ಪ್ರೀತಿಯ ಸಸಿಕಾಂತ್ ಸೆಂಥಿಲ್ ಅವರೇ,
ಮೊದಲನೆಯದಾಗಿ ಅಭಿನಂದನೆಗಳು..
ಕಾಂಗ್ರೆಸ್ ಪಕ್ಷದಿಂದ ದೊಡ್ಡ ಬಹುಮತದಿಂದ ಸಂಸದರಾಗಿ ಆಯ್ಕೆಯಾಗಿದ್ದೀರಿ. ಜನಚಳವಳಿಗಳು ಬಿಡಿಬಿಡಿಯಾಗಿ ಕಂಫರ್ಟ್ ಜೋನ್ ಕಡೆಗೆ ಸರಿಯುತ್ತಿರುವ ಸಮಯದಲ್ಲಿ, ಆಡಳಿತ ಸೇವೆಯ ಮಿತಿಗಳು ಜನಪರ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಅಡ್ಡಿಯಾದಾಗ ನಿಮ್ಮ ಅಂತಸ್ಸಾಕ್ಷಿಗೆ ಧ್ವನಿಯಾಗಿ ರಾಜೀನಾಮೆ ಒಗೆದು ಕಂಫರ್ಟ್ ಜೋನಿನಿಂದ ಹೊರಬಂದಿರಿ. ದಮನಿತ ಜನರೊಂದಿಗೆ ನಿಂತಿರಿ. ಅದಕ್ಕೆ ನಿಮ್ಮ ಬಗ್ಗೆ ನನಗೆ, ನಮ್ಮಂತವರಿಗೆ ವಿಶೇಷ ಅಭಿಮಾನ. ಆ ಪಯಣದ ಮುಂದುವರಿಕೆ ಎಂದು ಭಾವಿಸಿಕೊಂಡು ಕಾಂಗ್ರೆಸ್ ಸೇರಿದಿರಿ. ಈಗ ಸಂಸದರಾಗಿದ್ದೀರಿ. ನಿಮ್ಮ ಈ ಪಯಣದ ಹಿಂದಿನ ಆಶಯಗಳಿಗೆ ಹಾಗೂ ನಿಮ್ಮ ಬದ್ಧತೆಗಳಿಗೆ ಅಭಿನಂದನೆಗಳು. ಆಗ ಆತ್ಮಸಾಕ್ಷಿಗೆ ಓಗೊಟ್ಟು ಅಧಿಕಾರಿ ಸ್ಥಾನ ತ್ಯಜಿಸಿ ನೈತಿಕ ನಾಗರಿಕತ್ವವನ್ನು ಅಪ್ಪಿಕೊಂಡಂತೆ ಇಂದಿನ ಸಂದರ್ಭದಲ್ಲಿ ಪಕ್ಷ ದ ಮಿತಿಗಳನ್ನು ದಾಟಿ ಸಂವಿಧಾನ ಮೌಲ್ಯಗಳಿಗೆ ಬದ್ಧವಾಗಿ ಸಂಸತ್ತಿನಲ್ಲಿ ಜನಧ್ವನಿಯಾಗುತ್ತೀರಿ ಎಂಬ ನಿರೀಕ್ಷೆ ಇದ್ದೇ ಇದೆ.
ಪ್ರೀತಿಯ ಸೆಂಥಿಲ್ ಅವರೇ,
ಈ ಪತ್ರ ಬರೆಯಲೇಬೇಕು ಎಂದೆನಿಸಿದ್ದಕ್ಕೆ ಮತ್ತೊಂದು ಕಾರಣವೂ ಇದೆ. ಇದು ಸ್ವಾತಂತ್ರ್ಯೋತ್ತರ ಭಾರತದ ಅತ್ಯಂತ ದುರಿತ ಕಾಲ. ಬ್ರಾಹ್ಮಣವಾದಿ ಬಂಡವಾಳವಾದಿ ಸಂಘಿ ಫ್ಯಾಶಿಸ್ಟರು ದೇಶದ ಹಂದರದ ಮೇಲೆ ನಿರಂತರ ಆಕ್ರಮಣ ನಡೆಸುತ್ತಾ ಸಮಾಜವನ್ನು ಮತ್ತು ಪ್ರಭುತ್ವವನ್ನು ಫ್ಯಾಶೀಕರಿಸುವಲ್ಲಿ ಯಶಸ್ವಿಯಾಗುತ್ತಾ ಸಾಗಿದ್ದಾರೆ. ಹೀಗಾಗಿ ಈ ಸಂಘಿ ಫ್ಯಾಶಿಸ್ಟರನ್ನು ಸೋಲಿಸುವುದು ಇಂದು ನೆಮ್ಮದಿಯ ಬದುಕನ್ನು ಬಯಸುವ ಎಲ್ಲಾ ಭಾರತೀಯರಿಗೂ ಜೀವನ್ಮರಣದ ಪ್ರಶ್ನೆಯಾಗಿದೆ.
ಆದ್ದರಿಂದ ಫ್ಯಾಶಿಸ್ಟರಿಗೆ ಆಗುವ ಸಣ್ಣ ಪುಟ್ಟ ಹಿನ್ನೆಡೆಯೂ ಜನರ ಸಂಭ್ರಮಕ್ಕೆ ಕಾರಣವಾಗುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶಗಳು ಅಂತ ಒಂದು ಸಣ್ಣ ಸಂಭ್ರಮ ಹುಟ್ಟಿಸಿದೆ. ಆದರೆ ಬಿಜೆಪಿ ಮತ್ತು ಸಂಘಿ ಫ್ಯಾಶಿಸ್ಟರು ಗೆಲ್ಲುತ್ತಿರುವುದು ಕೇವಲ ತಮ್ಮ ಸಾಮರ್ಥ್ಯದಿಂದಲ್ಲ.
*ವಾಸ್ತವದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ಅಲ್ಲವಾದರೂ ಬಲ ಹಾಗೂ ನಡುಪಂಥದ ಎಲ್ಲಾ ಪಕ್ಷಗಳೂ ಭಾರತದಲ್ಲಿ ಸಂಘಿ ಫ್ಯಾಶಿಸಂ ಅನ್ನು ಪೋಷಿಸಿದ್ದಾರೆ ಮತ್ತು ಪೋಶಿಸುತ್ತಿದ್ದಾರೆ..*
*ಸೈದ್ಧಾಂತಿಕವಾಗಿ, ರಾಜಕೀಯವಾಗಿ , ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಂಘಟನಾತ್ಮಕವಾಗಿ* ಈ ಪರೋಕ್ಷ ಪಾಲುದಾರಿಕೆಯಿಂದಾಗಿ ಕಾಂಗ್ರೆಸ್ಸನ್ನೂ ಒಳಗೊಡಂತೆ ಬಿಜೆಪಿಯೇತರ ಪಕ್ಷಗಳೂ ಸಮಾಜದ ಮೇಲೆ ಹಿಂದೂತ್ವದ ಯಾಜಮಾನ್ಯವನ್ನು ಗಟ್ಟಿ ಗೊಳಿಸುತ್ತಿವೆ.
ಸಂಘಿ ಫ್ಯಾಶಿಸಂನ ಹಿಂದೂತ್ವ ಮಾನ್ಯಗೊಳ್ಳುವಲ್ಲಿ..
ಅದರ ಆರ್ಥಿಕ ಆಯಾಮವಾದ ಸಂವಿಧಾನ ವಿರೋಧಿ ಆಕ್ರಮಣಕಾರಿ ಬಂಡವಾಳಶಾಹಿ ನವ ಉದಾರವಾದಿ ವ್ಯವಸ್ಥೆಯನ್ನು ಸಂವಿಧಾನದ ಸಂದಿಗಳ ಮೂಲಕವೇ ಜಾರಿಗೊಳಿಸಿದ್ದರಲ್ಲಿ…
ಮತ್ತು ಭಾರತದ ಪ್ರಜಾತಂತ್ರ ಫ್ಯಾಶಿಸ್ಟ್ಳರ ಆಕ್ರಮಣಕಾರಿ ದಾಳಿಗಳಿಗೆ ಬಲಿಯಾಗುವಷ್ಟು ನಿತ್ರಾಣವಾಗುವಂತೆ ಸ್ವಾತಂತ್ರ್ಯೋತ್ತರ ಭಾರತದ 5-6 ದಶಕಗಳ ಕಾಲ ಸಂವಿಧಾನವನ್ನು ಸಾವಿರ ಇರಿತಗಳಿಂದ ನಿಧಾನ ಘಾಸಿಗೊಳಿಸಿದ್ದರಲ್ಲಿ…
ಕಾಂಗ್ರೆಸ್ಸಿಗೆ ಪ್ರಧಾನ ಪಾಲಿದೆ. ಮತ್ತು ಇದು ಆಗಿಹೋದ ಕಥೆಯಲ್ಲ.
