2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸೀಟುಗಳು ಬಂದಿದ್ದರೆ ಸಂವಿಧಾನವನ್ನೇ ಬದಲಿಸುತ್ತಿತ್ತು ಎಂಬ ಮಾತಿಗೆ ಯಾವ ಅರ್ಥವೂ ಉಳಿದಂತಿಲ್ಲ. ಏಕೆಂದರೆ 400 ಸೀಟುಗಳು ಬರದಿದ್ದರೂ ಮೋದಿ ಸರ್ಕಾರ ಹಂತಹಂತವಾಗಿ ಸಂವಿಧಾನವನ್ನು ನಾಶಮಾಡುವ ಯೋಜನೆಗಳನ್ನೇ ಜಾರಿಗೊಳಿಸುತ್ತಿದೆ. 2019 ತನಗೆ ಅತ್ಯಧಿಕ ಬಹುಮತವಾಗಿದ್ದಾಗ ಈ ದೇಶದ ಬಡಜನರ ಮತ್ತು ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ನಾಗರಿಕತ್ವವನ್ನು ನಿರಾಕರಿಸುವ NRC (National Register Of Citizens – ರಾಷ್ಟ್ರೀಯ ನಾಗರಿಕರ ರಿಜಿಸ್ಟರ್) ಯನ್ನು ಜಾರಿ ಮಾಡಲು ಹೊರಟಿತ್ತು. ಆ ಮೂಲಕ ಭಾರತವನ್ನು ಹಿಂದೂ-ಅರ್ಥತ್ ಮೇಲ್ಜಾತಿ ಸವರ್ಣೀಯರ ರಾಷ್ಟ್ರವಾಗಿ ಘೋಷಿಸಿ ಉಳಿದವರನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸುವ ಹುನ್ನಾರ ನಡೆಸಿತ್ತು. ಅದಕ್ಕಾಗಿ 2020-21 ರಲ್ಲಿ ನಡೆಯಬೇಕಿದ್ದ ಜನಗಣತಿಯಲ್ಲಿ ಪ್ರತಿಯೊಬ್ಬ ಭಾರತೀಯರು ತಾವು ಭಾರತದಲ್ಲೇ ಹುಟ್ಟಿದ್ದು ಎಂದು ಸಾಬೀತು ಪಡಿಸುವ ದಾಖಲನೆಗಳನ್ನು ತೋರಿಸಬೇಕೆಂದೂ ಕಡ್ಡಾಯಗೊಳಿಸಿತ್ತು. 1987 ಕ್ಕೆ ಮುಂಚೆ ಹುಟ್ಟಿರುವ ಭಾರತದ ಪ್ರತಿಯೊಬ್ಬರೂ ಹುಟ್ಟಿದ ದಿನ ಮತ್ತು ಸ್ಥಳದ ಪುರಾವೆ ತೋರುವ ದಾಖಲೆಗಳನ್ನೂ, 1987-2004 ರ ನಡುವೆ ಹುಟ್ಟಿರುವರು ತಮ್ಮ ಹುಟ್ಟಿದ ದಿನ ಮತ್ತು ಸ್ಥಳದ ದಾಖಲೆಗಳಲ್ಲದೆ ತಮ್ಮ ತಂದೆ ತಾಯಿಗಳಲ್ಲಿ ಒಬ್ಬರು ಭಾರತೀಯ ನಾಗರಿಕರು ಎಂದು ಸಾಬೀತು ಪಡಿಸುವ ದಾಖಲೆಗಳನ್ನೂ, 2004 ನಂತರ ಹುಟ್ಟಿದವರು ತಮ್ಮ ದಾಖಲೆಗಳ ಜೊತೆಜೊತೆಗೆ, ತಮ್ಮ ತಂದೆ ತಾಯಿಗಳಿಬ್ಬರ ದಾಖಲೆಗಳನ್ನೂ ತೋರಿಸಿ ತಮ್ಮ ನಾಗರಿಕತ್ವವನ್ನು ಸಾಬೀತುಗೊಲಿಸಬೇಕೆಂದು ಆ ಆದೇಶ ಸ್ಪಷ್ಟಗೊಳಿಸಿತ್ತು.
ಆದರೆ ಈ ಪ್ರಕ್ರಿಯೆಯಲ್ಲಿ ದಾಖಲೆ ಪತ್ರ ತೋರಿಸದೆ ನಾಗರಿಕತ್ವ ಕಳೆದುಕೊಳ್ಳುವ ಮುಸ್ಲಿಮೇತರರಿಗೆ CAA (Citizenship Amendment Act- ನಾಗರಿಕತ್ವ ತಿದ್ದುಪಡಿ ಕಾಯಿದೆ) ಯ ಮೂಲಕ ನಾಗರಿಕತ್ವ ಕೊಡಲಾಗುವುದೆಂದು ಗೃಹಮಂತ್ರಿ ಅಮಿತ್ ಶಾ ಈ ಯೋಜನೆಯಾ ಹಿಂದಿನ ಕೊಮುವಾದಿ ಉದ್ದೇಶಗಳನ್ನು ಸ್ಪಷ್ಟಗೊಳಿಸಿದ್ದರು. ಆದರೆ ಸಿಎಎ ಮೂಲಕ ನಾಗರಿಕತ್ವಗಳನ್ನು ಪಡೆದುಕೊಳ್ಳಲು ಮುಸ್ಲಿಮೇತರರು ತಾಅವು ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫ಼್ಘಾನಿಸ್ತಾನದ ನಿರಾಶ್ರಿತರು ಎಂದು ಸಾಬೀತು ಮಾಡಿಕೊಳ್ಳಬೇಕು. ಹೀಗಾಗಿ ಅದು ದಾಖಲೆಗಳಿಲ್ಲದ ಭಾರತೀಯರಿಗೆ ಅನ್ವಯವಾಗುವುದಿಲ್ಲ ಎಂಬ ಸತ್ಯವನ್ನು ಮುಚ್ಚಿಟ್ಟಿದ್ದರು. ವಾಸ್ತವವಾಗಿ ಎನ್ಆರ್ಸಿ ಪ್ರಕ್ರಿಯೆ ಜಾರಿಯಾಗಿರುವ ಏಕೈಕ ರಾಜ್ಯ ಅಸ್ಸಾ. ಅಲ್ಲಿಯ ಮೂರು ಕೋಟಿ ರಾಜ್ಯವಾಸಿಗಳಲ್ಲಿ 19 ಲಕ್ಷ ಜನರ ಬಳಿ ಸರ್ಕಾರ ಕೇಳಿದ ದಾಖಲೆಗಳಿರಲಿಲ್ಲ. ಅವರಲ್ಲಿ 12 ಲಕ್ಷ ಜನ ಬಡ ಹಿಂದೂಗಳು, ಆದಿವಾಸಿಗಳು ಮತ್ತು ಮಹಿಳೆಯರೇ ಆಗಿದ್ದರು. ಈ ಕಾರಣಕ್ಕೆ ಅಸ್ಸಾಮಿನ ಬಿಜೆಪಿ ಸರ್ಕಾರ ಇಡೀ ಎನ್ಆರ್ಸಿಯನ್ನೇ ರದ್ದು ಮಾಡಿತ್ತು. 