ಭಾರತದ ಸಾಮಾನ್ಯ ವಿದ್ಯುತ್ ಗ್ರಾಹಕರಿಂದ ಶೇ. .250 ರಷ್ಟು ಹೆಚ್ಚುವರಿ ಸುಲಿಗೆ? ” 25 ವರ್ಷಗಳಲ್ಲಿ ಯೂನಿಟ್ಟಿಗೆ ಸರಾಸರಿ 1 ರೂ. ತಗಲುವ ಸೋಲಾರ್ ವಿದ್ಯುತ್ತನ್ನು ಮುಂದಿನ 25 ವರ್ಷಗಳ ಕಾಲವೂ ಯೂನಿಟ್ಟಿಗೆ 2.50 ಗೆ ಮಾರಿ ಮೊದಾನಿಗಳಿಂದ 50,000 ಕೋಟಿ ರೂ.ಗಳ ಹೆಚ್ಚುವರಿ ಹಗಲು ದರೋಡೆ. ಆದಾನಿ ಸೋಲಾರ್ ವಿದ್ಯುತ್ ಎಂಬ ಮಹಾನ್ ಭ್ರಾಷ್ಟಾಚಾರದ ವಿವರಗಳು ನಿನ್ನೆಯಿಂದ ಹೊರಗೆ ಬರುತ್ತಿವೆ. ವಾಸ್ತವದಲ್ಲಿ ಆದಾನಿ ದೇಶಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ನಿಜವಾದ ದೇಶಭಕ್ತರಿಗೆ ಆಕ್ರೋಶ ಹುಟ್ಟಬೇಕು. ಆದರ ಬದಲಿಗೆ ಈ ಜನದ್ರೋಹಿ ನಕಲಿ ದೇಶಭಕ್ತ ಬಿಜೆಪಿಗಳು ಆದಾನಿ ಸಮರ್ಥನೆಗೆ ನಿಂತುಬಿಟ್ಟಿವೆ.
ಮೋದಿ ಮೌನದ ಮೂಲಕ. ಉಳಿದ ಕೂಗುಮಾರಿಗಳು ಆದಾನಿಯ ಮೇಲಿನ ಆಪಾದನೆ ಎಂದರೆ ಭಾರತದ ಮೇಲಿನ ಆಪಾದನೆ ಎಂದು ಅರಚಾಡುವ ಮೂಲಕ! ಆದರೆ ಇದು ಕೇವಲ ಕಾನೂನು ಬಾಹಿರ ಲಂಚದ ವಿಷಯ ಮಾತ್ರವಲ್ಲ. ಈ ಯೋಜನೆಯ ಮೂಲಕ ಆದಾನಿ ಸಂಸ್ಥೆ ಈ ದೇಶದ ಗ್ರಾಹಕರಿಂದ /ಸಾಮಾನ್ಯ ಭಾರತೀಯರಿಂದ 50000 ಕೋಟಿಗೂ ಹೆಚ್ಚು ಹಣವನ್ನು ಸುಲಿಗೆ ಮಾಡಲು ಹೊರಟಿತ್ತು ಎಂಬುದು ಅರ್ಥವಾದರೆ ಹೇಗೆ ಈ ಮೊದಾನಿಗಳು ದೇಶದ್ರೋಹಿಗಳೂ ಮತ್ತು ಜನದ್ರೋಹಿಗಳೂ ಕೂಡ ಎಂಬುದು ಅರ್ಥವಾಗುತ್ತದೆ.
*ಹಗಲು ದರೋಡೆಯ ಯೋಜನೆ *:
ಅಮೇರಿಕಾ ಸರ್ಕಾರವೇ ತನ್ನ ಷೇರುದಾರರಿಗೆ ಆದಾನಿ ಸಂಸ್ಥೆ ದೋಖಾ ಮಾಡುತ್ತಿದೆ ಎಂದು ವಿಚಾರಣೆ ನಡೆಸಿ ಬಯಲು ಮಾಡಿರುವ ಈ ಹಗಲು ದರೋಡೆಯ ಯೋಜನೆಯ ಪ್ರಕಾರ ಆದಾನಿ ಕಂಪನಿ 12 ಗಿಗಾ ವ್ಯಾಟ್ ಅಂದರೆ 12000 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ತನ್ನು ಉತ್ಪಾದಿಸಿ 25 ವರ್ಷಗಳ ಕಾಲ ಯೂನಿಟ್ಟಿಗೆ 2.50 ರೂ ಸ್ಥಿರ ದರದಲ್ಲಿ ಭಾರತ ಸರ್ಕಾರದ ಸೋಲಾರ್ ಎನರ್ಜಿ ಕಾರ್ಪೊರೇಷನ್ ಮಾರುವ ಒಪ್ಪಂದ ಮಾಡಿಕೊಂಡಿದೆ.