*ಈಗಲೂ ಕಾಂಗ್ರೆಸ್ ಅದೇ ನೀತಿಗಳನ್ನೇ ಯಾವುದೇ ಮರುಪರಿಶೀಲನೆ ಅಥವಾ ಯಾವುದೇ ಪಶ್ಚಾತಾಪವಿಲ್ಲದೆ ಮುಂದುವರೆಸುತ್ತಿದೆ.* ಕಾಂಗ್ರೆಸ್ಸಿನ ರಾಜಕೀಯ, ಆರ್ಥಿಕ ನೀತಿ ಮತ್ತು ಸಂಸ್ಕೃತಿ ಸೃಷ್ಟಿಸಿದ ರಾಜಕೀಯ- ಸಾಮಾಜಿಕ ಬಿಕ್ಕಟ್ಟು ಮತ್ತು ಆತಂಕಗಳ ಫಲವತ್ತಾದ ನೆಲದಲ್ಲಿ ಸಂಘಿ ಫ್ಯಾಶಿಸಂ ಇಂದು ಹುಲುಸಾಗಿ ಬೆಳೆದಿದೆ. *ಇದು ಕಾಂಗ್ರೆಸ್ಸಿನ ಐಡಿಯಾಲಜಿ , ಸಂಘಟನೆ ಮತ್ತು ನಾಯಕತ್ವ ಮೂರು ಸಮ್ಮಿಳಿತವಾಗಿ , ಸಮ್ಮತವಾಗಿ ರೂಪಿಸಿದ ಈ ದೇಶದ ದುರಂತ*.
ಆದ್ದರಿಂದ ಕಾಂಗ್ರೆಸ್ಸಿನ ಮೂಲಕ ಫ್ಯಾಶಿಷ್ಟರನ್ನು ಸೋಲಿಸಿ ಸಂವಿಧಾನವನ್ನು ಮತ್ತು ಪ್ರಜಾತಂತ್ರವನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲಾ ಪ್ರಾಮಾಣಿಕ ಪ್ರಜ್ಞಾವಂತರನ್ನು ಕಾಡುತ್ತಲೇ ಇರುತ್ತದೆ.
ಹೀಗಾಗಿ ಕಾಂಗ್ರೆಸ್ಸಿನ ಮೂಲಕ ಸಂವಿಧಾನವನ್ನು ಮತ್ತು ಭಾರತವನ್ನು ಉಳಿಸಿಕೊಳ್ಳುವ ನಿಮ್ಮ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಜನಮಿತ್ರ ಸೆಂಥಿಲ್ ಅವರನ್ನು ಭೇಟಿ ಮಾಡಲು ಅಪಾರ ಕಾಳಜಿ ಮತ್ತು ಕುತೂಹಲಗಳಿಂದ ಜಾಗೃತ ಕರ್ನಾಟಕ ಆಯೋಜಿಸಿದ್ದ ಮೊನ್ನೆಯ ಸಭೆಗೆ ಬಂದಿದ್ದೆ. ನಿಮ್ಮದು ಅದೇ ಸರಳತೆ. ಅದೇ ಹಮ್ಮು ಬಿಮ್ಮು ಇಲ್ಲದ ಜನಸ್ನೇಹಿ ನಡತೆ. ಖುಷಿಯಾಯಿತು.
ಆದರೆ ಆ ಸಂತೋಷ ಬಹಳ ಬೇಗ ವಿಷಾದವಾಗಿ ಬದಲಾಯಿತು.
*ಸಂವಾದದಲ್ಲಿ ಕಾಂಗ್ರೆಸ್ಸನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನೀವು ವ್ಯಕ್ತಪಡಿಸಿದ ಐತಿಹಾಸಿಕವಾಗಿ ತಪ್ಪಾದ ಅಭಿಪ್ರಾಯಗಳು, ಕೆಲವು ಪ್ರಶ್ನೆಳಿಗಳಿಗೆ ನೀವು ನೀಡಿದ ಒಂದು ಬಗೆಯ ಅಪ್ರಾಮಾಣಿಕ ಉತ್ತರಗಳು ಸಖೇದಾಶ್ಚರ್ಯವನ್ನುಂಟು ಮಾಡಿತು.* ಒಂದೇ ಮಾತಿನಲ್ಲಿ ಹೇಳುವುದಾದರೆ ನನಗೆ ನಿರಾಶೆಯಾಯಿತು. *ನನಗೆ ಅಲ್ಲಿ ಜನಮಿತ್ರ ಸೆಂಥಿಲ್ ಅವರಿಗಿಂತ ಚತುರ ಕಾಂಗ್ರೆಸ್ ನಾಯಕ ಸಸಿಕಾಂತ್ ಕಂಡರು.* ಹೀಗಾಗಿ ಈ ಕೆಲವು ವಿಷಯಗಳನ್ನು ಬಹಿರಂಗವಾಗಿ ನಿಮ್ಮ ಮುಂದೆ ಇಡಬೇಕೆನಿಸಿತು :
1) *ಸಂವಿಧಾನವನ್ನು Reclaim ಮಾಡುವುದೆಂದರೆ ಕಾಂಗ್ರೆಸ್ಸನ್ನು ಸಬಲೀಕರಣಗೊಳಿಸುವುದು ಮಾತ್ರ ಎಂಬ ನಿಮ್ಮ ಅಭಿಪ್ರಾಯ ಅಪಾಯಕಾರಿ*:
ಇವತ್ತಿನ ಸಂದರ್ಭದಲ್ಲಿ ಪ್ರಧಾನ ಶತ್ರುವಾದ ಸಂಘಿ ಫ್ಯಾಶಿಸಂ ಅನ್ನು ಚುನಾವಣೆಯಲ್ಲೂ ಸೋಲಿಸುವ ಕಾರಣಕ್ಕಾಗಿ ಹಲವಾರು ಕಾಂಗ್ರೆಸ್ ವಿರೋಧಿ ಜನನಿಷ್ಠರೂ ಕೂಡ ಕಾಂಗ್ರೆಸ್ಸಿಗೆ ಓಟು ಹಾಕುತ್ತಿದ್ದಾರೆ. ಆದರೆ ಅದು ಕಾಂಗ್ರೆಸ್ ಜನಪರವಾಗಿಬಿಟ್ಟಿದೆ ಅದು ಜನಪರವಾಗುತ್ತದೆ ಎಂಬ ನಿರೀಕ್ಷೆಯಿಂದಲ್ಲ. ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಏಕೈಕ ಕಾರಣಕ್ಕೆ. ಆದರೆ ಫ್ಯಾಶಿಸಂ ಎನ್ನುವುದು ಒಂದು ಪಕ್ಷ ಮಾತ್ರವಲ್ಲ ಹಾಗೂ ಅದನ್ನು ಕೇವಲ ಚುನಾವಣೆಗೆ ಸೀಮಿತವಾಗಿ ಸೋಲಿಸಲೂ ಆಗುವುದಿಲ್ಲ ಮತ್ತು ಕಾಂಗ್ರೆಸ್ ಕೂಡ ರಾಷ್ಟ್ರಮಟ್ಟದಲ್ಲೂ, ಹಾಗೂ ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಸಾರದಲ್ಲಿ ಬಿಜೆಪಿಗಿಂತ ಮುಲಭೂತವಾಗಿ ಭಿನ್ನವಾದ ಪರ್ಯಾಯಗಳನ್ನು ಮುಂದಿಡುತ್ತಿಲ್ಲ. ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಂತೂ ಬಿಜೆಪಿಗಿಂತ ಭಿನ್ನವಾದ ಆಡಳಿತವನ್ನು ನೀಡುತ್ತಿಲ್ಲ. ಕರ್ನಾಟಕಗಳಂತ ಕಡೆಗಳಲ್ಲಿ ಹಲವು ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಲ್ಲಿ ಬಿಜೆಪಿ ನೀತಿಗಳನ್ನೇ ಮುಂದುವರೆಸುತ್ತಿದೆ.
