ನ್ಯೂಡೆಲ್ಲಿ : ದಲಿತ ಸಮುದಾಯದಿಂದ ಬಂದ ವ್ಯಾಪಾರಿಗಳ ಆದಾಯವು ಇತರ ವ್ಯಾಪಾರಿಗಳ ಆದಾಯಕ್ಕಿಂತ ಶೇ 16ರಷ್ಟು ಕಡಿಮೆಯಾಗಿದೆ. ಕೆಳವರ್ಗಕ್ಕೆ ಸೇರಿದ ಇತರೆ ವ್ಯಕ್ತಿಗಳ ವ್ಯವಹಾರಗಳು ಕಡಿಮೆ ಆದಾಯದಲ್ಲಿ ನಡೆಯುತ್ತಿವೆ. ಜನಸಂಖ್ಯೆಯ ವಿವಿಧ ವರ್ಗಗಳ ವ್ಯಾಪಾರಿಗಳ ಆದಾಯದ ಮೇಲೆ ನಡೆಸಿದ ಅಧ್ಯಯನವು ಇದನ್ನು ಬಹಿರಂಗಪಡಿಸಿದೆ. ದಲಿತ ಸಮುದಾಯ ಎದುರಿಸುತ್ತಿರುವ ಕಳಂಕದಿಂದಾಗಿ ಆದಾಯದಲ್ಲಿ ಅಸಮಾನತೆ ಉಂಟಾಗಿದೆ ಎಂದು ಸಂಶೋಧಕರು ವಿವರಿಸಿದ್ದಾರೆ.
ದಲಿತ ವರ್ತಕರು ಸಮಾಜದ ಎಲ್ಲಾ ವರ್ಗದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೂ ಅವರ ಆದಾಯ ಹೆಚ್ಚಳಕ್ಕೆ ನೆರವಾಗುತ್ತಿಲ್ಲ. ಆದರೆ, ಈ ಸಂಬಂಧಗಳು ಒಬಿಸಿಗಳು, ಎಸ್ಟಿಗಳು ಮತ್ತು ಮುಸ್ಲಿಮರಂತಹ ಇತರೆ ಕೆಳವರ್ಗದ ವ್ಯಾಪಾರಿಗಳಿಗೆ ಆರ್ಥಿಕವಾಗಿ ಉಪಯುಕ್ತವಾಗಿವೆ.
ಸಮಾಜದ ಎಲ್ಲ ವರ್ಗದವರೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳುವುದರಿಂದ ಯಾವುದೇ ವ್ಯವಹಾರ ಬೆಳೆಯುತ್ತದೆ ಎಂಬ ಕಲ್ಪನೆಯಲ್ಲಿ ಸತ್ಯಾಂಶವಿಲ್ಲ ಎಂಬುದನ್ನು ತಮ್ಮ ಅಧ್ಯಯನ ಸ್ಪಷ್ಟಪಡಿಸಿದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಬೆಂಗಳೂರಿನ ಐಐಎಂ ಸಹಾಯಕ ಪ್ರಾಧ್ಯಾಪಕ ಪ್ರತೀಕ್ ರಾಜ್ ಹೇಳಿದ್ದಾರೆ. ಇದು ತುಂಬಾ ಆಶ್ಚರ್ಯಕರ, ಅನಿರೀಕ್ಷಿತ ಮತ್ತು ಅಸಾಮಾನ್ಯವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಈ ಅಧ್ಯಯನವನ್ನು ಪ್ಲಾಸ್ ಒನ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ದಲಿತ ವ್ಯಾಪಾರಿಗಳು ಮತ್ತು ಇತರೆ ವ್ಯಾಪಾರಿಗಳ ನಡುವಿನ ಆದಾಯದ ವ್ಯತ್ಯಾಸವು ಶೇಕಡಾ 15-18 ರ ನಡುವೆ ಇದೆ. ಇದಕ್ಕೆ ಮುಖ್ಯವಾಗಿ ಜಾತಿಯೇ ಕಾರಣವಾಗಿದೆ ಎಂದು ಪ್ರತೀಕ್ ರಾಜ್ ಹೇಳಿದರು. 2021ರಲ್ಲಿ ಜನಗಣತಿ ನಡೆಸದಿರುವುದು ಬಿಟ್ಟರೆ ಜಾತಿ ಗಣತಿಯನ್ನೂ ನವೀಕರಿಸಿಲ್ಲ ಎಂದ ಪ್ರತೀಕ್, ಈ ಹಿನ್ನೆಲೆಯಲ್ಲಿ ದೇಶದ 140 ಕೋಟಿ ಜನಸಂಖ್ಯೆಯಲ್ಲಿ ದಲಿತರ ಸಂಖ್ಯೆ 25-30 ಕೋಟಿ ಇರಬಹುದು ಎಂದು ಅಂದಾಜಿಸಿದ್ದಾರೆ.
ಅಧ್ಯಯನ ತಂಡದ ಸದಸ್ಯ ಪ್ರಾಧ್ಯಾಪಕರಾದ ಹರಿ ಬಾಬುಜಿ ಮಾತನಾಡಿ, ದಲಿತರು ಅವಮಾನಗಳನ್ನು ಎದುರಿಸಿ ತಿರಸ್ಕೃತರಾಗಿರುವುದರಿಂದ ಆದಾಯದಲ್ಲಿ ಈ ವ್ಯತ್ಯಾಸ ಕಂಡುಬಂದಿದೆ. ಜನರ ನಡುವೆ ಒಳ್ಳೆಯ ಸಂಬಂಧಗಳು ಹೊಂದಿರುವುದು ತಳ ಸಮುದಾಯದ ಮೇಲೆ ಒಂದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಎಂದು ಅಧ್ಯಯನ ಗುರುತಿಸಿದೆ.
Leave a reply