2019-20 ರಲ್ಲಿ ಕೋಮುವಾದಿ ಬಿಜೆಪಿ ಸರ್ಕಾರದ NPR-NRC-CAA ಯೋಜನೆಯ ವಿರುದ್ಧ ಮೊದಲು ದೇಶಪ್ರೇಮಿ ಮುಸ್ಲಿಮರು ಮತ್ತು ಆ ನಂತರದಲ್ಲಿ ದೇಶದ ಎಲ್ಲಾ ಧೀಮಂತ ಬಡವರ್ಗಗಳು ಎರಡನೇ ಸ್ವಾತಂತ್ರ್ಯ ಸಮರದ ರೀತಿಯಲ್ಲಿ ಕೈಯಲ್ಲಿ ಸಂವಿಧಾನ ಹಿಡಿದು ಬೃಹತ್ ಜನಹೋರಾಟಗಳನ್ನು ದೇಶದೆಲ್ಲೆಡೆ ಪ್ರಾರಂಭಿಸಿದರು. ಅದೇ ವೇಳೆ 2020 ರ ಮಾರ್ಚ್ನಲ್ಲಿ ಕೋವಿಡ್ ಕೂಡ ಅಪ್ಪಳಿಸಿದ್ದರಿಂದ ಮೋದಿ ಸರ್ಕಾರ ಜನಗಣತಿ ಮತ್ತು NPR-NRC ಯನ್ನು ಕೈಬಿಡಬೇಕಾಯಿತು.
ಇದೀಗ 2026 ರಲ್ಲಿ ಜನಗಣತಿ ನಡೆಸುವ ಉದ್ದೇಶವನ್ನು ಘೋಷಿಸಿರುವ ಮೋದಿ ಸರ್ಕಾರ, ಅದರಲ್ಲಿ NPR-NRC ತಯಾರಿಗೆ ಬೇಕಿರುವ ಪ್ರಶ್ನೆಗಳನ್ನೂ ಸೆರಿಸಲಾಗಿದೆಯೇ ಎಂಬ ಬಗ್ಗೆ ಯಾವ ಉತ್ತರವನ್ನು ನೀಡುತ್ತಿಲ್ಲ. ಹಾಗೆಂದು ಬಿಜೆಪಿ ಸರ್ಕಾರ ಬಹುಮತವಿಲ್ಲದ ಕಾರಣ ಮತ್ತು 2020 ರ ಪ್ರತಿರೋಧದ ಕಾರಣಗಳಿಂದ NPR-NRC ಯೋಜನೆ ಕೈಬಿಟ್ಟಿರಬಹುದೇ ಎಂದು ಆಶಾವಾದಿ ಪಂಡಿತರು ಊಹಿಸಲು ಶುರುಮಾಡುವ ಮುಂಚೆಯೇ ಮೋದಿ ಸರ್ಕಾರ ನವಂಬರ್ ನಲ್ಲಿ ಚುನಾಣೆ ನಡೆಯಬೇಕಿರುವ ಬಿಹಾರದಲ್ಲಿ ಚುನಾವಣಾ ಅಯೋಗದ ಮೂಲಕ ದಿಢೀರನೇ NRC ರೀತಿಯ ಪ್ರಕ್ರಿಯೆ ಪ್ರಾರಂಭಿಸಿದೆ. ಈ ಆದೆಶದ ಹಿಂದಿನ ಚುನಾವಣಾ ಅಯೋಗದ ಉದ್ದೇಶ ಮತ್ತು ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಇದೇ ಜುಲೈ 10 ರಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟು ಅಹವಾಲುದಾರರ ಪ್ರಶ್ನೆಗಳಲ್ಲಿನ ಯಥಾರ್ಥತೆಯನ್ನು ಎತ್ತಿ ಹಿಡಿದಿದೆ ಮತ್ತು ಪ್ರಕ್ರಿಯೆಯಲ್ಲಿನ ದೋಷಗಳನ್ನು ಗುರುತಿಸಿ ವಿಸ್ತ್ರುತ ವಿಚಾರಣೆಗೆ ಜುಲೈ 28 ರ ದಿನಾಂಕವನ್ನು ಗೊತ್ತುಪಡಿಸಿದೆ.
ಆದರೆ ಮೋದಿ ಸರ್ಕಾರದಡಿಯಲ್ಲಿರುವ ಚುನಾವಣಾ ಅಯೋಗಾ ಆ ಆದೇಶವನ್ನೇ ಕಡೆಗಣಿಸುವಂತೆ ಬಿಹಾರದ ಪರೋಕ್ಷ NRC ಪ್ರಕ್ರಿಯೆಯನ್ನು ಇಡೀ ದೇಶಾದ್ಯಂತ ನಡೆಸಲು ಜುಲೈ 13 ರಂದು ದೇಶದ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಚುನಾವಣಾಧಿಕಾರಿಗಳಿಗೆ ಅದೇಶ ನೀಡಿದೆ! ಆ ಮೂಲಕ ದೇಶಾದ್ಯಂತ ಪರೋಕ್ಷವಾಗಿ NRC ನಡೆಸುವ ತಂತ್ರವನ್ನು ಪ್ರಾರಂಭಿಸಿದೆ. ಚುನವಣಾ ಅಯೋಗ ನಡೆಸುತ್ತಿರುವ NRC ತಂತ್ರಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ಬಿಹಾರದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.