ಆದರೆ ಭಾರತ ಸರ್ಕಾರದ ಸೋಲಾರ್ ಕಾರ್ಪೊರೇಷನ್ ಅದನ್ನು ಅದೇ ದರಕ್ಕೆ ರಾಜ್ಯಗಳ ವಿದ್ಯುತ್ ಕಂಪನಿಗಳಿಗೆ ಮಾರಬೇಕು. ಆದರೆ ಆದಾನಿ ಸೂಚಿಸಿದ ದರ ಅತ್ಯಂತ ದುಬಾರಿ. ಹೀಗಾಗಿ ಯಾವ ರಾಜ್ಯವೂ ಕೊಳ್ಳಲು ಮುಂದೆ ಬರಲಿಲ್ಲ. ಆಗ ಆದಾನಿಯೇ ಮುಂದೆ ನಿಂತು ಪ್ರಮುಖವಾಗಿ ಅಂದಿನ ಆಂಧ್ರದ ಜಗನ್ ಸರ್ಕಾರಕ್ಕೆ 1750 ಕೋಟಿ ಲಂಚವೂ ಸೇರಿ 2500 ಕೋಟಿ ಲಂಚಕೊಟ್ಟು ತಾನು ನಿಗಾಡಿ ಮಾಡಿದ ದುಪ್ಪಟ್ಟು ದರಕ್ಕೆ ಆ ರಾಜ್ಯಗಳು ವಿದ್ಯುತ್ ಖರೀದಿ ಮಾಡುವಂತೆ ಒಪ್ಪಿಸಿ ಒಡಂಬಡಿಕೆ ಮಾಡಿಕೊಂಡಿದೆ.
ಅಂದರೆ ಸಾವಿರಾರು ಕೋಟಿ ಲಂಚ ಪಡೆದ ನಂತರ ದುಬಾರಿ ದರವನ್ನು ತೆರಲು ರಾಜ್ಯ ಸರ್ಕಾರಗಳು ಒಪ್ಪಿಕೊಂಡಿವೆ. . ಆದರೆ ಅದನ್ನು ತೆರುವರು ಸಾಮಾನ್ಯ ಜನರೇ ಅಲ್ಲವೇ? ಹೀಗಾಗಿ ದು ಕೇವಲ ಭ್ರಷ್ಟಾಚಾರದ ವಿಷಯವಲ್ಲ. ಜನದ್ರೋಹದ ಸಂಚು ಕೂಡ. ಈ ಖರೀದಿಯ ವಿವರಗಳನ್ನು ನೋಡಿದರೆ ಜನರನ್ನು ಮೂರುಪಟ್ಟು ಹೆಚ್ಚಿಗೆ ಸುಲಿಗೆ ಮಾಡಲು ಹೊರಟಿದ್ದು ಸ್ಪಷ್ಟವಾಗುತ್ತದೆ.
ವಂಚನೆಯ ವಿವರಗಳು
ಒಂದು ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸಲು ಆಗುವ ಖರ್ಚು – 3 ಕೋಟಿ
ಒಂದು ಗಿಗಾ ವ್ಯಾಟ್ ಅಂದರೆ ಸಾವಿರ ಗಿಗಾ ವ್ಯಾಟ್ ಉತ್ಪಾದನೆಗೆ -3000 ಕೋಟಿ ಖರ್ಚು. 12 ಗಿಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ – 36000 ಕೋಟಿ ಬಂಡವಾಳ ವೆಚ್ಚ. ಬೃಹತ್ ಪ್ರಮಾಣದಲ್ಲಿ ಸೋಲಾರ್ ವಿದ್ಯುತ್ ನಿರ್ಮಿಸಿದಾಗ ತಲಾವಾರು ಬಂಡವಾಳ ವೆಚ್ಚ ೨- ೨.೫ ಕೋಟಿಗೆ ಇಳಿಯುತ್ತದೆ.. ಅರ್ಥಾತ್ ಒಟ್ಟು ಬಂಡವಾಳ ವೆಚ್ಚ 25000 ಕೋಟಿಗೆ ಇಳಿಯುತ್ತದೆ. ಒಂದು ವರ್ಷದಲ್ಲಿ ಒಂದು ಮೆಗಾ ವ್ಯಾಟ್ ಸ್ಥಾವರ 14.46 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸುತ್ತದೆ. ಅದನ್ನು ಯೂನಿಟ್ಟಿಗೆ 2.50 ರೂ ನಂತೆ ಮಾರಲು ಆದಾನಿ ಒಪ್ಪಂದ ಮಾಡಿಕೊಂಡಿದೆ.