ಹೀಗಾಗಿ ಫ್ಯಾಶಿಸ್ಟ್ ವಿರೋಧಿ ಸಂಗ್ರಾಮ ಕಾಂಗ್ರೆಸ್ ಆಚೆಗೂ, ಕಾಂಗ್ರೆಸ್ಸಿನೊಳಗಿರುವ ಫ್ಯಾಶಿಸ್ಟ್ ಧೋರಣೆಗಳ ವಿರುದ್ಧವೂ ನಡೆಯಲೇಬೇಕಿದೆ. ಆಗ ಮಾತ್ರ ಸಂವಿಧಾನವನ್ನು ಈ ದೇಶದ ಜನ ಮತ್ತೆ reclaim ಮಾಡಲು ಸಾಧ್ಯ. ಆದರೆ ನೀವು ಸಂವಾದದುದ್ದಕ್ಕೂ ಸಂವಿಧಾನವನ್ನು reclaim ಮಾಡುವುದೆಂದರೆ ಕಾಂಗ್ರೆಸ್ಸನ್ನು reclaim ಮಾಡುವುದು ಎಂದು ಪ್ರತಿಪಾದಿಸುತ್ತಾ ಹೋದಿರಿ. ಇದೊಂದು ಅಪಾಯಕಾರಿ ರಾಜಕೀಯ ಧೋರಣೆ.
ಕಾಂಗ್ರೆಸ್ಸಿನ ಮೇಲೆ ಫ್ಯಾಶಿಸ್ಟರ ದಾಳಿ ಸಂವಿಧಾನದ ಮೇಲಿನ ದಾಳಿಯ ಭಾಗ ಎಂದು ಹೇಳಬಹುದು.
ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ಸಿನ ಮೌನ ಅಥವಾ ಸಕ್ರಿಯ ಬೆಂಬಲದೊಂದಿಗೆ ಈ ದೇಶದ ಆದಿವಾಸಿ, ದಲಿತ ಹಾಗೂ ಕಾರ್ಮಿಕರ ಮೇಲೆ, ಕರ್ನಾಟಕದಂಥ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಯಾವುದೇ ಶಿಕ್ಷಾ ಭೀತಿಯಿಲ್ಲದೆ ಮುಸ್ಲಿಮರ ಮೇಲೆ ಮುಂದುವರೆದಿರುವ ದಾಳಿಯೂ ಕೂಡ ಫ್ಯಾಶಿಸ್ಟ್ ದಾಳಿಯೇ ಅಲ್ಲವೇ? ಅದಕ್ಕೆ ಬಿಜೆಪಿಯಷ್ಟೇ ಕಾಂಗ್ರೆಸ್ಸಿನ ಬೆಂಬಲವೂ ಕಾರಣವಲ್ಲವೇ? ಹೀಗಾಗಿ ಕಾಂಗ್ರೆಸ್ಸನ್ನು ಸಂವಿಧಾನ ರಕ್ಷಕ ಅಥವಾ ಫ್ಯಾಶಿಸ್ಟ್ ವಿರೋಧಿ ಮಿತ್ರ ಪಕ್ಷ ಎಂದು ಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಕೇಳಬೇಕಲ್ಲವೇ? ಹೀಗಾಗಿ ಬಿಜೆಪಿಯ ವಿರುದ್ಧ ಕಾಂಗ್ರೆಸ್ಸನ್ನು ಚುನಾವಣೆಯಲ್ಲಿ ಬೆಂಬಲಿಸುವುದು ಹೇಗೆ ಫ್ಯಾಸಿಸ್ಟ್ ವಿರೋಧಿ ಹೋರಾಟದ ಭಾಗವೋ, ಅಷ್ಟೇ ಮಟ್ಟಿಗೆ ಕಾಂಗ್ರೆಸ್ಸಿನ ಜನವಿರೋಧಿ ನೀತಿಗಳ ವಿರುದ್ಧದ ಹೋರಾಟಗಳೂ ಕೂಡ ಫ್ಯಾಶಿಸ್ಟ್ ವಿರೋಧಿ ಸಂಗ್ರಾಮದ ಭಾಗವೇ ಆಗುತ್ತದಲ್ಲವೇ? ಆಗಬೇಕಲ್ಲವೇ? ಫ್ಯಾಶಿಸಂ ಜಾರಿಯಾಗುವುದು ಅದರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ನೀತಿ ಮತ್ತು ಕಾರ್ಯಕ್ರಮಗಳಲ್ಲೇ ಅಲ್ಲವೇ?
ಆದ್ದರಿಂದ ಎಲ್ಲಾ ಫ್ಯಾಶಿಸ್ಟ್ ವಿರೋಧಿ ಹೋರಾಟಗಳು ಕಾಂಗ್ರೆಸ್ ಪರವಾಗಿರಬೇಕಿಲ್ಲ. ಏಕೆಂದರೆ ನಿಮ್ಮ ತರ್ಕವು ಶೋಷಣೆ ಮಾಡುವ ಕಾಂಗ್ರೆಸ್ ಸರ್ಕಾರದ ವಿರುದ್ಧದ ಜನತೆಯ ಹೋರಾಟಗಳು ಫ್ಯಾಶಿಸ್ಟ್ ಪರ ಎಂಬ ತಾರ್ಕಿಕ ಅಂತ್ಯಕ್ಕೆ ಮುಟ್ಟುತ್ತದೆ. ಈಗಾಗಲೇ ಕೆಲವು ಅತ್ಯುತ್ಸಾಹಿಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ಕ್ರಮಗಳನ್ನು ಪ್ರಶ್ನಿಸಿದವರನ್ನು ಫ್ಯಾಶಿಸ್ಟ್ ಪರ ಎಂದು ಹಣೆಪಟ್ಟಿ ಹಚ್ಚುವ ಆತ್ಮಘಾತುಕ ವಾದಗಳಲ್ಲಿ ತೊಡಗಿಕೊಂಡಿದ್ದಾರೆ. ಒಮ್ಮೊಮ್ಮೆ ಇದು ಮೋದಿ ಭಕ್ತರ ಕುರುಡನ್ನೂ ನೆನಪಿಸುವಂತಿರುತ್ತದೆ.
ಈ ದೇಶದಲ್ಲಿರುವ ಧಾರ್ಮಿಕ ವೈರುಧ್ಯಗಳನ್ನು ಹತ್ತಿಕ್ಕಲು ಭಾರತದಲ್ಲಿರುವರೆಲ್ಲಾ ಹಿಂದೂಗಳೇ ಎನ್ನುವಂತೆ ಫ್ಯಾಶಿಸ್ಟ್ ವಿರೋಧಿ ಹೋರಾಟವೆಂದರೆ ಕಾಂಗ್ರೆಸ್ ಹೋರಾಟ ಮಾತ್ರ ಎಂಬುದು ಆರೆಸ್ಸೆಸ್ ನ ಸರ್ವಾಧಿಕಾರಿ ಧೋರಣೆಯ ನಕಲಾಗುತ್ತದೆ. ಆರೆಸ್ಸಸ್ಸನ್ನು ವಿರೋಧಿಸುವರು ಯಾವ ಕಾರಣಕ್ಕೂ ಅದರ ಧೋರಣೆಯನ್ನು ಅನುಸರಿಸಬಾರದು.
ಅದರಲ್ಲೂ ಈಗ ಇತರ ಎಲ್ಲಾ ವಿರೋಧ ಪಕ್ಷಗಳ ಜೊತೆಗೂಡಿ ಬಿಜೆಪಿಯನ್ನು ಎದುರಿಸಬೇಕಾದ ಕಾಂಗ್ರೆಸ್. ಇತರ ಹೋರಾಟ ಧಾರೆಗಳನ್ನು ಗೌಣಗೊಳಿಸುವುದು ಅಥವಾ ತಿರಸ್ಕರಿಸುವುದು ಆತ್ಮಹತ್ಯಾತ್ಮಕ ಎಂದು ನನ್ನ ಅಭಿಪ್ರಾಯ. ಸಾಧ್ಯವಾದಲ್ಲಿ ದಯವಿಟ್ಟು ಒಮ್ಮೆನಿಲುವನ್ನು ಮರುಪರಿಶೀಲಿಸಿ .
2) *ಕಾಂಗ್ರೆಸ್ ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದು ಬ್ರಿಟಿಷರನ್ನು ಓಡಿಸಲು ಮಾತ್ರವಲ್ಲ – ಸಮಾನತೆಯನ್ನು ಸಾಧಿಸಲು ಎಂಬುದು ಇತಿಹಾಸದ ಅತ್ಯಂತ ತಪ್ಪು ವ್ಯಾಖ್ಯಾನ* :
ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ಕೊಡುತ್ತಾ ಕಾಂಗ್ರೆಸ್ ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದೆ ಸಮಾನತೆಯ ಭಾರತಕ್ಕಾಗಿ ಎಂದು ಘೋಷಿಸಿಬಿಟ್ಟಿರಿ.
ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಸಮಾನತೆ ಈ ದೇಶದಲ್ಲಿ ಸಾಧ್ಯವಾಗಬೇಕೆಂದರೆ ಅಂಬೇಡ್ಕರ್ ಹೇಳುವಂತೆ ಸಾಮಾಜಿಕ ಅಸಮಾನತೆಯನ್ನು ಕಾನೂನಾಗಿಸಿರುವ ಜಾತಿ ವಿನಾಶವಾಗಬೇಕು. ಆರ್ಥಿಕ ಅಸಮಾನತೆ ಹೆಚ್ಚಿಸುವ ಮತ್ತು ಕಾನೂನಾಗಿಸುವ ಬಂಡವಾಳಶಾಹಿ ವ್ಯವಸ್ಥೆ ನಾಶವಾಗಿ ಸಮಾಜವಾದಿ ಆರ್ಥಿಕತೆ ಜಾರಿಯಾಗಬೇಕು. ಆದರೆ ಬ್ರಿಟಿಷ್ ವಿರೋಧಿ ಹೋರಾಟದ ಮುಂಚೂಣಿ ನಾಯಕರು ಈ ಸಮಾನತಾ ಪರಿಕಲ್ಪನೆಯನ್ನು ಜಾರಿ ಮಾಡುವುದಿರಲಿ ಅಸಲು ಒಪ್ಪಿಕೊಂಡಿದ್ದರೇ?
ಗಾಂಧಿಯವರನ್ನೂ ಒಳಗೊಂಡಂತೆ ಹಲವು ಕಾಂಗ್ರೆಸ್ ನಾಯಕರೂ ಅಸ್ಪೃಶ್ಯತೆಯನ್ನು ಪಿಡುಗು ಎಂದು ಭಾವಿಸಿದ್ದೇನೋ ನಿಜ. ಆದರೆ ಅವರೆಲ್ಲರೂ “ಜಾತಿ ವಿನಾಶ” ಎಂಬ ಪರಿಕಲ್ಪನೆಯನ್ನು ಮಾತ್ರ ಖಂಡತುಂಡವಾಗಿ ವಿರೋಧಿಸುತ್ತಿದ್ದರು ಎಂಬುದು ಕೂಡ ಅಷ್ಟೇ ನಿಜ. ಸಾಮಾಜಿಕ ಸಮಾನತೆಗೆ ಸಿದ್ಧರಿಲ್ಲದ ಕಾಂಗ್ರೆಸ್ ನಾಯಕರೇ “ಜಾತಿ ವಿನಾಶದ” ಪರಿಕಲ್ಪನೆಗೂ ಮತ್ತು ಅದನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ಅಂಬೇಡ್ಕರ್ ಅವರಿಗೂ ಹಿಂದೂ ಧರ್ಮ ವಿರೋಧಿ ಮತ್ತು ದೇಶವಿರೋಧಿ ಎಂದು ಪಟ್ಟ ಕಟ್ಟಿದ್ದರು. ಈ ಕಾರಣಕ್ಕಾಗಿಯೇ ಸಂವಿಧಾನದಲ್ಲೂ ಅಪರಾಧ ಎಂದಾಗಿರುವುದು ಅಸ್ಪೃಶ್ಯತೆಯ ಪಾಲನೆಯೇ ಹೊರತು ಜಾತಿ ವ್ಯವಸ್ಥೆಯ ಪಾಲನೆಯಲ್ಲ. ತಿಲಕ್, ರಾಧಾಕೃಷ್ಣನ್ ರಂಥ ಹಲವಾರು ಗಣ್ಯಾತಿಗಣ್ಯ ಕಾಂಗ್ರೆಸ್ ನಾಯಕರಂತೂ ಹಿಂದೂ ಐಕ್ಯತೆ ನಿಂತಿರುವುದೇ ಮನುಸ್ಮೃತಿ ಆಧಾರಿತ ಜಾತಿ ವ್ಯವಸ್ಥೆಯಿಂದ ಎಂದು ಪ್ರತಿಪಾದಿಸುತ್ತ ಬಂದರಲ್ಲದೆ ಸಾರ್ವತ್ರಿಕ ಚುನಾವಣಾ, ಸಾರ್ವತ್ರಿಕ ಶಿಕ್ಷಣ, ಸಾರ್ವತ್ರಿಕ ಅವಕಾಶಗಳನ್ನು ವಿರೋಧಿಸುತ್ತಾ ಸಾಮಾಜಿಕ ಅಸಮಾನತೆಯನ್ನು ಗಟ್ಟಿಗೊಳಿಸಿದರು. ಸಮಾನತೆಯನ್ನಲ್ಲ. ಹಾಗೆಯೇ ಭಾರತದ ಆರ್ಥಿಕತೆಯನ್ನು ಹೆಚ್ಚೆಂದರೆ ಸಹ್ಯ ಗೊಳಿಸುವ ಚಿಂತನೆ ಇಟ್ಟುಕೊಂಡಿದ್ದರೇ ವಿನಾ ಸಮಾಜವಾದಿ ಕಾರ್ಯಕ್ರಮಗಳನ್ನಲ್ಲ.
1935 ರಲ್ಲಿ Government Of India Act ಪ್ರಕಾರ ಸಮುದಾಯ ಆಧಾರಿತ ಸೀಟು ಮತ್ತು ಚುನಾವಣೆಗಳು ಘೋಷಿತವಾದಮೇಲೆ ಹಿಂದೂಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಹಿಂದೂ ಮಹಾ ಸಭಾ ಮತ್ತು ಕಾಂಗ್ರೆಸ್ ಆವರೆಗೆ ಹಿಂದುಗಳೆಂದೇ ಪರಿಗಣಿಸದ ಅಸ್ಪ್ರಶ್ಯರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮಗಳನ್ನು ಕೈಗೊಂಡಿತು. ಅಂಬೇಡ್ಕರ್ರನ್ನು ಪುಸಲಾಯಿಸುವ ಪ್ರಯತ್ನಗಳನ್ನು ಮಾಡಿತು.
ಹೀಗಾಗಿ ಜಾತಿ ವಿನಾಶ , ಸಮಾನತೆಯ ಆಶಯಗಳ ಹೋರಾಟಗಳು ನಡೆದದ್ದೆಲ್ಲಾ ಕಾಂಗ್ರೆಸ್ಸಿನಾಚೆಗೆ . ಫುಲೆ, ಪೆರಿಯಾರ್ , ಅಂಬೇಡ್ಕರ್ ,ಭಗತ್ ಸಿಂಗ್ , ಕಮ್ಯುನಿಸ್ಟ್ ಇನ್ನಿತರರ ನೇತೃತ್ವದಲ್ಲಿ .
ಈ ಹೋರಾಟಗಳ ಒತ್ತಡ ಹಾಗೂ ಅಂದಿನ ಅಂತರರಾಷ್ಟ್ರೀಯ ಯುಗಧರ್ಮದ ಭಾಗವಾಗಿ ಆಗಾಗ ಕಾಂಗ್ರೆಸ್ಸಿನ ಹೇಳಿಕೆಯಲ್ಲೂ ಸಮಾಜವಾದದ ಮಾತುಗಳು ಕೇಳಿಬರುತ್ತಿತ್ತಷ್ಟೇ. ಜಾತಿ ವಿನಾಶದ ಮಾತನ್ನಂತೂ ಅಂಬೇಡ್ಕರ್ ಅಂತವರನ್ನು ಹೊರತುಪಡಿಸಿ ಯಾರೂ ಎತ್ತುತ್ತಿರಲಿಲ್ಲ. ಸ್ವಾತಂತ್ರ್ಯಾ ನಂತರವೂ ಕೂಡ ದೇಶದೆಲ್ಲೆಡೆ ಕಾಂಗ್ರೆಸ್ ಸರ್ಕಾರಗಳೇ ಬಂದರೂ ಕನಿಷ್ಠ ಭೂಮಿ ಹಂಚಿಕೆ ಯಂಥ ಕಾರ್ಯಕ್ರಮಗಳು ಜಾರಿಗೆ ಬಂದದ್ದು ಕೂಡಾ ಎಲ್ಲಿ ಸಮಾಜವಾದಿ, ಕಮ್ಯುನಿಸ್ಟ್ ಚಳವಳಿಗಳಿದ್ದವೋ ಅಲ್ಲಿ ಮಾತ್ರ. ಕರ್ನಾಟಕದಲ್ಲೂ ಕೂಡ ಅಂಥ ಚಳವಳಿಗಳು ಇದ್ದ ಎರಡು ಮೂರು ಜಿಲ್ಲೆಗಳಲ್ಲಿ ಮಾತ್ರ ಭೂ ಸುಧಾರಣೆ ಪರಿಣಾಮಕಾರಿಯಾಗಿ ಜಾರಿಯಾಯಿತು.