ಬಿಹಾರ: ಮತಪರಿಶ್ಕರಣೆಯಲ್ಲ, ನಾಗರಿಕತ್ವ ನಿರಾಕರಣೆ
ಬಿಹಾರದಲ್ಲಿ ರಾಜ್ಯ ಶಾಸನಸಭೆಗೆ 2025 ರ ನವಂಬರ್ ಒಳಗೆ ಚುನಾವಣೆ ನಡೆಯಬೇಕಿದೆ. ಭಾರತದಲ್ಲಿ ಸಂವಿಧಾನದ ಆರ್ಟಿಕಲ್ 324, 325, 326 ರ ಪ್ರಕಾರ ಚುನಾವಣೆಗಲನ್ನು ನಡೆಸುವುದು ಚುನಾವಣಾ ಅಯೋಗದ ಜವಾಬ್ದಾರಿ. ಅದರಂತೆ ಚುನಾವಣಾ ಅಯೋಗವು ದೇಶದಲ್ಲಿ 18 ವಯಸ್ಸು ತುಂಬಿರುವ ಪ್ರತಿಯೊಬ್ಬ ಭಾರತೀಯರಿಗೂ ಮತದಾನದ ಹಕ್ಕು ಒದಗಿಸಿಕೊqಬೇಕು. ಅದಕ್ಕೆ ಪೂರಕವಾಗಿ 1950 ರ ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 21 (3), 1960 ರ ಮತಪಟ್ಟಿ ತಯಾರಿ ನಿಯಮಗಳ ಪ್ರಕಾರ ಚುನಾವಣಾ ಅಯೋಗ ರಾಜ್ಯದಲ್ಲಿ ಅರ್ಹ ಮತದಾರರ ಪಟ್ಟಿಯನ್ನು ತಯಾರಿಸಬೇಕು. ಅನರ್ಹರಿದ್ದರೆ, ಮೃತರಾಗಿದ್ದರೆ, ಬೇರೆ ಜಾಗಗಳಿಗೆ ಸ್ಠಳಾಂತರಗೊಂಡಿರುವರ ಹೆಸರನ್ನು ತೆಗೆದುಹಾಕಬೇಕು. ಇದಕ್ಕಾಗಿ ಚುನಾವಣ ಅಯೋಗಗಳು ಸಾಮಾನ್ಯವಾಗಿ ಪ್ರತಿ ಚುನಾವಣೆಗೆ ಮುನ್ನ Summary Revision ಎಂಬ ಪರಿಷ್ಕರಣೆಯನ್ನೂ , ಹಾಗೂ ಕಾಲಕಾಲಕ್ಕೆ ಇಡಿ ಮತಪಟ್ಟಿಯನ್ನು ಸಮಯಕ್ಕೆ ತಕ್ಕಹಾಗೆ ಸಿದ್ಧಪಡಿಸಲು Intensive Revision ಎಂಬ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತದೆ. ಈಗ ಬಿಹಾರದಲ್ಲಿ ಚುನಾವಣಾ ಅಯೋಗ ಕೈಗೊಂಡಿರುವ Special Intensive Revision (SIR) ಎಂಬ ಪ್ರಕ್ರಿಯೆಯ 1960 ರ ಮತಪಟ್ಟಿ ಪರಿಶ್ಕರಣೆ ನಿಯಮಗಳಲ್ಲಿ ಇಲ್ಲವೇ ಇಲ್ಲ.
ಸಾಮಾನ್ಯವಾಗಿ ಚುನಾವಣೆಗಳಿಗೆ ಮುಂಚೆ ನಡೆಯುವ ಸಮ್ಮರಿ ರಿವಿಶನ್- ಮತಪಟ್ಟಿ ಪರಿಶ್ಕರಣೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಸಿದ್ಧಪಡಿಸಲಾದ ಚುನಾವಣಾ ಪಟ್ಟಿಯನ್ನು ಆಕರವಾಗಿಟ್ಟುಕೊಂಡು (ರೆಫ಼ರೆನ್ಸ್) ಮತಪಟ್ಟಿ ಪರಿಶ್ಕರಣೆ ಮಾಡಲಾಗುತ್ತದೆ. ಅಂದರೆ ಈಗಾಗಲೇ ಹಿಂದಿನ ಚುನಾವಣೆಯಲ್ಲಿ ಮತದಾರರಾಗಿ ನೊಂದಾಯಿತರಾದವರು ಮತ್ತೊಮ್ಮೆ ನೊಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಹಿಂದಿನ ಚುನಾವಣೆಯ ನಂತರ 18 ವರ್ಷ ತುಂಬಿದವರ ವಯಸ್ಸು ಮತ್ತು ಹುಟ್ಟಿದ ಸ್ಥಳದ ದಾಖಲೆಗಳನ್ನು ಪರಿಶೀಲಿಸಿ ಮತಪಟ್ಟಿಗೆ ಸೇರಿಸಿಕೊಳ್ಳಲಾಗುತ್ತದೆ. ಹಿಂದಿನ ಚುನಾವಣೆಯ ನಂತರ ಮೃತರಾದವರನ್ನು ಕೈಬಿಡಲಾಗುತ್ತದೆ. ಯಾವುದಾದರೂ ಮತದಾರರ ಅರ್ಹತೆ ಬಗ್ಗೆ ದೂರುಗಳು ಬಂದಿದ್ದಲ್ಲಿ ಮಾತ್ರ ಅವರಿಗೆ ನೋಟಿಸ್ಸು ಕೊಟ್ಟು ವಿಚಾರಣೆ ನಡೆಸಿ ತೀರ್ಮಾಅನ ತೆಗೆದುಕೊಳ್ಳಲಾಗುತ್ತದೆ. ಇವೆಲ್ಲ ಪ್ರಕ್ರಿಯೆಯಲ್ಲಿ ಒಬ್ಬ ವ್ಯಕ್ತಿ ಮತದಾರರೋ ಅಲ್ಲವೋ ಎಂದು ಸಾಬೀತು ಮಾಡುವಾ ಹೊಣೆ ಅಧಿಕಾರಿಗಳದ್ದೇ ಹೊgತು ಮತದಾರದ್ದಲ್ಲ.