ಅಂದರೆ ಆ ಲೆಕ್ಕದಲ್ಲಿ ಸೋಲಾರ್ ವಿದ್ಯುತ್ತನ್ನು ಜನರಿಗೆ ಮಾರಿದರೆ ವರ್ಷಕ್ಕೆ ಒಂದು ಮೆಗಾ ವ್ಯಾಟಿಗೆ 36 ಲಕ್ಷ ರೂ. ಆದಾಯ. ಹೀಗಾಗಿ ಕೇವಲ ಏಳು ವರ್ಷಗಳಲ್ಲಿ ಅದರ ಬಂಡವಾಳ ವೆಚ್ಚವೆಲ್ಲಾವೂ ವಾಪಾಸ್ ಆಗಿರುತ್ತದೆ. ಏಕೆಂದರೆ ಸೂರ್ಯ ನ ಬೆಳಕು ಮತ್ತು ಭೂಮಿ ಉಚಿತ, ಇನ್ನುಳಿದದದ್ದು ಕೇವಲ ಬ್ಯಾಟರಿ ಮತ್ತು ನಿರ್ವಹಣೆ ವೆಚ್ಛ. ಆದ್ದರಿಂದ ಸರ್ಕಾರದ ಅಂದಾಜಿನ ಪ್ರಕಾರವೇ ಇನ್ನು ಎರಡು ವರ್ಷಗಳಲ್ಲಿ ಒಂದು ಯುನಿಟ್ ಸೋಲಾರ್ ವಿದ್ಯುತ್ ನ ಒಟ್ಟಾರೆ ವೆಚ್ಚ 2 ರೂ ಗೆ , ಆಯಾ ನಂತರದ ವರ್ಷಗಳಲ್ಲಿ 1.50 ರೂಗೆ ಇಳಿಯಲಿದೆ. ಮುಂದಿನ 25 ವರ್ಷದ ಸರಾಸರಿ ಹಿಡಿದರೇ ಒಂದು ಯುನಿಟ್ ಸೋಲಾರ್ ವಿದ್ಯುತ್ತಿನ ವೆಚ್ಚ ರೂ. 1.00-1.25 ಮಾತ್ರ ಆಗಲಿದೆ.
ಆದರೆ ಆದಾನಿ ಸಂಸ್ಥೆ ಮುಂದಿನ 25 ವರ್ಷಗಳ ವರಗೆ ಯೂನಿಟ್ಟಿಗೆ 2.50 ರೂ ಸ್ಥಿರ ಬೆಲೆಯಲ್ಲಿ ಬದಲಾಗದ ದರದ ಮಾರುವ ಒಪ್ಪಂದ ಮಾಡಿಕೊಂಡಿದೆ. ಅದರ ಅರ್ಥ ಮುಂದಿನ 25 ವರ್ಷಗಳಲ್ಲಿ ಆದಾನಿ ಸಂಸ್ಥೆ ಭಾರತದ ಜನರಿಗೆ 43,380 ಕೋಟಿ ಯುನಿಟ್ಟುಗಳಷ್ಟು ಸೋಲಾರ್ ವಿದ್ಯುತ್ತನ್ನು ಯೂನಿಟ್ಟಿಗೆ 2.50 ರೂ ನಂತೆ ಮಾರುತ್ತದೆ. ಆ ಮೂಲಕ 1,08,450 ಕೋಟಿ ರೂ. ಗಳನ್ನೂ ಜನರಿಂದ ಸುಲಿದಿರುತ್ತದೆ. ಆದರೆ ಪ್ರತಿವರ್ಷ ಸೋಲಾರ ವಿದ್ಯುತ್ತಿನ ತಲಾವಾರು ವೆಚ್ಚ ಕಡಿಮೆ ಯಾಗುತ್ತಾ ಹೋಗುತ್ತದೆ. ಹೀಗಾಗಿ 25 ವರ್ಷದ ಸರಾಸರಿಯಲ್ಲಿ ಸೋಲಾರ್ ವಿದ್ಯುತ್ತಿನ ಪ್ರತಿ ಯೂನಿಟ್ಟಿನ ದರ, ಸರಾಸರಿ ಲಾಭದ ದರವನ್ನೂ ಸೇರಿಸಿ ರೂ. 