ಹೀಗಾಗಿ ಕಾಂಗ್ರೆಸ್ ಸಮಾನತೆಗಾಗಿ ಸ್ವಾತಂತ್ರ್ಯ ಹೋರಾಟ ನಡೆಸಿತು ಎಂದರೆ ಅಂಬೇಡ್ಕರ್ , ಭಗತ್ ಸಿಂಗ್ ಮುಂತಾದವರು ಗೋರಿಯಲ್ಲೂ ಚಡಪಡಿಸಿಯಾರು. ಕಾಂಗ್ರೆಸ್ ಆಗಲೂ ಈಗಲೂ ಅಲ್ಲಲ್ಲಿ ಕೆಲವು ಹಿಂದುಳಿದ ಸಾಮಾಜಿಕ ಹಿನ್ನೆಲೆಯ ನಾಯಕರನ್ನು ಹೊಂದಿದ್ದರೂ ಪ್ರಧಾನವಾಗಿ ಅದು ಆಗಲೂ ಈಗಲೂ ಬಂಡವಾಳಶಾಹಿ ಹಾಗೂ ಬ್ರಾಹ್ಮಣಶಾಹಿ ಪಕ್ಷವೇ ಆಗಿದೆ. ಆದರೆ ಈಗ ಅದಕ್ಕಿಂತ ದೊಡ್ಡ ಪೆಡಂಭೂತವಾದ ಸಂಘಿ ಫ್ಯಾಶಿಸಂ ಎದುರಾಗಿದೆ. ಅದನ್ನು ಸೋಲಿಸಲೇ ಬೇಕು. ಆದರೆ ಆ ಅಗತ್ಯ ಕಾಂಗ್ರೆಸ್ಸಿನ ಅಸಲು ವಾಸ್ತವವನ್ನು ಸುಳ್ಳಾಗಿಸುವುದಿಲ್ಲ. ಅಲ್ಲವೇ?
3) *ಫ್ಯಾಶಿಷ್ಟರ ಅಸಲಿ ಉದ್ದೇಶ ಜಾತಿ, ವರ್ಗ ಮತ್ತು ಲಿಂಗ ಅಸಮಾನತೆಯ ಮುಂದುವರಿಕೆ – ಮುಸ್ಲಿಂ ದಾಳಿ ನೆಪ ಮಾತ್ರ ಎಂಬ ನಿಮ್ಮ ಹೇಳಿಕೆ ಸರಿ. ಆದರೆ ಕಾಂಗ್ರೆಸ್ ಜಾತಿ ವಿನಾಶ ಮತ್ತು ಸಮಾಜವಾದಿ ದೃಷ್ಟಿಕೋನವಿಲ್ಲದೆ ಹೇಗೆ ಫ್ಯಾಶಿಸಂ ಅನ್ನು ಸೋಲಿಸುತ್ತದೆ? ಫ್ಯಾಶಿಷ್ಟರ ಅಸಲಿ ಉದ್ದೇಶವನ್ನು ನೀವು ಸರಿಯಾಗಿಯೇ ಹೇಳಿದಿರಿ. ಹಾಗಿದ್ದಲ್ಲಿ ಕಾಂಗ್ರೆಸ್ಸಿಗೆ ಜಾತಿ ವಿನಾಶ ಕಾರ್ಯಕ್ರಮವಿದೆಯೇ? ಈ ರಾಹುಲ್ ಗಾಂಧಿಯವರ ಕಾಂಗ್ರೆಸ್ಸನ್ನು ಬಿಡಿ. ಗಾಂಧಿ- ನೆಹರೂ ಕಾಲದ ಕಾಂಗ್ರೆಸ್ಸೇ ಹೇಗೆ ಜಾತಿ ವ್ಯವಸ್ಥೆಯ ರಕ್ಷಕವಾಗಿತ್ತು ಎಂದು ಅಂಬೇಡ್ಕರ್ ಜೀವನದುದ್ದಕ್ಕೂ ಹೇಳುತ್ತಾ ಬಂದರಲ್ಲವೇ? ಅಂಬೇಡ್ಕರ ತಮ್ಮ ಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದು ಹಿಂದೂ ಮಹಿಳೆಯರಿಗೆ ಕನಿಷ್ಠ ಹಕ್ಕುಗಳನ್ನು ಕೊಡಲೂ ಕೂಡ ಉದ್ಧಾಮ ಕಾಂಗ್ರೆಸ್ ನಾಯಕತ್ವ ವಿರೋಧಿಸಿದ್ದಕ್ಕಲ್ಲವೇ? ಬ್ರಿಟಿಷ್ ವಿರೋಧಿ ಕ್ರಾಂತಿಕಾರಿಗಳಾಗಿದ್ದ ತಿಲಕ್ , ಪಟೇಲ್, ಮೋತಿ ಲಾಲ್ ನೆಹರೂ ಇನ್ನಿತರರು ಸಾಮಾಜಿಕವಾಗಿ ಎಂಥಾ ಜಾತಿವಾದಿ, ಪುರುಷಾಧಿಪತ್ಯ ಪ್ರತಿಪಾದಕ ಪ್ರತಿಗಾಮಿಗಳಾಗಿದ್ದರು ಎಂಬುದು ಈಗ ಎಲ್ಲರೂ ಬಲ್ಲ ಸಂಗತಿ. ಜವಾಹರಲಾಲ್ ನೆಹರೂ ಕೂಡ ಮೀಸಲಾತಿಯಂತ ನೀತಿಗಳಿಂದ ದೇಶದ ದಕ್ಷತೆ ಮತ್ತು ಕ್ಷಮತೆ ತಗ್ಗುತ್ತದೆ ಎಂದು ಭಾವಿಸುತ್ತಿದ್ದರು.
ಇಂದು ಸಂಘಿಗಳು ಕೂಡ ಮೀಸಲಾತಿಯನ್ನು ಮೇಲ್ನೋಟಕ್ಕೆ ಒಪ್ಪಿಕೊಳ್ಳುವಂತೆ ನಟಿಸುತ್ತಿರುವುದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ಸಿನಾಚೆಗೆ ನಡೆದ ದಮನಿತ ಜಾತಿಗಳ ನಿರಂತರ ಹೋರಾಟ. ಹಾಗೂ ದಮನಿತ ಜನರ ಎಚ್ಚೆತ್ತ ಪ್ರಜ್ಞೆ. ಆ ಅರ್ಥದಲ್ಲಿ ಈ ದೇಶ ಮತ್ತಷ್ಟು ಪ್ರಜಾತಾಂತ್ರಿಕವಾದದ್ದಕ್ಕೆ ಕಾರಣ ಕಾಂಗ್ರೆಸ್ಸೇತರ ಮತ್ತು ಕಾಂಗ್ರೆಸ್ ವಿರೋಧಿ ಚಳವಳಿಗಳೇ .ಕಾಂಗ್ರೆಸ್ಸಿನೊಳಗೆ ಅವಕ್ಕೆ ಜಾಗವೇ ಇರಲಿಲ್ಲ. ಇದ್ದಿದ್ದರೆ 1990 ರ ನಂತರ ಕಾಂಗ್ರೆಸ್ಸನ್ನು ಸೀಳಿಕೊಂಡು ಸಾಮಾಜಿಕ ನ್ಯಾಯ ಪ್ರತಿಪಾದಕ ಹಾಗೂ ದಲಿತ ಬಹುಜನ ಪಕ್ಷಗಳು ಪ್ರವರ್ಧಮಾನಕ್ಕೆ ಬಂದು ಕಾಂಗ್ರೆಸ್ಸಿನ ಬಲ ಕ್ಷೀಣಿಸುತ್ತಿರಲಿಲ್ಲ. ಈಗಲೂ EWS ಮೀಸಲಾತಿ ಎಂಬ ಅತ್ಯಂತ ಸಾಮಾಜಿಕ ಅನ್ಯಾಯದ ಮಸೂದೆಯನ್ನು ಮೋದಿ ಜಾರಿಗೆ ತಂದಿದ್ದರೂ ಅದರ ಮೂಲ ಕರಡು 2010 ರಲ್ಲಿ ಯುಪಿಎ ಸರ್ಕಾರದ್ದೇ ಅಲ್ಲವೇ? ಅದಕ್ಕೆ ಅಲ್ಲವೇ ಕಾಂಗ್ರೆಸ್ ಅದನ್ನು ಸ್ವಾಗತಿ ಸಿದ್ದು??
