ಕೆಲವು ವರ್ಷಗಳ ಹಿಂದಿನವರೆಗೂ ದೈಹಿಕ ಚಟುವಟಿಕೆಗಳು ಹೆಚ್ಚಾಗಿತ್ತು. ಆಗ ಜನರು ಮಾಡುತ್ತಿದ್ದ ಎಲ್ಲಾ ಚಟುವಟಿಕೆಗಳು ಅವರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿದ್ದವು. ನಿರ್ದಿಷ್ಟ ವ್ಯಾಯಾಮ ಎಂಬುದು ಇರಲಿಲ್ಲ. ಕೈಗಾರಿಕೆಗಳು ಬೆಳೆದಂತೆ ಯಂತ್ರಗಳು ಬಂದವು, ದೈಹಿಕ ಶ್ರಮದ ಸ್ಥಾನದಲ್ಲಿ ಮಾನಸಿಕ ಬಲ (ಶಕ್ತಿ) ಪ್ರಾಮುಖ್ಯತೆಯನ್ನು ಪಡೆಯಿತು. ಹಾಗಾಗಿ, ವ್ಯಾಯಾಮ ಅಗತ್ಯವಾಯಿತು. ಆಟಗಳು ಅಗತ್ಯವಾದವು. ಆದ್ದರಿಂದ ಎಲ್ಲಾ ರೀತಿಯ ವ್ಯಾಯಾಮಗಳು, ಜಿಮ್ನಾಸ್ಟಿಕ್ಸ್, ಆಟಗಳು ಮತ್ತು ಕ್ರೀಡೆಗಳನ್ನು ಸೈನ್ಸ್ ಅನುಮೋದಿಸಿತು. ಮೂಗು ಮುಚ್ಚಿಕೊಂಡು ಮಾಡುವ ಧ್ಯಾನ, ಯೋಗ ಅಥವಾ ಸಮಾಧಿಯನ್ನು ವಿಜ್ಞಾನವು ಸ್ವೀಕರಿಸುವುದಿಲ್ಲ.
ಆಟಗಳು ಮತ್ತು ಕ್ರೀಡೆಗಳಿಗೆ ದೇವರು ಅಥವಾ ಧರ್ಮದೊಂದಿಗೆ ಯಾವುದೇ ಸಂಬಂಧವಿಲ್ಲ. ಆದರೆ, ಹಿಂದೂ ಧರ್ಮದಲ್ಲಿ ಕೆಲವರು ಯೋಗವನ್ನು, ಧ್ಯಾನವನ್ನು ಮತ್ತು ಸಮಾಧಿಯನ್ನು ಪರಮಾತ್ಮನಲ್ಲಿ ಮುಳುಗುವ ಒಂದು ಮಾರ್ಗವಾಗಿ ಆರಿಸಿಕೊಂಡಿದ್ದಾರೆ. ಅವರು ಅದನ್ನು ಆರೋಗ್ಯ ಮತ್ತು ಆಧ್ಯಾತ್ಮಿಕ ಚಿಂತನೆಗೆ ಜೋಡಿಸಿದ್ದಾರೆ. ಆದ್ದರಿಂದ, ವಿಜ್ಞಾನವು ಇವುಗಳನ್ನು ಗುರುತಿಸುವುದಿಲ್ಲ. ಧಾರ್ಮಿಕ ನಂಬಿಕೆಗಳಂತೆ, ಇವು ನಂಬಿಕೆಗಳಾಗಿಯೇ ಉಳಿದಿವೆ. ಮೊದಲು ಆ ವ್ಯತ್ಯಾಸವನ್ನು ಗಮನಿಸಿದರೆ, ಅವುಗಳ ಸ್ಥಾನ ಏನೆಂಬುದನ್ನು ಅರಿಯಬಹುದು.