ಹಲವು ವರ್ಷಗಳಿಗೊಮ್ಮೆ ನಡೆಯುವ ಇಂಟೆನ್ಸಿವ್ ರಿವಿಶನ್ ಪ್ರಕ್ರಿಯೆಗಳು ಸಾಮಾನ್ಯವಾಗಿ ಚುನಾವಣೆಗೆ ಮುಂಚೆ ನಡೆಯುವುದಿಲ್ಲ. ಅದು ಸಾಮಾನ್ಯವಾಗಿ ಚುನಾವಣೆ ಒತ್ತಡಗಳಿಲ್ಲದೆ ಸಮಯದಲ್ಲಿ ಚುನಾವಣಾಧಿಕಾರಿಗಳು ಮತಪಟ್ಟಿಯಲ್ಲಿ ಇರುವ ಎಲ್ಲರ ಅಸ್ಥಿತ್ವವನ್ನು ಸ್ಥಳಕ್ಕೆ ಭೇಟಿ ಕೊಟ್ಟು ಖಾತರಿ ಪಡಿಸಿಕೊಳ್ಳುತ್ತಾರೆ. ಈಗಾಗಲೇ ಕೊಟ್ಟಿರುವ ದಾಖಲೆಗಳ ಋಜುತ್ವವನ್ನು ಅಗತ್ಯ ಬಿದಲ್ಲಿ ಪರಿಶೀಲಿಸುತ್ತಾರೆ. ಉದಾಹರಣೆಗೆ ಬಿಹಾರದಲ್ಲಿ 2003 ರಲ್ಲಿ Intensive Revision ಎಂಬ ಪ್ರಕ್ರಿಯೆ ನಡೆದಿತ್ತು. ಅಲ್ಲಿ ಚುನಾವಣೆ ಬಾಕಿ ಇದ್ದದ್ದು 2005 ರಲ್ಲಿ. ಬಿಹಾರದಲ್ಲಿ 2024 ರಲ್ಲಿ ಲೋಕಸಭಾ ಚುನಾವಣೆಯ ಭಾಗವಾಗಿ ಮತಪಟ್ಟಿ ಪರಿಶ್ಕರಣೆ ನಡೆದು ಅರ್ಹ ಮತದಾರರ ಪಟ್ಟಿ ಸಿದ್ಧವಾಗಿದೆ. ಈಗ 2025 ರ ನವಂಬರ್ ನಲ್ಲಿ ನಡೆಯಬೇಕಿರುವ ಚುನಾವಣೆಗೆ ಆಗಬೇಕಿದ್ದೇನು? 2024 ರ ಮೇ ತಿಂಗಳಲ್ಲಿ ನಡೆದ ಚುನಾವಣೆಯ ನಂತರದಲ್ಲಿ ಮತದಾನಕ್ಕೆ ಅರ್ಹರಾದವರನ್ನು ಸೇರಿಸಿಕೊಳ್ಳುವುದು ಮತ್ತು ಮತದಾರರನ್ನು ಕೈಬಿಡಲು ನಿರ್ದಿಷ್ಟ ದೂರುಗಳಿದ್ದಲ್ಲಿ ಪರಿಶೀಲಿಸುವ Summary Revision ಎಂಬ ಪ್ರಕ್ರಿಯೆ ಮಾತ್ರ.
2025 ರ ಮೇ ತಿಂಗಳ ತಕವೂ ಮೋದಿ ಸರ್ಕಾರ ಮತ್ತು ಚುನಾವಣಾ ಅಯೋಗ ಆ ಪ್ರಕ್ರಿಯೆಯಲ್ಲೇ ನಿರತವಾಗಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಜೂನ್ 4 ರಂದು 2020 ರಿಂದ ನೆನೆಗುದಿಗೆ ಬಿದ್ದಿದ್ದ ಜನಗಣತಿಯನ್ನು 2026 ರಲ್ಲಿ ನಡೆಸಲಿರುವುದಾಗಿ ಘೋಷಿಸಿತು. ಅದರಲ್ಲಿ 2020 ರಲ್ಲಿ ಸೇರಿಸಿದ್ದಂತೆ NPR-NRC ಯೋಜನೆಗೆ ಬೇಕಾದ ಪ್ರಶ್ನಾವಳಿಗಳಿರುತ್ತವೆಯೇ ಎಂಬ ಪ್ರಶ್ನೆಗೆ ಮೋದಿ ಸರ್ಕಾರ ಸರಿಯಾಗಿ ಉತ್ತರಿಸಿರಲಿಲ್ಲ. ಆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಅಯೋಗ ದಿಢೀರನೆ ಜೂನ್ 24 ರಂದು ಬಿಹಾರದ ಚುನಾವಣಾಧಿಕಾರಿಗಳು ಇಡಿ ಮತಪಟ್ಟಿಯನ್ನು Special Intensive Revision ಗೆ ಒಳಪಡಿಸಬೇಕೆಂದು ಆದೇಶಿಸಿತು.
Special Intensive Revision ಎಂದರೆ NRC. ಈ ಸ್ಪೆಶಲ್ ಇನ್ಟೆನ್ಸೀವ್ ರಿವಿಶನ್ ಪ್ರಕ್ರಿಯೆ ಮತಪಟ್ಟಿ ನಿಯಮಗಳಲ್ಲೇ ಇಲ್ಲದ ಮೋದಿ ಸರ್ಕಾರದ ಅವಿಷ್ಕಾರವಾಗಿದೆ. ಚುನಾವಣಾ ಅಯೋಗದ ಆದೆಶದಂತೆ:
- ಬಿಹಾರದಲ್ಲಿ ಮತದಾನಕ್ಕೆ ಅರ್ಹವಿರುವ 7.8 ಕೋಟಿ ಮತದಾರರೂ ಈಗ ಚುನಾವಣಾಧಿಕಾರಿಗಳಿಗೆ ತಾವು ಭಾರತದ ನಾಗರಿಕರು ಎಂದು ಸಾಬೀತು ಪಡಿಸುವ ಮೂಲಕ ಮತದಾರರೆಂದು ನಿರೂಪಿಸಿಕೊಳ್ಳಬೇಕು.
- ಜೂನ್ 25 ರಿಂದ ಬಿಹಾರದ ಎಲ್ಲಾ ಮನೆಗಳಿಗೂ, ಪ್ರತಿಯೊಬ್ಬ ಮತದಾರರಿಗೂ ಭರ್ತಿ ಮಾಡಬೇಕಿರುವ ಅರ್ಜಿ ನಮೂನೆಯನ್ನು ಒದಗಿಸಲಾಗುವುದು. ಪ್ರತಿಯೊಬ್ಬ ಮತದಾರರೂ ಅದರಲ್ಲಿ ಕೇಳಿರುವ ದಾಖಲೆಗಳನ್ನು ನೀಡಿ, ತಮ್ಮ ಫ಼ೋಟೊ ಲಗತ್ತಿಸಿ, ಖುದ್ದು ಸಹಿ ಹಾಕಿ ಜುಲೈ 25 ರೊಳಗೆ ಚುನಾವಣಾಧಿಕಾರಿಗಳಿಗೆ (ಬ್ಲಾಕ್ ಲೆವೆಲ್ ಆಫ಼ೀಸರ್) ತಲುಪಿಸಬೇಕು.
