ಪ್ರೊ. ಜಿ. ಎನ್. ಸಾಯಿಬಾಬಾ ಅವರು ನಿರ್ದೋಷಿಯೆಂದು ಜೈಲಿನಿಂದ ಬಿಡುಗಡೆಯಾದ ಮೇಲೆ ನೀಡಿದ ಸುದೀರ್ಘ ಸಂದರ್ಶನ..
ಆತ್ಮೀಯರೇ,
ಹುತಾತ್ಮ .. ಕ್ರಾಂತಿಕಾರಿ ವಿದ್ವಾಂಸ, ಜನತೆಯ ಸಂಗಾತಿ ಪ್ರೊ. ಜಿ. ಎನ್. ಸಾಯಿಬಾಬಾ ಅವರು ಇನ್ನಿಲ್ಲ. ಫಾದರ್ ಸ್ಟಾನ್ ಸ್ವಾಮಿಯ ನಂತರ ಮೋದಿ ಸರ್ಕಾರದ ಅಮಾನುಷ ಕ್ರೌರ್ಯಕ್ಕೆ ಮತ್ತೊಬ್ಬ ಜನಮಿತ್ರನ ಬಲಿಯಾಗಿದೆ. ಕ್ರಾಂತಿಕಾರಿ ಸಾಯಿಬಾಬಾ ಅವರನ್ನು ವಿನಾಕಾರಣ ಹತ್ತು ವರ್ಷಗಳ ಕಾಲ ಜೈಲಿಗೆ ದೂಡಿ ಚಿತ್ರಹಿಂಸೆ ನೀಡಿತ್ತು. ಹತ್ತು ವರ್ಷಗಳ ನಂತರ ಇತ್ತೀಚೆಗೆ ತಾನೇ ಅವರನ್ನು ಕೋರ್ಟು ನಿರ್ದೋಷಿ ಎಂದು ಬಿಡುಗಡೆ ಮಾಡಿತ್ತು.. ಆದರೆ ಶೇ. 90 ರಷ್ಟು ಅಂಗ ವೈಕಲ್ಯ ಹೊಂದಿದ್ದ ಅವರ ದೇಹ ಹತ್ತು ವರ್ಷದ ನರಕ ಸದೃಷ ಜೈಲುವಾಸ ಮತ್ತು ಸರ್ಕಾರ ಹಾಗೂ ಜೈಲು ಅಧಿಕಾರಿಗಳ ದುರುದ್ದೇಶ ಪೂರ್ವಕ ನಿರ್ಲಕ್ಷ್ಯದಿಂದಾಗಿ ಇನ್ನಷ್ಟು ನಜ್ಜುಗೂಜ್ಜಾಗಿತ್ತು..ಇದನ್ನು ಹೊರಗಡೆ ಬಂದ ನಂತರ ಅವರೇ ಪತ್ರಿಕಾ ಗೋಷ್ಟಿಯಲ್ಲಿ ವಿವರವಾಗಿ ತಿಳಿಸಿದ್ದರು..
ಬಿಡುಗಡೆಯಾಗಿ ಹೊರಗಡೆ ಬಂದ ಮೇಲೂ ಹಲವಾರು ಹೊಸ ಹಾಗೂ ವಿಲಕ್ಷಣ ದೈಹಿಕ ತೊಂದರೆಗಳು ಅವರನ್ನು ಕಾಡತೊಡಗಿದ್ದವು. ದೇಹ ಅದನ್ನು ತಡೆದುಕೊಳ್ಳಲಾಗದಷ್ಟು ನಿತ್ರಣವಾಗಿತ್ತು.ಮೊನ್ನೆ ಸರ್ಜರಿಯೊಂದಕ್ಕೆ ಹೈದರಾಬಾದ್ ಆಸ್ಪತ್ರೆಗೆ ದಾಖಲಾಗಿದ್ದರು.. ಆದರೆ ಅದು ವಿಪರೀತ ಪರಿಣಾಮ ಗಳಿಗೆ ಕಾರಣವಾಗಿ ಇಂದು ರಾತ್ರಿ 8.37ಕ್ಕೆ ಗೆಳೆಯ ಸಾಯಿಬಾಬಾ ಅಸು ನೀಗಿದ್ದಾರೆ… ಇದು ಸಾವಲ್ಲ… ಬಿಡುಗಡೆಯ ನಂತರವೂ ಬದುಕದಷ್ಟು ಕಿರುಕುಳ ಕೊಟ್ಟು ಮೋದಿ ಸರ್ಕಾರ ಮಾಡಿದ ಕೊಲೆ…
ಕ್ರಾಂತಿಕಾರಿ ಸಾಯಿಬಾಬಾ ಅಮರ್ ರಹೇ..
(2024 ರ ಮಾರ್ಚ್ ನಲ್ಲಿ ಬಿಡುಗಡೆಯಾದ ನಂತರ ನೀಡಿದ ದೀರ್ಘ ಸಂದರ್ಶನ ಕೆಳಗಡೆ ಇದೆ. scroll.in ಪತ್ರಿಕೆಗೆ ಅವರು ಕೊಟ್ಟ ಸಂದರ್ಶನದ ಅನುವಾದವನ್ನು ವಾರ್ತಾಭಾರತಿ ಯು ನನ್ನ ಅಂಕಣದದ ಭಾಗವಾಗಿ ಪ್ರಕಟಿಸಿತ್ತು.
ಶೋಷಿತರ ಧ್ವನಿಯಾದದ್ದಕ್ಕೆ ಜೈಲು ಅನುಭವಿಸಿದ್ದರ ಬಗ್ಗೆ ನನಗೆ ಕಿಂಚಿತ್ತೂ ವಿಷಾದವಿಲ್ಲ. ಅದನ್ನೇ ಮುಂದುವರೆಸುತ್ತೇನೆ.
(ದೆಹಲಿ ವಿಶ್ವವಿದ್ಯಾಲಯದ ಇಂಗ್ಲಿಶ್ ಪ್ರೊಫ಼ೆಸರ್ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಪ್ರೊ. ಸಾಯಿಬಾಬಾ ಅವರನ್ನು ಮಹಾರಾಷ್ಟ್ರ ಹೈಕೋರ್ಟು ಇದೇ ಮಾರ್ಚ್ 7 ರಂದು ದೋಷಮುಕ್ತಗೊಳಿಸಿದೆ. ಆದರೆ ಶೇ.90 ರಷ್ಟು ವೈಕಲ್ಯ ಹೊಂದಿರುವ ವಿಶೇಷ ಚೇತನರಾದ ಸಾಯಿಬಾಬಾ ಅವರು ಶೊಷಿತರ ಪರವಾಗಿ ಗಟ್ಟಿಯಾಗಿ ನಿಂತಿದ್ದಕ್ಕೆ ಎಂಟೂವರೆ ವರ್ಷಗಳ ಕಾಲ ನಾಗಪುರದ ಜೈಲಿನ ಕುಖ್ಯಾತ ’ಅಂಡ ಸೆಲ್’ನಲ್ಲಿ ಅಮಾನವೀಯವಾದ ಜೈಲುಶಿಕ್ಷೆ ಅನುಭವಿಸಬೇಕಾಯಿತು. ಇದರಿಂದಾಗಿ ಅವರ ಆರೋಗ್ಯ ಈಗ ಸಂಪೂರ್ಣ ಹದಗೆಟ್ಟಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಅವರನ್ನು ಮತ್ತು ಅವರ ಮಡದಿ ವಸಂತಲಕ್ಶ್ಮಿಯವರನ್ನು ಜನಪರ ವೆಬ್ ಪತ್ರಿಕೆ scroll.in ಸಂದರ್ಶನ ಮಾಡಿ ಮಾರ್ಚ್ 25 ರಂದು ಪ್ರಕಟಿಸಿದೆ.