ಆದ್ದರಿಂದ ಸಂಘಿ ಫ್ಯಾಶಿಸಂ ನ ಅಸಲೀ ಉದ್ದೇಶ ಜಾತಿ ಆಧಾರಿತ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯ ಪುನರ್ ಸ್ಥಾಪನೆ ಎಂದಾದಲ್ಲಿ ಜಾತಿ ವಿನಾಶದ ಸೈಧಾಂತಿಕ, ರಾಜಕೀಯ ಹಾಗೂ ಸಂಘಟನಾತ್ಮ ಪರಿಕಲ್ಪನೆ ಅಥವಾ ಯೋಜನೆಯೂ ಇಲ್ಲದ ಯಥಾಸ್ಥಿತಿವಾದಿ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳೂ ಕೂಡ ಫ್ಯಾಶಿಸಂ ಗೆ ಪೂರಕ ಪಕ್ಷ ಎಂದಾಗುವುದಿಲ್ಲವೇ? ಹೀಗಾಗಿ ಸಮಾಜವಾದ ಮತ್ತು ಜಾತಿ ವಿನಾಶದ ಬುನಾದಿಯ ಮೇಲೆ ನೈಜ ಫ್ಯಾಶಿಸ್ಟ್ ಚಳವಳಿಯೊಂದರ ಅಗತ್ಯ ಇದೆ ಎಂದಾಗುವುದಿಲ್ಲವೇ?
4) *1980 ರಲ್ಲಿ ಇಂದಿರಾಗಾಂಧಿ ನೇತೃತ್ವದಲ್ಲಿ ಆ ನಂತರ 1991 ರಲ್ಲಿ ನರಸಿಂಹರಾವ್ ನೇತೃತ್ವದಲ್ಲಿ ಜಾರಿಯಾದ ಉದಾರೀಕರಣ , ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳು ಸಂವಿಧಾನದ Welfare State ಪರಿಕಲ್ಪನೆಯ ಮೇಲೆ ಕಾಂಗ್ರೆಸ್ ನಡೆಸಿದ ನೇರಾನೇರಾ ದಾಳಿಯಲ್ಲವೇ?”
ಕಾಂಗ್ರೆಸ್ಸಿನ ಬಂಡವಾಳಶಾಹಿ ಪರ ಮತ್ತು ಜಾತಿ ವ್ಯವಸ್ಥೆಯ ಪರ ಬ್ರಾಹ್ಮಣವಾದಿ ಧೋರಣೆ ಆ ಕಾಲದ ಕಥೆಯಲ್ಲ. ಅದು ಇಂದಿಗೂ ಇಂದೂ ಮುಂದುವೆರುತ್ತಿರುವ ಕಾಂಗ್ರೆಸ್ ನೀತಿ. ಖಾಸಗೀಕರವನ್ನು ಮುಂದುವರೆಸುತ್ತಾ , ಹೊರಗುತ್ತಿಗೆ ಮಾಡುತ್ತಾ , ಸರ್ಕಾರದ ಗಾತ್ರವನ್ನು ಕಡಿಮೆ ಮಾಡುತ್ತಾ ಜಾತಿ ಜನ ಗಣತಿ ಮಾಡುವುದರಿಂದ ಅದರ ಯಥಾಸ್ಥಿಟಿ ವಾದಿ ನಿಲುವು ಬದಲಾಗುವುದಿಲ್ಲ ಅಲ್ಲವೇ? ಮತ್ತೊಂದು ಕಡೆ , ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸಂಪತ್ತಿನ ಹಂಚಿಕೆಯ ಬಗ್ಗೆ ಭಾಷಣ ಮಾಡುತ್ತಿರುವ ಹೊತ್ತಿನಲ್ಲೇ ಅತಿ ಶ್ರೀಮಂತರ ಮೇಲೆ inheritence tax ಹಾಕಬೇಕೆಂದ ಸ್ಯಾಮ್ ಪಿತ್ರೋಡ ಅವರಿಗೆ ರಾಹುಲ್ ಗಾಂಧಿಯಾದಿಯಾಗಿ ಯಾರೂ ಬೆಂಬಲಿಸಲಿಲ್ಲ. ಹೀಗಾಗಿ ಅವರು ತಮ್ಮ ಕಾಂಗ್ರೆಸ್ ಹುದ್ದೆಗೆ ರಾಜೀನಾಮೆ ಕೊಡಬೇಕಾಯಿತು. ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ. ಚಿದಂಬರಂ ಅಂತೂ ಒಂದು ಸಂದರ್ಶನದಲ್ಲಿ ತಮ್ಮ ಪಕ್ಷವು ಸಂಪತ್ತಿನ ಹಂಚಿಕೆಯ ಯಾವ ಕಾರ್ಯಕ್ರಮವನ್ನು ಹೊಂದಿಲ್ಲವೆಂದೂ, ಇಂದಿರಾಗಾಂಧಿ ಕಾಲದ ಗರೀಬಿ ಹಠಾವೋ ಕಾಲ ಮುಗಿದೆಯೆಂದೂ , ಖಾಸಗಿ ಬಂಡವಾಳ ನೇತ್ರುತ್ವದ ಅಭಿವೃದ್ಧಿಯೇ ತಮ್ಮ ಪರಿಕಲ್ಪನೆ ಎಂದೂ ಸ್ಪಷ್ಟಪಡಿಸಿದ್ದಾರೆ. .
ಗ್ಯಾರಂಟಿಗಳನ್ನು ಹೊರತುಪಡಿಸಿದರೆ, ಕಾಂಗ್ರೆಸ್ ಆಳ್ವಿಕೆಯಲ್ಲಿರುವ ಕರ್ನಾಟಕದಲ್ಲಿ ಸಿದ್ಧರಾಮಯ್ಯನವರ ಬಜೆಟ್ಟು ಹಾಗೂ ಅಭಿವೃದ್ಧಿ ಮಾದರಿ , ಬಿಜೆಪಿಯ ಬೊಮ್ಮಾಯಿ ಮತ್ತು ಕಾರ್ಪೊರೇಟ್ ನಾಯಕ ಮೋಹನ್ ದಾಸ್ ಪೈ ನೇತೃತದಲ್ಲಿ ಸಿದ್ಧಪಡಿಸಲಾದ ಜನವಿರೋಧಿ ಕಾರ್ಪೊರೇಟ್ ಅಭಿವೃದ್ಧಿ ಮಾದರಿಯ ನಕಲಾಗಿದೆ.
ಇನ್ನು ಗ್ಯಾರಂಟಿಗೆ ಹಣ ಹೊಂದಿಸಲಾಗದೆ ಜನಸಾಮಾನ್ಯರ ಸರಕು ಸೇವೆಗಳ ಬೆಲೆ ಏರಿಕೆ ಮಾಡಲಾಗುತ್ತಿದೆ, SC-TSP ಯಿಂದ 14 ಸಾವಿರ ಕೋಟಿ ಕಿತ್ತುಕೊಳ್ಳಲಾಗುತ್ತಿದೆ. ಮೋದಿ ಮಾದರಿಯಂತೆ Aset Monetisation, ಬಡಜನರನ್ನು ನಗರದಿಂದ ಹೊರಗಟ್ಟುವ ಉಳ್ಳವರಿಗಾಗಿ ಮಾತ್ರ ನಿರ್ಮಿಸುವ ಗುಜರಾತ್ ಮೋದಿ ಮಾದರಿ GIFT ಸಿಟಿ ಯೋಜನೆ , ಹಾಗೆ ನೋಡಿದರೆ ಈ GST ಎಂಬ ಅತ್ಯಂತ ಪ್ರತಿಗಾಮಿ ತೆರಿಗೆ ಪದ್ಧತಿಯೇ ಕಾಂಗ್ರೆಸ್ಸಿನ ಕೂಸಲ್ಲವೇ?