1-1.25 ಕ್ಕಿಂತ ಜಾಸ್ತಿ ಆಗಬಾರದು. ಅಂದರೆ ಒಟ್ಟಾರೆ ಆದಾನಿ ಹಾಕಿದ 36,000 ಕೋಟಿ ಬಂಡವಾಳಕ್ಕೆ ನ್ಯಾಯಯುತ ಲಾಭವನ್ನು ಸೇರಿಸಿ ಲೆಕ್ಕಾಚಾರ್ರ ಹಾಕಿದರೆ ಯೂನಿಟ್ಟಿಗೆ 1.25 ಸರಾಸರಿ ದರದಲ್ಲಿ 25 ವರ್ಷಗಳಲ್ಲಿ 54,225 ಕೋಟಿ ಮಾತ್ರ ದಕ್ಕಬೇಕು.
ಆದರೆ ಆದಾನಿ ಕಂಪನಿಗಳು 25 ವರ್ಷಗಳುದ್ದಕ್ಕೂ 2.50 ರೂ. ಸ್ಥಿರ ದರವನ್ನೇ ಲಂಚಕೊಟ್ಟು ನಿಗದಿ ಮಾಡಿರುವುದರಿಂದ ಮುಂದಿನ 25 ವರ್ಷಗಳಲ್ಲಿ ಆದಾನಿ 54225 ಕೋಟಿ ಯಾ ಬದಲು 1,08,450 ಕೋಟಿ ಆರ್ಥಾತ್ ಎರಡು ಪಟ್ಟು ಹೆಚ್ಚು ಲಾಭ ಮಾಡುತ್ತದೆ. ಅಂದರೆ ಮೋದಿ ಸರ್ಕಾರಕ್ಕೆ ಹಾಗೂ ಆಂಧ್ರಾದ ಜಗನ್ ಮತ್ತು ತಮಿಳುನಾಡಿನ ಡಿಎಂಕೆ ಇನ್ನಿತ್ಯಾದಿ ಸರ್ಕಾರಗಳಿಗೆ 2500 ಕೋಟಿ ಲಂಚ ಕೊಟ್ಟು 55000 ಸಾವಿರ ಕೋಟಿ ಲಾಭ.! ಯಾವ ಉದ್ಯಮದಲ್ಲಿ ಈ ಪರಿ ಲಾಭವಿರುತ್ತದೆ! ವಿದ್ಯುತ್ ದರವನ್ನು ತೆರುವರು ಈ ದೇಶದ ಸಾಮಾನ್ಯ ಜನತೆಯೇ ಆದ್ದರಿಂದ ಇದು ಈ ದೇಶದ ಸಾಮಾನ್ಯ ಜನರ ಹಗಲು ದರೋಡೆಯೇ ಅಲ್ಲವೇ? ಇದು ಸಾಧ್ಯವಾದದ್ದು ಈ ಸುಲಿಗೆಯನ್ನು ತಡೆಯಾಬೇಕಿದ್ದ ಚೌಕಿದಾರನೇ ಚೋರನ ಆಪ್ತ ಗೆಳೆಯನಾಗಿರುವುದರಿಂದ… ಬಿಜೆಪಿಯ ಬೇಲಿಯೇ ಆದಾನಿ ಗಳ ಜೊತೆ ಸೇರಿ ಭಾರತವನ್ನು ಮೇಯುತ್ತಿರುವುದರಿಂದ.. ಅಲ್ಲವೇ ದೇಶಭಕ್ತರೆ ?
- ಶಿವಸುಂದರ್
ಜನಪರ ಚಿಂತಕರು, ಲೇಖಕರು..
Leave a reply