ಯೋಗವನ್ನು ಪ್ರಸ್ತಾಪಿಸಿದ ಪತಂಜಲಿ, “ಯೋಗ: ಚಿತ್ತವೃತ್ತಿ ನಿರೋಧಕ:” ಎಂದರು. ಇದರರ್ಥ ಯೋಗವು ಆಲೋಚನೆಗಳನ್ನು ನಿಯಂತ್ರಿಸುತ್ತದೆ! ಅಷ್ಟೇ ಅಲ್ಲದೇ. ಯೋಗವು ಮೋಕ್ಷಕ್ಕೆ ಮಾರ್ಗವಾಗಿದೆ ಎಂದನು ಪತಾಂಜಲಿಯವನು – ಆದರೆ ಅದು ಆರೋಗ್ಯ ಅಭ್ಯಾಸಗಳಿಗೆ ಕೆಲಸಕ್ಕೆ ಬರುತ್ತದೆ ಎಂದು ಅವರು ಹೇಳಲಿಲ್ಲ. ಇತ್ತೀಚಿನ ದಿನಗಳಲ್ಲಿ ಆಧುನಿಕ ಯೋಗ ಗುರುಗಳು ತಮ್ಮದೇ ಸ್ವಂತ ವಿಚಾರಗಳನ್ನು ಸೇರಿಸಿ ಸಾರ್ವಜನಿಕರನ್ನು (ಜನರನ್ನು) ದಾರಿ ತಪ್ಪಿಸುವ ಮೂಲಕ ವ್ಯಾಪಾರ ನಡೆಸುತ್ತಿದ್ದಾರೆ. ಈ ಆಧುನಿಕ ವ್ಯಾಪಾರ ಗುರುಗಳು ಯೋಗವು ಕ್ಯಾನ್ಸರ್ ಮತ್ತು ಏಡ್ಸ್ ಅನ್ನು ಸಹ ಕಡಿಮೆ ಮಾಡುತ್ತದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಪತಂಜಲಿ ಯೋಗವನ್ನು ಪ್ರಸ್ತಾಪಿಸಿದ ಸಮಯದಲ್ಲಿ ಕ್ಯಾನ್ಸರ್ ಮತ್ತು ಏಡ್ಸ್ ನಂತಹ ವ್ಯಾಧಿಗಳನ್ನು ಗುರುತಿಸಿಲ್ಲ. ಯೋಗವು ಈ ರೋಗಗಳನ್ನು ಕಡಿಮೆ ಮಾಡುತ್ತದೆ ಎಂಬುದಕ್ಕೆ ಯಾವ ಪುರಾವೆಗಳಿವೆ? ಅವುಗಳಿಗೆ ಅವರ ಬಳಿ ಯಾವುದೇ ಪುರಾವೆಗಳಿಲ್ಲ ಎಂಬುದು ನಮಗೆ ತಿಳಿದಿದೆ. ಆದರೂ ಸಹ, ಅವರು ಇನ್ನೂ ‘ಕಿವಿಯಲ್ಲಿ ಹೂವನ್ನು ಇಟ್ಟರೆ’ ಅದನ್ನು ಭಕ್ತಿಯಿಂದ ಇಟ್ಟುಕೊಂಡು ಅವರು ಹೆಣೆದ ಕಥೆಗಳನ್ನು ಕೇಳಿಸಿಕೊಳ್ಳಬೇಕೆಂಬುದೇ ಅವರ ಕೋರಿಕೆಯಾಗಿದೆ! ಯೋಗದಿಂದ ಸರ್ವ ರೋಗಗಳನ್ನು ಗುಣಪಡಿಸಬಹುದಾದರೆ, ಪ್ರತಿದಿನ ಯೋಗಾಭ್ಯಾಸ ಮಾಡುತ್ತಿದ್ದ ರಾಮಕೃಷ್ಣ ಪರಮಹಂಸರು ಮತ್ತು ರಮಣ ಮಹರ್ಷಿಗಳು ಕ್ಯಾನ್ಸರ್ಗೆ ಏಕೆ ಬಲಿಯಾದರು? ಎಂಬುದು ನಾವು ಯೋಚಿಸಬೇಕಾದ ವಿಷಯಗಳಾಗಿವೆ.