ಹೀಗೆ ಸಂವಿಧಾನದಲ್ಲಿರುವ ಕಲ್ಯಾಣ ರಾಜ್ಯದ ಆರ್ಥಿಕತೆಯ ಪರಿಕಲ್ಪನೆಯ ಮೇಲೆ ದಾಳಿ ಮಾಡಿ ಫ್ಯಆಶಿಸ್ಟ್ ಕಾರ್ಪೊರೇಟ್ ಬಂಡವಾಳಶಾಹಿ ಅಭಿವೃದ್ಧಿ ಆರ್ಥಿಕತೆಗೆ ಕುಮ್ಮಕ್ಕು ಕೊಟ್ಟಿದ್ದು , ಕೊಡುತ್ತಿರುವುದು ಕಾಂಗ್ರೆಸ್ಸೇ ಅಲ್ಲವೇ? ಅಸಲು ಫ್ಯಾಶಿಸಂ ಸಮಾಜದಲ್ಲಿ ಮಾನ್ಯವಾಗುವುದೇ ಈ ಬಗೆಯ ಜನವಿರೋಧಿ ಆರ್ಥಿಕತೆಯು ತಂದೊಡ್ಡುವ ಆರ್ಥಿಕ, ಸಾಮಾಜಿಕ ಬಿಕ್ಕಟ್ಟುಗಳಿಂದ ಅಲ್ಲವೇ?
ಕಾಂಗ್ರೆಸ್ಸಿನ ಈ ಆರ್ಥಿಕ ಪ್ರಣಾಲಿ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲೂ ಬದಲಾಗಲಿಲ್ಲ. ನ್ಯಾಯ ಎಂಬ ಹೆಸರಿದ್ದರೂ ಒಂದೆಡೆ ವ್ಯವಸ್ಥಿತ ಅನ್ಯಾಯವನ್ನು ಮುಂದುವರೆಸುವ ದೊಡ್ಡ ಕಾರ್ಪೊರೇಟ್ ಖಾಸಗಿ ಬಂಡವಾಳವನ್ನೇ ಈಗಲೂ ಅಭಿವೃದ್ಧಿಯ ಹರಿಕಾರ ಎನ್ನುತ್ತಾ ಮತ್ತೊಂದೆಡೆ ಅಂಬಾನಿ-ಆದಾನಿಗಳ ಅತಿರೇಕಗಳ ಬಗ್ಗೆ ಮಾತ್ರ ಧ್ವನಿ ಎತ್ತುವುದರಿಂದ ಫ್ಯಾಸಿಸ್ಟ್ ಆರ್ಥಿಕತೆಗೆ ಹಿನ್ನೆಡೆಯಾಗುವುದೇ?
5) *1984 ರಲ್ಲಿ ಸಂಸತ್ತಿನಲ್ಲಿ 414 ಸೀಟುಗಳ ದೈತ್ಯ ಬಲವಿದ್ದರೂ ಅಯೋದ್ಹೆಯಲ್ಲಿ ರಾಮಮಂದಿರದ ಕೀಲಿ ತೆಗೆದು ಈ ದೇಶದಲ್ಲಿ ಬಿಜೆಪಿಯ ಕೋಮುವಾದಿ ರಕ್ತಸಿಕ್ತ ರಾಜಕಾರಣಕ್ಕೆ ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ಸೇ ಅಲ್ಲವೇ? ಆ ನಂತರದಲ್ಲಿ 1992 ರಲ್ಲಿ ಬಾಬ್ರಿ ಮಸೀದಿ ಕೆಡವಿದಾಗ ಸಂಘಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳದೆ ಅವರು ಬೆಳೆಯಲು ಅವಕಾಶ ಅಮಾಡಿಕೊಟ್ಟಿದ್ದು ಕಾಂಗ್ರೆಸ್ಸೇ ಅಲ್ಲವೇ? ಈಗಲೂ ನಿಮ್ಮೆಲ್ಲರ ಸೇರ್ಪಡೆಯ ನಂತರವೂ,ರಾಹುಲ್ ಗಾಂಧಿ ನೇತೃತ್ವದಲ್ಲೂ ಕಾಂಗ್ರೆಸ್ ಪಕ್ಷ, ಅದೇ ಬಗೆಯ ಪರೋಕ್ಷ ಹಿಂದೂತ್ವವಾದಿ ನೀತಿಗಳನ್ನೇ ಮುಂದುವರೆಸುತ್ತಿಲ್ಲವೇ? ಇದು ಹಳೆಯ ಆಗಿಹೋದ ಕಥೆಯಲ್ಲ. ನಿಮ್ಮಂಥ ಸಜ್ಜನರು ಸೇರ್ಪಡೆಯಾದ ಮೇಲೂ ಮುಂದುವರೆಯುತ್ತಿರುವ ಕಥೆ.
ರಾಮಮಂದಿರದ ವಿಷಯಕ್ಕೆ ಬಂದರೆ ಕೋರ್ಟು ತೀರ್ಪೆ ಅನ್ಯಾಯದ್ದು. ಆ ಅನ್ಯಾಯದ ತೀರ್ಪಿನಲ್ಲೂ ಬಾಬ್ರಿ ಮಸೀದಿ ಕೆಳಗೆ ಮಂದಿರವಿರಲಿಲ್ಲ ಎಂದು ಸ್ಪಷ್ಟವಾಗಿತ್ತು. ಹಾಗಿದ್ದಮೇಲೆ ಮಸೀದಿ ಕೆಡವಿ ಕಟ್ಟುತ್ತಿರುವ ಮಂದಿರ ಅಧಾರ್ಮಿಕ, ಹಾಗೂ ಅನೈತಿಕ ಎಂದು ಹೇಳುವ ಬದ್ಧತೆ ಕಾಂಗ್ರೆಸ್ಸಿಗೂ ಇರಲಿಲ್ಲ. ಇತರ ಯಾವುದೇ ಪಕ್ಷಗಳಿಗೂ ಇರಲಿಲ್ಲ. ಬದಲಿಗೆ ಯುವ ಕಾಂಗ್ರೆಸ ಮಂದಿರ ಕಟ್ಟಲು ರಾಜಸ್ಥಾನದಲ್ಲಿ ಹಣ ಸಂಗ್ರಹಣೆ ಮಾಡಿತು. ಕರ್ನಾಟಕದ ಡಿಕೆಶಿ , ಮ.ಪ್ರದ ಕಮಲ್ ನಾಥ್ ರಂಥ ಕಾಂಗ್ರೆಸ್ ನಾಯಕರು ತಾವೇ ನಿಜವಾದ ಹಿಂದೂಗಳು ನಮ್ಮಿಂದಲೇ ರಾಮಮಂದಿರ ಕಟ್ಟಲು ಸಾಧ್ಯವಾಯಿತು ಎಂದು ಪ್ರತಿಪಾದಿಸುತ್ತಾ ಇದ್ದಾರೆ. ಇದು ಇಂದಿನ ಕಥೆ. ನಿಮ್ಮಂತಹವರು ಕಾಂಗ್ರೆಸ್ ಸೇರಿದ ಮೇಲೂ ಮುಂದುವರೆಯುತ್ತಿರುವ ಕಥೆ. ಆದರೆ ತಾವಾಗಲೀ, ತಮ್ಮಂತ ಕಾಂಗ್ರೆಸ್ ನಾಯಕರಾಗಲೀ ಕಾಂಗ್ರೆಸ್ ನ ಈ ಫ್ಯಾಶಿಸ್ಟ್ ಪರ ನೀತಿಗಳ ಬಗ್ಗೆ ಏಕೆ ಬಹಿರಂಗವಾಗಿ ಮಾತಾಡುತ್ತಿಲ್ಲ. ಒಳಗಿನ ವೇದಿಕೆಗಳಲ್ಲಿ ಮಾತಾಡಿರುತ್ತೀರಿ. ಆದರೆ ಅದು ಕಾಂಗ್ರೆಸ್ಸಿನ ಅಸಲಿ ಧೋರಣೆಯನ್ನೇನೂ ಬದಲಿಸುತ್ತಿಲ್ಲ. ಹೀಗಿರುವಾಗ ಒಳಗೆ ಮಾತಾಡಲು ಸಾಧ್ಯವಿರುವುದನ್ನೇ ಆಂತರಿಕ ಪ್ರಜಾತಂತ್ರ ಎಂದು ಸಂಭ್ರಮಿಸಬಹುದೇ ?