ಅಮಾನುಷ ಹಿಂಸೆಗಳನ್ನು ಅನುಭವಿಸಿದರೂ ಅಲುಗಾಡದ ಒಬ್ಬ ಜನಪರ ಚಿಂತಕನ ಹಾಗೂ ಹೋರಾಟಗಾರನ ಬದ್ಧತೆ, ಪ್ರಬುದ್ಧತೆ, ತೊಳಲಾಟ, ಹೋರಾಟಗಳನ್ನು ಅರಿತುಕೊಳ್ಳುವುದು ಸೌಹಾರ್ದತೆಯ ಸೂಚಕವೂ ಹೌದು. ಸಹ ಕಲಿಕೆಯೂ ಹೌದು. ಹೀಗಾಗಿ ಈ ವಾರದ ಅಂಕಣದಲ್ಲಿ ಪ್ರೊ. ಸಾಯಿಬಾಬ ಅವರ scroll.in ಸಂದರ್ಶನದ ಸಂಕ್ಷಿಪ್ತ ಕನ್ನಡ ಅನುವಾದವನ್ನು ಮಾಡಿದ್ದೇನೆ. ಮೂಲ ಸಂದರ್ಶನವನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಓದಬಹುದು: (https://scroll.in/article/1065448/gn-saibaba-interview-to-believe-in-humanity-social-progress-is-that-extremist
- ಶಿವಸುಂದರ್)
ಪ್ರಶ್ನೆ : ಇಷ್ಟು ವರ್ಷ ಜೈಲುವಾಸ ಅನುಭವಿಸಿ ಹೊರಬಂದಿದ್ದೀರಿ. ಈಗ ಏನು ಅನಿಸುತ್ತಿದೆ?
ಪ್ರೊ. ಸಾಯಿಬಾಬಾ : ಪ್ರಾರಂಭದಲ್ಲಿ ಇಷ್ಟು ಸುದೀರ್ಘ ಜೈಲುವಾಸ ಅನುಭವಿಸಬೇಕಾಗುತ್ತೆ ಅಂತ ನಾನಾಗಲೀ, ನನ್ನ ಬಂಧು ಬಳಗವಾಗಲೀ ಭಾವಿಸಿರಲಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಒಟ್ಟಾರೆ ಎಂಟೊವರೆ ವರ್ಷ ಸೆರೆವಾಸ ಅನುಭವಿಸಿದ್ದೇನೆ. ಒಂದು ವೇಳೆ ನನ್ನ ಮೇಲೆ ಹೊರಿಸಿದ ಆರೋಪ ನಿಜವೆಂದು ಸಾಬೀತೇ ಅಗಿದ್ದರೂ ಇಷ್ಟು ದೀರ್ಘ ಶಿಕ್ಷೆಯಾಗುತ್ತಿರಲಿಲ್ಲ. ನಮ್ಮ ಕಾನೂನು ವ್ಯವಸ್ಥೆಯಲ್ಲಿ ಕಾನೂನು ಪ್ರಕ್ರಿಯೆಯೇ ಒಂದು ಶಿಕ್ಷೆಯಾಗಿದೆ.
ಒಂದು ಕೋರ್ಟು ಮಾಡಿದ ಬಿಡುಗಡೆ ಆದೇಶವನ್ನು ಮತ್ತೊಂದು ಕೋರ್ಟು ರಾತ್ರೋರಾತ್ರಿ ರದ್ದು ಪಡಿಸಿದ ಪ್ರಕರಣ ಪ್ರಾಯಶಃ ಭಾರತದ ನ್ಯಾಯಿಕ ಇತಿಹಾಸದಲ್ಲಿ ಯಾವತೂ ನಡೆದಿರಲಾರದು. ಭಾರತದ ಸಂವಿಧಾನ ಕೋರ್ಟಿನಲ್ಲಿ ಒಂದೇ ಶಿಕ್ಷೆಯ ವಿರುದ್ಧ ಎರಡು ಪ್ರತ್ಯೇಕ ವಿಚಾರಣೆ ನಡೆದದ್ದನ್ನು ಯಾರೂ ಈವರೆಗೆ ಕೇಳಿರಲಿಲ್ಲ. ಹೀಗಾಗಿ ಯಾವುದೇ ಅಪರಾಧ ಮಾಡಿರದಿದ್ದರೂ ಇಷ್ಟು ಸುದೀರ್ಘ ಕಾಲ ಶಿಕ್ಷೆ ಅನುಭವಿಸಬೇಕಾಯಿತು. ಆದ್ದರಿಂದ ಏಕೆ ಈ ದೇಶದಲ್ಲಿ ಈ ಕಾಲಘಟ್ಟದಲ್ಲಿ ಮಾತ್ರ ಇಂಥಾ ಬೆಳವಣಿಗೆಗಳು ನಡೆಯುತ್ತಿವೆ ಎಂಬ ಪ್ರಶ್ನೆಯನ್ನು ಕೇಳದೇ ಇರಲಾಗದು.
ಪ್ರಶ್ನೆ : ಈಗ ನಿಮ್ಮ ಆರೋಗ್ಯ ಹೇಗಿದೆ?
ಸಾಯಿಬಾಬಾ : ಹತ್ತುವರ್ಷಗಳ ಹಿಂದೆ ಬಂಧನಕ್ಕೊಳಗಾಗುವ ಮುಂಚೆ ಪೊಲೀಯೊ ಕಾರಣಕ್ಕಾಗಿ ನನ್ನ ಕಾಲುಗಳನ್ನು ಕಳೆದುಕೊಂಡಿದ್ದನ್ನು ಬಿಟ್ಟರೆ ಮಿಕ್ಕಂತೆ ನಾನು ಆರೋಗ್ಯವಾಗಿದ್ದೆ. ಸ್ವಾವಲಂಬಿಯಾಗಿದ್ದೆ. ಸ್ವತಂತ್ರವಾಗಿ ವೀಲ್ ಚೇರ್ ಮೇಲೆ ಕೂತುಕೊಂಡೆ ಓಡಾಡುತ್ತಿದೆ. ಯುನಿವರ್ಸಿಟಿಯಲ್ಲಿ ಪಾಠ ಮಾಡುತ್ತಿದೆ. ಮನೆಯಲ್ಲಿ ನನ್ನ ಹೆಂಡತಿ ವಸಂತಾಗೆ ಸಹಾಯ ಮಾಡುತ್ತಿದೆ.