- ಬಿಹಾರದಲ್ಲಿ ದೇಶದಲ್ಲೇ ಆತಿ ಹೆಚ್ಚು ಜನರು (ಶೇ. 20 ಕ್ಕಿಂತ ಜಾಸ್ತಿ- ಕೆಲವು ಕಡೆ ಶೇ 50) ಉದ್ಯೋಗವನ್ನು ಅರಸಿಕೊಂಡು ವಲಸೆ ಹೋಗುತ್ತಾರೆ. ಜುಲೈ-ಆಗಸ್ತ್ ತಿಂಗಳುಗಳು ದೂರ ದೂರದ ಪಂಜಾಬ್ -ಹರ್ಯಾಣ ಇತ್ಯಾದಿ ರಾಜ್ಯಗಳಿಗೆ ಬಿಹಾರದಿಂದ ಪುರುಷರು ಕೃಷಿ ಕೆಲಸಗಳಿಗೆ ಅತಿ ಹೆಚ್ಚು ವಲಸೆ ಹೋಗುವ ತಿಂಗಳುಗಳು. ಬಿಹಾರ ಅತ್ಯಂತ ಹೆಚ್ಚು ಅನಕ್ಷರಸ್ಥ ರಾಜ್ಯ. ಈ ತಿಂಗಳುಗಳಲ್ಲಿ ಮನೆಗಳಲ್ಲಿ ವೃದ್ಧರು ಮತ್ತು ಮಹಿಳೆಯರು ಮಾತ್ರ ಇರುತ್ತಾರೆ. ಹೊಟ್ಟೆ ಪಾಡಿಗೆ ವಲಸೆ ಹೋಗಿರುವ ಪುರುಷರು ಮರಳಿ ಬರುವುದು ನವಂಬರ್ ನಲ್ಲಿ. ಆದರೆ ಜುಲೈ 25 ರ ಒಳಗೆ ಪ್ರತಿಯೊಬ್ಬರೂ ಸಹಿ ಹಾಕಿ, ಸರ್ಕಾರ ಕೇಳುವ ದಾಖಲೆಗಳನ್ನು (ಅವರ ಬಳಿ ಇದ್ದರೆ) ಸರ್ಕಾರಿ ಕಚೇರಿಗಳಿಂದ ತಂದು ಒದಗಿಸಬೇಕು.
3. 2025 ರ ಆಗಸ್ಟ್ 1 ರಂದು ಮತದಾರರು ಕೊಟ್ಟ ಅರ್ಜಿಗಳ ಪರಿಶೀಲನೆಯನ್ನು ಮಾಡಿ, ಸೂಕ್ತ ದಾಖಲೆಗಳನ್ನು ನೀಡದ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟು ಹಂಗಾಮಿ ಮತದಾರರ ಪಟ್ಟಿಯನ್ನು ಘೋಷಿಸಲಾಗುವುದು. ಪಟ್ಟಿಯಲ್ಲಿ ಇರದವರು ಆಗಸ್ತ್ 25 ರ ತನಕ ದೂರು ಕೊಟ್ಟು ದಾಖಲೆ ಒದಗಿಸಬೇಕು. ಅವೆಲ್ಲವನ್ನು ಪರಿಶೀಲಿಸಿ ಸೆಪ್ಟೆಂಬರ್ 30 ರಂದು ಅಂತಿಮ ಮತದಾರರ ಪಟ್ಟಿಯನ್ನು ಘೋಷಿಸಲಾಗುವುದು. ಸೂಕ್ತ ದಾಖಲೆಗಳನ್ನು ಕೊಡದ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗುವುದಲ್ಲದೆ ಅವರನ್ನು ಸಂಭಾವ್ಯ ಅಕ್ರಮ ವಲಸಿಗರೆಂದು ಪರಿಗಣಿಸಿ ಅವರ ಹೆಸರುಗಳನ್ನು ಅಕ್ರಮ ವಿದೇಶಿಯರನ್ನು ಹೊರಹಾಕುವ ಇಲಾಖೆಗೆ ಕಳಿಸಲಾಗುವುದು. ವಾಸ್ತವದಲ್ಲಿ ಇಲ್ಲಿ ಅಯೋಗ ಮಾಡುತ್ತಿರುವುದು ಮತದಾರರ ಪರಿಶ್ಕರಣೆಯಲ್ಲ. ನಾಗರಿಕತ್ವ ಪರಿಶೀಲನೆ. ಅದು ಚುನಾವಣಾ ಅಯೋಗದ ಕೆಲಸವಲ್ಲ. ಅದನ್ನು ಮಾದಬೇಕಿರುವುದು ಗೃಹ ಇಲಾಖೆ. ಚುನಾವಣಾ ಅಯೋಗ ಹೇಗೆ ಸಾರದಲ್ಲಿ ನಾಗರಿಕತ್ವ ನಿರಾಕರಣೆ ಮಾಡುತ್ತಿದೆಯೆಂದು ನೋಡೊಣ..
4. ಬಿಹಾರದಲ್ಲಿ 2003 ರಲ್ಲಿ ಸ್ಪೆಶಲ್ ಇನ್ಟೆನ್ಸೀವ್ ರಿವಿಶನ್ ಪ್ರಕ್ರಿಯೆ ನಡೆದಿತ್ತು. ಹೀಗಾಗಿ 2003 ರ ಪಟ್ಟಿಯಲ್ಲಿ ಹೆಸರಿರುವರು ಆ ಪಟ್ಟಿಯನ್ನು ನಕಲನ್ನು ತಮ್ಮ ಅರ್ಜಿಯ ಜೊತೆ ಲಗತ್ತಿಸಬೇಕು. ಆದರೆ 2003 ರ ನಂತರ 18 ವರ್ಷ ತುಂಬಿದವರು ಅಥವಾ 2003 ರ ಪಟ್ಟಿಯಲ್ಲಿ ಯಾವುದಾದರೂ ಕಾರಣಕ್ಕೆ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋದವರು ಸರ್ಕಾರ ಕೇಳುವ ದಾಖಲೆಗಳನ್ನು ತೋರಿಸದಿದ್ದಲ್ಲಿ ಮತದಾರರೆಂದೂ ಸಾಬೀತು ಮಾಡಲಾಗುವುದಿಲ.. ಅಂತವರು ಸಾಬೀತಾಗದಿದ್ದರೆ ನಾಗರಿಕತ್ವವನ್ನೇ ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದಾರೆ.