‘ಯೋಗ’ ಎಂದರೆ ವ್ಯಾಯಾಮ ಎಂಬ ಅರ್ಥವೂ ಸಹ ಇದೆ, ಅಲ್ಲವೇ? ಮತ್ತು ಅದನ್ನು ಮಾಡುವುದರಲ್ಲಿ ತಪ್ಪೇನಿದೆ? ಎಂದು ಕೆಲವರು ವಾದಿಸುತ್ತಾರೆ. ದೇಹ ದಾರುಢ್ಯತೆಗೆ ಉಪಯೋಗವಾಗುವ ಪರೇಡ್ ಸೈನಿಕರು ಮತ್ತು ಎನ್ಸಿಸಿ ಕೆಡೆಟ್ಗಳಿಗೆ ಇದೆ. ಶಾಲಾ ಮಕ್ಕಳಿಗೆ ಡ್ರಿಲ್ ಪೀರಿಯಡ್ ಇದೆ. ಯೋಗವು ಅಂತಹ ದೈಹಿಕ ವ್ಯಾಯಾಮಗಳ ಅಡಿಯಲ್ಲಿ ಬರುವುದಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ‘ಫಿಜಿಯೋಥೆರೆಪಿ’ ಚಿಕಿತ್ಸೆ ಇದೆ. ರೋಗಿಗೆ ಯಾವ ರೀತಿಯ ವ್ಯಾಯಾಮ ಬೇಕು ಮತ್ತು ಅದನ್ನು ಎಷ್ಟು ಸಮಯ ಮಾಡಬೇಕು ಎಂಬುದನ್ನು ವೈದ್ಯಕೀಯ ತಜ್ಞರು ನಿರ್ಧರಿಸುತ್ತಾರೆ. ಜಿಮ್ನಲ್ಲಿಯೂ ತರಬೇತುದಾರರು ಇದ್ದಾರೆ. ನಿಮ್ಮ ಗುರಿಗಳನ್ನು ತಿಳಿದುಕೊಳ್ಳುವ ಮೂಲಕ ನಿಮಗೆ ಯಾವ ರೀತಿಯ ವ್ಯಾಯಾಮ ಬೇಕು ಎಂದು ಅವರು ನಿರ್ಧರಿಸುತ್ತಾರೆ. ಮುಖ್ಯ ವಿಷಯವೆಂದರೆ ವ್ಯಾಯಾಮಕ್ಕೆ ಒಂದು ಗುರಿ ಇದೆ. ಏನು ಬೇಕು, ಯಾವುದನ್ನು ಸಾಧಿಸಬೇಕು ಎಂಬುದರ ಮೇಲೆ ವ್ಯಾಯಾಮ, ಕಾರ್ಯಕ್ರಮಗಳು ಆಧಾರಿತವಾಗಿವೆ. ಇಷ್ಟೊಂದು ವಿಭಿನ್ನ ಆಟಗಳು, ಕ್ರೀಡೆಗಳು ಮತ್ತು ವ್ಯಾಯಾಮಗಳಿರುವಾಗ, ಯೋಗ ಏಕೆ ಬೇಕು? ಅದರಿಂದ ಏನು ಪ್ರಯೋಜನ? ನೀವು ಅದರ ಬಗ್ಗೆ ಗಂಭೀರವಾಗಿ ಯೋಚಿಸಿದರೆ, ನಿಮಗೆ ಅರ್ಥವಾಗುತ್ತದೆ. ಶಿಕ್ಷಣದಲ್ಲೂ ಇದೇ ರೀತಿ ಇದೆ ಅಲ್ಲವೇ? ನಾವು ಏನು ಮಾಡಲು ಬಯಸುತ್ತೇವೆ ಎಂಬುದರ ಆಧಾರದ ಮೇಲೆ ಕೋರ್ಸ್ಗಳಿವೆ.
