದ್ದ ತನಿಖಾ ಸಮಿತಿಯ ವರದಿ “Disturbances In Bangalore city July 2028-Report Of The Committee Of Enquiry “ಯಲ್ಲೂ ವಿವರವಾಗಿ ದಾಖಲಾಗಿದೆ.
ಇಂದು ಅದೇ ಇತಿಹಾಸ ದಸರೆಯ ಸಂದರ್ಭದಲ್ಲಿ ಮತ್ತೆ ಮರುಕಳಿಸುತ್ತಿದೆ.
ಆದರೆ ವಿಶಾದದ ಸಂಗತಿ ಎಂದರೆ ರಾಜಸತ್ತೆ ಅಳಿದು ಪ್ರಜಾತಂತ್ರ ಪ್ರಾರಂಭವಾಗಿ 79 ವರ್ಷಾಗಳಾದರೂ ಈ ಹಿಂದೂ ಬ್ರಾಹ್ಮಣ್ಯ ಶಕ್ತಿಗಳು ಸೋಲುವುದಿರಲಿ ಮತ್ತೊಮ್ಮೆ ಶಕ್ತಿ ಪಡೆದು ವಿಜೃಂಭಿಸುತ್ತಿವೆ. ಅದಕ್ಕೆ ಪ್ರಧಾನ ಕಾರಣ ಪ್ರಜಾತಂತ್ರದ ರಥವನ್ನು ಅವರು ಎಷ್ಟು ಹಿಂದಕ್ಕೆ ಎಳೆಯುತ್ತಿದ್ದಾರೋ ಅದಕ್ಕೆ ಮೂರುಪಟ್ಟು ಬಲದಿಂದ ಪ್ರಜಾತಂತ್ರವನ್ನು ಮುಂದಕ್ಕೆ ಒಯ್ಯುವುದರಲ್ಲಿ ಪ್ರಜಾತಂತ್ರವಾದಿಗಳು ವಿಫಲವಾಗಿರುವುದು ಮತ್ತು ಯಥಾಸ್ಥಿತಿಯೊಂದಿಗೆ ರಾಜಿಯಾಗಿರುವುದು. ಆದ್ದರಿಂದಲೇ ದಸರೆಯಲ್ಲಿ ಬಾನು ಮುಶ್ತಾಕ್ ಆವರ ಭಾಗೀದಾರಿಕೆ ಯಥಾಸ್ಥಿತಿಯ ಮುಂದುರಿಕೆಯಾಗುತ್ತದೆ. ಈ ಭಾಗೀದಾರಿಕೆ ಮೇಲ್ನೋಟಕ್ಕೆ ಬಿಜೆಪಿಯ ಸಿದ್ಧಾಂತಕ್ಕೆ ಪೆಟ್ಟು ಎಂಬಂತೆ ಕಂಡರೂ, ಅದಕ್ಕಾಗಿ ಮಾಡಿಕೊಳ್ಳುವ ರಾಜಿಗಳು ಪರೋಕ್ಷವಾಗಿ ದರೆಯ ಹಿಂದುವೀಕರಣವನ್ನು ಮುಂದುವರೆಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾತಂತ್ರದಿ ಶಕ್ತಿಗಳು ಪ್ರಜಾತಂತ್ರದಲ್ಲಿ ರಾಜಸತ್ತೆಯ ಪಳೆಯುಳಿಕೆಗಳು ಏಕೆ? ಸರ್ಕಾರಿ ಆಚರಣೆಯಲ್ಲಿ ಧಾರ್ಮಿಕ ಸಂಕೇತಗಳೇಕೆ? ಎಂಬ ಪ್ರಶ್ನೆಗಳನ್ನು ಕೇಳುತ್ತಾ , ಜನರ ಮುಂದಿಡುತ್ತಾ ಪ್ರಜಾತಂತ್ರದ ರಥವನ್ನು ಎರಡು ಹೆಜ್ಜೆ ಮುಂದೆ ಎಳೆಯಬೇಕಿತ್ತು. ಯಥಾಸ್ಥಿತಿವಾದ ಯಾವತೂ ಉಗ್ರ ಹಿಂದೂವಾದಕ್ಕೆ ಪೂರಕವಾಗಿರುತ್ತದೆ.
- ಶಿವಸುಂದರ್
ಜನಪರ ಚಿಂತಕರು, ಲೇಖಕರು…


Leave a reply