ಆದರೆ ಬಿಹಾರದಲ್ಲಿ 2003 ರ ನಂತರ ಐದು ಲೋಕಸಭಾ ಚುನಾವಣೆಗಳು ಮತ್ತು ಐದು ಶಾಸನಾ ಸಭಾ ಚುನಾವಣೆಗಳು ನಡೆದಿವೆ. 2003 ರ ಪಟ್ಟಿಯಲ್ಲಿ ಇರದಿದ್ದವರೂ, 2003 ರ ನಂತರ 18 ವರ್ಷ ತುಂಬಿದ ಸುಮಾರು ಐದು ಕೋಟಿ ಜನ ಮತದಾನ ಮಾಡಿದ್ದಾರೆ. ಈಗ ಅವೆರಲ್ಲರೂ ಸರ್ಕಾರ ಕೇಳುವ ದಾಖಲೆಗಳನ್ನು ಕೊಡದಿದ್ದರೆ ಮತದಾರರೇ ಅಲ್ಲವೆಂದು ಹೊರಹಾಕಲಾಗುತ್ತದೆ. ಹಾಗಿದ್ದಲ್ಲಿ 2003 ರಿಂದ ಬಿಹಾರದಲ್ಲಿ ಆಯ್ಕೆಯಾದ ಸರ್ಕಾರಗಳು ಅವು ಮಾಡಿದ ತೀರ್ಮಾನಗಳು ಮತ್ತು ಬಿಹಾರ ಕೊಟ್ಟ ಲೋಕಸಭಾ ಸೀಟುಗಳು ಅದರ ಆಧಾರದಲ್ಲಿ 2024 ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಎಲ್ಲವೂ ಅನೂರ್ಜಿತವಾಗಬೇಕಲ್ಲವೇ?
5. ಈಗ ಮತಪಟ್ಟಿ ಪರಿಷ್ಕರಣೆಗೆ ಸರ್ಕಾರ ಹಾಕುತ್ತಿರುವ ಶರತ್ತುಗಳನ್ನು ನೋಡೊಣ:
- 2003 ರ ಪಟ್ಟಿಯಲ್ಲಿವ ಪ್ರತಿಯೊಬ್ಬರೂ ಅದರ ನಕಲನ್ನು ಕಚೇರಿಯಿಂದ ಪಡೆದು, ಫ಼ೋಟೊ ಲಗತ್ತಿಸಿ, ಖುದ್ದು ಸಹಿ ಮಾಡಿ ಜುಲೈ 25 ರೊಳಗೆ ಸಲ್ಲಿಸಬೇಕು.
- -2003 ರ ಪಟ್ಟಿಯಲ್ಲಿ ಹೆಸರಿಲ್ಲದವರು :
ಅ) 1987 ಕ್ಕೆ ಮುಂಚೆ ಜನಿಸಿದವರಾದರೆ ತಮ್ಮ ಹುಟ್ಟಿದ ದಿನ ಹಾಗೂ ಸ್ಥಳವನ್ನು ಸಾಬೀತು ಮಾಅಡುವ ದಾಖಲೆಗಳನ್ನು ಒದಗಿಸಬೇಕು
ಆ) 1987-2004 ರ ನಡುವೆ ಹುಟ್ಟಿದವರಾದರೆ ತಮ್ಮ ಹುಟ್ಟು ದಿನ ಹಾಗೂ ಸ್ಥಳದ ಪುರಾವೆಯ ಜೊತೆಗೆ ತಂದೆ ತಾಯಿಗಳಲ್ಲಿ ಒಬ್ಬರು ಭಾರತೀಯರೇ ಎಮ್ಬುದಕ್ಕೆ ಪುರಾವೆ ಕೊಡಬೇಕು
ಇ) 2004 ರ ನಂತರ ಹುಟ್ಟಿದವರಾದರೆ ತಮ್ಮ ಹುಟ್ಟು ದಿನಾ ಮಾತ್ತು ಸ್ಥಳಗಳ ಪುರಾವೆಯ ಜೊತೆಗೆ ತಂದೆ-ತಾಯಿಗಳಿಬ್ಬರೂ ಭಾರತೀಯರು ಎಂದು ಸಾಬೀತು ಮಾಡುವ ಪುರಾವೆಗಳನ್ನು ಒದಗಿಸಬೇಕು.
ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಇವು ಮತಪರಿಶ್ಕರಣೆಯ ಶರತ್ತುಗಳಲ್ಲ. ನಾಗರಿಕತ್ವ ಪುರಾವೆಯ ಶರತ್ತುಗಳು. ಆರ್ಥತ್ NRC ಶರತ್ತುಗಳು.
6 . ಇರುವ ದಾಖಲೆಗಳನ್ನು ನಿರಾಕರಣೆ ಎಂದರೆ ನಾಗರಿಕತ್ವ ನಿರಾಕರಣೆಯೇ ಅಲ್ಲವೇ?
ಹುಟ್ಟಿದ ದಿನ ಮತ್ತು ಸ್ಥಳಗಳ ಪುರಾವೆಗಳನ್ನು ಒಪ್ಪಿಕೊಳ್ಳಲು ಅಯೋಗವು 11 ದಾಖಲೆಗಳನ್ನು ಪಟ್ಟಿ ಮಾಡಿದೆ. ಅವುಗಳಲ್ಲಿ ಮುಖ್ಯವಾದವು ಸರ್ಕಾರಿ ಕಚೇರಿಯಲ್ಲಿ ಕೊಡುವ ಜನನ ಪ್ರಮಾಣ ಪತ್ರ, ಮೆಟ್ರಿಕ್ಯುಲೇಶನ್ ಅಂದರೆ ಹತ್ತನೇ ತರಗತಿಯ ನಂತರ ಕೊಡುವ ಶಾಲಾ ದಾಖಲೆಗಳು, ಸಾರ್ವಜನಿಕ ಇಲಾಖೆಗಳಲ್ಲಿ ಅಥವ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದರೆ ಅಲ್ಲಿ ಕೊಡಲಾಗಿರುವ ಪರಿಚಯ ಪತ್ರ, ಪಾಸ್ಪೋರ್ಟು, ಆಸ್ತಿ ಪತ್ರಗಳು. ಅಂದರೆ ಪ್ರಧಾನವಾಗಿ ಉಳ್ಳವರ, ಮೇಲ್ವರ್ಗ ಮತ್ತು ಮೇಲ್ಜಾತಿಗಳ ಬಳಿ ಸಹಜವಾಗಿ ಇರುವ ಕಾಗದ ಪತ್ರಗಳು. ಆದರೆ ವಿದ್ಯೆ, ಆಸ್ತಿ ಮತ್ತು ಅಧಿಕಾರಗಳಿಲ್ಲದ ಬಹುಪಾಲು ಬಡಜನರ, ಬಹುಜನರ ಬಳಿ ಈ ದಾಖಲೆಗಳಿರುತ್ತವೆಯೇ? ಆದರೆ ಬಿಹಾರದಲ್ಲಿ ಈಗಲೂ ಜನನ ದಾಖಲೆಯು ಶೇ 50 ನ್ನು ಮೀರುವುದಿಲ್ಲ. ಶೇ. 25 ಕ್ಕಿಂತ ಹೆಚ್ಚು ಜನ ಮೆಟ್ರಿಕ್ಯುಲೇಶನ್ ತಲುಪುವುದಿಲ್ಲ. ಸರ್ಕಾರಿ ಕೆಲಸಗಳಲ್ಲಿರುವರ ಸಂಖ್ಯೆ ಶೇ 2 ಕ್ಕಿಂತ ಕಡಿಮೆ. ಪಾಸ್ ಪೋರ್ಟ್ ಇರುವರ ಸಂಖ್ಯೆ ಶೇ. 2. ಆಸ್ತಿರಹಿತ ದಿನಗೂಲಿ ನೌಕರರ ಸಂಖ್ಯೆ ಶೇ 50ಕ್ಕಿಂತ ಹೆಚ್ಚು. ಆಸ್ತಿ ಇದ್ದರೂ ಅದು ಮಹಿಳೆಯರ ಹೆಸರಿನಲ್ಲಿ ಇರುವುದಿಲ್ಲ. ಹೀಗಾಗಿ ಸರ್ಕಾರ ಒಪ್ಪಿಕೊಳ್ಳುವ ದಾಖಲೆಯನ್ನು ಕೊಡಲು ಶೇ. 75 ಕ್ಕಿಂತಲೂ ಹೆಚ್ಚು ಬಡ ಜನರಿಗೆ ಸಾಧ್ಯವೇ ಇಲ್ಲ.