ಡಾ.ಅಶೋಕ್ ರಾಜಗೋಪಾಲ್ ಅವರು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯ ವಿಶೇಷ ತಜ್ಞರು. ಅವರು ಹೇಳಿದ ವಿಷಯಗಳನ್ನು ದಿ ಡೈಲಿ ಟೆಲಿಗ್ರಾಫ್ ಪ್ರಕಟಿಸಿತು. ನವದೆಹಲಿಯ ಡೀನ್ ನೆಲ್ಸನ್ ಕೂಡ ಕೆಲವು ವಿವರಗಳನ್ನು ನೀಡಿದ್ದಾರೆ. ಈ ಭಾರತೀಯ ವೈದ್ಯಕೀಯ ತಜ್ಞರು ನೀಡಿದ ವಿವರಗಳು ಮತ್ತು ವಿವರಣೆಗಳಿಂದ ನಾವು ಕಲಿಯಬಹುದಾದದ್ದು ಏನೆಂದರೆ, ಅನೇಕ ಯೋಗ ಗುರುಗಳು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ! ಮತ್ತು ಇನ್ನೂ ಅನೇಕರು ಶಸ್ತ್ರಚಿಕಿತ್ಸೆಯ ಸಾಲಿನಲ್ಲಿ ಕಾಯುತ್ತಿದ್ದಾರೆ. ‘ಥಂಡರ್ಬೋಲ್ಟ್’ ವಜ್ರಾಸನವನ್ನು ಅಭ್ಯಾಸ ಮಾಡುವವರಿಗೆ ಈ ಮಂಡಿಚಿಪ್ಪು ಶಸ್ತ್ರಚಿಕಿತ್ಸೆಗಳು ಕಡ್ಡಾಯವಾಗುತ್ತಿವೆ. ಅವರು ವಜ್ರಾಸನವನ್ನು ಹೇಗೆ ಮಾಡುತ್ತಾರೆ? ಅಂದರೆ, ಅವರು ಎರಡೂ ಮೊಣಕಾಲುಗಳನ್ನು ಹಿಂದಕ್ಕೆ ಬಗ್ಗಿಸಿ ತಮ್ಮ ಹಿಮ್ಮಡಿಯ ಮೇಲೆ ಕುಳಿತುಕೊಳ್ಳುತ್ತಾರೆ. ಇದು ಮೊಣಕಾಲುಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ನರಗಳು ಮತ್ತು ಕೀಲುಗಳಿಗೆ ಹಾನಿ ಮಾಡುತ್ತದೆ. ಪರಿಣಾಮವಾಗಿ, ಯೋಗ ಗುರುಗಳು ಮತ್ತು ಅವರ ಶಿಷ್ಯರು ಒಟ್ಟಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಈ ಯೋಗ ಗುರುಗಳಲ್ಲಿ ಯಾರಿಗೂ ಮಾನವ ಅಂಗರಚನಾಶಾಸ್ತ್ರದ ಬಗ್ಗೆ ಯಾವುದೇ ತಿಳುವಳಿಕೆ ಇರುವುದಿಲ್ಲ. ಅವರು ತಮ್ಮ ಕಾಲುಗಳು, ತೋಳುಗಳು, ಕುತ್ತಿಗೆ ಮತ್ತು ಭುಜಗಳನ್ನು ಇಷ್ಟ ಬಂದಂತೆ ಬಗ್ಗಿಸಿ, ವಿಚಿತ್ರ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರನ್ನು (ಜನರನ್ನು) ಆಕರ್ಷಿಸುತ್ತಾರೆ.
