ನ್ಯೂಡೆಲ್ಲಿ : ದೇಶದಲ್ಲಿ ಲಕ್ಷಾಂತರ ಮಕ್ಕಳು ಕುಂಠಿತ ಬೆಳವಣಿಗೆ (ವಯಸ್ಸಿಗೆ ತಕ್ಕ ಎತ್ತರದ ಕೊರತೆ)ಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಅನಾದಿಕಾಲದಿಂದಲೂ ಬಂದಿರುವ ಜಾತಿ ವ್ಯವಸ್ಥೆಯ ಕ್ರೌರ್ಯಗಳು ಎದ್ದು ಕಾಣುತ್ತಿದೆ. ಅಲ್ಲದೇ ಸರ್ಕಾರಗಳ ನಿರ್ಲಕ್ಷ್ಯದ ಕ್ರಮಗಳೂ ಇದಕ್ಕೆ ಕಾರಣವಾಗಿವೆ. ತಕ್ಕ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಅಪೌಷ್ಟಿಕತೆಯಿಂದಾಗಿ ಮಕ್ಕಳು ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಜ್ಞರು ಮತ್ತು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಳೂ ಇದನ್ನೇ ಹೇಳುತ್ತಿವೆ. ಸಬ್-ಸಹಾರಾ ಆಫ್ರಿಕಾಕ್ಕಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಭಾರತದಲ್ಲಿ ಮಕ್ಕಳ ಕುಂಠಿತ ಬೆಳವಣಿಗೆಗೆ ಶತಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಜಾತಿ ತಾರತಮ್ಯ ಕೂಡ ಕಾರಣವಾಗಿದೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗ ಪಡಿಸಿದೆ. ಅಶೋಕ ವಿಶ್ವವಿದ್ಯಾಲಯದ ಅಶ್ವಿನಿ ದೇಶಪಾಂಡೆ ಮತ್ತು ಮಲೇಷ್ಯಾದ ಮೊನಾಶ್ ವಿಶ್ವವಿದ್ಯಾಲಯದ ರಾಜೇಶ್ ರಾಮಚಂದ್ರನ್ ಅವರು ಈ ಅಧ್ಯಯನವನ್ನು ನಡೆಸಿದರು.
ಆಫ್ರಿಕಾ ದೇಶಗಳಿಗಿಂತ ಬರ್ಬರ್ ಸ್ಥಿತಿಯಲ್ಲಿ ಭಾರತ..
ಪ್ರಪಂಚದ ಈ ಎರಡು ಭಾಗಗಳಲ್ಲಿ, ಐದು ವರ್ಷದೊಳಗಿನ ಶೇಕಡಾ 44 ರಷ್ಟು ಮಕ್ಕಳಿದ್ದಾರೆ. ವಿಶ್ವಾದ್ಯಂತ ಸುಮಾರು ಶೇಕಡಾ 70 ರಷ್ಟು ಕುಂಠಿತ ಬೆಳವಣಿಗೆಯಿಂದಾಗಿ ತೊಂದರೆಗೀಡಾದ ಮಕ್ಕಳು ಈ ಎರಡು ಪ್ರದೇಶಗಳಿಂದ ಬಂದವರು ಎಂಬುದು ಗಮನಾರ್ಹ. ಇದು ಅಪೌಷ್ಟಿಕತೆಯ ಸೂಚ್ಯಂಕ ಎಂದು ವಿಶ್ಲೇಷಕರು ಹೇಳುತ್ತಾರೆ. ಆದರೆ, ಭಾರತದಲ್ಲಿ ಈ ಪ್ರಮಾಣ ಶೇ.35.7ರಷ್ಟಿದೆ. 49 ದೇಶಗಳೊಂದಿಗೆ ಕೂಡಿರುವ ಉಪ-ಸಹಾರನ್ ಆಫ್ರಿಕಾ ಶೇಕಡಾ 33.6 ರಷ್ಟು ಅಂಕಗಳೊಂದಿಗೆ ಭಾರತಕ್ಕಿಂತ ಕಡಿಮೆಯಾಗಿದೆ. ಉಪ-ಸಹಾರನ್ ಆಫ್ರಿಕಾಕ್ಕೆ ಹೋಲಿಸಿದರೆ ಭಾರತದಲ್ಲಿ ಮಕ್ಕಳು ಕಡಿಮೆ ಎತ್ತರದ ಅಂತರದ ಮೇಲೆ ಕೇಂದ್ರೀಕರಿಸಿ, ಮಕ್ಕಳ ಅಪೌಷ್ಟಿಕತೆಯಲ್ಲಿ ಸಾಮಾಜಿಕ ಗುರುತನ್ನು, ವಿಶೇಷವಾಗಿ ಜಾತಿಯ ಪಾತ್ರವನ್ನು ನಿರ್ಲಕ್ಷಿಸಲಾಗಿದೆ ಎಂದು ಅಧ್ಯಯನ ಹೇಳಿದೆ.