ಆದರೆ ಬಂಧನದ ಸಮಯದಲ್ಲಿ ಮತ್ತು ಆ ನಂತರ ಪೊಲೀಸರು ನಡೆಸಿಕೊಂಡ ರೀತಿ ಹಾಗೂ ಸೆರೆವಾಸಗಳು ನನ್ನ ಜೀವನವನ್ನೇ ಬದಲಿಸಿಬಿಟ್ಟಿದೆ. ಪೊಲೀಸರ ಹಿಂಸೆಯಿಂದ ನನ್ನ ಭುಜವನ್ನು ಮೆದುಳಿನ ಜೊತೆ ಕೂಡಿಸುವ ನರವ್ಯವಸ್ಥೆಗೆ ಹಾನಿಯಾಗಿದೆ. ಹೀಗಾಗಿ ನನ್ನ ಎಡಗೈ ಈಗ ಯಾವುದಕ್ಕೂ ಬಳಸದಂತಾಗಿದೆ. ನನ್ನನ್ನು ಪೊಲೀಸರು ಎಳೆದಾಡಿದ್ದರಿಂದ ಎಡಭಾಗದ ಪಕ್ಕೆಲುಬುಗಳು ಸಂಕುಚಿತಗೊಂಡಿವೆ. ಅವು ಶ್ವಾಸಕೋಶವನ್ನು ಒತ್ತಿ ಹಾನಿ ಮಾಡಿವೆ. ಇದರಿಂದಾಗಿ ನಾನು ಸರಿಯಾಗಿ ನಿದ್ರೆಯನ್ನೂ ಮಾಡದಂತಾಗಿದೆ. ಇದು ನನ್ನ ಹೃದಯದ ಎಡಭಾಗದ ಮೇಲೂ ಪ್ರಭಾವ ಬೀರಿದೆ. ಪಕ್ಕೆಲುಬುಗಳು ಸಂಕುಚಿತಗೊಂಡಿರುವುದರಿಂದ ಬೆನ್ನುಮೂಳೆಗೂ ಹಾನಿಯಾಗಿದೆ. ನನ್ನ ದೇಹದ ಒಂದು ಪಾರ್ಶ್ವವೇ ಜಖಂ ಆಗಿದೆ. ಕಳೆದ ಹತ್ತುವರ್ಷದಿಂದ ಎಡಗಾಲು ಮತ್ತು ಎಡಗೈಗಳು ಅಪಾರ ಯಾತನೆ ನೀಡುತ್ತಿವೆ. ಹೈಪರ್ಟ್ರೊಫ಼ಿಕ್ ಕಾರ್ಡಿಯೊಮಿಯೊಪಥಿ ಎಂಬ ಹೃದಯದ ಸಮಸ್ಯೆಯೂ ಪ್ರಾರಂಭವಾಗಿದೆ. ಎಡ ಹೃದಯವು ಕೇವಲ ಶೇ. 55 ರಷ್ಟು ಮಾತ್ರ ಕೆಲಸ ಮಾಡುತ್ತಿದೆ. ಅಧಿಕ ರಕ್ತದೊತ್ತಡ ಶುರುವಾಗಿದೆ. ಮೆದುಳಿನಲ್ಲಿ ಸಿಸ್ಟ್ ಉಂಟಾಗಿದೆ. ಕಿಡ್ನಿಯಲ್ಲಿ ಕಲ್ಲುಗಳು ಉಂಟಾಗಿ ಕರಗಿದ್ದರೂ ಬಲ ಕಿಡ್ನಿಯಲ್ಲಿ ಸಿಸ್ಟ್ ಆಗಿದೆ. ದೀರ್ಘಾವಧಿವರೆಗೆ ಆಹಾರ ಸೇವನೆ ಮಾಡದಂತಾಗಿದ್ದರಿಂದ ಗಾಲ್ ಬ್ಲಾಡರ್ ಸಮಸ್ಯೆಯಾಗಿ ಅದು ಪ್ಯಾನ್ಕ್ರಿಯಾಟಿಸ್ ಆಗಿ ಪರಿವರ್ತನೆಯಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.
ಪಟ್ಟಿ ದೊಡ್ಡದಿದೆ. ಕಳೆದ ಹತ್ತುವರ್ಷಗಳಿಂದ ಸೂಕ್ತ ಚಿಕಿತ್ಸೆಯಿಲ್ಲದೆ ಇರುವುದರಿಂದ ಇವುಗಳಲ್ಲಿ ಯಾವ್ಯಾವುದಕ್ಕೆ-ಎಷ್ಟರ ಮಟ್ಟಿಗೆ ವೈದ್ಯಕೀಯ ಪರಿಹಾರ ಸಿಗುತ್ತದೆ ಗೊತ್ತಿಲ್ಲ. ಆದರೂ ಮುಂದಿನ ಕೆಲ ದಿನಗಳಲ್ಲಿ ನಾನು ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಲಿದ್ದೇನೆ.
ಪ್ರಶ್ನೆ : ನಿಮಗೆ ಮೆಡಿಕಲ್ ಬೇಲ್ ಏಕೆ ಸಿಗಲಿಲ್ಲ? ಜೈಲಿನಲ್ಲಿ ಏಕೆ ಚಿಕಿತ್ಸೆ ಸಿಗಲಿಲ್ಲ?
ಸಾಯಿಬಾಬಾ: ಹೈಕೋರ್ಟುಗಳು ಎರಡು ಬಾರಿ ನನ್ನ ಮೆಡಿಕಲ್ ಬೇಲ್ ಅಹವಾಲನ್ನು ತಿರಸ್ಕರಿಸಿದವು. ಆದರೂ ನನಗೆ ಕಾಲಕಾಲಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಲು ಆದೇಶಿಸಿದ್ದರು. ಆದರೆ ಜೈಲು ಅಧಿಕಾರಿಗಳು ಕೋರ್ಟಿನ ಈ ಆದೇಶವನ್ನು ತಿರಸ್ಕರಿಸಿದರು ಮತ್ತು ಉಲ್ಲಂಘಿಸಿದರು. ನಾಗಪುರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ನನ್ನನ್ನು ಕರೆದುಕೊಂಡು ಹೋದರೂ ಯಾವುದೇ ಸೂಕ್ತ ಪರೀಕ್ಷೆ ಮತ್ತು ಚಿಕಿತ್ಸೆ ಕೊಡಿಸದೆ ವಾಪಸ್ ಕರೆತರುತ್ತಿದ್ದರು. ಈಗ ಹತ್ತುವರ್ಷ ಕಳೆದ ಮೇಲೆ ನನ್ನ ಮೆಡಿಕಲ್ ದಾಖಲೆಗಳಲ್ಲಿ ಇವರಿಗೆ ಇಂತಿಂತಾ ಚಿಕಿತ್ಸೆ ಬೇಕಿತ್ತು ಆದರೆ ಅವು ತಮ್ಮಲ್ಲಿ ಇರಲಿಲ್ಲ ಎಂದು ಬರೆದಿದ್ದಾರೆ. ಅದನ್ನು ಮುಂಚೆಯೇ ಬರೆದು ನ್ಯಾಯಾಲಯಕ್ಕೆ ಹೇಳಬಹುದಿತಲ್ಲ? ಜೈಲಿನಲ್ಲಿ ನನಗೆ ಕೊಟ್ಟಿದ್ದೆಲ್ಲಾ ನಿದ್ದೆ ಬರುವ ಮತ್ತು ನೋವು ನಿವಾರಕ ಔಷಧಿಗಳು ಮಾತ್ರ.
ಪ್ರಶ್ನೆ : ನೀವು ಜೈಲಿನಲ್ಲಿ ಎದುರಿಸಿದ ದೊಡ್ಡ ಸವಾಲುಗಳೇನು? ಸಹ ಖೈದಿಗಳು ಮತ್ತು ಜೈಲು ಸಿಬ್ಬಂದಿ ನಿಮ್ಮ ಜೊತೆ ಹೇಗೆ ನಡೆದುಕೊಂಡರು?