ಯೋಗದಿಂದ ಕೀಲು ನೋವು ಉಂಟಾಗಬಹುದು ಮತ್ತು ಈಗಾಗಲೇ ನೋವನ್ನು ಹೊಂದಿರುವವರಿಗೆ ಅದು ಇನ್ನಷ್ಟು ಹದಗೆಡಿಸಬಹುದು ಎಂದು ಮೂಳೆ ವೈದ್ಯರು ವಿವರಿಸುತ್ತಾರೆ. ಬೆನ್ನುಮೂಳೆಯನ್ನು ಹಿಂದಕ್ಕೆ ಬಗ್ಗಿಸುವುದು ಅನೇಕ ಅನಾನುಕೂಲಗಳನ್ನುಂಟು ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಮಾನವ ಬೆನ್ನುಮೂಳೆಯು ಮುಂದಕ್ಕೆ ಬಾಗುವಂತೆ ರಚನೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಹಿಂದಕ್ಕೆ ಬಾಗುವುದು ಅಪಾಯಕಾರಿಯಲ್ಲವೇ? ಮನುಷ್ಯ ಧ್ವಜವನ್ನು ಹಾರಿಸುತ್ತಿರುವಂತೆ ಬೆನ್ನುಮೂಳೆಯು ಧ್ವಜಸ್ತಂಭದಂತಿದ್ದು, ನೆಲಕ್ಕೆ 90 ಡಿಗ್ರಿ ಕೋನದಲ್ಲಿ ನಿಂತಿದೆ. ಅಂದರೆ, ಗುರುತ್ವಾಕರ್ಷಣೆಯ ಬಲವನ್ನು ಪ್ರತಿರೋಧಿಸುತ್ತಾ.. ಬೆನ್ನುಮೂಳೆಯು ಮನುಷ್ಯರನ್ನು ನೇರವಾಗಿ ಹಿಡಿದಿಟ್ಟುಕೊಳ್ಳುತ್ತದೆ, ಅಂತಹ ಪ್ರಮುಖ ಭಾಗವನ್ನು ಮನಸ್ಸೋ ಇಚ್ಛೆಯಂತೆ ಬಗ್ಗಿಸುವುದು ಸರಿಯಾದ ವಿಧಾನವಲ್ಲ. ಬಾಲ್ಯದಿಂದಲೂ ಆಸನಗಳನ್ನು ಅಭ್ಯಾಸ ಮಾಡುತ್ತಿರುವವರ ವಿಷಯ ಬೇರೆ! ಮಧ್ಯವಯಸ್ಸಿನಲ್ಲಿ ಅಥವಾ ವೃದ್ಧಾಪ್ಯದಲ್ಲಿ ಪ್ರಾರಂಭಿಸುವವರು ಸಮಸ್ಯೆಗಳನ್ನು ಎದುರಿಸುವುದು ಖಚಿತ.
ಪ್ರಾಣಾಯಾಮವು ಆಳವಾಗಿ ಉಸಿರಾಡುವುದನ್ನು ಮತ್ತು ಹೊರಹಾಕಬೇಕಾದ ಗಾಳಿಯನ್ನು, ಅಂದರೆ ಇಂಗಾಲದ ಡೈಆಕ್ಸೈಡ್ ಅನ್ನು ಶ್ವಾಸಕೋಶದಲ್ಲಿ ದೀರ್ಘಕಾಲ ಹಿಡಿದಿಟ್ಟುಕೊಳ್ಳುವುದನ್ನು ಒಳಗೊಂಡಿರುತ್ತದೆ. ಇದು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಹೆಚ್ಚು ಆಮ್ಲಜನಕವನ್ನು ಉಸಿರಾಡುವುದರಿಂದ ಆರೋಗ್ಯ ಸುಧಾರಿಸಬಹುದು. ಆದರೆ ಇಂಗಾಲದ ಡೈಆಕ್ಸೈಡ್ ಬೇಗನೆ ಬಿಡುಗಡೆಯಾಗಬೇಕಿದೆ. ದೇಹದ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ಮತ್ತು ಒಟ್ಟಾರೆ ಶಾರೀರಿಕ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲು ಮೆದುಳಿಗೆ ಹೆಚ್ಚಿನ ರಕ್ತದ ಅಗತ್ಯವಿದೆ. ದೇಹವು ಪಡೆಯುವ ಆಮ್ಲಜನಕದ ಶೇಕಡಾ 20% ರಷ್ಟು ಮೆದುಳು ಬಳಸುತ್ತದೆ. ಯೋಗ ಮಾಡುವಾಗ, ಮೆದುಳಿಗೆ ಸಾಕಷ್ಟು ಆಮ್ಲಜನಕ ಸಿಗುವುದಿಲ್ಲ. ಆದ್ದರಿಂದ ಮೆದುಳು ಜಡವಾಗುತ್ತದೆ. ಅಲ್ಲದೇ ಭ್ರಮೆಗಳು ಬರಲು ಪ್ರಾರಂಭಿಸುತ್ತವೆ. ಅದೇ ರೀತಿ, ಹೊಟ್ಟೆ ತುಂಬ ಊಟ ಮಾಡಿದ ನಂತರ, ಗಮನಿಸಿ, ದೇಹವು ಭಾರವಾಗಿ, ಜಡವಾಗಿ ಮತ್ತು ಸ್ತಬ್ಧವಾಗಿರುತ್ತದೆ. ಏಕೆಂದರೆ ಹೊಟ್ಟೆ ತುಂಬಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ರಕ್ತ ಜೀರ್ಣಾಂಗ ವ್ಯವಸ್ಥೆಗೆ ಹೋಗುತ್ತದೆ. ಪರಿಣಾಮವಾಗಿ, ಮೆದುಳಿಗೆ ಆಮ್ಲಜನಕ ಮತ್ತು ರಕ್ತದ ಹರಿವು ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ. ಕೈಕಾಲುಗಳಲ್ಲಿ ಮರಗಟ್ಟುವಿಕೆ ಇಂತಹುದೇ – ಅದು ರಕ್ತ ಪರಿಚಲನೆಯಲ್ಲಿ ಅಡಚಣೆ – ಯೋಗ ಮಾಡುವಾಗ, ಧ್ಯಾನ ಮಾಡುವಾಗ ಮತ್ತು ಸಮಾಧಿಗೆ ಹೋದಾಗಲೂ ಇದೇ ರೀತಿ ಸಂಭವಿಸುತ್ತದೆ! ಅದು ಆಲೋಚನೆಗಳನ್ನು ತಡೆಯುವುದು, ಮೆದುಳನ್ನು ಮಂದಗೊಳಿಸುವುದು ಮತ್ತು ಭ್ರಮೆಗಳು, ಕಲ್ಪನೆಗಳಿಗೆ ಕೊಂಡೊಯ್ಯುತ್ತದೆ!
‘ಉಸಿರಿನ ಮೇಲೆ ಕೇಂದ್ರೀಕರಿಸುವುದು‘ ಎಂದು ಕೆಲವರು ಹೇಳುತ್ತಾರೆ. ಅದರ ಅರ್ಥವೇನು? ಕಣ್ಣುಗಳನ್ನು ಮುಚ್ಚುವುದು, ಉಸಿರಾಟದ ಮೇಲೆ ಕೇಂದ್ರೀಕರಿಸುವುದು ಮತ್ತು ನಿಮ್ಮ ಇಷ್ಟ ದೇವರ ಬಗ್ಗೆ ಯೋಚಿಸುವುದು. ಹೀಗೆ, ಹಾಗೆ ಮಾಡಿ, ಭ್ರಮೆಗಳು ಮತ್ತು ಊಹೆಗಳನ್ನು ಹೆಚ್ಚಿಸಿಕೊಂಡು, ಪೋಷಿಸಿಕೊಂಡು ದೇವರ ದರ್ಶನವಾಗಿದೆ ಎಂದು ಸಂತೃಪ್ತಿಯನ್ನು ಪಡೆಯಬಹುದು. ಈ ಲೌಕಿಕ ಬಂಧನಗಳಿಂದ ಮುಕ್ತರಾಗಿ ಒಂದು ನಿರ್ದಿಷ್ಟ ಸ್ಥಾಯಿಗೆ ಬೆಳೆದು ತಪಸ್ಸು