6) *ಕಾಂಗ್ರೆಸ್ಸನ್ನು ಸೇರಿ ಒಳಗಿಂದ ಬದಲಾಯಿಸಬಹುದೆಂಬುಡು ಬ್ರಾಂತಿ ಎಂದು ಅಂಬೇಡ್ಕರ್ ಅನುಭವವೇ ಹೇಳುವುದಿಲ್ಲವೇ?”*
ಕರ್ನಾಟಕದಲ್ಲಂತೂ ನಾಗರಿಕ ಸಮಾಜದ ಬೆಂಬಲ,ತಮ್ಮಂಥ ಆದರ್ಶವಾದಿ ನಾಯಕರ ಸೇರ್ಪಡೆ ಅದಮೇಲೂ ಕಾಂಗ್ರೆಸ್ ಸರ್ಕಾರ ತೋರುತ್ತಿರುವ ಕಾರ್ಪೊರೇಟ್ ವಾದಿ ಆರ್ಥಿಕತೆ, ಮೃದು ಹಿಂದೂತ್ವ ಮತ್ತು ಆರೆಸ್ಸೆಸ್ ಅನ್ನು ಅನುನಯಿಸುವ ಗುಪ್ತ ಹಿಂದೂತ್ವ ಧೋರಣೆ , ಭ್ರಷ್ಟಾಚಾರ , ಫ್ಯೂಡಲ್ ಮತ್ತು ಸರ್ವಾಧಿಕಾರಿ ಧೋರಣೆಗಳು ಕಿಂಚಿತ್ತೂ ಕಡಿಮೆಯಾಗಿಲ್ಲ. ಕಾಂಗ್ರೆಸನ್ನು ಸೇರಿ ಒಳಗಿಂದ ಬದಲಾಯಿಸಬಹುದು ಎಂಬುಡು ಸುಂದರವಾದ ಆತ್ಮವಂಚನೆಯಾಗಿಬಿಡಬಹುದು. ಹಾಗೆ ನೋಡಿದರೆ ಕಾಂಗ್ರೆಸ್ಸನ್ನು ಮತ್ತು ಹಿಂದೂ ಧರ್ಮವನ್ನು ಒಳಗಿನಿಂದ ಸುಧಾರಿಸಲು ಸಾಧ್ಯವಿಲ್ಲ ಎಂದು ತಮ್ಮ ಯಾತನಾಮಯ ಅನುಭವದಿಂದ ದೇಶಕ್ಕೆ ತಿಳಿಸಕೊಟ್ಟು ಅದರಿಂದ ಹೊರಬಂದವರು ಡಾ. ಅಂಬೇಡ್ಕರ್.
ಅದು ನೆಹರೂ-ಗಾಂಧಿ ಕಾಂಗ್ರೆಸ್. ಈಗಿನದ್ದು ಗುಣಮಟ್ಟದಲ್ಲಿ ಅದಕ್ಕಿಂತ ತಳಮಟ್ಟದಲ್ಲಿರುವ ಕಾಂಗ್ರೆಸ್ಸು. ಹೀಗಾಗಿ ಒಳಗಿಂದ ಕಾಂಗ್ರೆಸ್ ಬದಲಾವಣೆ ಸಾಧ್ಯ ಎಂಬ ನಿಮ್ಮ ಅನಿಸಿಕೆ ಐತಿಹಾಸಿಕವಾಗಿಯೂ, ಇಂದಿನ ಎಲ್ಲಾ ತಾಜಾ ಉದಾಹರಣೆಗಳ ಹಿನ್ನೆಲೆಯಲ್ಲೋ ಒಪ್ಪಿಕೊಳ್ಳಲು ಆಗುವುದಿಲ್ಲ. ಆದರೆ ನಿಮ್ಮ ವೈಯಕ್ತಿಕ ಆಯ್ಕೆ ನಿಮ್ಮದು. ಅದು ವಿಮೋಚನೆಯ ಸಾರ್ವತ್ರಿಕ ಮಾದರಿ ಎಂದಾಗ ಈ ಪತ್ರ ಬರೆಯಲೇ ಬೇಕೆನ್ನಿಸಿತು.
*ಫ್ಯಾಶಿಸಂ ಅನ್ನು ಸೋಲಿಸಲು ಕಟ್ಟಬೇಕಿರುವುದು ಬಲಿಷ್ಠವಾದ ದಮನಿತ ಹಾಗೂ ದುಡಿಯುವ ಜನರ ಜನಚಳವಳಿಯನ್ನ. ಕಾಂಗ್ರೆಸ್ಸಿನ ಸಬಲೀಕರಣವಲ್ಲ*. *ಹೊರಗಡೆ ಸಮಾಜದಲ್ಲಿ ಬಲಿಷ್ಠ ದುಡಿಯುವ ಹಾಗೂ ದಮನಿತರ ಎಚ್ಚೆತ್ತ ಪ್ರಜ್ಞೆಯ ಜನಚಳವಳಿ ಇಲ್ಲದೆ ಪಕ್ಷದೊಳಗೆ ನಡೆಯುವ ಪ್ರಯತ್ನಗಳಿಗೂ ಬಲ ಬರುವುದಿಲ್ಲ*
6) ಇದರ ಅರ್ಥ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಗೆ ಓಟು ಹಾಕಬಾರದು ಎಂದಲ್ಲ. ಕಾಂಗ್ರೆಸ್ ಚುನಾವಣೆಯ ರಂಗದಲ್ಲಿ ತಾತ್ಕಾಲಿಕವಾಗಿ ಕೇವಲ ತಾತ್ಕಾಲಿಕವಾಗಿ ಅದರ ಓಟದ ವೇಗವನ್ನು ತಗ್ಗಿಸಬಹುದು. ಅದೂ ಕೂಡ ಕಷ್ಟ ಎಂದು ಕಾಣುತ್ತಿದೆ.
ಅದನ್ನು ಮೀರಿ ಕಾಂಗ್ರೆಸ್ ಸಂವಿಧಾನವನ್ನು ಮರಳಿ ಪಡೆಯುವ ಸಾಧನ ಎಂದು ನೀವು ಹೇಳುತ್ತಿರುವುದು ಉತ್ಪ್ರೇಕ್ಷೆ ಮಾತ್ರ ಅಲ್ಲ ಸುಳ್ಳು ಕೂಡ ಆಗಿಬಿಡುತ್ತದೆ. ಏಕೆಂದರೆ ಈ ದೇಶದ ವೆಲ್ಫೇರ್ ಸ್ಟೇಟ್ ರಚನೆ ಮತ್ತು ಸೆಕ್ಯುಲಾರ ಸಮಾಜದ ಆಶಯವನ್ನು ಒಳಗಿನಿಂದಲೇ ಟೊಳ್ಳು ಮಾಡುತ್ತಾ ಬಂದಿದ್ದು ಕಾಂಗ್ರೆಸ್ಸೇ.
ಹೀಗಾಗಿ ಆ ನೀತಿಗಳ ಬಗ್ಗೆ ಆತ್ಮಾವಲೋಕನ ಮತ್ತು radical rupture ಸಾಧ್ಯವಾಗದೆ ಕಾಂಗ್ರೆಸ್ ಸಂವಿಧಾನ ಉಳಿಸಿಕೊಳ್ಳುವ ಸಾಧನವಾಗದು. ಸಂಸತ್ತಿನಲ್ಲಿ ಹೆಚ್ಚೆಂದರೆ ಸಂಘಿ ವೇಗವನ್ನು ತಾತ್ಕಾಲಿಕ ವಾಗಿ ತಡೆಯುವ ಕ್ರಮವಾಗಬಹುದು . ಅಷ್ಟೇ. ಅದೂ ಕೂಡ ಬರಲಿರುವ ದಿನಗಳಲ್ಲಿ ಇನ್ನೂ ಕಷ್ಟ
ಆದರೆ ಅಂಥಾ ಯಾವುದೇ radical rupture ಕಾಂಗ್ರೆಸ್ಸಿನ ಐಡಿಯಾಲಜಿಯಲ್ಲಾಗಲೀ, ಸಂಘಟನೆಯಲ್ಲಾಗಲೀ, ನಾಯಕತ್ವದಲ್ಲಾಗಲೀ ಕಾಣುತ್ತಿಲ್ಲ. ಹೀಗಿರುವಾಗ ಸಂವಿಧಾನವನ್ನು ಅರ್ಥಾತ್ ಸೆಕ್ಯುಲಾರ್ ಸಮಾಜವಾದವನ್ನು ಉಳಿಸುವ ಹೊಣೆಗಾರಿಕೆ ಮತ್ತು ಸಂಗ್ರಾಮ ಕಾಂಗ್ರೆಸ್ಸಿನಾಚೆಗೆ ನಡೆಯಬೇಕು. ಅಲ್ಲವೇ? ತಾವು ಈ ಅಂಶಗಳನ್ನು ಪರಿಶೀಲಿಸುತ್ತೀರಾ ಎಂಬ ವಿಶ್ವಾಸದೊಂದಿಗೆ
ನಿಮ್ಮ
ಶಿವಸುಂದರ್
ಜನಪರ ಚಿಂತಕರು, ಲೇಖಕರು
Leave a reply