ಸಾಯಿಬಾಬಾ: ಸಹಖೈದಿಗಳು ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮತ್ತು ತುಂಬಾ ಸಹಕಾರ ಕೊಡುತ್ತಿದ್ದರು. ಆದರೆ ಜೈಲಿನ ಮೇಲಧಿಕಾರಿಗಳು ನನ್ನನ್ನು ದೊಡ್ಡ ಅಂತರರಾಷ್ಟ್ರೀಯ ಭಯೋತ್ಪಾದಕ, ಸನಿಹ ಸುಳಿದರೆ ಗೊತ್ತೇ ಆಗದಂತೆ ತಲೆ ಕೆಡಿಸುವವ ಎಂದೆಲ್ಲ ಪ್ರಚಾರ ಮಾಡಿ ನನ್ನ ಬಗ್ಗೆ ಕೆಳಹಂತದ ಸಿಬ್ಬಂದಿಯಲ್ಲಿ ಭೀತಿ ಹುಟ್ಟಿಸಿ ದೂರಗೊಳಿಸುವ ಪ್ರಯತ್ನ ಮಾಡುತ್ತಲೇ ಇದ್ದರು. ಇದಲ್ಲದೆ ನಾನಿದ್ದದ್ದು ಕೆಲವೇ ಕೆಲವರ ಜೊತೆ ಮಾತ್ರ ಸಂಪರ್ಕ ಇಟ್ಟುಕೊಳ್ಳಬಹುದಾದ ಅಂಡ ಸೆಲ್ ನಲ್ಲಿ. ಆದರೆ ಇವೆಲ್ಲವನ್ನು ಮೀರಿ ಸಿಬ್ಬಂದಿಗಳು ಹಾಗೂ ಸಹ ಖೈದಿಗಳು ನನ್ನ ಜೊತೆ ಕಾಳಜಿ ಮತ್ತು ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು.
ಆದರೆ ಆ ಜೈಲೇ 19 ನೇ ಶತಮಾನದಲ್ಲಿ ಬ್ರಿಟಿಷರು ಕಟ್ಟಿಸಿದ್ದು. ಮನುಷ್ಯ ಘನತೆಯಿಂದ ಬದುಕಬಹುದಾದ ಕನಿಷ್ಟ ಸೌಕರ್ಯಗಳೂ ಆ ಜೈಲಿನಲ್ಲಿ ಇರಲಿಲ್ಲ. ನಾನೊಬ್ಬನೇ ಅಲ್ಲ. ಅಲ್ಲಿಯ ಪ್ರತಿಯೊಬ್ಬರೂ ಅಮಾನುಷ ಪರಿಸ್ಥಿತಿಗಳಲ್ಲೇ ದಿನದೂಡಬೇಕಿತ್ತು. ನನಗಂತೂ ಅಮಾನುಷಕ್ಕಿಂತ ಅಮಾನವೀಯವಾದ ನಿರ್ಬಂಧಗಳಿದ್ದವು. ನನ್ನ ವೀಲ್ ಚೇರ್ ಚಲಿಸಲಾಗದ ಪರಿಸ್ಥಿತಿಯಲ್ಲಿ ಇದ್ದಿದ್ದರಿಂದ ಜೊತೆಯಲ್ಲಿದ್ದವರು ನನ್ನನ್ನು ಶೌಚಕ್ಕೆ ಮತ್ತು ಸ್ನಾನಕ್ಕೆ ಅನಾಮತ್ತು ಎತ್ತಿಕೊಂಡು ಹೋಗಬೇಕಿತ್ತು. ಜೈಲಿನ ಈ ಅಮಾನವೀಯ ಪರಿಸ್ಥಿತಿ ನನ್ನ ಮನುಷ್ಯ ಘನತೆಯನ್ನು ಸದಾ ಘಾಸಿ ಮಾಡುತ್ತಿತ್ತು.
ಪ್ರಶ್ನೆ: ನೀವು ಸಮಯವನ್ನು ಹೇಗೆ ಕಳೆಯುತ್ತಿದ್ದಿರಿ? ಹೊರಗಿನ ಜಗತ್ತಿನ ಬೆಳವಣಿಗೆಗಳನ್ನು ಹೇಗೆ ತಿಳಿದುಕೊಳ್ಳುತ್ತಿದ್ದಿರಿ?
ಸಾಯಿಬಾಬಾ : ನನ್ನ ಮಡದಿ ವಸಂತ ನನಗೆ ಪುಸ್ತಕಗಳನ್ನು, ಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು, ಡಿಜಿಟಲ್ ಮೀಡಿಯಾದ ಪ್ರಿಂಟ್ ಔಟ್ ಗಳನ್ನು ಸದಾ ತಂದುಕೊಡುತ್ತಿದ್ದರು. ಪ್ರಾಯಶಃ ಆಕೆ ಈ ಹತ್ತು ವರ್ಷಗಳಲ್ಲಿ ಸಾವಿರ ಪುಸ್ತಕಗಳನ್ನು ದೆಹಲಿಯಿಂದ ನಾಗಪುರಕ್ಕೆ ಮತ್ತು ವಾಪಸ್ ಸಾಗಾಟ ಮಾಡಿರಬೇಕು. ಇಂಗ್ಲಿಶ್ ನಿಯತಕಾಲಿಕೆಗಳನ್ನು ನಾನೇ ಸ್ವಂತ ಖರ್ಚಿನಲ್ಲಿ ಕೊಂಡುಕೊಳ್ಳುತ್ತಿದ್ದೆ. ಇದಲ್ಲದೆ ಹೊರಗಿನ ವಿಷಯಗಳ ಬಗ್ಗೆ ವಸಂತ ದೀರ್ಘ ಪತ್ರಗಳನ್ನು ಬರೆಯುತ್ತಿದ್ದರು. ಇದೊಂದೇ ನನಗಿದ್ದ ದಾರಿ. ಮುಲಾಖಾತ್ ಗಳು ಇದ್ದರೂ ಅಲ್ಲಿ ಉಭಯಕುಶಲೋಪರಿಗಿಂತ ಹೆಚ್ಚಿಗೆ ಮಾತಾಡಲು ಸಮಯವೇ ಇರುತ್ತಿರಲಿಲ್ಲ್ಲ.
ಈ ಅವಧಿಯಲ್ಲಿ ನಾನು ಸಾಕಷ್ಟು ಓದಿದೆ. ಪ್ರಯಾಗ್ ಅಕ್ಬರ್ ನ Leila, ಕೆ ಆರ್ ಮೀರಾ ಅವರ Assasin ಗಳಂಥ ಕಾದಂಬರಿಗಳ ಜೊತೆಗೆ ಸಾಕಷ್ಟು ಫಿಲಾಸಫಿ ಯನ್ನೂ ಅಧ್ಯಯನ ಮಾಡಿದೆ. ಥಾಮಸ್ ಪಿಕೆಟಿಯ Capital and Ideology ಮತ್ತು A Brief History Of Inequality ಗಳನ್ನೂ ಓದಿದೆ. ಇತಿಹಾಸಕಾರರಾದ ಕೋಸಂಬಿ , ರೋಮಿಲಾ ಥಾಪರ್ ಅವರಿಂದ ಹಿಡಿದು ಇತ್ತೀಚಿನ ಉಪಿಂದರ್ ಸಿಂಗ್ ಮತ್ತು ನಯನ್ ಜ್ಯೋತ್ ಲಾಹಿರಿಯವರ ಪುಸ್ತಕಗಳನ್ನು ಓದಿದೆ. ವೈವಿಧ್ಯಮಯ ಪುಸ್ತಕಗಳನ್ನು ಓದಲು ಸಾಧ್ಯವಾಯಿತು.
