ನ್ಯೂಡೆಲ್ಲಿ : ನ್ಯಾಯದೇವತೆಯ ಹೊಸ ಪ್ರತಿಮೆ (ಲೇಡಿ ಆಫ್ ಜಸ್ಟಿಸ್) ಕೆಲವು ಬದಲಾವಣೆಗಳೊಂದಿಗೆ ಸುಪ್ರೀಂ ಕೋರ್ಟ್ನಲ್ಲಿ ಕಾಣಿಸಿಕೊಂಡಿದೆ. ಕಾನೂನು ಕುರುಡಲ್ಲ ಎಂಬ ಸಂದೇಶವನ್ನು ಸಾರಲು ನ್ಯಾಯ ದೇವತೆಯ ಕಣ್ಣಿಗೆ ಕಟ್ಟಿದ ಕಪ್ಪು ರಿಬ್ಬನ್ ತೆಗೆಯಲಾದ ಹೊಸ ಪ್ರತಿಮೆ ಅನಾವರಣಗೊಂಡಿದೆ. ಹಾಗೂ ಅನ್ಯಾಯವನ್ನು ಶಿಕ್ಷಿಸುವ ಸಂಕೇತವಾಗಿ ಅವಳ ಕೈಯಲ್ಲಿದ್ದ ಖಡ್ಗದ ಸ್ಥಾನದಲ್ಲಿ ಸಂವಿಧಾನ ಇರಿಸಿ ಹೊಸ ಸೇರ್ಪಡೆ ಮಾಡಲಾಗಿದೆ. ನ್ಯಾಯದೇವತೆಯ ಇನ್ನೊಂದು ಕೈಯಲ್ಲಿರುವ ತಕಡಿಯನ್ನು ಹಾಗೆ ಇರಿಸಲಾಗಿದೆ. ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ಈ ನೂತನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ) ಜಸ್ಟಿಸ್ ಚಂದ್ರಚೂಡ್ ಅವರ ಸೂಚನೆಗಳ ಪ್ರಕಾರ, ನ್ಯಾಯದೇವತಾ ಪ್ರತಿಮೆಗೆ ಈ ಬದಲಾವಣೆಗಳನ್ನು ಮಾಡಲಾಗಿದೆ ಎನ್ನಲಾಗಿದೆ.
ಬ್ರಿಟಿಷರ ವಸಾಹತುಶಾಹಿಗಳ ಕಾನೂನುಗಳನ್ನು ಅಂತ್ಯಗೊಳಿಸಲು ಹೊಸ ಕಾನೂನುಗಳನ್ನು ಜಾರಿಗೆ ತರುವ ಹಿನ್ನೆಲೆಯಲ್ಲಿ ನ್ಯಾಯ ದೇವತೆಯ ಪ್ರತಿಮೆಯಲ್ಲಿ ಬದಲಾವಣೆಗಳನ್ನು ಮಾಡಬೇಕೆಂದು ನ್ಯಾಯಮೂರ್ತಿ ಚಂದ್ರಚೂಡ್ ಈ ಹಿಂದೆ ಸಲಹೆ ನೀಡಿದ್ದರು. ‘ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟುವ ಅಗತ್ಯವಿಲ್ಲ. ಕಾನೂನು ಎಂದಿಗೂ ಕುರುಡಲ್ಲ. ಅದು ಎಲ್ಲರನ್ನೂ ಸಮಾನವಾಗಿ ಪರಿಗಣಿಸುತ್ತದೆ. ಖಡ್ಗವು ಹಿಂಸೆಯನ್ನು ಸಂಕೇತಿಸುವಂತಿದೆ. ಆದರೆ ನ್ಯಾಯಾಲಯಗಳು ಸಾಂವಿಧಾನಿಕ ಕಾನೂನುಗಳ ಪ್ರಕಾರ ನ್ಯಾಯ ಒದಗಿಸುತ್ತವೆ’ ಎಂದರು.
Leave a reply