ಮಾಡಿದರೆ ನಾವು ಆಧ್ಯಾತ್ಮಿಕ ಶಕ್ತಿಯನ್ನು ಪಡೆಯಬಹುದು ಎಂದು ಸಂತರು ಹೇಳುತ್ತಾರೆ. ನಿಜವಾದ ವಿಷಯವೆಂದರೆ ಇವು ಮೆದುಳಿಗೆ ಸಾಕಷ್ಟು ಆಮ್ಲಜನಕ ಸಿಗದಿದ್ದಾಗ ಉದ್ಭವಿಸುವ ಭ್ರಮೆಗಳೇ ಆಗಿದೆ! ನಮ್ಮಲ್ಲಿ ಸಂತರು ಮತ್ತು ಮಹಾನ್ ಋಷಿಗಳು ಇದ್ದಾರೆ. ಈ ಸಾವಿರಾರು ವರ್ಷಗಳಲ್ಲಿ, ಅವರಲ್ಲಿ ಯಾರಾದರೂ ತಪಸ್ಸು ಮಾಡಿ ದೇವರನ್ನು ನಿಜವಾಗಿಯೂ ನೋಡಿದ್ದಾರೆಯೇ? ಯಾರಾದರೂ ತಮ್ಮ ದೇವರನ್ನು ಬೇರೆಯವರಿಗೆ ತೋರಿಸಿ ಪರಿಚಯಿಸಿದ್ದಾರೆಯೇ? ಇಲ್ಲ. ಮೆದುಳನ್ನು ನಿಷ್ಪ್ರಯೋಜಕ ವಸ್ತುವನ್ನಾಗಿ ಪರಿವರ್ತಿಸುವುದು ದೊಡ್ಡ ಸಾಧನೆಯಲ್ಲ. ಮೆದುಳನ್ನು ನಿರಂತರವಾಗಿ ಬಳಸುತ್ತಾ, ಹೊಸ ಹೊಸ ಅನ್ವೇಷಣೆಗೆ, ಆವಿಷ್ಕಾರಗಳಿಗೆ ಬಳಸುವುದು ಮನುಷ್ಯರ ಗುರಿಯಾಗಿರಬೇಕು. ಸಕ್ರಿಯ ಅಂಗವನ್ನು ಹೆಚ್ಚು ಸಕ್ರಿಯಗೊಳಿಸುವುದು ವಿಜ್ಞಾನಿಗಳ ಕೆಲಸವಾಗಬೇಕು!
“ಜ್ಞಾನವನ್ನು ಪಡೆಯುವ ಹೆಸರಿನಲ್ಲಿ, ಮೆದುಳನ್ನು ಮರಗಟ್ಟುವ, ಭ್ರಮೆಗಳಲ್ಲಿ ಮುಳುಗಿಸುವ ಮತ್ತು ದೇವಲೋಕಗಳನ್ನು ಭೇಟಿ ಮಾಡಿದ್ದೇನೆ, ದೇವರನ್ನು ನೋಡಿದ್ದೇನೆ ಎಂಬ ಭ್ರಮೆಯಲ್ಲಿ ಜನರಿಗೆ ಸುಳ್ಳು ಮಾಹಿತಿಯನ್ನು ನೀಡುವವರನ್ನು ಹುಚ್ಚರೆಂದು ವರ್ಗೀಕರಿಸಬೇಕು. ಮಹಾನ್ ವ್ಯಕ್ತಿಗಳು ಯಾವಾಗಲೂ ತಮ್ಮ ಸಹ ಮನುಷ್ಯರಿಗೆ ಉಪಯುಕ್ತವಾದ ಕೆಲಸಗಳನ್ನು ಮಾಡುತ್ತಾರೆ. “ಅವರು ತಮ್ಮನ್ನು ತಾವು ನಿಷ್ಪ್ರಯೋಜಕರನ್ನಾಗಿ ಮಾಡಿಕೊಳ್ಳುವ ಪ್ರಕ್ರಿಯೆಗಳನ್ನು ಕೈಗೊಳ್ಳುವುದಿಲ್ಲ. ಜನರಿಗೆ ತಪ್ಪು ಮಾರ್ಗಗಳನ್ನು ತೋರಿಸುವುದಿಲ್ಲ. ಅವರು ವಾಸ್ತವವಾಗಿ ಭವ್ಯ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತಾರೆ.
- ಲೇಖಕರು, ಜನಪರ ಸಾಹಿತಿ, ಜೀವಶಾಸ್ತ್ರಜ್ಞರಾದ ಡಾ.ದೇವರಾಜು ಮಹಾರಾಜು
ಅನುವಾದ : ರೇಣುಕಾ ಭಾರತಿ


Leave a reply