ಬಿಹಾರದ ಸಾಮಾನ್ಯ ಜನರ ಬಳಿ ಇರುವ ದಾಖಲೆಗಳು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಚುನಾವಣಾ ಅಯೋಗವೇ ಕೊಟ್ಟಿರುವ ವೋಟರ್ ಕಾರ್ಡ್ ಹಾಗೊ ನರೇಗಾ ದ ಜಾಬ್ ಕಾರ್ಡುಗಳು. ಆದರೆ ಈ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲವೆಂದು ಚುನಾವಣಾ ಅಯೋಗ ಕೋರ್ಟಿನಲ್ಲೂ ಸ್ಪಷ್ಟಪಡಿಸಿಬಿಟ್ಟಿದೆ.
ಹೀಗಾಗಿ ಸಾರದಲ್ಲಿ ಚುನಾವಣಾ ಅಯೋಗ ಬಿಹಾರದ ಬಡಜನರನ್ನು ಮತ್ತು ಬಹುಜನರಿಗೆ ಮತದ ಹಕ್ಕನ್ನು ಮಾತ್ರವಲ್ಲದೇ ನಾಗರಿಕತ್ವವನ್ನೂ ನಿರಾಕರಿಸುತ್ತಿದೆ. ಒಂದು ಅಂದಾಜಿನ ಪ್ರಕಾರ ಅಂದಾಜು 2-3 ಕೋಟಿ ಬಡಬಿಹಾರಿಗಳು, ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರು ತಮ್ಮ ಮತದಾನದ ಹಕ್ಕುಗಳನ್ನು ಮಾತ್ರವಲ್ಲದೆ ನಾಗರಿಕತ್ವವನ್ನೇ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದಲೇ ಚುನಾವಣಾ ಅಯೋಗದ ಈ ಸಂವಿಧಾನ ವಿರೋಧಿ ಕ್ರಮಗಳನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಯಿತು.
ಸುಪ್ರೀಂ ಹೇಳಿದ್ದೇನು? ಚುನಾವಣಾ ಅಯೋಗ ಮಾಡಿದ್ದೇನು?
ಸುಪ್ರೀ ಕೋರ್ಟಿನಲ್ಲಿ ವಿರೋಧ ಪಕ್ಷಗಳು, ಎಡಿಆರ್ ಮತ್ತು ಪಿಯುಸಿಲ್ ಗಳು ಸಲ್ಲಿಸಿದ್ದ ಅರ್ಜಿಯಲ್ಲಿ ಚುನಾವಣಾ ಅಯೋಗಕ್ಕೆ :
ಅ) ನಾಗರಿಕತ್ವವನ್ನು ಪರಿಶೀಲಿಸುವ ಮತ್ತು ಕಾನೂನಿನಲ್ಲಿ ಇಲ್ಲದ ಎಸ್ಐಆರ್ ಮಾಡುವ ಅಧಿಕಾರವಿಲ್ಲವೆಂದೂ
ಆ) ಚುನಾವಣಾ ಅಯೋಗ ಅನುಸರಿಸುತ್ತಿರುವ ಪ್ರಕ್ರಿಯೆ ಮತ್ತು ವಿಧಾನಗಳು ಕಾನೂನು ಬಾಹಿರವೆಂದೂ ಮತ್ತು
ಇ) ಮತಪಟ್ಟಿಯನ್ನು ತಯಾರಿಸಲು ನಿಗದಿಯಾಗಿರುವ ಕಾಲಾವಧಿಯು ಅಸಮರ್ಪಕವೆಂದೂ ಪ್ರತಿಪಾದಿಸಲಾಗಿತ್ತು.