ಎಲ್ಲಕ್ಕಿಂತ ಹೆಚ್ಚಾಗಿ ಸಹಖೈದಿಗಳಿಗೆ ಕಲಿಯಲು ಸಹಾಯ ಮಾಡುತ್ತಿದೆ. ಅವರಿಗೆ ಪತ್ರಗಳನ್ನು ಬರೆದುಕೊಡುತ್ತಿದ್ದೆ. ಮ್ಯಾಜಿಸ್ಟ್ರೇಟ್ ಕೋರ್ಟಿನಿಂದ ಹಿಡಿದು ಸೆಷನ್ಸ್ , ಹೈಕೋರ್ಟು ಮತ್ತು ಸುಪ್ರೀಂ ಕೋರ್ಟಿನವರೆಗೆ ಬೇರೆಬೇರೆ ಖೈದಿಗಳ ಭಿನ್ನ ಭಿನ್ನ ಅಹವಾಲುಗಳನ್ನು ಬರೆದುಕೊಡುವ ಅಗತ್ಯವಿತ್ತು. ಅದರಲ್ಲೂ ಇಂಗ್ಲಿಷಿನಲ್ಲಿ ಬರೆಯಬಲ್ಲವರಿಗೆ ವಿಶೇಷ ಬೇಡಿಕೆ ಇರುತ್ತೆ. ಹಲವಾರು ಆರೋಪಿಗಳಿಗೆ ವಕೀಲರು ಇರಲಿಲ್ಲ. ಅವರಿಗೆ ವಕೀಲರನ್ನು ಒದಗಿಸಲು ಬೇಕಾದ ಅಹವಾಲು ಬರೆಯುವುದು ಇತ್ಯಾದಿಗಳಲ್ಲಿ ಸಾಕಷ್ಟು ಸಮಯ ಹೋಗುತ್ತಿತ್ತು.
ಪ್ರಶ್ನೆ: ನೀವು ಉಗ್ರಗಾಮಿ ವಿಚಾರಗಳನ್ನು ಹೊಂದಿದ್ದೀರೆಂದು ನಿಮ್ಮನ್ನು ಬಂಧಿಸಲಾಗಿತ್ತು. ವಾಸ್ತವವಾಗಿ ನಿಮ್ಮ ಸಿದ್ಧಾಂತವೇನು? ಮತ್ತು ಕಳೆದ ಹತ್ತು ವರ್ಷಗಳಲ್ಲಿ ಅದು ಬದಲಾಗಿದೆಯೇ?
ಸಾಯಿಬಾಬಾ: ನಾನು ವಿದ್ಯಾರ್ಥಿಯಾಗಿದ್ದಾಗ ಯಾವ ಸಿದ್ಧಾಂತ ಮತ್ತು ಗ್ರಹಿಕೆಯನ್ನು ಹೊಂದಿದ್ದೆನೋ ಇವತ್ತಿಗೂ ನನ್ನದು ಅದೇ ಸಿದ್ಧಾಂತ. ಅದರಲ್ಲಿ ಕಿಂಚಿತ್ತೂ ಬದಲಾವಣೆಯಿಲ್ಲ. ವಾಸ್ತವವಾಗಿ ನನ್ನನ್ನು ಭಯೋತ್ಪಾದಕ ಎನ್ನುವವರೇ ಅಸಲೀ ಭಯೋತ್ಪಾದಕರಾಗಿದ್ದಾರೆ. ಹೀಗಿರುವಾಗ ಅವರು ಉಲ್ಟಾ ನನ್ನನ್ನು ಏಕೆ ಭಯೋತ್ಪಾದಕನೆಂದು ಕರೆಯುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ನಾನು ಸಾರ್ವಜನಿಕ ಜೀವನದಲ್ಲಿದ್ದೇನೆ. ಬಹಿರಂಗವಾಗಿ ಮಾತಾಡುತ್ತೇನೆ ಮತ್ತು ಬರೆಯುತ್ತೇನೆ. ಮನುಷ್ಯತ್ವದಲ್ಲಿ ಮತ್ತು ಸಾಮಾಜಿಕ ಪ್ರಗತಿಯಲ್ಲಿ ನಂಬಿಕೆ ಇಟ್ಟುಕೊಳ್ಳುವುದು ಉಗ್ರವಾದವೇ?
ಪ್ರಶ್ನೆ: ತುಳಿತಕ್ಕೊಳಗಾದ ಸಮುದಾಯಗಳ ಪರವಾಗಿ ಧ್ವನಿ ಎತ್ತಿದ್ದಕ್ಕೆ ಅಥವಾ ಕೆಲವು ವ್ಯಕ್ತಿಗಳು ಅಥವಾ ಸಂಘಟನೆಯ ಜೊತೆಗೆ ಸಂಬಂಧವಿರಿಸಿಕೊಂಡಿದ್ದಕ್ಕೆ ನಿಮಗೆ ವಿಶಾದವಿದೆಯೇ? ಇಶ್ಟು ಸುದೀರ್ಘ ಸೆರೆವಸದ ನಂತರ ಹೊರಬಂದ ನಂತರ ನೀವು ಅದೇ ಕೆಲಸವನ್ನು ಮುಂದುವರೆಸುವಿರಾ?
ಸಾಯಿಬಾಬಾ : ನಾನು ಪ್ರಾಥಮಿಕವಾಗಿ ಒಬ್ಬ ಅಧ್ಯಾಪಕ ಹಾಗೂ ಅದರ ಜೊತೆಗೆ ಮಾನವ ಹಕ್ಕುಗಳ ಹೋರಾಟಗಾರ. ಈ ಜಗತ್ತಿನಲ್ಲಿ ಯಾರಿಗೆ ಶೋಷಣೆ ನಡೆಯುವ ಪ್ರಕ್ರಿಯೆಗಳನ್ನು ಅರಿಯುವ ಮತ್ತು ಶೋಷಿತ ವರ್ಗಗಳನ್ನು ಅರ್ಥ ಮಾಡಿಕೊಳ್ಳುವ ಅವಕಾಶವಿರುತ್ತದೋ ಅಂಥಾ ಪ್ರತಿಯೊಬ್ಬರಿಗೂ ಶೋಷಿತರ ಬಗ್ಗೆ ಮಾತನಾಡುವ ಮತ್ತು ಅವರ ಜೊತೆಗೆ ನಿಲ್ಲುವ ಕರ್ತವ್ಯವಿದೆ ಎಂದು ನಾನು ಭಾವಿಸುತ್ತೇನೆ. ನಾನು ಮಾತ್ರವಲ್ಲ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರೂ ಇದನ್ನು ಮಾಡಬೇಕು. ನಾನು ಸಾರ್ವಜನಿಕವಾಗಿ ಮತ್ತು ಕಾನೂನು ಬದ್ಧವಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ದೈಹಿಕ ಅಪಾಂಗತೆಯ ನಡುವೆಯೂ ಜನರ ಜೊತೆ ಕೆಲಸ ಮಾಡಲು ಬೇಕಾದ ಅವಕಾಶವನ್ನು ರೂಪಿಸಿಕೊಂಡಿದ್ದೇನೆ. ನನಗೆ ಈ ಬಗ್ಗೆ ಯಾವ ವಿಶಾದವೂ ಇಲ್ಲ. ನನ್ನನ್ನು ಬಂಧಿಸಿದ್ದು ನಾನು ಯಾವುದೋ ಅಪರಾಧ ಮಾಡಿದೆ ಎಂದಲ್ಲ. ಈ ವ್ಯವಸ್ಥೆಯಲ್ಲಿ ಶೋಷಣೆ ಹೇಗೆ ನಡೆಯುತ್ತಿದೆ ಮತ್ತು ವಂಚಿತ ಸಮುದಾಯ ಹೇಗೆ ಈಗಲೂ ವಂಚಿತವಾಗುತ್ತಿದೆ ಎಂಬ ಸತ್ಯವನ್ನು ನಾನು ಬಯಲು ಮಾಡುತ್ತಿದ್ದೆ. ಆ ಕೆಲಸವನ್ನು ನಾನು ಮುಂದುವರೆಸಬಾರದೆಂಬ ಉದ್ದೆಶದಿಂದಲೇ ನನ್ನನ್ನು ಸುದೀರ್ಘ ಕಾಲ ಜೈಲಿಗೆ ದೂಡಿದರು.