‘ಗೋಲ್ಡನ್ ಪೀರಿಯಡ್’ ನಲ್ಲಿ ಮಕ್ಕಳ ಸವಾಲು..
ಮಕ್ಕಳ ಜೀವನದಲ್ಲಿ ‘ಸುವರ್ಣ ಅವಧಿ’ (ಗೋಲ್ಡನ್ ಪೀರಿಯಡ್) ಎಂದು ಕರೆಯಲ್ಪಡುವ ಮಗುವಿನ ಜೀವನದ ಮೊದಲ ಸಾವಿರ ದಿನಗಳು ಬಹಳ ನಿರ್ಣಾಯಕವಾಗಿವೆ. ಎರಡನೆ ವಯಸ್ಸಿನಲ್ಲಿ ಶೇ.80ರಷ್ಟು ಮೆದುಳು ಬೆಳೆದಿರುತ್ತದೆ. ಇದು ಸುದೀರ್ಘ ಜೀವನಕ್ಕೆ ಅಗತ್ಯವಾದ ಅಡಿಪಾಯವಾಗಿದೆ. ಈ ಸಂದಿಗ್ಧ ಸಮಯದಲ್ಲಿ ಮಕ್ಕಳಿಗೆ ಆರೋಗ್ಯ ರಕ್ಷಣೆ, ಉತ್ತಮ ಪೋಷಣೆ, ಆರಂಭಿಕ ಕಲಿಕೆ ಮತ್ತು ಸುರಕ್ಷಿತ ವಾತಾವರಣ ಬಹಳ ಮುಖ್ಯವಾಗಿದೆ. ಇವು ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತವೆ ಎನ್ನುತ್ತಾರೆ ತಜ್ಞರು. ಆದರೆ ಗೋಲ್ಡನ್ ಪೀರಿಯಡ್ ನಲ್ಲಿ ಮಕ್ಕಳಿಗೆ ಇದ್ಯಾವುದೂ ಸಿಗದಿರುವುದೇ ಅವರ ಬೆಳವಣಿಗೆಯ ಮೇಲೆ ತೀವ್ರ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳುತ್ತಾರೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ, ಉಪ-ಸಹಾರನ್ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ (ಭಾರತ ಸೇರಿದಂತೆ) 2021 ರಲ್ಲಿ ಜಾಗತಿಕ ಬಡತನದ ಶೇಕಡಾ 85 ರ ಸ್ಥಾನವನ್ನು ಹೊಂದಿದೆ. ಇದು ಬಡತನ ಮತ್ತು ಅಭಿವೃದ್ಧಿಯ ಸವಾಲುಗಳನ್ನು ತೋರಿಸುತ್ತದೆ. ಇದು ಮಕ್ಕಳ ಮೇಲೂ ಪರಿಣಾಮ ಬೀರಿದೆ ಎನ್ನುತ್ತಾರೆ ವಿಶ್ಲೇಷಕರು. ಪ್ರಪಂಚದಲ್ಲೇ ಅತಿ ಹೆಚ್ಚು ಕುಂಠಿತದ ದರ ಯುದ್ಧದಿಂದ ದಮನಿಸಲ್ಪಟ್ಟ ಉಪ-ಸಹಾರನ್ ಆಫ್ರಿಕಾದಲ್ಲಿರುವ DR ಕಾಂಗೋ ದಂತಹ ದೇಶಗಳಲ್ಲಿವೆ.