ಸುಪ್ರೀಂ ಕೋರ್ಟಿನ ಜಸ್ತೀಸ್ ಧುಲಿಯಾ ನೇತ್ರುತ್ವದ ದ್ವಿಸದಸ್ಯ ಪೀಠ ಈ ಅಹವಾಲು ದೇಶದ ಪ್ರಜಾಸತ್ತೆಯ ಅಂತಾರಾಳಾವಾದ ಮತದಾನದ ಹಕ್ಕಿಗೇ ಸಂಬಂಧಪಟ್ಟಿರುವ ಮಹತ್ವದ ವಿಷಯವಾಗಿದೆ ಎಂದು ಒಪ್ಪಿಕೊಂಡಿದೆ. ಮತ್ತು ಅಹವಾಲಿನಲ್ಲಿರುವ ಮೂರೂ ಅಂಶಗಳು ವಿಸ್ತ್ರುತ ಪರಿಶೀಲನೆಗೆ ಯೋಗ್ಯವಾಗಿರುವ ಅಂಶಗಳೆಂದು ಪರಿಗಣಿಸಿದೆ ಹಾಗೂ ಆ ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರಿಸಲು ಅಯೋಗಕ್ಕೆ ಕಾಲಮಿತಿ ವಿಧಿಸಿ ಮುಂದಿನ ವಿಚಾರಣೆಯನ್ನು, ಹಂಗಾಮಿ ಮತಪಟ್ಟಿ ಘೋಷಣೆ ಮಾಡಲು ನಿಗದಿಯಾಗಿರುವ ಆಗಸ್ಟ್ 1 ಕ್ಕೆ ಮುಂಚೆ ಜುಲೈ 28 ಕ್ಕೆ ನಿಗದಿ ಮಾಡಿದೆ. ಹಾಗೂ ನ್ಯಾಯದ ದೃಷ್ಟಿಯಿಂದ ಚುನಾವಣಾ ಅಯೋಗವು ಆಧಾರ್ ಕಾರ್ಡ್, ರೇಶನ್ ಕಾರ್ಡ್ ಮತ್ತು ತಾನೇ ಒದಗಿಸಿರುವ ವೋಟರ್ ಕಾರ್ಡನ್ನು ಪರಿಗಣಿಸುವುದು ಉಚಿತವೆಂದು ಸಲಹೆ ಮಾಡಿದೆ. ಹೀಗೆ ಸಾರದಲ್ಲಿ ಸುಪ್ರೀಂ ಕೋರ್ಟು ಚುನಾವಣಾ ಕ್ರಮಗಳನ್ನು ತರಾಟೆಗೆ ತೆಗೆದುಕೊಂಡಿದೆ. ಅಹವಾಲುದಾರರೇ ಮಧ್ಯಂತರ ತಡೆಯಾಜ್ನೆಗೆ ಒತ್ತಾಯಿಸಲಿಲ್ಲವಾದ್ದರಿಂದ ತಡೆಯಾಜ್ನೆ ನೀಡಿಲ್ಲ. ಆದರೆ ಹಂಗಾಮಿ ಪಟ್ಟಿ ಘೋಷಣೆಗೆ ಮುಂಚೆ ಎಲ್ಲಾ ಗಂಭೀರ ಪ್ರಶ್ನೆಗಳ ವಿಚಾರಣೆಯನ್ನು ಮಾಡಲಿದೆ.
ಆದರೆ ನಾಚಿಕೆಗೆಟ್ಟ ಮೋದಿ ಸರ್ಕಾರ ಸುಪ್ರೀಂ ಕೋರ್ಟು ಚುನಾವಣಾ ಅಯೋಗದ ಕ್ರಮಗಳನ್ನು ಎತ್ತಿಹಿಡಿದಿದೆ ಎಂದು ಅಪಪ್ರಚಾರ ಮಾಡುತ್ತಿದೆ. ಮತ್ತು ಜುಲೈ 28 ರಂದು ತನ್ನ ಎಲ್ಲಾ ಕ್ರಮಗಳು ಸುಗಮವಾಗಿ ನಡೆಯುತ್ತಿದೆ ಎಂದು ವಾದಿಸಲು ಹಲವು ಅಕ್ರಮಗಳನ್ನು ಎಸಗುತ್ತಿದೆ. ತ್ವರಿತವಾಗಿ ಅರ್ಜಿಗಳನ್ನು ಅಪ್ ಲೋಡ್ ಮಾಡಲು ಫ಼ೋಟೊ, ದಾಖಲೆ ಯಾವುದೂ ಇಲ್ಲದೆ ಹಲವಾರು ಬಾರಿ ಮತದಾರರ ಸಹಿಯೂ ಇಲ್ಲದೆ ಅವಸರವಾಗಿ ಕೆಲಸ ಮುಗಿಸುತ್ತಿದೆ. ಅದನ್ನು ಬಯಲು ಮಾಡುತ್ತಿರುವ ಅಜಿತ್ ಅಂಜುಮ್ ರಂತ ಸ್ವತಂತ್ರ ಯೂ ಟ್ಯೂಬರ್ ಗಳ ಮೇಲೆ ಕೇಸು ದಾಖಲಿಸುತ್ತಿದೆ.
ದೇಶಾದ್ಯಂತ SIRಅಲ್ಲ- ದೇಶಾದ್ಯಂತ NRC
ಬಿಹಾರದ ಎಸ್ಐಆರ್ ಅನ್ನೇ ಸುಪ್ರೀಂ ಕೋರ್ಟು ಪ್ರಶ್ನಿಸುತ್ತಿರುವಾಗ ಚುನಾವಣಾ ಅಯೋಗ ದೇಶಾದ್ಯಂತ ಈ ಕಾನೂನು ಬಾಹಿರ ಎಸ್ಐಆರ್ ನಡೆಸಲು ಸಿದ್ಧತೆ ನಡೆಸಲು ಆಅದೇಶಿಸಿದೆ. ಈಗಗಲೇ ಬಿಹಾರದಲ್ಲಿ ಗಮನಿಸಿರುವಂತೆ ಇದು ಮತದಾರರ Special Intensive Revision ಕಾರ್ಯಕ್ರಮವಲ್ಲ. ಬದಲಿಗೆ ಹಿಂಬಾಗಿಲ ಮೂಲಕ NRC ಯನ್ನು ಜಾರಿ ಮಾಡುವ ಮೋದಿ ಸರ್ಕಾರದ ದುಷ್ಟ ಕುತಂತ್ರ. ಆ ಮೂಲಕ ಈ ದೇಶದ ಎಲ್ಲಾ ಧರ್ಮಗಳ ಬಡವರ, ದಲಿತರ, ಆದಿವಾಸಿಗಳ, ಅಲ್ಪಸಂಖ್ಯಾತರ, ಮಹಿಳೆಯರ ನಾಗರಿಕತ್ವವನ್ನು ನಿರಾಕರಿಸಿ ಅವರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸುವ ಅಥವಾ ಮುಸ್ಲಿಮರಾದರೆ ದೇಶದಿಂದಲೇ ಹೊರಹಾಕುವ ಸಂವಿಧಾನ ವಿರೋಧಿ ಹಿಂದೂ ರಾಷ್ಟ್ರ ಯೋಜನೆಯಾಗಿದೆ. ಅದ್ದರಿಂದ ದೇಶ ಮತ್ತೊಮ್ಮೆ ಎಚ್ಚೆತ್ತುಕೊಳ್ಳಬೇಕಿದೆ. ಮತ್ತೊಮ್ಮೆ 2019-20 ರಲ್ಲಿ ಕಟ್ಟಿದಂತೆ ಬೃಹತ್ ಜನಚಳವಳಿಯನ್ನು ಕಟ್ಟಿ SIR ಮುಸುಕಿನ NRC ಯನ್ನು ಸೋಲಿಸಲೇ ಬೇಕಿದೆ.
- ಶಿವಸುಂದರ್
ಜನಪರ ಚಿಂತಕರು, ಲೇಖಕರು…


Leave a reply