ಪ್ರಶ್ನೆ: ನಿಮ್ಮನ್ನು ಬಂಧಿಸಿದ್ದಾಗ ಯುಪಿಎ ಸರ್ಕಾರವಿತ್ತು. ನೀವು ಬಿಡುಗಡೆಯಾದಾಗ ಎನ್ಡಿಎ ಸರ್ಕಾರವಿದೆ. ಮತ್ತು ನಿಮ್ಮ ಬಿಡುಗಡೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದೆ. ಭಾರತದ ಎರಡೂ ರಾಷ್ಟ್ರೀಯ ಪಕ್ಷಗಳೂ ನಿಮ್ಮ ವಿರುದ್ಧವಿದ್ದಂತಿದೆ. ನಿಮಗೆ ಈ ರಾಜಕೀಯ ಪಕ್ಷಗಳ ಬಗ್ಗೆ ನಂಬಿಕೆಯಿದೆಯೇ? ನೀವು ಸೆರೆಯಲ್ಲಿದ್ದಾಗ ಯಾರಾದರೂ ರಾಜಕೀಯ ಪಕ್ಷದ ನಾಯಕರು ನಿಮ್ಮನ್ನು ಭೇಟಿಯಾಗಿದ್ದರೇ?
ಸಾಯಿಬಾಬಾ: ಜೈಲಿನಲ್ಲಿದ್ದಾಗ ಯಾರೂ ಬಂದಿರಲಿಲ್ಲ. ಆದರೆ ಹೊರಗೆ ಬಂದ ಮೇಲೆ ಎಡಪಕ್ಷಗಳ ನಾಯಕರು ಬೇಟಿಯಾಗಿದ್ದಾರೆ. ಬಹಿರಂಗವಾಗಿ ನನ್ನ ಪರವಾಗಿ ಬರೆದಿದ್ದಾರೆ. ಸದನದ ಒಳಗೆ ಮತ್ತು ಹೊರಗೆ ಧ್ವನಿ ಎತ್ತಿದ್ದಾರೆ. ಇದಲ್ಲದೆ ದಕ್ಷಿಣ ರಾಜ್ಯಗಳ, ಬಿಹಾರದ ಮತ್ತು ಪ. ಬಂಗಾಳದ ಹಲವಾರು ಸಂಸದರು ಧ್ವನಿ ಎತ್ತಿದ್ದಾರೆ. ಪ್ರಾಯಶಃ ಆಡಳಿತರೂಢ ಪಕ್ಷವನ್ನು ಬಿಟ್ಟು ಮಿಕ್ಕೆಲ್ಲಾ ಪಕ್ಷದವರು ನನ್ನ ಬಗ್ಗೆ ಧ್ವನಿ ಎತ್ತಿದ್ದಾರೆ. ನನ್ನ ವಿಷಯದಲ್ಲಿ ಪ್ರತಿಸ್ಪಂದನೆಗಳು ಕೇವಲ ಕಪ್ಪು ಬಿಳುಪಿನಂತಿರಲಿಲ್ಲ . ಬೂದು ಬಣ್ಣವೂ ಇತ್ತು. ಪ್ರಖರ ಬಣ್ಣಗಳೂ ಇದ್ದವು. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳೂ ನನ್ನ ಮತ್ತು ನನ್ನ ಜೊತೆಗಿನ ಸಹ ಆರೋಪಿಗಳ ವಿರುದ್ಧ ಒಂದಾಗಿ ಹಗೆ ಸಾಧಿಸಿದರು ಎಂದು ಹೇಳಲಾಗದು.
ಪ್ರಶ್ನೆ: 2022 ರಲ್ಲಿ ನಿಮ್ಮನ್ನು ಹೈಕೋರ್ಟು ದೋಷಮುಕ್ತ ಮಾಡಿದರೂ ಮರುದಿನವೇ ಸುಪ್ರೀಂ ಕೋರ್ಟು ನಿಮ್ಮ ಬಿಡುಗಡೆಗೆ ತಡೆಯಾಜ್ನೆ ನೀಡಿತು. ಈಗಲೂ ಸುಪ್ರೀಂ ಕೋರ್ಟು ನಿಮ್ಮ ಬಿಡುಗಡೆಯನ್ನು ರದ್ದುಗೊಳಿಸಬಹುದು ಎಂಬ ಆತಂಕವಿದೆಯೇ?
ಸಾಯಿಬಾಬಾ: ನಾನಾಗಲೇ ಹೇಳಿದಂತೆ ಎರಡೆರೆಡು ಬಾರಿ ಕೋರ್ಟುಗಳು ಬಿಡುಗಡೆ ಆದೇಶ ನೀಡುವುದು ಬಹಳ ಅಪರೂಪ. ಆದರೆ ನಾನು ಎಂದಿಗೂ ಭರವಸೆಯನ್ನು ಕಳೆದುಕೊಂಡಿರಲಿಲ್ಲ. ಕತ್ತಲ ಸುರಂಗದ ಕೊನೆಗೆ ಬೆಳಕು ಇದ್ದೇ ಇದೆ ಎಂಬ ವಿಶ್ವಾಸ ನನಗಿತ್ತು. ಈಗಲೂ ದೇಶದ ಅತ್ಯುನ್ನತ ಕೋರ್ಟು ಅನ್ಯಾಯದ ಪರವಾಗಿ ನಿಲ್ಲುವುದಿಲ್ಲ ಎಂಬ ಧೃಢ ವಿಶ್ವಾಸವಿದೆ. ಹೀಗಾಗಿ ಮತ್ತೊಮ್ಮೆ ನಾನು ಜೈಲಿಗೆ ಹೋಗಬೇಕಾಗುವುದಿಲ್ಲ ಎಂದು ನನಗೆ ಖಾತರಿ ಇದೆ. ಕಳೆದ ಹತ್ತುವರ್ಷಗಳಲ್ಲಿ ದೇಶದಲ್ಲಿ ನಡೆದಿರುವ ನಿರ್ದಿಷ್ಟ ಬೆಳವಣಿಗೆಗಳಿಂದಾಗಿ ನ್ಯಾಯಾಂಗವು ಅಪಾರ ಒತ್ತಡಕ್ಕೆ ಒಳಪಟ್ಟಿದ್ದರಿಂದ ಈ ಘಟನೆಗಳು ನಡೆದಿವೆ. ಆದ್ದರಿಂದಲೇ ಇದನ್ನು ನಾನು ಒಂದು ಅಗ್ನಿ ಪರೀಕ್ಷೆ ಎಂದು ಕರೆಯುತ್ತೇನೆ.