ಭಾರತದಲ್ಲಿ ಶೇ.33.. ವಿಶ್ವಾದ್ಯಂತ ಶೇ.22…
ಭಾರತದಲ್ಲಿ13.7 ಕೋಟಿ ಮಂದಿ ಮಕ್ಕಳಲ್ಲಿ ಐದು ವರ್ಷದೊಳಗಿನ ಶೇಕಡಾ 35 ಕ್ಕಿಂತ ಹೆಚ್ಚು ಮಕ್ಕಳು ಕುಂಠಿತ ಬೆಳವಣಿಗೆಯಿಂದ ಬಳಲುತ್ತಿದ್ದಾರೆ. ಜಾಗತಿಕವಾಗಿ ಶೇ.22ರಷ್ಟು ಮಾತ್ರವೇ ಎಂಬುದು ಗಮನಾರ್ಹ. ಐದು ವರ್ಷದೊಳಗಿನ ಮಕ್ಕಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಇರುವ ಆದಿವಾಸಿಗಳು ಮತ್ತು ದಲಿತರ ಪರಿಸ್ಥಿತಿ ಇನ್ನಷ್ಟು ದಾರುಣವಾಗಿದೆ ಎಂದು ತಜ್ಞರು ಹೇಳುತ್ತಾರೆ. ಸಂಶೋಧಕರ ಪ್ರಕಾರ, ಭಾರತದಲ್ಲಿ ತುಳಿತಕ್ಕೊಳಗಾದ ಜಾತಿಗಳಿಗೆ ಹೋಲಿಸಿದರೆ ಪ್ರಬಲ ಜಾತಿಯ ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯು ಶೇಕಡಾ 20 ರಷ್ಟು ಕಡಿಮೆಯಾಗಿದೆ. ಜನನ ಕ್ರಮ, ನೈರ್ಮಲ್ಯ ಅಭ್ಯಾಸಗಳು, ತಾಯಿಯ ಎತ್ತರ, ಒಡಹುಟ್ಟಿದವರ ಸಂಖ್ಯೆ, ಶಿಕ್ಷಣ, ರಕ್ತಹೀನತೆ ಮತ್ತು ಕುಟುಂಬದ ಸಾಮಾಜಿಕ ಆರ್ಥಿಕ ಪರಿಸ್ಥಿತಿಯಂತಹ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ದೇಶದಲ್ಲಿ ಜಾತಿ ವ್ಯವಸ್ಥೆ ಇಂದಿಗೂ ಇಲ್ಲಿನ ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ತಜ್ಞರು, ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಅಸಮಾನತೆಗಳ ಕುರಿತು ಚರ್ಚೆಯಾಗಬೇಕಿದೆ..
ಭಾರತದಲ್ಲಿ ಮಕ್ಕಳ ಕುಂಠಿತ ಬೆಳವಣಿಗೆ ಕುರಿತು ಹಲವು ವರ್ಷಗಳಿಂದ ಚರ್ಚೆಗಳು ನಡೆದಿವೆ. ಕೆಲವರು ತಳಿಶಾಸ್ತ್ರವನ್ನು ಸೂಚಿಸಿದರೆ, ಇತರರು ಪೌಷ್ಟಿಕಾಂಶದ ಕೊರತೆಯನ್ನು ಸೂಚಿಸುತ್ತಾರೆ. ಇನ್ನು ಕೆಲವರು ಇದಕ್ಕೆ ಸರ್ಕಾರದ ವೈಫಲ್ಯವೇ ಕಾರಣ ಎನ್ನುತ್ತಾರೆ. ದೇಶದ ಬಾಲಕರಿಗೆ ಹೋಲಿಸಿದರೆ ಬಾಲಕಿಯರ ಸ್ಥಿತಿ ಅಮಾನವೀಯವಾಗಿದೆ ಎಂದು ಕೆಲವು ಅಧ್ಯಯನಗಳ ಹೇಳುತ್ತಿವೆ. ಬುಡಕಟ್ಟು ಜನಾಂಗದಂತಹ ದಮನಿತ ಸಾಮಾಜಿಕ ಗುಂಪುಗಳ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ವಿಶೇಷವಾಗಿ ಬಡ ಕುಟುಂಬಗಳು, ಕಡಿಮೆ ಶಿಕ್ಷಣ ಹೊಂದಿರುವ ತಾಯಂದಿರು ಮತ್ತು ತುಳಿತಕ್ಕೊಳಗಾದ ಸಾಮಾಜಿಕ ಗುಂಪುಗಳ ಮಕ್ಕಳು ಕುಂಠಿತ ಬೆಳವಣಿಗೆಯಿಂದ ಬಳಲುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ತಜ್ಞರು ಹೇಳುತ್ತಾರೆ. ಮಕ್ಕಳಲ್ಲಿ ಈ ಬೆಳವಣಿಗೆಯ ಅಂತರಕ್ಕೆ ಬಂದಾಗ..ಜಾತಿ ಆಧಾರಿತ ಸಾಮಾಜಿಕ ಅಸಮಾನತೆಯೇ ಕಾರಣ ಎಂದು ವಿಶ್ಲೇಷಕರು ಮತ್ತು ತಜ್ಞರು ಕಳವಳ ವ್ಯಕ್ತಪಡಿಸಿದ್ದು, ಸಮಾಜದಲ್ಲಿ ಇದರ ಬಗ್ಗೆ ಚರ್ಚೆ ನಡೆಯದಿರುವುದು ವಿಷಾದನೀಯ ಎನ್ನುತ್ತಾರೆ.
Leave a reply