2022 ರಲಿ ನನ್ನ ಬಿಡುಗಡೆಗೆ ಸುಪ್ರೀಂ ತಡೆಯಾಜ್ನೆ ನೀಡಿದಾಗಲೂ ಇದು ಕಾನೂನಾತ್ಮಕವಾಗಿ ಅಸಿಂಧುವಾದ್ದರಿಂದ ಹೆಚ್ಚು ಕಾಲ ಉಳಿಯದು ಎಂಬುದು ನನಗೆ ಖಾತರಿಯಿತ್ತು. ಒಂದು ಸಾಂವಿಧಾನಿಕ ಕೋರ್ಟು ನಿಗದಿಗೊಳಿಸಿದ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂದು ಮತ್ತೊಂದು ಸಾಂವಿಧಾನಿಕ ಕೋರ್ಟು ಬಿಡುಗಡೆ ಮಾಡಿದಾಗ ಮಗದೊಮ್ಮೆ ಸಾಕ್ಷಿಗಳನ್ನು ಪರಿಶೀಲಿಸುವ ಅಗತ್ಯವಿರಲಿಲ್ಲ. ಪ್ರಕ್ರಿಯೆಗಳ ರುಜುತ್ವವನ್ನು ದೇಶದ ಅತ್ಯುನ್ನತ ನ್ಯಾಯಾಲಯ ದಶಕಗಳ ವಿವೇಕದಿಂದ ರೂಪಿಸಿದೆ. ಹೀಗಿರುವಾಗ ತಾನೇ ಅದನ್ನು ನಿರಾಕರಿಸಲು ಹೇಗೆ ಸಾಧ್ಯ?
ಈಗಂತೂ ಹೈಕೋರ್ಟು ಪ್ರಕ್ರಿಯೆಯ ಆಧಾರದಲ್ಲಿ ಮಾತ್ರವಲ್ಲದೆ ಸಾಕ್ಷಿಗಳನ್ನು ಕೂಡ ಪರಿಶೀಲಿಸಿ ನಮ್ಮನ್ನು ಸಂಪೂರ್ಣವಾಗಿ ದೋಷಮುಕ್ತರನ್ನಾಗಿಸಿ ಬಿಡುಗಡೆ ಮಾಡಿದೆ. ಹೀಗಾಗಿ ಇದು ನನಗೆ ಮಾತ್ರವಲ್ಲ. ದೇಶದ ಉನ್ನತ ನ್ಯಾಯಾಂಗಕ್ಕೂ ಅಗ್ನಿ ಪರೀಕ್ಷೆಯೇ ಆಗಿತ್ತು. ತಡವಾಗಿಯಾದರೂ ಉನ್ನತ ನ್ಯಾಯಾಂಗ ಈ ಅಗ್ನಿಪರೀಕ್ಷೆಯನ್ನು ಹಾದು ಬಂದು ನ್ಯಾಯವನ್ನು ನೀಡಿದೆ.
ಪ್ರಶ್ನೆ: ನಿಮ್ಮ ಆತ್ಮಸ್ಥೈರ್ಯ ಮತ್ತು ಆಶಾವಾದ ಅಸಾಧಾರಣವಾದದ್ದು. ಕಳೆದ ಹತ್ತುವರ್ಷಗಳಲ್ಲಿ ನೀವು ಹಲವಾರು ಬಾರಿ ತೀವ್ರ ಹತಾಷೆ ಮತ್ತು ಅಸಹಾಯಕತೆಗೆ ಗುರಿಯಾಗಿದ್ದಿರಬಹುದು. ಅದನ್ನು ಹೇಗೆ ಮೀರಿದಿರಿ? ಆತ್ಮಸ್ಥೈರ್ಯ ಹೇಗೆ ಬೆಳೆಸಿಕೊಂಡಿರಿ?
ಸಾಯಿಬಾಬಾ : ನಾನು ದೆಹಲಿ ವಿಶ್ವಾವಿದ್ಯಾಲಯದಲ್ಲಿ ಕಬೀರನ ಬಗ್ಗೆ ಪಾಠ ಮಾಡುತ್ತಿದೆ. ಕಬೀರನ ಬಗ್ಗೆ ನನಗೆ ಅಪಾರವಾದ ಪ್ರೀತಿ. ಜೈಲಿನಲ್ಲಿದ್ದಾಗ ಮಡದಿ ವಸಂತರ ಮೂಲಕ ಕಬೀರನ ಪುಸ್ತಕಗಳನ್ನು ತರಿಸಿಕೊಂಡು ಹೆಚ್ಚೆಚ್ಚು ಓದಿದೆ. ಕಬೀರ ನನಗೆ ಭರವಸೆಯನ್ನು ಹುಟ್ಟಿಸಿದ. ಹಾಗೆಯೇ ಜೈಲಿನಲ್ಲಿ ನನಗಿಂತ ಹೀನಾಯ ಹಾಗೂ ಹತಾಷ ಪರಿಸ್ಥಿತಿಯಲ್ಲಿ ಆದಿವಾಸಿಗಳು, ದಲಿತರು ಮತ್ತು ಅಲ್ಪಸಂಖ್ಯಾತರು ಇದ್ದರು. ಆದರೂ ಅವರಲ್ಲಿ ಎಂದಾದರೂ ಒಮ್ಮೆ ಬಿಡುಗಡೆಯಾಗುವ ಭರವಸೆ ಕಮರಿರಲಿಲ್ಲ. ಅವರಿಂದ ನಾನು ಬಿಡುಗಡೆಯ ಬಗ್ಗೆ ಭರವಸೆಯಿಡಲು ಕಲಿತೆ. ಕವಿತೆ, ಲೇಖನ ಹಲವು ಬಗೆಯ ಬರಹಗಳನ್ನು ಮಾಡುವುದು ಭರವಸೆಯನ್ನು ಕೊಡುತ್ತಿತ್ತು.
ಆದರೆ ಕೋವಿಡ್ ಸಂದರ್ಭದಲ್ಲಿ ನಾನೂ ಹತಾಷ ಗಳಿಗೆಗಳನ್ನು ಅನುಭವಿಸಿದೆ. ನಮ್ಮವರ ಮುಲಾಖಾತ್ ಅಗಲೀ, ಸುದ್ದಿಯಾಗಲಿ ಇಲ್ಲದೆ, ಪತ್ರಿಕೆ, ಪುಸ್ತಕಗಳಿಲ್ಲದೆ ದಿನಗಳೆಯುವುದು ನರಕಪ್ರಾಯ. ಅ ನಂತರ ಐದು ನಿಮಿಷದ ಫ಼ೋನ್ ಸೌಲಭ್ಯ ಸಿಕ್ಕರೂ ಅವೆಲ್ಲವೂ ಕೋವಿಡ್ ನ ಸಾವು-ನೋವುಗಳನ್ನು ತಿಳುವುದಕ್ಕೆ ಸಾಕಾಗುತ್ತಿತ್ತು. ವಸಂತ ಬರೆದ ಪತ್ರದಲ್ಲಿ ಸಾವಿರಾರು ದಿನಗೂಲಿಗಳು ನಗರಗಳಿಂದ ದೂರದ ಊರುಗಳಿಗೆ ನಡೆದು ಹೋಗುತ್ತಿರುವ ವರದಿಗಳನ್ನು ಓದಿ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಸಂಕಟವಾಗುತ್ತಿತ್ತು. ಹತಾಷೆಯುಂಟಾಗುತ್ತಿತ್ತು.
ಪಕ್ಕದ ಸೆಲ್ಲಿನ ವ್ಯಕ್ತಿಯೊಬ್ಬರ ತಾಯಿ ಕೋವಿಡ್ ನಿಂದಾಗಿ ಸತ್ತ ಸುದ್ದಿ ಬಂದ ಕೆಲದಿನಗಳಲ್ಲಿ ಆತನ ತಂದೆಯೂ ತೀರಿಕೊಂಡ ಸುದ್ದಿ ಬಂತು. ನಂತರ ಅವನ ಸಹೋದರ. ಈತ ಇಲ್ಲಿ ಜೈಲಿನಲ್ಲಿ ಮತ್ತೊಮೆ ಒಂಟಿಯಾದ. ಇವೆಲ್ಲವೂ ಹತಾಷೆಯುಂಟು ಮಾಡುತ್ತಿತ್ತು. ಅದೇರೀತಿ ನನ್ನ ಸೆರೆವಾಸಕ್ಕೆ ಮುಂಚೆ ಅಮೆರಿಕದ ಇತಿಹಾಸದಲ್ಲಿ ಬಿಳಿಯರು ಕರಿಯರನ್ನು ಲಿಂಚಿಂಗ್ ಮಾಡುವುದನ್ನು ಓದಿದ್ದೆ. ಇಂಥಾ ಗುಂಪುಹತ್ಯೆಗಳು ಈಗ ಭಾರತದಲ್ಲೂ ಹೆಚ್ಚುತ್ತಿರುವುದನ್ನು ಕೇಳಿ ಮನಸ್ಸು ವಿಹ್ವಲಗೊಳ್ಳುತ್ತಿತ್ತು. ಇವೆಲ್ಲವೂ ನಾನು ಅನುಭವಿಸಿದ ಹತಾಷೆಗಳಿಗೆಗಳು.
ಪ್ರಶ್ನೆ: ನಿಮ್ಮ ಪರಿಸ್ಥಿತಿಗೆ ಯಾರನ್ನು ದೂರುತ್ತೀರಿ? ಯಾವ ಬಗೆಯ ಉತ್ತರದಾಯಿತ್ವ ನಿರೀಕ್ಷಿಸುತ್ತೀರಿ?
ಸಾಯಿಬಾಬಾ : ಪ್ರಭುತ್ವವೇ ಕಾನೂನು ಬಾಹಿರವಾಗಿ ಉಳ್ಳವರ ಪರವಾಗಿ ವರ್ತಿಸುವಾಗ ಇಂಥದ್ದು ಸಂಭವಿಸುತ್ತವೆ. ಕೆಲವು ವ್ಯಕ್ತಿಗಳು ನನ್ನ ಕಾನೂನು ಬಾಹಿರ ಬಂಧನ ಮತ್ತು ಸೆರೆವಾಸಗಳಿಗೆ ಕಾರಣರಾಗಿದ್ದರೂ ನಾನು ವ್ಯಕ್ತಿಗಳನ್ನು ದೂಷಿಸುವುದಿಲ್ಲ. ಇತಿಹಾಸದಲ್ಲೇ ನನೊಬ್ಬನೇ ಬಲಿಪಶುವಲ್ಲ. ನಾನು ಬಲಿಪಶುವೇ ಆಗಿದ್ದರೂ ಎಲ್ಲಕ್ಕಿಂತ ಮಿಗಿಲಾಗಿ ಇದೊಂದು ರಾಜಕೀಯ ಪ್ರಕರಣ. ಹೀಗಾಗಿ ಇತಿಹಾಸವು ಮಾನವಹಕ್ಕುಗಳನ್ನು ಬಲಿಹಾಕಿದವರು, ಅನ್ಯಾಯ ಎಸಗಿದವರು ಯಾರು ಎಂಬುದನ್ನು ತಿಳಿಸುತ್ತದೆ.
ಪ್ರಶ್ನೆ: ನಮ್ಮ ನ್ಯಾಯ ಪ್ರಕ್ರಿಯೆಯಲ್ಲಿ ಹಾಗೂ ಜೈಲು ಆಡಳಿತದಲ್ಲಿ ಯಾವ ಬಗೆಯ ಸುಧಾರಣೆಗಳ ಅಗತ್ಯವಿದೆ ಎಂದು ನೀವು ಭಾವಿಸುತ್ತೀರಿ?
ಸಾಯಿಬಾಬಾ : ಇದೊಂದು ಗಹನವಾದ ಪ್ರಶ್ನೆ ಮತ್ತು ಸುದೀರ್ಘ ಉತ್ತರ ನೀಡಬೇಕಾಗುತ್ತದೆ. ಆದರೂ ಕ್ಲುಪ್ತವಾಗಿ ಇಷ್ಟು ಮಾತ್ರ ಹೇಳಬಲ್ಲೆ. ಮೊದಲನೆಯದಾಗಿ ಕಾನೂನುಗಳು ಅವುಗಳ ಆಶಯಕ್ಕೆ ತಕ್ಕಂತೆ ಜಾರಿಯಾಗುತ್ತಿಲ್ಲ್ಲ. ಕೆಲವು ಕಾನೂನುಗಳು ಪ್ರಜಾತಂತ್ರಕ್ಕೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ವಿಶೇಷವಾಗಿ ಕರಾಳ ಕಾನೂನುಗಳು. ಹೀಗಾಗಿ ಕಾನೂನಿನ ದುರ್ಬಳಕೆ ಎಂಬ ಗ್ರಹಿಕೆಯೇ ತಪ್ಪು. ಕಾನೂನುಗಳೇ ಸಂವಿಧಾನಕ್ಕೆ ವಿರುದ್ದವಾಗಿವೆ. ಅದರ ದುರ್ಬಳಕೆಯಲ್ಲ. ಅದರ ಬಳಕೆಯೇ ಸಂವಿಧಾನದ ದುರ್ಬಳಕೆ. ಆದರಿಂದ ಒಬ್ಬ ಪೊಲಿಸ್ ಅಥವಾ ಒಬ್ಬ ರಾಜಕೀಯ ನಾಯಕನನ್ನು ಮಾತ್ರ ದೂರಿ ಪ್ರಯೋಜನವಿಲ್ಲ. ಇಡೀ ವ್ಯವಸ್ಥೆಯೇ ಹಾಗಿದೆ. ಸಂವಿಧಾನವಿದ್ದರೂ ಇಂಥಾ ಕಾನೂನುಗಳು ಹೇಗೆ ಜಾರಿಯಾದವು? ಆದ್ದರಿಂದ ಇಡೀ ವ್ಯವಸ್ಥೆಯೇ ಬದಲಾಗಬೇಕಿದೆ.
- ಶಿವಸುಂದರ್
ಜನಪರ ಚಿಂತಕರು, ಲೇಖಕರು
Leave a reply